ಹತಾಶೆ ಭಾರತೀಯರ ಮೂಲಗುಣ. ದೊಡ್ಡದೊಡ್ಡ ಭ್ರಮೆಗಳಲ್ಲಿ ಮುಳುಗುವುದು ನಮಗೆ ಮಾಮೂಲು. ಭ್ರಮೆಗಳು ನೀರಮೇಲಿನ ಗುಳ್ಳೆಗಳಂತೆ ಒಡೆದುಹೋದಾಗ ಸುಸ್ತುಬೀಳುವವರು ನಾವು. ನಮಗೆ ಕನಸು ಕಟ್ಟುವುದು ಗೊತ್ತು. ಇಂಥ ಕನಸುಗಳೂ ಸಹ ಅಮೂರ್ತವಾಗೇ ಇರುತ್ತವೆ. ಗೊತ್ತು ಗುರಿಯಿಲ್ಲದ ದಾರಿಯಲ್ಲಿ ಎಷ್ಟು ಕಾಲ ನಡೆಯುವುದು?
ಭ್ರಷ್ಟಾಚಾರದ ವಿರುದ್ಧ ಕೇಳಿಬರುತ್ತಿರುವ ಘೋಷಣೆಗಳೂ ಸಹ ಅಮೂರ್ತ ಗುರಿಯನ್ನಿಟ್ಟುಕೊಂಡು ಹೊರಟಂತೆ ಕಾಣುತ್ತಿವೆ. ಶತ್ರುವಿನ ಸ್ಥಾನದಲ್ಲಿ ನಿಂತಿರುವುದು ರಾಜಕಾರಣಿಗಳು ಮಾತ್ರ. ಹೌದಾ? ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ನಮ್ಮ ಶತ್ರುಗಳು ರಾಜಕಾರಣಿಗಳು ಮಾತ್ರನಾ? ಭ್ರಷ್ಟಾಚಾರಿಗಳು ಮಾತ್ರ ಭ್ರಷ್ಟಾಚಾರ ವಿರೋಧಿಗಳ ನಡುವೆ ಹಾಗೆ ಗೆರೆ ಹೊಡೆದು ವಿಭಾಗಿಸಿ ಗುರುತಿಸಲು ಸಾಧ್ಯವೇ?
ಜನಲೋಕಪಾಲ್ ಜಾರಿಗಾಗಿ ಅಣ್ಣಾ ಹಜಾರೆ ಮತ್ತು ತಂಡ ಸತ್ಯಾಗ್ರಹಕ್ಕೆ ಕುಳಿತಿದೆ. ಆದರೆ ಅದು ಜಾರಿಯಾಗುವ ಯಾವ ಸಾಧ್ಯತೆಯೂ ಗೋಚರಿಸುತ್ತಿಲ್ಲ. ಜನಲೋಕಪಾಲ್ ಬೇಕು ಎಂದು ಚಳವಳಿಗೆ ಇಳಿದಿರುವವರ ಪೈಕಿ ಶೇ.೯೯ರಷ್ಟಕ್ಕೂ ಹೆಚ್ಚು ಮಂದಿ ಅದನ್ನೊಮ್ಮೆ ಓದಿಕೊಂಡೇ ಇಲ್ಲ. ಅಣ್ಣಾ ಹಜಾರೆಯವರ ಜನಲೋಕಪಾಲ್ ಹಾಗು ಸರ್ಕಾರ ತರಲು ಹೊರಟಿರುವ ಲೋಕಪಾಲ್ ನಡುವೆ ಇರುವ ವ್ಯತ್ಯಾಸಗಳೂ ಅವರಿಗೆ ಗೊತ್ತಿಲ್ಲ.
ಕಾಂಗ್ರೆಸ್, ಬಿಜೆಪಿ, ಎಡಪಕ್ಷಗಳು ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಇವತ್ತು ಲೋಕಸಭೆಯಲ್ಲಿ ಮಾತನಾಡಿದ್ದನ್ನು ಗಮನಿಸಿದರೆ ಜನಲೋಕಪಾಲ ಜಾರಿಯಾಗುವ ಯಾವ ಸಾಧ್ಯತೆಯೂ ಕಾಣುತ್ತಿಲ್ಲ. ಮಸೂದೆ ಸಿದ್ಧಪಡಿಸುವುದು ನಮ್ಮ ಕೆಲಸ, ಸಂಸತ್ತಿನ ಹೊರಗೆ ಕುಳಿತ ವ್ಯಕ್ತಿಯದಲ್ಲ ಎಂಬುದು ಸಂಸತ್ ಸದಸ್ಯರ ಪಟ್ಟು. ನಾವು ಸಿದ್ಧಪಡಿಸಿರುವ ಕರಡನ್ನೇ ನೀವು ಒಪ್ಪಿ ಎಂಬುದು ಅಣ್ಣಾ ತಂಡದ ಆಗ್ರಹ.
ಉಪವಾಸ ಸತ್ಯಾಗ್ರಹದ ಮೂಲಕ ಕೇಂದ್ರ ಸರ್ಕಾರವನ್ನು ಮಣಿಸಬಹುದು ಎಂಬುದು ಅಣ್ಣಾ ತಂಡದ ಎಣಿಕೆ. ಅವರನ್ನು ಜೈಲಿಗೆ ಕಳಿಸಿ, ಬಲಪ್ರಯೋಗ ಮಾಡಿ, ಕಾನೂನು-ಕಟ್ಲೆ ಮುಂದಿಟ್ಟುಕೊಂಡು ಎದ್ದೇಳಿಸಬಹುದು ಎಂಬುದು ಕೇಂದ್ರ ಸರ್ಕಾರದ ಲೆಕ್ಕಾಚಾರ. ಹಾವು ಸಾಯೋದಿಲ್ಲ, ಕೋಲು ಮುರಿಯೋದಿಲ್ಲ.
ಅಣ್ಣಾ ಚಳವಳಿಗೆ ಧುಮುಕಿರುವವರನ್ನು ಗಮನಿಸಿ ನೋಡಿ. ತರೇಹವಾರಿ ಜನಗಳು ಕಾಣಿಸ್ತಾ ಇದ್ದಾರೆ. ಒಂದು ವರ್ಗ ನಿಜವಾದ, ಪ್ರಾಮಾಣಿಕ ಕಳಕಳಿಯಿಂದ ಬಂದಿರುವವರು. ಭ್ರಷ್ಟಾಚಾರದಿಂದ ರೋಸಿದ ಜನರು ಇವರು. ಜನಲೋಕಪಾಲ್ ಬಂದರೆ ಯಾವುದೋ ಅಗೋಚರ ಯಕ್ಷಿಣಿಯ ಹಾಗೆ ಭ್ರಷ್ಟಾಚಾರ ಎಂಬುದು ದಿಢೀರನೆ ಮಾಯವಾಗುತ್ತೆ ಎಂಬುದು ಇವರ ನಂಬುಗೆ.

ಮತ್ತೊಂದು ವರ್ಗ ನಮ್ಮ ಸಂಸದೀಯ ಪ್ರಜಾಸತ್ತೆಯನ್ನೇ ನಂಬದವರು. ಈ ದೇಶ ಸರಿ ಹೋಗಬೇಕು ಅಂದ್ರೆ ಮಿಲಿಟರಿ ಆಡಳಿತ ಬರಬೇಕು ಕಣ್ರೀ ಎಂದು ಮಾತನಾಡುವ ಬೇಜವಾಬ್ದಾರಿ, ಅಪಾಯಕಾರಿ, ಅಪ್ರಬುದ್ಧ ಮನಸ್ಸುಗಳು.
ಇನ್ನೊಂದು ವರ್ಗ ನೇರಾನೇರ ಭ್ರಷ್ಟರೇ. ಸಮಾಜದ ಎದುರು ತಾವು ಆದರ್ಶವಾದಿಗಳೆಂದು ಫೋಸು ಕೊಡಲು ಬಯಸುವವರು. ತಮ್ಮ ಕಳಂಕಗಳನ್ನು ಈ ಮೂಲಕವಾದರೂ ತೊಳೆದುಕೊಳ್ಳಲು ಬಯಸುವವರು. ಪಾಪ ಮಾಡಿ ದೇವರ ಹುಂಡಿಗೆ ಹಣ ಹಾಕುವ ಶೈಲಿಯ ಜನರು ಇವರು.
ಮಗದೊಂದು ವರ್ಗ ಅಪ್ಪಟ ರಾಜಕೀಯ ಕಾರಣಗಳಿಗಾಗಿ ಬಂದಿರುವವರು. ಜನ ಲೋಕಪಾಲ್ ಆಗಲಿ ಇನ್ನೊಂದಾಗಲಿ ಅವರಿಗೆ ಮುಖ್ಯವಲ್ಲ. ಚಳವಳಿ ಸಹಜವಾಗಿಯೇ ಕೇಂದ್ರ ಸರ್ಕಾರದ ವಿರುದ್ಧ ಇರುವುದರಿಂದ ಜನರ ಆಕ್ರೋಶವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವವರು.
ಮತ್ತೂ ಒಂದು ವರ್ಗವಿದೆ. ಅದು ಪ್ರಚಾರಪ್ರಿಯರ ವರ್ಗ. ಅವರಿಗೆ ಟಿವಿಗಳಲ್ಲಿ ಕಾಣಿಸಿಕೊಳ್ಳಬೇಕು, ಪತ್ರಿಕೆಗಳಲ್ಲಿ ತಮ್ಮ ಹೆಸರು ಬರಬೇಕು. ಒಂದು ವೇಳೆ ಹೆಸರು ಬರುತ್ತದೆ ಎಂದರೆ ಇದೇ ಜನರು ಜನಲೋಕಪಾಲದ ವಿರುದ್ಧವೇ ಮಾತನಾಡಬಲ್ಲರು.
ನಾಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೂ ಭ್ರಷ್ಟಾಚಾರದ ವಿರುದ್ಧ, ಜನಲೋಕಪಾಲದ ಪರವಾಗಿ ಪ್ರತಿಭಟನೆ ನಡೆಸಲಿದ್ದಾರೆ. ಯಡಿಯೂರಪ್ಪ ಮತ್ತು ಸಂತೋಷ್ ಹೆಗ್ಡೆ ಇಬ್ಬರೂ ಭ್ರಷ್ಟಾಚಾರದ ವಿರುದ್ಧ ಒಟ್ಟಿಗೆ ನಿಂತು ಘೋಷಣೆ ಕೂಗುವಂತಾಗುವುದೇ ಕ್ರೂರ ವ್ಯಂಗ್ಯ. ಇನ್ನೂ ಯಾರ‍್ಯಾರು ಅಣ್ಣಾ ಬೆನ್ನಿಗೆ ನಿಲ್ಲುತ್ತಾರೋ ಗೊತ್ತಿಲ್ಲ.
ಸರಿಯಾಗಿ ಗಮನಿಸಿದರೆ ದಿಲ್ಲಿಯ ಜಂತರ್ ಮಂತರ್‌ನಲ್ಲಿ, ಇಂಡಿಯಾ ಗೇಟ್‌ನಲ್ಲಿ, ತಿಹಾರ್ ಜೈಲಿನ ಮುಂದೆ ಮೇಲೆ ಉಲ್ಲೇಖಿಸಿದ ಎಲ್ಲ ವೆರೈಟಿಯ ಜನರೂ ಕಾಣಿಸುತ್ತಾರೆ. ಕೆಲವರ ಕೈಯಲ್ಲಿ ರಾಷ್ಟ್ರಧ್ವಜ, ಕೆಲವರ ಕೈಯಲ್ಲಿ ಕೇಸರಿ ಧ್ವಜ, ಮತ್ತೆ ಕೆಲವರ ಕೈಯಲ್ಲಿ ಇನ್ನ್ಯಾವುದೋ ವೆರೈಟಿಯ ಧ್ವಜಗಳು. ಒಬ್ಬ ಬಾಬಾ ರಾಮದೇವ ಅದ್ಯಾವುದೋ ಕಾರು ಹತ್ತಿ ನಿಂತು ಮದುಮಗನಂತೆ ಫೋಜು ಕೊಟ್ಟು ಕೈ ಬೀಸುತ್ತಾರೆ. ಚಳವಳಿಯ ನಾಯಕರ‍್ಯಾರಾದರೂ ಬಂದು, ಇದು ಪೊಲಿಟಿಕಲ್ ರ‍್ಯಾಲಿ ಅಲ್ಲ, ಸುಮ್ಮನೆ ಇಳಿದು ಕುಳಿತುಕೊಳ್ಳಿ ಎಂದು ಗದರಿಸಿ ಹೇಳುವುದಿಲ್ಲ. ಚಳವಳಿ ಹಾದಿ ತಪ್ಪಿರುವ ಲಕ್ಷಣ ಇದು. ನಾಳೆ ರ‍್ಯಾಲಿ ನಡೆಸುವಾಗ ಯಾರೋ ಒಬ್ಬ ಅಥವಾ ಒಂದು ಗುಂಪು ಕಲ್ಲು ಬೀಸಲು ನಿಂತಿತೆಂದರೆ ಅದನ್ನು ನಿಯಂತ್ರಿಸುವವರು ಯಾರು?
ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಹೋಗಿ ಬನ್ನಿ. ಅಲ್ಲಿ ಚಳವಳಿಯನ್ನು ನಿಯಂತ್ರಿಸುವ ಬಹುತೇಕರಿಗೆ ಕನ್ನಡವೇ ಗೊತ್ತಿಲ್ಲ. ಎಲ್ಲಿಂದ ಬಂದ ಜನರು ಇವರು? ಇವರೆಲ್ಲ ಹೇಗೆ ಉದ್ಭವವಾದರು? ಚಳವಳಿಗೆ ಬರುವವರ ಪೈಕಿ ಯಾರು ಪ್ರಾಮಾಣಿಕರು, ಯಾರು ಭ್ರಷ್ಟರೆಂದು ಇವರು ಹೇಗೆ ನಿರ್ಧರಿಸುತ್ತಾರೆ? ಈ ಹಿಂದೆ ಭ್ರಷ್ಟಾಚಾರದಂಥ ಇನ್ನೂ ನೂರಾರು ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಡೆದ ಸಾವಿರಾರು ಚಳವಳಿಗಳಲ್ಲಿ ಇವರ‍್ಯಾರೂ ಕಾಣಿಸಿಯೇ ಇರಲಿಲ್ಲವಲ್ಲ, ಯಾಕೆ?
ಕರ್ನಾಟಕದಲ್ಲಿ ಹಿಂದೆಲ್ಲ ಚಳವಳಿಗಳು ಘಟಿಸಿವೆ. ರೈತ ಚಳವಳಿ ಇಲ್ಲಿ ಸರ್ಕಾರವನ್ನೇ ಉರುಳಿಸುವಷ್ಟು ಶಕ್ತಿಶಾಲಿಯಾಗಿತ್ತು. ಚಳವಳಿಗಾರರಿಗೆ ಒಂದು ನೈತಿಕ ಸಂಹಿತೆ ಇತ್ತು. ಅವರು ಸರಳ ವಿವಾಹವಾಗುತ್ತಿದ್ದರು. ಅದ್ದೂರಿ ಮದುವೆಗಳಿಗೆ ಹೋಗುತ್ತಿರಲಿಲ್ಲ. ಇವತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರರಿಗೆ ಇಂಥದ್ದೊಂದು ನೀತಿಸಂಹಿತೆ ಬೇಡವೇ? ನಮ್ಮೆಲ್ಲರ ಎದೆಯೊಳಗೇ ಒಂದು ಚಳವಳಿಯ ಕಿಚ್ಚು ಹೊತ್ತಬೇಕಲ್ಲವೇ? ನಮ್ಮೊಳಗಿನ ಲಾಲಸೆ, ಕೊಳ್ಳುಬಾಕತನ, ಜಾತೀಯತೆ, ಧರ್ಮಾಂಧತೆಯ ವಿರುದ್ಧ ನಾವು ಹೋರಾಡಬೇಕಲ್ಲವೇ? ಇಂಥ ಕೆಲಸವನ್ನು ನಮ್ಮದೇ ನೆಲದಲ್ಲಿ ನಡೆದ ರೈತ-ದಲಿತ ಚಳವಳಿಗಳು ಮಾಡಿದ್ದವಲ್ಲವೇ? ಗಾಂಧೀಜಿಯವರ ಆಂದೋಲನವೂ ನಿರಂತರವಾಗಿ ಆತ್ಮಶೋಧನೆ ಮತ್ತು ಆತ್ಮಶುದ್ಧಿಯನ್ನೇ ಕೇಂದ್ರೀಕರಿಸಿತ್ತಲ್ಲವೇ?
ಅಣ್ಣಾ ಹಜಾರೆ ನಮ್ಮ ನಡುವೆಯಿಂದ ಎದ್ದ ಸೂಪರ್ ಹೀರೋ ಹಾಗೆ ಕಾಣುತ್ತಿದ್ದಾರೆ. ಹಜಾರೆ ನಮ್ಮ ಒಳಗಿನ ಫ್ಯಾಂಟಸಿಗಳಿಗೆ ಮೂರ್ತ ರೂಪ ಕೊಡುತ್ತಿರುವ ಪಾತ್ರವಷ್ಟೆ. ಈ ಫ್ಯಾಂಟಸಿಗಳು ಯಾಕೆ ಹುಟ್ಟುತ್ತವೆಂದರೆ ನಾವು ಸಹಜವಾಗಿ, ಸರಳವಾಗಿ ಬದುಕಲು ಕಲಿಯದವರು. ಸದಾ ಅತೀಂದ್ರಿಯ, ಅತಿಮಾನುಷ ಶಕ್ತಿಗಳ ಕಡೆಗೆ ಕೈ ಚಾಚಿ ನಿಂತವರು ನಾವು. ಅಣ್ಣಾ ಸಹಾ ನಮಗೆ ಈಗ ಅತಿಮಾನುಷರಂತೆ ಕಾಣುತ್ತಿರುವುದರ ಹಿನ್ನೆಲೆಯಲ್ಲಿರುವುದು ಅಸಹಾಯಕತೆ, ಬೇಜವಾಬ್ದಾರಿ, ಕೀಳರಿಮೆ, ಸ್ವಾರ್ಥ ಮುಂತಾದ ದೌರ್ಬಲ್ಯಗಳೇ ಅಲ್ಲವೇ? ನಾವು ಯಾವತ್ತು ಸಮಷ್ಠಿ ಪ್ರಜ್ಞೆಯಿಂದ ವ್ಯವಹರಿಸಿದ್ದೇವೆ? ಯಾಕೆ ನಮ್ಮ ನಾಡಿನ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡು ಸತ್ತರೆ ಅದು ನಮ್ಮನ್ನು ಭಾದಿಸುವುದಿಲ್ಲ? ಮಲದ ಗುಂಡಿಯನ್ನು ಶುದ್ಧಗೊಳಿಸಲು ಹೋಗಿ ನಮ್ಮದೇ ಅಣ್ಣತಮ್ಮಂದಿರಂಥ ಯುವಕರು ಸತ್ತರೂ ನಮ್ಮನ್ನೇಕೆ ಅದು ಕದಲಿಸುವುದಿಲ್ಲ? ನಮ್ಮ ಸುತ್ತಲಿರುವ ಜನರ ಸಮಸ್ಯೆಗಳಿಗೆ ಕುರುಡಾಗೇ ಇರುವ ನಾವು ನಮ್ಮ ಅಸ್ತಿತ್ವದ ಸಮಸ್ಯೆ ಬಂದಾಗ ಯಾಕೆ ವಿಚಲಿತರಾಗುತ್ತೇವೆ?
ಹಳ್ಳಿಗಳಲ್ಲಿ ಬದುಕುವ ಜನರು ನಗರಗಳ ಮಧ್ಯಮ ವರ್ಗದ ನಾಗರಿಕರಿಗಿಂತ ಪ್ರಾಮಾಣಿಕರಾಗೇ ಇದ್ದಾರೆ. ಹಾಸಿಗೆ ಇದ್ದಷ್ಟು ಕಾಲು ಚಾಚಿ ಅವರಿಗೆ ಅಭ್ಯಾಸ. ಹಾಸಿಗೆಯಿಂದ ಹೊರಗೆ ಕಾಲು ಇಟ್ಟವರು ಕೊಳ್ಳುಬಾಕ ಸಂಸ್ಕೃತಿಗೆ ಬಲಿಯಾಗಿರುವ ನಗರವಾಸಿಗಳು ಮಾತ್ರ. ಸೂಪರ್ ಹೀರೋಗಳನ್ನು ಸೃಷ್ಟಿಸಿಕೊಳ್ಳುವುದರ ಜತೆಗೆ ಸೂಪರ್ ವಿಲನ್‌ಗಳನ್ನೂ ನಾವು ಸೃಷ್ಟಿಸಿಕೊಳ್ಳುತ್ತೇವೆ. ನಮ್ಮ ಬದುಕಿನ ಎಲ್ಲ ವೈಫಲ್ಯಗಳಿಗೂ ಈ ಸೂಪರ್ ವಿಲನ್‌ಗಳೇ ಕಾರಣ ಎಂದು ನಾವೆಲ್ಲರೂ ಭಾವಿಸಿದ್ದೇವೆ. ಸದ್ಯಕ್ಕೆ ಸೂಪರ್ ವಿಲನ್‌ಗಳ ಜಾಗದಲ್ಲಿ ರಾಜಕಾರಣಿಗಳಿದ್ದಾರೆ. ನಾವು ಪುಂಖಾನುಪುಂಖ ಬೈಯುತ್ತಿದ್ದೇವೆ.
ಇದೆಲ್ಲದರ ನಡುವೆ ಅಣ್ಣಾ ಹಜಾರೆಯವರನ್ನು ಹುತಾತ್ಮರನ್ನಾಗಿಸುವ ಯತ್ನಗಳೇನಾದರೂ ನಡೆಯುತ್ತಿವೆಯೇ ಎಂಬ ಆತಂಕ ಕಾಡುತ್ತಿದೆ. ಅಣ್ಣಾ ಸಹ ಮುಗ್ಧರಾಗಿ ಇಂಥ ಹುಚ್ಚು ಸಾಹಸಕ್ಕೆ ಮುಂದಾಗುತ್ತಿದ್ದಾರೋ ಎಂಬ ಭೀತಿಯೂ ಕಾಡುತ್ತಿದೆ.
ಅಣ್ಣಾಗೆ ಸಂಸತ್ತಿನ ಮೇಲೆ ನಂಬಿಕೆ ಇದೆ, ಆದರೆ ಒಳಗೆ ಕುಳಿತಿರುವ ಸದಸ್ಯರ ಮೇಲಲ್ಲ. ಇದು ಅವರದೇ ಹೇಳಿಕೆ. ಹೀಗಿರುವಾಗ ಅಣ್ಣಾ ಮತ್ತು ತಂಡ ಸದ್ಯ ಕೈಗೊಳ್ಳಬಹುದಾದ ವಿವೇಕದ ತೀರ್ಮಾನವೇನೆಂದರೆ ಅವರ ನಂಬುಗೆ ಕಳೆದುಕೊಂಡಿರುವ ಸಂಸತ್ ಸದಸ್ಯರು ಕುಳಿತುಕೊಳ್ಳುವ ಜಾಗದಲ್ಲಿ ಅವರೇ ಬಂದು ಕೂರುವುದು. ಇದು ಸಾಧ್ಯವಾಗುವುದು ಜನತಾಂತ್ರಿಕ ವ್ಯವಸ್ಥೆಯ ಅತ್ಯುನ್ನತ ಕ್ರಮವಾಗಿರುವ ಚುನಾವಣೆಗಳ ಮೂಲಕ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀವು ರಾಜಕಾರಣಿಗಳನ್ನು ದೂಷಿಸಿ, ಸರಿದಾರಿಗೆ ತರಲು ಯತ್ನಿಸಿ ವಿಫಲರಾಗುವುದಾದರೆ, ನೀವೇ ಆ ನಾಯಕತ್ವ ವಹಿಸಿಕೊಳ್ಳಲೂ ತಯಾರಿರಬೇಕಾಗುತ್ತದೆ. ಅಣ್ಣಾ ಈಗಾಗಲೇ ಯುವಜನತೆಗೆ ನಾಯಕತ್ವ ನೀಡಿದ್ದಾರೆ. ನಾಯಕತ್ವದ ಹೊಣೆಗಾರಿಕೆಯನ್ನು ನಿಭಾಯಿಸುವುದು ಸುಲಭದ ವಿಷಯವಲ್ಲ. ಅಣ್ಣಾ ಮತ್ತು ತಂಡ ತಮಗಿರುವ ಜನಬೆಂಬಲವನ್ನು ಅಧಿಕೃತವಾಗಿ ದೃಢಪಡಿಸಿಕೊಳ್ಳಬೇಕಿರುವುದು ಚುನಾವಣೆಗಳ ಮೂಲಕವೇ. ಸಂಸತ್ತಿನ ಹೊರಗೆ ನಿಂತು ತಾವು ಸಿದ್ಧಪಡಿಸಿದ ಮಸೂದೆಯನ್ನೇ ಪಾಸು ಮಾಡಿ ಎಂದು ಪ್ರಾಯೋಗಿಕವಲ್ಲದ ಬೇಡಿಕೆ ಮಂಡಿಸುವುದಕ್ಕಿಂತ ಸಂಸತ್ತಿನ ಒಳಗೆ ಪ್ರವೇಶಿಸಿ ಕಾಯಿದೆ ರೂಪಿಸುವ ಅಧಿಕೃತ ಹಕ್ಕು ಪಡೆದು ಅದನ್ನು ಮಾಡುವುದು ಒಳ್ಳೆಯದು.
ಇದೆಲ್ಲವನ್ನು ಹೇಳುತ್ತಿರುವಾಗ ದೇಶದ ಉದ್ದಗಲದಲ್ಲಿ ನಡೆಯುತ್ತಿರುವ ಭಾವಾವೇಶದ ಹೋರಾಟಗಳನ್ನು ಗಮನಿಸಿ ನೋಡಿ. ಜನಲೋಕಪಾಲ ಜಾರಿಯಾಗಲಾರದ ಸಂಕೀರ್ಣ ರಾಜಕೀಯ ವ್ಯವಸ್ಥೆಯಿರುವ ಈ ಹೊತ್ತಿನಲ್ಲಿ, ಇಡೀ ಚಳವಳಿಯ ಫಲಿತವು ದೇಶದ ಯುವಸಮುದಾಯವನ್ನು ಇನ್ನಷ್ಟು ಹತಾಶೆಗೆ ತಳ್ಳುತ್ತದಾ ಎಂಬ ನಿಜವಾದ ಆತಂಕ ನಮ್ಮದು.
ಸಂಬಂಧಿತ ಲೇಖನಗಳು:
ವಿ ದ ಕಾಮನ್ ಪೀಪಲ್ ಆಫ್ ಇಂಡಿಯಾ... ಎದ್ದು ನಿಂತಿದ್ದೇವೆ..
发表评论