ನಾಡಿದ್ದು ತಾರೀಖು ಮೇ ೬. ಜಗನ್ಮಾತೆ ಭೂಮಿಗೆ ಬರುತ್ತಾಳೆ ಎಂದು ಬ್ರಹ್ಮಾಂಡ ಗುರು ನರೇಂದ್ರ ಶರ್ಮ ಭವಿಷ್ಯ ನುಡಿದ ದಿನ. ಆಕೆ ಬಂದ ನಂತರ ಪ್ರಳಯದ ಪ್ರಕ್ರಿಯೆಗಳು ಆರಂಭವಾಗುತ್ತವೆ ಎಂದಿದ್ದರು ನರೇಂದ್ರ ಶರ್ಮ. ಯಾಕೋ, ಏನೋ ಈಗೀಗ ನರೇಂದ್ರ ಶರ್ಮ ಪ್ರಳಯದ ವಿಷಯ ಮಾತನಾಡುತ್ತಲೇ ಇಲ್ಲ. ಜಗನ್ಮಾತೆ ಬರುವ ವಿಷಯವನ್ನು ಸಹ ಹೇಳುತ್ತಲೇ ಇಲ್ಲ. ನೋಡ್ತಾ ಇರಿ, ನವೆಂಬರ್ ಒಳಗೆ ಇಡೀ ಪ್ರಪಂಚದಲ್ಲಿ ಕರೆಂಟ್ (ಪವರ್) ಅನ್ನೋದೇ ಇರೋದಿಲ್ಲ ಎನ್ನುತ್ತಿದ್ದ ಶರ್ಮ ಅವರು ಸುಮ್ಮನಾಗಿಬಿಟ್ಟಿದ್ದಾರೆ. ಈಗ ಅವರು ಡಾ.ಶಿವಕುಮಾರ ಸ್ವಾಮಿಗಳ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಈ ದಿಢೀರ್ ಬದಲಾವಣೆಗೆ ಏನು ಕಾರಣ ಎಂದು ನೀವು-ನಾವು ಸುಲಭವಾಗಿ ಊಹಿಸಬಹುದು.

ಈ ನಡುವೆ ಕಪಟ ಬಾಬಾ-ಜ್ಯೋತಿಷಿಗಳ ವಿರುದ್ಧ ಟಿವಿ೯ ಹಾಗು ಸುವರ್ಣ ವಾಹಿನಿಗಳಲ್ಲಿ ಅಭಿಯಾನಗಳು ನಡೆದದ್ದನ್ನು ನೀವು ಗಮನಿಸಿರುತ್ತೀರಿ. ಇದ್ದಕ್ಕಿದ್ದಂತೆ ಈ ಎರಡೂ ಚಾನಲ್‌ಗಳಿಗೆ ಇದ್ದಕ್ಕಿದ್ದಂತೆ ವೈಚಾರಿಕ ಪ್ರಜ್ಞೆ ಜಾಗೃತವಾಗಿರುವುದು ಆಶ್ಚರ್ಯ ಹಾಗು ಸಂತೋಷ. ಆದರೆ ಇದೇ ಚಾನಲ್‌ಗಳಲ್ಲಿ ಇನ್ನೂ ಜ್ಯೋತಿಷ್ಯದ ವಿಜೃಂಭಣೆ ನಿಂತಿಲ್ಲ. ನಿಲ್ಲುವ ಯಾವ ಸೂಚನೆಗಳೂ ಕಾಣಿಸುತ್ತಿಲ್ಲ.

ಆ ವಿಷಯ ಹಾಗಿರಲಿ, ಸಮಯ ಟಿವಿಯಲ್ಲಿ ಪ್ರಸಾರವಾದ ಒಂದು ವಿಚಿತ್ರ ಕಾರ್ಯಕ್ರಮದ ಕುರಿತು ಪ್ರಸ್ತಾಪಿಸಲೇಬೇಕು. ಈಗಾಗಲೇ ಕೆಲವರು ಈ ಕುರಿತು ಫೇಸ್‌ಬುಕ್‌ನಲ್ಲಿ ಚರ್ಚಿಸಿದ್ದಾರೆ. ಈ ಕಾರ್ಯಕ್ರಮವನ್ನು ನಾವು ನೋಡಲು ಸಾಧ್ಯವಾಗಲಿಲ್ಲ.

ಫೇಸ್‌ಬುಕ್‌ನಲ್ಲಿ ಮಾನು ಹೆಗ್ಗೋಡು ಬರೆದಿರುವ ಪ್ರಕಾರ ಜನ್ಮಾಂತರ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದ್ದ ರಾಮಚಂದ್ರ ಗುರೂಜಿ ಎಂಬುವವರು ಸಮಯ ಟಿವಿಯ ವಿಶೇಷ ಕಾರ್ಯಕ್ರಮದಲ್ಲಿ ಸಾಯಿಬಾಬಾ ಆತ್ಮದೊಂದಿಗೆ ಮಾತನಾಡಿದರಂತೆ. ಇದಕ್ಕಾಗಿ ಅವರು ಸಾಯಿಬಾಬಾ ಸಂಬಂಧಿಯೊಬ್ಬರನ್ನು ಬಳಸಿಕೊಂಡು, ಅವರ ಮೂಲಕ ಬಾಬಾ ಆತ್ಮದೊಂದಿಗೆ ಸಂವಾದ ನಡೆಸಿದರಂತೆ. ಈ ಸಂದರ್ಭದಲ್ಲಿ ಕೆಲವು ಪ್ರಶ್ನೆಗಳಿಗೂ ಸಾಯಿಬಾಬಾ ಅವರ ಆತ್ಮ ಪ್ರತಿಕ್ರಿಯಿಸಿತಂತೆ. ಸಾಯಿಬಾಬಾ ಅವರು ತಮ್ಮ ಸಾವನ್ನು ಸಹಜಸಾವು ಎಂದು ಕರೆದುಕೊಂಡರಂತೆ. ಹಾಗೆಯೇ ತಮ್ಮ ಉತ್ತರಾಧಿಕಾರಿಯಾಗಿ ವಿದೇಶಿಯೊಬ್ಬರು ನೇಮಕವಾಗುತ್ತಾರೆ ಎಂದು ಹೇಳಿದರಂತೆ. ಅವರು ಸತ್ತಿದ್ದು ೧೭ರ ಮುಂಜಾನೆಯಂತೆ.

ಮಾನು ಅವರು ಕೊಟ್ಟಿರುವ ಮಾಹಿತಿಗಳು ಇಷ್ಟು. ಸಾಯಿಬಾಬಾ ಅವರ ಆತ್ಮ ಇನ್ನೂ ಏನೇನು ಹೇಳಿತೋ ಗೊತ್ತಿಲ್ಲ. ಈ ಕಾರ್ಯಕ್ರಮ ನೋಡಿರಬಹುದಾದ ಓದುಗರು ಇನ್ನಷ್ಟು ಬೆಳಕು ಚೆಲ್ಲಿದರೆ ಅನುಕೂಲವಾಗುತ್ತದೆ. ಮಾಧ್ಯಮಗಳು ಇಷ್ಟು ನೀಚ ಸ್ಥಿತಿಗೆ ಇಳಿಯಬೇಕಾ? ಮಾತನಾಡಿದ್ದು ಸಾಯಿಬಾಬಾ ಅವರ ಆತ್ಮದೊಂದಿಗೇ ಎಂದು ಹೇಳಲು ರಾಮಚಂದ್ರ ಗುರೂಜಿಯವರ ಬಳಿಯಾಗಲಿ, ಸಮಯ ಟಿವಿಯವರ ಬಳಿಯಾಗಲಿ ಯಾವ ಪುರಾವೆಯಿದೆ?

ಹೀಗೆ ಆತ್ಮಗಳ ಜತೆ ಸಂವಾದ ನಡೆಸಿ, ಎಲ್ಲವನ್ನೂ ತಿಳಿದುಕೊಳ್ಳಬಹುದಾದರೆ ಪ್ರತಿ ಪೊಲೀಸ್ ಠಾಣೆಗಳಲ್ಲೂ ಒಬ್ಬೊಬ್ಬ ರಾಮಚಂದ್ರ ಗುರೂಜಿಯ ಶಿಷ್ಯರನ್ನು ನಿಯೋಜಿಸುವುದು ಒಳ್ಳೆಯದು. ಹಾಗಾದಲ್ಲಿ ಎಲ್ಲ ಕೊಲೆ ಕೇಸುಗಳು ಕ್ಷಣ ಮಾತ್ರದಲ್ಲಿ ಬಗೆಹರಿಯುತ್ತವೆ. ನ್ಯಾಯಾಲಯಗಳಲ್ಲಿ ವಕೀಲರ ಬದಲಾಗಿ, ಅಲ್ಲೂ ಗುರೂಜಿಯ ಶಿಷ್ಯರನ್ನು ನೇಮಿಸಿದರೆ ನ್ಯಾಯಾಧೀಶರ ಕೆಲಸವೂ ಹಗುರವಾಗುತ್ತದೆ.

ಈ ಆತ್ಮಗಳ ಜತೆ ಮಾತನಾಡುವ ಕಾರ್ಯಕ್ರಮಗಳನ್ನು ಹಲವಾರು ಕನ್ನಡ ಚಾನೆಲ್‌ಗಳು ಇತ್ತೀಚಿಗೆ ನಡೆಸಿಕೊಂಡು ಬಂದಿವೆ. ಆ ಕಾರ್ಯಕ್ರಮಗಳ ಸಿಬ್ಬಂದಿ ಅತಿಥಿಗಳನ್ನು ಆಹ್ವಾನಿಸುವಾಗಲೇ ಅವರಿಗೆ ಪೂರ್ವಜನ್ಮದಲ್ಲಿ ದೊಡ್ಡದೊಡ್ಡ ವ್ಯಕ್ತಿಯಾಗುವ ಆಮಿಷಗಳನ್ನು ಒಡ್ಡಿರುವುದನ್ನು ನಾವು ಬಲ್ಲೆವು. ಸಂಪೂರ್ಣ ಸ್ಕ್ರಿಪ್ಟೆಡ್ ಕಾರ್ಯಕ್ರಮಗಳಿವು. ರಾಜಕಾರಣಿಯೊಬ್ಬರನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ಪುಸಲಾಯಿಸಲು ಯತ್ನಿಸಿದ ವ್ಯಕ್ತಿಯೊಬ್ಬರು, ನಿಮ್ಮನ್ನು ಮಯೂರ ವರ್ಮನನ್ನಾಗಿ ಮಾಡುತ್ತೇವೆ, ನಿಮ್ಮ ರೆಪ್ಯುಟೇಷನ್ ಹೆಚ್ಚುತ್ತದೆ ಎಂದು ಹೇಳಿದ್ದರಂತೆ. ಆ ರಾಜಕಾರಣಿ ಹಚ್ಯಾ ಎಂದು ಓಡಿಸಿದ್ದಾರೆ. ಈ ಆತ್ಮಗಳ ಜತೆ ಸಂವಾದದ ಕಾರ್ಯಕ್ರಮಗಳು ಕಪಟ ನಾಟಕ ಎಂದು ಗೊತ್ತಿರುವ ಚಾನಲ್‌ಗಳು ಕಾರ್ಯಕ್ರಮಗಳಿಗೆ ಟಿಆರ್‌ಪಿ ಹೆಸರಲ್ಲಿ ಅವಕಾಶ ಕಲ್ಪಿಸುತ್ತ ಬಂದಿವೆ.

ಇದೀಗ ಸಾಯಿಬಾಬಾ ಅವರು ಸತ್ತ ಕೆಲವೇ ದಿನಗಳಲ್ಲಿ ಅವರ ಆತ್ಮದ ಜತೆ ಮಾತನಾಡಿಸುವ ನಾಟಕವನ್ನು ಸೃಷ್ಟಿಸಿ, ನ್ಯೂಸ್ ಚಾನಲ್‌ನಲ್ಲೇ ಜನರನ್ನು ದಿಕ್ಕುತಪ್ಪಿಸುವ ಯತ್ನ ನಡೆದದ್ದು ಮಾತ್ರ ಅಕ್ಷಮ್ಯ.

ಶಶಿಧರ ಭಟ್ಟರು ಹಿಂದೆ ಭಾನಾಮತಿ ಕಾರ್ಯಕ್ರಮ ನಡೆಸುತ್ತಿದ್ದಾಗಲೂ ಅದನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ರೂಪಿಸುವ ಪ್ರಯತ್ನ ನಡೆಸುತ್ತಿದ್ದರು. ಈಗ ಅವರೇ ಮುಖ್ಯಸ್ಥರಾಗಿರುವ ಸಮಯ ಟಿವಿಯಲ್ಲಿ ಇಂಥದ್ದನ್ನು ನಿರೀಕ್ಷಿಸಿರಲಿಲ್ಲ. ಭಟ್ಟರೇ, ದಯವಿಟ್ಟು ಇಂಥದ್ದನ್ನು ನಿಲ್ಲಿಸಿ. ಇದು ಕರ್ನಾಟಕದ ವೈಚಾರಿಕ ಪರಂಪರೆಗೆ ನಾವು ಮಾಡುವ ಅಪಚಾರ.

ಇದಕ್ಕಿಂತ ಇನ್ನೇನೂ ಹೇಳಲು ಮನಸ್ಸು ಬರುತ್ತಿಲ್ಲ.
0 komentar

Blog Archive