ಪ್ರಳಯ, ಸುನಾಮಿ, ಭೂಕಂಪ, ಸೂಪರ್ ಮೂನ್ ಇತ್ಯಾದಿ ವಿಷಯಗಳ ಕುರಿತು ಅಧಿಕೃತವಾಗಿ ಮಾತನಾಡಬಲ್ಲವರು ಯಾರು? ವಿಜ್ಞಾನಿಗಳಲ್ಲವೇ? ನಿಜ, ನೈಸರ್ಗಿಕ ವಿಕೋಪಗಳು ಮನುಷ್ಯನ ಅಂಕೆಯನ್ನು ಮೀರಿದ್ದು. ವಿಜ್ಞಾನಿಗಳೂ ಸಹ ಇಂಥವನ್ನು ತಡೆಯುವಲ್ಲಿ ಬಹಳಷ್ಟು ಸಂದರ್ಭದಲ್ಲಿ ಅಸಹಾಯಕರು. ಆದರೆ ಯಾವ ವಿಕೋಪ ಯಾಕೆ ಸಂಭವಿಸಿತು ಎಂಬುದನ್ನು ಸ್ಪಷ್ಟವಾಗಿ ಆಧಾರಸಹಿತವಾಗಿ ಹೇಳಬಲ್ಲವರು ವಿಜ್ಞಾನಿಗಳು. ಜನರಲ್ಲಿ ಆಗಾಗ ಹುಟ್ಟಿಕೊಳ್ಳುವ ಭಯವನ್ನು ನಿವಾರಿಸಬೇಕಾದವರೂ ಸಹ ವಿಜ್ಞಾನಿಗಳೇ.
ಆದರೆ ಈಗ ನೋಡಿ, ನಮ್ಮ ಎಲೆಕ್ಟ್ರಾನಿಕ್ ಮೀಡಿಯಾಗಳು ಏನೇ ಆದರೂ ಜ್ಯೋತಿಷಿಗಳನ್ನು ಕರೆಸಿ ಮಾತಾಡಿಸುವುದನ್ನು ರೂಢಿ ಮಾಡಿಕೊಂಡಿವೆ. ದಿನಪತ್ರಿಕೆಗಳೂ ಸಹ ಇದಕ್ಕೆ ಹೊರತಾಗಿಲ್ಲ. ಎಲ್ಲ ಜ್ಯೋತಿಷಿಗಳು ವಂಚಕರೇನಲ್ಲ. ಕೆಲವರು ತಾವು ಶಾಸ್ತ್ರೀಯವಾಗಿ ಕಲಿತದ್ದರ ಆಧಾರದ ಮೇಲೆ ಹೇಳುತ್ತಾರೆ. ಅದನ್ನು ನಂಬುವುದು, ಬಿಡುವುದು ಕೇಳುವವರಿಗೆ ಬಿಟ್ಟಿದ್ದು. ಆದರೆ ಟಿಆರ್‌ಪಿ ಆಸೆಗಾಗಿ ಚಾನಲ್‌ಗಳು ಜನರನ್ನು ಹೆದರಿಸಲೆಂದೇ ಜ್ಯೋತಿಷಿಗಳನ್ನು ಬಳಸಿಕೊಳ್ಳುತ್ತಿವೆ. ಹೀಗೆ ಹೆದರಿಸುವ, ಹೊಲಸಾಗಿ ಬೈಯುವ ನರೇಂದ್ರ ಶರ್ಮ ಅಂಥವರಿಗೆ ವಿಪರೀತ ಡಿಮ್ಯಾಂಡು ಹುಟ್ಟಿಕೊಂಡಿದೆ.
ಕರ್ನಾಟಕದಲ್ಲಿ ಸಾಕಷ್ಟು ಮಂದಿ ವಿಜ್ಞಾನಸಂಬಂಧಿ ಲೇಖನಗಳನ್ನು ಬರೆಯುವವರಿದ್ದಾರೆ. ಇವರಿಂದ ಲೇಖನಗಳನ್ನು ಹೆಚ್ಚು ಹೆಚ್ಚು ಬರೆಯಿಸುವ, ಚಾನಲ್‌ಗಳಲ್ಲಿ ಮಾತನಾಡಿಸುವ ಕೆಲಸ ನಮ್ಮ ಮೀಡಿಯಾಗಳಿಂದ ಆಗಬೇಕಿದೆ. ಹಾಗಾದಾಗ ಜನರಲ್ಲಿ ಇರುವ ಭಯವೂ ನಿವಾರಣೆಯಾಗುತ್ತದೆ. ಆದರೆ ಬೆದರಿಸುವುದರಿಂದಲೇ ಟಿಆರ್‌ಪಿ ಗಿಟ್ಟುವುದರಿಂದ, ಭಯ ನಿವಾರಿಸುವವರ ಮಾತುಗಳು ಚಾನಲ್‌ಗಳಿಗೆ ಬೇಕಾಗಿಲ್ಲದಂತಾಗಿದೆ.
ಇಲ್ಲಿ ವಿಜ್ಞಾನ ಲೇಖಕರುಗಳಾದ ನಾಗೇಶ್ ಹೆಗಡೆ, ಡಾ. ಬಿ.ಎಸ್.ಶೈಲಜಾ, ಟಿ.ಆರ್.ಅನಂತರಾಮು, ಡಾ.ಎಚ್.ಆರ್.ಕೃಷ್ಣಮೂರ್ತಿ, ಹಾಲ್ದೊಡ್ಡೇರಿ ಸುಧೀಂದ್ರ, ಕೊಳ್ಳೇಗಾಲ ಶರ್ಮ ಅವರುಗಳು ನೀಡಿರುವ ಪತ್ರಿಕಾ ಹೇಳಿಕೆಯೊಂದು ಇದೆ. ಇದು ಪತ್ರಿಕೆಗಳ ವಾಚಕರ ವಾಣಿಗೆ ಸೀಮಿತವಾಗುವುದು ಬೇಡ. ನಮ್ಮ ಪತ್ರಿಕೆಗಳು ನಾಳೆಯೇ ಜಾಹೀರಾತಿನ ಸ್ವರೂಪದಲ್ಲಿ ಮುಖಪುಟದಲ್ಲೇ ಇದನ್ನು ಪ್ರಕಟಿಸುವುದು ಸಾಮಾಜಿಕ ಕಾಳಜಿಯ ದೃಷ್ಟಿಯಲ್ಲಿ ಒಳ್ಳೆಯದು. ಕಡೆಯ ಪಕ್ಷ ನಾಳೆಯಾದರೂ ಜನರು ನೆಮ್ಮದಿಯಿಂದ ಇರುತ್ತಾರೆ.
ಹಾಗೆಯೇ ಎಲೆಕ್ಟ್ರಾನಿಕ್ ಮಾಧ್ಯಮಗಳು ಪೊಳ್ಳು ಜ್ಯೋತಿಷಿಗಳನ್ನು ಪ್ರದರ್ಶಿಸುವ ಬದಲು ವಿಜ್ಞಾನಿಗಳನ್ನು, ವಿಜ್ಞಾನ ಲೇಖಕರನ್ನು ಕರೆದು ಮಾತನಾಡಿಸಿ ಜನರಲ್ಲಿರುವ ಭೀತಿಯನ್ನು ನಿವಾರಿಸುವಂತಾಗಬೇಕು.
ಇಲ್ಲಿ ಪ್ರಕಟಗೊಂಡಿರುವ ವಿಜ್ಞಾನ ಲೇಖಕರ ಪತ್ರಿಕಾ ಪ್ರಕಟಣೆಯನ್ನು ಹಾಲ್ದೊಡ್ಡೇರಿ ಸುಧೀಂದ್ರ ಅವರು ಸಂಪಾದಕೀಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಮೌಢ್ಯವನ್ನೇ ವೈಭವೀಕರಿಸುತ್ತಿರುವ ಮೀಡಿಯಾಗಳ ವಿರುದ್ಧ ನಮ್ಮ ಪ್ರತಿಭಟನೆ ಜಾರಿಯಲ್ಲಿರುತ್ತದೆ.

发表评论