ಪ್ರಜಾವಾಣಿ ಸಂಗತದಲ್ಲಿ ಪ್ರಟಕಗೊಂಡ ರೂಪ ಹಾಸನ್ ಅವರ ಪ್ರಾಣಿ ಬಲಿ ನಿಷೇಧದ ಕುರಿತಾದ ಲೇಖನಕ್ಕೆ ಪ್ರತಿಕ್ರಿಯೆಯ ರೂಪವಾಗಿ ಡಾ. ಅರುಣ್ ಜೋಳದಕೂಡ್ಲಿಗಿ ಪ್ರಾಣಿಬಲಿ ನಿಷೇಧ: ಸರಳೀಕರಣದ ಆತಂಕಗಳು ಎಂಬ ಲೇಖನವನ್ನು ಸಂಪಾದಕೀಯಕ್ಕೆ ಬರೆದಿದ್ದರು. ಸಂಗತದಲ್ಲಿ ಬರೆದಿದ್ದ ರೂಪ ಹಾಸನ್ ಅವರೇ ಇದೀಗ ಅರುಣ್ ಅವರಿಗೆ ಪ್ರತಿಕ್ರಿಯಿಸಿದ್ದಾರೆ. ಚರ್ಚೆ ಮುಂದುವರೆಯಲಿ. ಅಂದ ಹಾಗೆ ರೂಪ ಹಾಸನ್ ಪ್ರತಿಭಾವಂತ ಕವಯಿತ್ರಿ. ಒಂದಿಷ್ಟು ಹಸಿಮಣ್ಣು, ಬಾಗಿಲಾಚೆಯ ಮೌನ ಎಂಬ ಕವನ ಸಂಕಲನಗಳೂ ಸೇರಿದಂತೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ಹಿಂದೆ ಅವರು ಪ್ರಜಾವಾಣಿಯಲ್ಲಿ ಅಂಕಣ ಬರೆದಿದ್ದರು. - ಸಂಪಾದಕೀಯ

ನನ್ನ ಪ್ರಜಾವಾಣಿ ಸಂಗತ ಬರಹಕ್ಕೆ ಇಲ್ಲಿ ಪ್ರತಿಕ್ರಿಯೆ ನೀಡಿರುವ ಅರುಣ್, ಭಾವಾವೇಶಕ್ಕೆ ಒಳಗಾಗಿರುವಂತಿದೆ. ಜೀವಪರ ಹಾಗೂ ಮಾನವೀಯತೆಯ ನೆಲೆಯಲ್ಲಿ ನನ್ನ ಬರಹವಿದೆಯೇ ಹೊರತು ಅರುಣ್ ಅವರು ತಪ್ಪು ತಿಳಿದಂತೆ ಯಾವ ಪರ-ವಿರೋಧ ಅಂಶಗಳೂ ಅದರಲ್ಲಿ ಇಲ್ಲ. ನನ್ನ ಪ್ರಜಾವಾಣಿಯ ಬರಹವನ್ನು ಓದದವರು ವಿಷಯವನ್ನು ತಪ್ಪಾಗಿ ಗ್ರಹಿಸುವ ಸಾಧ್ಯತೆ ಇದೆಯೆಂದು ಈ ದೀರ್ಘ ಪ್ರತಿಕ್ರಿಯೆ ನೀಡುತ್ತಿರುವೆ.

ಅರುಣ್, ತಮ್ಮ ಪೂರ್ವಗ್ರಹ ಉಳ್ಳ ಸಿದ್ಧಾಂತವನ್ನು ವಾಸ್ತವದ ವಸ್ತುಸ್ಥಿತಿಯನ್ನು ಪಕ್ಕಕ್ಕಿಟ್ಟು, ಅಕಡೆಮಿಕ್ ಚೌಕಟ್ಟಿನಲ್ಲಿಯಷ್ಟೇ ಪ್ರಾಣಿಬಲಿಯನ್ನು ಹಿಡಿದಿಡಲು ಪ್ರಯತ್ನಿಸಿದ್ದಾರೆ. ನನ್ನ ಬರಹ, ಬದಲಾದ ಸಂದರ್ಭದಲ್ಲಿ ಪ್ರಾಣಿಬಲಿಯನ್ನು ಕುರಿತು ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ವಿಶ್ಲೇಷಿಸಿತ್ತು. ನಮ್ಮ ಸಂವಿಧಾನದ ೫೧ ಎ ಕಲಮ್ ಪ್ರಾಣಿದಯೆಯ ಕುರಿತು ಚರ್ಚಿಸುತ್ತದೆ. ಪ್ರಾಣಿಬಲಿ ತಡೆಗೆ ಸಂಬಂಧಿಸಿದಂತೆ ಕರ್ನಾಟಕ ಪ್ರಾಣಿಬಲಿ ನಿಯಂತ್ರಣ ಕಾಯ್ದೆ- ೧೯೫೯ ಮತ್ತು ಕರ್ನಾಟಕ ಪ್ರಾಣಿಬಲಿ ನಿಯಂತ್ರಣ ನಿಯಮ-೧೯೬೩ ಈಗಾಗಲೇ ಜಾರಿಯಲ್ಲಿದೆ. ಅದನ್ನು ವಿವರವಾಗಿ ಅಧ್ಯಯನ ಮಾಡಿದರೆ ನಿಷೇಧದ ಹಿಂದಿರುವ ಗಂಭೀರತೆ ಅರ್ಥವಾಗಬಹುದು. ಯಾವುದೇ ಕಾನೂನು ವಿವೇಚನೆಯಿಲ್ಲದೇ, ಸರಳವಾಗಿ ಸುಮ್ಮನೆ ರೂಪಿತವಾಗಿಬಿಡುವುದಿಲ್ಲ. ಕೆಲವು ಜಿಲ್ಲಾಡಳಿತಗಳು ಈಗಾಗಲೇ ಕಾನೂನಿನನ್ವಯ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಪ್ರಾಣಿಬಲಿಯನ್ನು ನಿಯಂತ್ರಿಸಿವೆ. ಆದರೆ ಹೆಚ್ಚಿನ ಕಡೆಗಳಲ್ಲಿ ಇದು ಆಗಿಲ್ಲ. ಗಮನಿಸಬೇಕಾದ ಅಂಶವೆಂದರೆ ಈ ಕಾನೂನಿನಡಿಯಲ್ಲಿ ಇದುವರೆಗೂ ಒಬ್ಬರನ್ನೂ ಶಿಕ್ಷಿಸಿಲ್ಲ! ಇದು ಜನರ ಮನೋಭಾವ ಬದಲಾವಣೆಗೆ ಕಾನೂನು ನೀಡಿರುವ ಅವಕಾಶವಿರಬಹುದು!

ಇಂದು ಪ್ರಾಣಿಬಲಿಯೆಂಬ ಮೌಢ್ಯ ಜಾತಿ, ವರ್ಗ, ಪ್ರದೇಶಗಳನ್ನು ಮೀರಿ ಹೇಗೆ ಬೆಳೆಯುತ್ತಿದೆ ಎಂಬುದನ್ನು, ವಿದ್ಯಾವಂತರು, ನಗರ ಪ್ರದೇಶದವರು, ಮೇಲ್ಜಾತಿಯವರೂ, ಮುಖ್ಯವಾಗಿ ರಾಜಕಾರಣಿಗಳು-ಅಧಿಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಪೊಳ್ಳು ಪ್ರತಿಷ್ಟೆಗಾಗಿ ಪ್ರಾಣಿಬಲಿ ನೀಡುತ್ತಿದ್ದಾರೆಂಬುದನ್ನು ಮುಖ್ಯವಾಗಿ ನನ್ನ ಲೇಖನದಲ್ಲಿ ಚರ್ಚಿಸಿದ್ದೆ. ಮತ್ತು ಸಾರ್ವಜನಿಕ ಹಾಗೂ ಸಾಮೂಹಿಕ ಪ್ರಾಣಿಬಲಿಯಲ್ಲಿ ಹಿಂಸೆಯ ವೈಭವೀಕರಣವಾಗುವ, ಹೆಚ್ಚಿನ ಹಿಂಸೆಯಿಂದ ಪ್ರಾಣಿಗಳನ್ನು ಕೊಲ್ಲುವ ಚಿತ್ರಣದ ಜೊತೆಗೆ ನಿತ್ಯ ಪ್ರಾಣಿಬಲಿ ನೀಡುವ ಪ್ರದೇಶಗಳು ಅನೈರ್ಮಲ್ಯದ ತಾಣವಾಗಿ ಮಾರ್ಪಟ್ಟಿರುವುದನ್ನು ವಿವರಿಸಲಾಗಿತ್ತು.

ಯಾವುದೇ ಪ್ರಜ್ಞಾವಂತ ನಾಗರಿಕನಿಗೆ ದೇಶದ ಸಂವಿಧಾನ ಮತ್ತು ಕಾನೂನುಗಳು ಬೇರೆಲ್ಲ ಜಾತಿ, ಧರ್ಮ, ಸಂಸ್ಕೃತಿಗಿಂತಾ ಮುಖ್ಯವೆಂದು ನನ್ನ ನಂಬಿಕೆ. ಹೀಗೆಂದೇ ಧಾರ್ಮಿಕ ಕಂದಾಚಾರದಿಂದಾಗಿ ನಮ್ಮ ಸಮಾಜದಲ್ಲಿ ಬೇರೂರಿದ್ದ ಸತಿ ಸಹಗಮನ, ಬೆತ್ತಲೆಸೇವೆ, ಬಸವಿ, ಜೋಗತಿಯಂತ ಅನಿಷ್ಟ ಆಚರಣೆಗಳನ್ನು ಜೀವವೊಂದರ ಜೊತೆಗೆ ಆಡುವ ಅನಾಗರಿಕ ಕ್ರೌರ್ಯವೆಂದು ಪರಿಗಣಿಸಿ ಕಾನೂನಿನ ಮೂಲಕವೇ ಇವೆಲ್ಲಕ್ಕೂ ಕಡಿವಾಣ ಹಾಕಲಾಯ್ತು. ಅಸಮಾನತೆಯ ವಿರುದ್ಧದ ಎಲ್ಲ ಹೋರಾಟ, ಹಾಗೂ ಚಳವಳಿಗಳೂ ಸಂವಿಧಾನ ಮತ್ತು ಕಾನೂನಿನಡಿಯಲ್ಲೇ ರೂಪಿತವಾಗಿರುವುದು ಗಮನಾರ್ಹ. ಶೋಷಣೆಯ ಅನೇಕ ಸ್ವರೂಪಗಳಿಗೆ ಇಂದಿಗೂ ಕಾನೂನಿನ ಮೂಲಕವೇ ಶೋಷಿತರು ನ್ಯಾಯ ಪಡೆದುಕೊಳ್ಳಲು ಸಾಧ್ಯವಾಗಿದೆ. ಮಹಿಳೆಯರು, ಮಕ್ಕಳನ್ನು ಲೈಂಗಿಕವಾಗಿ ಶೋಷಿಸುವ, ದೌರ್ಜನ್ಯ ನಡೆಸುವ ಅತ್ಯಾಚಾರಿಗೂ ಹಾಗೆ ನಡೆದುಕೊಳ್ಳಲು ಅವನದೇ ಆದ ದೈಹಿಕ-ಮಾನಸಿಕ ಕಾರಣಗಳು ಇದ್ದೇ ಇರುತ್ತವೆ. ಹಾಗೆಂದು ಯಾರೂ ಅಂಥಹವರಿಗೆ ಅದು ತಪ್ಪೆಂದು ಬುದ್ದಿ ಹೇಳುತ್ತಾ ಕೂರುವುದಿಲ್ಲ. ಕಾನೂನಿನ ಕುರುಡಿಗೆ ಕ್ಷಮೆಯಿಲ್ಲ ಎಂಬ ಮಾತು ಎಲ್ಲರಿಗೂ ಅನ್ವಯಿಸುವಂತದ್ದೇ ಆಗಿರುತ್ತದೆ.

ಪ್ರಾಣಿಬಲಿ ನಿಷೇಧ ಯಾವುದೇ ಕಾರಣಕ್ಕೂ ಮಾಂಸಾಹಾರದ ಹಕ್ಕಿನ ನಿಷೇಧವಾಗಲಿ, ಸಹಜವಾಗಿ ಬಳಸಲಾಗುವ ಮಂಸಾಹಾರಕ್ಕೆ ವಿರೋಧವಾಗಲಿ ಅಲ್ಲ ಎಂದು ನನ್ನ ಲೇಖನದಲ್ಲಿ ಒತ್ತುಕೊಟ್ಟು ಹೇಳಿದ್ದೇನೆ. ಅಸಲಿಗೆ ಇದೊಂದು ಮಾಂಸಾಹಾರ-ಸಸ್ಯಾಹಾರ ಸಂಬಂಧಿತ ವಿಷಯವೇ ಅಲ್ಲ. ಇದೊಂದು ಜೀವಪರವಾದ, ಹಿಂಸಾ ವಿರೋಧಿಯಾದ, ಸಂವಿಧಾನ ಬದ್ಧ ವಿಷಯವಷ್ಟೇ ಆಗಿದೆ. ನನ್ನ ಲೇಖನವನ್ನು ಓದಿ ಈ ಅಂಶಗಳಿಗಾಗಿಯೇ ಮೆಚ್ಚಿದವರಲ್ಲಿ ಹೆಚ್ಚಿನವರು ಮಾಂಸಾಹಾರಿಗಳು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಲು ಬಯಸುತ್ತೇನೆ. ಆದರೆ ಪ್ರಾಣಿಬಲಿ ನಿಷೇಧವೆಂದೊಡನೆ ಮಾಂಸಾಹಾರದ ವಿರುದ್ಧವೆಂದು ಪೂರ್ವನಿಶ್ಚಯ ಮಾಡಿಕೊಂಡ ಮನಸುಗಳು ಅದನ್ನು ತಪ್ಪಾಗಿಯೇ ಗ್ರಹಿಸುತ್ತವೆ. ಮೆಲ್ಜಾತಿ, ಮೇಲ್ವರ್ಗದವರ ಮೇಲಿನ ಸೇಡಿಗಾಗಿ ಪ್ರಾಣಿಬಲಿ ನೀಡಿ ಕೆಳಜಾತಿ, ಕೆಳವರ್ಗದವರು ಚೈತನ್ಯ ಪಡೆಯುತ್ತಾರೆ ಎನ್ನುವುದಾದರೆ ಕತ್ತೆ, ನಾಯಿ, ಬೆಕ್ಕುಗಳನ್ನೇಕೆ ಬಲಿ ನೀಡುವುದಿಲ್ಲ? ಹೋಗಲಿ ಚೈತನ್ಯ ಪಡೆಯಲಾದರೂ ಎಲ್ಲೆಂದರಲ್ಲಿ ಸಿಕ್ಕುವ ಅವುಗಳನ್ನೇಕೆ ಹಾಗೇ ಕೊಲ್ಲುವುದಿಲ್ಲ? ಆಹಾರಕ್ಕಾಗಿ ಬಳಸಲಾಗುವ ಪ್ರಾಣಿಗಳನ್ನೇ ಬಲಿಯಾಗಿಯೂ ನೀಡಲಾಗುತ್ತದೆ ಎಂಬುದು ನಿರ್ವಿವಾದ. ಹಾಗಿದ್ದಾಗ ಅದನ್ನು ಖಾಸಗಿಯಾಗಿ, ಶುದ್ಧ ಮತ್ತು ಆರೋಗ್ಯಕರವಾಗಿ ಉಪಯೋಗಿಸುವಂತೆ ಜನರಲ್ಲಿ ಅರಿವು ಮೂಡಿಸುವುದೂ ಮುಖ್ಯ. ಈ ಕೆಲಸ ಸಾಮಾಜಿಕ ಕಾರ್ಯಕರ್ತರಿಂದ ಅಲ್ಲಲ್ಲಿ ನಡೆಯುತ್ತಲೇ ಇದೆ.

ಆದರೆ ರಾಜಕಾರಣಿಗಳಿಗೆ, ಸಮಾಜದ ಗಣ್ಯ ವ್ಯಕ್ತಿಗಳಿಗೆ ಅರಿವು ಮೂಡಿಸುವುದು ಹೇಗೆ? ಒಂದೆಡೆ ಗೋಹತ್ಯೆ ನಿಷೇಧಕ್ಕೆ ಕಾನೂನು ತರಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ. ಇನ್ನೊಂದೆಡೆ, ಪ್ರಸ್ತುತ ಸರ್ಕಾರ ಉಳಿದಿದ್ದಕ್ಕೆ ಕೆಲವು ತಿಂಗಳ ಹಿಂದಷ್ಟೇ ೨೦೦ ಕುರಿಗಳನ್ನು ಬಿಜೆಪಿ ಶಾಸಕರೊಬ್ಬರು ಬಲಿ ನೀಡಿದ್ದನ್ನು ನನ್ನ ಪ್ರಜಾವಾಣಿ ಲೇಖನದಲ್ಲಿ ಪ್ರಸ್ತಾಪಿಸಿರುವೆ. ಇರುವ ಕಾನೂನನ್ನು ಗೌರವಿಸದ, ಇಂತಹ ಅಧಿಕಾರಸ್ಥರು, ವಿದ್ಯಾವಂತರು, ಪ್ರಜ್ಞಾವಂತರಿಗೆ ಯಾರು ತಿಳುವಳಿಕೆ ನೀಡಬಲ್ಲರು? ಕಾನೂನಿನ ನಿಯಮಗಳು ಶಕ್ತಿಯುತವಾಗಿದ್ದರೆ ಅದನ್ನು ಮುಂದು ಮಾಡಿ ಜಾಗೃತಿ ಮೂಡಿಸುವುದು ಸುಲಭ ಮತ್ತು ವೈಜ್ಞಾನಿಕ ಮಾದರಿಯಾಗಿದೆ. ಪತ್ರಿಕಾ ಬರಹಗಳು ಕೂಡ ಬಹುಸಂಖ್ಯಾತರಿಗೆ ಏಕಕಾಲಕ್ಕೆ ತಿಳಿವು ನೀಡುವ ಒಂದು ಸಾಧನ. ಅದನ್ನು ಬೌದ್ಧಿಕ ತರ್ಕ, ಸಿದ್ಧಾಂತಗಳಿಂದ ಸಂಕೀರ್ಣಗೊಳಿಸದೇ, ಪ್ರಸ್ತುತ ಸಮಾಜ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಸರಳವಾಗಿ ಹೇಳಬೇಕಾಗಿರುವುದು ಅನಿವಾರ್ಯ. ಮತ್ತು ಅದನ್ನು ಸಂವಿಧಾನದ ಚೌಕಟ್ಟಿನಲ್ಲಿಯೇ ಹೇಳಬೇಕಾದ್ದು ಇನ್ನೂ ಅನಿವಾರ್ಯ ಎಂಬುದು ಓರ್ವ ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ನನ್ನ ನಂಬಿಕೆ.

ಯಕಶ್ಚಿತ್ ಕಾನೂನಿನಿಂದ ಜನರ ಧಾರ್ಮಿಕ ನಂಬಿಕೆಗಳನ್ನು ಬದಲಿಸಲು ಸಾಧ್ಯವೇ ಎಂಬುದು ಅರುಣ್ ಪ್ರಶ್ನೆ. ಈಗ್ಗೆ ಒಂದು ವರ್ಷದ ಹಿಂದೆ ಸುಪ್ರೀಂಕೋರ್ಟ್‌ನ ಆದೇಶದಂತೆ ದೇಶಾದ್ಯಂತ ರಸ್ತೆ ಸಂಚಾರಕ್ಕೆ ಅಡ್ಡಿಯಾಗುವ, ರಸ್ತೆ ಮಧ್ಯೆ, ಬದಿಯಲ್ಲಿರುವ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಮುಲಾಜಿಲ್ಲದೇ ಕೆಲವೇ ದಿನಗಳಲ್ಲಿ ಎತ್ತಂಗಡಿ ಮಾಡಲಾಯ್ತು. ಮತ್ತೆ ಕೆಲವನ್ನು ನಿರ್ನಾಮ ಮಾಡಲಾಯ್ತು. ಯಾರೂ ಏಕೆ ಅದನ್ನು ವಿರೋಧಿಸಲಿಲ್ಲ? ಆಗ ಜನರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗಲಿಲ್ಲವೇ? ಕಾಡುಗಳಲ್ಲಿ ಪ್ರಾಣಿಬೇಟೆಯನ್ನೂ ನಿಷೇಧಿಸಲಾಗಿದೆ. ಆದಿವಾಸಿ, ಗಿರಿಜನರಿಗೂ ಈ ಕಾನೂನು ಅನ್ವಯಿಸುತ್ತದೆ. ಹಾಗಿದ್ದರೆ ಇದು ಅವರ ನಂಬಿಕೆ, ಸಂಸ್ಕೃತಿ, ಆಚರಣೆ, ಆಹಾರಪದ್ಧತಿಯ ಮೇಲಿನ ಹಲ್ಲೆಯಲ್ಲವೇ? ಅದನ್ನೇಕೆ ಯಾರೂ ವಿರೋಧಿಸುತ್ತಿಲ್ಲ?

ನಗರ ಪ್ರದೇಶದವರು, ಸುಶಿಕ್ಷಿತರು ಗ್ರಾಮಪ್ರದೇಶಗಳಿಗೆ ಹೋಗಿ ಪೊಳ್ಳು ಪ್ರತಿಷ್ಟೆಯ ಹೆಸರಿನಲ್ಲಿ ಬಹುಸಂಖ್ಯೆಯಲ್ಲಿ ಪ್ರಾಣಿಬಲಿ ನೀಡುವ ಮೂಲಕ ಅಲ್ಲಿನ ವಾತಾವರಣವನ್ನು ಕೆಡಿಸುತ್ತಿದ್ದಾರೆಂಬ ವಿಷಯ ನನ್ನ ಲೇಖನದಲ್ಲಿ ಪ್ರಸ್ತಾಪಿತವಾಗಿದೆಯೇ ಹೊರತು ಹಳ್ಳಿಗರನ್ನು, ಅನಾಗರಿಕರು ಎಂದು ಎಲ್ಲಿಯೂ ಹೇಳಿಲ್ಲ. ಅನೇಕ ಧಾರ್ಮಿಕ ಆಚರಣೆಗಳನ್ನು ಪ್ರಸ್ತಾಪಿಸಿರುವ ಅರುಣ್ ಅವುಗಳು ಮೌಢ್ಯವಲ್ಲವೇ ಎಂದು ಕೇಳುತ್ತಾರೆ. ಖಂಡಿತಾ ಅವು ಮೌಢ್ಯವೇ. ಆದರೆ ಪ್ರಾಣಿಬಲಿಯಲ್ಲಿ ಜೀವವೊಂದನ್ನು ಹಿಂಸೆಯಿಂದ ಕೊಲ್ಲಲಾಗುತ್ತದೆ ಎಂಬುದು ಕಾನೂನಿನ ದೃಷ್ಟಿಯಿಂದ ಗಮನಾರ್ಹವಾದ ಅಂಶ. ಏನು ಮಾಡುವುದು? ನಮ್ಮ ಸಂವಿಧಾನ ಪ್ರಾಣಿಯನ್ನು ಸಹ ಜೀವವೆಂದು ಪರಿಗಣಿಸುತ್ತದೆ! ನಮ್ಮ ಸಂವಿಧಾನವನ್ನು ರೂಪಿಸಿದವರು ಅಂಬೇಡ್ಕರ್ ಎಂಬ ಮಹಾನ್ ವ್ಯಕ್ತಿ ಎಂಬುದನ್ನು ಮತ್ತೊಮ್ಮೆ ನೆನಪಿಸುತ್ತೇನೆ. ಇದು ತಪ್ಪು ಎನ್ನುವುದಾದರೆ ನಮ್ಮ ಸಂವಿಧಾನಕ್ಕೇ ತಿದ್ದುಪಡಿ ತರಬೇಕಷ್ಟೇ!

ಸೀಮಿತ ಅಕಡೆಮಿಕ್ ಚೌಕಟ್ಟುಗಳನ್ನು ಬಿಟ್ಟು ನಿತ್ಯ ಪ್ರಾಣಿಬಲಿ ನಡೆಯುವ ನಾಲ್ಕು ಪ್ರದೇಶಗಳನ್ನು ಕ್ಷೇತ್ರಕಾರ್ಯ ಮಾಡಿ, ಅಧ್ಯಯನ ಮಾಡಿದರೆ ಪ್ರಸ್ತುತ ಸಂದರ್ಭದಲ್ಲಿ ಪ್ರಾಣಿಬಲಿಯ ಸ್ವರೂಪ ಹೇಗೆ ಬದಲಾಗುತ್ತಿದೆ, ಮತ್ತು ಅದು ಹೇಗೆ ಪೊಳ್ಳು ಸಂಸ್ಕೃತಿಯಾಗಿ ಮೌಢ್ಯದ ಹೆಸರಲ್ಲಿ ವಿಜೃಂಭಿಸುತ್ತಿದೆ ಎಂಬುದು ಅರ್ಥವಾಗುತ್ತದೆ.

ಇದೆಲ್ಲ ಚರ್ಚೆಗಳಾಚೆಗೂ, ಇದೇ ಜುಲೈ ೧೨ ರಂದು ಪ್ರಾಣಿಬಲಿ ಕಾಯ್ದೆ ಉಲ್ಲಂಘಿಸಿ ಸಾರ್ವಜನಿಕವಾಗಿ  ಪ್ರಾಣಿಬಲಿ ಕೊಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಕರ್ನಾಟಕ ಹೈಕೋರ್ಟ್‌ಗೆ,  ರಾಜ್ಯ ಸರ್ಕಾರ ಮುಚ್ಚಳಿಕೆ ಬರೆದುಕೊಟ್ಟಿರುವುದು ಗಮನಾರ್ಹವಾದ ವಿಷಯ.


 -ರೂಪ ಹಾಸನ
0 komentar

Blog Archive