ರವಿ ಬೆಳಗೆರೆ ಜನಶ್ರೀ ಚಾನಲ್‌ನ ನೇತೃತ್ವ ವಹಿಸಿಕೊಂಡಿದ್ದಾರೆ. ಇಷ್ಟು ದಿನ ಜನಶ್ರೀಯಲ್ಲಿ ಬೆಳಗೆರೆ ಕೇವಲ ಸಲಹೆಗಾರರಾಗಿ ಇರುತ್ತಾರೆ ಎಂಬ ಮಾತಿತ್ತು. ಆದರೀಗ ಅವರೀಗ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ.
I joined JASHREE news channel today and will be hosting a daily show late evening. Need your support and best wishes. I will also host a morning breakfast programme show which will be unique.
ಹೀಗಂತ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ರವಿ ಬೆಳಗೆರೆ ಕನ್ನಡದ ಅತ್ಯಂತ ಪ್ರತಿಭಾವಂತ ಪತ್ರಕರ್ತ. ಮಾಧ್ಯಮದ ಎಲ್ಲ ರೀತಿಯ ಪ್ರಯೋಗಗಳಿಗೂ ಒಡ್ಡಿಕೊಂಡವರು. ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ, ಟ್ಯಾಬ್ಲ್ಯಾಡ್, ಟಿವಿ, ರೇಡಿಯೋ.. ಎಲ್ಲ ಕಡೆ ಕೈಯಾಡಿಸಿದವರು. ಸಿನಿಮಾಗಳಲ್ಲೂ ಲಕ್ಕು ಕುದುರುತ್ತಾ ನೋಡಿ ವಾಪಾಸು ಬಂದವರು. ಇದೀಗ ಅವರು ಜನಶ್ರೀ ಚಾನೆಲ್ ಹೆಡ್ ಆಗಿ ಕುಳಿತುಕೊಳ್ಳುವುದರೊಂದಿಗೆ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ.
ರವಿ ಬೆಳಗೆರೆ ಅತಿ ಹೆಚ್ಚು ವಿವಾದಗಳಿಗೆ ಗುರಿಯಾದವರು. ಅವರ ಇಡೀ ವೃತ್ತಿ ಜೀವನದ ತುಂಬ ವಿವಾದಗಳೇ ತುಂಬಿಕೊಂಡಿವೆ. ಹಾಯ್ ಬೆಂಗಳೂರು ಮೂಲಕ ಸಾಕಷ್ಟು ಜನರನ್ನು ಎದುರು ಹಾಕಿಕೊಂಡು, ಅದನ್ನು ದಕ್ಕಿಸಿಕೊಂಡ ಬೆಳಗೆರೆ ತಮ್ಮದೇ ಕನಸಿನ ಪ್ರಾರ್ಥನಾ ಸ್ಕೂಲು ಕಟ್ಟಿಕೊಂಡರು. ಅದನ್ನು ಬೆಳೆಸಿದರು.
ಬೆಳಗೆರೆಗೆ ಟಿವಿ ಮಾಧ್ಯಮ ಒಗ್ಗಿ ಬರುತ್ತದಾ ಎಂಬುದು ಸದ್ಯದ ಪ್ರಶ್ನೆ. ಈ ಟಿವಿಯಲ್ಲಿ ಅವರು ನಡೆಸುತ್ತಿದ್ದ ಕ್ರೈಂ ಡೈರಿ ಪಾಪ್ಯುಲರ್ ಕಾರ್ಯಕ್ರಮವಾಗಿತ್ತು. ಈ ಟಿವಿಯಲ್ಲೇ ನಡೆಸಿಕೊಡುವ ಎಂದೂ ಮರೆಯದ ಹಾಡು ಕಾರ್ಯಕ್ರಮದಿಂದಲೂ ಅವರು ಹೆಸರು ಗಳಿಸಿದ್ದರು.
ಈಗ ನ್ಯೂಸ್ ಚಾನಲ್‌ನ ನೇತೃತ್ವ ವಹಿಸಿಕೊಂಡಿದ್ದಾರೆ. ಇಲ್ಲಿ ನೂರು ಸವಾಲುಗಳಿವೆ. ಪ್ರತಿ ದಿನ ಸಂಜೆ ಒಂದು ಶೋ ನಡೆಸುತ್ತೇನೆ, ಬೆಳಿಗ್ಗೆಯೂ ಒಂದು ಶೋ ಇರುತ್ತದೆ ಎನ್ನುತ್ತಿದ್ದಾರೆ ಬೆಳಗೆರೆ. ಅದಕ್ಕೆ ಸಮಯ ಎಲ್ಲಿಂದ ತರುತ್ತಾರೆ? ಈ ನಡುವೆ ಹಾಯ್ ಬೆಂಗಳೂರ್ ಕಥೆ ಏನು?
ಈ ನಡುವೆ ಬೆಳಗೆರೆ ಕುರಿತಾಗೇ ಒಂದು ನಾಟಕ ತಯಾರಾಗಿದೆಯಂತೆ, ಒಂದು ಸಿನಿಮಾ ತಯಾರಾಗುತ್ತದಂತೆ, ಒಂದು ಪುಸ್ತಕ ಬರೆಯಲಾಗುತ್ತಿದೆಯಂತೆ.
ಅಂದ್ರ ಒಟ್ಟಾರೆಯಾಗಿ ಈಗ ರವಿ ಬೆಳಗೆರೆ ಕಾಲ.
ಬೆಳಗೆರೆಯವರಿಗೆ, ಅವರು ಮುನ್ನಡೆಸುತ್ತಿರುವ ಜನಶ್ರೀ ಚಾನಲ್‌ಗೆ ಒಳ್ಳೆಯದಾಗಲಿ. ಚಾನಲ್ ನಿಷ್ಪಕ್ಷಪಾತವಾಗಿರಲಿ, ಜನಮುಖಿಯಾಗಿರಲಿ ಎಂದು ಹಾರೈಸೋಣ.
ಆಲ್ ದಿ ಬೆಸ್ಟ್ ಬೆಳಗೆರೆ ಅಂಡ್ ಟೀಮ್.
ಕೊನೆ ಕುಟುಕು: ಈ ವಾರದ ಹಾಯ್ ಬೆಂಗಳೂರಿನ ಮೀಡಿಯಾ ಮಸಾಲಾದಲ್ಲಿ ರವಿ ಹೆಗಡೆ ಉದಯವಾಣಿ ಸೇರಿದ್ದನ್ನು, ವಿಶ್ವೇಶ್ವರ ಭಟ್ಟರು ಕನ್ನಡಪ್ರಭ ಸೇರುತ್ತಿರುವುದನ್ನು ಬೆಳಗೆರೆ ಬರೆದಿದ್ದಾರೆ. ಯಾಕೋ ಏನೋ ಸ್ವತಃ ರವಿ ಬೆಳಗೆರೆ ಜನಶ್ರೀ ಸೇರುತ್ತಿರುವುದನ್ನು ಬರೆಯಲು ಮರೆತುಬಿಟ್ಟಿದ್ದಾರೆ.
发表评论