
ಇಂಗ್ಲಿಷ್‌ನ ಜೆ ಅನ್ನೋ ಅಕ್ಷರನೇ ಸರಿ ಇಲ್ಲ. ಜಪಾನ್ ಕೂಡ ಜೆ ಅಕ್ಷರದಿಂದ ಶುರುವಾಗುತ್ತೆ. ಅದಕ್ಕೆ ಹಾಗೆಲ್ಲ ಭೂಕಂಪ, ಸುನಾಮಿ ಆಗಿದ್ದು. ಅಲ್ಲೆಲ್ಲ ಹೋಗೋದ್ಯಾಕೆ? ಇಲ್ಲೇ ನಮ್ಮ ಬೆಂಗಳೂರನ್ನೇ ತಗೋಳಿ, ಎಲ್ಲ ದೊಡ್ಡ, ದೊಡ್ಡ ರೌಡಿಗಳು, ಎಲ್ಲ ಜೆ ಅಕ್ಷರದಿಂದನೇ ಇದಾರೆ. ಉದಾಹರಣೆಗೆ ಜಯರಾಜ್. ನಂಬರ್ ೫ ಮತ್ತು ೭ ಒಟ್ಟಿಗೆ ಇರಬಾರದು. ಅವೆರಡಕ್ಕೂ ಆಗಲ್ಲ. ಅವೆರಡು ಒಟ್ಟಿಗೆ ಇದ್ರೆ ಅನಾಹುತ ಸೃಷ್ಟಿ ಮಾಡಿಬಿಡುತ್ತವೆ.
ಇದನ್ನೆಲ್ಲ ಹೇಳ್ತಾ ಇರುವುದು, ಮೀಡಿಯಾಗಳ ಜ್ಯೋತಿಷ್ಯ ಪ್ರೇಮದಿಂದಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಯವರ್ಧನ್ ಅನ್ನೋ ಸಂಖ್ಯಾಶಾಸ್ತ್ರ ಪ್ರವೀಣ. ಇವನಿಗೆ ವೇದಿಕೆ ಕಲ್ಪಿಸಿ ಕೊಡುತ್ತಿರುವುದು ಒನ್ಸ್ ಎಗೇನ್ ಸುವರ್ಣ ನ್ಯೂಸ್.
ಜೆ ಅಕ್ಷರದಿಂದ ಬೇರೆ ಯಾವ ದೇಶಗಳ ಹೆಸರು ಇಲ್ಲವೇ? ಹಾಗಿದ್ದರೆ ಜರ್ಮನಿಯಲ್ಲೇಕೆ ಭೂಕಂಪ ಆಗೋಲ್ಲ? ಜೆ ಅಕ್ಷರ ಬಿಟ್ಟು ಬೇರೆ ಅಕ್ಷರದಿಂದ ಶುರುವಾಗೋ ಯಾವ ರೌಡಿಗಳು ಈ ಮನುಷ್ಯನ ಕಣ್ಣಿಗೆ ಕಾಣುತ್ತಿಲ್ಲವೇ? ಜ್ಯೋತಿ ಬಾಫುಲೆ, ಜವಹರಲಾಲ್ ನೆಹರೂ, ಜಗಜೀವನ್ ರಾಮ್, ಜ್ಯೋತಿ ಬಸು, ಜಿಡ್ಡು ಕೃಷ್ಣಮೂರ್ತಿ, ಜಾರ್ಜ್ ಫರ್ನಾಂಡಿಸ್ ಇವರುಗಳೆಲ್ಲ ಯಾರು? ಇವರೂ ಸಹ ಸಮಾಜದ್ರೋಹಿಗಳ ಹಾಗೆ ಈತನಿಗೆ ಕಾಣಿಸಬಹುದೆ? ಈತನ ಪ್ರಕಾರ ಅ ಅಕ್ಷರ ಕೂಡ ಕೆಟ್ಟದಂತೆ. ಅದಕ್ಕೂ ಏನೋ ಒಂದು ತಲೆ ಬುಡ ಇಲ್ಲದ ವಿವರಣೆ ಕೊಡುತ್ತಾನೆ. ಏನೋ ಹಾಳು ಬಡಿದುಕೊಂಡು ಹೋಗಲಿ. ಇದು ಅವನ ತಪ್ಪೋ, ಅವನು ನಂಬಿಕೊಂಡಿರುವ ಸಂಖ್ಯಾಶಾಸ್ತ್ರದ ತಪ್ಪೋ ಗೊತ್ತಿಲ್ಲ ಅಂತ ಸುಮ್ಮನೆ ಇರಬಹುದು. ದುರಂತ ಅಂದರೆ, ಸುವರ್ಣದವರು ಇಂಥವನ ಪಕ್ಕ, ರಾಮಕೃಷ್ಣರಾವ್ ಅವರಂಥ ಹಿರಿಯ ವಿಜ್ಞಾನಿಯನ್ನು ಕೂರಿಸಿ ಕಾರ್ಯಕ್ರಮ ನಡೆಸುತ್ತಾರೆ. ಆ ವಿಜ್ಞಾನಿ ಏನೇ ಲಾಜಿಕ್ ಮಾತಾಡಿದ್ರು, ಅದು ಹುಚ್ಚನ ಮುಂದೆ ಮಾತಾಡಿದ ಹಾಗೆ.
ಅಂದ ಹಾಗೆ ಮೇ ೨೧ ಕ್ಕೆ ಪ್ರಳಯ ಆಗುತ್ತೋ ಇಲ್ವೋ ಅನ್ನೋ ಬಗ್ಗೆ ಕಾರ್ಯಕ್ರಮ ಅದು. ಈ ಮನುಷ್ಯನ ಪ್ರಕಾರ ೨೦೧೯, ತಪ್ಪಿದರೆ ೨೦೨೯ಕ್ಕೆ ಪ್ರಳಯ ಆಗೇ ಆಗುತ್ತಂತೆ. ಕಾರಣ, ನಂಬರ್ ೯!
ಏನಾಗಿದೆ ನಮ್ಮ ಮೀಡಿಯಾಗಳಿಗೆ? ಕೊಂಚವಾದರೂ ಸಂಕೋಚ, ಮುಜುಗರವೂ ಆಗುವುದಿಲ್ಲವೇ? ಇಷ್ಟು ಕಾಲ ನಾವು ಮೀಡಿಯಾಗಳಿಗೆ ಸಾಮಾಜಿಕ ಕಾಳಜಿ ಇಲ್ಲವೇ ಎಂದು ಪ್ರಶ್ನಿಸುತ್ತಿದ್ದೆವು? ಮೀಡಿಯಾಗಳಿಗೆ ಕನಿಷ್ಠ ಕಾಮನ್‌ಸೆನ್ಸ್ ಕೂಡ ಇಲ್ಲವೇ ಎಂದು ಈಗ ಪ್ರಶ್ನಿಸಬೇಕಿದೆ. ಹೀಗೆ ಬೌದ್ಧಿಕ ದಾರಿದ್ರ್ಯದಿಂದ ನರಳುತ್ತಿರುವ ಜನರು ಮೀಡಿಯಾಗಳಿಗೇಕೆ ಬರುತ್ತಾರೆ? ಇಂಥದ್ದೇ ಬುರುಡೆ ಜ್ಯೋತಿಷಿಗಳ ಮನೆಗಳಲ್ಲಿ ಅವರ ಸಹಾಯಕರ ಕೆಲಸವನ್ನೇಕೆ ಮಾಡಬಾರದು?
ಮಾತು ಕಟುವೆನ್ನಿಸಿದರೆ ಕ್ಷಮೆ ಇರಲಿ.
发表评论