ಮೀಡಿಯಾಗಳ ಸಂಖ್ಯೆ ಹೆಚ್ಚಾದಂತೆ ವಲಸೆಯೂ ಹೆಚ್ಚಾಗ್ತಾ ಇದೆ. ರಾಜಕಾರಣಿಗಳ ಪಕ್ಷಾಂತರದ ಹಾಗೆ ಪತ್ರಕರ್ತರೂ ಆಗಾಗ ತಾವು ಕೆಲಸ ಮಾಡುವ ಸಂಸ್ಥೆಗಳನ್ನು ಬಿಟ್ಟು ಹೋಗುವುದು ಸಹಜ. ಇತ್ತೀಚಿನ ಕೆಲವು ಗಾಸಿಪ್‌ಗಳ ಕಡೆ ಕಣ್ಣಾಡಿಸೋಣ.

ಹಾಟೆಸ್ಟ್ ಸುದ್ದಿಯೆಂದರೆ ಸುವರ್ಣ ನ್ಯೂಸ್‌ನಿಂದ ಎಚ್.ಆರ್.ರಂಗನಾಥ್ ಬಿಟ್ಟು ಹೋಗ್ತಾರೆ ಅನ್ನೋದು. ರಾಜೀವ್ ಚಂದ್ರಶೇಖರ್ ಜತೆ ರಂಗಣ್ಣನವರಿಗೆ ಯಾಕೋ ಆಗಿ ಬರ‍್ತಾ ಇಲ್ಲ ಎಂಬ ಪುಕಾರು ಸುವರ್ಣ ಆಫೀಸಿನಿಂದಲೇ ಹೊರಟಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇತ್ತೀಚಿಗೆ ರಂಗನಾಥ್ ಮೊದಲಿನಷ್ಟು ಮುಖ್ಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಮುಂದಿನ ವರ್ಷ ಆರಂಭವಾಗಲಿರುವ ಕಸ್ತೂರಿ ನ್ಯೂಸ್ ಚಾನೆಲ್‌ಗೆ ರಂಗನಾಥ್ ಹೋಗ್ತಾರೆ ಅನ್ನೋ ಮಾತುಗಳಿವೆ. ಹೋಗೋದಾದ್ರೆ ಅವರು ಒಬ್ಬರೇ ಹೋಗ್ತಾರಾ ಅಥವಾ ಹಮೀದ್ ಪಾಳ್ಯ, ರವಿ ಹೆಗಡೆ, ಜೋಗಿ, ಉದಯ ಮರಕಿಣಿ ಮತ್ತಿನ್ನಿತರರನ್ನೂ ಕರೆದೊಯ್ತಾರಾ ಅಂಬೋದು ಮಿಲಿಯನ್ ಡಾಲರ್ ಪ್ರಶ್ನೆ. ಏನೇ ಆದ್ರೂ ರಂಗನಾಥ್ ಸುವರ್ಣ ಬಿಟ್ರೆ ಸುವರ್ಣಕ್ಕೇ ನಷ್ಟ ಅನ್ನೋದು ನಿಜ. ಏನೇ ಟೀಕೆಗಳಿದ್ದರೂ ರಂಗನಾಥ್ ಓರ್ವ ಸಮರ್ಥ ಲೀಡರ್, ಉತ್ತಮ ವಿಶ್ಲೇಷಕ, ಪ್ರತಿಭಾವಂತ.

ಇನ್ನು ವಿಶ್ವೇಶ್ವರ ಭಟ್ಟರು ತಮ್ಮದೇ ಆದ ಪತ್ರಿಕೆಯನ್ನು ಹೊರತರುತ್ತಾರೆ ಅನ್ನೋ ಮಾಹಿತಿಯಿದೆ. ಅದು ದಿನಪತ್ರಿಕೆಯಾಗಿರುತ್ತದೆ ಮತ್ತು ಟ್ಯಾಬ್ಲಾಯ್ಡ್ ಶೈಲಿಯಲ್ಲಿರುತ್ತದೆ ಎನ್ನುವುದು ಮೊದಲ ಹಂತದ ವರ್ತಮಾನ. ಯಾವುದೇ ಸ್ವರೂಪದ ಪತ್ರಿಕೆ ರೂಪಿಸಲು ಭಟ್ಟರು ಸಮರ್ಥರು, ಅದರಲ್ಲಿ ಎರಡು ಮಾತಿಲ್ಲ. ಆದರೆ ತಮ್ಮ ಹಳೆ ತಂಡದ ಮೇಲೆ ಮಮಕಾರವಿಟ್ಟುಕೊಂಡು ಮುಲಾಜಿಗೆ ಒಳಗಾಗಿ ಕೆಟ್ಟ ತಂಡವನ್ನು ಕಟ್ಟಿಕೊಂಡರೆ ಹೆಣಗಬೇಕಾಗುವುದು ಅವರೇ.
ಒಂದು ವೇಳೆ ಭಟ್ಟರು ಪತ್ರಿಕೆ ಆರಂಭಿಸಿದರೆ ಅವರ ಉನ್ನತ ವ್ಯಾಸಂಗದ ಕಥೆ ಏನು ಅಂತ ಕೇಳಬೇಡಿ. ಈ ಪ್ರಶ್ನೆ ಕುಚೋದ್ಯದಿಂದ ಕೂಡಿದೆ ಎಂದು ಫರ್ಮಾನು ಹೊರಡಿಸಬೇಕಾಗುತ್ತದೆ!

ಟಿವಿ೯ನಿಂದ ಮತ್ತೊಂದು ಸುತ್ತಿನ ವಲಸೆ ನಡೆದಿದೆ. ಈಗಾಗಲೇ ರಮಾಕಾಂತ್, ಸಾಹಿತ್ಯ, ಸೌಮ್ಯ ಜನಶ್ರೀ ಸೇರಿದ್ದಾರೆ. ಹೀಗಾಗಿ ಜನಶ್ರೀಗೆ ತಕ್ಕಮಟ್ಟಿನ ಆಂಕರ್‌ಗಳ ಸಮಸ್ಯೆ ಪರಿಹಾರವಾಗಿದೆ. ಸುವರ್ಣದಿಂದ ರಂಗನಾಥ್ ಭಾರದ್ವಾಜ್ ಬಂದು ಈ ಎಲ್ಲರ ನೇತೃತ್ವ ವಹಿಸಿಕೊಳ್ಳುತ್ತಾರೆ ಎಂಬುದು ಲೇಟೆಸ್ಟ್ ಸುದ್ದಿ. ಭಾರದ್ವಾಜ್ ಮೊನ್ನೆ ತಾನೇ ಜನಶ್ರೀ ಕಚೇರಿಗೆ ಭೇಟಿ ಕೊಟ್ಟಿರುವುದು ಈ ಮಾತಿಗೆ ಪುಷ್ಠಿ ಕೊಡುತ್ತಿದೆ.

ಯಾರೇ ಬಿಟ್ಟು ಹೋದರೂ ಟಿವಿ೯ ಹೊಸಬರನ್ನು ಸೃಷ್ಟಿ ಮಾಡುವುದರಲ್ಲಿ ಫೇಮಸ್ಸು. ಹಮೀದ್, ಭಾರದ್ವಾಜ್ ಬಿಟ್ಟು ಹೋದಾಗ ದಿಲ್ಲಿಯಲ್ಲಿ ವರದಿಗಾರಿಕೆ ಮಾಡಿಕೊಂಡಿದ್ದ ಶಿವಪ್ರಸಾದ್ ಹಾಗು ರಾಜಕೀಯ ವರದಿಗಾರ ಲಕ್ಷ್ಮಣ್ ಹೂಗಾರ್ ಅವರುಗಳಿಗೇ ಕೋಟು ತೊಡಿಸಿ ಸ್ಟುಡಿಯೋದಲ್ಲಿ ಕೂರಿಸಲಾಯಿತು. ಇಬ್ಬರೂ ಮೊದಮೊದಲು ಅಲ್ಪಸ್ವಲ್ಪ ತಡವರಿಸಿದರೂ ಈಗ ಪೂರ್ತಿ ಫಿಟ್ ಆಗಿದ್ದಾರೆ.

ಶಶಿಧರ ಭಟ್ಟರು ಜುಪಿಟರ್‌ನಲ್ಲಿಲ್ಲ ಅನ್ನೋದು ಹಳೇ ಸುದ್ದಿ. ಆದರೆ ಅವರು ಎನ್‌ಡಿಟಿವಿಯ ಕನ್ನಡ ನ್ಯೂಸ್ ಚಾನೆಲ್‌ಗೆ ನೇತೃತ್ವ ವಹಿಸಲಿದ್ದಾರೆ ಅನ್ನೋದು ಸಹ ಹಳೆಯ ಸುದ್ದಿಯಾಗುವ ಹಂತದಲ್ಲಿದೆ. ಭಟ್ಟರು ಯಾವುದಾದರೂ ಮುಖ್ಯ ಚಾನೆಲ್‌ನಲ್ಲಿ ಇರಬೇಕಿತ್ತು ಅನ್ನೋದು ಅವರ ಬಗ್ಗೆ ಅಭಿಮಾನ ಉಳ್ಳವರ ಮಾತು.

ಇನ್ನು ನ್ಯೂಸ್ ಚಾನೆಲ್‌ಗಳು ಇಲ್ಲದ ಸಂದರ್ಭದಲ್ಲಿ ಈ ಟಿವಿ ಸುದ್ದಿ ತಂಡವನ್ನು ಅದರ ಮಿತಿಯಲ್ಲೇ ಪರಿಣಾಮಕಾರಿಯಾಗಿ ರೂಪಿಸಿದ ಜಿ.ಎನ್.ಮೋಹನ್ ತಾವೇ ಕಟ್ಟಿಕೊಂಡ ಮೇಫ್ಲವರ್ ಮೀಡಿಯಾ ಹೌಸ್‌ನಿಂದ ಕೈ ಸುಟ್ಟಿಕೊಂಡಿದ್ದಾರೆ ಎಂಬ ವರ್ತಮಾನವಿದೆ. ಅವರೂ ಹಾಗು ದಿಲ್ಲಿ ನವಾಬ ಶ್ರೀನಿವಾಸಗೌಡರು ಟೈಮ್ಸ್ ನೌ ಜತೆ ಮಾತುಕತೆಯಲ್ಲಿದ್ದಾರೆ ಅನ್ನೋದು ಬಿಸಿಬಿಸಿ ಸುದ್ದಿ. ಅಲ್ಲಿಗೆ ಟೈಮ್ಸ್ ನೌ ಕೂಡ ಕನ್ನಡಕ್ಕೆ ಬರುತ್ತದೆ ಅನ್ನೋದು ಗ್ಯಾರೆಂಟಿಯಾಯಿತು. ಕನ್ನಡ ಚಾನೆಲ್‌ನ ಅರ್ನಾಬ್ ಯಾರು ಅನ್ನೋದನ್ನು ತಿಳಿದುಕೊಳ್ಳಲು ಸ್ವಲ್ಪ ಕಾಲ ಕಾಯಬೇಕು.

ವಿಜಯ ಕರ್ನಾಟಕದಿಂದ ಯಾರ‍್ಯಾರು ಹೋಗುತ್ತಾರೆ ಎಂಬ ಗೊಂದಲ ಇನ್ನೂ ಮುಂದುವರೆದಿದೆ. ಆದರೆ ರಾಘವನ್ ಬಹಳ ಚುರುಕಾಗಿ ಕೊಳೆಯನ್ನು ತೊಳೆಯುವ ಕೆಲಸದಲ್ಲಿ ತೊಡಗಿದ್ದಾರೆ ಎಂಬುದಕ್ಕೆ ಸಾಕ್ಷಿಗಳು ಪತ್ರಿಕೆಯಲ್ಲೇ ದೊರೆಯುತ್ತಿವೆ. ಮತೀಯ ಹಿಂಸೆಯನ್ನು ಪ್ರಚೋದಿಸುವ ಅಂಕಣಕೋರರು ಮಾಯವಾಗಿದ್ದಾರೆ. ಹೊಸ ಹೊಸ ಮುಖಗಳು ಕಾಣಿಸಿಕೊಂಡಿವೆ. ವಿಜಯ ಕರ್ನಾಟಕ ಸೈದ್ಧಾಂತಿಕವಾಗಿಯೂ ಹೊಸ ರೂಪು ಪಡೆದುಕೊಳ್ಳುವ ಹಾದಿಯಲ್ಲಿದೆ ಎಂಬುದಕ್ಕೆ ಇದು ಸಾಕ್ಷಿ.
0 komentar

Blog Archive