ವಿ ದ ಕಾಮನ್ ಪೀಪಲ್ ಆಫ್ ಇಂಡಿಯಾ...
ದಿಢೀರಂತ ಎದ್ದು ಕೂತಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕಿನಿಂದ ಹಿಡಿದು ದಿಲ್ಲಿಯ ಜಂತರ್‌ಮಂತರ್‌ವರೆಗೆ ನಮ್ಮದೇ ಹಿಂಡು, ಕೈಯಲ್ಲಿ ರಾಷ್ಟ್ರಧ್ವಜ, ಎದೆಯಲ್ಲಿ ದೇಶಪ್ರೇಮ. ಮೊಂಬತ್ತಿ ಹಿಡಿದು ನಾವು ಹೊರಟವೆಂದರೆ ಸಾಕು ಮೀಡಿಯಾಗಳ ಸಾಲುಸಾಲು ಓಬಿ ವ್ಯಾನುಗಳು. ನಾವು ಭ್ರಷ್ಟಾಚಾರದ ವಿರುದ್ಧ ಗಾಂಧಿಗಿರಿ ನಡೆಸುವವರು, ದಂಗೆ ಎದ್ದವರು. ಎರಡನೇ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿಸಿದವರು...
ಇಷ್ಟು ವರ್ಷ ನಮಗೆ ಗಡದ್ದು ನಿದ್ದೆ ನೋಡಿ. ನಿದ್ರಿಸಿದ್ದು ಸಾಕಾಯಿತು, ಈಗ ಎದ್ದು ನಿಂತಿದ್ದೇವೆ, ದೇಶಸೇವೆಗಾಗಿ. ಹಾಗೆ ನೋಡಿದ್ರೆ ಇದೊಂದು ವಿಷಯದಲ್ಲಿ ಮಾತ್ರ ನಮಗೆ ನಿದ್ದೆ. ಬೇರೆ ಎಲ್ಲೆಡೆ ನಾವು ಜಾಗೃತರಾಗಿರುತ್ತೇವೆ, ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತೇವೆ. ನಮಗೆ ಆಚರಿಸಲು ಒಂದು ಈವೆಂಟು ಬೇಕು ಅಷ್ಟೆ. ಕಡಲೆಕಾಯಿ ಪರಿಷೆ, ಕೇಕ್ ಶೋ, ಉಕ್ಕಿನ ಹಕ್ಕಿಗಳ ಏರ್ ಶೋ, ಸಾಹಿತ್ಯ ಸಮ್ಮೇಳನ ಇತ್ಯಾದಿ ಏನೇ ನಡೆದರು ಮಕ್ಕಳು ಮರಿಗಳೊಂದಿಗೆ ನಾವು ಹಾಜರ್. ಅಷ್ಟೇ ಏಕೆ ಬ್ರಹ್ಮಾಂಡದ ನರೇಂದ್ರ ಶರ್ಮ ಡೋಂಗಿ ಪ್ರವಚನ ಕೊಡುತ್ತಾನೆ ಎಂದರೂ ನಾವು ಕಿಕ್ಕಿರಿದು ನೆರೆಯುತ್ತೇವೆ. ನಾವೇ ಗಣಪತಿ, ಜೀಸಸ್ ಹಾಲು ಕುಡಿದರೆಂದು ಪುಕಾರು ಹಬ್ಬಿಸಿ ಜಾತ್ರೆ ಮಾಡಿದವರು. ನಾವೇ ನಮ್ಮ ನಮ್ಮ ಮನೆಗಳ ಮೇಲೆ ನಾಳೆ ಬಾ ಎಂದು ಭೂತಪ್ರೇತಗಳನ್ನುದ್ದೇಶಿಸಿ ಬರೆದುಕೊಂಡವರು. ನಾವು ಎಲ್ಲ ಕಡೆಯಲ್ಲೂ ಇದ್ದೇವೆ. ಸಮೂಹ ಸನ್ನಿ ಎಂದರೆ ನಮಗೆ ಬಲು ಪ್ರೀತಿ. ಅಲ್ಲೆಲ್ಲ ನಾವಿರುತ್ತೇವೆ. ವಿ ದ ಕಾಮನ್ ಪೀಪಲ್ ಆಫ್ ಇಂಡಿಯಾ...
ಇಷ್ಟು ವರ್ಷ ಬೇಕಾಯ್ತು ನೋಡಿ ಅಣ್ಣಾ ಹಜಾರೆಯವರ ಹೋರಾಟದ ಬದುಕನ್ನು ಅರ್ಥಮಾಡಿಕೊಳ್ಳಲು. ಆತ ಹಳ್ಳಿಯೊಂದರಲ್ಲಿ ಮಾಡಿದ ಜೀವಂತ ಪವಾಡ ಅರಿತುಕೊಳ್ಳಲು ಇಷ್ಟು ಕಾಲ ಬೇಕಾಯ್ತು. ಇಷ್ಟು ವರ್ಷ ನಾವು ಬೂದಿ, ಉಂಗುರ ಮಂತ್ರಿಸಿ ಕೊಡುವ ಪವಾಡ ನಡೆಸುವ ಬಾಬಾಗಳ ಹಿಂದೆ ಇದ್ದವರು. ಈಗಲೂ ಅಂಥವರಿಗೆ ನಾವೇ ಆಶ್ರಯದಾತರು. ಈಗ ಅಣ್ಣಾ ಹಜಾರೆಯ ಮಾತು ಬಂದಿದೆ. ಹಿಂದೆ ಮಸುಕು ಮಸುಕಾಗಿ ಈ ಹೆಸರನ್ನು ಕೇಳಿದ್ದ ನೆನಪು. ಆದರೆ ಈಗ ನಮಗೆ ಆತನಲ್ಲಿ ಇನ್ನೊಬ್ಬ ಗಾಂಧಿ ಕಾಣಿಸುತ್ತಿದ್ದಾರೆ. ನಾವು ಒಕ್ಕಟ್ಟಾಗಿ ಚೀರುತ್ತಿದ್ದೇವೆ, ಅಣ್ಣಾ ಹಜಾರೆ ಜಿಂದಾಬಾದ್.
ನಮಗೆ ಹೋರಾಟ, ಚಳವಳಿ ಇದೆಲ್ಲ ಅಪರಿಚಿತ ಶಬ್ದಗಳು ಕಣ್ರೀ. ಹಿಂದೆಲ್ಲ ಒಂದು ಹೋರಾಟದ ಮೆರವಣಿಗೆ ಹೋದರೆ ಮುಸಿಮುಸಿ ನಗುತ್ತಿದ್ದವರು ನಾವು, ಇದೆಲ್ಲ ಕೆಲಸವಿಲ್ಲದವರು ಮಾಡುವ ಪ್ರಹಸನ ಎಂದೇ ಭಾವಿಸಿದ್ದವರು. ಪ್ರತಿಭಟನೆ ಮಾಡೋರೆಲ್ಲ ಪುಂಡರು-ಪೋಕರಿಗಳು ಎಂದೇ ಭಾವಿಸಿದವರು ನಾವು. ನಮಗೆ ಸಮಸ್ಯೆಗಳು ಉದ್ಭವಿಸಿದಾಗಲೆಲ್ಲ ಈ ಪ್ರತಿಭಟನಾಕಾರರು ಎಲ್ಲಿ ಸತ್ತು ಹೋದರೋ ಎಂದು ಬೈದುಕೊಂಡವರು.
ಏನೇನೋ ನಡೆದು ಹೋದರೂ ನಾವು ಕದಲಲಿಲ್ಲ. ಈಗ ಎದ್ದು ನಿಂತಿದ್ದೇವೆ. ಸಾವಿರ ಸಾವಿರ ರೈತರು ಇದೇ ನಾಡಿನಲ್ಲಿ ಬದುಕಲಾಗದೆ ಆತ್ಮಹತ್ಯೆ ಮಾಡಿಕೊಂಡರು ಸತ್ತರು. ನಮಗೆ ಅದು ಸುದ್ದಿಯೂ ಅನಿಸಲಿಲ್ಲ. ರೈತರು ಸತ್ತ ಮೇಲೆ ಕೂಲಿಕಾರ್ಮಿಕರು ಏನಾಗಲು ಸಾಧ್ಯ? ಅವರೂ ಸತ್ತರು, ಲೆಕ್ಕ ಯಾರ ಬಳಿಯಲ್ಲೂ ಇಲ್ಲ. ರೈತರ ಜಮೀನನ್ನು ಕಿತ್ತು ನಮ್ಮದೇ ಸರ್ಕಾರಗಳು ದೊಡ್ಡ ದೊಡ್ಡ ಕಾರ್ಪರೇಟ್ ಸಂಸ್ಥೆಗಳಿಗೆ ಕೊಟ್ಟಾಗಲೂ ನಾವು ಕೊಸರಾಡಲಿಲ್ಲ, ಮಿಸುಕಾಡಲಿಲ್ಲ. ನಮ್ಮದೇ ಸಹೋದರರಂಥ ದೀನದಲಿತರಿಗೆ ಮಲ ತಿನ್ನಿಸಿದಾಗ, ಉಚ್ಚೆ ಕುಡಿಸಿದಾಗ, ಜೀವಂತ ಸುಟ್ಟು ಹಾಕಿದಾಗ ನಾವು ಮಾತನಾಡಲೇ ಇಲ್ಲ. ರೈತರು ಬಂದು ಬೀದಿಯಲ್ಲಿ ಟೊಮೋಟೋ, ಹಸಿಮೆಣಸಿನ ಕಾಯಿ ಚೆಲ್ಲಿದಾಗ ಯಾಕೆ ಹಾಗೆ ಮಾಡಿದರೆಂದೂ ನಾವು ತಲೆಕೆಡಿಸಿಕೊಳ್ಳಲಿಲ್ಲ. ನಾವು ಮಂದಿರ-ಮಸೀದಿ ಎಂದು ನಮ್ಮಲ್ಲೇ ಹೊಡೆದಾಡಿಕೊಂಡು ಸತ್ತೆವು, ನಮ್ಮದೇ ದೇಶದಲ್ಲಿ ಬಾಂಬುಗಳು ಸಿಡಿದವು. ಅವುಗಳಿಗೆ ನೂರಾರು ಮಂದಿ ಸತ್ತರು. ಸತ್ತವರಲ್ಲಿ, ಸಾಯಿಸಿದವರಲ್ಲಿ ಎಲ್ಲಾ ಧರ್ಮದವರೂ ಇದ್ದರು. ನಮ್ಮ ಕೋಮುದ್ವೇಷಕ್ಕೆ ನಾವೇ ಬಲಿಯಾಗಿಹೋದೆವು. ಇದು ಸರಿಯಲ್ಲ ಎಂದು ನಮಗೆ ಆಗ ಅನ್ನಿಸಿರಲಿಲ್ಲ. ಆದರೆ ಹಾಗಂತ ನಮ್ಮನ್ನು ಯಾರೂ ದೂಷಿಸಬೇಡಿ, ಕಡೆಗಾದರೂ ನಾವು ಎಚ್ಚೆತ್ತಿದ್ದೇವೆ, ನಮ್ಮ ದೇಶಭಕ್ತಿಯನ್ನು ಪ್ರಶ್ನಿಸಬೇಡಿ.
ದೇಶಭಕ್ತಿ ಅಂದ್ರೆ ನಮಗೆ ನೆನಪಾಗುವುದು ಕ್ರಿಕೆಟ್ಟು ಕಣ್ರೀ. ಅದರಲ್ಲೂ ನಮ್ಮ ಬಿಸಿಸಿಐ ತಂಡ ಪಾಕಿಸ್ತಾನದ ತಂಡದ ಮೇಲೆ ಗೆದ್ದರೇ ನಮ್ಮ ದೇಶಭಕ್ತಿ ಸಾರ್ಥಕವಾಗೋದು. ಕ್ರಿಕೆಟ್‌ನ ದೈತ್ಯರಾದ, ಸತತ ಮೂರು ಸರ್ತಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಮೇಲೆ ನಮ್ಮ ತಂಡ ಗೆದ್ದಾಗ ನಾವು ಒಂದೇ ಒಂದು ಪಟಾಕಿ ಹೊಡೆಯದೆ ಸುಮ್ಮನಿದ್ದೆವು. ಆಮೇಲೆ ನೋಡಿದ್ರಾ, ಪಾಕಿಸ್ತಾನ ಮೇಲೆ ಗೆದ್ದಾಗ ನಮ್ಮ ದೇಶಭಕ್ತಿ ಹೇಗೆ ಎದ್ದು ನಿಲ್ತು ಅಂತಾ. ವಿ ಸೆಲೆಬ್ರೇಟೆಡ್ ಇನ್ ಪ್ಯಾಷನ್. ರಾತ್ರಿ ಇಡೀ ಕುಡಿದೆವು, ಕೈಯಲ್ಲಿ ಬಾವುಟ. ರಸ್ತೆರಸ್ತೆಯಲ್ಲೂ ನಮ್ಮ ಕಿರುಚಾಟ, ಜಯಘೋಷ. ಶ್ರೀಲಂಕಾ ಮೇಲೆ ಫೈನಲ್ ನಡೆದು ರಾವಣಾಸುರರ ಮೇಲೆ ರಾಮನ ಬಳಗ ಗೆದ್ದಾಗ (ಹೀಗಂತ ಬರೆದದ್ದು ನಮ್ಮ ಮೀಡಿಯಾಗಳು) ಅವನ್ಯಾರೋ ಯುವರಾಜಸಿಂಗ್ ರಾಷ್ಟ್ರಬಾವುಟವನ್ನೇ ಹೊದ್ದು ಅದರಲ್ಲೇ ಮೂಗು ಮುಸುಡಿ ಒರೆಸಿಕೊಂಡು ವಿಜೃಂಭಿಸುತ್ತಿದ್ದ. ನಾವು ಅವನ ಅನುಯಾಯಿಗಳು. ಕುಡಿದು ತಟ್ಟಾಡುತ್ತಲೇ ಬಾವುಟ ಹಿಡಿದು ರಸ್ತೆಯಲ್ಲಿ ಪೆರೇಡು ನಡೆಸಿದೆವು. ಬಾಯಲ್ಲಿ ಹೊಲಸು ಮಾತು, ಬೈಗುಳ. ಆದರೂ ನಮ್ಮ ರಾಷ್ಟ್ರಭಕ್ತಿಯನ್ನು ಯಾವುದೇ ಕಾರಣಕ್ಕೂ ಅನುಮಾನಿಸಬೇಡಿ.
ಅಸಲಿಗೆ ನಮಗೆ ಲೋಕಪಾಲ್ ಮಸೂದೆ ಅಂದ್ರೆ ಏನು ಅಂತಾನೇ ಗೊತ್ತಿಲ್ಲ. ಜನಲೋಕಪಾಲ್ ಅಂದ್ರೂನು ಗೊತ್ತಿಲ್ಲ. ತಿಳಿದುಕೊಂಡು ನಮಗೆ ಏನೂ ಆಗಬೇಕಾಗೂ ಇಲ್ಲ. ಸುಮ್ಮಸುಮ್ಮನೆ ಈ ಪ್ರಶ್ನೆ ಕೇಳಿಕೊಂಡರೆ ನಮಗೆ ನಾವು ಸಿನಿಕರಾಗಿಬಿಡುತ್ತೀವಿ ನೋಡಿ. ಅದಕ್ಕೆ ಆ ಕಡೆ ಯೋಚಿಸುತ್ತಿಲ್ಲ ನಾವು. ನಮಗೆ ಇಮ್ಮೀಡಿಯಟ್ಟಾಗಿ ಭ್ರಷ್ಟಾಚಾರ ಸಂಪೂರ್ಣ ತೊಲಗಿಬಿಡಬೇಕು. ಅದಕ್ಕಾಗಿ ನಾವು ಅಣ್ಣಾ ಹಜಾರೆಯವರ ಬೆನ್ನಿಗೆ ನಿಂತುಬಿಟ್ಟಿದ್ದೇವೆ.
ಅಣ್ಣಾ ಆಂದೋಲನಕ್ಕೆ ಈಗ ಯಾರ‍್ಯಾರು ಬೆಂಬಲ ಕೊಡ್ತಿದ್ದಾರೆ ನೋಡಿದ್ರಾ? ಭ್ರಷ್ಟಾಚಾರದ ಭೀಕರ ರೂಪಗಳನ್ನು ಪ್ರದರ್ಶಿಸಿದವರೆಲ್ಲ ಅಣ್ಣಾ ಹಜಾರೆಗೆ ಜೈ ಅನ್ನುತ್ತಿದ್ದಾರೆ. ಆ ಕಡೆಯೂ ನಮ್ಮ ಗಮನವಿಲ್ಲ. ಬೆಂಬಲ ಯಾರು ಕೊಟ್ಟರೆ ಏನು ಅಲ್ಲವೇ?
ಒಮ್ಮೊಮ್ಮೆ ನಾವೂ ಕೂಡ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದೇವೆ ಅನಿಸುವುದುಂಟು. ಇದೇ ಪೊಲಿಟಿಷಿಯನ್ಸ್ ಬಂದು ವೋಟು ಕೇಳಿದಾಗ ಮೂಗುತಿ, ಬೆಳ್ಳಿ ದೀಪ ಪಡೆದವರು ನಾವೇ ಅಲ್ಲವೇ? ನಮ್ಮನೇಲಿ ಒಟ್ಟು ಎಂಟು ವೋಟು. ಬರೋಬ್ಬರಿ ಎಂಟು ಸಾವಿರ ಮಡಗಿ ಹೋಗಿ ಎಂದು ಹೇಳಿದವರೂ ನಾವೇ ಅಲ್ಲವೇ? ಯಾವ ಸರ್ಕಾರಗಳ ವಿರುದ್ಧ ನಾವು ಗುಟುರು ಹಾಕುತ್ತಿದ್ದೇವೋ ಅವರನ್ನೆಲ್ಲ ಚುನಾಯಿಸಿ ಕಳುಹಿಸಿದವರೂ ನಾವೇ ಅಲ್ಲವೇ?
ಅದಷ್ಟೇ ಏಕೆ? ಈಚೀಚಿಗೆ ಲಂಚ ಕೊಡುವುದೂ ನಮಗೆ ಘನತೆಯ ವಿಷಯ, ನಮ್ಮ ದೊಡ್ಡಸ್ತಿಕೆ ತೋರಿಸಿಕೊಳ್ಳುವ ವಿಧಾನ. ಕೊಡುವವರೇ ಇಲ್ಲದಿದ್ದರೆ ತೆಗೆದುಕೊಳ್ಳುವವರು ಎಲ್ಲಿರುತ್ತಿದ್ದರು? ನಮಗೆ ಆ ಕ್ಷಣಕ್ಕೆ ನಮ್ಮ ಕೆಲಸಗಳಾಗಬೇಕು ಅಷ್ಟೆ. ಅದಕ್ಕಾಗಿ ನಾವು ಲಂಚ ಕೊಟ್ಟವರು. ಲಂಚ ಕೊಡುವುದೂ ಭ್ರಷ್ಟಾಚಾರ ಮಾಡಿದಂತೆಯೇ ಅಂತ ನಮಗೆ ಅನ್ನಿಸಿದ್ದಿಲ್ಲ. ಆದರೂ ನಮ್ಮನ್ನೂ ಸಹ ಭ್ರಷ್ಟಾಚಾರಿಗಳು ಅನ್ನೋದು ಇಟ್ಸ್ ಅನ್‌ಫೇರ್ ಯು ನೋ.
ಈಗ ನೋಡಿ ನಮ್ಮ ಬೆಂಬಲಕ್ಕೆ ಮೀಡಿಯಾಗಳು ನಿಂತುಬಿಟ್ಟಿವೆ. ಏನು ಕವರೇಜು, ಏನು ಘೋಷಣೆ? ಭ್ರಷ್ಟಾಚಾರ ವಿರುದ್ಧ ನಮ್ಮ ಅಭಿಯಾನ ಎಂದೇ ಮೀಡಿಯಾಗಳು ಹೇಳಿಕೊಳ್ಳುತ್ತಿವೆ. ಡಿ.ರಾಜನನ್ನು ಮಂತ್ರಿ ಮಾಡಿ ಎಂದು ದಳ್ಳಾಳಿ ಕೆಲಸ ಮಾಡಿದ ಬರ್ಖಾದತ್ ಎನ್‌ಡಿಟಿವಿಯಲ್ಲಿ ಆವೇಶಭರಿತವಾಗಿ ಮಾತನಾಡುತ್ತಿದ್ದರೆ ನಮ್ಮ ನರನಾಡಿಗಳಲೆಲ್ಲ ಭ್ರಷ್ಟರ ವಿರುದ್ಧ ಸಿಟ್ಟು ಹರಿಯುತ್ತದೆ. ಅತ್ತ ನೀರಾ ರೇಡಿಯೋ ಟೇಪು ಹಗರಣದಲ್ಲಿ ಕೇಳಿಬಂದ ಮತ್ತೊಂದು ಹೆಸರು ಪ್ರಭುಚಾವ್ಲಾ ಹೊಸ ಸಂಡೇ ಪೇಪರ್ ಮಾಡಿಕೊಂಡು ಇಂಡಿಯನ್ ಎಕ್ಸ್‌ಪ್ರೆಸ್ ಉದ್ಧಾರ ಮಾಡುತ್ತಿದ್ದಾರೆ. ಇಲ್ಲೂ ಅಷ್ಟೆ. ಸುಳ್ಳು ಅಫಿಡೇವಿಟ್ಟು ಕೊಟ್ಟು ಬಿಡಿಎ ಸೈಟು ಹೊಡೆದುಕೊಂಡವರು, ಬಿಡಿಎ ಸೈಟಿಗಾಗಿ ಹೆಂಡತಿಗೆ ಸುಳ್ಳೇ ಸುಳ್ಳು ಡೈವೋರ್ಸು ಕೊಟ್ಟವರೆಲ್ಲ ಕನ್ನಡ ಮೀಡಿಯಾಗಳಲ್ಲಿದ್ದಾರೆ. ಟ್ರಾನ್ಸ್‌ಫರ್ ದಂಧೆ ನಡೆಸುವವರು, ಅಧಿಕಾರಿಗಳ ಬಳಿ ಮಾಮೂಲಿ ಫಿಕ್ಸು ಮಾಡಿಕೊಂಡವರು, ಬ್ಲಾಕ್‌ಮೇಲು ಮಾಡುವವರು ಎಲ್ಲರೂ ಇದ್ದಾರೆ. ಎಲ್ಲರೂ ಸೇರಿಯೇ ಇವತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ.
ಅವರೊಬ್ಬರಿದ್ದಾರೆ ಉದ್ಯಮಿ ಕಂ ಮೀಡಿಯಾ ಕಿಂಗ್. ಸದ್ಯಕ್ಕೆ ಎರಡು ಚಾನಲ್‌ಗಳನ್ನು ನಡೆಸುತ್ತಿದ್ದಾರೆ. ಈಗ ಅವರು ಅಣ್ಣಾ ಹಜಾರೆಯವರ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ. ಅವರ ಮೀಡಿಯಾಗಳು ಕೂಡ ಭ್ರಷ್ಟಾಚಾರ ವಿರೋಧಿ ರಥಗಳನ್ನು ತಯಾರುಮಾಡಿ ಊರೂರು ಸುತ್ತಿಸುತ್ತಿವೆ. ಆದರೆ ಆ ಉದ್ಯಮಿ ರಾಜ್ಯಸಭೆಗೆ ಆಯ್ಕೆಯಾಗುವಾಗ ಶಾಸಕರನ್ನು ಖರೀದಿ ಮಾಡಿಯೇ ಮತಗಳನ್ನು ಗಳಿಸಿದ್ದು. ಯಾರ‍್ಯಾರಿಗೆ ಎಷ್ಟು ಎಷ್ಟು ಕೊಟ್ಟೆ ಎಂದು ಅವರು ಹೇಳಿಯಾರೆ? ಕೋಟಿಗಟ್ಟಲೆ ಹಣ ಲಂಚ ತಿನ್ನಿಸಿ ರಾಜ್ಯಸಭೆಗೆ ಹೋದವರು ಭ್ರಷ್ಟಾಚಾರದ ವಿರುದ್ಧ ತೊಡೆತಟ್ಟುತ್ತಾರೆ, ನಾವು ಅದನ್ನೆಲ್ಲ ಮನ್ನಿಸಿ ಅವರ ಮೀಡಿಯಾ ಸಂಸ್ಥೆಗಳು ನಡೆಸುವ ಆಂದೋಲನದಲ್ಲಿ ಭಾಗವಹಿಸುತ್ತೇವೆ.
ಅದೆಲ್ಲ ಹಾಗಿರಲಿ ಬಿಡಿ, ನಾವು ವೈಯಕ್ತಿಕ ಮಟ್ಟದಲ್ಲಾದರೂ ಶುದ್ಧ ನೈತಿಕತೆಯನ್ನು ಅನುಸರಿಸಿದವರಲ್ಲ. ಇನ್ನೂ ಡೌರಿಗಳಿಲ್ಲದೆ ನಮ್ಮ ಮನೆಗಳ ಮದುವೆಗಳು ನಡೆಯೋದಿಲ್ಲ. ಡೌರಿ ಕೂಡ ಲಂಚದ ಹೀನಾತಿಹೀನ ರೂಪ ಅನ್ನೋದನ್ನು ನಾವು ಇನ್ನೂ ಒಪ್ಪಿಕೊಂಡಿಲ್ಲ. ಸರ್ಕಾರಿ ಅಧಿಕಾರಿ ಗಂಡನ್ನು ಹುಡುಕುವಾಗಲೂ ನಾವು ಸೆಲೆಕ್ಟಿವ್ ಆಗಿರ‍್ತೇವೆ. ನಮಗೆ ಮೇಷ್ಟ್ರು, ಪಾಷ್ಟ್ರು ಆಗಿಬರೋದಿಲ್ಲ, ಮೇಲ್ ಕಮಾಯಿ ಇದೆಯೋ ಇಲ್ಲವೋ ಎಂಬುದನ್ನು ನೋಡಿಯೇ ನಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುತ್ತೇವೆ. ನಮ್ಮ ಮಕ್ಕಳಿಗೆ ಫ್ಯೂಚರ್‌ನಲ್ಲಿ ತೊಂದರೆಯಾಗಬಾರದು ನೋಡಿ.
ನಮಗೆ ಸರ್ಕಾರಿ ಕಚೇರಿಗಳಲ್ಲಿ ಕ್ಯೂಗಳಲ್ಲಿ ನಿಂತು ಅಭ್ಯಾಸವಿಲ್ಲ. ನಮ್ಮ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತೆ ನೋಡಿ. ಅದಕ್ಕಾಗಿ ಸಂಬಂಧಪಟ್ಟವರ ಕೈ ಬಿಸಿ ಮಾಡುತ್ತೇವೆ. ನಮ್ಮ ಕೆಲಸ ಆಗಿ ಹೋಗುತ್ತವೆ. ಹಾಗಂತ ಇಂಥ ಸಣ್ಣಪುಟ್ಟ ಲಂಚ ಕೊಡೋದ್ರಿಂದ ದೇಶ ಕೆಟ್ಟುಹೋಗಿದೆ ಎಂದು ನಾವು ನಂಬೋದಿಲ್ಲ ಬಿಡಿ.
ಈಗ ಅಣ್ಣಾ ಹಜಾರೆ ಉಪವಾಸಕ್ಕೆ ಕೂತಿದ್ದಾರೆ. ನಾವು ಮೆರವಣಿಗೆ ಹೊಂಟಿದ್ದೇವೆ. ಫ್ರೀಡಂ ಪಾರ್ಕ್ ಸುತ್ತ ಬಹುಶಃ ನಾಳೆಯಿಂದ ಬತ್ತಾಸು, ಖರ್ಜೂರ, ರೆಡಿಮೇಡ್ ಶರ್ಟುಗಳು, ತರಕಾರಿ ಹೆಚ್ಚುವ ಉಪಕರಣಗಳು, ಪೀಪಿ-ಬಲೂನುಗಳು ಮಾರಾಟಕ್ಕೆ ಬಂದರೂ ಆಶ್ಚರ್ಯವಿಲ್ಲ. ಹಾಗಾದಲ್ಲಿ ನಾವು ನಮ್ಮ ಮಕ್ಕಳು ಮರಿಗಳನ್ನೂ ಇಲ್ಲಿಗೆ ಕರೆದುಕೊಂಡುಬರಬಹುದು. ದೇಶಸೇವೆಯ ಜತೆಗೆ ಶಾಪಿಂಗೂ ನಡೆದುಹೋಗುತ್ತದೆ.
ಅಣ್ಣಾ ಹಜಾರೆಯವರಿಗೆ ಜಯವಾಗಲಿ, ಭ್ರಷ್ಟಾಚಾರ ತೊಲಗಲಿ.
ವಿ ದ ಪೀಪಲ್ ಆಫ್ ಇಂಡಿಯಾ ಈಗ ಎದ್ದು ನಿಂತಿದ್ದೇವೆ. ಮೊಂಬತ್ತಿಗಳು ನಮ್ಮ ಕೈಗಳಲ್ಲಿ ಕರಗಿ ಹೋಗುತ್ತಿವೆ.

发表评论