ಸ್ಟೈಲ್ ಶೀಟ್ ಅಥವಾ ಸ್ಟೈಲ್ ಮ್ಯಾನುಯಲ್ ಅಂದರೆ ಏನು ಅಂತ ಪತ್ರಕರ್ತರಿಗೆ ಗೊತ್ತೇ ಇರುತ್ತೆ. ಪತ್ರಕರ್ತರಲ್ಲದ ಬ್ಲಾಗ್ ಓದುಗರಿಗಾಗಿ ಕೆಲವು ಮಾಹಿತಿ. ಯಾವುದೇ ಪತ್ರಿಕೆಯೂ ತನ್ನದೇ ಆದ ಸ್ಟೈಲ್ ಶೀಟ್ ಹೊಂದಿರುತ್ತದೆ. ಪತ್ರಿಕೆಯ ಸಂಪಾದಕೀಯ ಬಳಗದ ಮುಖ್ಯಸ್ಥರು ತನ್ನ ಸಿಬ್ಬಂದಿಯ ಅನುಸರಣೆಗಾಗಿ ನೀಡುವ ತಾಂತ್ರಿಕ ಮಾರ್ಗದರ್ಶಿಯೇ ಸ್ಟೈಲ್ ಶೀಟ್. ಮನೆಯಲ್ಲಿ ಮಕ್ಕಳು ಯಾವ ಥರದ ಡ್ರೆಸ್ ಹಾಕಬೇಕು ಅಂತ ಹಿರಿಯರು ನಿರ್ಧಾರ ಮಾಡ್ತಾರಲ್ಲ ಹಾಗೆ ಇದು.
ನೀವು ಯಾವುದಾದರೂ ಒಂದು ಪತ್ರಿಕೆಯ ಮಾಸ್ಟ್‌ಹೆಡ್ ನೋಡದೆಯೇ ಆ ಪತ್ರಿಕೆಯ ಒಂದು ಸುದ್ದಿ ಓದಿ, ಪತ್ರಿಕೆ ಯಾವುದು ಎಂದು ಊಹೆ ಮಾಡಿಬಿಡಬಹುದು. ಅದು ಹೇಗೆಂದರೆ ಒಂದು ಪತ್ರಿಕೆ ಒಂದು ಶೈಲಿಯನ್ನು ಹೊಂದಿರುತ್ತದೆ. ಅದನ್ನು ಸಮಸ್ತ ಸಿಬ್ಬಂದಿಯೂ ಅನುಸರಿಸಬೇಕಾಗುತ್ತದೆ. ಪತ್ರಿಕೆಯಲ್ಲಿ ಬೇರೆ ಬೇರೆ ಶೈಲಿಯಲ್ಲಿ ಬರೆಯುವ ಸಿಬ್ಬಂದಿ ಇರಬಹುದು. ಆದರೆ ಏಕರೂಪತೆಯನ್ನು ತರುವುದು ಅನಿವಾರ್ಯ. ಉದಾಹರಣೆಗೆ ಚಳವಳಿ ಮತ್ತು ಚಳುವಳಿ ಎಂಬ ಎರಡು ಪದಗಳು ಬಳಕೆಯಲ್ಲಿವೆ. ಎರಡೂ ಸರಿಯಾದ ಪ್ರಯೋಗ ಎಂದು ಹಲವರು ಹೇಳುತ್ತಾರೆ. ಚಳವಳಿಯೇ ಸರಿ, ಚಳುವಳಿ ಅನ್ನಕೂಡದು ಎನ್ನುತ್ತಾರೆ ಮತ್ತೆ ಕೆಲವರು. ಹೀಗಿರುವಾಗ ಒಂದು ಪತ್ರಿಕೆ ಎರಡರಲ್ಲೊಂದು ಪದವನ್ನು ಬಳಸಬೇಕಾಗುತ್ತದೆ; ಎರಡನ್ನೂ ಅಲ್ಲ. ತತ್ತ್ವ ಅನ್ನೋದು ಸರಿಯಾದ ಪ್ರಯೋಗ. ಆದರೆ ಬಳಕೆಯಲ್ಲಿರುವುದು ತತ್ವ ಎಂಬ ಪ್ರಯೋಗವೇ. ಬದಲಾಯಿಸಿದರೆ ಇಂಥದೇ ಹಲವು ಪದಗಳನ್ನು ಬದಲಾಯಿಸಬೇಕಾಗುತ್ತದೆ. ಹೀಗಾಗಿ ಹಲವು ಸಂಪಾದಕರು ರಿಸ್ಕ್ ತೆಗೆದುಕೊಳ್ಳದೆ ಬಳಕೆಯಲ್ಲಿರೋದೇ ಇರಲಿ ಬಿಡ್ರಿ ಎನ್ನುತ್ತಾರೆ. ಕತೆ ಅನ್ನೋದೋ ಕಥೆ ಅನ್ನೋದೋ? ಎರಡೂ ಸರಿನೇ. ಹಾಗಂತ ಎರಡನ್ನೂ ಬಳಸುವುದು ಸರಿಯಲ್ಲ. ಹೀಗಾಗಿ ಒಂದು ತೀರ್ಮಾನ ತೆಗೆದುಕೊಳ್ಳಲೇಬೇಕಾಗುತ್ತದೆ. ಇದು ಬಹುತೇಕ ಸಂಪಾದಕೀಯ ಬಳಗದ ಮುಖ್ಯಸ್ಥರ ನಿಷ್ಕರ್ಷೆಗೆ ಬಿಟ್ಟ ವಿಚಾರ. ಕೆಲವೊಮ್ಮೆ ಇದು ಪ್ರತಿಷ್ಠೆಯ ಪ್ರಶ್ನೆಯೂ ಆಗಿಬಿಡುತ್ತದೆ. ಒಮ್ಮೆ ಒಂದು ಸ್ಟೈಲ್ ಶೀಟ್ ಬಂತೆಂದರೆ ಅದನ್ನು ಎಲ್ಲರೂ ಅನುಸರಿಸಲೇಬೇಕು.
ಪತ್ರಿಕೆಯಲ್ಲಿ ಬಳಸಲಾಗುವ ಮಾರ್ಜಿನ್ ಎಷ್ಟಿರಬೇಕು, ಫಾಂಟ್ ಯಾವುದನ್ನು ಬಳಸಬೇಕು ಮತ್ತು ಗಾತ್ರ ಎಷ್ಟಿರಬೇಕು, ಇಂಟರ್‌ಲೈನ್ ಸ್ಪೇಸ್ ಎಷ್ಟು ಕೊಡಬೇಕು, ಅಲೈನುಮೆಂಟು ಹೇಗಿರಬೇಕು ಎಲ್ಲವನ್ನು ಈ ಸ್ಟೈಲ್ ಶೀಟು ನಿರ್ಧರಿಸುತ್ತದೆ.
ಸಾಧಾರಣವಾಗಿ ಈ ಸ್ಟೈಲ್ ಶೀಟ್‌ಗಳು ಸಂಪಾದಕರ ಮರ್ಜಿಗೆ ಅನುಸಾರವಾಗಿಯೇ ಇರುತ್ತದೆ.
ಸಂಪಾದಕರು ಬದಲಾದರೆ?
ಈಗ ನೋಡಿ, ನಾವು ಓದುತ್ತಾ ಇರೋದು ವಿಜಯ ಕರ್ನಾಟಕನೋ, ಉದಯವಾಣಿನೋ, ಕನ್ನಡಪ್ರಭನೋ ಎಂಬ ಗೊಂದಲ ಒಮ್ಮೊಮ್ಮೆ ಮೂಡುವುದುಂಟು. ವಿಜಯ ಕರ್ನಾಟಕದಲ್ಲಿ ಹೆಡ್ಡಿಂಗುಗಳ ಜತೆ ಆಟ ಶುರುವಿಟ್ಟವರು ವಿಶ್ವೇಶ್ವರ ಭಟ್ಟರು. ಅದು ಚೆನ್ನಾಗಿ ವರ್ಕ್ ಔಟ್ ಕೂಡ ಆಯಿತು. ಇದೇ ಪ್ರಯೋಗ ಕನ್ನಡಪ್ರಭದಲ್ಲೂ ನಡೆದಿತ್ತು. ಭಟ್ಟರು ವಿಜಯ ಕರ್ನಾಟಕ ಬಿಟ್ಟ ಮೇಲೂ ಅಲ್ಲಿ ಹೆಡ್ಡಿಂಗುಗಳ ವಿಷಯದಲ್ಲಿ ಅಂಥ ಬದಲಾವಣೆಗಳೇನೂ ಆಗಿಲ್ಲ. ಯಾಕೆಂದರೆ ಈ ಪದಗಳ ಆಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ವಸಂತ ನಾಡಿಗೇರ್ ತರಹದವರು ಇನ್ನೂ ವಿಕದಲ್ಲೇ ಇದ್ದಾರೆ. ಇತ್ತ ಉದಯವಾಣಿ ಸೇರಿರುವ ರವಿ ಹೆಗಡೆ ಕೂಡ ಪಂಚಿಂಗ್ ಹೆಡ್ಡಿಂಗ್ ಶುರು ಮಾಡಿದ್ದಾರೆ. ಇವುಗಳನ್ನು ನೋಡಿ ಪ್ರಜಾವಾಣಿಯೂ ತನ್ನ ಸಾಂಪ್ರದಾಯಿಕ ಹೆಡ್ಡಿಂಗುಗಳನ್ನು ಬಿಟ್ಟು ಹೇಮಾಮಾಲಿನಿ ‘ರಾಜ್ಯ ಪ್ರವೇಶ ಎಂಬಂಥ ಹೆಡ್ಡಿಂಗು ಕೊಡುವುದಕ್ಕೆ ಆರಂಭಿಸಿದೆ.
ಈಗ ಪೂರ್ತಿ ಕನ್‌ಫ್ಯೂಸೋ ಕನ್‌ಫ್ಯೂಸು.
ವಿಜಯ ಕರ್ನಾಟಕದಲ್ಲಿ ಭಟ್ಟರು ಇದ್ದಾಗ ವಿಕಲಚೇತನ ಎಂಬ ಶಬ್ದವನ್ನು ಚಲಾವಣೆಗೆ ಬಿಟ್ಟರು. ಅಂಗವಿಕಲ ಎಂಬ ಪದ ನೋವುಂಟು ಮಾಡುವಂಥದ್ದು ಎಂಬುದು ಬದಲಾವಣೆಗೆ ಕಾರಣ. ಅಂಗವಿಕಲ ಎಂಬ ಸಂಯುಕ್ತ ಪದದಲ್ಲಿ ನೋವುಂಟು ಮಾಡುವ ಪದ ವಿಕಲ ಎಂಬುದೇ ಆಗಿತ್ತು. ಹೀಗಿರುವಾಗ ಆ ಪದವನ್ನು ಇಟ್ಟುಕೊಂಡೇ ಇನ್ನೊಂದು ಶಬ್ದವನ್ನು ಹೆಣೆದರೆ ಆಗುವ ಪ್ರಯೋಜನವೇನು ಅನ್ನೋದು ಹಲವರ ಪ್ರಶ್ನೆ. ಅಂಗವಿಕಲ ಅನ್ನೋ ಪದಕ್ಕಿಂತ ವಿಕಲಚೇತನ ಎಂಬ ಶಬ್ದವೇ ಹೆಚ್ಚು ನೋವುಂಟು ಮಾಡುವಂಥದ್ದು; ಯಾಕೆಂದರೆ ಚೇತನ ವಿಕಲಗೊಳ್ಳುವುದು ಸಾಧ್ಯವೇ ಎನ್ನುತ್ತಾರೆ ಅವರು.
ಈ ಗೊಂದಲದ ನಡುವೆಯೇ ಭಟ್ಟರು ಕನ್ನಡಪ್ರಭದಲ್ಲೂ ವಿಕಲ ಚೇತನ ಶಬ್ದವನ್ನು ಸ್ಟೈಲ್ ಶೀಟ್‌ನಲ್ಲಿ ತರುತ್ತಾರಾ? ಅತ್ತ ಈ ಪದ ಬಳಕೆ ಸರಿಯಲ್ಲ ಎಂಬ ಕಾರಣಕ್ಕೆ ವಿಜಯ ಕರ್ನಾಟಕದವರು ಕೈ ಬಿಡುತ್ತಾರಾ?
ಇವರೇನೋ ಶೈಲಿಯನ್ನು ಹೀಗೆ ಬದಲಾಯಿಸುತ್ತಾ ಇರುತ್ತಾರೆ? ಕನಫ್ಯೂಸ್ ಆಗುವ ನಮ್ಮಂಥ ಓದುಗರ ಕತೆ?
发表评论