ಕನ್ನಡ ಬ್ಲಾಗುಗಳ ಪೈಕಿ ಅತ್ಯಂತ ಜನಪ್ರಿಯವಾಗಿರುವುದು ಅವಧಿ. ಮೇ ಫ್ಲವರ್ ಮೀಡಿಯಾ ಹೌಸ್‌ನಿಂದ ನಡೆಸಲ್ಪಡುವ ಅವಧಿ ಜಿ.ಎನ್.ಮೋಹನ್ ಅವರ ಕನಸಿನ ಕೂಸು. ಒಂದು ಪ್ರಶ್ನಾರ್ಥಕ ಚಿಹ್ನೆ ಇಟ್ಟು, ಇದೇನಿದು ಅಂತ ಪ್ರಶ್ನೆ ಕೇಳಿದ್ದಾರೆ ಜಿ.ಎನ್.ಮೋಹನ್. ಅವಧಿ ೧೦ ಲಕ್ಷ ಹಿಟ್ಸ್ ತಲುಪುತ್ತಾ ಇದೆ ಎಂಬುದು ಓದುಗರ ಕಮೆಂಟು. ಅದೂ ಸರಿನೇ, ವಿಷ್ಯ ಇನ್ನೂ ಇದೆ ಎಂಬುದು ಮೋಹನ್ ಅವರ ಕೊಸರು.


ವಿಷಯ ಇಷ್ಟೇನೆ. ಅವಧಿ ವೆಬ್‌ಸೈಟಾಗಿ ಪರಿವರ್ತನೆಗೊಳ್ಳುತ್ತಿದೆ. ಹೊಸ ವೆಬ್ ಮಾಗಜೀನ್ http://avadhimag.com/ ಎಂಬ ವಿಳಾಸದಲ್ಲಿ ಲಭ್ಯವಾಗಲಿದೆ. ಕನ್ನಡ ಅಂತರ್ಜಾಲಿಗರಿಗೆ ಇದು ಒಳ್ಳೆಯ ಸುದ್ದಿ. ಬ್ಲಾಗರ್‌ಗಳು ಅತ್ಯುತ್ಸಾಹದಿಂದ ಶುರುಮಾಡಿದರೂ ಕೆಲ ದಿನಗಳ ನಂತರ ಆಸಕ್ತಿ ಕಳೆದುಕೊಳ್ಳುವುದು ಮಾಮೂಲು. ಆದರೆ ಅವಧಿ ಹಾಗಲ್ಲ. ಆರಂಭವಾದ ದಿನದಿಂದಲೂ ಪ್ರತಿನಿತ್ಯ ಚಟುವಟಿಕೆಯಿಂದಿರುವುದರಿಂದಲೇ ಅದು ಪಾಪ್ಯುಲರ್ ಆಗಿದೆ. ಕನ್ನಡ ಬ್ಲಾಗ್ ಒಂದು ಹತ್ತು ಲಕ್ಷ ಹಿಟ್ಸ್ ಪಡೆಯುವುದೆಂದರೆ ಸಣ್ಣ ಸಾಧನೆಯೇನಲ್ಲ. ಕನ್ನಡ ಅಂತರ್ಜಾಲ ಇನ್ನೂ ಬೆಳೆಯಬೇಕಿರುವ ಕ್ಷೇತ್ರ. ಕನ್ನಡದ ಅತ್ಯಂತ ಪ್ರಮುಖರ ಲೇಖಕರ ಪೈಕಿ ಬಹುತೇಕರು ಇನ್ನೂ ಅಂತರ್ಜಾಲವನ್ನೇ ಬಳಸುತ್ತಿಲ್ಲ ಎಂಬುದು ಗಾಬರಿ ಹುಟ್ಟಿಸುವ ವಿದ್ಯಮಾನ. ಹೀಗಿರುವಾಗ ಅವಧಿಯ ಸಾಧನೆಯನ್ನು ಮೆಚ್ಚಲೇಬೇಕು.

ದಟ್ಸ್ ಕನ್ನಡ, ಸಂಪದ, ಬರಹ, ಕೆಂಡಸಂಪಿಗೆಯಂಥ (ಈ ಪಟ್ಟಿಯಲ್ಲಿ ಇನ್ನೂ ಸಾಕಷ್ಟಿವೆ.) ವೆಬ್‌ಸೈಟುಗಳು ಕನ್ನಡ ಅಂತರ್ಜಾಲವನ್ನೂ ಹಟಕ್ಕೆ ಬಿದ್ದು ಬೆಳೆಸಿದವು. ಇಲ್ಲಿ ಫಾಯಿದೆಯ ಮಾತು ಕೇಳಲೇಬೇಡಿ. ಕನ್ನಡ ಅಂತರ್ಜಾಲಗಳಿಗೆ ಜಾಹೀರಾತಿನ ಬೆಂಬಲ ಇಲ್ಲವೇ ಇಲ್ಲ ಅನ್ನುವಷ್ಟು ತೀರಾ ಕಡಿಮೆ. ಕನ್ನಡವನ್ನೂ ಜಗತ್ತಿನ ಇತರ ಭಾಷೆಗಳಿಗೆ ಮುಖಾಮುಖಿಯಾಗಿ ಬೆಳೆಸುವ ಛಲವೊಂದೇ ಇವುಗಳದು. ನಿಜ, ಕನ್ನಡ ಅಂತರ್ಜಾಲ ಹೀಗೇ ಇರೋದಿಲ್ಲ. ಬರುವ ವರ್ಷಗಳಲ್ಲಿ ಅದು ಅತ್ಯಂತ ವೇಗವಾಗಿ ಬೆಳೆಯಬಹುದು. ಆದರೆ ಏನೂ ಇಲ್ಲದ ನಿರ್ವಾತದಲ್ಲಿ ಕನ್ನಡಿಗರನ್ನು ಅಂತರ್ಜಾಲಕ್ಕೆ ಸೆಳೆದ ಈ ವೆಬ್‌ಸೈಟುಗಳನ್ನು, ಅದರ ಸೃಷ್ಟಿಕರ್ತರನ್ನು ಯಾವತ್ತಿಗೂ ಸ್ಮರಿಸಲೇಬೇಕು.

ಅವಧಿ ಹೆಸರಿಗೆ ಮಾತ್ರ ಬ್ಲಾಗ್. ಆದರೆ ಅದು ಕನ್ನಡ ವೆಬ್‌ಸೈಟುಗಳ ಹಾಗೇ ಇತ್ತು, ಇದೆ. ದಿನಕ್ಕೊಮ್ಮೆಯಾದರೂ ಅವಧಿಗೆ ಹೋಗಿ ಬರುವ ಮನಸ್ಸು ಬ್ಲಾಗಿಗರದು. ಎಲ್ಲಿಲ್ಲೆ ಏನೇನು ಕಾರ್ಯಕ್ರಮ ಅನ್ನುವುದರಿಂದ ಹಿಡಿದು, ಯಾರ ಪುಸ್ತಕ ಬಿಡುಗಡೆಯಾಗಿದೆ, ಹೊಸದಾಗಿ ಯಾವ ಪುಸ್ತಕ ಬರ‍್ತಿದೆ, ಎಲ್ಲೆಲ್ಲಿ ಯಾವ ನಾಟಕ ಪ್ರದರ್ಶನವಿದೆ ಎಂಬ ಮಾಹಿತಿಗಳು. ಜತೆಗೆ ಜನಪ್ರಿಯ ಲೇಖಕರ ಲೇಖನಗಳು, ಹೊಸ ಬರಹಗಾರರ ಬ್ಲಾಗ್‌ಕೊಂಡಿಗಳು ಎಲ್ಲವೂ ಅವಧಿಯಲ್ಲಿ ಲಭ್ಯ. ಯಾರನ್ನೂ ಕೆಣಕದೆ, ಯಾರನ್ನೂ ಎದುರು ಹಾಕಿಕೊಳ್ಳದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಆಗಾಗ ವಿವಾದಾತ್ಮಕ ವಿಷಯಗಳ ಕುರಿತ ಚರ್ಚೆಯನ್ನು ನಡೆಸುವ ಕಲೆಯೂ ಮೋಹನ್‌ರಿಗೆ ಸಿದ್ಧಿಸಿದೆ. ಹೀಗಾಗಿ ಕ್ಲಾಸ್ ಸಿನೆಮಾದ ಹಾಗಿರುವ ಅವಧಿ ಇದಕ್ಕಿದ್ದಂತೆ ಮಾಸ್ ಕೂಡ ಆಗಿಬಿಡುತ್ತದೆ. ಇದೇ ಕಾರಣದಿಂದ ಅವಧಿ ಎಡ, ಬಲ ಹಾಗೂ ನಡುವಿನ ಎಲ್ಲರಿಗೂ ಅಚ್ಚುಮೆಚ್ಚು. ಇತರ ವೆಬ್ ಮಾಗಜೀನ್‌ಗಳ ಜೊತೆಗೆ ಸೇರಿ ಕನ್ನಡದ ಲೇಖಕರನ್ನು ಅಂತರ್ಜಾಲಕ್ಕೆ ಸೆಳೆದ ಕೀರ್ತಿ ಅವಧಿಗೆ ಸಲ್ಲುತ್ತದೆ.

ಈಗ ಅವಧಿ ವೆಬ್‌ಸೈಟಾಗ್ತಾ ಇದೆ. ಬ್ಲಾಗ್‌ಗಳಲ್ಲಿ ವಿನ್ಯಾಸದ ಮಟ್ಟಿಗೆ ಸೀಮಿತ ಅವಕಾಶಗಳಿರುತ್ತವೆ. ವೆಬ್‌ಸೈಟಿನಲ್ಲಿ ಹಾಗಲ್ಲ, ಬೇಕಾದ ವಿನ್ಯಾಸ ಮಾಡಿಕೊಳ್ಳಬಹುದು. ಇಷ್ಟ ಬಂದ ಹಾಗೆ ಅದನ್ನು ರೂಪಿಸಬಹುದು.

ಹೊಸರೂಪದ ಅವಧಿ ಇನ್ನಷ್ಟು ಜನಪ್ರಿಯವಾಗಲಿ ಎಂದು ಹಾರೈಸುತ್ತ ಹೊಸ ವೆಬ್ ಮಾಗಜೀನ್‌ನ ಪ್ರಧಾನ ಸಂಪಾದಕ ಜಿ.ಎನ್.ಮೋಹನ್ ಮತ್ತು ಅವರ ಇಡೀ ತಂಡಕ್ಕೆ ಸಂಪಾದಕೀಯ ಶುಭಾಶಯ ಕೋರುತ್ತದೆ. ಹಾಗೆಯೇ ಇದನ್ನು ಅವಧಿಯಲ್ಲಿ ಘೋಷಿಸುವುದಕ್ಕೂ ಮುನ್ನವೇ ಇಲ್ಲಿ ಪ್ರಕಟಿಸಿದ ತುಂಟತನಕ್ಕೆ ಒಂದು ಕ್ಷಮೆಯನ್ನೂ ಅವರು ಸ್ವೀಕರಿಸಲಿ.
0 komentar

Blog Archive