ಜನ ಲೋಕಪಾಲ್ ಮಸೂದೆಗಾಗಿ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಆಂದೋಲನಕ್ಕೆ ಮೊದಲ ಹಂತದ ಜಯ ಲಭಿಸಿದೆ. ಅಣ್ಣಾ ಹಜಾರೆ ದೇಶದ ಹೊಸ ಹೀರೋ ಆಗಿ ಆವಿರ್ಭವಿಸಿದ್ದಾರೆ. ದೇಶಾದ್ಯಂತ ಅಣ್ಣಾ ಹೋರಾಟಕ್ಕೆ ಧ್ವನಿಗೂಡಿಸಿದವರೆಲ್ಲ ಸಂಭ್ರಮಾಚರಿಸಿದ್ದಾರೆ. ಇದು ಹೊಸ ಆಶಾವಾದಕ್ಕೆ ಕಾರಣವಾಗಿದೆ. ಏಕಾಏಕಿ ಉದ್ಭವಿಸಿದ ಒಂದು ಜನಾಂದೋಲನ ಪ್ರಜಾಪ್ರಭುತ್ವದ ಸಾಧ್ಯತೆಗಳನ್ನು ವಿವರಿಸಿದೆ. ನಿಜ, ಜಡಗಟ್ಟಿದ್ದ ವ್ಯವಸ್ಥೆಯ ವಿರುದ್ಧ ಈ ಬೆಳವಣಿಗೆ ಒಂದು ಸಂಚಲನವನ್ನಂತೂ ಸೃಷ್ಟಿಸಿದೆ.

ಜನ ಲೋಕಪಾಲ್ ಮಸೂದೆ ಜಾರಿಗೆ ಬರಬಹುದು, ಅಲ್ಲಿಗೆ ಅಣ್ಣಾ ಹಜಾರೆಯವರ, ನಮ್ಮೆಲ್ಲರ ಹೋರಾಟವೂ ಯಶಸ್ವಿಯಾಗಬಹುದು. ಅಷ್ಟಕ್ಕೇ ಭ್ರಷ್ಟಾಚಾರ ಸಂಪೂರ್ಣ ನಾಶವಾಗಿಬಿಡುವುದೇ? ದಿನ ಬೆಳಗಾಗುವುದರೊಳಗೆ ಭ್ರಷ್ಟರೆಲ್ಲ ಜೈಲು ಸೇರಿಬಿಡುತ್ತಾರೆಯೇ? ನಮ್ಮಲ್ಲಿ ವರದಕ್ಷಿಣೆಯನ್ನು ತಡೆಗಟ್ಟುವುದಕ್ಕೆ ಪರಿಣಾಮಕಾರಿಯಾದ ಕಾನೂನುಗಳಿಗೆ, ಅಸ್ಪೃಶ್ಯತೆಯನ್ನು ಕಿತ್ತು ಹಾಕಲು ಗಂಭೀರವಾದ ಕಾಯ್ದೆಗಳಿವೆ. ಸಾಮಾಜಿಕ ಅನಿಷ್ಟಗಳ ವಿರುದ್ಧ ನಮ್ಮ ಕಾನೂನುಗಳು ಸಕ್ಷಮವಾಗೇ ಇದೆ. ಆದರೆ ವರದಕ್ಷಿಣೆ ನಿಂತಿದೆಯೇ? ಅಸ್ಪೃಶ್ಯತೆ ತೊಲಗಿದೆಯೇ?

ಯಾವ ಜನ ಲೋಕಪಾಲ್ ವ್ಯವಸ್ಥೆಗಾಗಿ ನಾವು ಒಕ್ಕೊರಲಿನಿಂದ ಕೂಗಿಡುತ್ತಿದ್ದೇವೆಯೋ, ಅದರ ಭಾಗಶಃ ಆಶಯಗಳನ್ನು ಈಡೇರಿಸುವ ಲೋಕಾಯುಕ್ತ ಸಂಸ್ಥೆ ಕರ್ನಾಟಕದಲ್ಲಿದೆ, ಕ್ರಿಯಾಶೀಲವಾಗಿದೆ. ಅದು ತನ್ನ ವ್ಯಾಪ್ತಿಯಲ್ಲಿ ಸಾಕಷ್ಟು ಕೆಲಸಗಳನ್ನೂ ಮಾಡಿದೆ. ಹಾಗಿದ್ದಾಗ್ಯೂ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.೧ ಪಟ್ಟ ಪಡೆದುಕೊಂಡಿದ್ದು ಹೇಗೆ?

ನಿಜ, ನಾವು ಸಿನಿಕರಾಗೋದು ಬೇಡ. ನಿರಾಶಾವಾದಿಗಳಂತೂ ಖಂಡಿತಾ ಆಗಬೇಕಿಲ್ಲ. ಆದರೆ ವಾಸ್ತವನ್ನು ಮರೆಯುವುದು ಮೂರ್ಖತನ. ಭ್ರಮೆಗಳಲ್ಲಿ ತೇಲಾಡುವುದು ನಮಗೆ ಅಂಟಿದ ಜಾಡ್ಯ. ಸಮೂಹ ಸನ್ನಿಗಳಿಗೆ ಒಳಗಾಗುವುದು ನಮ್ಮ ದೌರ್ಬಲ್ಯ. ಇವುಗಳನ್ನು ಮೀರಿ ಯೋಚಿಸಿದರೆ, ನಾವು ಮಾಡಬೇಕಾಗಿರುವ ಸಾಕಷ್ಟು ಕೆಲಸಗಳೂ ಕಣ್ಣಿಗೆ ಕಾಣಿಸಬಹುದು.

ಜೆಪಿ ಚಳವಳಿ ಹಾಗು ರೈತ ಸಂಘಟನೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಂದರ್ಭದ ದಿನಗಳನ್ನು ನೆನಪಿಸಿಕೊಳ್ಳೋಣ. ಅಂದು ಚಳವಳಿಯಲ್ಲಿ ತೊಡಗಿದ್ದವರು ವೈಯಕ್ತಿಕ ಚಾರಿತ್ರ್ಯವನ್ನು ಶುದ್ಧವಾಗಿಟ್ಟುಕೊಂಡಿದ್ದರು. ಬಹುತೇಕರು ಆಡಂಬರದ ಮದುವೆಗಳನ್ನು ಧಿಕ್ಕರಿಸಿದರು, ಸರಳವಾಗಿ ಮದುವೆಯಾದರು. ಯಾರೂ ಯಾರಿಗೂ ಯಾವ ಕಾರಣಕ್ಕೂ ಒಂದು ರೂಪಾಯಿ ಲಂಚ ಕೊಟ್ಟವರಲ್ಲ. ಅದ್ದೂರಿ ಮದುವೆಗಳು ತಮ್ಮ ಸಂಬಂಧಿಕರದ್ದೇ ನಡೆದರೂ ಅಲ್ಲಿಗೆ ಹೋದವರಲ್ಲ. ಇದೆಲ್ಲವೂ ಚಳವಳಿಗಾರರಲ್ಲಿ ಒಂದು ನೈತಿಕ ಶಕ್ತಿಯನ್ನು ತಂದುಕೊಟ್ಟಿತ್ತು. ಹೀಗಾಗಿಯೇ ರೈತ ಚಳವಳಿಗಾರರು ಭ್ರಷ್ಟ ಅಧಿಕಾರಿಗಳನ್ನು ತಮ್ಮದೇ ಆದ ಶೈಲಿಯಲ್ಲಿ ಎದುರಿಸುತ್ತಿದ್ದರು. ಪ್ರೊ.ಎಂ.ಡಿ.ಎನ್. ಅವರಂತೂ ಭ್ರಷ್ಟರ ಕೆನ್ನೆಗೆ ಬಾರಿಸುತ್ತಿದ್ದ ಘಟನೆಗಳನ್ನೂ ಈ ಹಿನ್ನೆಲೆಯಲ್ಲೇ ನಾವು ಅರ್ಥೈಸಿಕೊಳ್ಳಬೇಕು.

ಚಳವಳಿಯ ನಿಜವಾದ ಶಕ್ತಿಯೇ ಚಳವಳಿಗಾರರ ನೈತಿಕತೆ. ಅದು ಉಳಿಯದ ಹೊರತು ಚಳವಳಿಯೂ ಉಳಿಯದು. ಹಾಗಿದ್ದಲ್ಲಿ ವಿ ದ ಕಾಮನ್ ಪೀಪಲ್ ಆಫ್ ಇಂಡಿಯಾ ಏನು ಮಾಡಬಹುದು? ಅಣ್ಣಾ ಹಜಾರೆಯವರ ಚಳವಳಿಯನ್ನು ಜೀವಂತವಾಗಿ ಉಳಿಸಿಕೊಳ್ಳಲೇಬೇಕೆಂದಿದ್ದರೆ ಚಳವಳಿಗಾರರು ಇಟ್ಟುಕೊಳ್ಳಲೇಬೇಕಾದ ಕನಿಷ್ಠ ಸಾಮಾಜಿಕ ಪ್ರಜ್ಞೆಯಾದರೂ ಏನು? ಕೆಲವನ್ನು ನಾವು ಇಲ್ಲಿ ಪಟ್ಟಿ ಮಾಡುತ್ತಿದ್ದೇವೆ, ನಮಗೆ ಚೆನ್ನಾಗಿ ಗೊತ್ತು, ನಮ್ಮ ಓದುಗರು ಇದನ್ನು ವಿಸ್ತರಿಸುತ್ತಾರೆ.

೧. ಭ್ರಷ್ಟಾಚಾರದ ವಿರುದ್ಧ ಜನ ಲೋಕಪಾಲ್ ಬರಬೇಕೆಂದು ಆಗ್ರಹಿಸುವ ನಾವು ನಮ್ಮ ಎದೆಯ ಒಳಗಿನ ಲೋಕಪಾಲರನ್ನು ಮೊದಲು ಜಾಗೃತಗೊಳಿಸಬೇಕು. ಪ್ರತ್ಯಕ್ಷ ಹಾಗು ಪರೋಕ್ಷ ರೂಪದಲ್ಲಿ ಲಂಚವನ್ನು ಪಡೆಯುವುದಾಗಲೀ, ಕೊಡುವುದಾಗಲೀ ಮಾಡುವುದಿಲ್ಲವೆಂದು ಮೊದಲು ಪ್ರತಿಜ್ಞೆ ಮಾಡಬೇಕು. ಸಂದರ್ಭ ಎದುರಾದಾಗ ಒಬ್ಬನೇ/ಒಬ್ಬಳೇ ಆದರೂ ಸಹ ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸುವ ಧೈರ್ಯವನ್ನು ನಾವು ತೋರಬೇಕು. ಸಣ್ಣ ಪುಟ್ಟ ರಿಸ್ಕ್‌ಗಳನ್ನು ತೆಗೆದುಕೊಳ್ಳುವುದನ್ನು ನಾವು ಅಭ್ಯಾಸ ಮಾಡಿಕೊಳ್ಳಬೇಕು.

೨. ನಾವು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದೇವೆ. ಇದು ಸದ್ಯದ ಸ್ಥಿತಿಯಲ್ಲಿ ಇರುವ ಶ್ರೇಷ್ಠ ವಿಧಾನ. ನಾವು ಪ್ರಜಾಪ್ರಭುತ್ವದ ಬಲವರ್ಧನೆಯ ಸಾಧ್ಯತೆಗಳನ್ನು ವಿಸ್ತರಿಸುವ ಕೆಲಸವನ್ನಷ್ಟೇ ಮಾಡಬೇಕಿದೆ. ಹಾಗಿರುವಾಗ ನಾವು ನಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಮ್ಮ ರಾಜಕಾರಣಿಗಳನ್ನು ಮೂದಲಿಸುವ, ನಿಂದಿಸುವ ಮಧ್ಯಮ, ಮೇಲ್‌ಮಧ್ಯಮ, ಶ್ರೀಮಂತ ಜನವರ್ಗ ಮತದಾನದ ಸಂದರ್ಭದಲ್ಲಿ ಮನೆ ಬಿಟ್ಟು ಹೊರಬರುವುದಿಲ್ಲ. ಮತದಾನ ಮಾಡದೇ ಇರುವುದಕ್ಕೆ ಅದೇ ಚರ್ವಿತ ಚರ್ವಣ ಕಾರಣಗಳನ್ನು ಕೊಡುತ್ತೇವೆ. ಇದು ಬದಲಾಗಬೇಕು. ಪ್ರಜಾಪ್ರಭುತ್ವದ ಬಹುಮುಖ್ಯ ಸಾಧನವಾದ ಚುನಾವಣೆಗಳನ್ನು ನಾವು ಬಳಸಿಕೊಳ್ಳಬೇಕು. ಹಣಕ್ಕಾಗಿ, ಆಮಿಷಗಳಿಗಾಗಿ ಬಲಿಯಾಗದೆ ಮತ ಚಲಾಯಿಸಬೇಕು, ಭ್ರಷ್ಟಾಚಾರವಿಲ್ಲದಂತೆ ಚುನಾವಣೆ ನಡೆಯುವ ಪರಿಸ್ಥಿತಿಯನ್ನು ಸೃಷ್ಟಿಸಬೇಕು. ಹಾಗಾದಾಗ ಪ್ರಾಮಾಣಿಕರೂ ರಾಜಕಾರಣದಲ್ಲಿ ಹೆಚ್ಚುಹೆಚ್ಚು ಪಾಲ್ಗೊಳ್ಳಲು ಸಾಧ್ಯವಾಗುತ್ತದೆ.

೩. ಭ್ರಷ್ಟಾಚಾರ ಈಗ ಮೊದಲಿನ ಸ್ವರೂಪದಲ್ಲಿ ಇಲ್ಲ. ಬಹುತೇಕ ಸಂದರ್ಭಗಳಲ್ಲಿ ಕೊಡುವವರು ಪಡೆದುಕೊಳ್ಳುವವರಷ್ಟೇ ನೀಚರಾಗಿದ್ದಾರೆ. ಕೊಡುವವರಿಗೆ ಕೊಡುವುದಕ್ಕೆ ಕಾರಣವೂ ಇರುತ್ತದೆ. ನಿಯಮ ಬಾಹಿರವಾಗಿ ಕೆಲಸ ಆಗಬೇಕೆಂದು ಬಯಸುವವನು ಲಂಚ ಕೊಡುತ್ತಾನೆ. ಆತ ಲಂಚ ಪಡೆಯಲು ಹಿಂಜರಿಯುವವನನ್ನೂ ಭ್ರಷ್ಟನನ್ನಾಗಿಸುತ್ತಾನೆ. ಹೀಗಾಗಿ ಲಂಚ ಪಡೆಯುವುದು ಎಷ್ಟು ಅನೈತಿಕವೋ, ಕೊಡುವುದೂ ಅನೈತಿಕ ಎಂಬುದನ್ನು ನಾವು ಸ್ಪಷ್ಟಪಡಿಸಿಕೊಳ್ಳಬೇಕು.

೪. ಭ್ರಷ್ಟಾಚಾರಕ್ಕೆ ಪ್ರೇರಣೆ ನೀಡುವ ನಮ್ಮ ಕೊಳ್ಳುಬಾಕತನವನ್ನು ಈಗಲಾದರೂ ಕಡಿಮೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕು. ದೊಡ್ಡ ದೊಡ್ಡ ಶಾಪಿಂಗ್ ಮಾಲ್‌ಗಳ ಆಕರ್ಷಣೆಗಳಿಂದ ಬಚಾವಾಗಬೇಕು. ಅದ್ದೂರಿ ಮದುವೆ-ಮುಂಜಿ ಇತ್ಯಾದಿ ಕಾರ್ಯಕ್ರಮಗಳನ್ನು ನಿಲ್ಲಿಸಬೇಕು, ಅಂಥವುಗಳಿಗೆ ಹೋಗುವುದಿಲ್ಲವೆಂದು ಪ್ರತಿಜ್ಞೆ ಮಾಡಬೇಕು.

೫. ಭ್ರಷ್ಟಾಚಾರವನ್ನು ಇಂದು ಜಾತೀಯತೆ ಪೋಷಿಸುತ್ತಿದೆ. ಎರಡರ ಮಿಶ್ರಣ ಭೀಕರವಾದ ಸಾಮಾಜಿಕ ಅವನತಿಗೆ ಕಾರಣವಾಗುತ್ತಿದೆ. ಮುಖ್ಯಮಂತ್ರಿ, ಮಂತ್ರಿ ನಮ್ಮ ಜಾತಿಯವರೆಂಬ ಕಾರಣಕ್ಕೆ ಪೋಷಿಸುವ, ಸಮರ್ಥಿಸುವ, ಬೆಂಬಲಿಸುವ ಧೋರಣೆಯನ್ನು ನಾವು ಮೊದಲು ಕೈಬಿಡಬೇಕು. ಎಲ್ರೂ ತಿಂದಿಲ್ವೇನ್ರೀ, ನಮ್ಮವನಲ್ವಾ, ಇವನೂ ತಿನ್ನಲಿ ಬಿಡಿ ಎಂದು ಸಾಮಾನ್ಯ ಜನರೂ ವಿಕೃತ ಜಾತೀಯತೆ ಪ್ರದರ್ಶಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇದು ಹೋಗಬೇಕು. ನಾವು ಕಟ್ಟಿಕೊಂಡಿರುವ ಅನೈತಿಕ ಜಾತಿಕೂಟಗಳನ್ನು ವಿಸರ್ಜಿಸಬೇಕು, ಅವುಗಳನ್ನು ಜಾತ್ಯತೀತ ವೇದಿಕೆಗಳನ್ನಾಗಿ ಪುನರ್ ರೂಪಿಸಬೇಕು. ಭ್ರಷ್ಟರೆಂದು ಗೊತ್ತಿದ್ದೂ ತಮ್ಮ ಜಾತಿಯವನನ್ನು ಮಂತ್ರಿ, ಮುಖ್ಯಮಂತ್ರಿ ಮಾಡಲು ಯತ್ನಿಸುವ, ಅವರ ಸ್ಥಾನಮಾನಗಳನ್ನು ಉಳಿಸಲು ಕುತಂತ್ರಗಳನ್ನು ನಡೆಸುವ ಎಲ್ಲ ಧರ್ಮಗಳ ಧಾರ್ಮಿಕ ಮುಖಂಡರನ್ನು, ಮಠಾಧೀಶರನ್ನು, ಬೊಗಳೆ ಸ್ವಾಮೀಜಿಗಳನ್ನು ಧಿಕ್ಕರಿಸಬೇಕು.

೬. ನಾವು, ನಮ್ಮ ಮಕ್ಕಳು ವರದಕ್ಷಿಣೆ ಪಡೆಯುವುದಿಲ್ಲ, ಮತ್ತು ಕೊಡುವುದಿಲ್ಲ ಎಂದು ತೀರ್ಮಾನಕ್ಕೆ ಬರಬೇಕು. ವರದಕ್ಷಿಣೆ ಪಡೆಯುವುದು ಅತ್ಯಂತ ಹೀನ ಆಚರಣೆ ಎಂದು ಪಡೆಯುವವರಿಗೇ ಅನ್ನಿಸುವಂತೆ ಮಾಡುವ ಪ್ರಜ್ಞೆಯನ್ನು ನಾವು ಮೂಡಿಸಬೇಕು. ಇದು ರಾತ್ರೋರಾತ್ರಿ ಆಗುವ ಕೆಲಸವೇನಲ್ಲ, ಆದರೆ ಅದು ಎಂದಾದರೂ ಆಗಲೇಬೇಕು.

೭. ದೇಶಭಕ್ತಿ ಎಂದರೆ ಭಾರತ ತಂಡ ಕ್ರಿಕೆಟ್‌ನಲ್ಲಿ ಗೆದ್ದಾಗ ಆಚರಿಸುವಂಥದ್ದಲ್ಲ. ದೇಶವನ್ನು ಪರಿಪೂರ್ಣವಾದ ಅರ್ಥದಲ್ಲಿ ಪುನರ್‌ನಿರ್ಮಿಸುವ ಹೊಣೆಗಾರಿಕೆ ಎಲ್ಲರಿಗೂ ಇರುತ್ತದೆ. ನಮ್ಮ ಸಹ ದೇಶವಾಸಿಯೊಬ್ಬ ಸಮಸ್ಯೆಗೆ ಸಿಲುಕಿದಾಗ ಆತನಿಗೆ ಸಹಕರಿಸುವುದು ನಿಜವಾದ ದೇಶಸೇವೆ. ವೃದ್ಧ ಹೋರಾಟಗಾರ ಅಣ್ಣಾ ಹಜಾರೆ ಉಪವಾಸಕ್ಕೆ ಕುಳಿತಾಗ ನಮಗೆ ಆದ ತಳಮಳವೇ ತಿನ್ನಲು ಏನೇನೂ ಇಲ್ಲದೇ ಬದುಕುತ್ತಿರುವ, ಅನಿವಾರ್ಯ ಉಪವಾಸಕ್ಕೆ ಒಳಗಾಗಿರುವನ್ನು ನೆನೆದಾಗಲೂ ಆಗಬೇಕು. ದೇಶದ ಬಹುಪಾಲು ಜನರು ಉಪವಾಸವಿರುವುದನ್ನು ನಾವು ನೋಡಿಯೂ ನೋಡದಂತಿದ್ದರೆ ನಮ್ಮದು ಯಾವ ದೇಶಭಕ್ತಿ? ದೇಶದ ಬಹುಪಾಲು ದಲಿತರು ಇನ್ನೂ ಅಸ್ಪೃಶ್ಯತೆಯ ನರಕದಲ್ಲಿ, ಪ್ರತ್ಯೇಕ ಕಾಲನಿಗಳಲ್ಲಿ, ಮುಟ್ಟಿಸಿಕೊಳ್ಳದಂತೆ, ಯಾರೂ ಕಣ್ಣಿಗೂ ಬೀಳಲಾಗದಂತೆ ಬದುಕುತ್ತಿದ್ದರೆ, ಅದನ್ನು ನೋಡಿ ನಮ್ಮಲ್ಲಿ ಯಾವ ಭಾವನೆಯೂ ಹುಟ್ಟದಿದ್ದರೆ ನಮ್ಮದು ಎಂಥ ದೇಶಭಕ್ತಿ? ಅಂಥ ದೇಶಭಕ್ತಿಗೆ ಯಾವ ಅರ್ಥವೂ ಇಲ್ಲ. ಪರಿಶುದ್ಧ ಸಮಾಜವನ್ನು ಕಟ್ಟಬಯಸುವ ನಾವು ಎಲ್ಲ ರೀತಿಯ ಸಾಮಾಜಿಕ ಸಮಸ್ಯೆಗಳಿಗೂ ಸ್ಪಂದಿಸಬೇಕು. ಭ್ರಷ್ಟಾಚಾರವನ್ನು, ಕಪ್ಪುಹಣವನ್ನು ವಿರೋಧಿಸುವುದೆಂದರೆ ಸಂಪತ್ತಿನ ಹಂಚಿಕೆಯನ್ನು ಬೆಂಬಲಿಸುವುದು. ದುಡಿಮೆ ಮತ್ತು ದುಡಿಮೆಯ ವ್ಯಾಖ್ಯೆಗಳನ್ನು ಬದಲಿಸುವುದು. ದೈಹಿಕ ಶ್ರಮದ ದುಡಿಮೆಗೂ ಸರಿಯಾದ ಪ್ರತಿಫಲ ದೊರೆಯುವಂತೆ ನೋಡಿಕೊಳ್ಳುವುದು. ಆ ಕಡೆ ನಮ್ಮ ಗಮನಹರಿಸಬೇಕಾಗುತ್ತದೆ.

೮. ಕಡೆಯದಾಗಿ ನಮ್ಮ ಮೀಡಿಯಾಗಳು. ಬಹುತೇಕ ಮೀಡಿಯಾಗಳು ಕಪಟಿಯಾಗಿವೆ. ಜನರ ದೌರ್ಬಲ್ಯಗಳನ್ನು ಬಂಡವಾಳ ಮಾಡಿಕೊಂಡಿವೆ. ಅವುಗಳು ನಮ್ಮ ಭಾವನೆಗಳನ್ನು, ನೋವನ್ನು, ತವಕ-ತಲ್ಲಣಗಳನ್ನು ತಮ್ಮ ಮಾರಾಟದ ಸರಕನ್ನಾಗಿ ಮಾಡಿಕೊಂಡಿವೆ. ಮೀಡಿಯಾಗಳು ಹಾಗು ಎಲ್ಲ ಖಾಸಗಿ ಸಂಸ್ಥೆಗಳನ್ನೂ ಸಹ ಜನ ಲೋಕಪಾಲ್‌ನಂಥ ಸಂಸ್ಥೆಯ ಅಧೀನಕ್ಕೆ ತರುವ ಕೆಲಸವೂ ಆಗಬೇಕಿದೆ.

ನಾವು ಕನಿಷ್ಠ ಮಟ್ಟದ ನೈತಿಕ ಸಂಹಿತೆಗಳನ್ನು ಅಳವಡಿಸಿಕೊಳ್ಳದೇ ಹೋದಲ್ಲಿ, ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಜೈ ಅನ್ನುವ ನಮ್ಮ ಕೈಗಳಲ್ಲಿ ಯಾವ ಶಕ್ತಿಯೂ ಇರುವುದಿಲ್ಲ. ಹಾಗೆ ಮಾಡುವುದು ಆತ್ಮಘಾತಕತನ. ಯಾರೂ ಸಹ ತಮ್ಮನ್ನು ತಾವು ಭ್ರಷ್ಟಾಚಾರಿಗಳೆಂದು ಕರೆದುಕೊಳ್ಳುವುದಿಲ್ಲ. ಆದ್ದರಿಂದಲೇ ಎಲ್ಲರೂ ಭ್ರಷ್ಟಾಚಾರಕ್ಕೆ ಧಿಕ್ಕಾರ ಎಂದು ಕೂಗುತ್ತಿದ್ದಾರೆ. ಕನಿಷ್ಠ ಹೀಗೆ ಕೂಗಿದ ಮಾತ್ರಕ್ಕಾದರೂ ಭ್ರಷ್ಟಾಚಾರಿಗಳು ಬದಲಾದರೆ ಅದು ಒಂದು ಪವಾಡವಾಗುತ್ತದೆ. ಇಂಥ ಪವಾಡಗಳಿಗೆ ಕಾಯುವುದು ಮೂರ್ಖತನ.

ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.

ಕೊನೆಯ ಮಾತು: ಬ್ರಹ್ಮಾಂಡ ಶರ್ಮನೂ ಸೇರಿದಂತೆ ಎಲ್ಲ ಟಿವಿ ಜ್ಯೋತಿಷಿಗಳ ವಿರುದ್ಧದ ನಮ್ಮ ಪ್ರತಿಭಟನೆಯನ್ನು ದಾಖಲಿಸಬೇಕಿದೆ. ಅನೇಕ ಉಪಯುಕ್ತ ಸಲಹೆಗಳು ಬಂದಿವೆ. ಈ ವಾರ ಆ ಕೆಲಸವನ್ನು ಗಂಭೀರವಾಗಿ ಕೈಗೆತ್ತಿಕೊಳ್ಳೋಣವೆಂದುಕೊಂಡಿದ್ದೇವೆ. ನಮ್ಮ ಓದುಗರ ಪೈಕಿ ಕನಿಷ್ಠ ಶೇ.೫೦ ರಷ್ಟು ಮಂದಿಯಾದರೂ ಈ ಪುಟ್ಟ ಅಭಿಯಾನವನ್ನು ಬೆಂಬಲಿಸಿದರೆ ಏನಾದರೂ ಬದಲಾವಣೆ ತರಬಹುದೇನೋ? ಜೊತೆಗಿರುತ್ತೀರಿ ತಾನೆ?
0 komentar

Blog Archive