ಕನ್ನಡ ಮಾಧ್ಯಮ ರಂಗದಲ್ಲಿ ಇಂಟರೆಸ್ಟಿಂಗ್ ಆದ ವಿದ್ಯಮಾನಗಳು ಘಟಿಸುತ್ತಿವೆ. ರವಿ ಬೆಳಗೆರೆ ಜನಶ್ರೀಗೆ ಅಧಿಕೃತವಾಗಿ ಸೇರ್ಪಡೆಯಾಗಿರುವುದು ಒಂದು ವಿಶೇಷವಾದರೆ, ವಿಶ್ವೇಶ್ವರ ಭಟ್ಟರು ಹೊಸ ಪ್ರಭೆಯೊಂದಿಗೆ ರೀಲಾಂಚ್ ಆಗುತ್ತಿರುವುದು ಮತ್ತೊಂದು ವಿಶೇಷ.
ಈ ನಡುವೆ ರವಿ ಹೆಗಡೆ ಉದಯವಾಣಿಗೆ ಸೇರುತ್ತಿರುವುದು ಎಲ್ಲರ ಹುಬ್ಬೇರಿಸಿದೆ. ಎಲ್ಲವೂ ಎಚ್.ಆರ್.ರಂಗನಾಥ್-ರವಿ ಹೆಗಡೆ ಅಂದುಕೊಂಡಂತೆ ಆಗಿದ್ದರೆ ರಾಜೀವ್ ಚಂದ್ರಶೇಖರ್ ಅವರ ಸುವರ್ಣ ನ್ಯೂಸ್ (ಸುವರ್ಣ ಕರ್ನಾಟಕ ಅಲ್ಲ.) ಪತ್ರಿಕೆ ಇಷ್ಟೊತ್ತಿಗೆ ಆರಂಭವಾಗಬೇಕಿತ್ತು. ಕಳೆದ ವರ್ಷ ಫೆ.೩ರಂದೇ ಏಷಿಯಾನೆಟ್ ನ್ಯೂಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸುವರ್ಣ ನ್ಯೂಸ್ ಎಂಬ ಟೈಟಲ್ ಪಡೆದುಕೊಂಡಿತ್ತು.
ಆದರೆ ಬೇರೆಯದೇ ವಿದ್ಯಮಾನಗಳು ನಡೆದುಹೋದವು. ರಾಜೀವ್ ಚಂದ್ರಶೇಖರ್ ಸುವರ್ಣ ನ್ಯೂಸ್ ಆರಂಭಿಸುವ ಆಲೋಚನೆ ಬಿಟ್ಟು, ಕನ್ನಡಪ್ರಭದ ಶೇರುಗಳನ್ನು ಪಡೆದರು.
ಸುವರ್ಣ ನ್ಯೂಸ್ ಪತ್ರಿಕೆಗಾಗಿಯೇ ಕನ್ನಡಪ್ರಭದಿಂದ ಕರೆತಂದ ವರದಿಗಾರರು, ಉಪಸಂಪಾದಕರು, ಡಿಜೈನರುಗಳು ಹಾಗೇ ಉಳಿದುಕೊಂಡರು. ಇವರ ಸಂಖ್ಯೆ ೨೫ಕ್ಕೂ ಹೆಚ್ಚು. ಪತ್ರಿಕೆ ಶುರುವಾಗದೆ, ಕೆಲಸ ಇಲ್ಲದೆ ಸಿಕ್ಕಿಬಿದ್ದ ಈ ಪತ್ರಕರ್ತರು ಕಳೆದ ಒಂದು ವರ್ಷದಿಂದ ಕಂಗಾಲಾಗಿ ಹೋಗಿದ್ದಾರೆ. ಸಂಬಳವೇನೋ ಬರುತ್ತದೆ, ಕೆಲಸವೇ ಇಲ್ಲದೆ ಹೋದರೆ? ಕೆಲಸವಿಲ್ಲದೇ ಇರುವ ಉದ್ಯೋಗಿಗಳನ್ನು ಸಂಸ್ಥೆ ಎಷ್ಟು ದಿನ ಇಟ್ಟುಕೊಳ್ಳಲು ಸಾಧ್ಯ? ಇದ್ದಕ್ಕಿದ್ದಂತೆ ಕೆಲಸ ಬಿಟ್ಟು ಹೋಗಿ ಎಂದು ಫರ್ಮಾನು ಹೊರಡಿಸಿದರೆ?
ಒಂದು ಹಂತದಲ್ಲಿ ಈ ಸಿಬ್ಬಂದಿ ಮತ್ತೆ ಕನ್ನಡಪ್ರಭಕ್ಕೆ ಸಾಮೂಹಿಕ ವಲಸೆ ಹೋಗುವ ನಿರ್ಧಾರಕ್ಕೂ ಬಂದಿದ್ದರು. ಹೇಗೂ ಕನ್ನಡಪ್ರಭದಲ್ಲೂ ರಾಜೀವ್ ಚಂದ್ರಶೇಖರ್ ಅವರು ಶೇರ್ ಹೋಲ್ಡರ್. ಹೀಗಾಗಿ ಮರಳಿ ಗೂಡಿಗೆ ಹೋಗುವುದು ಅಷ್ಟು ಕಷ್ಟವೂ ಆಗಿರಲಿಲ್ಲ.
ಆದರೆ ವಿಜಯಕರ್ನಾಟಕದಲ್ಲಿ ಆದ ಕ್ಷಿಪ್ರಕ್ರಾಂತಿ ಹೊಸ ಈಕ್ಷೇಷನ್‌ಗಳನ್ನು ಹುಟ್ಟುಹಾಕಿತು. ಕನ್ನಡಪ್ರಭದಲ್ಲಿ ವಿಶೇಷ ಬೆಳವಣಿಗೆಗಳು ಸಂಭವಿಸಲಾರಂಭಿಸಿದವು. ಹೀಗಾಗಿ ರವಿ ಹೆಗಡೆ ಟೀಮು ಮತ್ತೆ ಕನ್ನಡಪ್ರಭಕ್ಕೆ ವಾಪಾಸು ಹೋಗುವ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು.
ಈ ನಡುವೆ ಉದಯವಾಣಿ ಹೊಸದಾಗಿ ಇನ್ನಷ್ಟು ಆವೃತ್ತಿಗಳನ್ನು ತೆರೆದು ರೀಲಾಂಚ್ ಆಗಲು ಹೊರಟಿತು. ಉದಯವಾಣಿಗೀಗ ಹೊಸ ಸಿಬ್ಬಂದಿಗಳು ಬೇಕು. ಹೀಗಾಗಿ ರವಿ ಹೆಗಡೆ ಅಲ್ಲಿಗೆ ಹೋಗುತ್ತಿದ್ದಾರೆ. ರವಿ ಹೆಗಡೆಯವರೇನೋ ಉದಯವಾಣಿಗೆ ಹೋಗುತ್ತಾರೆ, ಜತೆಗಿರುವ ೨೫+ ಸಿಬ್ಬಂದಿ? ಅವರೂ ಹೋಗುತ್ತಾರಾ? ಹೋದರೆ ಉದಯವಾಣಿಯಲ್ಲಿ ಆಗುವ ಅಲ್ಲೋಲ ಕಲ್ಲೋಲಗಳೇನು? ರವಿ ಜತೆಯಲ್ಲಿ ಹೋಗುವವರು ಬೆಂಗಳೂರು ಬಿಟ್ಟು ಬೇರೆ ಬೇರೆ ಬ್ಯೂರೋಗಳಲ್ಲಿ ಕೆಲಸ ಮಾಡಲು ತಯಾರಾಗಿದ್ದಾರಾ? ಹೊಸಬರಿಗಾಗಿ ಉದಯವಾಣಿಯ ಮೂಲನಿವಾಸಿಗಳೇ ಹೊರಗಿನ ಬ್ಯೂರೋಗಳಿಗೆ ಹೋಗುವ ತ್ಯಾಗ ಮಾಡಬಲ್ಲರಾ? ಬಿರುಸಿನ ಚರ್ಚೆಗಳು ನಡೆಯುತ್ತಿವೆ.
ಇನ್ನು ಕನ್ನಡಪ್ರಭದಲ್ಲಿ ನಡೆಯುತ್ತಿರುವ ವಿಶೇಷ ಬೆಳವಣಿಗೆಗಳು ಸಹ ಆಸಕ್ತಿದಾಯಕವಾಗಿವೆ. ರಾಜೀವ್ ಚಂದ್ರಶೇಖರ್ ಕನ್ನಡಪ್ರಭವನ್ನು ಪೂರ್ಣ ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುವ ಯತ್ನದಲ್ಲಿದ್ದಾರೆ ಎಂಬ ಸುದ್ದಿಯಿದೆ. ಹಾಗೇನಾದರೂ ಆದರೆ ಕ್ವೀನ್ಸ್ ರಸ್ತೆಯ ಇಂಡಿಯನ್ ಎಕ್ಸ್‌ಪ್ರೆಸ್ ಕಟ್ಟಡದಿಂದ ಕನ್ನಡಪ್ರಭ ಹೊರಗೆ ಬರುವುದು ಖಚಿತ. ಕನ್ನಡಪ್ರಭವನ್ನು ರೇಸ್‌ಕೋರ್ಸ್ ರಸ್ತೆಯ ತಮ್ಮ ಹೊಸ ಕಟ್ಟಡಕ್ಕೆ ರಾಜೀವ್ ಶಿಫ್ಟ್ ಮಾಡುತ್ತಾರಾ? ಕಾದು ನೋಡಬೇಕು.
ಕನ್ನಡಪ್ರಭದಲ್ಲಿ ಆಗುತ್ತಿರುವ ಇನ್ನಷ್ಟು ವಿಶೇಷ ಬೆಳವಣಿಗೆಗಳು ಏನು ಎಂದು ನೀವು ಕೇಳಬಹುದು. ಅದನ್ನು ಸಂಪಾದಕೀಯ ಬಹಳ ಹಿಂದೆಯೇ ಹೇಳಿದೆ. ನಾವು ಮೊದಲು ಈ ಸುದ್ದಿಯನ್ನು ಬ್ರೆಕ್ ಮಾಡಿದಾಗ ಮೂಗು ಮುರಿದವರೇ ಹೆಚ್ಚು. ಇನ್ನೂ ಸ್ವಲ್ಪ ದಿನ ತಡೀರಿ. ಎಲ್ಲವೂ ನಿಚ್ಚಳವಾಗಲಿದೆ.
ಕೊನೆ ಕುಟುಕು: ರಾಜ್ಯಪಾಲರನ್ನು ಭೇಟಿ ಮಾಡುವ ಅವಕಾಶ ಸಿಕ್ಕರೆ, ಅವರ ಕೆನ್ನೆಗೆ ಬಾರಿಸುತ್ತೇನೆ ಎಂದು ಪ್ರತಾಪ ಸಿಂಹ ಫೇಸ್‌ಬುಕ್‌ನಲ್ಲಿ ಆರ್ಭಟಿಸಿದ್ದಾರೆ. ಒಂದು ಬೆತ್ತಲೆ ಜಗತ್ತು ಪುಸ್ತಕ ಕೊಂಡವರಿಗೆ ಕಪಾಳಮೋಕ್ಷ ಉಚಿತ ಎಂಬುದು ಪ್ರತಾಪಸಿಂಹನ ಪಬ್ಲಿಷರುಗಳ ಹೊಸ ಆಫರ್ ಇರಬಹುದೇ?
发表评论