“I think a qualified journalist with a Dalit background should be made editor of a major newspaper in Karnataka. We may get new perspectives and the issues addressed may be different too. The time is ripe.”
ಹೀಗೆ ಜನಪ್ರಿಯವಲ್ಲದ ಅಭಿಪ್ರಾಯವನ್ನು ನಿರ್ಭಿಡೆಯಿಂದ ಹೇಳಿದವರು ಉದಯ ಟಿವಿಯ ದೀಪಕ್ ತಿಮ್ಮಯ. ತಮ್ಮ ಫೇಸ್‌ಬುಕ್‌ನಲ್ಲಿ ಅವರು ಹೀಗೆ ಬರೆದಿದ್ದನ್ನು ಚುರುಮುರಿ ಪ್ರಕಟಿಸಿ, ಚರ್ಚೆಗೆ ಅವಕಾಶ ಕಲ್ಪಿಸಿತ್ತು. ಪತ್ರಿಕಾರಂಗದಲ್ಲೂ ಮೀಸಲಾತಿನಾ ಎಂದು ಹಲವರು ಬಾಯಿಬಡಿದುಕೊಂಡಿದ್ದರು. ಇನ್ನೂ ಕೆಲವರು ಜಿಗುಪ್ಸೆ ಹುಟ್ಟಿಸುವ ಶೈಲಿಯಲ್ಲಿ ತಮ್ಮ ವಿಕಾರ ಜಾತೀಯತೆಯನ್ನು ಪ್ರದರ್ಶಿಸಿದ್ದರು.
ಆ ವಿಷಯ ಹಾಗಿರಲಿ, ಕನ್ನಡ ಮಾಧ್ಯಮಗಳ ಉನ್ನತ ಹುದ್ದೆಗಳಲ್ಲಿ ಆಗುತ್ತಿರುವ ಮ್ಯೂಸಿಕಲ್ ಚೇರ್ ಸ್ಪರ್ಧೆಯನ್ನು ಗಮನಿಸಿ. ಬ್ರಾಹ್ಮಣ ಸಮುದಾಯದವರೇ ಸ್ಪರ್ಧಾಳುಗಳು, ಎದುರಾಳಿಗಳು. ಇಲ್ಲಿ ಬೇರೆ ಸಮುದಾಯದವರಿಗೆ ಜಾಗವೇ ಇಲ್ಲವೇ? ಬೇರೆ ಸಮುದಾಯಗಳ ಪತ್ರಕರ್ತರಿಗೆ ಮಾಧ್ಯಮ ಸಂಸ್ಥೆಗಳನ್ನು ಮುನ್ನಡೆಸಿಕೊಂಡು ಹೋಗುವ ಅರ್ಹತೆಯೇ ಇಲ್ಲವೇ? ಈಗ ಸಂಪಾದಕ ಸ್ಥಾನಗಳಲ್ಲಿ ಇರುವ ಬ್ರಾಹ್ಮಣ ಸಮುದಾಯದ ಪತ್ರಕರ್ತರು ಅನರ್ಹರು ಎಂದು ಯಾರೂ ತಪ್ಪಾಗಿ ಭಾವಿಸಬೇಕಿಲ್ಲ. ಆದರೆ ಉಳಿದ ಸಮುದಾಯದವರ ಪಾರ್ಟಿಸಿಪೇಷನ್ ಯಾಕೆ ಇಲ್ಲ? ಎಲ್ಲೋ ದೀಪಕ್ ತಿಮ್ಮಯ ಅಂಥವರು ಇಂಥ ಪ್ರಶ್ನೆಗಳನ್ನು ಅಪರೂಪಕ್ಕೆ ಎತ್ತಿದ್ದನ್ನು ಹೊರತುಪಡಿಸಿದರೆ ಬೇರೆ ಯಾರೂ ಈ ಕುರಿತು ಮಾತನಾಡುತ್ತಿಲ್ಲ?
ಎಲ್ಲ ಪತ್ರಿಕೆಗಳಲ್ಲೂ ಬದಲಾವಣೆಗಳು ನಡೆಯುತ್ತಿವೆ. ಸದ್ಯಕ್ಕೆ ಉಳಿದಿರುವುದು ವಿಜಯ ಕರ್ನಾಟಕ ಮಾತ್ರ. ವಿಶ್ವೇಶ್ವರ ಭಟ್ಟರ ನಿರ್ಗಮನದ ನಂತರ ವಿಜಯ ನೆಕ್ಸ್ಟ್‌ನ ಸಂಪಾದಕರಾಗಿರುವ ಇ.ರಾಘವನ್ ಅವರಿಗೆ ವಿಜಯ ಕರ್ನಾಟಕದ ಹೆಚ್ಚುವರಿ ಹೊಣೆಯನ್ನು ಕನ್ಸಲ್ಟಿಂಗ್ ಎಡಿಟರ್ ಆಗಿ ನೀಡಲಾಗಿತ್ತು. ಈ ತಾತ್ಕಾಲಿಕ ವ್ಯವಸ್ಥೆ ಹೆಚ್ಚು ದಿನಗಳ ಕಾಲ ನಡೆಯುವ ಸಾಧ್ಯತೆ ಕಡಿಮೆ. ಹೀಗಾಗಿ ವಿಜಯ ಕರ್ನಾಟಕದ ಪೂರ್ಣಾವಧಿಯ ಸಂಪಾದಕ ಯಾರಾಗುತ್ತಾರೆ ಎಂಬ ಪ್ರಶ್ನೆ ಇನ್ನೂ ಜೀವಂತವಾಗಿಯೇ ಇದೆ.
ಈಗ ದೀಪಕ್ ತಿಮ್ಮಯ ಕೇಳಿದ್ದನ್ನೇ ನಾವೂ ಮತ್ತೆ ಕೇಳುತ್ತಿದ್ದೇವೆ. ಯಾಕೆ ದಲಿತ ಸಮುದಾಯದ ಸಮರ್ಥ ಪತ್ರಕರ್ತರೋರ್ವರನ್ನು ಈ ಸ್ಥಾನಕ್ಕೆ ತರಬಾರದು? ವಿಜಯ ಕರ್ನಾಟಕ ಈ ಕಾರ್ಯಕ್ಕೆ ತಯಾರಾಗಿದೆಯೇ?
ನೀವು ಕೇಳಬಹುದು: ಸದ್ಯಕ್ಕೆ ಆ ಸ್ಥಾನಕ್ಕೆ ಅರ್ಹರಾಗಿರುವ ದಲಿತ ಸಮುದಾಯದ ಹಿನ್ನೆಲೆಯ ಪತ್ರಕರ್ತರು ಇದ್ದಾರೆಯೇ? ನಮ್ಮ ಉತ್ತರ: ಹೌದು, ಇದ್ದಾರೆ. ಅರ್ಹತೆ, ಬದ್ಧತೆ, ಪ್ರಾಮಾಣಿಕತೆ, ಹಿರಿತನ, ತಂಡವನ್ನು ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯವಿರುವ ದಲಿತ ಸಮುದಾಯಕ್ಕೆ ಸೇರಿದ ಪತ್ರಕರ್ತರು ಇದ್ದಾರೆ. ಗುರುತಿಸುವ ಕೆಲಸ ಆಗಿಲ್ಲ ಅಷ್ಟೆ.
ದಲಿತರೊಬ್ಬರು ಸಂಪಾದಕರಾದರೆ ಮಹಾ, ಏನಾಗಿಬಿಡುತ್ತೆ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳಬಹುದು. ನಿಜ, ಸಮುದಾಯ ಯಾವುದೇ ಇರಲಿ, ಸಂಪಾದಕನಿಗೆ ನಿಜವಾದ ಸಾಮಾಜಿಕ ಬದ್ಧತೆ, ಕಾಳಜಿಗಳಿದ್ದರೆ ಆತ ಪತ್ರಿಕೆಯನ್ನು ಜನಪರವಾಗಿ, ಮಾನವೀಯವಾಗಿ ರೂಪಿಸಬಲ್ಲ. ಅದನ್ನು ಬಹಳಷ್ಟು ಮಂದಿ ಈ ಹಿಂದೆಯೇ ನಿರೂಪಿಸಿದ್ದಾರೆ.
ಆದರೆ, ದಲಿತ ಸಮುದಾಯದ ಹಿನ್ನೆಲೆಯಿಂದ ಬಂದವರು ತಮ್ಮ ಜೀವನದೃಷ್ಟಿಯೊಂದಿಗೆ ಹೊಸತನವನ್ನು ಕೊಡಬಲ್ಲರು. ಸಮಕಾಲೀನ ಜಗತ್ತಿಗೆ ಬೇರೆಯದೇ ಆದ ರೀತಿಯಲ್ಲಿ ಸ್ಪಂದಿಸಬಲ್ಲರು. ಹೊಸ ಸಂವೇದನೆಗಳು, ಹೊಸ ಕಾಣ್ಕೆಗಳು, ಹೊಸ ನಿಲುವುಗಳು ಹುಟ್ಟಿಕೊಳ್ಳಬಹುದು. ಹಿಂದುಳಿದ ಸಮುದಾಯಗಳ ಇನ್ನಷ್ಟು ಮಂದಿ ಪ್ರತಿಭಾವಂತರು ಇದೇ ಸ್ಫೂರ್ತಿಯಲ್ಲಿ ಮಾಧ್ಯಮರಂಗ ಪ್ರವೇಶಿಸಬಹುದು. ಬೇರೆ ಬೇರೆ ಹಿನ್ನೆಲೆಯ ಈ ಸಮೂಹ ತಮ್ಮದೇ ಆದ ವಿಶೇಷ ಜ್ಞಾನ, ಪರಿಣತಿಯನ್ನು ಇಲ್ಲಿ ತೋರಬಹುದು. (ಅಸಲಿಗೆ ಜ್ಞಾನದ ವ್ಯಾಖ್ಯೆಯೇ ಬದಲಾಗಬೇಕಾದ ಸಂದರ್ಭ ಇದು.) ದೇವನೂರು, ಸಿದ್ಧಲಿಂಗಯ್ಯ ಅವರುಗಳು ಬರೆದ ಸಾಹಿತ್ಯವನ್ನು, ಕಟ್ಟಿಕೊಟ್ಟ ಸಂವೇದನೆಗಳನ್ನು ಬೇರೆ ಸಮುದಾಯದವರು ಕೊಡಲು ಸಾಧ್ಯವಿತ್ತೆ?
ಬೇರೆ ಸಮುದಾಯದವರು ಸಂಪಾದಕ ಸ್ಥಾನಕ್ಕೆ ಹೋಗಬಾರದು ಎಂದು ಯಾರಾದರೂ ಕಟ್ಟಿಹಾಕಿಕೊಂಡಿದ್ದಾರಾ? ಅರ್ಹತೆ ಇದ್ದರೆ ದಕ್ಕಿಸಿಕೊಳ್ಳುತ್ತಾರೆ ಬಿಡಿ ಎಂದು ಕೆಲವರು ಗೊಣಗಬಹುದು. ಆದರೆ ಇದು ಅಷ್ಟು ಸರಳವಾದ ವಿಷಯವಲ್ಲ. ಮ್ಯಾನೇಜ್‌ಮೆಂಟುಗಳು ತಮ್ಮ ಭ್ರಮೆಗಳಿಂದ ಕಳಚಿಕೊಳ್ಳದ ಹೊರತು ಈ ಪ್ರಶ್ನೆಗೆ ಉತ್ತರ ಸಿಗದು. ಇವತ್ತಿಗೂ ಪ್ರತಿಷ್ಠಿತ ಪತ್ರಿಕೆಯೊಂದರಲ್ಲಿ ಜಾತಕವನ್ನು ನೋಡಿಯೇ ಪತ್ರಕರ್ತರಿಗೆ ಕೆಲಸ ಕೊಡಲಾಗುವುದು ಎಂದರೆ ನೀವು ನಂಬಲೇಬೇಕು. ದಲಿತರೆಂಬ ಕಾರಣಕ್ಕೆ ಮಾಧ್ಯಮಸಂಸ್ಥೆಗಳಲ್ಲಿ ಕೆಲಸ ಸಿಕ್ಕದೆ ಒದ್ದಾಡಿದವರೂ ಇಲ್ಲಿದ್ದಾರೆ. ಅಲ್ಲೊಬ್ಬ ಇಲ್ಲೊಬ್ಬರು ಹಿಂದುಳಿದ ಸಮುದಾಯದ ಪತ್ರಕರ್ತರು ಕಾಣಿಸಿಕೊಂಡರೂ ಅವರು ತಮ್ಮ ಪರವಾಗಿ ಲಾಬಿ ನಡೆಸಲಾರರು, ಗುಂಪು ಕಟ್ಟಿಕೊಳ್ಳಲಾರರು, ಒಟ್ಟಾರೆಯಾಗಿ ತಾನು ಸಮರ್ಥ ಆಯ್ಕೆ ಎಂದು ಮ್ಯಾನೇಜ್‌ಮೆಂಟ್‌ಗಳನ್ನು ಒಪ್ಪಿಸಲಾರರು.
ಹಿಂದೆ ದಿನಪತ್ರಿಕೆಯೊಂದನ್ನು ಬ್ರಾಹ್ಮಣೇತರರ ಸಂಪಾದಕತ್ವದಲ್ಲಿ ಮಾಡಿದ್ದ ಉದ್ಯಮಿಯೊಬ್ಬರು ಅದೇ, ಕಣ್ರೀ ನಾನು ಮಾಡಿದ ತಪ್ಪು ಎಂದು ತಮ್ಮ ವೈಫಲ್ಯವನ್ನು ಸಮರ್ಥಿಸಿಕೊಂಡಿದ್ದರು. ಇಂಥ ಭ್ರಮೆ, ಮೌಢ್ಯವನ್ನು ಇಟ್ಟುಕೊಂಡಿರುವ ಮಾಧ್ಯಮ ಸಂಸ್ಥೆಗಳ ಒಡೆಯರಿಂದ ಏನನ್ನು ನಿರೀಕ್ಚಿಸುತ್ತೀರಿ? ಇಂಥ ಮಿಥ್‌ಗಳನ್ನು ಒಡೆದು, ಈ ಮಹತ್ವದ ಪ್ರಶ್ನೆಗಳಿಗೆ ಐತಿಹಾಸಿಕ ಉತ್ತರ ಕಂಡುಕೊಳ್ಳಬಹುದಾಗಿದ್ದ ಜನರು ಮಡೆಸ್ನಾನ ಮಾಡಿಕೊಂಡು, ಕಾಲ-ದೇಶದ ಭ್ರಮೆಯಲ್ಲಿ ಸಿಲುಕಿ ನರಳುತ್ತಿದ್ದಾರೆ.
ಕಾಲ ಬದಲಾಗಿದೆ. ಈಗಲಾದರೂ ನಮ್ಮ ಮಾಧ್ಯಮ ಕ್ಷೇತ್ರ ಇಂಥ ಭ್ರಮೆಗಳಿಂದ ಹೊರಗೆ ಬರುವುದೇ? ಕನ್ನಡದ ನಂ.೧ ಪತ್ರಿಕೆ ವಿಜಯ ಕರ್ನಾಟಕಕ್ಕೆ ಒಬ್ಬ ದಲಿತ ಸಮುದಾಯದ ಸಂಪಾದಕರು ನೇಮಕವಾಗಬಹುದೇ?
ಅಷ್ಟಕ್ಕೂ ನಾವು ಈ ವಿಷಯವನ್ನು ಯಾಕೆ ಚರ್ಚಿಸುತ್ತಿದ್ದೇವೆಂದರೆ ನಮ್ಮ ಆರನೇ ಇಂದ್ರಿಯ ಏನನ್ನೋ ಹೇಳುತ್ತಿದೆ. ಅದು ನಿಜಕ್ಕೂ ನಿಜವಾಗುತ್ತಾ? ಕನ್ನಡ ಮಾಧ್ಯಮ ರಂಗದಲ್ಲೊಂದು ಪವಾಡ ನಡೆದು ಹೋಗುತ್ತಾ? ಕಾದು ನೋಡೋಣ,
***
ಸಂಪಾದಕೀಯಕ್ಕೆ ಬಂದ ಒಂದು ಕಮೆಂಟು ಹೀಗಿತ್ತು: Imagine, 18 years old boy started reading Vijaya Karnataka 12 years back. Now he is totally communal. More over his views on literature, movie, books, everything moulded according to Vijaya Karnataka.
ನಿಜ ಅನ್ನಿಸಲ್ವಾ ನಿಮಗೆ? ವಿಜಯ ಕರ್ನಾಟಕ ನಂ.೧ ಪತ್ರಿಕೆಯಾಗಿ ಮೆರೆದಿದ್ದು ಎಷ್ಟು ನಿಜವೋ, ಆ ಪತ್ರಿಕೆ ಕನ್ನಡದ ಯುವಮನಸ್ಸುಗಳನ್ನು ಮತಾಂಧಗೊಳಿಸಿದ್ದೂ ಅಷ್ಟೇ ನಿಜ.
ಟೈಮ್ಸ್ ಒಡೆಯರಿಗೆ ಪ್ರಾಯಶ್ವಿತ್ತ ಮಾಡಿಕೊಳ್ಳಲು ಇದು ಸಕಾಲವಲ್ಲವೇ?
发表评论