ದೇವಮಾನವ ಸಾಯಿಬಾಬಾ, ಭಗವಾನ್ ಸಾಯಿಬಾಬಾ, ಅವತಾರ ಪುರುಷ ಸಾಯಿಬಾಬಾ, ಪವಾಡಪುರುಷ ಸಾಯಿಬಾಬಾ, ದೇವದೂತ ಸಾಯಿಬಾಬಾ... ಹೀಗೆ ಬರೆಯುತ್ತಿವೆ ನಮ್ಮ ಮಾಧ್ಯಮಗಳು. ಟಿವಿಗಳಂತೂ ಒಂದು ಕೈ ಮೇಲೇ. ನಮ್ಮ ಮೀಡಿಯಾ ಮಂದಿಗೆ ಸತ್ಯ ಸಾಯಿಬಾಬಾ ಅಥವಾ ಸತ್ಯ ನಾರಾಯಣರಾಜು ದೇವರೂ ಅಲ್ಲ, ದೇವದೂತನೂ ಅಲ್ಲ ಅನ್ನೋದು ಎಲ್ಲರಿಗಿಂತ ಚೆನ್ನಾಗಿ ಗೊತ್ತಿದೆ. ಸಾಯಿಬಾಬಾ ನಮ್ಮ ನಿಮ್ಮಂತೆ ಹಸಿವು, ನಿದ್ರೆ, ಸಾವನ್ನು ಗೆಲ್ಲಲಾಗದ ಯಕಃಶ್ಚಿತ್ ಮನುಷ್ಯ ಎಂಬುದು ಸ್ಪಷ್ಟವಾಗಿ ತಿಳಿದಿದೆ. ಆದರೂ ಮೀಡಿಯಾಗಳು ಇದನ್ನೆಲ್ಲ ಬಹಿರಂಗವಾಗಿ ಹೇಳಲಾರವು.

ಸಾಯಿಬಾಬಾರನ್ನು ಭಾರತದ ಮಹಾನ್ ಅಧ್ಯಾತ್ಮ ಗುರು ಎಂದು ಬಿಂಬಿಸಲಾಗುತ್ತಿದೆ. ಅಧ್ಯಾತ್ಮ ಅನ್ನುವುದು ಸಂಯುಕ್ತ ಪದ. ಅಧಿ+ಆತ್ಮ ಅಧ್ಯಾತ್ಮವಾಗುತ್ತದೆ. ಅಧಿ ಎಂಬ ಪದಕ್ಕೆ ಶ್ರೇಷ್ಠವಾದ, ಉನ್ನತವಾದ ಎಂಬ ಅರ್ಥಗಳಿವೆ. ಆತ್ಮ ಶ್ರೇಷ್ಠವಾಗುವುದು, ಉನ್ನತವಾಗುವುದು ಹೇಗೆ? ಅದು ನಮ್ಮ ಆಚರಣೆಗಳಿಂದ, ನಡವಳಿಕೆಗಳಿಂದ. ಸಾಯಿಬಾಬಾ ಸುಳ್ಳು ಪವಾಡಗಳ ಮೂಲಕ ಬೆಳೆದವರು. ಆತ್ಮಕ್ಕೆ, ಅಧ್ಯಾತ್ಮಕ್ಕೆ ಸುಳ್ಳಿನ ಹಂಗಿರುತ್ತದೆಯೇ?

ಅಧ್ಯಾತ್ಮ ಎಂಬುದಕ್ಕೆ ಲೌಕಿಕ ಬದುಕಿನ ವ್ಯವಹಾರಗಳ ಸೋಂಕೇ ಇಲ್ಲವೇ? ಇದ್ದರೆ ಅದು ಹೇಗಿರಬೇಕು? ಬಸವಣ್ಣನ ಭಕ್ತಿ ಮಾರ್ಗದಲ್ಲಿ ಹರಿದು ಬಂದ ಅಧ್ಯಾತ್ಮ ಯಾವುದು? ಬಸವಣ್ಣನ ಆಧ್ಯಾತ್ಮಿಕತೆಯಲ್ಲಿ ಸಾಮಾಜಿಕ ಕಳಕಳಿಯಿತ್ತು, ಆತ್ಮನಿರೀಕ್ಷಣೆಯಿತ್ತು, ಜೀವಕಾರುಣ್ಯವಿತ್ತು, ಬಸವಣ್ಣನ ದೃಷ್ಟಿಯಲ್ಲಿ ಅಧ್ಯಾತ್ಮ ಕೇವಲ ಖಾಸಗಿಯಾದ ವಿಷಯವಾಗಿರಲಿಲ್ಲ. ಅದು ವೈಯಕ್ತಿಕ ಮೋಕ್ಷವೊಂದನ್ನೇ ಗುರಿಯಾಗಿ ಇಟ್ಟುಕೊಂಡಿರಲಿಲ್ಲ. ಬಸವಣ್ಣನ ಅಧ್ಯಾತ್ಮಕ್ಕೆ ಸಾಮಾಜಿಕ ಸಮಸ್ಯೆಗಳಿಗೆ ಮುಖಾಮುಖಿಯಾಗುವ ವ್ಯಾಪಕತೆಯಿತ್ತು. ಕಾಯಕ ಮತ್ತು ದಾಸೋಹದ ಮೂಲಕವೇ ಆತ್ಮೋನ್ನತಿಯ ಮಾರ್ಗವನ್ನು ತೋರಿದವರು ಬಸವಾದಿ ಶರಣರು. ವೈಯಕ್ತಿಕ ಮಟ್ಟದ ಆತ್ಮಶುದ್ಧಿ ಅವರಿಗಿತ್ತು. ತಮ್ಮ ಎಲ್ಲ ಕ್ರಿಯೆಗಳಲ್ಲೂ ಅವರು ಪರಿಶುದ್ಧರಾಗಿರಲು ಬಯಸುತ್ತಿದ್ದರು.

ಆದರೆ ಇವತ್ತು ಆಧ್ಯಾತ್ಮಿಕ ನಾಯಕರಿಗೆ ಆತ್ಮಶುದ್ಧಿ ಇದೆಯೇ? ಇವತ್ತು ಅಧ್ಯಾತ್ಮ ಕೂಡ ಮಾರಾಟದ ಸರಕು. ಬಾಬಾ ರಾಮದೇವ್, ರವಿಶಂಕರ್ ಗುರೂಜಿ, ಗಣಪತಿ ಸಚ್ಚಿದಾನಂದ ಸ್ವಾಮಿ, ಕೇರಳದ ಅಮ್ಮ... ಹೀಗೆ ಅಧ್ಯಾತ್ಮವನ್ನೇ ಬಿಜಿನೆಸ್ ಮಾಡಿಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಆ ಮೂಲಕವೇ ಸಾವಿರಾರು ಕೋಟಿ ರೂಪಾಯಿ ಗಳಿಸಿದವರಿದ್ದಾರೆ. ಆಧ್ಯಾತ್ಮಿಕ ಗುರುಗಳಿಗೆ ನಮ್ಮ ಸರ್ಕಾರಗಳು ತಲೆಬಾಗುತ್ತವೆ. ತರೇಹವಾರಿ ಟ್ಯಾಕ್ಸುಗಳಿಂದ ಮುಕ್ತರಾದವರು ಇವರು. ಆಸ್ತಿ, ಬಂಗಾರ, ಹಣ ಎಷ್ಟು ಮಾಡಿದ್ದಾರೆಂಬುದು ಸತ್ತ ನಂತರವೇ ಬಹಿರಂಗವಾಗಬೇಕು; ಒಮ್ಮೊಮ್ಮೆ ಅದೂ ಆಗುವುದಿಲ್ಲ.

ಭಾರತೀಯ ಪರಂಪರೆಯಲ್ಲಿ ಶ್ರೇಷ್ಠ ಸಾಧನೆಗಳನ್ನು ಮಾಡಿದವರಿಗೆ ಪವಾಡಗಳನ್ನು ಕಟ್ಟುವುದು ನಡೆದುಕೊಂಡುಬಂದ ರೀತಿ. ಮೌಢ್ಯ-ಕಂದಾಚಾರಗಳ ವಿರುದ್ಧ ಜೀವನಪೂರ್ತಿ ಸೆಣೆಸಿದ ಬಸವಣ್ಣನವರಿಗೇ ಪವಾಡಗಳನ್ನು ಆರೋಪಿಸಲಾಯಿತು. ಇವತ್ತಿಗೂ ಬಸವಣ್ಣನ ಪವಾಡಗಳನ್ನು ನಂಬುವವರಿದ್ದಾರೆ. ನಾನು ದೇವನೂ ಅಲ್ಲ, ದೇವದೂತನೂ ಅಲ್ಲ ಎಂದು ಘೋಷಿಸಿದ ಬುದ್ಧನಿಗೆ ಭಗವಾನ್ ಎಂಬ ಹೆಸರನ್ನು ಸೇರಿಸಿದವರು ನಾವು. ತನ್ನನ್ನು ಪವಾಡಪುರುಷನೆಂದು ನಂಬಿಬಂದಾಕೆಗೆ ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಸೂಚಿಸುವ ಮೂಲಕ ಬುದ್ಧ ತಾನು ಅತಿಮಾನವನಲ್ಲ ಎಂಬುದನ್ನು ಸ್ಪಷ್ಟವಾಗಿಯೇ ಹೇಳಿ, ಪವಾಡಗಳನ್ನು ಧಿಕ್ಕರಿಸಿದ. ಆದರೂ ನಮಗೆ ಈತ ಈಗ ಭಗವಾನ್ ಬುದ್ಧ!

ನೀವು ಯಾವುದೇ ಮಠ-ಪೀಠಗಳಿಗೆ ಹೋಗಿ ನೋಡಿ. ಮಠ ಕಟ್ಟಿದ ಗುರು, ಆನಂತರ ಬಂದು ಹೋದ ಮಠಾಧೀಶರ ಮೇಲೆ ಪವಾಡಗಳನ್ನು ಕಟ್ಟಲಾಗಿರುತ್ತದೆ. ಪವಾಡಗಳನ್ನು ಕಟ್ಟದ ಹೊರತು ಮಠಕ್ಕೆ ದೈವೀ ಕಳೆ ಬರಲಾರದು ಎಂಬುದು ಭಕ್ತರ ನಂಬುಗೆ ಇದ್ದಿರಬೇಕು. ಹೀಗಾಗಿ ತಮ್ಮ ಗುರುಗಳಿಗೆ ಅವರು ಪವಾಡಗಳನ್ನು ಕಟ್ಟಿದರು. ಸಾಮಾನ್ಯ ಮನುಷ್ಯರು, ಜನನಾಯಕರನ್ನು ಒಂದೇ ದೇವರನ್ನಾಗಿಸಿದರು ಅಥವಾ ದೇವಮಾನವರನ್ನಾಗಿಸಿದರು.

ಸತ್ಯ ಸಾಯಿಬಾಬಾ ಕೋಮುವಾದಿಯಾಗಿರಲಿಲ್ಲ. ಧರ್ಮಸಹಿಷ್ಣುತೆ ಅವರಿಗಿತ್ತು. ಹೀಗಾಗಿಯೇ ಅವರಿಗೆ ಎಲ್ಲ ಧರ್ಮಗಳ ಅನುಯಾಯಿಗಳಿದ್ದರು. ಸಾಮಾಜಿಕ ಸೇವೆ ಮಾಡುವ ಉತ್ಸಾಹ ಅವರಿಗಿತ್ತು. ತಮಗೆ ಬಂದ ಭಕ್ತರ ಕೊಡುಗೆಗಳನ್ನು ಅವರು ಬಡಬಗ್ಗರ ಅನುಕೂಲಕ್ಕಾಗಿ ಬಳಸಿದರು. ಎಲ್ಲವೂ ನಿಜ. ಆದರೆ ಇದಕ್ಕಾಗಿ ಅವರು ಕಂಡುಕೊಂಡಿದ್ದು ಕಪಟದ, ಮೋಸದ ಮಾರ್ಗ. ವಿಭೂತಿ, ಉಂಗುರ, ವಾಚುಗಳನ್ನು ಸೃಷ್ಟಿಸಿಕೊಡುವ ಅಗ್ಗದ ಇಂದ್ರಜಾಲವನ್ನು ಬಳಸಿ ಅವರು ಭಕ್ತರನ್ನು ಸೆಳೆದುಕೊಂಡರು. ಅವರ ಅಮಾಯಕ ಭಕ್ತರನ್ನು ಹೊರತುಪಡಿಸಿ, ಉಳಿದ ಎಲ್ಲರಿಗೂ ಮಿಗಿಲಾಗಿ ಸ್ವತಃ ಸಾಯಿಬಾಬಾ ಅವರಿಗೂ ಇದು ಗೊತ್ತಿತ್ತು. ಡಾ.ಎಚ್.ನರಸಿಂಹಯ್ಯ ಅವರು ಒಡ್ಡಿದ ಸವಾಲನ್ನು ಅವರು ಸ್ವೀಕರಿಸಲಿಲ್ಲ. ತುಂಬುತೋಳಿನ ನಿಲುವಂಗಿ ಧರಿಸುತ್ತಿದ್ದ ಸಾಯಿಬಾಬಾ ಅವರಿಂದ ಕುಂಬಳಕಾಯಿ ಸೃಷ್ಟಿಸುವುದು ಸಾಧ್ಯವಾಗಲಿಲ್ಲ.

ಭಾರತದ ಇತರ ಆಧ್ಯಾತ್ಮಿಕ ನಾಯಕರುಗಳಿಗೆ ಅವರ ಭಕ್ತರು ಪವಾಡಗಳನ್ನು ಆರೋಪಿಸಿದರು. ಆದರೆ ಸತ್ಯ ಸಾಯಿಬಾಬಾ ತಾವೇ ಪವಾಡಪುರುಷ ಎಂದು ಘೋಷಿಸಿಕೊಂಡರು. ಮಹಾತ್ಮರಿಗೆ ಅವತಾರಗಳನ್ನು ಸಹ ನಾವೇ ಹೇರುತ್ತ ಬಂದಿದ್ದೇವೆ. ಆದರೆ ಸಾಯಿಬಾಬಾ ತಮ್ಮನ್ನು ತಾವು ಶಿರಡಿ ಸಾಯಿಬಾಬಾ ಅವರ ಅವತಾರ ಎಂದು ಕರೆದುಕೊಂಡರು. ಹೀಗೆ ತಮ್ಮನ್ನು ತಾವು ಅವತಾರ ಪುರುಷ, ಪವಾಡ ಪುರುಷ ಎಂದು ಕರೆದುಕೊಂಡ, ಅದರಿಂದ ಯಶಸ್ಸು-ಕೀರ್ತಿ ಗಳಿಸಿದ ಆಧುನಿಕ ಕಾಲದ ಮೊದಲ ಧರ್ಮಗುರು ಸಾಯಿಬಾಬಾ ಅವರಿರಬೇಕು. ಸಾಯಿಬಾಬಾ ಅವರಿಂದ ಪ್ರೇರಿತರಾಗಿ ಈಗ ದೇಶದ ತುಂಬೆಲ್ಲ ಇಂಥ ಪವಾಡಪುರುಷರು ಸೃಷ್ಟಿಯಾಗಿದ್ದಾರೆ.

ಆದರೆ ಕಪಟ, ಮೋಸದಿಂದಲೇ ಜನರನ್ನು ವಂಚಿಸುವವರು ಆಧ್ಯಾತ್ಮಿಕ ನಾಯಕರಾಗುವುದು ಹೇಗೆ ಸಾಧ್ಯ? ತಾನು ವಂಚನೆಯ ಮೂಲಕವೇ ಭಕ್ತರನ್ನು ಸೆಳೆಯುತ್ತೇನೆ ಎಂದು ಗೊತ್ತಿರುವ ಗುರುಗಳು ಆಧ್ಯಾತ್ಮಿಕ ಸಾಧನೆ ಮಾಡುವುದಾದರೂ ಹೇಗೆ? ಆತ್ಮ ಶುದ್ಧಿ ಇಲ್ಲದಿದ್ದರೆ ಅಧ್ಯಾತ್ಮ ಒಲಿಯುವುದೆ?

ಸತ್ಯ ಸಾಯಿಬಾಬಾ ನಮ್ಮ ನಿಮ್ಮಂತೆಯೇ ಖಾಯಿಲೆ, ನೋವು ಅನುಭವಿಸಿ ಈಗ ತೀರಿಹೋಗಿದ್ದಾರೆ. ಅವರ ಪವಾಡಗಳು ಅವರ ಇಹವನ್ನೇ ರಕ್ಷಿಸಲಿಲ್ಲ. ಇನ್ನು ಪರರನ್ನು ರಕ್ಷಿಸುತ್ತಿದ್ದವೆಂದು ನಂಬುವುದು ಹೇಗೆ? ಪವಾಡಗಳಿದ್ದರೆ ತಾನೇ ರಕ್ಷಿಸುವುದು? ಈಗ ಪ್ರಶಾಂತಿ ನಿಲಯದಲ್ಲಿ ನಡೆಯುತ್ತಿರುವುದು ಅವರು ಸಂಗ್ರಹಿಸಿಟ್ಟ ಆಸ್ತಿಗಾಗಿ ಕದನ. ಲಕ್ಷ ಕೋಟಿ ಹಣ ಸಣ್ಣ ಮಾತೇ?

ಮುಂದೆ ಪ್ರೇಮಸಾಯಿಯಾಗಿ ಕರ್ನಾಟಕದ ಕಾವೇರಿ ನದಿ ತಟದಲ್ಲಿ ಹುಟ್ಟುತ್ತೇನೆ ಎಂದು ಸಾಯಿಬಾಬಾ ಹೇಳಿದ್ದರಂತೆ. ನಮ್ಮ ಮೀಡಿಯಾಗಳು ಬಾಬಾ ಸತ್ತ ದಿನ ಹುಟ್ಟಿದ ಮಕ್ಕಳ ಡೀಟೇಲುಗಳನ್ನು ಹುಡುಕಿ ಹುಡುಕಿ ಬರೆಯುತ್ತಿವೆ.

ಸಾಯಿಬಾಬಾ ಇನ್ನಿಲ್ಲವಾದ ಮೇಲಾದರೂ ನಾವು ಭಾರತೀಯರು ಪವಾಡಪುರುಷರನ್ನು ಧಿಕ್ಕರಿಸುವ ಕೆಲಸ ಮಾಡಬೇಕಿದೆ. ಸಾಯಿಬಾಬಾ ಅವರೇನೋ ಜನೋಪಯೋಗಿ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡರು. ಆದರೆ ಎಲ್ಲರೂ ಅಂಥವರೇ ಇರಬೇಕಿಲ್ಲ. ದೇವರ ದೂತ, ಜಗನ್ಮಾತೆಯ ಪುತ್ರ ಇತ್ಯಾದಿ ಹೇಳಿಕೊಂಡು ವಂಚಿಸುವವರನ್ನು ಸಾರ್ವಜನಿಕವಾಗಿ ಬಯಲಿಗೆಳೆಯುವ ಕೆಲಸ ಆಗಬೇಕಿದೆ. ಮೀಡಿಯಾಗಳು ಸಾಯಿ ಮೇನಿಯಾವನ್ನು ಹೀಗೇ ಮುಂದುವರೆಸಿದರೆ ನೂರಾರು ಮಂದಿ ಪ್ರೇಮಸಾಯಿಗಳು ಹುಟ್ಟಿಕೊಂಡಾರು! ಭಾರತ ಬೂದಿಬಾಬಾಗಳ, ವಾಮಾಚಾರಿಗಳ, ವಂಚಕ ಜ್ಯೋತಿಷಿಗಳ ಸ್ವರ್ಗವಾಗುವುದು ಬೇಡ.

ಪ್ರಜ್ಞೆ ಮತ್ತು ಎಚ್ಚರ ಎಲ್ಲರಲ್ಲೂ ಇರಲಿ ಎಂದು ಆಶಿಸೋಣ.
0 komentar

Blog Archive