ಜಿ.ಎನ್.ಮೋಹನ್ ಒಮ್ಮೆ ಮೀಡಿಯಾ ಮಿರ್ಚಿಯಲ್ಲಿ ಬರೆದಿದ್ದ ಸಾಲುಗಳು ಇವು.
ಒಂದು ದಿನ ಪ್ರೆಸ್ ಕ್ಲಬ್ ನಲ್ಲಿ ನಾವೇ ಮುಂದೆ ನಿಂತು ಬೇರೊಬ್ಬರ ಕಾನ್ಫೆರೆನ್ಸ್ ಏರ್ಪಡಿಸಿದ್ದೆವು. ಬಂದ ಪತ್ರಕರ್ತರಿಗೆಲ್ಲಾ ಒಂದೊಂದು ಗಿಫ್ಟ್ ಪ್ಯಾಕ್ ಕೈಯಲ್ಲಿಡ್ತಾ ಇದ್ದೆವು. ಆಗ ಕನ್ನಡಪ್ರಭದ ಡಿ ಉಮಾಪತಿ ಎದುರಾದರು. ಅವರ ಕೈಗೂ ಒಂದು ಗಿಫ್ಟ್ ಇಡಲು ಹೋದೆ. ತಕ್ಷಣ ನೋ ಅಂತ ಗದರಿಕೊಂಡವರೇ ಧಡ ಧಡ ಮೆಟ್ಟಲಿಳಿದು ಹೋದರು. ಗಿಫ್ಟ್ ನ ಸರಿ ತಪ್ಪಿನ ಬಗ್ಗೆ ಒಂದು ದಿನವೂ ತಲೆ ಕೆಡಿಸಿಕೊಳ್ಳದೇ ಇದ್ದ ನನಗೆ ಈ ಘಟನೆ ಒಳಗಣ್ಣನ್ನು ತೆರೆಸಿತು. ಗಿಫ್ಟ್ ನಿರಾಕರಣೆ ಆಂದೋಲನದಲ್ಲಿ ನಾನೂ ಒಬ್ಬನಾಗಿ ಹೋದೆ.
ಮಾಧ್ಯಮರಂಗದಲ್ಲಿ ಶುದ್ಧಹಸ್ತರು, ನಿಸ್ಪೃಹರು ಇದ್ದಾರೆ ಎಂಬುದಕ್ಕೆ ಇದು ಸಾಕ್ಷಿ. ಮೌಲ್ಯ, ಆದರ್ಶಗಳೆಲ್ಲ ಸತ್ತು ಹೋಗುತ್ತಿವೆ ಎಂದು ಕೊರಗುತ್ತಿರುವ ಈ ಸಂದರ್ಭದಲ್ಲೂ ಇಂಥವರು ಮಾಧ್ಯಮ ರಂಗಕ್ಕೆ ಸಂಜೀವಿನಿಯಂತೆ ಇದ್ದೇ ಇರುತ್ತಾರೆ.
ಯಾಕೆ ಈ ವಿಷಯವನ್ನಿಲ್ಲಿ ಹೇಳಿದೆವೆಂದರೆ ಕನ್ನಡಪ್ರಭದ ಡಿ.ಉಮಾಪತಿ ಸುದ್ದಿಯಲ್ಲಿದ್ದಾರೆ. ಹಾಗೆ ನೋಡಿದರೆ ಅವರು ಪದೇ ಪದೇ ಮಾಧ್ಯಮ ಸಂಸ್ಥೆಗಳನ್ನು ಬದಲಿಸಿದವರಲ್ಲ. ಸುಮಾರು ೨೦ ವರ್ಷಗಳ ಕಾಲ ಕನ್ನಡಪ್ರಭದ ಭಾಗವಾಗಿದ್ದವರು ಅವರು. ದಿಲ್ಲಿ ವರದಿಗಾರರಾಗಿ ಹೋದ ಕನ್ನಡ ಪತ್ರಕರ್ತರ ಸಾಲಿನಲ್ಲಿ ಮೊದಲು ಕಾಣಿಸುವವರೇ ಉಮಾಪತಿ. ಕನ್ನಡ ಪತ್ರಕರ್ತರ ಪಾಲಿಗೆ ದಿಲ್ಲಿ ಎಂದರೆ ಉಮಾಪತಿ ಅನ್ನುವ ಹಾಗೆ ಅವರು ಇದ್ದರು. ಕನ್ನಡಿಗರ ಪಾಲಿಗೆ ಉಮಾಪತಿಯವರೇ ದಿಲ್ಲಿಯನ್ನು ನೋಡುವ ಕಣ್ಣಾಗಿದ್ದರು.
ಡಿ.ಉಮಾಪತಿ ಈಗ ಕನ್ನಡಪ್ರಭ ತೊರೆದಿದ್ದಾರೆ ಎಂಬ ಸುದ್ದಿ ಬಂದಿದೆ. ಅವರು ವಿಜಯ ಕರ್ನಾಟಕಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬುದು ಬಹುತೇಕ ಖಚಿತ ಸಂಗತಿ. ಅವರಿಗೆ ಶುಭವಾಗಲಿ, ತಮ್ಮಂಥ ನೂರಾರು ಪತ್ರಕರ್ತರನ್ನು ಅವರು ಬೆಳೆಸುವಂತಾಗಲಿ.
ಕರ್ನಾಟಕದ ಮಾಧ್ಯಮ ರಂಗದಲ್ಲಿ ಹೊಸಹೊಸ ಸುದ್ದಿಗಳು ಚಾಲ್ತಿಯಲ್ಲಿವೆ. ಸುವರ್ಣ ನ್ಯೂಸ್‌ನ ಚಾನಲ್ ಹೆಡ್ ಎಚ್.ಆರ್.ರಂಗನಾಥ್ ರಾಜೀನಾಮೆ ಕೊಟ್ಟೇ ಹೋದರು ಎಂಬಂಥ ಸುದ್ದಿ ಹರಡಿತ್ತು (ಹರಡಿಸಲಾಗಿತ್ತು). ರಂಗನಾಥ್ ಮತ್ತೆ ಟಿವಿಯಲ್ಲಿ ಕಾಣಿಸಿಕೊಂಡ ನಂತರ ಸುದ್ದಿಯೂ ತಣ್ಣಗಾಗಿದೆ.
ಸಮಯ ಟಿವಿಯನ್ನು ಹಾಸನದ ಸಚಿನ್ ಎಂಬುವವರು ಕೊಳ್ಳುತ್ತಿರುವುದು ಪಕ್ಕಾ ಆಗಿದೆ. ಇವರಿಗೆ ಸಚಿವ ಮುರುಗೇಶ್ ನಿರಾಣಿ ಸಾಥ್ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಈ ಡೀಲಿನ ಹಿಂದಿದ್ದಾರೆ ಎಂಬ ಸುದ್ದಿ ಇದೆ. ಅಲ್ಲಿಗೆ ಎಚ್.ಡಿ.ಕುಮಾರಸ್ವಾಮಿಯವರ ಅವಳಿ ಚಾನಲ್ ಕನಸು ಕೈಗೂಡಲಾರದು.
ಪತ್ರಕರ್ತರ ವಲಸೆ ಕಾರ್ಯ ಇನ್ನೂ ಸಣ್ಣಪ್ರಮಾಣದಲ್ಲಿ ನಡೆಯುತ್ತಲೇ ಇದೆ. ಸೃಜನಶೀಲ ಲೇಖಕಿ, ಸೂಕ್ಷ್ಮ ಮನಸ್ಸಿನ ಚೇತನಾ ತೀರ್ಥಹಳ್ಳಿ ಕನ್ನಡಪ್ರಭ ಬಿಟ್ಟು ವಿಜಯ ನೆಕ್ಸ್ಟ್ ಸೇರಿ ಸುಮಾರು ದಿನಗಳಾದವು. ಟೈಮ್ಸ್ ಬೋಧಿವೃಕ್ಷ ಅವರಿಗೆ ಹೊಸ ಹುರುಪನ್ನು ನೀಡಲಿ ಎಂಬುದು ನಮ್ಮ ಹಾರೈಕೆ.
ಜನಶ್ರೀಯಿಂದ ಧ್ಯಾನ್ ಪೂಣಚ್ಚ ಹೊರಬಿದ್ದಿದ್ದಾರೆ. ಜನಶ್ರೀ ಪಾಲಿಗೆ ಇದು ಮೊದಲ ವಿಕೆಟ್ ಪತನ. ಧ್ಯಾನ್ ಹಿಂದೆ ವಿಜಯ ಕರ್ನಾಟಕದಲ್ಲಿದ್ದವರು. ಏನೋ ಸಣ್ಣಪುಟ್ಟ ಕಿರಿಕ್ಕು ನಡೆದು ಧ್ಯಾನ್‌ರನ್ನು ರಾಮನಗರಕ್ಕೆ ವರ್ಗಾವಣೆ ಮಾಡಲಾಗಿದೆ. ರಾಮನಗರಕ್ಕೆ ಹೋಗಲೊಲ್ಲದ ಧ್ಯಾನ್ ರಾಜೀನಾಮೆ ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.
ವಿಜಯ ಕರ್ನಾಟಕದಿಂದ ಕನ್ನಡಪ್ರಭಕ್ಕೆ, ಕನ್ನಡಪ್ರಭದಿಂದ ವಿಜಯ ಕರ್ನಾಟಕಕ್ಕೆ ಕೆಲವರು ವಲಸೆ ಹೋಗಬಹುದು ಎಂಬುದು ವದಂತಿ. ಉದಯವಾಣಿಗೆ ಇನ್ನಷ್ಟು ಮಂದಿ ಸುವರ್ಣನ್ಯೂಸ್‌ನಿಂದ ಬಂದು ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ.
ಇನ್ನು ವಿಜಯ ಸಂಕೇಶ್ವರರ ಪತ್ರಿಕೆ ಇನ್ನೇನು ಶುರುವಾಗುತ್ತೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಸ್ತೂರಿ ನ್ಯೂಸ್ ಚಾನಲ್ ಆಗುವುದಕ್ಕೆ ದಿನಗಣನೆ ಆರಂಭವಾಗಿದೆ.
ಈಗಷ್ಟೆ ಮುಗಿದ ವಿಶ್ವಕನ್ನಡ ಸಮ್ಮೇಳನದ ಪುನರಾವಲೋಕನ ಸಂಚಿಕೆಯನ್ನು ಸಿದ್ಧ ಮಾಡಿ ಉಸ್ಸಪ್ಪಾ ಎಂದು ಸುಸ್ತಾಗಿರುವ ಜಿ.ಎನ್.ಮೋಹನ್ ಯಾವುದಾದರೂ ನ್ಯೂಸ್ ಚಾನಲ್‌ಗೆ ಹೆಡ್ ಆಗಲಿ ಅನ್ನೋದು ಅವರ ಸಮಸ್ತ ಅಭಿಮಾನಿಗಳ ಸುವರ್ಣ ಕನಸು. ಆದರೆ ಮೋಹನ್ ಸ್ಥಾವರವಾಗದೆ ಜಂಗಮವಾಗೇ ಇರೋಣ ಅಂದುಕೊಂಡಿದ್ದರೆ ಅಭಿಮಾನಿಗಳ ಬಯಕೆ ಠುಸ್ ಅನ್ನುವುದೂ ಸಹಜವೇ.
ಕನ್ನಡಪ್ರಭ ಬಿಟ್ಟ ನಂತರ ಶಿವಸುಬ್ರಹ್ಮಣ್ಯ ಒಂದು ರೌಂಡು ವೈಲ್ಡ್ ಲೈಫ್ ಫೋಟೋಗ್ರಫಿ ಮಾಡಿದ್ದಾರೆ. ಮಾಧ್ಯಮ ರಂಗವೇ ಹೆಚ್ಚು ವೈಲ್ಡ್ ಆಗಿ ಅವರಿಗೆ ಈಗ ಕಾಣುತ್ತಿರಬಹುದು. ರಂಗನಾಥ್ ಭಾರದ್ವಾಜ್ ಅವರ ಸಿನಿಮಾ ಶೂಟಿಂಗು ಇನ್ನೂ ಮುಗಿದ ಹಾಗೆ ಕಾಣುತ್ತಿಲ್ಲ. ಬೇಗ ಮತ್ತೆ ವಾಪಾಸು ಬರ‍್ತೀನಿ ಅಂತ ಅವರು ತಮ್ಮ ಗೆಳೆಯರಿಗೆ ಎಸ್‌ಎಂಎಸ್ ಕಳುಹಿಸುತ್ತಿರಬಹುದು.
ಹೊಸದಾಗಿ ಬರುವ ಚಾನಲ್‌ಗೆ ನಾನೇ ಹೆಡ್ಡು ಎಂದು ಬಿಡಿಎ ಸೈಟು ಪತ್ರಕರ್ತರೊಬ್ಬರು ಕೋಟು ಸರಿ ಮಾಡಿಕೊಳ್ಳುತ್ತಿದ್ದಾರೆ. ಹೊಸ ಚಾನಲ್ ನಂ.೧ ಮಾಡಲು ಟಿಆರ್‌ಪಿಯನ್ನೂ ರಿಗ್ ಮಾಡಿದರೆ ಹೇಗೆ ಎಂದು ಅವರು ಒಬ್ಬ ಫಲ ಜ್ಯೋತಿಷಿ, ಒಬ್ಬ ಗ್ರಹ ಜ್ಯೋತಿಷಿ, ಒಬ್ಬ ವಾಸ್ತುತಜ್ಞ, ಒಬ್ಬ ವಾಮಾಚಾರ ತಜ್ಞರನ್ನು ಕೂರಿಸಿಕೊಂಡು ಡಿಸ್ಕಷನ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಇದೆ. ಯಾರ ಸಲಹೆ ನಿಕ್ಕಿಯಾಗುತ್ತೋ ಶಿವನೇ ಬಲ್ಲ.
ಕಡೆಯದಾಗಿ ನಮ್ಮ ಅಂತರ್ಲಿಂಗಿ. ಅದು ಎಲ್ಲಿ ಏನಾಗಿ ಹೋಯಿತೋ ಏನೋ? ದೂರದಿಂದ ಅಣ್ಣೋ, ಅಕ್ಕೋ ಅನ್ನುವ ಧ್ವನಿ ಕ್ಷೀಣವಾಗುತ್ತಲೇ ಇದೆ. ಅದಕ್ಕೆ ನಮ್ಮ ಸಂತಾಪಗಳು.

发表评论