
ಸುದ್ದಿ ಈಗ ಅಧಿಕೃತ. ವಿಶ್ವೇಶ್ವರ ಭಟ್ಟರು ಕನ್ನಡಪ್ರಭ ಸೇರಿದ್ದಾರೆ. ವಿಜಯ ಕರ್ನಾಟಕದಿಂದ ಹೊರಬಂದ ನಂತರ ಸುಮಾರು ಎರಡು ತಿಂಗಳು ಕಾಲ ಅಳೆದು ಸುರಿದು ಕಡೆಗೂ ಭಟ್ಟರು ತೀರ್ಮಾನಕ್ಕೆ ಬಂದಿದ್ದಾರೆ. ಅಲ್ಲಿಗೆ ಭಟ್ಟರ ಜೀವನದ ಹೊಸ ಆಯಾಮ ಶುರು ಆದಂತಾಗಿದೆ.
ನಿಮಗೆ ಗೊತ್ತಿದೆ, ವಿಶ್ವೇಶ್ವರ ಭಟ್ಟರು ಕನ್ನಡಪ್ರಭಕ್ಕೆ ಸೇರುವ ಸುದ್ದಿಯನ್ನು ಮೊದಲು ಬ್ರೆಕ್ ಮಾಡಿದ್ದು ಸಂಪಾದಕೀಯ. ನಾವು ಇದನ್ನು ಬರೆದಾಗ ಭಟ್ಟರು ಕನ್ನಡಪ್ರಭ ಸೇರಬಹುದು ಎಂಬ ಊಹೆಯನ್ನೂ ಯಾರೂ ಮಾಡಿರಲಿಲ್ಲ. ಯಾಕೆಂದರೆ ಎಚ್.ಆರ್.ರಂಗನಾಥ್ ನಿರ್ಗಮನದ ನಂತರ ಶಿವಸುಬ್ರಹ್ಮಣ್ಯ ಶ್ರದ್ಧೆಯಿಂದ ಪತ್ರಿಕೆಯನ್ನು ಲೀಡ್ ಮಾಡಿದ್ದರು.
ನಾವು ಈ ವಿಷಯವನ್ನು ಹೇಳಿದಾಗ ಬಂದ ಪ್ರತಿಕ್ರಿಯೆಗಳೂ ಸಹ ಸುದ್ದಿಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದವು. ಇದು ಸಂಪಾದಕೀಯದ ಬ್ಲಂಡರ್ ಎಂದು ಹೇಳಿದ್ದರು ಓದುಗರೊಬ್ಬರು. ಟೆಸ್ಟಿಂಗ್ ಎಂದು ಮಾರ್ಮಿಕವಾಗಿ ಮತ್ತೊಬ್ಬರು ಕಮೆಂಟ್ ಹಾಕಿದ್ದರು. ಸಂಪಾದಕೀಯ ಅನ್ನೋ ಪದಕ್ಕೆ ತಕ್ಕಂತೆ ಬರೀರಿ, ರ‍್ಯೂಮರ್ ಬರೀಬೇಡಿ ಎಂದು ಒಬ್ಬರು ತಾಕೀತು ಮಾಡಿದ್ದರು. ಹೀಗೆ ನಮ್ಮನ್ನು ಹಣಿದವರೆಲ್ಲ ನಮ್ಮ ಓದುಗರು. ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ದೂರದಲ್ಲೆಲ್ಲೋ ಒಂದು ಅಂತರ್ಲಿಂಗಿಯೊಂದು ಏನ್ರೀ ಇದು, ಅಸಹ್ಯ ಇಂಥ ಸುದ್ದಿ ಹಬ್ಬಿಸುವ ವ್ಯಕ್ತಿಗಳನ್ನು ಹಿಡಿದು ತದುಕಬೇಕು ಎಂದು ವಿಕಾರವಾಗಿ ಕಿರುಚಿದ್ದೂ ನಮ್ಮ ಗಮನಕ್ಕೆ ಬಂದಿತ್ತು.
ನಂತರ ಈ ಸುದ್ದಿ ಕೆಲ ದಿನಗಳ ನಂತರ ಹಾಯ್ ಬೆಂಗಳೂರಿನಲ್ಲೂ ಪ್ರಕಟವಾದಾಗ ಇರಬಹುದೇನೋ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದವು. ಇದೀಗ ಸುದ್ದಿ ಅಧಿಕೃತವಾಗಿದೆ. ಇಷ್ಟು ದಿನ ಕಾಯಿಸಿದಕ್ಕೆ ಸಾರಿ, ಸಾರಿ ಅಂಡ್ ಸಾರಿ ಎಂದು ಇಂದು ಬೆಳಿಗ್ಗೆ ತಮ್ಮ ವೆಬ್‌ಸೈಟ್‌ನಲ್ಲಿ ಬರೆಯುವ ಮೂಲಕ ಭಟ್ಟರು ತಮ್ಮ ಹೊಸಮನೆಯ ಗೃಹಪ್ರವೇಶವನ್ನು ಸಾರಿದ್ದರು.
ಮೊದಲೇ ಹೇಳಿದಂತೆ ಭಟ್ಟರ ವೃತ್ತಿ ಬದುಕಿನ ಹೊಸ ಆಯಾಮ. ಹೆಚ್ಚು ಬರೆಯುವ ಸಂಪಾದಕ ಎಂದು ಖ್ಯಾತಿಯಾದವರು ಅವರು. ಬೇರೆ ಬೇರೆ ಕಾರಣಗಳಿಂದಾಗಿ ಭಟ್ಟರು ಆಗಾಗ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಹೀಗಾಗಿ ಅವರ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಬಹಳಷ್ಟು ಜನರಲ್ಲಿತ್ತು. ವಿಶೇಷವಾಗಿ ಪತ್ರಕರ್ತರು ಈ ಬೆಳವಣಿಗೆಗಳನ್ನು ಎದುರು ನೋಡುತ್ತಿದ್ದರು.
ವಿಶ್ವೇಶ್ವರ ಭಟ್ಟರು ಕನ್ನಡಪ್ರಭ ಸೇರಿದರು. ಅದರರ್ಥ, ಅವರೊಂದಿಗೆ ತ್ಯಾಗರಾಜ್, ಪ್ರತಾಪ ಸಿಂಹ, ರಾಧಾಕೃಷ್ಣ ಬಡ್ತಿ ಅವರುಗಳೂ ಕನ್ನಡಪ್ರಭ ಸೇರುತ್ತಾರೆ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ವಿಜಯ ಕರ್ನಾಟಕದಿಂದ ಇನ್ನೊಂದಿಷ್ಟು ಮಂದಿ ಹೊರಬಂದು ಭಟ್ಟರ ತೆಕ್ಕೆಗೆ ಸೇರಿದರೂ ಆಶ್ಚರ್ಯವಿಲ್ಲ.

ಭಟ್ಟರಿಗೆ ಶುಭಾಶಯಗಳು.
ಭಟ್ಟರ ಕನ್ನಡಪ್ರಭ ಸೇರ್ಪಡೆಯ ಸುದ್ದಿಯ ಜೊತೆಜೊತೆಯಲ್ಲೇ ಶಿವಸುಬ್ರಹ್ಮಣ್ಯ ರಾಜೀನಾಮೆ ನೀಡಿದ ಸುದ್ದಿಯೂ ಹೊರಬರುತ್ತಿದೆ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಹುದ್ದೆಯನ್ನು ನಿಭಾಯಿಸಿದ ಶಿವಸುಬ್ರಹ್ಮಣ್ಯ ಮುಂದೇನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು. ಹಾಗೆ ನೋಡಿದರೆ, ಅವರು ಅಷ್ಟಾಗಿ ಇದನ್ನು ಮನಸ್ಸಿಗೆ ಹಚ್ಚಿಕೊಳ್ಳಲಾರರು. ಊರಿನಲ್ಲಿ ಇರುವ ಅಡಿಕೆ ತೋಟ, ತಮ್ಮ ಆಸಕ್ತಿಯ ಕ್ಷೇತ್ರವಾದ ವೈಲ್ಡ್ ಲೈಫ್ ಫೋಟೋಗ್ರಫಿ ಅವರನ್ನು ಕ್ರಿಯಾಶೀಲರನ್ನಾಗಿ ಇಡುತ್ತದೆ. ಆದರೆ ಕನ್ನಡ ಪತ್ರಿಕಾರಂಗಕ್ಕೆ ಈ ಪ್ರತಿಭೆ ಬೇಕು, ಹೀಗಾಗಿ ಅವರೂ ಸಹ ಮೇನ್‌ಸ್ಟ್ರೀಮಿನಲ್ಲಿರಲಿ ಎಂಬುದು ಸಂಪಾದಕೀಯದ ಹಾರೈಕೆ.
发表评论