ಭಾರತ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದಂತೆ ವೀರಾವೇಶದಿಂದ ಆಡಿದ ದೋನಿಪಡೆ ಕ್ರಿಕೆಟ್ ಕಾರ್ಗಿಲ್‌ನಲ್ಲಿ ಅಫ್ರಿದಿ ಸೈನ್ಯಕ್ಕೆ ತಮ್ಮ ದೇಶದ ದಾರಿ ತೋರಿಸಿದರು...

ಹೀಗೆ ಬರೆದದ್ದು ನಮ್ಮ ಹೆಮ್ಮೆಯ ಪ್ರಜಾವಾಣಿ. (ಮಾರ್ಚ್ ೩೧, ಅಗ್ರಸುದ್ದಿ)

ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಹಿಂದೆಂದಿಗಿಂತಲೂ ಮೀಡಿಯಾ ಹೈಪ್ ಇದ್ದದ್ದು ನಿಜ. ಬಹುತೇಕ ಮಾಧ್ಯಮಗಳು ಇದನ್ನು ಯುದ್ಧ-ಸಮರ ಎಂದು ಬಿಂಬಿಸಿದ್ದೂ ನಿಜ. ಆದರೆ ಮೊಹಾಲಿಯ ಪಂದ್ಯವನ್ನು ಕಾರ್ಗಿಲ್ ಯುದ್ಧಕ್ಕೆ ಹೋಲಿಸುವ ದಾರ್ಷ್ಟ್ಯವನ್ನು ಯಾರೂ ತೋರಿಸಿರಲಿಲ್ಲ. ಅದನ್ನು ಮಾಡಿದ್ದು ಪ್ರಜಾವಾಣಿ.

ಹಾಗಂತ ಇದನ್ನು ಬರೆದವರು ನಿನ್ನೆ ಮೊನ್ನೆ ಪತ್ರಿಕಾ ಕ್ಷೇತ್ರಕ್ಕೆ ಕಾಲಿಟ್ಟ ಬಿಸಿರಕ್ತದ ಪತ್ರಕರ್ತರೇನೂ ಅಲ್ಲ. ಕ್ರೀಡೆಯ ಬಗ್ಗೆ ಗೊತ್ತಿಲ್ಲದ ರಾಜಕೀಯ ವರದಿಗಾರರೂ ಅಲ್ಲ. ಹೀಗೆ ಅಗ್ರ ಸುದ್ದಿಯನ್ನು ಬರೆದವರು ಗೋಪಾಲಕೃಷ್ಣ ಹೆಗಡೆ. ಅವರು ಹಿರಿಯರು, ಪ್ರಜಾವಾಣಿಯಲ್ಲಿ ವರ್ಷಾನುವರ್ಷ ಕ್ರೀಡಾ ವರದಿಗಾರರಾಗೇ ಹೆಸರು ಮಾಡಿದವರು. ಅವರೀಗ ಸ್ಥಾನಿಕ ಸಂಪಾದಕರು. ಸದ್ಯದಲ್ಲೇ ಪ್ರಜಾವಾಣಿಯಲ್ಲಿ ಅವರು ಮಹತ್ವದ ಹುದ್ದೆಯನ್ನು ಅಲಂಕರಿಸಲಿರುವವರು.

ಒಂದೇ ವಾಕ್ಯಕ್ಕೆ ನೂರೆಂಟು ತಕರಾರುಗಳಿವೆ. ಅದನ್ನೆಲ್ಲ ಹೇಳುವ ಮುನ್ನ ಇದೇ ಪ್ರಜಾವಾಣಿಯ ವಾಚಕರ ವಾಣಿಯಲ್ಲಿ ಚಿಂತಕ ಶಿವಸುಂದರ್ ಬರೆದ ಒಂದು ಪುಟ್ಟ ಪತ್ರವನ್ನೊಮ್ಮೆ ಓದಿಕೊಳ್ಳಿ. (ಏಪ್ರಿಲ್, ೧)

ಬದಲಾಗುತ್ತಿರುವ ರಾಜಕಾರಣಕ್ಕೆ ತಕ್ಕಂತೆ ಕ್ರೀಡಾ ಮನೋಧರ್ಮವೂ ಬದಲಾಗುತ್ತಿದೆ. ಅಥವಾ ಬದಲು ಮಾಡಲಾಗುತ್ತಿದೆ. ಭಾರತ-ಪಾಕಿಸ್ತಾನದ ನಡುವಿನ ಒಂದು ಕ್ರಿಕೆಟ್ ಪಂದ್ಯವನ್ನು ಎರಡು ರಾಷ್ಟ್ರಗಳ ನಡುವೆ ನಡೆಯಲಿರುವ ನಾಲ್ಕನೇ ಸಮರವೇನೋ ಎಂಬಂತೆ ಮಾಧ್ಯಮಗಳು ಒಂದು ಉನ್ಮಾದವನ್ನೇ ಸೃಷ್ಟಿಸಿದ್ದು ದುರದೃಷ್ಟಕರ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಕ್ರೀಡೆಗೆ ಭಾಷಿಕರ, ಧಾರ್ಮಿಕರ ಅಥವಾ ದೇಶಪ್ರೇಮದ ಪ್ರತಿಷ್ಠೆಯ ಪ್ರಶ್ನೆ ಲಗಾಯಿಸಿಬಿಟ್ಟರೆ ಅದು ಸಾಯುತ್ತದೆ. ಭಾಷೆ, ಧರ್ಮ ಮತ್ತು ದೇಶದ ಹೆಸರಲ್ಲಿ ಜನರನ್ನು ಒಡೆದು ಆಳುವ ರಾಜಕಾರಣಕ್ಕೆ ಕ್ರೀಡೆ ಮತ್ತು ಜನ ಬಲಿಪಶುಗಳಾಗುತ್ತಾರೆ. ಮೊಹಾಲಿಯಲ್ಲಿ ನಡೆದ ಕ್ರಿಕೆಟ್ ಪಂದ್ಯವನ್ನು ಕಾರ್ಗಿಲ್ ಯುದ್ಧ ಎಂದು ವರ್ಣಿಸಿದ ಮಾಧ್ಯಮಗಳ ನಿಲುವು ವಿಚಿತ್ರ.

ಒಂದು ವಿಶೇಷವನ್ನು ನೀವು ಗಮನಿಸಲೇಬೇಕು. ಮೊಹಾಲಿ ಪಂದ್ಯವನ್ನು ಕಾರ್ಗಿಲ್ ಯುದ್ಧಕ್ಕೆ ಹೋಲಿಸಿ ಗೋಪಾಲಕೃಷ್ಣ ಹೆಗಡೆ ಅಗ್ರಸುದ್ದಿ ಬರೆದ ಮರುದಿನವೇ ಶಿವಸುಂದರ್ ಅವರ ಪತ್ರ ವಾಚಕರ ವಾಣಿಯಲ್ಲಿ ಪ್ರಕಟಗೊಂಡಿದೆ. ಹೀಗೆ ಪತ್ರ ಪ್ರಕಟಿಸುವ ಮೂಲಕ ಪ್ರಜಾವಾಣಿ ಒಂದು ಸಣ್ಣ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿರಬಹುದೇ? ಅದಕ್ಕೂ ಮುನ್ನ ಸಂಪಾದಕೀಯ ಸಭೆಯಲ್ಲಿ ಈ ಕುರಿತು ಒಂದು ಚರ್ಚೆ ನಡೆದಿರಬಹುದೆ? ಗೊತ್ತಿಲ್ಲ.

ಆದರೆ ವಿಶ್ವಕಪ್ ಪಂದ್ಯಾವಳಿಯ ವರದಿಗಾರಿಕೆಯ ನೇತೃತ್ವ ವಹಿಸಿದ್ದಂತಿದ್ದ ಗೋಪಾಲಕೃಷ್ಣ ಹೆಗಡೆಯವರು ಬರೆಯುತ್ತಾ ಬಂದಿದ್ದೆಲ್ಲ ಇಂಥದ್ದೇ ಮಾತುಗಳು. ಮಾ.೨೯ರ ಪ್ರಜಾವಾಣಿಯಲ್ಲಿ ಕ್ರಿಕೆಟ್ ರಾಯಭಾರ; ಮುಳ್ಳಿನ ಗುಲಾಬಿ ಎಂಬ ಶೀರ್ಷಿಕೆಯಲ್ಲಿ ಹೆಗಡೆಯವರ ವಿಶ್ಲೇಷಣೆಯೊಂದು ಪ್ರಕಟವಾಗಿತ್ತು. ಪ್ರಜಾವಾಣಿ ಸುದ್ದಿಯನ್ನು ಎಡಿಟೋರಿಯಲೈಸ್ ಮಾಡುವ ಪರಂಪರೆ ಇಟ್ಟುಕೊಂಡಿಲ್ಲ. ಈಗ್ಗೆ ಹತ್ತು ವರ್ಷಗಳ ಕೆಳಗೆ ಯಾವ ಪತ್ರಿಕೆಯೂ ಸುದ್ದಿಯನ್ನು ಎಡಿಟೋರಿಯಲೈಸ್ ಮಾಡುತ್ತಿರಲಿಲ್ಲ. ಸುದ್ದಿ ಸುದ್ದಿಯಂತಿರುತ್ತಿತ್ತು ಅಷ್ಟೆ. ನಂತರ ಕನ್ನಡಪ್ರಭ, ವಿಜಯ ಕರ್ನಾಟಕ ಪತ್ರಿಕೆಗಳು ಅಂತ ಪ್ರಯೋಗಗಳನ್ನು ಮಾಡಿದವು, ಈಗಲೂ ಮಾಡುತ್ತಿವೆ.

ಆದರೆ ಗೋಪಾಲಕೃಷ್ಣ ಹೆಗಡೆಯವರ ಅಗ್ರ ಸುದ್ದಿ, ಪ್ರಜಾವಾಣಿಯ ಸಂಪಾದಕೀಯದಂತೆ ಮುಖಪಟದಲ್ಲಿ ಪ್ರಕಟಗೊಂಡಿತು. ಅದು ನಿಜಕ್ಕೂ ಒಬ್ಬ ಕ್ರೀಡಾ ವರದಿಗಾರ ಬರೆಯಬಹುದಾಗಿದ್ದ ಸುದ್ದಿಯೇ? ಹೋಗಲಿ, ರಾಜಕೀಯ ವರದಿಗಾರನಾದರೂ ಅಂಥ ಸುದ್ದಿ ಬರೆಯುವುದು ಸರಿಯೇ? ಪ್ರಜಾವಾಣಿ ಸಂಪಾದಕೀಯ ಬಳಗವೇ ಚರ್ಚೆ ನಡೆಸಬೇಕು.

ಗೋಪಾಲಕೃಷ್ಣ ಹೆಗಡೆಯವರ ಯುದ್ಧೋನ್ಮಾದ ಅವರೆಲ್ಲ ವರದಿಗಳಲ್ಲೂ ಖಾಯಂ ಆಗೇ ಇದ್ದಿದ್ದನ್ನು ಪ್ರಜಾವಾಣಿ ಓದುಗರು ಗಮನಿಸಿರಬಹುದು.

ಇದು ಮಿನಿ ಫೈನಲ್ ಅಲ್ಲ, ಮಹಾಯುದ್ಧ. ಭಾರತ ಮತ್ತು ಆಸ್ಟ್ರೇಲಿಯ ನಡುವಣ ಮದ್ದು ಗುಂಡಿಲ್ಲದ ಸಮರ... ಎಂದು ಅವರು ಭಾರತ-ಆಸ್ಟ್ರೇಲಿಯಾ ಪಂದ್ಯದ ದಿನವೂ ಬರೆದಿದ್ದರು.

ಯಾಕೀ ಯುದ್ಧೋನ್ಮಾದ? ಏನಿದರ ಹಿನ್ನೆಲೆ? ಕ್ರೀಡೆಗೂ ಯುದ್ಧಕ್ಕೂ ಎಲ್ಲಿಂದೆಲ್ಲಿಯ ಹೋಲಿಕೆ? ಕಾರ್ಗಿಲ್ ಸಮರಕ್ಕೆ ಮೊಹಾಲಿ ಪಂದ್ಯವನ್ನು ಹೋಲಿಸುವ ಗೋಪಾಲಕೃಷ್ಣ ಹೆಗಡೆಯವರು ಎಂದಾದರೂ ನಿಜವಾದ ರಣರಂಗ ಹೇಗಿರುತ್ತದೆ ಎಂದು ನೋಡಿದ್ದಾರಾ? ಬ್ಯಾಟು, ಬಾಲುಗಳು ಎಂದಾದರೂ ಫಿರಂಗಿ, ಬಾಂಬುಗಳಾಗಲು ಸಾಧ್ಯವೇ? ಯುದ್ಧದಲ್ಲಿ ಸತ್ತ ಸೈನಿಕರಿಗೆ ಯಕಶ್ಚಿತ್ ಕ್ರೀಡಾಳುಗಳನ್ನು ಹೋಲಿಸಲು ಸಾಧ್ಯವೇ?

ಸಹಸ್ತಾರು ಜನರ ರಕ್ತ ಚೆಲ್ಲಾಡುವ ಯುದ್ಧವನ್ನೂ ಸಹ ಫ್ಯಾಂಟಸಿಯೆಂಬಂತೆ ಭಾವಿಸುವವರಷ್ಟೇ ಹೀಗೆ ಲಘುವಾಗಿ ಒಂದು ನಿರ್ದಿಷ್ಟ ಪಂದ್ಯವನ್ನು ಒಂದು ನಿರ್ದಿಷ್ಟ ಯುದ್ಧಕ್ಕೆ ಹೋಲಿಸುವುದು ಸಾಧ್ಯವಲ್ಲವೆ?

ಒಂದು ವೇಳೆ ಪಾಕಿಸ್ತಾನವೇ ಪಂದ್ಯ ಗೆದ್ದಿದ್ದರೆ ಗೋಪಾಲಕೃಷ್ಣ ಹೆಗಡೆ ಏನು ಬರೆಯುತ್ತಿದ್ದರು? ಹಡಗಿನ ಮೂಲಕ ಮುಂಬೈಗೆ ನುಗ್ಗಿ ನೂರಾರು ಜನರನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರಂತೆ ಪಾಕಿಸ್ತಾನಿ ಆಟಗಾರರು ಭಾರತ ತಂಡವನ್ನು ಸರ್ವನಾಶಗೊಳಿಸಿದರು ಎಂದು ಬರೆಯುತ್ತಿದ್ದರೇ?

ಗೋಪಾಲಕೃಷ್ಣ ಹೆಗಡೆಯವರಿಗೆ ಶುಭವಾಗಲಿ, ಅವರ ಯುದ್ಧೋನ್ಮಾದ ಇನ್ನಾದರೂ ಕಡಿಮೆಯಾಗಲಿ.
0 komentar

Blog Archive