ಡಬ್ಬಿಂಗ್ ಸಿನಿಮಾಗಳು ಬೇಕೇ ಬೇಡವೇ ಎಂಬ ವಾದವಿವಾದ ಮತ್ತೆ ನಡೆಯುತ್ತಿದೆ. ಬೇಕೆ ಬೇಡವೇ ಎನ್ನುವುದನ್ನು ಕನ್ನಡ ಚಿತ್ರರಂಗದ ಪಂಡಿತರಷ್ಟೇ ನಿರ್ಧರಿಸಬೇಕೆ? ಅಥವಾ ಸಿನಿಮಾಗಳನ್ನು ನೋಡುವ ಪ್ರೇಕ್ಷಕರೂ ಈ ಚರ್ಚೆಯಲ್ಲಿ ಯಾಕಿರಬಾರದು ಎಂಬ ಮೂಲಭೂತ ಪ್ರಶ್ನೆ ನಮ್ಮದು. ಆದರೆ ಕನ್ನಡ ಪ್ರೇಕ್ಷಕರನ್ನು ಟೇಕನ್ ಫಾರ್ ಗ್ರಾಂಟೆಡ್ ಎನ್ನುವಂತೆಯೇ ನೋಡಿಕೊಂಡು ಬಂದಿರುವ ಸಿನಿಮಾ ಮಂದಿ ಈ ಚರ್ಚೆಯನ್ನು ಸಾರ್ವಜನಿಕಗೊಳಿಸಲು ಹಿಂದೂ ಮನಸ್ಸು ಮಾಡಿವರಲ್ಲ, ಇಂದೂ ಕೂಡ.

ಡಾ.ರಾಜಕುಮಾರ್ ಅವರು ಡಬ್ಬಿಂಗ್ ಸಿನಿಮಾಗಳನ್ನು ವಿರೋಧಿಸಿದ ಬೀದಿಗಳಿದ ಸಂದರ್ಭ ಬೇರೆಯದೇ ಆಗಿತ್ತು. ಆಗ ಕನ್ನಡ ಚಲನಚಿತ್ರರಂಗ ಇನ್ನೂ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಕನ್ನಡ ಚಿತ್ರರಂಗ ಆಗಿನ್ನೂ ಬೆಳೆಯುತ್ತಿದ್ದ ಪುಟ್ಟ ಉದ್ಯಮವಾಗಿತ್ತು. ಆದರೆ ಈಗ ಹಾಗಿಲ್ಲ. ಯಾವುದಕ್ಕೂ ಯಾರನ್ನೂ ಅವಲಂಬಿಸುವ ಸ್ಥಿತಿ ಇಲ್ಲ. ಸ್ಟುಡಿಯೋಗಳನ್ನು ಹುಡುಕಿಕೊಂಡು ಚೆನ್ನೈಗೋ, ಮುಂಬೈಗೋ ಹೋಗುವ ಸ್ಥಿತಿಯೂ ಇಲ್ಲ. ಕನ್ನಡ ಚಿತ್ರಗಳಿಗೂ ವ್ಯಾಪಕವಾದ ಮಾರುಕಟ್ಟೆ ಇದೆ. ಒಳ್ಳೆಯ ಕನ್ನಡ ಸಿನಿಮಾಗಳನ್ನು ನೋಡುವ ಜನರು ಎಲ್ಲೆಡೆ ಇದ್ದಾರೆ. ಕಾಲದ ಅಗತ್ಯಕ್ಕೆ ರೂಪಿಸಿಕೊಂಡ ನಿಯಮಗಳು ಸಾರ್ವಕಾಲಿಕ ಆಗಬೇಕಿಲ್ಲ. ಈಗ ಕಾಲ ಬದಲಾಗಿದೆ. ನಿಲುವುಗಳ ಕುರಿತು ಪುನರ್‌ವಿಮರ್ಶೆ ಯಾಕಾಗಬಾರದು?

ಡಬ್ಬಿಂಗ್ ವಿರೋಧಿಸುವವರು ಬಹಳ ಮುಖ್ಯವಾಗಿ ಎತ್ತುವ ಪ್ರಶ್ನೆ ಏನೆಂದರೆ ಡಬ್ಬಿಂಗ್ ಸಿನಿಮಾಗಳು ಬಂದರೆ ಕನ್ನಡ ಚಲನಚಿತ್ರ ರಂಗದಲ್ಲಿ ಕಲಾವಿದರು, ತಂತ್ರಜ್ಞರು ಬೀದಿಪಾಲಾಗುತ್ತಾರೆ, ಅವರ ಅನ್ನಕ್ಕೆ ಕುತ್ತು ಬರುತ್ತದೆ ಎಂಬುದು. ಎರಡನೆಯದಾಗಿ ಅವರು ಕನ್ನಡ ಸಂಸ್ಕೃತಿ, ಭಾಷೆಯ ಕುರಿತಾದ ಪ್ರಶ್ನೆಗಳನ್ನು ಎತ್ತುತ್ತಾರೆ.

ಡಬ್ಬಿಂಗ್ ಸಿನಿಮಾಗಳನ್ನು ಕರ್ನಾಟಕದಲ್ಲಿ ನಿಷೇಧಿಸಿರುವ ಕ್ರಮವೇ ಕಾನೂನು ಬಾಹಿರ ಮತ್ತು ಅಪ್ರಜಾಸತ್ತಾತ್ಮಕ. ಹಾಗೆ ಸುಖಾಸುಮ್ಮನೆ ಏನನ್ನಾದರೂ ನಿಷೇಧಿಸುವ ಕ್ರಮವನ್ನು ದೇಶದ ಸಂವಿಧಾನ ಒಪ್ಪುವುದಿಲ್ಲ, ಯಾವ ನ್ಯಾಯಾಲಯಗಳೂ ಒಪ್ಪುವುದಿಲ್ಲ. ಜನರು ಏನನ್ನು ನೋಡಬಾರದು, ನೋಡಬೇಕು ಎಂದು ನಿರ್ದೇಶಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗಾಗಲೀ, ಇನ್ನೊಂದು ಸಂಸ್ಥೆಗಾಗಲೀ ಯಾರೂ ಅನುಮತಿಯನ್ನು ಕೊಟ್ಟಿಲ್ಲ. ಕಾನೂನಿನ ದೃಷ್ಟಿಯಿಂದ ಡಬ್ಬಿಂಗ್ ನಿಷೇಧದ ಕ್ರಿಯೆಗೆ ಯಾವ ಮಾನ್ಯತೆಯೂ ಇಲ್ಲ.

ಡಬ್ಬಿಂಗ್ ಸಿನಿಮಾಗಳಿಂದ ಕನ್ನಡ ಸಿನಿಮಾರಂಗದ ತಂತ್ರಜ್ಞರು, ಕಲಾವಿದರು ಕೆಲಸ ಕಳೆದುಕೊಂಡು ಬೀದಿಪಾಲಾಗುತ್ತಾರೆ ಎಂಬ ವಾದಕ್ಕೆ ಯಾವ ಅರ್ಥವೂ ಇಲ್ಲ, ಪುರಾವೆಯೂ ಇಲ್ಲ. ಇದು ಒಂದು ರೀತಿಯ ಹೇಡಿತನದ, ಪಲಾಯನಾವಾದಿ, ಅಂಜುಗುಳಿ ವಾದ. ಡಬ್ಬಿಂಗ್ ಸಿನಿಮಾ ಬರಲಿ ಅಂದರೆ ಕನ್ನಡ ಸಿನಿಮಾಗಳು ನಿಲ್ಲಲಿ ಎಂದು ಅರ್ಥೈಸಿಕೊಳ್ಳಬೇಕಾಗಿಲ್ಲ. ಹಾಗೆ ನೋಡಿದರೆ, ಡಬ್ಬಿಂಗ್ ಸಿನಿಮಾಗಳು ಪೂರ್ತಿಯಾಗಿ ಕನ್ನಡ ಪ್ರೇಕ್ಷಕರನ್ನು ಆವರಿಸಿಕೊಳ್ಳುವ ಸಾಧ್ಯತೆಯೇ ಇಲ್ಲ. ಕನ್ನಡ ಪ್ರೇಕ್ಷಕರು ನೇಟಿವಿಟಿಯನ್ನು ಬಯಸುತ್ತಾರೆ. ಶಿವಣ್ಣ, ದರ್ಶನ್, ಸುದೀಪ್ ಇತ್ಯಾದಿಗಳಾದಿಯಾಗಿ ಲೂಸ್ ಮಾದನವರೆಗೆ ಎಲ್ಲ ನಟರ ಜತೆಗೆ ಅವರಿಗೊಂದು ಭಾವನಾತ್ಮಕ ಸಂಬಂಧವಿದೆ. ಹೀಗಾಗಿ ಒಳ್ಳೆಯ ಕನ್ನಡ ಸಿನಿಮಾಗಳನ್ನು ಕೊಟ್ಟರೆ ನೋಡೇನೋಡುತ್ತಾರೆ. ತಮ್ಮನ್ನು ಸೆಳೆಯದ ಚಿತ್ರಗಳು ಡಬ್ಬಿಂಗ್ ಆಗಲಿ, ರೀಮೇಕ್ ಆಗಲೀ, ಸ್ವಮೇಕ್ ಆಗಲಿ ಪ್ರೇಕ್ಷಕರು ಅವುಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಅದರರ್ಥ ತಮಿಳಿನಲ್ಲಿ, ತೆಲುಗಿನಲ್ಲಿ ಮೆಗಾಹಿಟ್ ಆದ ಸಿನಿಮಾಗಳೆಲ್ಲವೂ ಕನ್ನಡದಲ್ಲಿ ಡಬ್ ಆದಾಗ ಅದೇ ಪ್ರಮಾಣದಲ್ಲಿ ಹಿಟ್ ಆಗುತ್ತದೆ ಎಂದು ಕುರುಡಾಗಿ ನಂಬಿಕೊಳ್ಳಬೇಕಾಗಿಲ್ಲ. ಯೋಗರಾಜ ಭಟ್, ದುನಿಯಾ ಸೂರಿ, ಗುರುಪ್ರಸಾದ್ ಹಾಗು ಈ ಸಾಲಿಗೆ ಸೇರುವ ಒಂದು ಡಜನ್‌ಗೂ ಹೆಚ್ಚು ನಿರ್ದೇಶಕರು ನಮ್ಮ ಪ್ರೇಕ್ಷಕರನ್ನು ಸೆಳೆಯಬಲ್ಲ ಸಿನಿಮಾಗಳನ್ನು ಮಾಡಿ ಗೆದ್ದಿದ್ದಾರೆ. ಮುಂದೆಯೂ ಇಂಥ ಸಿನಿಮಾಗಳನ್ನು ಕೊಡುವ ಆತ್ಮವಿಶ್ವಾಸವೂ ಅವರಿಗಿದೆ. ಹೀಗಿರುವಾಗ ಕಲಾವಿದರು, ತಂತ್ರಜ್ಞರು ಬೀದಿಪಾಲಾಗುತ್ತಾರೆ ಎಂದು ಕಣ್ಣೀರು ಹಾಕುತ್ತ ಕುಳಿತುಕೊಳ್ಳುವುದರಲ್ಲಿ ಯಾವ ಅರ್ಥವಿದೆ?

ಡಬ್ಬಿಂಗ್ ವಿರೋಧಿಗಳು ತಮ್ಮ ವಾದ ಸಮರ್ಥನೆಗಾಗಿ ಭಾಷೆ, ಸಂಸ್ಕೃತಿಯ ಹೆಸರನ್ನು ಗುರಾಣಿಯಾಗಿ ಬಳಸುತ್ತ ಬಂದಿದ್ದಾರೆ. ಇದು ದೊಡ್ಡ ಆತ್ಮವಂಚನೆ. ಹಾಗೆ ನೋಡಿದರೆ ಡಬ್ಬಿಂಗ್ ಸಿನಿಮಾಗಳು ಕನ್ನಡ ಭಾಷೆಯನ್ನು ಬೆಳೆಸುತ್ತವೆ ಎಂದೇ ಸ್ಪಷ್ಟವಾಗಿ ಹೇಳುವ ಸಮಯ ಬಂದಿದೆ. ರಜನಿಕಾಂತ್, ಚಿರಂಜೀವಿ, ಅಭಿಷೇಕ್ ಬಚ್ಚನ್‌ರ ಸಿನಿಮಾಗಳನ್ನು ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ನೋಡುವ ಬದಲು ಕನ್ನಡ ಭಾಷೆಯಲ್ಲಿ ನೋಡಿದರೆ, ಭಾಷೆ ಬೆಳವಣಿಗೆಯಾಗುವುದಿಲ್ಲವೇ? ಗುಣಮಟ್ಟದ ಕಾರಣಕ್ಕಾಗಿ ಕನ್ನಡಿಗರೇ ಇಂದು ತಮ್ಮದಲ್ಲದ ಭಾಷೆಗಳಾದ ತಮಿಳು, ತೆಲುಗು ಹಿಂದಿ ಸಿನಿಮಾಗಳನ್ನು ನೋಡುತ್ತಿದ್ದಾರೆ. ಇಂಥವರು ಇದೇ ಸಿನಿಮಾಗಳನ್ನು ಕನ್ನಡ ಭಾಷೆಯಲ್ಲಿ ನೋಡಲು ಬಯಸಿದರೆ ತಪ್ಪೇನಿದೆ?

ಇನ್ನು ಸಂಸ್ಕೃತಿಯ ವಿಷಯ ಎತ್ತುವ ನೈತಿಕತೆ ನಮ್ಮ ಸಿನಿಮಾ ರಂಗಕ್ಕೆ ಇಲ್ಲವೇ ಇಲ್ಲ. ಹಾಗೇನಾದರೂ ಇದ್ದಲ್ಲಿ ಅವರು ಸಾಲುಮೇರೆ ರೀಮೇಕ್ ಸಿನಿಮಾಗಳನ್ನು ಮಾಡುತ್ತಿರಲಿಲ್ಲ. ಮೂರು ತಮಿಳು-ತೆಲುಗು ಸಿನಿಮಾಗಳ ಡಿವಿಡಿಗಳನ್ನು ನಿರ್ದೇಶಕರ ಕೈಗೆ ಕೊಟ್ಟು ಒಂದು ಕನ್ನಡ ಸಿನಿಮಾ ಮಾಡಿಕೊಡಿ ಎಂದು ನಮ್ಮ ನಿರ್ಮಾಪಕರು ಹೇಳುತ್ತಿರಲಿಲ್ಲ. ರೀಮೇಕ್‌ನ ಹೆಸರಲ್ಲಿ ತಮಿಳುನಾಡಿನ ಮೀಸೆ, ನಾಮಗಳಿಂದ ಹಿಡಿದು ಎಲ್ಲವನ್ನೂ ತಂದು ಕನ್ನಡ ಪ್ರೇಕ್ಷಕರಿಗೆ ಕೊಟ್ಟ ಜನರಲ್ಲವೇ ಇವರು? ಸಿನಿಮಾ ಶೂಟಿಂಗ್ ನಡೆಯುವಾಗಲೇ ಮೂಲ ಸಿನಿಮಾದ ಡಿವಿಡಿ ಪ್ಲೇ ಮಾಡಿಕೊಂಡು, ಪ್ರತಿ ಶಾಟ್‌ಗಳನ್ನು ಶೂಟ್ ಮಾಡಿದ ಪ್ರಭೃತಿಗಳು ಇವರೇ ಅಲ್ಲವೇ? ಇವರು ಸಂಸ್ಕೃತಿಯ ವಿಷಯವನ್ನೇಕೆ ಮಾತನಾಡುತ್ತಾರೆ?

ತಮಿಳಿಗರು ರಾಮಾಯಣವನ್ನೂ, ಮಹಾಭಾರತವನ್ನೂ ತಮಿಳಿನಲ್ಲೇ ನೋಡಿದರು. ಜುರಾಸಿಕ್ ಪಾರ್ಕ್, ಟೈಟಾನಿಕ್, ೨೦೧೨ನಂಥ ಸಿನಿಮಾಗಳನ್ನು ಸಹ ತಮಿಳಿನಲ್ಲೇ ನೋಡಿದರು. ಕನ್ನಡಿಗರಿಗೆ, ಅದರಲ್ಲೂ ಕನ್ನಡ ಹೊರತು ಬೇರೆ ಯಾವ ಭಾಷೆಯೂ ಬಾರದ ಹಳ್ಳಿಗಾಡಿನ ಅಪ್ಪಟ ಕನ್ನಡಿಗರಿಗೆ ಈ ಸಿನಿಮಾಗಳನ್ನು ತಮ್ಮದೇ ಭಾಷೆಯಲ್ಲಿ ನೋಡುವ ಅವಕಾಶವನ್ನು ನಾವೇ ತಪ್ಪಿಸಿದೆವಲ್ಲವೆ? ಹೋಗಲಿ, ಜುರಾಸಿಕ್ ಪಾರ್ಕ್ ಸಿನಿಮಾವನ್ನು ರೀಮೇಕ್ ಮಾಡುವ ಶಕ್ತಿ ನಮ್ಮ ನಿರ್ಮಾಪಕರಿಗೆ ಇದೆಯೇ? ಇಲ್ಲವಾದರಲ್ಲಿ ಅದರ ಡಬ್ಬಿಂಗ್ ಸಿನಿಮಾ ನೋಡುವ ವೀಕ್ಷಕರ ಹಕ್ಕನ್ನು ಕಿತ್ತುಕೊಂಡಿದ್ದು ಎಷ್ಟು ಸರಿ?

ತಮಿಳಿನ ಬಹುತೇಕ ಸಿನಿಮಾಗಳು ತೆಲುಗಿಗೆ, ತೆಲುಗಿನ ಬಹುತೇಕ ಸಿನಿಮಾಗಳು ತಮಿಳಿಗೆ ಡಬ್ ಆಗುತ್ತಲೇ ಇವೆ. ಹಾಗಂತ ತಮಿಳು ಇಂಡಸ್ಟ್ರಿಯೂ ಬಿದ್ದು ಹೋಗಿಲ್ಲ, ತೆಲುಗು ಇಂಡಸ್ಟ್ರಿಯೂ ಮಲಗಿಕೊಂಡಿಲ್ಲ. ಇವರಿಗೆ ಯಾರಿಗೂ ಇರದ ಭಯ ಕನ್ನಡ ಚಿತ್ರರಂಗಕ್ಕೆ ಏಕೆ?

ಒಂದು ಸಿನಿಮಾಗೆ ತಮಿಳು, ತೆಲುಗಿನವರು ನೂರಾರು ಕೋಟಿ ರೂ. ತೊಡಗಿಸುತ್ತಾರೆ. ನಮ್ಮ ಇಂಡಸ್ಟ್ರಿ ಅಷ್ಟು ಬೆಳೆದಿಲ್ಲ ಎಂದು ಪದೇ ಪದೇ ನಮ್ಮವರು ತಮ್ಮ ನಿಲುವುಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಯಾಕೆ ಈ ಕೊರಗು? ಕಡಿಮೆ ಬಜೆಟ್‌ನ ಸಿನಿಮಾಗಳು ಹಿಟ್ ಆಗೋದೇ ಇಲ್ಲವೇ? ಸಿನಿಮಾಗಳನ್ನು ಹೊರತುಪಡಿಸಿದ ಪರ‍್ಯಾಯ ಮಾಧ್ಯಮಗಳು ಸಿನಿಮಾಗಳ ಹೊಡೆತವನ್ನು ಎದುರಿಸಿಯೂ ಉಳಿದುಕೊಂಡಿಲ್ಲವೇ? ಹವ್ಯಾಸಿ ರಂಗಭೂಮಿ, ಕಂಪನಿ ರಂಗಭೂಮಿ, ಬಯಲಾಟ, ಯಕ್ಷಗಾನ ಎಲ್ಲವೂ ಉಳಿದುಕೊಂಡಿಲ್ಲವೇ? ಅವರುಗಳೂ ಸಹ ಸಿನಿಮಾದವರ ಹಾಗೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಲು ನಮ್ಮಲ್ಲಿ ಹಣವಿಲ್ಲ. ಹೀಗಾಗಿ ಸಿನಿಮಾಗಳನ್ನೇ ಬ್ಯಾನ್ ಮಾಡಿ ಎಂದು ಎಂದಾದರೂ ಕೇಳಿದ್ದಾರೆಯೇ?

ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಕಿರುತೆರೆಯೂ ಸಹ ದೊಡ್ಡದಾಗಿ ಬೆಳೆದಿದೆ. ಹಲವಾರು ಚಾನಲ್‌ಗಳಿಂದಾಗಿ ಕಲಾವಿದರಿಗೆ, ತಂತ್ರಜ್ಞರಿಗೆ ವಿಪುಲವಾದ ಅವಕಾಶಗಳು ಸೃಷ್ಟಿಯಾಗಿವೆ. ಇವುಗಳಲ್ಲದೆ ನಮ್ಮ ತಂತ್ರಜ್ಞರು, ನಟರು ಇತರ ಭಾಷೆಯ ಉದ್ಯಮಗಳಲ್ಲೂ ತೊಡಗಿ ಯಶಸ್ವಿಯಾಗಿದ್ದಾರೆ. ಹೀಗಿರುವಾಗ ನಮ್ಮ ಇಂಡಸ್ಟ್ರಿಯೇ ನಾಶವಾಗುತ್ತದೆ, ನಮ್ಮ ಜನರೆಲ್ಲ ಬೀದಿಗೆ ಬೀಳುತ್ತಾರೆ ಎಂದು ಹೇಳುವುದೇ ನಗೆಪಾಟಲಿನ ವಿಷಯ.

ಜಾಗತೀಕರಣದ ಕಾಲವಿದು. ಗುಲ್ಬರ್ಗದ ಹಳ್ಳಿಯೊಂದರಿಂದ ಗಾರೆ ಕೆಲಸಕ್ಕಾಗಿ ಬೆಂಗಳೂರಿಗೆ ಬರುವ ಬಡ ಕೂಲಿಕಾರ್ಮಿಕ ತಮಿಳುನಾಡಿನ, ಉತ್ತರಪ್ರದೇಶದ ಕೂಲಿ ಕಾರ್ಮಿಕರಿಂದ ಪೈಪೋಟಿ ಎದುರಿಸುತ್ತಾನೆ. ನಮ್ಮ ಹಳ್ಳಿಯ ರೈತರು ಇನ್ನ್ಯಾವುದೋ ದೇಶದ ರೈತರ ಜತೆ ತಮಗೆ ಗೊತ್ತಿಲ್ಲದಂತೆಯೇ ಪೈಪೋಟಿ ನಡೆಸಿ ತನ್ನ ಬದುಕನ್ನು ಕಾಪಾಡಿಕೊಳ್ಳಲು ಹೆಣಗುತ್ತಿದ್ದಾರೆ. ಇದೇ ಮಾತನ್ನು ಎಲ್ಲ ಉದ್ಯಮಗಳಿಗೂ, ಅವುಗಳಲ್ಲಿ ಕೆಲಸ ಮಾಡುವ ನೌಕರರಿಗೂ ಅನ್ವಯಿಸಿ ಹೇಳಬಹುದು. ಆದರೆ ಬಣ್ಣದ ಲೋಕದ ಮಂದಿ ಮಾತ್ರ ವಿನಾಯಿತಿಗಳನ್ನು ಬಯಸುತ್ತಾರೆ. ಅದೂ ಕೂಡ ತಾವು ಬಣ್ಣದ ಲೋಕದವರು ಎಂಬ ಒಂದೇ ಕಾರಣಕ್ಕೆ!

ಡಬ್ಬಿಂಗ್ ಸಂಸ್ಕೃತಿಯನ್ನೇ ಇವರು ಸಾರಾಸಗಟಾಗಿ ವಿರೋಧಿಸುವುದಾದರೆ ಕನ್ನಡ ಸಿನಿಮಾಗಳೆಲ್ಲ ತೆಲುಗಿಗೆ ಡಬ್ ಆಗುವುದು ಯಾವ ಕಾರಣಕ್ಕೆ? ಹೀಗೆ ಡಬ್ ಮಾಡಿ ಆಂಧ್ರಪ್ರದೇಶದಲ್ಲಿ ಸಿನಿಮಾ ಬಿಡುಗಡೆ ಮಾಡುವವರು ಅಥವಾ ಡಬ್ಬಿಂಗ್ ಹಕ್ಕನ್ನು ಮಾರುವವರು ಇದೇ ಇಂಡಸ್ಟ್ರಿಯವರಲ್ಲವೇ? ಹಣ ಬರುವುದಾದರೆ ಡಬ್ಬಿಂಗ್ ಬೇಕು, ಇಲ್ಲವಾದರೆ ಬೇಡ. ಇದು ಯಾವ ನೈತಿಕತೆ?

ಕನ್ನಡ ಚಿತ್ರರಂಗದವರು ಈ ಫ್ಯೂಡಲ್ ಮನೋಭಾವವನ್ನು ಬಿಟ್ಟು, ಆರೋಗ್ಯಕರ ಸ್ಪರ್ಧೆಗೆ ಒಡ್ಡಿಕೊಳ್ಳುವುದಾದರೂ ಯಾವಾಗ?

ಡಬ್ಬಿಂಗ್ ಸಿನಿಮಾ ಮೇಲಿನ ನಿಷೇಧ ಸರಿಯಲ್ಲ ಮತ್ತು ಡಬ್ಬಿಂಗ್ ಸಿನಿಮಾಗಳು ಮತ್ತೆ ಬರುವಂತಾಗಲಿ ಎಂದು ನಮಗಂತೂ ಅನಿಸಿದೆ. ನಿಮಗೆ? ದಯವಿಟ್ಟು ಓಟ್ ಮಾಡಿ.




0 komentar

Blog Archive