ಹರಕೆ-ಹರಾಜು ಯಾವುದು ಸಹಜ, ಯಾವುದು ಅವಮಾನ? ಎಂಬ ಲೇಖನದ ಮೂಲಕ ಹೊಸ ಸಂಸ್ಕೃತಿ ಚಿಂತನೆಯೊಂದನ್ನು ಮಂಡಿಸಿದ್ದ ಕೆ.ವಿ.ಅಕ್ಷರ, ತನ್ಮೂಲಕ ಹುಟ್ಟಿಕೊಂಡಿದ್ದ ವಾಗ್ವಾದಕ್ಕೆ ಅಂತಿಮ ಉತ್ತರವೊಂದನ್ನು ಕೊಡುವ ಮೂಲಕ ಕೊನೆಯ ಮೊಳೆ ಜಡಿದಿದ್ದಾರೆ. ಕಳೆದ ನಾಲ್ಕು ವಾರಗಳಿಂದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ನಡೆದ ಸಂವಾದವನ್ನು ಅಕ್ಷರ ಅವರ ಸ್ಪಷ್ಟನೆಗಳೊಂದಿಗೆ ಕೊನೆಗೊಳಿಸಲಾಗಿದೆ. ಜೊತೆಗೆ ನಾನೆ ಸ್ವದೇಶಿ, ನೀನೆ ಪರದೇಶಿ ಎಂಬ ಶೀರ್ಷಿಕೆಯಲ್ಲಿ ಅಕ್ಷರ ಅವರ ಚಿಂತನೆಗಳನ್ನು ನಿಕಷಕ್ಕೆ ಒಳಪಡಿಸುವ ಜಿ.ರಾಜಶೇಖರ ಅವರ ಲೇಖನವೂ ಮೊನ್ನೆಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಗೊಂಡಿದೆ.
ಹಾಗೆ ನೋಡುವುದಾದರೆ ಈ ಚರ್ಚೆಯನ್ನು ಪ್ರಜಾವಾಣಿ ಮುಕ್ತಾಯಗೊಳಿಸಿದ್ದರೂ ಅದು ಹೊಸ ಕವಲುಗಳನ್ನು ಪಡೆದು ಮುಂದುವರೆಯುತ್ತಲೇ ಇರುತ್ತದೆ. ಮಾನಾವಮಾನಗಳ ಚರ್ಚೆಯ ಸಂದರ್ಭದಲ್ಲೆಲ್ಲ ಅಕ್ಷರ ಹೊಸೆದುಕೊಟ್ಟ ಹೊಸ ವ್ಯಾಖ್ಯಾನ ಮತ್ತೆ ಮತ್ತೆ ಪ್ರತ್ಯಕ್ಷವಾಗಲಿದೆ. ಸಾಂಸ್ಕೃತಿಕ ವಾಗ್ವಾದಗಳೇ ಹಾಗೆ, ಯಾವಾಗ ಬೇಕಾದರೂ ಆಕಳಿಸಿ ಮೈಮುರಿದು ಎದ್ದು ನಿಲ್ಲಬಹುದು!
ವಿಶೇಷವೆಂದರೆ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪ್ರಕಟಗೊಂಡ ಈ ಲೇಖನ ಕೇವಲ ಪ್ರಜಾವಾಣಿಯಲ್ಲಿ ಮಾತ್ರ ಚರ್ಚೆಗೊಳಪಡದೆ, ಬೇರೆಡೆಯೂ ಮೈದಳೆದು ಸಂಸ್ಕೃತಿ ಚಿಂತಕರನ್ನು ಆಕರ್ಷಿಸಿತು. ಕೆ.ವಿ.ಅಕ್ಷರ ಅವರ ಬೆತ್ತಲೆ ಜಗತ್ತು ಎಂಬ ಶೀರ್ಷಿಕೆಯಲ್ಲಿ ಸಂಪಾದಕೀಯ ಈ ಲೇಖನದ ಮೂಲ ಆಶಯಗಳನ್ನು ಕಟುಟೀಕೆಗೆ ಒಳಪಡಿಸಿದ್ದನ್ನು ನೀವು ಬಲ್ಲಿರಿ. ನಂತರ ಎಚ್.ಎಸ್.ಶಿವಪ್ರಕಾಶ್ ಮತ್ತು ಸಂವರ್ಥ ಸಾಹಿಲ್ ಬರೆದ ಎರಡು ಮನುಮುಟ್ಟುವ ಪ್ರತಿಕ್ರಿಯೆಗಳನ್ನೂ ಪ್ರಕಟಿಸಿದ್ದೆವು. ಅತ್ತ ಅವಧಿಯಲ್ಲೂ ಈ ಕುರಿತ ಚರ್ಚೆ ಜೋರಾಗಿಯೇ ನಡೆಯಿತು. ಅಗ್ನಿ, ಗೌರಿ ಲಂಕೇಶ್, ಹಾಯ್ ಬೆಂಗಳೂರ್ ಮತ್ತಿತರ ವಾರಪತ್ರಿಕೆಗಳಲ್ಲೂ ಈ ಕುರಿತ ಚರ್ಚೆಗಳು ನಡೆದವು.
ಇದೀಗ ಅಕ್ಷರ ಅವರ ಅಂತಿಮ ಪ್ರತಿಕ್ರಿಯೆ ಪ್ರಕಟಗೊಂಡಿದೆ. ಈ ಪ್ರತಿಕ್ರಿಯೆಯ ಕುರಿತೂ ನಮಗೆ ತಕರಾರಿದೆ. ಯಥಾಪ್ರಕಾರ ಅಕ್ಷರ ಅವರದು ಅಕ್ಷರಗಳ ಜತೆಗಿನ ಆಟ. ಇಲ್ಲೂ ಸಹ ನಿಚ್ಚಳವಾಗಿ ಎದ್ದು ಕಾಣುವುದು ಅವರ ಬೌದ್ಧಿಕ ಕಸರತ್ತು.
೧. ತಮ್ಮ ಚಿಂತನೆಗಳು ಕನ್ನಡದ ವಿಚಾರಶೀಲರ ಗ್ರಹಿಕೆಯನ್ನು ಮೀರಿದ್ದೇನೋ ಎಂಬ ಬೌದ್ಧಿಕ ಅಹಂಕಾರ ಅಕ್ಷರ ಅವರನ್ನು ಕಾಡಿರಲಿಕ್ಕೂ ಸಾಕು. ಅಥವಾ ಆ ಪ್ರಕಾರದ ಭ್ರಮೆಗಳಲ್ಲಿ ಅವರು ಸಿಲುಕಿಕೊಂಡಿರುವ ಅಪಾಯವನ್ನೂ ನಿರಾಕರಿಸುವಂತಿಲ್ಲ. ಹರಕೆ-ಹರಾಜು ಲೇಖನವನ್ನು ವಿರೋಧಿಸಿದವರೆಲ್ಲ ಅದನ್ನು ಗ್ರಹಿಸುವಲ್ಲೇ ಎಡವಿದ್ದಾರೆ ಎಂಬ ಅರ್ಥವನ್ನು ಅವರ ಪ್ರತಿಕ್ರಿಯೆ ಧ್ವನಿಸುತ್ತದೆ.
೨. ಮಡೆಸ್ನಾನ ಮೌಢ್ಯವೇ, ಅಲ್ಲವೇ ಎಂಬ ಜಿಜ್ಞಾಸೆ ಅಕ್ಷರ ಅವರಲ್ಲಿ ಇನ್ನೂ ಉಳಿದುಕೊಂಡಿದೆ. ನಮ್ಮ ಸಮಾಜದ ಕೆಲವು ಪರಂಪರಾನುಗತ ಆಚರಣೆಗಳು ಅತ್ತ ಮೌಢ್ಯವೂ ಅಲ್ಲದ, ಇತ್ತ ಅಧ್ಯಾತ್ಮಿಕವೂ ಅಲ್ಲದ ಸಮುದಾಯಿಕ ಪಾಲ್ಗೊಳ್ಳುವಿಕೆಯ ಒಂದು ಚಟುವಟಿಕೆ ಮಾತ್ರವೆ ಇರಬಹುದೆ? ಎಂಬ ಸಂದೇಹವನ್ನು ಅವರು ವ್ಯಕ್ತಪಡಿಸುತ್ತಾರೆ. ಇದಕ್ಕೆ ಅವರು ಬಳಸಿಕೊಂಡಿರುವುದು ವೈದೇಹಿ ಬರೆದ ಇದು ಲೌಕಿಕ ಸಂಕಟಗಳ ಅನಿವಾರ್ಯ ಅಭಿವ್ಯಕ್ತಿ ಇರಬಹುದೇ ಎಂಬ ಸಾಲನ್ನು. ಅಲ್ಲಿಗೆ ಮಡೆಸ್ನಾನವನ್ನು ಅವರು ಮೌಢ್ಯ ಎನ್ನಲು ಅವರಿಗೆ ಮನಸ್ಸು ಒಪ್ಪುತ್ತಿಲ್ಲ. ಅದನ್ನು ಅಧ್ಯಾತ್ಮಿಕ ಎನ್ನಲು ತಕ್ಕ ಆಧಾರಗಳೂ ಅವರ ಬಳಿಯಿಲ್ಲ. ಹೀಗಾಗಿ ಮಧ್ಯದ ಯಾವುದೋ ಅಮೂರ್ತ ಶೋಧದಲ್ಲಿ ಅವರು ದಾರಿತಪ್ಪಿ ನಿಂತಿದ್ದಾರೆ.
೩. ಹುಟ್ಟಿನ ಮೂಲದ ಅಸಮಾನತೆಗಳು ಯಾವ ರೂಪದಲ್ಲಿದ್ದರೂ ಖಂಡನಾರ್ಹವೇ ಎಂದು ಅಕ್ಷರ ಒಪ್ಪಿಕೊಳ್ಳುತ್ತಾರೆ. ಮಡೆಸ್ನಾನದಲ್ಲಿ ಹುಟ್ಟಿನ ಮೂಲದ ಅಸಮಾನತೆ ಅವರ ಕಣ್ಣಿಗೆ ಗೋಚರಿಸದಿರುವುದು ಮಾತ್ರ ವಿಸ್ಮಯ. ಹುಟ್ಟಿನ ಮೂಲದ ಅಸಮಾನತೆಗಳು ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನಗಳೂ ಸೇರಿದಂತೆ ಸಾಕಷ್ಟು ದೇವಸ್ಥಾನಗಳಲ್ಲಿ ಇವೆ. ಅದಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವೂ ಹೊರತಾಗಿಲ್ಲ. ಅಸಮಾನತೆಯನ್ನು ವಿಜೃಂಭಿಸುವ ಪ್ರತ್ಯೇಕ ಪಂಕ್ತಿಗಳಂಥ ಆಚರಣೆಗಳೇ ಮಡೆಸ್ನಾನವೆಂಬ ಸಂಪ್ರದಾಯದ ಮೂಲ ಎಂಬುದನ್ನು ಅಕ್ಷರ ಪ್ರಜ್ಞಾಪೂರ್ವಕವಾಗಿ ಮರೆಯುತ್ತಾರೆ. ಬದಲಾಗಿ ಇತ್ತೀಚಿನ ವರ್ಷಗಳಲ್ಲಿ ಬ್ರಾಹ್ಮಣರೂ ಮಡೆಸ್ನಾನದಲ್ಲಿ ಪಾಲ್ಗೊಂಡಿದ್ದರು ಎಂಬುದನ್ನು ವಾದಕ್ಕಾಗಿ ಬಳಸುತ್ತಾರೆ.
ಈ ಬಗೆಯ ರಾಜಕೀಯ ಸಮರ್ಪಕತೆಯ ಪ್ರದರ್ಶನದಿಂದ ಯಾವ ವೈಜ್ಞಾನಿಕ ಸಮಾಜಶಾಸ್ತ್ರವೂ ಬೆಳೆಯುವುದಿಲ್ಲವೆಂಬುದನ್ನು ಅರ್ಥ ಮಾಡಿಕೊಳ್ಳಬೇಕಾದ ಕಾಲವೀಗ ಬಂದಿದೆ ಎಂದು ಅಕ್ಷರ ಬರೆಯುತ್ತಾರೆ. ನಿಜವಿರಬಹುದು. ಆದರೆ ಮಡೆಸ್ನಾನದ ವಿಶ್ಲೇಷಣೆಗೆ ಬೇಕಾಗಿರುವುದು ರಾಜಕೀಯ ಸಮರ್ಪಕತೆಯ ಪ್ರದರ್ಶನವಲ್ಲ, ಮಾನವ ಘನತೆಯ ಕುರಿತಾದ ಸಾಮಾನ್ಯ ಜ್ಞಾನ ಎಂಬುದನ್ನು ಅವರು ಬುದ್ಧಿಪೂರ್ವಕವಾಗಿ ಮರೆಯುತ್ತಾರೆ.
೪. ಹರಕೆ-ಹರಾಜು ಲೇಖನದ ಕೂತವ-ನಿಂತವ-ನೋಡುವವ ಎಂಬ ರೂಪಕ ಅತಿ ಹೆಚ್ಚು ಟೀಕೆಗೊಳಗಾಗಿತ್ತು. ಅಕ್ಷರ ಆ ರೂಪಕವನ್ನು ಮತ್ತೆ ಸಮರ್ಥಿಸಿದ್ದಾರೆ. ಈ ಪ್ರಳಯಾಂತಕ ರೂಪಕ ಹುಟ್ಟಿದ್ದು ಹೇಗೆ ಎಂಬ ರಹಸ್ಯವನ್ನೂ ಅವರು ಹೊರಗೆಡಹಿದ್ದಾರೆ. ಹೆಗ್ಗೋಡು ಕುಟುಂಬದ ಚಿಂತನೆಯ ಹಿಂದಿನ ಬೌದ್ಧಿಕ ವಲಯದ ಪ್ರಮುಖರಾದ ಅಶೀಶ್ ನಂದಿಯವರ ಹ್ಯುಮಿಲಿಯೇಷನ್ ಎಂಬ ಲೇಖನವನ್ನು ಆಧರಿಸಿ ಈ ರೂಪಕವನ್ನು ಕಟ್ಟಿ ಕೊಟ್ಟಿದ್ದಾರೆ. ಒಂದು ಸಂಸ್ಕೃತಿಯೊಳಗಡೆ ಯಾವುದು ಅವಮಾನ, ಯಾವುದು ಅಲ್ಲ ಎಂಬುದನ್ನು ನಿರ್ಧರಿಸುವುದು ಎಷ್ಟು ಸಂಕೀರ್ಣವಾದ ಸಮಸ್ಯೆಯೆಂಬುದನ್ನು ನಂದಿಯವರು ಆ ಲೇಖನದಲ್ಲಿ ವಿಶ್ಲೇಷಿಸಿದ್ದಾರಂತೆ. ಬಹುಶಃ ಮುಂದಿನ ಸಂಸ್ಕೃತಿ ಶಿಬಿರದ ವೇಳೆ ಶಿಬಿರಾರ್ಥಿಗಳು ಅಶೀಶ್ ನಂದಿಯವರಿಂದ ಈ ಬಗ್ಗೆ ಸ್ಪಷ್ಟನೆ ಪಡೆದುಕೊಳ್ಳಬಹುದು.
ಗಾಂಧಿಯವರೇ ಆಗಲಿ, ಅಂಬೇಡ್ಕರ್‌ರೇ ಆಗಲಿ ಕೇವಲ ಇನ್ನೊಬ್ಬರ ಪರವಾಗಿ ಹೋರಾಟ ಮಾಡಲಿಲ್ಲ. ಜೊತೆಯಾಗಿ ಮಾಡುವುದಕ್ಕೂ ಪರವಾಗಿ ಮಾಡುವುದಕ್ಕೂ ದೊಡ್ಡ ವ್ಯತ್ಯಾಸವಿದೆ. ಜೊತೆಯಾಗಿ ಮಾಡುವ ಕೆಲಸಕ್ಕೆ ಆಳವಾದ ನೈತಿಕ ಶಕ್ತಿಯೂ ವೈಯಕ್ತಿಕ ಚಾರಿತ್ರ್ಯವೂ ಅಗತ್ಯವಾಗುತ್ತದೆ, ಪರವಾಗಿ ಮಾಡುವ ಕೆಲಸ ಹಾಗಲ್ಲ ಎಂದು ಅಕ್ಷರ ಟಿಪ್ಪಣಿ ಮಾಡಿದ್ದಾರೆ. ವರ್ಣಭೇದ ನೀತಿಯ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರು ನಡೆಸಿದ ಹೋರಾಟಕ್ಕೆ ನೈತಿಕ ಶಕ್ತಿ, ವೈಯಕ್ತಿಕ ಚಾರಿತ್ರ್ಯ ಬೇಕಿರಲಿಲ್ಲ ಎಂದು ಅವರು ಸೂಚಿಸಬಹುದೆ? ಮಡೆಸ್ನಾನದ ವಿಷಯಕ್ಕೆ ಸಂಬಂಧಿಸಿದಂತೆ ಈ ಟಿಪ್ಪಣಿಯನ್ನು ಅನ್ವಯಿಸಿ ಹೇಳುವುದಾದರೆ, ಮಡೆಸ್ನಾನವನ್ನು ಮಾಡುವವರ ಪರವಾಗಿ ಪ್ರತಿಭಟನೆ ಅನಗತ್ಯ. ಒಂದು ವೇಳೆ ಮಡೆಸ್ನಾನ ಅಪಮಾನಕಾರಿ ಎಂದು ಮಾಡುವವರು ಭಾವಿಸುವುದಾದರೆ, ಅದಕ್ಕೆ ಅವರು ಹೋರಾಟಕ್ಕಿಳಿಯುವುದಾದರೆ ಮಾತ್ರ ಅವರ ಜತೆಗೂಡಿ ಹೊರಾಡಬಹುದು. ಆಗ ಮಾತ್ರ ಅದು ನೈತಿಕವಾಗುತ್ತದೆ! ಇದನ್ನು ಯಥಾಸ್ಥಿತಿವಾದ ಎಂದು ಕರೆಯದೆ ಇರಲು ಸಾಧ್ಯವೇ? ಹೊಸಬಗೆಯ ಸಂಸ್ಕೃತಿ ಚಿಂತನೆಯೆಂದರೆ ಯಥಾಸ್ಥಿತಿವಾದವೇ?
೫. ಪುರೋಹಿತಶಾಹಿ ಅಂದರೇನು? ಅದು ಜಾತಿ ಸೂಚಕವೇ? ವೃತ್ತಿ ಸೂಚಕವೆ? ಅಥವಾ ನಿರ್ದಿಷ್ಟ ಧೋರಣೆಗಳ ಸಮುಚ್ಚಯವೇ? ಎಂಬ ಬ್ರಾಕೆಟ್ಟಿನೊಳಗಿನ ಪ್ರಶ್ನೆಗಳನ್ನು ಅಕ್ಷರ ಎತ್ತಿದ್ದಾರೆ. ಪುರೋಹಿತಶಾಹಿ ಎನ್ನೋದು ಜಾತಿ ಸೂಚಕವೂ ಅಲ್ಲ, ವೃತ್ತಿ ಸೂಚಕವೂ ಅಲ್ಲ ಎಂಬುದನ್ನು ಅರಿಯದವರಷ್ಟು ಅಕ್ಷರ ಮುಗ್ಧರಲ್ಲ. ಪುರೋಹಿತಶಾಹಿಯನ್ನು ಜಾತಿಗೋ ವೃತ್ತಿಗೋ ಆರೋಪಿಸಿ ಈ ಚರ್ಚೆಯಲ್ಲಿ ಯಾರೂ ಮಾತನಾಡಿಲ್ಲ. ಪುರೋಹಿತಶಾಹಿಯನ್ನು ಕಟುವಾಗಿ ಟೀಕಿಸಿದ ವಿವೇಕಾನಂದ, ಕುವೆಂಪು, ಲೋಹಿಯಾ ಅವರಾದಿಯಾಗಿ ಯಾರೂ ಸಹ ಹೀಗೆ ಸರಳೀಕರಿಸಿ ವಿಶ್ಲೇಷಿಸಿಲ್ಲ. ಹೀಗೆ ಪ್ರಶ್ನೆಗಳನ್ನು ಎತ್ತುವ ಮೂಲಕ ಇವತ್ತಿನ ಕಾಲಮಾನದಲ್ಲಿ ಜಾತಿ ಕುರಿತ ಚರ್ಚೆ ಪಡೆದುಕೊಳ್ಳುವ ವಿಕೃತ ಸ್ವರೂಪಗಳಿಗೆ ಅನುಕೂಲಕರವಾದ ಸಣ್ಣ ಪ್ರಚೋದನೆಯೊಂದಕ್ಕೆ ಅವರು ಕಿಡಿಹಚ್ಚುವ ಯತ್ನದಲ್ಲಿದ್ದಾರೆ ಎನಿಸುತ್ತದೆ.
ಕಡೆಯದಾಗಿ ಅಕ್ಷರ ತಮಗೆ ಈ ಲೇಖನ ಬರೆಯಲು ನಿಜಪ್ರೇರಣೆ ಏನೆಂಬುದನ್ನು ಹೇಳಿದ್ದಾರೆ. ನನ್ನ ತಂದೆ ಪುರುಸೊತ್ತಾದಾಗ ಪೂಜೆ ಮಾಡುತ್ತಿದ್ದರು; ನನ್ನ ಅಜ್ಜಿ ಹರಕೆಗಳನ್ನು ಹೊರುತ್ತಿದ್ದರು. ಇನ್ನು ನನ್ನ ಸುತ್ತಮುತ್ತಲಿರುವ, ಎಲ್ಲ ಜಾತಿಯ ಜನರೂ ಕೂಡಿರುವ ಸಮುದಾಯವು ದಿನಬೆಳಗಾದರೆ ಪೂಜೆ-ಪುನಸ್ಕಾರ-ಹಬ್ಬ-ಹರಕೆಗಳಲ್ಲೇ ಮುಳುಗಿರುವಂಥದ್ದು. ಇಂಥ ನಮ್ಮನ್ನೆಲ್ಲ ಹಿಂದುಳಿದವರೆಂದು ಪ್ರತಿಗಾಮಿಗಳೆಂದು ಮೂಢರೆಂದು ಯಾರಾದರೂ ಬಿಂಬಿಸಲೆತ್ನಿಸಿದರೆ ಅದು ನನಗೆ ಬೌದ್ಧಿಕ ಅಹಂಕಾರವಾಗಿ ಕಾಣುತ್ತದೆ ಎನ್ನುತ್ತಾರೆ ಅವರು.
ಒಂದು ವಿಷಯವನ್ನು ಅವರು ಬೇಕೆಂದೇ ಮರೆತಿದ್ದಾರೆ. ಹರಕೆ-ಹರಾಜು ಲೇಖನವನ್ನು ಟೀಕೆಗೆ ಒಳಪಡಿಸಿದ ಎಲ್ಲರೂ ಇಂಥ ಹಿನ್ನೆಲೆಗಳಿಂದಲೇ ಬಂದವರು. ಪೂಜೆ, ವ್ರತ, ಹರಕೆ ಎಲ್ಲವೂ ವೈಯಕ್ತಿಕ ಆಚರಣೆಗಳು. ಅವು ನಂಬಿಕೆಗಳನ್ನು ಆಧರಿಸಿದ್ದು. ಅವುಗಳ ಕುರಿತು ಯಾರಿಗೂ ತಂಟೆ, ತಕರಾರಿಲ್ಲ. ತಕರಾರಿರುವುದು ಒಂದು ಸಮುದಾಯದವರು ಉಂಡು ಎದ್ದ ಮೇಲೆ, ಆ ಎಲೆಗಳ ಮೇಲೆ ಉಳಿದ ಸಮುದಾಯಗಳ ಜನರು ಉರುಳಾಡುವ ಅಸಹ್ಯದ ಕುರಿತು. ಅದು ಕೇವಲ ನಂಬಿಕೆಯ ಪ್ರಶ್ನೆ ಮಾತ್ರವಲ್ಲ. ಅಕ್ಷರ ಅವರು ಹೇಳುವ ಮಾನಾವಮಾನಗಳ ಪ್ರಶ್ನೆ, ಮನುಷ್ಯ ಘನತೆಯ ಪ್ರಶ್ನೆ, ವಿವಿಧ ಹಂತಗಳಲ್ಲಿ ಒಡೆದು ಚೂರಾಗಿರುವ ಸಮಾಜವನ್ನು ಸಮಾನವಾಗಿ ಬದುಕುವಂತೆ ಪ್ರೇರೇಪಿಸುವ ಕಾಲದ ಅಗತ್ಯದ ಪ್ರಶ್ನೆ, ಆಧುನಿಕ ಯುಗದ ಪ್ರಲೋಭನೆಗಳಿಗೆ ಒಳಗಾಗಿ ಮುಗ್ಧ ಜನರು ಅಸಹಾಯಕರಾಗಿ ಹುಡುಕಿಕೊಳ್ಳುತ್ತಿರುವ ಅಪಮಾರ್ಗಗಳ ಪ್ರಶ್ನೆ.
ಅದು ಅಕ್ಷರ ಅವರಿಗೆ ಅರ್ಥವಾಗದ್ದೇನಲ್ಲ.
ಅವರು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ, ಅಷ್ಟೆ.
发表评论