ಮತ್ತೊಂದು ಸಂತಸದ ವಿಷಯ. ಜೀ ಟಿವಿಯ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮದಿಂದ ನರೇಂದ್ರ ಶರ್ಮ ಅವರನ್ನು ತೊಲಗಿಸಲಾಗಿದೆ. ಇದು ನಮಗೆ ಗೊತ್ತಾಗಿರುವ ಮಾಹಿತಿ. ಜೀ ಟಿವಿಗೆ ಒಂದು ಥ್ಯಾಂಕ್ಸ್ ಹಾಗು ಜಗನ್ಮಾತೆಗೆ ಕೋಟಿ ವಂದನೆ. ಬಾಯಿಬಡುಕ ನರೇಂದ್ರ ಶರ್ಮನನ್ನು ತೊಲಗಿಸಿ ಎಂದು ನಾವೆಲ್ಲರೂ ಆರಂಭಿಸಿದ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಅಭಿಯಾನ ಕಡೆಗೂ ಯಶಸ್ವಿಯಾಗಿದೆ. ಜೀ ಟಿವಿ ಮುಖ್ಯಸ್ಥರಿಗೆ ಸಾವಿರಾರು ಪತ್ರಗಳನ್ನು ಬರೆದು ಈ ಕೊಳಕು ಕಾರ್ಯಕ್ರಮವನ್ನು ನಿಲ್ಲಿಸುವಂತೆ ಕೋರಿದ ಎಲ್ಲರ ಶ್ರಮವೂ ಸಾರ್ಥಕಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು.

ನರೇಂದ್ರ ಶರ್ಮ ಅನಾಮತ್ತಾಗಿ ಮೂರು ಚಾನಲ್‌ಗಳನ್ನು ಸುತ್ತಾಡಿ ಮುಗಿಸಿಯಾಗಿದೆ. ಕಸ್ತೂರಿ, ಸುವರ್ಣ ಹಾಗು ಜೀ ಟಿವಿಗಳ ಪ್ರಯಾಣ ಮುಗಿದಾಗಿದೆ. ಮುಂದೆ ಆತ ಇನ್ನ್ಯಾವ ಚಾನಲ್ ಹಿಡಿಯುತ್ತಾರೋ ಕಾದು ನೋಡಬೇಕು. ಆದರೆ ಈತನ ವಿರುದ್ಧ ಎದ್ದಿರುವ ಆಕ್ರೋಶವನ್ನು ಗಮನಿಸಿರುವ ಇತರ ಚಾನಲ್‌ಗಳು ಈ ಸೆರಗಿನ ಕೆಂಡವನ್ನು ಕಟ್ಟಿಕೊಂಡರೆ ಎದುರಿಸುವ ಅಪಾಯಗಳನ್ನು ಈಗಾಗಲೇ ಊಹಿಸಿರಬಹುದು. ಇನ್ನುಳಿದದ್ದು ಅವರಿಗೆ ಸೇರಿದ್ದು.

ನರೇಂದ್ರ ಶರ್ಮ ಕಸ್ತೂರಿ ಮತ್ತು ಸುವರ್ಣಗಳಲ್ಲಿ ಕಾರ್ಯಕ್ರಮ ನಡೆಸುವಾಗಲೇ ತಮ್ಮ ಬಾಯಿಬಡುಕತನವನ್ನು ತೋರಿಸಿ ಅಪಹಾಸ್ಯಕ್ಕೆ ಈಡಾಗಿದ್ದರು. ಜನರನ್ನು ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳನ್ನು ಹೆದರಿಸುತ್ತಲೇ ಬಂದ ಶರ್ಮ, ಇಡೀ ಜಗತ್ತೇ ತನ್ನ ಆಣತಿಯ ಮೇರೆಗೆ ನಡೆಯುತ್ತದೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದರು. ನಾನು ಹೇಳುವ ಡೇಟಿಗೆ ಸರಿಯಾಗಿ ಪ್ರಳಯ ಆಗುತ್ತದೆ. ಒಂದೊಮ್ಮೆ ಆಗುವ ಸಂದರ್ಭ ಇಲ್ಲದಿದ್ದರೂ ನಾನು ಹೇಳಿದ್ದೇನೆಂಬ ಕಾರಣಕ್ಕೆ, ನನ್ನ ಮಾತು ಉಳಿಸುವ ಸಲುವಾಗಿ ಜಗನ್ಮಾತೆ ಪ್ರಳಯ ನಡೆಸುತ್ತಾಳೆ ಎಂದು ಶರ್ಮ ಹೇಳಿಕೊಂಡಿದ್ದರು. ಪ್ರಳಯ ಜೀ ಟಿವಿಯ ಕಚೇರಿಯಲ್ಲೇ ಆಗಿದೆ. ನರೇಂದ್ರ ಶರ್ಮ ಕೈಯಲ್ಲಿ ಹಿಡಿದ ತ್ರಿಶೂಲದ ತರಹದ ಐಟಮ್ ಸಮೇತ ಹೊಟ್ಟೆ ನೀವಿಕೊಂಡು ಹೊರಗೆ ಬಿದ್ದಿದ್ದಾರೆ.

ನರೇಂದ್ರ ಶರ್ಮ ಉಪಟಳಗಳು ಹೆಚ್ಚಾಗುತ್ತಿದ್ದಂತೆ ಈತನ ಕುರಿತು ಸಂಪಾದಕೀಯದಲ್ಲಿ ಬರೆದೆವು. ಹಲವಾರು ಬ್ಲಾಗ್, ವೆಬ್‌ಸೈಟ್‌ಗಳಲ್ಲಿ ಈತನ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಚೂಡಿದಾರ್, ಜೀನ್ಸ್ ಪ್ಯಾಂಟು ಹಾಕುವ ಹೆಣ್ಣುಮಕ್ಕಳಿಗೆ ಗರ್ಭಕೋಶದ ಕ್ಯಾನ್ಸರ್ ಬರುತ್ತದೆ ಎಂದು ಹೇಳಿ ನರೇಂದ್ರ ಶರ್ಮ  ತನ್ನ ತಿಕ್ಕಲುತನದ ಪರಮಾವಧಿ ತಲುಪಿದ್ದ. ಜಗನ್ಮಾತೆ ಬರುತ್ತಾಳೆ, ಇಳಿಯುತ್ತಾಳೆ ಎಂದು ನರೇಂದ್ರ ಶರ್ಮ ಕೊಟ್ಟ ಡೇಟುಗಳೆಲ್ಲ ಪೂರೈಸಿದವು. ಕಡೆಗೆ ಪ್ರಳಯ ಶುರುವಾಗುತ್ತ ನೋಡಿ ಎಂದು ಹೇಳಿದ್ದ ಮೇ ೨೧ ಸಹ ಕಳೆದುಹೋಯಿತು. ಅಲ್ಲಿಗೆ ನರೇಂದ್ರ ಶರ್ಮ ಅವರ ಆಟಗಳೆಲ್ಲವೂ ಮುಗಿದಿದ್ದವು.

ಈತನನ್ನು ಇನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ ಎಂದನಿಸಿದ ನಂತರ ಒಂದು ಅಭಿಯಾನವನ್ನೇ ನಾವೆಲ್ಲರೂ ಆರಂಭಿಸಬೇಕಾಯಿತು. ಇದಕ್ಕಾಗಿ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಎಂಬ ಗುಂಪನ್ನು ಫೇಸ್‌ಬುಕ್‌ನಲ್ಲಿ ಸೃಷ್ಟಿಸಿದೆವು. ನರೇಂದ್ರ ಶರ್ಮ ಅವರ ಪ್ರವಚನಗಳ ವಿಕೃತಿಗಳ ಕುರಿತು ಜೀ ಟಿವಿ ಮುಖ್ಯಸ್ಥರಿಗೊಂದು ಬಹಿರಂಗ ಪತ್ರವನ್ನೂ ಬರೆದೆವು. ಈ ಪತ್ರವನ್ನು ಕನ್ನಡದ ಹಲವು ಬ್ಲಾಗರ್‌ಗಳು ತಮ್ಮ ಬ್ಲಾಗ್‌ಗಳಲ್ಲಿ ಮರು ಪ್ರಕಟಿಸಿದರು. ಈ ಪತ್ರವನ್ನು ಜೀ ಟಿವಿಯ ಇಮೇಲ್ ವಿಳಾಸಕ್ಕೆ ಕಳುಹಿಸಲು ವಿನಂತಿಸಿದ್ದೆವು. ನಮ್ಮ ವಿನಂತಿಯನ್ನು ಪುರಸ್ಕರಿಸಿ ಸಾವಿರಾರು ಮಂದಿ ಜೀ ಟಿವಿಗೆ ಪತ್ರ ಬರೆದರು.

ಜೀ ಟಿವಿಯವರು ಸಕಾರಾತ್ಮಕವಾಗಿ ಸ್ಪಂದಿಸಲೇಬೇಕಿತ್ತು. ಹೀಗಾಗಿ ಅವರು ಸಂಪಾದಕೀಯ ಎತ್ತಿದ ಪ್ರಶ್ನೆಗಳನ್ನಿಟ್ಟುಕೊಂಡು ಬದುಕು ಜಟಕಾ ಬಂಡಿಯ ಕಾರ್ಯಕ್ರಮದಲ್ಲಿ ನರೇಂದ್ರ ಶರ್ಮ ಅವರನ್ನು ಮಾಳವಿಕಾ ಮೂಲಕ ನಿಕಷಕ್ಕೆ ಒಡ್ಡಿತು. ನರೇಂದ್ರ ಶರ್ಮ ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುವುದಿರಲಿ, ಹೊಸ ಹೊಸ ಭೀಕರ ಡೈಲಾಗುಗಳನ್ನು ಹೊಡೆದು ಇನ್ನಷ್ಟು ಸಮಸ್ಯೆಗೆ ಸಿಕ್ಕಿಬಿದ್ದರು. ತನ್ನನ್ನು ಧರ್ಮದರ್ಶಿ ಎಂದು ಕರೆದುಕೊಂಡ ನರೇಂದ್ರ ಶರ್ಮ ತನ್ನನ್ನು ತಾನು ಬದಲಾಯಿಸಿಕೊಳ್ಳುವುದಿಲ್ಲ, ಹೆಣ್ಣು ಮಕ್ಕಳನ್ನು ಮುಂಡೇವಾ ಎನ್ನುವುದರಲ್ಲಿ ತಪ್ಪಿಲ್ಲ, ಜೀನ್ಸು, ಚೂಡಿ ಧರಿಸುವವರಿಗೆ ಕ್ಯಾನ್ಸರ್ ಬರುವುದು ಖಡಾಖಂಡಿತ ಇತ್ಯಾದಿಯಾಗಿ ಹೇಳಿಕೊಂಡುಬಿಟ್ಟರು.

ಕಾರ್ಯಕ್ರಮ ಮುಂದುವರೆದರೆ ಇನ್ನೊಂದು ಹಂತದ ಹೋರಾಟ ನಡೆಸಲು ತಯಾರಿಗಳು ನಡೆದಿದ್ದವು. ಈ ಕುರಿತು ನಾವು ಹಲವು ಜನಪರ ಸಂಘಟನೆಗಳನ್ನೂ ಸಂಪರ್ಕಿಸಿದ್ದೆವು. ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದು, ಧರಣಿ ನಡೆಸುವುದು ಇತ್ಯಾದಿ ಹೋರಾಟಗಳ ಯೋಜನೆ ಸಿದ್ಧವಾಗಿತ್ತು. ಆದರೆ ಯಕಶ್ಚಿತ್ ಇಂಥ ಕೆಟ್ಟ ಕಾರ್ಯಕ್ರಮ ನಿಲ್ಲಿಸಲು ಇಷ್ಟೆಲ್ಲ ನಡೆಸಬೇಕಾ? ಸೆನ್ಸಿಬಲಿಟಿ ಇರುವ ಜೀ ಟಿವಿಯ ಬಳಗದವರು ಇದನ್ನು ಅರ್ಥ ಮಾಡಿಕೊಂಡು ಕಾರ್ಯಕ್ರಮ ನಿಲ್ಲಿಸಲಾರರೆ ಎಂಬ ನಂಬಿಕೆಯೂ ಇತ್ತು. ಬಹುಶಃ ಆ ನಂಬಿಕೆಯೇ ಫಲ ಕೊಟ್ಟಿದೆ.

ನರೇಂದ್ರ ಶರ್ಮ ಅವರನ್ನು ಬೃಹತ್ ಬ್ರಹ್ಮಾಂಡದ ಕುರ್ಚಿಯಿಂದ ಎದ್ದು ಹೋಗಲು ಸೂಚಿಸಲಾಗಿದೆ. ಆ ಜಾಗಕ್ಕೆ ಆನಂದ್ ಗುರೂಜಿ ಎಂಬುವವರು ಬಂದಿದ್ದಾರಂತೆ.

ಎಲ್ಲರಿಗೂ ಅಭಿನಂದನೆಗಳು.

ಹಾಗಂತ ನಮ್ಮ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಅಭಿಯಾನ ಇಲ್ಲಿಗೆ ಮುಗಿಯುವುದಿಲ್ಲ. ನರೇಂದ್ರ ಶರ್ಮ ಅಂಥವರ ವಿರುದ್ಧ ನಮ್ಮ ಹೋರಾಟ ಮುಂದುವರೆಸೋಣ.
0 komentar

Blog Archive