ಜಪಾನ್‌ನಲ್ಲಿ ಭೂಕಂಪ, ಸುನಾಮಿ ಇತ್ಯಾದಿಗಳೆಲ್ಲ ಯಾಕಾಯ್ತು ಗೊತ್ತಾ? ಮುಂಡೇವು ಹಾವು ತಿನ್ನುತ್ತಾರೆ ಕಣ್ರೀ. ಹಾವು ಅಂದ್ರೆ ದೇವರು. ಇವರು ಹಾವು ತಿನ್ನೋದರಿಂದನೇ ಸುನಾಮಿ ಆಗಿದ್ದು...
ಇದನ್ನು ಹೇಳಿದವರು ಯಾರು ಅಂತ ತುಂಬ ಕಷ್ಟದಿಂದ ಊಹೆ ಮಾಡಬೇಕಾಗಿಲ್ಲ. ಹೀಗೆಲ್ಲ ಮಾತನಾಡಬಲ್ಲವ ಕರ್ನಾಟಕದಲ್ಲಿ ಈಗ ವರ್ಲ್ಡ್ ಫೇಮಸ್ಸು. ಆತ ಬ್ರಹ್ಮಾಂಡವನ್ನೇ ಅಗೆದು, ಅರೆದು ಕುಡಿದಾತ. ಟಿವಿಗಳಲ್ಲಿ ಆತ ಮಾತನಾಡಲು ಕುಳಿತನೆಂದರೆ ಕುರ್ಚಿಯೇ ಬೆಚ್ಚುತ್ತದೆ. ಸ್ಟುಡಿಯೋದ ಹೈವೋಲ್ಟೇಜ್ ಲೈಟುಗಳೇ ಮಂಕಾಗಿಬಿಡುತ್ತವೆ. ಕೆನ್ನೆಗೆ, ಇಡೀ ಮುಖಕ್ಕೆ, ಕೈಗೆ ಅರಿಶಿನ ಮೆತ್ತಿಕೊಂಡ ಪರಿಣಾಮ ಇಡೀ ದೇಹವೇ ಹಳದಿಯಾಗಿ ಸುತ್ತಲೂ ಒಂದು ಪ್ರಭಾವಲಯ ನಿರ್ಮಾಣವಾದಂತೆ ತೋರುತ್ತದೆ. ಕಣ್ಣುಗಳು ವಿಕ್ಷಿಪ್ತ, ಬಾಯಿ ಬಿಟ್ಟರೆ ಬೆಳಕಿನ ವೇಗದಲ್ಲಿ ನಾಲಗೆ ಹೊರಳುತ್ತದೆ. ಎದೆಯ ಮೇಲೆ ಎರಡೂ ಕೈಗಳನ್ನು ಇಟ್ಟುಕೊಳ್ಳುತ್ತಾನೆ. ಒಂದರಲ್ಲಿ ತ್ರಿಶೂಲದ ಹಾಗೆ ಇರುವ ಒಂದು ಐಟಮ್ ಇರುತ್ತೆ. ಜಗತ್ತು ಪ್ರಳಯಕ್ಕೆ ಸಿಕ್ಕಿ ಭಸ್ಮವಾದರೂ ಈತನನ್ನು ಆ ಐಟಮ್ ಕಾಪಾಡಬಹುದೇನೋ?
ನೋಡ್ತಾ ಇರಿ, ಜಗನ್ಮಾತೆ ಭೂಲೋಕಕ್ಕೆ ಕಾಲಿಡುತ್ತಾ ಇದ್ದಾಳೆ. ಹಾಗಂತ ನನಗೆ ಅಪ್ಪಣೆಯಾಗಿದೆ. ಏನೂ ಆಗದೇ ಇರಲಿ ಅಂತ ಶ್ರೀಲಂಕಾಗೆ ನಾನು ಮತ್ತು ನನ್ನಂತಹ ಕೆಲವು ಸಾಧುಸಂತರು ಹೋಗಿ ದೀಪ ಹಚ್ಚಿ, ಪೂಜೆ ಸಲ್ಲಿಸಿ ಬಂದಿದ್ದೇವೆ. ಅವಳು ಕಾಲಿಡುವಾಗ ಏನೂ ಆಗಬಾರದು. ಅದಕ್ಕಾಗಿ ಯಾಗ ಮಾಡ್ತಾ ಇದ್ದೇನೆ. ನೀವು ಸಹ ಈ ಯಾಗದಲ್ಲಿ ಪಾಲ್ಗೊಳ್ಳಬಹುದು. ಫೀಜು ಇಷ್ಟೇನೆ. ಈ ನಂಬರ್‌ಗೆ ಫೋನ್ ಮಾಡಿ... ಅನ್ನುತ್ತೆ ಬ್ರಹ್ಮಾಂಡ ಸ್ವಾಮಿ. ಎಷ್ಟು ಜನ ಫೋನ್ ಮಾಡಿದ್ರು. ಎಷ್ಟು ದುಡ್ಡು ವಸೂಲಿಯಾಯ್ತು ಅಂತ ಚಾನಲ್‌ನವರನ್ನು ಕೇಳಿ ನೋಡಿ. ಆಕಾಶದ ಮೂಲೆಯಲ್ಲೆಲ್ಲೋ ಇರುವ ಗ್ರಹವೊಂದನ್ನು ತೋರಿಸುವಂತೆ ಕೈ ಎತ್ತರಿಸುತ್ತಾರೆ.
ಪ್ರಳಯ ಆಗೋದು ಗ್ಯಾರೆಂಟಿ. ಒಂದೊಂದಾಗಿ ಎಲ್ಲ ದೇಶಗಳು ಮುಳುಗಿ ಹೋಗುತ್ತವೆ. ಎಲ್ಲ ಮುಳುಗಿದ ಮೇಲೆ ಉಳಿಯೋದು ಬೆಳಗಾವಿಯ ಒಂದು ಹಳ್ಳಿ ಮಾತ್ರ. ಮೊದಲು ಇಡೀ ಪ್ರಪಂಚದಲ್ಲಿ ವಿದ್ಯುತ್ ಹೊರಟು ಹೋಗುತ್ತೆ. ಆಗ ಮುಂಡೇವಕ್ಕೆ ಒಲೆ-ಸೌದೆಯೇ ಗತಿ ಎಂದು ಹೆದರಿಸುತ್ತೆ ಸ್ವಾಮಿ. ಕರೆಕ್ಟಾಗಿ ಎಷ್ಟನೇ ತಾರೀಕು ಪ್ರಳಯ ಆಗುತ್ತೆ ಹೇಳಿ ಎಂದರೆ, ಯಾವುದೋ ಒಂದು ಡೇಟು ಹೇಳಿ ಅವತ್ತಿನಿಂದ ಶುರುವಾಗುತ್ತೆ ನೋಡ್ತಾ ಇರಿ ಅನ್ನುತ್ತೆ.
ಅವತ್ತು ಪ್ರಳಯ ತಪ್ಪಿಸೋದಕ್ಕೆ ಐದು ಎಣ್ಣೆಯ ದೀಪ ಹಚ್ಚಿ ಅಂತ ಹೇಳಿದೆ. ಎಲ್ಲ ಕಡೇನೂ ದೀಪ ಹಚ್ಚಿದ್ರಿ. ಆದರೆ ಎಷ್ಟು ಜನ ನಿಜವಾದ ಭಕ್ತಿಯಿಂದ ದೀಪ ಹಚ್ಚಿದ್ರಿ ಹೇಳಿ. ಬಹಳಷ್ಟು ಜನ ಕಾಟಾಚಾರಕ್ಕೆ ಮಾಡಿದ್ರಿ. ಇದೊಂದು ಮಾಡಬೇಕು, ಅದಕ್ಕೆ ಮಾಡೋಣ ಅಂತ ಮಾಡಿದ್ರಿ ಎಂದು ತನ್ನ ಮಾತು ಕೇಳಿದ ಭಕ್ತಗಣವನ್ನೂ ವಿಚಿತ್ರ ಮ್ಯಾನರಿಸಂನಿಂದ ನಿಂದಿಸುತ್ತೆ ಸ್ವಾಮಿ.
ಸ್ವಾಮಿ ಈಗ ಜನತಾ ದರ್ಶನ ಮಾಡಲು ಹೊರಟಿದೆಯಂತೆ. ಅದು ಬೆಂಗಳೂರಿನಿಂದಲೇ ಶುರು. ಪ್ರಳಯ ಕುರಿತು ಯಾರ‍್ಯಾರ ಮನಸ್ಸಿನಲ್ಲಿ ಏನೇನು ಪ್ರಶ್ನೆಗಳಿವೆಯೋ ಅದಕ್ಕೆಲ್ಲ ಸ್ವಾಮಿ ಉತ್ತರಕೊಡುತ್ತೆ. ಕಾರ್ಯಕ್ರಮದ ಜಾಹೀರಾತು ಜೋರಾಗೇ ನಡೀತಾ ಇದೆ. ಹೀಗಾಗಿ ಜನರ ನೂಕುನುಗ್ಗಲಾಗಿ ಲಾಠಿ ಚಾರ್ಜ್ ನಡೆದು, ಅಲ್ಲೇ ಒಂದು ಮಿನಿ ಪ್ರಳಯ ಆದರೂ ಆಶ್ಚರ್ಯ ಇಲ್ಲ.
ಸ್ವಾಮಿ ದೇವ-ದೇವತೆಯರನ್ನೆಲ್ಲ ತನ್ನ ಕ್ಲಾಸ್‌ಮೇಟ್‌ಗಳೋ, ಜಿಗ್ರಿ ದೋಸ್ತ್‌ಗಳೋ ಎಂಬಂತೆ ಮಾತನಾಡುತ್ತದೆ. ಅವರ ಜತೆ ಮಾತಾಡಿ ಎಲ್ಲ ಸಾಲ್ವ್ ಮಾಡ್ತೀನಿ ಅಂತ ಭಕ್ತರನ್ನು ಹೆದರಿಸುತ್ತೆ. ಒಂದೊಂದು ಸರ್ತಿ ಇದು ಸೈಂಟಿಸ್ಟ್ ಥರ ಮಾತಾಡೋಕ್ಕೆ ಶುರು ಮಾಡುತ್ತೆ. ನಾಗೇಶ್ ಹೆಗಡೆ, ಸುಧೀಂದ್ರ ಹಾಲ್ದೊಡ್ಡೇರಿ ಥರದವರು ಇವನ ಖಗೋಳಶಾಸ್ತ್ರದ ವರ್ಣನೆಯನ್ನು ನೋಡಿದರೆ ಮೂರ್ಛೆ ಹೋಗಿಬಿಡುವ ಸಾಧ್ಯತೆಗಳಿರುವುದರಿಂದ ಅವರು ನೋಡದೆ ಇರುವುದು ವಾಸಿ.
ಗ್ರಹಗತಿ ಬದಲಾದಂತೆ ಚಾನಲ್‌ನಿಂದ ಚಾನಲ್‌ಗೆ ಹಾರುತ್ತ ಇದ್ದ ಸ್ವಾಮಿ ಈಗ ಸಮಯ ನ್ಯೂಸ್ ಚಾನಲ್‌ಗೂ ವಕ್ಕರಿಸಿಕೊಂಡ ಹಾಗೆ ಕಾಣುತ್ತಿದೆ. ಪ್ರಳಯ, ಸುನಾಮಿ, ಭೂಕಂಪ ಇತ್ಯಾದಿ ಎಲ್ಲ ನೈಸರ್ಗಿಕ ಆಪತ್ತಿನ ವಿಷಯ ಬಂದಾಗಲೆಲ್ಲ ಸಮಯದವರಿಗೆ ಈ ಸ್ವಾಮಿಯ ಎಕ್ಸ್‌ಪರ್ಟ್ ಗೆಸ್ಟು. ಟಿಆರ್‌ಪಿಯ ಆಸೆಗಾಗಿ ಅವರಿಗೆ ಈ ಸ್ವಾಮಿಯೇ ಬೇಕು.
ಎರಡು ಇನ್ನೋಸೆಂಟ್ ಪ್ರಶ್ನೆಗಳು: ಸೂಪರ್ ಮೂನ್ ಬ್ರಹ್ಮಾಂಡ ಸ್ವಾಮಿಗಿಂತ ದೊಡ್ಡದಾಗಿ ಕಾಣುತ್ತಾ? ಸೂಪರ್ ಮೂನ್ ಈ ಸ್ವಾಮಿಗಿಂತ ಡೇಂಜರ್ರಾ?

发表评论