ಪೆನ್ನು ಕಾಗದವಿದ್ದರೆ, ಪ್ರಾಮಾಣಿಕತೆ ಇದ್ದರೆ ಕನ್ನಡಿಗರು ಕಾಪಾಡ್ತಾರೆ!
ಈ ಶೀರ್ಷಿಕೆಯನ್ನು ಹೆಸರಾಂತ ಚಿತ್ರ, ಕಿರುತೆರೆ, ರಂಗಭೂಮಿ ನಿರ್ದೇಶಕ ಬಿ.ಸುರೇಶ ಅವರ ಫೇಸ್‌ಬುಕ್ ಪ್ರೊಫೈಲ್‌ನಿಂದ ಅನಾಮತ್ತಾಗಿ ಎತ್ತಿಕೊಂಡಿದ್ದೇವೆ; ಈಗ ಹೇಳಲು ಹೊರಟಿರುವ ವಿಷಯಗಳಿಗೆ ಈ ಸಾಲು ಸಮರ್ಥ ಅರ್ಥಗಳನ್ನು ನೀಡುತ್ತದೆ ಎಂಬ ನಂಬಿಕೆಯಿಂದ.
ಡಬ್ಬಿಂಗ್ ವಿರೋಧದ ಮಾತುಗಳು ಅತ್ಯಂತ ಪ್ರಖರವಾಗಿ ಆಡುತ್ತಿರುವ ಸುರೇಶ ಅವರು ಡಬ್ಬಿಂಗ್ ಸಿನಿಮಾಗಳು ಬೇಕು ಎನ್ನುವ ವಾದ ನಮ್ಮದು; ನಿಮ್ಮದು? ಎಂಬ ಸಂಪಾದಕೀಯದ ಲೇಖನವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿ ಈ ಕೆಳಗಿನಂತೆ ಬರೆದಿದ್ದರು.
ಕನ್ನಡದ ನಿಜವಾದ ಕಾಳಜಿ ಇರುವವರು, ನಿನ್ನೆ ಭೈರಪ್ಪನವರ ಭಾಷಣ ಕೇಳಿದವರು ಇಲ್ಲಿ (ಸಂಪಾದಕೀಯ ಬ್ಲಾಗ್‌ನಲ್ಲಿ) ಡಬ್ಬಿಂಗ್ ಬೇಡ ಎಂದು ಮತ ಚಲಾಯಿಸಿ ಎಂದು ಕೋರುತ್ತೇನೆ. ಭಾಷೆಯನ್ನ, ಸಂಸ್ಕೃತಿಯನ್ನು ಕೊಲ್ಲುವ ಹುನ್ನಾರವುಳ್ಳ, ಲಾಭಬಡುಕರ ಜಾಣ ಮಾತುಗಳನ್ನು ವಿರೋಧಿಸುವುದು ಎಲ್ಲಾ ಕನ್ನಡಿಗರ ಜವಾಬ್ದಾರಿ. ಡಬ್ಬಿಂಗ್ ಅನ್ನುವುದು ಯಾವುದೇ ಭಾಷೆಯ ತಾಯಿಬೇರಿಗೆ ಬೀಳುವ ಕೊಡಲಿ ಏಟು. ಮೂರು ವರ್ಷಗಳ ಹಿಂದೆ ಮಲೆಯಾಳಿ ಚಿತ್ರರಂಗದಲ್ಲಿ ಇದನ್ನು ಆರಂಭಿಸಿ, ಈಗ ಅಲ್ಲಿನ ಜನ ಕೊರಗುತ್ತಿದ್ದಾರೆ. ಅದು ನಮಗೂ ಆಗುವುದು ಬೇಡ.
ಬಿ.ಸುರೇಶರ ಕರೆಯನ್ವಯ ಸಾಕಷ್ಟು ಮಂದಿ ಈ ಬ್ಲಾಗ್‌ಗೆ ಬಂದು ವೋಟ್ ಮಾಡಿರಬಹುದು. ಆದರೆ ಈ ಲೇಖನ ಸಿದ್ಧಪಡಿಸುತ್ತಿರುವ ಈ ಹೊತ್ತಿಗೆ ಒಟ್ಟು ಚಲಾವಣೆಯಾದ ಮತಗಳು ೩೭೫, ಅದರಲ್ಲಿ ಡಬ್ಬಿಂಗ್ ಬೇಕು ಅಂದವರು ೨೬೬ ಮಂದಿ (೭೦.೯೩%), ಬೇಡ ಅಂದವರು ೧೦೨ ಮಂದಿ (೨೭.೨%), ಏನೂ ಹೇಳಲು ಗೊತ್ತಾಗ್ತಾ ಇಲ್ಲ ಅಂದವರು ೭ ಮಂದಿ (೧.೮೭%). ಅಲ್ಲಿಗೆ ಸರಿಸುಮಾರು ಮುಕ್ಕಾಲು ಪಾಲು ಜನರು ಡಬ್ಬಿಂಗ್ ಇರಲಿ ಎಂದೇ ಹೇಳುತ್ತಿದ್ದಾರೆ.
ಇದಾದ ತರುವಾಯ ಸುರೇಶ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಒಂದು ಸುದೀರ್ಘ ನೋಟ್ ಬರೆದು, ಡಬ್ಬಿಂಗ್ ಬೇಡ ಎಂಬ ತಮ್ಮ ವಾದಕ್ಕೆ ಸಮರ್ಥನೆಗಳನ್ನು, ಡಬ್ಬಿಂಗ್ ಬರಲಿ ಎನ್ನುತ್ತಿರುವವರಿಗೆ ಉತ್ತರಗಳನ್ನು ನೀಡಿದ್ದಾರೆ. ಈ ಲೇಖನವನ್ನು ಮತ್ತು ಅದಕ್ಕೆ ಬಂದಿರುವ ಪ್ರತಿಕ್ರಿಯೆಗಳನ್ನು ಮೊದಲು ಓದಲು ನಮ್ಮ ಓದುಗರಿಗೆ ವಿನಂತಿಸುತ್ತೇವೆ. ಲಿಂಕ್ ಇಲ್ಲಿದೆ: https://www.facebook.com/note.php?note_id=213965275304333&comments
ಮುಂದಿನದನ್ನು ಹೇಳುವುದಕ್ಕೆ ಮುನ್ನ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಲೇಬೇಕು. ಬಿ.ಸುರೇಶ ಅವರು ಕನ್ನಡ ರಂಗಭೂಮಿ, ಹಿರಿತೆರೆ ಮತ್ತು ಕಿರುತೆರೆಗಳಲ್ಲಿ ಸಾಕಷ್ಟು ದುಡಿದಿದ್ದಾರೆ. ಅವರು ಸೃಜನಶೀಲರು ಮತ್ತು ಕ್ರಿಯಾಶೀಲರು. ಇತ್ತೀಚಿನ ಅವರ ಪುಟ್ಟಕ್ಕನ ಹೈವೇ ಸಿನಿಮಾದವರೆಗೆ ಅವರು ಸಾಗಿ ಬಂದ ಹಾದಿಯ ಕುರಿತು ನಮಗೆ ಅಭಿಮಾನವಿದೆ. ಕನ್ನಡದ ಕೆಲವು ನಿರ್ದೇಶಕರ ಹಾಗೆ ಅವರು ಖಾಲಿತಲೆಯವರಲ್ಲ, ಬೌದ್ಧಿಕವಾಗಿ ಬೆಳೆದವರು. ಈ ಚರ್ಚೆ ಇನ್ನೂ ಎಷ್ಟು ದೂರ ಸಾಗಿದರೂ ಅವರ ಮೇಲೆ ಈ ಗೌರವ ಹಾಗೆಯೇ ಇರುತ್ತದೆ.
ಇನ್ನೊಂದು ಕಡೆ ಡಬ್ಬಿಂಗ್ ಪರವಾಗಿರುವವರನ್ನು ಕನ್ನಡದ್ರೋಹಿಗಳು, ಸಂಸ್ಕೃತಿಯನ್ನು ಕೊಲ್ಲುವವರು, ಲಾಭಬಡುಕರು ಇತ್ಯಾದಿಯಾಗಿ ಗೇಲಿ ಮಾಡಲಾಗುತ್ತಿದೆ. ನಿಜ, ಕನ್ನಡ ಚಿತ್ರರಂಗದ ಕೆಲವು ಲಾಭಬಡುಕರು ಡಬ್ಬಿಂಗ್ ಪ್ರಶ್ನೆಯನ್ನು ತಮ್ಮ ಹಿತಕ್ಕಾಗಿ, ವ್ಯವಹಾರಕ್ಕಾಗಿ ಬಳಸುತ್ತಿರಬಹುದು. ಆದರೆ ನಮ್ಮಂಥ ಸಾಮಾನ್ಯರಿಗೇನಿದೆ ಲಾಭ? ಒಂದು ಅಂಶವನ್ನು ಗಮನಿಸಬೇಕು. ಡಬ್ಬಿಂಗ್ ಕುರಿತ ಚರ್ಚೆಯನ್ನು ಮತ್ತೆ ಆರಂಭಿಸಿದ್ದು ಬನವಾಸಿ ಬಳಗದ ಗೆಳೆಯರು. ಕಳೆದ ಎರಡು ಮೂರು ವರ್ಷಗಳಿಂದ ಅವರು ಡಬ್ಬಿಂಗ್ ಯಾಕೆ ಬೇಡ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಈ ಸಂಬಂಧ ಒಂದು ವೈಜ್ಞಾನಿಕ ವರದಿಯನ್ನು ಕೊಟ್ಟವರೂ ಇದೇ ಗೆಳೆಯರು.
ನಮಗೆ ಗೊತ್ತಿದ್ದ ಹಾಗೆ ಬನವಾಸಿ ಬಳಗದವರು ಅಪ್ಪಟ ಕನ್ನಡಾಭಿಮಾನಿಗಳು. ಅಭಿಮಾನಕ್ಕೆ ಮಾತ್ರ ಸೀಮಿತಗೊಳ್ಳದೆ ಏನ್ ಗುರು ಬ್ಲಾಗ್‌ನ ಮೂಲಕ ಕನ್ನಡಪರವಾದ ಧ್ವನಿಯನ್ನು ಮೊಳಗಿಸುತ್ತ ಬಂದವರು. ನೂರಾರು ಕ್ರಿಯಾತ್ಮಕ ಯೋಜನೆ, ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದವರು. ಇದೇ ರೀತಿ ಡಬ್ಬಿಂಗ್ ಬಂದರೆ ತಪ್ಪೇನು ಎಂದು ಪ್ರಶ್ನಿಸುತ್ತಿರುವ ಸಾಕಷ್ಟು ಮಂದಿ ಇಂಥದ್ದೇ ನೆಲೆಯಿಂದ ಬಂದವರಿರಬಹುದು. ಹೀಗಿರುವಾಗ ಕನ್ನಡದ್ರೋಹ, ನಾಡದ್ರೋಹ ಇತ್ಯಾದಿ ಶಬ್ದಗಳನ್ನು ಉಪಯೋಗಿಸಿ ಮಾತನಾಡುವುದು ಕಿಡಿಗೇಡಿತನವಾಗುತ್ತದೆ. ಅದೇ ರೀತಿ ಡಬ್ಬಿಂಗ್ ವಿರುದ್ಧವಾಗಿ ಮಾತನಾಡುತ್ತಿರುವ ಸಾಮಾನ್ಯ ಜನರೂ ಸಹ ಎಲ್ಲಿ ಕನ್ನಡ ಸಂಸ್ಕೃತಿ ನಾಶವಾಗುತ್ತೋ ಎಂಬ ಭೀತಿಗೆ ಸಿಲುಕಿದವರು. ಅವರ ಕನ್ನಡಪ್ರೀತಿಯ ಕುರಿತೂ ಸಹ ಪ್ರಶ್ನೆಗಳನ್ನು ಎಸೆದು ತಿವಿಯುವುದು ಸಲ್ಲ. ನಮ್ಮ ಚರ್ಚೆ ದಾರಿತಪ್ಪದಿರಲಿ ಎಂಬ ಕಾರಣಕ್ಕೆ ಈ ವಿಷಯಗಳನ್ನು ಮೊದಲೇ ಸ್ಪಷ್ಟಪಡಿಸಬೇಕಾಯಿತು.
ಇನ್ನು ವಾಪಾಸು ವಿಷಯಕ್ಕೆ ಬರುವುದಾದರೆ ಫೇಸ್‌ಬುಕ್, ಬ್ಲಾಗ್, ವೆಬ್‌ಸೈಟುಗಳಲ್ಲಿ ನಡೆಯುವ ವೋಟಿಂಗ್‌ಗಳು ಸಂಪೂರ್ಣ ಜನರ ಮನಸ್ಸನ್ನು ಅಭಿವ್ಯಕ್ತಿಸುತ್ತವೆ ಎಂದು ನಾವು ಕುರುಡಾಗಿ ನಂಬಿದವರಲ್ಲ. ಇಂಟರ್‌ನೆಟ್ ಉಪಯೋಗಿಸುವ ಮಂದಿ ಹೇಗೆ ಯೋಚಿಸುತ್ತಾರೆ ಎಂಬುದಕ್ಕೆ ಇಂಥ ವೋಟಿಂಗ್‌ಗಳು ಅನುಕೂಲಕರವಾಗಬಹುದು, ಅಷ್ಟೆ. ಬಿ.ಸುರೇಶ ಅವರು ಸೂಚಿಸಿದ ಮೇಲೂ ಯಾಕೆ ಡಬ್ಬಿಂಗ್ ಪರವಾಗಿಯೇ ಜನರು ಮತ ಚಲಾಯಿಸುತ್ತಿದ್ದಾರೆ ಅನ್ನುವುದು ಕುತೂಹಲಕರ ವಿಷಯ. ಸುರೇಶ್ ಅವರು ಹೀಗೆ ಹೇಳುತ್ತಾರೆ:
ಇಂತಹ ವಿಷಯವನ್ನು ಕುರಿತು ಮತ ಚಲಾಯಿಸೋಣ ಎಂಬ ಮಾತಾಡುವವರಿದ್ದಾರೆ. ಇದು ಬಹುಮತದಿಂದ ನಿರ್ದರಿತವಾಗಬೇಕಾದ ವಿಷಯವಲ್ಲ. ಇದು ಈ ಸಮಾಜದ ಜ್ಞಾನಶಾಖೆಗಳು ತೀರ್ಮಾನಿಸಬೇಕಾದ ವಿಷಯ. ಈ ನಾಡಿನ ಪ್ರಧಾನ ಚಿಂತಕರು ಚರ್ಚಿಸಿ, ತೀರ್ಮಾನ ತಿಳಿಸಲಿ. ಅಡ್ಡಿ ಇಲ್ಲ. Might is Right ಎಂಬ ವಾದವನ್ನು ಒಂದು ಸಂಸ್ಕೃತಿಯನ್ನೇ ಪಲ್ಲಟಗೊಳಿಸಬಹುದಾದ ತೀರ್ಮಾನಕ್ಕೆ ಬಳಸಬಾರದು. ಇಂತಹ ತಪ್ಪಾಗಬಾರದು ಎಂತಲೇ ನಮ್ಮ ಸಂವಿಧಾನ ವಿಧಾನಸಭೆಯೊಂದಿಗೆ ವಿಧಾನ ಪರಿಷತ್ತನ್ನು, ಲೋಕಸಭೆಯೊಂದಿಗೆ ರಾಜ್ಯಸಭೆಯನ್ನು ಇರಿಸಿದೆ. ಯಾವುದೇ ವಿಷಯ ಎರಡೂ ಸಭೆಗಳಲ್ಲಿ ತೀರ್ಮಾನವಾಗಬೇಕು ಎಂದು ನಮ್ಮ ಸಂವಿಧಾನ ಹೇಳುತ್ತದೆ. ಹಾಗೆಯೇ ಡಬ್ಬಿಂಗ್ ಪರವಾಗಿ ಮಾತಾಡುವವರೆಲ್ಲರೂ ಈ ನಾಡಿನ ಸಾಂಸ್ಕೃತಿಕ ಚಿಂತಕರೆಂದು ಕರೆಸಿಕೊಂಡವರ ಜೊತೆಗೆ ಚರ್ಚಿಸಬೇಕಿದೆ. ಹಾಗೆ ಮಾಡದೆ ಡಬ್ಬಿಂಗ್ ತರಬೇಕು ಎಂದು ಪ್ರಯತ್ನಿಸುವುದು ದಬ್ಬಾಳಿಕೆ ಆಗುತ್ತದೆ. ಒಂದು ನಾಡಿನ ಸಂಸ್ಕೃತಿಯ ಮೇಲೆ ಆ ಸಮಾಜವೇ ಬಂಡೆಯನ್ನು ಎಳೆದಂತೆ ಆಗುತ್ತದೆ.
ಇದು ಬಹುಮತದಿಂದ ನಿರ್ಧರಿತವಾಗಬೇಕಾದ ವಿಷಯವಲ್ಲ ಎಂದು ಸುರೇಶ ಅವರು ಸಾರಾಸಗಟಾಗಿ ಹೇಳುತ್ತಿದ್ದಾರೆ. ಹಾಗಿದ್ದರೆ ಇದನ್ನು ಯಾರು ನಿರ್ಧರಿಸಬೇಕು? ಈ ನಾಡಿನ ಪ್ರಧಾನ ಚಿಂತಕರು ನಿರ್ಧರಿಸಲಿ ಎಂಬ ಇಂಗಿತ ಸುರೇಶ ಅವರದು. ಈ ಪ್ರಧಾನ ಚಿಂತಕರಾದರೂ ಯಾರು? ಹಾಗಿದ್ದರೆ ಸಿನಿಮಾ ನೋಡುವ ವೀಕ್ಷಕರ ಪಾಲ್ಗೊಳ್ಳುವಿಕೆ ಬೇಡವೇ? ತಮಗೆ ಯಾವುದನ್ನು ನೋಡಬೇಕು/ನೋಡಬಾರದು ಎಂಬ ವಿವೇಚನೆ ಕನ್ನಡ ವೀಕ್ಷಕರಿಗಿಲ್ಲ ಎಂದು ಸುರೇಶ ಅವರು ಸೂಚಿಸುತ್ತಿದ್ದಾರೆಯೇ?
ಬಿ.ಸುರೇಶ ಅವರು ಸಮಗ್ರ ಕನ್ನಡ ಚಿತ್ರರಂಗದ ಪರವಾಗಿ ತಮ್ಮ ಚಿಂತನೆಗಳನ್ನು ಮಂಡಿಸುತ್ತಿದ್ದಾರೆಯೇ? ಅಥವಾ ಒಬ್ಬ ಸಂಸ್ಕೃತಿ ಚಿಂತಕರಾಗಿ ವಾದಿಸುತ್ತಾರೆಯೇ? ಅಥವಾ ಓರ್ವ ಚಿತ್ರ ವೀಕ್ಷಕನಾಗಿ ಈ ವಿಷಯಗಳನ್ನು ಹೇಳುತ್ತಿದ್ದಾರಾ? ಅನ್ನುವುದು ಅವರ ಇಡೀ ಲೇಖನವನ್ನು ಓದಿದ ಮೇಲೂ ಗೊತ್ತಾಗುವುದಿಲ್ಲ.
ಹಾಗೆ ನೋಡಿದರೆ ಅವರು ಕನ್ನಡ ಚಿತ್ರರಂಗದ ಪರವಾಗಿ ತಮ್ಮ ಚಿಂತನೆಗಳನ್ನು ಮಂಡಿಸುತ್ತಿದ್ದರೆ, ಅವರ ವಾದವೇ ಅವರನ್ನು ಸೋಲಿಸಿಬಿಡುತ್ತದೆ. ಅದಕ್ಕೆ ತಕ್ಕ ಸಾಕ್ಷ್ಯಗಳೂ ಅವರ ಸುದೀರ್ಘ ಲೇಖನದಲ್ಲಿದೆ. ಡಬ್ಬಿಂಗ್ ಬೇಡ ಅನ್ನುವ ಚಿತ್ರರಂಗ ರೀಮೇಕ್‌ಗಳಲ್ಲಿ ಮುಳುಗಿಹೋಗಿರುವುದನ್ನು ಸಮರ್ಥಿಸಿಕೊಳ್ಳಲು ಸುರೇಶರಿಂದಾಗಿಲ್ಲ. ರೀಮೇಕ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಕ್ಕೂ ಅವರು ಪರಿತಪನೆಯಂಥ ಮಾತುಗಳನ್ನಾಡಿದ್ದಾರೆ.
ಇನ್ನು ಸಂಸ್ಕೃತಿ ಚಿಂತಕರಾಗಿ ಈ ಮಾತುಗಳನ್ನು ಹೇಳುತ್ತಿದ್ದರೂ ಸುರೇಶರ ವಾದಗಳನ್ನು ಕನ್ನಡ ಚಿತ್ರರಂಗವೇ ಹೊಡೆದುಹಾಕುತ್ತದೆ. ಡಬ್ಬಿಂಗ್ ನಮ್ಮ ಭಾಷೆಯನ್ನು, ನಮ್ಮ ಸಂಸ್ಕೃತಿಯನ್ನು, ನಮ್ಮ ಮುಂದಿನ ತಲೆಮಾರನ್ನು ಸಾರಸಗಟಾಗಿ ಪಲ್ಲಟಗೊಳಿಸಲಿದೆ. ಅದನ್ನು ವಿರೋಧಿಸುವುದು ಅತ್ಯಗತ್ಯ ಅನ್ನುವುದು ಸುರೇಶರ ಹಸಿಬಿಸಿ ವಾದ. ಹಾಗಿದ್ದರೆ ಇವತ್ತಿನ ಕನ್ನಡ ಸಿನಿಮಾಗಳು ಕನ್ನಡ ಭಾಷೆಯನ್ನು, ಸಂಸ್ಕೃತಿಯನ್ನು ಉಳಿಸಿ-ಬೆಳೆಸಿಕೊಂಡು ಬಂದಿವೆಯೇ ಎಂಬ ಮೂಲಭೂತ ಪ್ರಶ್ನೆ ಉದ್ಭವಿಸುತ್ತದೆ.
ಇವತ್ತಿನ ಕನ್ನಡ ಸಿನಿಮಾಗಳ ಪೈಕಿ ಹತ್ತರಲ್ಲಿ ಐದರಲ್ಲಿ ಸಿನಿಮಾದ ನಾಯಕನೇ ರೌಡಿಯಾಗಿರುತ್ತಾನೆ, ಕೊಲೆ ಪಾತಕಿಯಾಗಿರುತ್ತಾನೆ. ಹಾಗಿದ್ದರೆ ಅರ್ಧದಷ್ಟು ಕನ್ನಡಿಗರು ರೌಡಿಗಳು, ಕೊಲೆಗಡುಕರಾಗಿದ್ದಾರೆಯೇ? ಕರ್ನಾಟಕದ ಜನರ ನಿಜವಾದ ಬದುಕು-ಸಂಸ್ಕೃತಿಯನ್ನು ಎಷ್ಟು ಸಿನಿಮಾಗಳು ಪ್ರತಿಬಿಂಬಿಸುತ್ತಿವೆ? ಅಷ್ಟಕ್ಕೂ ಸುರೇಶರಂಥ ಕೆಲವರನ್ನು ಹೊರತುಪಡಿಸಿದರೆ ಸಿನಿಮಾ ನಿರ್ದೇಶಕರಿಗೆ ಸಂಸ್ಕೃತಿ ಎಂಬ ಶಬ್ದಕ್ಕೆ ಏನಾದ್ರೂ ಅರ್ಥ ತಿಳಿದಿದೆಯೇ?
ಸಿನಿಮಾಗಳಲ್ಲಿ ಬಳಸಲಾಗುತ್ತಿರುವ ಕನ್ನಡ ಭಾಷೆಯಾದರೂ ಎಂಥದ್ದು? ತಮಿಳು-ತೆಲುಗು ಹಾವಳಿ ಇರುವ ಬೆಂಗಳೂರಿನ ಗಲ್ಲಿಯೊಂದರಲ್ಲಿ ಮಾತನಾಡುವ ಮಚ್ಚಾ, ಡವ್, ಟಪಾಸ್, ಕುರ್ಪು, ಪೊರ್ಕಿ, ಅಮ್ಮನ್, ಅಕ್ಕನ್ ತರಹದ ಶಬ್ದಗಳನ್ನು ಒಳಗೊಂಡ ಕನ್ನಡವೇ ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ಕನ್ನಡವೇ? ಹೋಗಲಿ, ಕನ್ನಡ ಸಿನಿಮಾಗಳ ಶೀರ್ಷಿಕೆಗಳಾದರೂ ಎಂಥವು? ಕನ್ನಡ ಭಾಷೆಯನ್ನು ಬೆಳೆಸುವ ರೀತಿಯೇ ಇದು? ಇಡೀ ಕರ್ನಾಟಕದಲ್ಲಿ ಹಲವು ಭಾಗಗಳಲ್ಲಿ ಹಲವು ರೀತಿಯ ಕನ್ನಡವನ್ನು ಮಾತನಾಡಲಾಗುತ್ತದೆ. ಸಿನಿಮಾಗಳಲ್ಲಿ ನೋಡುವ ಭಾಷೆ ಒಂದೇ. ಅದು ಟಿಪಿಕಲ್ ಬೆಂಗಳೂರು ಶ್ರೀರಾಮಪುರದ ಭಾಷೆ. ಮಂಗಳೂರು ಕನ್ನಡ, ಧಾರವಾಡ ಕನ್ನಡ ನಮ್ಮ ಸಿನಿಮಾದವರಿಗೆ ಗೇಲಿಯ ವಸ್ತು, ಕಾಮಿಡಿ ಪಾತ್ರಗಳು ಆಗೊಮ್ಮೆ ಈಗೊಮ್ಮೆ ಬಳಸುವ ಭಾಷೆ.
ಹೋಗಲಿ, ಕನ್ನಡ ಕಿರುತೆರೆಯಲ್ಲಾದರೂ ಕನ್ನಡ ಭಾಷೆಯನ್ನು ಉದ್ಧಾರ ಮಾಡಲಾಗುತ್ತಿದೆಯೇ? ಬಿ.ಸುರೇಶ ಅವರೇ ಹಿಂದೆ ತಮ್ಮ ಬ್ಲಾಗ್‌ನಲ್ಲಿ ಹೀಗೆ ಬರೆದಿದ್ದರು.
ಇಂದು ನಮ್ಮ ಟೆಲಿವಿಷನ್ನಿನಲ್ಲಿ ಸುದ್ದಿವಾಹಿನಿ, ಸಾಮಾನ್ಯ ಜನರಂಜನೆಯ ಕಾರ್ಯಕ್ರಮಗಳ ವಾಹಿನಿ ಎಂಬ ಎರಡು ಬಗೆಗಳು ಇವೆ. ಅವುಗಳಲ್ಲಿ ಜನರಂಜನೆಯ ವಾಹಿನಿಯನ್ನು ಮೊದಲು ಗಮನಿಸುವುದಾದರೆ; ಇಲ್ಲಿ ಬರುವ ಬಹುತೇಕ ನಿರೂಪಕರು (ಹಾಡಿನ ಕಾರ್ಯಕ್ರಮ ನಡೆಸಿಕೊಡುವವರು) ಕನ್ನಡವನ್ನು ಕಂಗ್ಲೀಷು ಮಾಡಿದ್ದಾರೆ. ಇವರಾಡುವ ಮಾತಿಗೆ ಇರುವ ತೂಕವೂ ಅಂತಹುದೇ. ಇಂತಹ ಕಾರ್ಯಕ್ರಮಗಳನ್ನು ನೋಡುವ ಜನರಿಗೆ ನೇರವಾಗಿ ಇವರ ಭಾಷೆ ತಲುಪುತ್ತಿದೆ. ವಿಶೇಷವಾಗಿ ಖಾಸಗಿ ವಾಹಿನಿಗಳಲ್ಲಿನ ನಿರೂಪಕ/ನಿರೂಪಕಿಯರು ಬಳಸುವ ಭಾಷೆಯನ್ನು ನಿಯಂತ್ರಿಸುವುದು ಕನ್ನಡವನ್ನು ಮುಂದಿನ ತಲೆಮಾರಿಗೆ ಸರಿಯಾಗಿ ದಾಟಿಸುವ ದೃಷ್ಟಿಯಿಂದ ಅಗತ್ಯವಾಗಿದೆ. ಈ ನಿರೂಪಕರು ಬಳಸುವ ಭಾಷೆಯಲ್ಲಿ ಕನ್ನಡಕ್ಕಿಂತ ಹೆಚ್ಚು ಇಂಗ್ಲೀಷ್ ಬಳಕೆಯಾಗುತ್ತಿದೆ ಎಂಬುದೊಂದು ವಿಷಯವಾದರೆ ಇದರೊಂದಿಗೆ ಕನ್ನಡಕ್ಕೆ ಅನೇಕ ಪದಗಳ ಆಮದು ಸಹ ಆಗುತ್ತಿದೆ. ಈ ಹೊಸ ಪದಗಳಿಂದ ಕನ್ನಡ ಭಾಷೆಗೆ ಹೊಸಪದಗಳು ಸಿಕ್ಕಿವೆ. ಇದು ಸಹ ಬಾಷೆಯ ಬೆಳವಣಿಗೆಯ ದೃಷ್ಟಿಯಿಂದ ಅಗತ್ಯವಾದುದೇ ಆಗಿದೆ. ನಾವು ಕಂಪ್ಯೂಟರ್ ಎಂಬ ಪದಕ್ಕೆ ಗಣಕ ಯಂತ್ರ ಅನ್ನುವುದಕ್ಕಿಂತ ಅದನ್ನು ಕಂಪ್ಯೂಟರ್ ಎನ್ನುವುದೇ ಹೆಚ್ಚು ಸೂಕ್ತ. ಹಾಗೆಯೇ ಪೋಲೀಸರಿಗೆ ಆರಕ್ಷಕರು ಎನ್ನುವುದಕ್ಕಿಂತ ಪೋಲೀಸ್ ಎಂದೇ ಬಳಸುವುದು ಅನುಕೂಲ. ಭಾಷೆಯ ದೃಷ್ಟಿಯಿಂದ ನಮ್ಮಲ್ಲಿ ಅಷ್ಟು ಉದಾರತೆ ಇರಲೇಬೇಕಾಗುತ್ತದೆ. ಎಲ್ಲಾ ಪದಗಳನ್ನು ಕನ್ನಡಕ್ಕೆ ತರುತ್ತೇವೆ ಎಂದು, ಸಂಸ್ಕೃತ ಪದಗಳನ್ನು ಬಳಸುವುದಕ್ಕಿಂತ, ಅಂತಹ ಪದಗಳನ್ನು ಮೂಲ ಸ್ವರೂಪದಲ್ಲಿಯೇ ಬಳಸುವುದು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಆರೋಗ್ಯಕರ.
ಇನ್ನು ಇದೇ ವಾಹಿನಿಯಲ್ಲಿ ಬರುತ್ತಿರುವ ಧಾರಾವಾಹಿಗಳಿಗೆ ಬರೋಣ. ಇಲ್ಲಿ ಕನ್ನಡವನ್ನು ಎಚ್ಚರಿಕೆಯಿಂದ ಬಳಸುವ ಬರಹಗಾರರ ಮತ್ತು ನಿರ್ದೇಶಕರ ಸಂಖ್ಯೆ ಕಡಿಮೆಯಾಗುತ್ತಿದೆ. ಅಂತೆಯೇ ಕಲಾವಿದರಲ್ಲಿಯೂ ಕನ್ನಡ ಬಳಕೆಯ ಚಚ್ಚರಗಳು ಕ್ಷೀಣಿಸುತ್ತಿವೆ. ಹೀಗಾಗಿ ನಿರೂಪಕ/ನಿರೂಪಕಿಯರ ಸ್ಥಿತಿಯೇ ಬಹುತೇಕ ಕಲಾವಿದರದ್ದೂ ಆಗಿದೆ. ಈ ವಿಷಯ ಕುರಿತಂತೆ ಆಯಾ ವಾಹಿನಿಯ ಕಾರ್ಯಕ್ರಮ ಮುಖ್ಯಸ್ಥರು ವಿಶೇಷ ಕಾಳಜಿ ವಹಿಸಬೇಕಾಗಿದೆ. ಇದಲ್ಲದೆ ಈಚೆಗೆ ವಾಹಿನಿಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಮೂಲಕತೆಗಳನ್ನು ಸಿದ್ಧಪಡಿಸಿಕೊಳ್ಳುವ ಸಮಯವಿಲ್ಲದ ಕಾರಣ ಇತರ ಭಾಷೆಗಳಿಂದ ಎರವಲು ಕತೆಗಳನ್ನು ತೆಗೆದುಕೊಂಡು ಪುನರ್‌ನಿರ್ಮಾಣ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇಂತಹ ಕಾರ್ಯಕ್ರಮಗಳ ನಿರ್ದೇಶಕರು ಬಹುಮಟ್ಟಿಗೆ ಪರಭಾಷೆಯವರೇ ಆಗಿರುತ್ತಾರೆ. ಆದ್ದರಿಂದ ಕಲಾವಿದರು ಬಳಸುವ ಕನ್ನಡದ ಮೇಲೆ ಅಧಿಕಾರಸ್ಥವಾಗಿ ಮಾತಾಡುವುದು ಅಂತಹ ಪರಭಾಷಿಕರಿಗೆ ಸಾಧ್ಯವಾಗುವುದಿಲ್ಲ. ಇದರಿಂದಾಗಿಯೂ ನಮ್ಮ ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಕಲಾವಿದರ ಕನ್ನಡಕ್ಕೆ ಸಾಕಷ್ಟು ತೊಂದರೆಗಳು ಆಗುತ್ತಿವೆ. ಈ ದೃಷ್ಟಿಯಿಂದ ಕನ್ನಡ ವಾಹಿನಿಗಳಲ್ಲಿ ತಯಾರಾಗುವ ಕಾರ್ಯಕ್ರಮಗಳಿಗೆ ಕನ್ನಡಿಗರನ್ನೇ ನಿರ್ದೇಶಕರನ್ನಾಗಿ ಆಯ್ದುಕೊಳ್ಳಬೇಕು ಎಂದು ಕನ್ನಡಿಗರೆಲ್ಲರೂ ವಾಹಿನಿಗಳ ಮೇಲೆ ಒತ್ತಡ ತರಬೇಕಾಗುತ್ತದೆ.
ಕನ್ನಡ ಕಿರುತೆರೆಯ ಧಾರಾವಾಹಿಗಳಲ್ಲಿ ಮಹಿಳೆಯರ ಪಾತ್ರಗಳೇ ಮುಖ್ಯ ಭೂಮಿಕೆಯಲ್ಲಿರುತ್ತವೆ. ನಾಯಕ-ಖಳನಾಯಕ ಪಾತ್ರಗಳಿಗಿಂತ ನಾಯಕಿ-ಖಳನಾಯಕಿ ಪಾತ್ರಗಳೇ ಇಲ್ಲೆ ಮೆರೆಯುತ್ತವೆ. ಗಂಡ-ಹೆಂಡತಿ ಜತೆಗೆ ಪ್ರೇಯಸಿ ಇಲ್ಲದಿದ್ದರೆ ಕಥೆಯೇ ಮುಂದೆ ಸಾಗುವುದಿಲ್ಲ. ಅನೈತಿಕ ಸಂಬಂಧಗಳೇ ಈ ಸೀರಿಯಲ್ಲುಗಳ ಜೀವಾಳ. ಪ್ರತಿ ಧಾರಾವಾಹಿಗಳಲ್ಲೂ ನೀಚ, ಕೊಲೆಗಡುಕ ಹೆಣ್ಣುಮಕ್ಕಳು ಇದ್ದೇ ಇರುತ್ತಾರೆ. ಕರ್ನಾಟಕ ಇಷ್ಟು ಹೊಲಸೆದ್ದು ಹೋಗಿದೆಯೇ? ಈ ಸೀರಿಯಲ್ಲುಗಳು ನಿಜವಾಗಿಯೂ ಕರ್ನಾಟಕದ ಹೆಣ್ಣುಮಕ್ಕಳನ್ನು ಪ್ರತಿನಿಧಿಸುತ್ತವೆಯೇ?
ವಿಷಯ ಇಷ್ಟೆಲ್ಲ ಇರುವಾಗ ಡಬ್ಬಿಂಗ್ ಸಿನಿಮಾಗಳು ಕನ್ನಡ ಭಾಷೆಯನ್ನು, ಸಂಸ್ಕೃತಿಯನ್ನು ಪಲ್ಲಟಗೊಳಿಸುತ್ತವೆ ಎಂಬುದು ಎಷ್ಟು ಸರಿ? ಸಂಸ್ಕೃತಿಯೇ ಗೊತ್ತಿಲ್ಲದ ಜನರು ಸಂಸ್ಕೃತಿಯನ್ನು ಉಳಿಸುವ ಮಾತನಾಡಿದರೆ ಅದು ನಗೆಪಾಟಲಿಗೆ ಈಡಾಗುತ್ತದೆ.
ಇನ್ನು ನಮ್ಮ ಮೂಲಭೂತ ಪ್ರಶ್ನೆಗಳಿಗೆ ಸುರೇಶ ಅವರೂ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜರು ಉತ್ತರಿಸಲಾರರು. ಈಗ ನಮ್ಮ ಚಿತ್ರರಂಗ ನಡೆಸಿಕೊಂಡು ಬರುತ್ತಿರುವ ಡಬ್ಬಿಂಗ್ ನಿಷೇಧಕ್ಕೆ ಕಾನೂನಿನ ಮಾನ್ಯತೆಯೇ ಇಲ್ಲ. ಹಾಗೆಲ್ಲ ಕಲೆ-ಸಿನಿಮಾ-ಸಂಸ್ಕೃತಿಯನ್ನು ನಿರ್ಬಂಧ, ನಿಷೇಧಗಳಲ್ಲಿ ಇಡಲಾಗದು. ಎಷ್ಟು ಕಾಲದವರೆಗೆ ಈ ನಾಟಕ ಜಾರಿಯಲ್ಲಿರುತ್ತದೆ?
ಒಂದು ವೇಳೆ ನಾವೇ ಒಂದು ಥೇಟರ್ ನಿರ್ಮಿಸಿ, ನಾವೇ ಒಂದು ಡಬ್ಬಿಂಗ್ ಸಿನಿಮಾ ನಿರ್ಮಿಸಿ ನಿಮ್ಮ ಚೇಂಬರ್ ಹಂಗು-ಮುಲಾಜಿಗೆ ಬೀಳದೆ ಸಿನಿಮಾ ಪ್ರದರ್ಶಿಸಿದರೆ ಏನು ಮಾಡುತ್ತೀರಿ? ನಿಮ್ಮ ಬಳಿ ಬಳಸಲು ಯಾವ ಅಸ್ತ್ರವಿದೆ? ನಿಮ್ಮ ಚೇಂಬರ್‌ನ ಸದಸ್ಯರೇ ಅಲ್ಲದವರನ್ನು ನಿಷೇಧಿಸುತ್ತೀರಾ? ನಾಲ್ಕು ವಾರಗಳ ನಿಷೇಧ ಹೇರಿದ ಕಾರಣಕ್ಕೆ ರಿಲಯನ್ಸ್ ಸಂಸ್ಥೆಯವರು ದುಬಾರಿ ಪರಿಹಾರ ಕೋರಿ ಹೂಡಿರುವ ಮೊಕದ್ದಮೆಯನ್ನು ಚೇಂಬರ್ ಎದುರಿಸುತ್ತಿಲ್ಲವೆ? ಇಷ್ಟೆಲ್ಲ ಗೊತ್ತಿದ್ದೂ ನಮ್ಮ ಚಲನಚಿತ್ರ ರಂಗದ ಗಣ್ಯರು ಪಾಳೇಗಾರಿಕೆ ಪ್ರದರ್ಶಿಸುವುದು ಯಾಕೆ?
ಚಿತ್ರರಂಗದವರ ಹಾಗೆ ಉಳಿದವರೆಲ್ಲರೂ ವರ್ತಿಸಿದರೆ ಏನಾಗಬಹುದು. ಒಂದು ವೇಳೆ ಕನ್ನಡ ಸಾಹಿತ್ಯ ಪರಿಷತ್‌ನಂಥ ಸಂಸ್ಥೆ ಯಾವುದೇ ಕಾರಣಕ್ಕೂ ಇತರ ಭಾಷೆಗಳ ಸಾಹಿತ್ಯ ಕೃತಿಗಳ ಅನುವಾದವನ್ನು ಯಾವ ಸಾಹಿತಿಗಳೂ ಮಾಡಕೂಡದು, ಅದನ್ನು ಮುದ್ರಿಸಕೂಡದು, ಮಾರಕೂಡದು ಎಂದು ನಿರ್ಬಂಧ ಹೇರಿದರೆ ಹೇಗಿರುತ್ತದೆ?
ಡಬ್ಬಿಂಗ್ ಸಿನಿಮಾದಲ್ಲಿ ಬಳಸುವ ಭಾಷೆಯ ಕುರಿತು ಸುರೇಶರು ಹೇಳುತ್ತಾರೆ. ಯಾಕೆ ಸುರೇಶರಂಥವರೇ ಡಬ್ಬಿಂಗ್ ಸಿನಿಮಾದಲ್ಲಿ ಬಳಸಲಾಗುವ ಭಾಷೆಯನ್ನು ಕನ್ನಡ ಕೇಳುಗರಿಗೆ ಹಿತವಾಗುವಂತೆ, ಕನ್ನಡದ ಸೊಗಡು ಮಾಯವಾಗದಂತೆ ಮಾಡಬಾರದು? ಅದು ಅಷ್ಟು ಅಸಾಧ್ಯದ ಮಾತೇ?
ಕನ್ನಡ ಸಿನಿಮಾಗಳಿಗೆ ನೂರರಷ್ಟು ತೆರಿಗೆ ವಿನಾಯಿತಿ, ಸಬ್ಸಿಡಿ, ಪ್ರಶಸ್ತಿ ಇತ್ಯಾದಿಗಳು ಸೇರಿದಂತೆ ಸರ್ಕಾರ ಬೇಕಾದಷ್ಟು ವಿನಾಯಿತಿಗಳನ್ನು ನೀಡಿದೆ. ಇಷ್ಟಾದರೂ ನಮ್ಮ ಚಲನಚಿತ್ರರಂಗದ ಅಭದ್ರತೆಯಿಂದ ನರಳುವುದನ್ನು ಬಿಟ್ಟಿಲ್ಲ. ಕಳಪೆ ಸಿನಿಮಾಗಳನ್ನು ನಮ್ಮ ಜನರು ಮುಲಾಜಿಲ್ಲದಂತೆ ತಿರಸ್ಕರಿಸುತ್ತಾರೆ ಎಂಬುದು ಗೊತ್ತಿದ್ದರೂ ಕೆಟ್ಟ ಸಿನಿಮಾಗಳನ್ನು ತಯಾರಿಸುವುದನ್ನೂ ಬಿಟ್ಟಿಲ್ಲ. ಸದಬಿರುಚಿಯ ಸಿನಿಮಾಗಳನ್ನು ಪ್ರೇಕ್ಷಕರು ಪುರಸ್ಕರಿಸಿದ್ದಾರೆ, ಬೇಡವಾದವನ್ನು ಮೂಲೆಗೆ ತಳ್ಳಿದ್ದಾರೆ. ಈ ವಾಸ್ತವವನ್ನು ಯಾಕೆ ಇವರು ಅರ್ಥ ಮಾಡಿಕೊಳ್ಳುತ್ತಿಲ್ಲ?
ಡಬ್ಬಿಂಗ್ ಸಿನಿಮಾಗಳು ಭರ್ಜರಿ ಯಶಸ್ಸು ಗಳಿಸಿ ಕನ್ನಡ ಚಿತ್ರರಂಗವೇ ನಾಶವಾಗುತ್ತದೆ ಎಂಬ ಭ್ರಮೆ ಯಾಕೆ ಇವರುಗಳನ್ನು ಆವರಿಸಿಕೊಂಡಿದೆ. ಕನ್ನಡದ ಪ್ರೇಕ್ಷಕರು ಅಷ್ಟು ದಡ್ಡರೇ? ಕನ್ನಡ ಸಿನಿಮಾ ನಿರ್ದೇಶಕರು-ನಿರ್ಮಾಪಕ-ಕಲಾವಿದರಿಗೇಕೆ ಇಷ್ಟೊಂದು ಆತ್ಮವಿಶ್ವಾಸದ ಕೊರತೆ? ಡಬ್ಬಿಂಗ್ ಸಿನಿಮಾಗಳು ಬಂದ ಕೂಡಲೇ ಕನ್ನಡ ಪ್ರೇಕ್ಷಕರು ಇಡೀ ಕನ್ನಡ ಚಿತ್ರರಂಗವನ್ನು ಬೀದಿಗೆ ತಳ್ಳುತ್ತಾರಾ?
ಉತ್ತರ ಸುರೇಶ ಅವರ ಮಾತುಗಳಲ್ಲೇ ಇದೆ.
ಪೆನ್ನು ಕಾಗದವಿದ್ದರೆ, ಪ್ರಾಮಾಣಿಕತೆ ಇದ್ದರೆ ಕನ್ನಡಿಗರು ಕಾಪಾಡ್ತಾರೆ!
ಡಬ್ಬಿಂಗ್ ಬೇಕೆ, ಬೇಡವೇ ಎಂಬ ಮತದಾನದಲ್ಲಿ ಇನ್ನೂ ಪಾಲ್ಗೊಳ್ಳದವರು ದಯವಿಟ್ಟು ಮತ ಚಲಾಯಿಸಿ.
发表评论