ಕನ್ನಡಪ್ರಭಕ್ಕೆ ಹೊಸ ಸಂಪಾದಕರು ಬಂದಿದ್ದಾರೆ. ಅವರೊಟ್ಟಿಗೆ ವಿಜಯ ಕರ್ನಾಟಕದಿಂದ ಮತ್ತಷ್ಟು ಮಂದಿ ಬಂದು ಸೇರುವ ಸಾಧ್ಯತೆಗಳಿವೆ. ಇವರಿಗೆಲ್ಲ ಭಾರೀ ಮೊತ್ತದ ಸಂಬಳ ಇದೆ ಎನ್ನುವ ಮಾತೂ ಹರಿದಾಡುತ್ತಿದೆ. ಇದೆಲ್ಲವೂ ಈಗ ಹೊಸದಾಗಿ ಬಂದು ಸೇರುವವರ ಕತೆ. ಆದರೆ ಈಗಾಗಲೇ ಅಲ್ಲಿಯೇ ಇರುವವರ ಪರಿಸ್ಥಿತಿ?
ಸದ್ಯ ರೇಣುಕಾಪ್ರಸಾದ್ ಹಾಡ್ಯ ಮುಖ್ಯ ವರದಿಗಾರ. ಒಂದು ವೇಳೆ ಪಿ.ತ್ಯಾಗರಾಜ್ ಕನ್ನಡ ಪ್ರಭಕ್ಕೆ ಮುಖ್ಯ ವರದಿಗಾರರಾಗಿ ಬಂದರೆ, ಹಾಡ್ಯರ ಕತೆ? ಪತ್ರಿಕೋದ್ಯಮ ವಿದ್ಯಾರ್ಥಿಯಾದಾಗಿನಿಂದಲೂ ಹಾಡ್ಯ ಬರವಣಿಗೆಯ ಹುಚ್ಚು ಹಿಡಿಸಿಕೊಂಡವರು. ಶಿವಮೊಗ್ಗದಲ್ಲಿ ವರದಿಗಾರನಾಗಿದ್ದಾಗ ಸಾಕಷ್ಟು ಹೆಸರು ಮಾಡಿದ್ದ ಹಾಡ್ಯ ಬೆಂಗಳೂರಿಗೆ ಬಂದ ನಂತರ ಸಪ್ಪೆಯಾದರು. ಮುಖ್ಯ ವರದಿಗಾರರಾದ ಮೇಲಂತೂ, ಅವರು ಬರೆದದ್ದು ಕಡಿಮೆ, ಬರೆಸಿದ್ದು ಹೆಚ್ಚು. ಮುಖ್ಯ ವರದಿಗಾರನ ಹುದ್ದೆಯನ್ನು ಅವರು ಎಷ್ಟು ತೀವ್ರವಾಗಿ ಹಚ್ಚಿಕೊಂಡಿದ್ದರು ಎಂಬುದಕ್ಕೆ ಇದು ಸಾಕ್ಷಿ. ಹೊಸ ಸಂಪಾದಕರು ಬಂದರು ಎಂದು ಕೆ.ಶಿವಸುಬ್ರಹ್ಮಣ್ಯ ಏನೋ ರಾಜೀನಾಮೆ ಕೊಟ್ಟರು, ಹಾಡ್ಯ ಹಾಗೆ ಮಾಡಲು ಸಾಧ್ಯವೇ? ಹೀಗೆ ಅಲ್ಲಿ ಹೇಳಿಕೊಳ್ಳಲಾಗದ ಸಂಕಟದಲ್ಲಿರುವವರು ಅನೇಕ ಮಂದಿ.
ಕಾರ್ಟೂನಿಸ್ಟ್ ಎಸ್.ವಿ ಪದ್ಮನಾಭ ಈ ಹಿಂದೆ ಭಟ್ಟರ ಜೊತೆ ವಿಜಯ ಕರ್ನಾಟಕದಲ್ಲಿ ಇದ್ದವರು. ಅಲ್ಲಿಂದ ಹೊರಟು ಕನ್ನಡಪ್ರಭ ಸೇರಿದ್ದರು. ಈಗ ಮತ್ತದೇ ಭಟ್ಟರ ಜೊತೆ ಕೆಲಸ ಮಾಡಬೇಕು! ಡಾ.ವೆಂಕಟೇಶ್ ರಾವ್ ಸದ್ಯ ಕನ್ನಡಪ್ರಭದ ಮ್ಯಾಗಜೀನ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ಗಿಂಡಿಮಾಣಿ ರಾಧಾಕೃಷ್ಣ ಭಡ್ತಿ ಭಟ್ಟರ ಗ್ಯಾಂಗ್ ಸೇರುವುದು ಖಾಯಂ. ಹಾಗಾದರೆ, ಡಾಕ್ಟ್ರು ಅದೇ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವೇ? ಅಥವಾ ಸ್ಟೆತಸ್ಕೋಪ್ ಹೆಗಲಿಗೇರಿಸಿಕೊಂಡು ಹೊರಡಬೇಕೆ?
ಭಟ್ಟರ ತಂಡ ಸೇರಿಕೊಳ್ಳಲು ವಿಜಯ ಕರ್ನಾಟಕದ ಕೆಲ ವರದಿಗಾರರು ಬಂದರೂ ಆಶ್ಚರ್ಯವಿಲ್ಲ. ವಿನಾಯಕ ಭಟ್ ಮೂರೂರು ಈಗಾಗಲೇ ವಿಕ ಬಿಟ್ಟು ಕಪ್ರ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಇಂಥವರ ದೊಡ್ಡ ಪಟ್ಟಿಯೇ ವಿಕದಲ್ಲಿ ತಯಾರಾಗುತ್ತಿದೆ. ಹಾಗಾದಾಗ, ಈಗಾಗಲೇ ಕನ್ನಡಪ್ರಭದಲ್ಲಿರುವವರ ಪರಿಸ್ಥಿತಿ ಏನು? ಗಿರೀಶ್ ಬಾಬು ಪ್ರತಿಭಾವಂತ. ಈ ಹಿಂದೆ ಕೆಲವೇ ದಿನಗಳ ಮಟ್ಟಿಗೆ ವಿಜಯ ಕರ್ನಾಟಕಕ್ಕೆ ಹೋಗಿ ಹಿಂದಿರುಗಿದವರು. ಶಿವಕುಮಾರ್ ಬೆಳ್ಳಿತಟ್ಟೆ ವಿಜಯ ಕರ್ನಾಟಕದಲ್ಲಿ ವೃತ್ತಿ ಜೀವನ ಆರಂಭಿಸಿ ನಂತರ ಬೇರೆಡೆಗಳಲ್ಲಿ ತಿರುಗಾಡಿ ಅನಿವಾರ್ಯ ಕಾರಣಗಳಿಂದ ಮತ್ತೆ ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದವರು. ಕೆಲವೇ ತಿಂಗಳುಗಳ ಹಿಂದೆ ವಿಜಯ ಕರ್ನಾಟಕವನ್ನು ಎರಡನೇ ಬಾರಿಗೆ ತೊರೆದು ಕನ್ನಡಪ್ರಭ ಸೇರಿದ್ದರು. ಅವರ ದುಗುಡವೇನು?
ರಂಗನಾಥ್ ದೊಡ್ಡ ತಂಡವನ್ನು ಎತ್ತಿಕೊಂಡು ಸುವರ್ಣ ನ್ಯೂಸ್ ಸೇರಿದಾಗ ಕನ್ನಡಪ್ರಭವನ್ನು ಜೋಪಾನವಾಗಿ ಕಾಪಾಡಿಕೊಂಡಿದ್ದು ಇದೇ ಬಳಗ. ಕ್ರೆಡಿಟ್ಟು ಶಿವಸುಬ್ರಹ್ಮಣ್ಯರಿಗೆ ಮಾತ್ರವಲ್ಲ, ಈ ಎಲ್ಲರಿಗೂ ಸೇರುತ್ತದೆ. ಯಾವುದೇ ಒಬ್ಬ ಸಂಪಾದಕ, ಅಥವಾ ಮುಖ್ಯ ವರದಿಗಾರರ ಜೊತೆ ಗುರುತಿಸಿಕೊಳ್ಳದೆ ಸ್ವತಂತ್ರವಾಗಿದ್ದುಕೊಂಡು ವೃತ್ತಿ ಜೀವನದಲ್ಲಿ ಸಕ್ರಿಯವಾಗಿದ್ದ ಇಂತಹ ಪತ್ರಕರ್ತರಿಗೆ ಹೀಗೆ ನಾನಾ ಸಂಕಟಗಳು. ಅವರು ಯಾರೊಂದಿಗೂ ಗುರುತಿಸಿಕೊಳ್ಳದೇ ಹೋದದ್ದು ತಪ್ಪೆ? ಇಲ್ಲಿರುವ ಅನೇಕರು ಮನಸ್ಸು ಮಾಡಿದ್ದರೆ ರಂಗನಾಥ್ ಜೊತೆ ಸುವರ್ಣ ನ್ಯೂಸ್ ಸೇರಬಹುದಿತ್ತು. ಆ ಸಂದರ್ಭದಲ್ಲಿ ಹೊಸ ದಿನಪತ್ರಿಕೆಯ ಐಡಿಯಾವೂ ರಂಗ-ರವಿ ಟೀಮಿಗೆ ಇದ್ದಿದ್ದರಿಂದ ಇನ್ನೊಂದಿಷ್ಟು ಜನರು ಅವರೊಂದಿಗೆ ಬಂದಿದ್ದರೂ ಅವರೆಲ್ಲರನ್ನೂ ಕರೆದೊಯ್ಯುತ್ತಿದ್ದರು. ಆದರೆ ಈ ಹುಡುಗರು ಹೋಗಲಿಲ್ಲ. ಸಂಸ್ಥೆಗೆ ನಿಷ್ಠರಾಗಿ ಉಳಿದರು.
ಈಗ ಇವರಿಗೆ ಅಗ್ನಿಪರೀಕ್ಷೆ. ಏನೇನು ಬದಲಾವಣೆಗಳಾಗುತ್ತವೋ? ಯಾರ‍್ಯಾರನ್ನು ಹೊರಗೆ ಕಳಿಸಲಾಗುತ್ತದೋ? ಯಾರ ಕೈಗಳ ಕೆಳಗೆ ಕೆಲಸ ಮಾಡಬೇಕಾಗುತ್ತದೋ? ವಿಶ್ವೇಶ್ವರ ಭಟ್ಟರು ಇವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲ ಆತಂಕ-ದುಗುಡವನ್ನು ದೂರ ಮಾಡುತ್ತಾರಾ? ಅಥವಾ ತಮ್ಮ ಟೀಮಿಗಾಗಿ ಇವರೆಲ್ಲರನ್ನೂ ಮೂಲೆಗೆ ತಳ್ಳುತ್ತಾರಾ? ಕಾದು ನೋಡಬೇಕು.
ಒಟ್ಟಿನಲ್ಲಿ ಏನೇ ಇರಲಿ. ಈ ಎಲ್ಲ ಪತ್ರಕರ್ತರ ವೃತ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗದಿರಲಿ. ಎಲ್ಲಾ ಬದಲಾವಣೆಗಳ ಮಧ್ಯೆ ಅವರು ಉತ್ಸಾಹ ಕಳೆದುಕೊಳ್ಳದಿರಲಿ. ಏಕೆಂದರೆ ಮಾಧ್ಯಮರಂಗ ತನ್ನ ಮೌಲ್ಯಗಳನ್ನು ಉಳಿಸಿಕೊಂಡಿರುವುದು ಇಂತಹ ಕೆಳ ಹಂತದ ನೂರಾರು ಪ್ರಾಮಾಣಿಕ ಪತ್ರಕರ್ತರಿಂದ. ಅವರ ಆತ್ಮಗೌರವ ಉಳಿಯಲಿ.
发表评论