ಒಂದು ಸಮಾಧಾನದ ಸುದ್ದಿ ಬಂದಿದೆ. ಸುವರ್ಣ ಟಿವಿಯ ಪ್ಯಾಟಿ ಹುಡ್ಗೀರ್ ಹಳ್ಳಿ ಲೈಫ್ ಶೋನಲ್ಲಿ ಬಾಲಕನೊಬ್ಬನ್ನು ಹಿಂಸಿಸಿದ ಪ್ರಕರಣ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪ್ರತಿಕ್ರಿಯಿಸಿದ್ದು, ಚಾನಲ್‌ಗೆ ನೋಟಿಸ್ ನೀಡಲು ನಿರ್ಧರಿಸಿದೆ.
ದಟ್ಸ್ ಕನ್ನಡ ಈ ಕುರಿತು ವಿವರವಾಗಿ ವರದಿ ಮಾಡಿದೆ. ಆಯೋಗದ ಸದಸ್ಯ ವಾಸುದೇವ್ ಶರ್ಮ ಪ್ರತಿಕ್ರಿಯೆ ನೀಡಿದ್ದು, ತಮಾಷೆಗಾಗಿ ಕೂಡಾ ಮಕ್ಕಳನ್ನು ಮಾನಸಿಕವಾಗಿ ಅಥವಾ ದೈಹಿಕವಾಗಿ ಹಿಂಸಿಸುವಂತಿಲ್ಲ. ಅದರಲ್ಲೂ ಲಕ್ಷಾಂತರ ಮಂದಿ ನೋಡುವ ರಿಯಾಲಿಟಿ ಶೋನಲ್ಲಿ ಈ ರೀತಿ ತೋರಿಸಿ ಯಾವ ಸಂಸ್ಕೃತಿ ಬೆಳೆಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ರಿಯಾಲಿಟಿ ಶೋ ಚಿತ್ರೀಕರಣವಾಗುತ್ತಿರುವ ಬಾಗಲ ಕೋಟೆ ಜಿಲ್ಲೆಯ ಕೆರಕಲ್ ಮಟ್ಟಿ ಗ್ರಾಮ ಪಂಚಾಯತಿ, ಮಕ್ಕಳ ಕಲ್ಯಾಣ ಸಮಿತಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಬಾಲಕನಿಗೆ ಚಿತ್ರಹಿಂಸೆ ನೀಡಿರುವ ಬಗ್ಗೆ ಸ್ಪಷ್ಟನೆಯನ್ನು ಕೋರಲಾಗಿದೆ. ಬಾಲಕನ ಬಗ್ಗೆ ಮಾಹಿತಿ ಸಂಗ್ರಹಿಸಿದ ನಂತರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಈ ಬಗ್ಗೆ ತುರ್ತು ಚರ್ಚೆ ನಡೆಸಿ, ಮುಂದಿನ ಕ್ರಮ ಜರಗಿಸುವುದಾಗಿ ವಾಸುದೇವ ಶರ್ಮಾ ಹೇಳಿದ್ದಾರೆ.
ಇಷ್ಟಾದರೆ ಸಾಕೆ? ಈ ಅನೈತಿಕ ಕಾರ್ಯಕ್ರಮ ಮುಂದುವರೆಯಬೇಕೆ? ಆಯೋಗವೇನೋ ತನಿಖೆ ನಡೆಸುತ್ತದೆ. ಆದರೆ ಇಂಥ ಆಯೋಗಗಳಿಗೆ ನೀಡಿರುವ ಅಧಿಕಾರವಾದರೂ ಎಷ್ಟು? ಇದು ಕ್ರಿಮಿನಲ್ ಆರೋಪವಾದ್ದರಿಂದ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಬೇಕಲ್ಲವೇ?
ಇಷ್ಟೆಲ್ಲ ಆದರೂ ಬೇರೆ ಮೀಡಿಯಾಗಳು ಸುಮ್ಮನಿರುವುದೇಕೆ? ತಪ್ಪು ಮಾಡಿರುವುದೂ ಒಂದು ಮೀಡಿಯಾ ಎಂಬ ಕಾರಣಕ್ಕಾಗಿಯೇ?
ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಎಂಬ ರಿಯಾಲಿಟಿ ಶೋನ ಎರಡನೇ ಆವೃತ್ತಿ ಈಗ ನಡೆಯುತ್ತಿದೆ. ಮೊದಲ ಆವೃತ್ತಿಯ ನಂತರ ಇದೇ ಪ್ರಕಾರದ ಬೇರೆ ರಿಯಾಲಿಟಿ ಶೋಗಳನ್ನು ಸುವರ್ಣ ಟಿವಿ ನಡೆಸಿತ್ತು. ಆದರೆ ಟಿಆರ್‌ಪಿಯಲ್ಲಿ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಕ್ಲಿಕ್ ಆಗಿದ್ದರಿಂದ ಈಗ ಎರಡನೇ ಆವೃತ್ತಿ ನಡೆಸುತ್ತಿದೆ.
ಎರಡನೇ ಆವೃತ್ತಿಗಾಗಿ ಕಾರ್ಯಕ್ರಮದ ನಿರ್ಮಾಪಕರು ಆಯ್ದುಕೊಂಡಿದ್ದು ಬಾಗಲಕೋಟೆಯ ಕೆರಕಲಮಟ್ಟಿ ಗ್ರಾಮ. ಇದು ರಿಯಾಲಿಟಿ ಶೋ ಆದರೂ, ಇಲ್ಲಿ ಎಲ್ಲವೂ ಸ್ಕ್ರಿಪ್ಟ್‌ನಂತೆಯೇ ನಡೆಯುತ್ತದೆ. ಎಲ್ಲ ರಿಯಾಲಿಟಿ ಶೋಗಳೂ ವೀಕ್ಷಕರ ಕಣ್ಣಿಗೆ ಮಣ್ಣೆರಚುತ್ತಲೇ ಬಂದಿವೆ. ಈ ಶೋನಲ್ಲಿ ನಡೆಯುತ್ತಿರುವುದು ಒಂದೊಂದು ಅನಾಹುತವಲ್ಲ.
ಶೋನಲ್ಲಿ ಉತ್ತರ ಕರ್ನಾಟಕದ ಹೆಣ್ಣಮಕ್ಕಳು ಸ್ವಭಾವತಃ ಒರಟು ಎಂದು ಬಿಂಬಿಸಲಾಗಿದೆ. ನಗರಗಳಲ್ಲಿ ಬೆಳೆದ ಹೆಣ್ಣುಮಕ್ಕಳನ್ನು ಹಳ್ಳಿಯ ಮನೆಗಳಲ್ಲಿ ಬಿಟ್ಟು ಅವರನ್ನು ಗೋಳುಹುಯ್ದುಕೊಳ್ಳಲಾಗುತ್ತದೆ. ತಪ್ಪು ಮಾಡಿದರಿಗೆ ಕೊಡುವ ಶಿಕ್ಷೆಯೋ ಕ್ರೂರ. ತಪ್ಪು ಮಾಡಿದ ಒಬ್ಬಾಕೆಯನ್ನು ವಯಸ್ಸಾದ ಹಳ್ಳಿ ಮಹಿಳೆಯೊಬ್ಬಳು ಹೊಡೆಯುವ, ಉರಿಯುವ ಕೊಳ್ಳಿಯಿಂದ ತಿವಿಯಲು ಬರುವ ದೃಶ್ಯಗಳು ಪ್ರಸಾರವಾಗಿವೆ. ಒಂದು ಹೆಣ್ಣುಮಗಳಿಗೆ ಬಲವಂತವಾಗಿ ಒಂದು ಕಪ್‌ನಷ್ಟು ಗಂಜಲವನ್ನು ಕುಡಿಸಲಾಗಿದೆ. ಹಸಿ ಮೀನನ್ನು ಇಡಿಯಾಗಿ ತಿನ್ನಿಸಲಾಗಿದೆ. ಮೆಣಸಿನಕಾಯಿಯನ್ನು ತಿನ್ನಿಸಿದ ಪರಿಣಾಮವಾಗಿ ಒಬ್ಬಾಕೆ ಆಸ್ಪತ್ರೆ ಸೇರಬೇಕಾಯಿತು. ಒಬ್ಬಾಕೆಗೆ ಕೊಟ್ಟ ಶಿಕ್ಷೆ ಏನು ಗೊತ್ತೆ? ಇಡೀ ದಿನ ಒಂದು ಹಸುವಿನ ಜತೆ ಇರಬೇಕು. ಅದು ಸೆಗಣಿ ಹಾಕಿದಾಗ ಅದು ಕೆಳಕ್ಕೆ ಬೀಳದಂತೆ ಕೈಯಲ್ಲಿ ಹಿಡಿಯಬೇಕು! ಎಂಥ ಸ್ಯಾಡಿಸ್ಟ್‌ಗಳಿರಬೇಕು ಇವರು?
ಇಲ್ಲಿ ಪ್ರಶ್ನೆಗಳು ಸಾವಿರ ಇದೆ. ದುಡ್ಡಿನ ಆಸೆಗಾಗಿ ಶೋಗೆ ಬಂದಿರುವ ಹುಡುಗಿಯರಿಗೆ ಹಿಂಸೆ ಕೊಡಿಸಿರುವುದು ಹಳ್ಳಿಯ ಹೆಣ್ಣುಮಕ್ಕಳಿಂದ. ಅದೇನು ಆ ಹೆಣ್ಣುಮಕ್ಕಳು ತಾವೇ ತಾವಾಗಿ ಕೊಟ್ಟ ಹಿಂಸೆಯಲ್ಲ. ಎಲ್ಲವೂ ಕಾರ್ಯಕ್ರಮದ ನಿರ್ದೇಶಕರ ಆಣತಿಯಂತೆ ನಡೆದಿರುತ್ತದೆ. ಹೀಗೆ ಹಳ್ಳಿ ಹೆಣ್ಣಮಕ್ಕಳನ್ನು ಒರಟರಂತೆ ಚಿತ್ರಿಸುವುದು ಯಾವ ನ್ಯಾಯ?
ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದು ಅವರವರ ವೈಯಕ್ತಿಕ ಆಯ್ಕೆಗೆ ಬಿಟ್ಟಿದ್ದು. ಹೀಗಿರುವಾಗ ಹಸಿ ಮೀನನ್ನು ತಿನ್ನಿಸುವುದು ಎಷ್ಟು ಸರಿ? ಮಾಂಸಾಹಾರಿಗಳಾದರೂ ಹಸಿ ಮೀನನ್ನು ತಿನ್ನಲು ಒಪ್ಪುತ್ತಾರೆಯೇ? ಗಂಜಲವನ್ನು ಬಲವಂತವಾಗಿ ಕುಡಿಸುವುದು ಸರಿಯೆ?
ಈ ಕಾರ್ಯಕ್ರಮ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆ. ಬಾಲಕನನ್ನು ಬೆತ್ತಲೆಗೊಳಿಸಿದ ಘಟನೆ ಕೇವಲ ಆ ಹುಡುಗನಿಗೆ ನೀಡಿದ ಹಿಂಸೆ ಮಾತ್ರವಲ್ಲ, ಅದನ್ನು ನೋಡಿದ ಎಲ್ಲ ವೀಕ್ಷಕರಿಗೂ ಕೊಟ್ಟ ಹಿಂಸೆ. ಇದನ್ನು ನೋಡಿರಬಹುದಾದ ಮಕ್ಕಳ ಮನಸ್ಸುಗಳಿಗೆ ಎಂಥ ಆಘಾತವಾಗಿರಬಹುದು ಎಂಬುದನ್ನೂ ನಾವು ಗಮನಿಸಬೇಕಾಗುತ್ತದೆ.
ಇಂಥ ಅಸಹ್ಯ ಬೇಕೆ?
ಈ ಅಸಹಾಯಕ ಸಂದರ್ಭದಲ್ಲೂ ಮೌನೇಶ್ ವಿಶ್ವಕರ್ಮ ತಾವು ನೋಡಿದ್ದನ್ನು ದಾಖಲಿಸಿ, ಸುದ್ದಿ ಮಾಡಿದ್ದಾರೆ. ಅದನ್ನು ವಾರ್ತಾಭಾರತಿ ಪ್ರಕಟಿಸಿದೆ. ಅದರ ಪರಿಣಾಮವಾಗಿಯೇ ಮಕ್ಕಳ ಆಯೋಗ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಮೌನೇಶ್ ಹಾಗು ವಾರ್ತಾಭಾರತಿಗೆ ಅಭಿನಂದನೆಗಳು.
ಈ ವಿಷಯವನ್ನು ವೆಬ್ ಸೈಟ್, ಬ್ಲಾಗ್, ಸೋಷಿಯಲ್ ನೆಟ್ ವರ್ಕ್ ಗಳಲ್ಲಿ ಚರ್ಚಿಸಿದ ಎಲ್ಲರಿಗೂ ಅಭಿನಂದನೆಗಳು. ಇಂಥ ಸಂದರ್ಭಗಳಲ್ಲಿ ಸಾತ್ವಿಕ ಆಕ್ರೋಶವನ್ನಾದರೂ ವ್ಯಕ್ತಪಡಿಸುವ ವೈಯಕ್ತಿಕ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದಿರೋಣ. ಮನುಷ್ಯತ್ವವನ್ನೇ ಮರೆತ ಸಿನಿಕರಿರುವ ಈ ಕಾಲದಲ್ಲಿ ಇಷ್ಟೊಂದು ಜೀವಗಳು ಆ ಬಾಲಕನ ಪರವಾಗಿ ಚಡಪಡಿಸಿರುವುದೇ ಸಮಾಧಾನದ ಸಂಗತಿ, ಇದು ಹೊಸ ವಿಶ್ವಾಸವನ್ನು ನಮ್ಮಲ್ಲಿ ಮೂಡಿಸಲಿ.

发表评论