ವಿಜಯ ಕರ್ನಾಟಕದ ಅಂಕಣಕಾರರ ಕುರಿತು ಆಗಾಗ ಚರ್ಚೆ ನಡೆಯುತ್ತಲೇ ಇರುತ್ತದೆ. ವಿಶ್ವೇಶ್ವರ ಭಟ್ಟರು ಹೊಸ ಹೊಸ ಅಂಕಣಕಾರರನ್ನು ಸೃಷ್ಟಿಸಿದರು. ಅವರ ಪೈಕಿ ಒಳ್ಳೆಯ ಅಂಕಣಕಾರರೂ ಇದ್ದರು, ಕೆಟ್ಟ ಅಂಕಣಕಾರರೂ ಇದ್ದರು. ಆದರೆ ಹೆಚ್ಚು ಚರ್ಚಿತವಾದವರು ಕೆಟ್ಟ ಅಂಕಣಕಾರರು. ಅದರಲ್ಲೂ ಸೋನಿಯಾ ಗಾಂಧಿಯವರನ್ನು ಬಾಯಿಗೆ ಸಿಕ್ಕಂತೆ ಬೈದವರೆಲ್ಲ ಏಕಾಏಕಿ ಚಲಾವಣೆಗೆ ಬಂದರು. ರಾಹುಲ್ ಗಾಂಧಿಯನ್ನು ಇಟಾಲಿಯನ್ ಬ್ರೀಡ್ ಎಂದು ಬರೆದ ತಕ್ಷಣ ನೋಡ್ರೀ, ಈ ಹುಡುಗನ ಬರವಣಿಗೆಯಲ್ಲಿ ಎಂಥ ಫೋರ್ಸ್ ಇದೆ ಎಂಬಂಥ ಮಾತುಗಳು ಕೇಳಿ ಬರತೊಡಗಿದವು.

ಕೆಲವು ಅಂಕಣಕಾರರಂತೂ ಇಂಟರ್‌ನೆಟ್ ಹುಳಗಳು. ಇಂಟರ್‌ನೆಟ್‌ನಲ್ಲಿ ಸಿಕ್ಕಿದ್ದೆಲ್ಲವನ್ನು ಪರಮಪ್ರಸಾದ ಎಂದುಕೊಂಡು ಬರೆದರು. ಮಾಹಿತಿ ಸರಿಯಿದೆಯೋ ಇಲ್ಲವೋ ಎಂಬುದನ್ನು ಕೌಂಟರ್ ಚೆಕ್ ಮಾಡಿಕೊಳ್ಳುವ ತಾಳ್ಮೆಯೂ ಅವರಿಗಿರಲಿಲ್ಲ. ವಿಜಯ ಕರ್ನಾಟಕದ ಅಂಕಣಕಾರರು ತಮಗೆ ಭಟ್ಟರು ನೀಡಿದ ಸ್ವಾತಂತ್ರ್ಯವನ್ನು ಎಷ್ಟು ದುರ್ಬಳಕೆ ಮಾಡಿಕೊಂಡರೆಂದರೆ, ಮುಸ್ಲಿಮರು, ಕ್ರಿಶ್ಚಿಯನ್ನರಷ್ಟೇ ಅಲ್ಲದೆ ಪ್ರಗತಿಪರರು, ಬುದ್ಧಿಜೀವಿಗಳು ಅವರಿಗೆ ಆಹಾರವಾದರು. ವಿ.ಪಿ.ಸಿಂಗ್ ತೀರಿಹೋದಾಗ ಅವರು ಹುಟ್ಟಿದ್ದರಿಂದಲೇ ದೇಶಕ್ಕೆ ನಷ್ಟವಾಯಿತು ಎಂದು ಒಬ್ಬಾತ ಬರೆದು ಜೈಸಿಕೊಂಡುಬಿಟ್ಟ.

ಆದರೆ ಹೀಗೆ ಅಗ್ಗದ ಜನಪ್ರಿಯತೆಗಾಗಿ ಹಿಂದೂ ಫಾಸಿಸ್ಟರಿಗೆ ಪ್ರಿಯವಾಗುವಂತೆ ಬರೆಯುವ ಗೋಜಿಗೆ ಹೋಗದೆ, ಅದೇ ವಿಜಯ ಕರ್ನಾಟಕದಲ್ಲಿ ಅಶೋಕ್ ರಾಮ್, ಲೋಕೇಶ್ ಕಾಯರ್ಗ ಅಂಥವರೂ ಬರೆಯುತ್ತಿದ್ದಾರೆ. ಹರಿಯುವ ಪ್ರವಾಹದಲ್ಲಿ ಅವರು ಕೊಚ್ಚಿಹೋಗಬಹುದಿತ್ತು. ಆದರೆ ಅವರು ಹಾಗೆ ಕೊಚ್ಚಿ ಹೋಗದೆ ತಮ್ಮತನ ಉಳಿಸಿಕೊಂಡರು, ವಿವೇಕದಿಂದ ಬರೆದರು.

ಇವತ್ತಿನ ವಿಜಯ ಕರ್ನಾಟಕ ಗಮನಿಸಿ. ಲೋಕೇಶ್ ಕಾಯರ್ಗ ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕನೆಂಬ ಅನುಮಾನಕ್ಕೆ ಗುರಿಯಾಗಿ, ಹಿಂಸೆ ಅನುಭವಿಸಿದ ಹನೀಫ್ ಕುರಿತಾಗಿ ತುಂಬ ಸೆನ್ಸಿಬಲ್ ಆಗಿ ಬರೆದಿದ್ದಾರೆ. ಹನೀಫ್ ಬಗ್ಗೆ ಬರೆಯುವಾಗ ಚಿಕ್ಕಮಗಳೂರಿನ ವೈದ್ಯರೊಬ್ಬರ ಬವಣೆಗಳನ್ನು ನೆನಪಿಸಿದ್ದಾರೆ. ಹನೀಫ್ ಒಂದು ವೇಳೆ ಇಂಥ ಸಮಸ್ಯೆಯನ್ನು ಭಾರತದಲ್ಲೇ ಅನುಭವಿಸಿದ್ದರೆ ಏನಾಗುತ್ತಿತ್ತು ಎಂಬ ತೀಕ್ಷ್ಣ ಒಳನೋಟ ಅವರ ಅಂಕಣದಲ್ಲಿದೆ.

ಇವತ್ತು ವಿಜಯ ಕರ್ನಾಟಕದಿಂದ ಸಾಕಷ್ಟು ಮಂದಿ ಅಂಕಣಕಾರರಿಗೆ ಕೊಕ್ ನೀಡಲಾಗಿದೆ. ಹೀಗೆ ಗೇಟ್‌ಪಾಸ್ ಪಡೆದವರು ಬಹುತೇಕರು ಮತೀಯವಾದವನ್ನು ಪ್ರಚೋದನಾಕಾರಿಯಾಗಿ ಮಂಡಿಸುತ್ತಿದ್ದವರು. ಈ ರೀತಿಯ ಕ್ಷಣಿಕ ಉನ್ಮಾದಗಳನ್ನು ಕೆರಳಿಸುವವರು ಭಾರತದಂತ ಸಮಾಜದಲ್ಲಿ ಹೆಚ್ಚು ಕಾಲ, ಬಾಳುವವರಲ್ಲ. ಅವರಿಗೆ ಸಾರ್ವಕಾಲಿಕ ಮಾನ್ಯತೆ ದಕ್ಕುವುದೂ ಇಲ್ಲ.

ಕಡೇ ಕುಟುಕು: ದಿನಪತ್ರಿಕೆಯೊಂದರ ಅಂಕಣಕಾರರು ಹೊಸದಾಗಿ ಅಂಕಣ ಬರೆಯಲು ಆರಂಭಿಸಿದವರು. ಪಾಪ, ಅವರಿಗೆ ವಾರಕ್ಕೊಂದು ಅಂಕಣ ಬರೆಯುವುದೇ ದೊಡ್ಡ ಸಮಸ್ಯೆ. ಹೀಗಾಗಿ ಅವರು ಒಂದು ಸಬ್ಜೆಕ್ಟ್ ಗುರುತಿಸಿಕೊಳ್ಳುತ್ತಾರೆ. ನಂತರ ಪತ್ರಿಕೆಯ ವರದಿಗಾರರಿಗೆ ಸಂಬಂಧಪಟ್ಟ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳ ಪ್ರಿಂಟ್ ಔಟ್ ಕೊಡಿ ಎಂದು ಆಜ್ಞಾಪಿಸುತ್ತಾರೆ. ಎಲ್ಲ ಪ್ರಿಂಟ್ ಔಟ್ ಕೈಗೆ ಸೇರಿದ ನಂತರ ವರದಿಯಂಥ ಅಂಕಣ ಬರೆದು ಉಸ್ಸಪ್ಪಾ ಎನ್ನುತ್ತಾರೆ.

0 komentar

Blog Archive