ಬಡವರಿಗೆ ಬದುಕು ತುಟ್ಟಿ; ಸಾವು ಇನ್ನೂ ತುಟ್ಟಿ ಎಂಬ ನಿನ್ನೆಯ ಪ್ರಜಾವಾಣಿ ಸಾಪ್ತಾಹಿಕದ ಲೇಖನ ಓದಿದ ನಂತರ ಅದು ಎಬ್ಬಿಸಿದ ತಲ್ಲಣದಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಅರಗಿಸಿಕೊಳ್ಳಲು ಸಾಕಷ್ಟು ದಿನಗಳೇಬೇಕು. ಬಹುಶಃ ಇಂಥದ್ದೊಂದು ಲೇಖನವನ್ನು ಓದಿ ಎಷ್ಟು ದಿನಗಳಾಗಿದ್ದವೋ ಎಂದು ನಿಮಗನ್ನಿಸಿದರೆ ಆಶ್ಚರ್ಯವಿಲ್ಲ. ಡಾ.ಆಶಾ ಬೆನಕಪ್ಪ ಈ ಲೇಖನ ಬರೆದಿದ್ದಾರೆ.
ಹೃದ್ರೋಗದಿಂದ ಬಳಲುತ್ತಿರುವ ತನ್ನ ಮಗ ಹನುಮಂತಪ್ಪ ಎಂಬ ಹುಡುಗನನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರುವ ಕೊಪ್ಪಳದ ಬಡರೈತ ಮುನಿಯಪ್ಪ ಅವರನ್ನು ಹತ್ತಿರದಿಂದ ಗಮನಿಸಿ, ಆತನ ಚಟುವಟಿಕೆಗಳನ್ನು ಲೇಖಕಿ ಇಲ್ಲಿ ವರದಿ ಮಾಡುತ್ತ ಹೋಗುತ್ತಾರೆ. ಮುನಿಯಪ್ಪ ತನ್ನ ಮಗನಿಗಾಗಿ ಏನೇನು ಮಾಡುತ್ತಾರೆ, ಮಗ ಸತ್ತ ನಂತರ ಏನು ಮಾಡುತ್ತಾರೆ ಎಂಬುದನ್ನು ಓದುತ್ತಾ ಹೋದರೆ, ನಿಮ್ಮ ಕಣ್ಣುಗಳು ಆರ್ದ್ರವಾಗದೇ ಇರವು. ಮನುಷ್ಯ ಸಂಬಂಧಗಳ ಬೇರುಗಳು ಸಡಿಲಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಮುನಿಯಪ್ಪ ಮತ್ತು ಹನುಮಂತಪ್ಪ ಎಂಬ ಈ ಅಪ್ಪ ಮಕ್ಕಳು ನಾವು ತಲೆ ಎತ್ತಿ ನೋಡಿದಷ್ಟು ಎತ್ತರಕ್ಕೆ ಬೆಳೆದು ನಿಂತಂತೆ ಅನಿಸುತ್ತದೆ.
ಆಶಾ ಅವರು ಈ ಲೇಖನ ಬರೆಯುವ ಮೂಲಕ ದೂರದೂರಗಳಿಂದ ತಮ್ಮ ಕರುಳ ಸಂಬಂಧಿಗಳ ಚಿಕಿತ್ಸೆಗಾಗಿ ಬೆಂಗಳೂರಿಗೆ ಬರುವ ಬಾಯಿಸತ್ತ ಬಡವರ ಬದುಕನ್ನೇ ತೆರೆದಿಟ್ಟಿದ್ದಾರೆ. ಪ್ರತಿನಿತ್ಯ ಇಂಥವರು ನೂರಾರು ಸಂಖ್ಯೆಯಲ್ಲಿ ಬರುತ್ತಾರೆ. ಹಾಗೆ ಬರುವ ಮುನ್ನ ತಮ್ಮ ಆಸ್ತಿ ಅಡವನ್ನು ಮಾರಿ ಬಂದಿರುತ್ತಾರೆ. ಕೈಗೆ ಸಿಕ್ಕ ಪುಡಿಗಾಸನ್ನು ಚಿನ್ನದ ಹಾಗೆ ಜೋಪಾನ ಮಾಡಿ, ಖರ್ಚು ಮಾಡುತ್ತಾರೆ. ಅರೆಹೊಟ್ಟೆಯಲ್ಲೇ ಎಲ್ಲೋ ಬಿದ್ದುಕೊಂಡು ಕಾಲ ದೂಡುತ್ತಾರೆ. ಅವರಿಗೆ ಯಾವ ರಾಜಕಾರಣಿಯ ಶಿಫಾರಸೂ ಇರುವುದಿಲ್ಲ. ಹೀಗಾಗಿ ಅವರ ಚಿಕಿತ್ಸಾ ವೆಚ್ಚದ ಬಿಲ್‌ಗಳು ಕಡಿತವಾಗುವುದಿಲ್ಲ. ಮುಖ್ಯಮಂತ್ರಿಯ ಫಂಡು ತಮ್ಮ ಕೆಲಸಕ್ಕೆ ಬರುತ್ತದೆ ಎಂಬುದೂ ಅವರಿಗೆ ಗೊತ್ತಿರುವುದಿಲ್ಲ. ಗೊತ್ತಿದ್ದರೂ ಅವರು ವಿಧಾನಸೌಧದ ಮೆಟ್ಟಿಲುಗಳನ್ನು ಹತ್ತಿ ತಮ್ಮ ಕೆಲಸ ಮಾಡಿಸಿಕೊಳ್ಳಲಾರರು.
ಚಿಕಿತ್ಸೆಗೆ ಹಣ ಹೊಂದಿಸಿಕೊಂಡು ಬರುವಷ್ಟರಲ್ಲೇ ರೋಗಿಯ ಅರ್ಧ ಪ್ರಾಣ ಹೋಗಿರುತ್ತದೆ. ಆಸ್ತಿ ಮಾರಿ ಬಂದ ಹಣ ಕರಗುವಷ್ಟರಲ್ಲಿ ಪೂರ್ಣ ಪ್ರಾಣವೂ ಹೋಗಿಬಿಡುತ್ತದೆ. ಇಂಥವು ದಿನವೂ ನಡೆಯುತ್ತದೆ. ಆದರೆ ಯಾವ ಮಾಧ್ಯಮಗಳಲ್ಲೂ ಇವೆಲ್ಲ ದಾಖಲಾಗುವುದಿಲ್ಲ. ಬಡವರ ಬದುಕು ಅತ್ಯಂತ ಸಸ್ತಾ. ಅವರು ಬದುಕಿದ್ದರೂ ಸುದ್ದಿಯಾಗುವುದಿಲ್ಲ, ಸತ್ತರೂ ಸುದ್ದಿಯಾಗುವುದಿಲ್ಲ. ವಿಧಾನಸೌಧಕ್ಕೆ, ಕಾರ್ಪರೇಷನ್‌ಗೆ, ಐಪಿಎಲ್‌ಗೆ, ಶೇರು ಮಾರುಕಟ್ಟೆಗೆ, ಫ್ಯಾಷನ್ ಶೋಗೆ, ದೊಡ್ಡದೊಡ್ಡ ಸಂಸ್ಥೆಗಳ ಹೊಸ ಪ್ರಾಡಕ್ಟು ಬಿಡುಗಡೆಗಾಗಿ ಪಂಚತಾರಾ ಹೋಟೆಲ್‌ಗಳಿಗೆ, ರಾಜಕೀಯ ಪಕ್ಷಗಳ ಕಚೇರಿಗಳಿಗೆ ವರದಿಗಾರರನ್ನು ನಿಯುಕ್ತಿ ಮಾಡುವ ಮಾಧ್ಯಮಗಳು ಸರ್ಕಾರಿ ಆಸ್ಪತ್ರೆಗಳಿಗೆ ವರದಿಗಾರರನ್ನು ಕಳುಹಿಸುವುದಿಲ್ಲ. ಅಪಘಾತ, ಕೊಲೆ ಇತ್ಯಾದಿಗಳು ನಡೆದು ಮೃತದೇಹಗಳು ಬಂದರೆ ಮಾತ್ರ ಇಲ್ಲಿ ಸುದ್ದಿ, ಮಿಕ್ಕಂತೆ ಇಲ್ಲಿ ನಮ್ಮ ಮೀಡಿಯಾಗಳಿಗೆ ಬೇಕಾದ ಸುದ್ದಿಗಳು ಹುಟ್ಟುವುದಿಲ್ಲ.
ಆರ್ಥಿಕ ಉದಾರೀಕರಣದ ನಂತರದ ದಿನಗಳಲ್ಲಿ ನಮ್ಮ ಮೀಡಿಯಾಗಳು ಜಾಹೀರಾತು ಮಾಫಿಯಾದ ಕೈಗೆ ಸಿಕ್ಕವು. ಮೀಡಿಯಾಗಳ ಆದ್ಯತೆಗಳು ಬದಲಾದವು. ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗದ ಬದುಕಷ್ಟೇ ಮೀಡಿಯಾಗಳಿಗೆ ಮುಖ್ಯವಾಯಿತು. ಯಾಕೆಂದರೆ ಈ ವರ್ಗದವರೇ ಜಾಹೀರಾತುದಾರರ ಗ್ರಾಹಕರು. ಮೀಡಿಯಾಗಳಲ್ಲಿ ಕೆಲಸ ಮಾಡುವವರೂ ಸಹ ಈ ವರ್ಗಗಳಿಂದ ಬಂದವರೇ ಆಗಿದ್ದರಿಂದ ಸಹಜವಾಗಿ ಅವರು ಈ ಜನರ ಒಲವು-ನಿಲುವುಗಳನ್ನೇ ಪ್ರತಿನಿಧಿಸತೊಡಗಿದರು. ಮೀಡಿಯಾಗಳು ಹೆಚ್ಚು ಹೆಚ್ಚು ನಗರಕೇಂದ್ರಿತವಾದವು. ಹಳ್ಳಿಗಳ ಜನರ ಬದುಕು, ಬವಣೆಗಳಿಗೆ ಅಲ್ಲಿ ಜಾಗವಿಲ್ಲದಂತಾಯಿತು.
ಹಾಗಿದ್ದರೆ ಬಡವರ ಕಥೆಗಳನ್ನು ಹೇಳುವವರು ಯಾರು? ಬಡವರ ಜೋಪಡಿಗಳಲ್ಲಿ ಹುಟ್ಟುವ ಸುದ್ದಿಗಳನ್ನು ಬರೆಯುವವರು ಯಾರು? ನಿಜ ಹೇಳಿ, ನಮ್ಮ ಮೀಡಿಯಾಗಳು ಇವತ್ತಿನ ಪ್ರಜಾಪ್ರಭುತ್ವದ ಕಾಲದಲ್ಲಿ ಸಮಸ್ತ ಜನರ ಪ್ರತಿನಿಧಿಗಳಂತೆ ಕೆಲಸ ಮಾಡುತ್ತಿವೆಯೇ?
ಪ್ರಜಾವಾಣಿ ಸಾಪ್ತಾಹಿಕದ ಲೇಖನ ನಮ್ಮಲ್ಲಿ ತಲ್ಲಣ ಹುಟ್ಟಿಸುತ್ತದೆ. ಮನುಷ್ಯ ಸಂಬಂಧಗಳ ಗಾಢತೆಯನ್ನು ಅದು ಪ್ರಭಾವಶಾಲಿಯಾಗಿ ಹೇಳುವುದರಿಂದ ನಮ್ಮ ಒಳಗನ್ನು ನೋಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಮುನಿಯಪ್ಪ ಒಂದು ಮಾನವೀಯ ಆದರ್ಶದ ಸಂಕೇತವಾಗಿ ನಮ್ಮ ಕಣ್ಣೆದುರು ಕಾಣುತ್ತಾರೆ. ಇಂಥ ನಿಜಮನುಷ್ಯರ ಸಂಖ್ಯೆ ಹೆಚ್ಚಲಿ. ಮೀಡಿಯಾಗಳ ಕಣ್ಣಿಗೆ ಇಂಥವರು ಆಗಾಗ ಕಾಣಿಸಿಕೊಳ್ಳುವಂತಾಗಲಿ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಮೀಡಿಯಾಗಳು ದಟ್ಟದರಿದ್ರನ, ಕಟ್ಟ ಕಡೆಯ ಮನುಷ್ಯನನ್ನೂ ತಲುಪುವಂತಾಗಲಿ, ಅವರುಗಳ ನಿಷ್ಕಳಂಕ ಬದುಕನ್ನು ಪ್ರತಿಬಿಂಬಿಸುವಂತಾಗಲಿ, ಅವರಿಗೆ ಆಗುತ್ತಿರುವ ಎಲ್ಲ ಅನ್ಯಾಯಗಳ ವಿರುದ್ಧವೂ ಪ್ರತಿಭಟಿಸುವಂತಾಗಲಿ.
ಲೇಖನ ಓದಿದ ನಂತರ ಕಣ್ಣುಗಳು ಮಂಜುಮಂಜು. ಮುನಿಯಪ್ಪ ಒಂದು ಪ್ರತಿಮೆಯಂತೆ, ಆದರ್ಶದಂತೆ, ಕನಸಿನಂತೆ ಎದೆಯೊಳಗೆ ಕದಲದೆ ನಿಂತುಬಿಟ್ಟಿದ್ದಾರೆ. ಪ್ರಜಾವಾಣಿಗೆ, ಡಾ.ಆಶಾ ಬೆನಕಪ್ಪ ಅವರಿಗೆ ಕೃತಜ್ಞತೆಗಳು. ನೀವು ಈ ಲೇಖನವನ್ನೂ ಓದಿಲ್ಲವಾದರೆ ದಯವಿಟ್ಟು ಕೆಳಗಿನ ಲಿಂಕ್ ಬಳಸಿ, ಓದಿ.
http://www.prajavani.net/web/include/story.php?news=2151§ion=54&menuid=13

发表评论