ಕರ್ನಾಟಕ ಮಾನವ ಹಕ್ಕುಗಳ ಆಯೋಗ ಸಫಾಯಿಕರ್ಮಚಾರಿಗಳ ವಾಸಸ್ಥಳಕ್ಕೆ ಭೇಟಿ ನೀಡಿದಾಗ 
ಮಂಡಿಸಲಾದ ವಿಷಯಗಳು ಮತ್ತು ತೆಗೆದುಕೊಂಡ ತೀರ್ಮಾನಗಳು

ಸಭೆ ನಡೆದ ಸ್ಥಳ: ಕೆನಡಿಸ್ ಆಂದ್ರ ಲೈನ್, ಕೆಜಿಎಫ್ ದಿನಾಂಕ: ೨೪.೦೬.೨೦೧೧

ದಿನಾಂಕ ೨೪.೦೬.೨೦೧೧ ರಂದು ಮಾನವ ಹಕ್ಕುಗಳ ಆಯೋಗದ ಗೌರವಾನ್ವ್ವಿತ ಸದಸ್ಯರಾದ ಶ್ರೀ. ರಡ್ಡಿ,  ಸದಸ್ಯರು, ಕೆಜಿಎಫ್‌ನ ಕೆನಡಿಸ್ ಆಂದ್ರ ಲೈನ್‌ಗೆ ಭೇಟಿ ನೀಡಿ ಸಫಾಯಿಕರ್ಮಚಾರಿಗಳ ಬದುಕಿನ ಪರಿಸ್ಥಿತಿಯ ಬಗ್ಗೆ ಕೂಲಂಕುಶ ಅಧ್ಯಯನ / ತನಿಖೆ ನಡೆಸಿದರು. ಬೆಳಗ್ಗೆ ೧೧.೩೦ ರಿಂದ ೨.೩೦ ನಿಮಿಷದ ವರೆಗೆ ನಡೆದ ಮತ್ತು ಸಮಾಲೋಚನೆಯಲ್ಲಿ ಜಿಲ್ಲಾ ಮತ್ತು ನಗರಾಡಳಿತದ ವಿವಿಧ ಇಲಾಖೆ ಅಧಿಕಾರಿಗಳು, ಪಿಯುಸಿಎಲ್  ಕರ್ನಾಟಕದ ಪದಾಧಕಾರಿಗಳು ಸ್ಥಳೀಯ ಸಫಾಯಿಕರ್ಮಚಾರಿಗಳ ಹೋರಾಟ ಸಮಿತಿ ಪದಾಧಿಕಾರಿಗಳು ಮತ್ತು ಇತರ ಸಂಘ-ಸಂಸ್ಥೆಗಳ ಮುಖಂಡರು ಹಾಜರಿದ್ದು ಆಯೋಗದ ಕಲಾಪಗಳಲ್ಲಿ ಭಾಗವಹಿಸಿ ಕೆಲವರು ಸಾಕ್ಷ್ಯ ನೀಡಿದರು ಅದಕ್ಕೆ ಆಡಳಿತ ವರ್ಗ ಪ್ರತಿಕ್ರಿಯೆ ನೀಡಿತು. ಸಭೆಯ ಸಂಕ್ಷಿಪ್ತ ವರದಿ ಮತ್ತು ತೆಗೆದುಕೊಳ್ಳಲಾದ ತೀರ್ಮಾನಗಳ ವಿವರ ಕೆಳಗೆ ನೀಡಲಾಗಿದೆ.

ಭಾಗವಹಿಸಿದ್ದವರು:
ಶ್ರೀ. ಎಚ್.ಆರ್ ರೆಡ್ಡಿ, ಗೌರವಾನ್ವಿತ ಸದಸ್ಯರು, ಕರ್ನಾಟಕ ಮಾನವ ಹಕ್ಕುಗಳ ಆಯೋಗ, ಬೆಂಗಳೂರು ಇವರ ನೇತೃತ್ವದಲ್ಲಿ ನಡೆಯಲಾದ ಸಭೆಯಲ್ಲಿ ಹಾಜರಿದ್ದ ಸರಕಾರಿ ಅಧಿಕಾರಿಗಳು, ಮಾನವ ಹಕ್ಕು ಸಂಘಟನೆ, ಜನ ಸಂಘಟನೆ ಮತ್ತು ಸಂಸ್ಥೆಗಳು
ಜಿಲ್ಲಾಡಳಿತದ ಅಧಿಕಾರಿಗಳು
೧. ಶ್ರೀ. ಮೀನ, ಜಿಲ್ಲಾಧಿಕಾರಿಗಳು, ಕೋಲಾರ ಜಿಲ್ಲೆ
೨. ಶ್ರೀ. ಪೆದ್ದಪ್ಪಯ್ಯ, ಸಹಾಯಕ ಆಯುಕ್ತರು / ವಿಭಾಗಾಧಿಕಾರಿಗಳು
೩. ಆಯುಕ್ತರು, ಕೆಜಿಎಫ್ ನಗರ ಸಭೆ, ಕೆಜಿಎಫ್, ಕೋಲಾರ ಜಿಲ್ಲೆ
೪. ಸಹಾಯಕ ಅಭಿಯಂತರ, ನಗರ ಸಭೆ, ಕೆಜಿಎಫ್
೫. ಆರೋಗ್ಯಾಧಿಕಾರಿ, ನಗರ ಸಭೆ, ಕೆಜಿಎಫ್, ಹೆಲ್ತ್ ಇನ್ಸಪೆಕ್ಟರ್, ನಗರ ಸಭೆ, ಕೆಜಿಎಫ್
೬. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು, & ತಾಲೊಕು ಸಮಾಜ ಕಲ್ಯಾಣ ಅಧಿಕಾರಿಗಳು, ಬಂಗಾರ ಪೇಟೆ
ಸಫಾಯಿಕರ್ಮಚಾರಿಗಳ ಸಂಘಟನೆ
೭. ಶ್ರೀ. ಏಸುದಾಸ್, ಶ್ರೀ. ಪ್ರಸಾದ್ ಕುಟ್ಟಿ, ಶ್ರೀ. ಪ್ರಭು, ಪದಾಧಿಕಾರಿಗಳು, ಸಫಾಯಿಕರ್ಮಚಾರಿಗಳ ಹೋರಾಟ ಸಮಿತಿ, ಕೆನಡಿಸ್ ಆಂದ್ರ ಲೈನ್, ಕೆಜಿಎಫ್ ಹಾಗೂ ಸ್ಥಳೀಯ ಸದಸ್ಯರು ಮತ್ತು ಕೆಜಿಎಫ್‌ನ ವಿವಿಧ ಸಂಘಟನೆಗಳು ಮತ್ತು ಸಂಘ ಸಂಸ್ಥೆಗಳು ಭಾಗವಹಿಸಿ ತಮ್ಮ ಅಹವಾಲುಗಳನ್ನು ಆಯೋಗದ ಮುಂದಿರಿಸಿದರು.

ಅಧ್ಯಯನದ ಅವಧಿಯಲ್ಲಿ ನಡೆದ ಸಂವಾದದ ಭಾಗವಾಗಿ ಹೊರಹೊಮ್ಮಿದ ಪ್ರಮುಖ ತೀರ್ಮಾನಗಳನ್ನು ಕೆಳಗೆ ನೀಡಲಾಗಿದೆ.


೧) ಸಫಾಯಿಕರ್ಮಚಾರಿಗಳು ತಮಗೆ ಖಾಯಂ ನೌಕರಿಯನ್ನು ನೀಡುವಂತೆ ಬೇಡಿಕೆ ಮುಂದಿಟ್ಟರು, ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಅದು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವುದಿಲ್ಲವಾದ್ದರಿಂದ ಅದು ಸಾಧ್ಯವಿಲ್ಲವೆಂದು ತಿಳಿಸಿ ಹಾಲಿ ಸಫಾಯಿಕರ್ಮಚಾರಿ ಕೆಲಸ ಮಾಡುತ್ತಿರುವ ಎಲ್ಲರನ್ನು ದಿನಗೂಲಿ ೧೬೪ ರೂಪಾಯಿಯಂತೆ (ತಿಂಗಳಿಗೆ ೪೨೫೦ ರೋಪಾಯಿ) ನಗರ ಸಭೆಯಲ್ಲಿ ಕೆಲಸ ನಿರ್ವಹಿಸಲು ದಿನಾಂಕ ೨೭.೦೬.೨೦೧೧ ಸೋಮವಾರದಿಂದಲೇ ತೆಗೆದುಕೊಳ್ಳುವುದಾಗಿ ಮತ್ತು ಅವರ ದಿನಗೂಲಿಯನ್ನು ನೇರವಾಗಿ ನಗರ ಸಭೆಯೇ ಪಾವತಿಸಲು ಜಿಲ್ಲಾಧಿಕಾರಿಗಳು ಸ್ಥಳದಲ್ಲೆ ತೀರ್ಮಾನ ತೆಗೆದುಕೊಂಡು ಮೌಖಿಕ ಆದೇಶವನ್ನು ನಗರಸಭೆ ಆಯುಕ್ತರಿಗೆ ನೀಡಿದರು ಸಫಾಯಿಕರ್ಮಚಾರಿ ಸಮಿತಿ ತೀರ್ಮಾನಕ್ಕೆ ಒಪ್ಪಿಗೆ ನೀಡಿತು.

೨) ಈಗಾಗಲೇ ಅಕಾಲಿಕ ಮರಣ ಹೊಂದಿರುವ ಸಫಾಯಿಕರ್ಮಚಾರಿಗಳ ಕುಟುಂಬಕ್ಕೆ ಪರಿಹಾರ ನೀಡುವಂತೆ ಸಮಿತಿ ಒತ್ತಾಯವನ್ನು ಪರಿಗಣಿಸಿದ ಜಿಲ್ಲಾಧಿಕಾರಿಗಳು ಇಂತಹ ಅಕಾಲಿಕ ಮರಣಹೊಂದಿರುವ ಕುಟುಂಬಕ್ಕೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕೊಡಬಹುದಾದ ೧೦,೦೦೦ ರೂಪಾಯಿಗಳ ಪರಿಹಾರವನ್ನು ಕುಟುಂಬದ ವಾರಸುದಾರರಿಗೆ ನೀಡಲು ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸಿದರು. ಇದನ್ನು ಒಪ್ಪಿಕೊಂಡ ಸಮಿತಿ ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಿ ಸರಕಾರಕ್ಕೆ ಪ್ರತ್ಯೇಕ ಅರ್ಜಿಸಲ್ಲಿಸುವುದಾಗಿ ತಿಳಿಸಿದರು.

೩) ಬಹಳ ವರ್ಷಗಳಿಂದ ಮಲ ಎತ್ತುವ ಕೆಲಸ ಮಾಡುತ್ತಿದ್ದ ಸಫಾಯಿಕರ್ಮಚಾರಿಗಳು ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವುದನ್ನು ಗಮನಿಸಿದ ನಂತರ ಅಂತಹ ಎಲ್ಲರ ಆರೋಗ್ಯ ತಪಾಸಣೆಗೆ ಒಂದು ಶಿಬಿರವನ್ನು ಕೆನಡಿಸ್‌ನಲ್ಲಿ ಕೂಡಲೆ ಮಾಡಿಸುವುದಾಗಿ ಒಪ್ಪಿಕೊಂಡ ಜಿಲ್ಲಾಧಿಕಾರಿಗಳು ಉಚಿತ ಚಿಕಿತ್ಸೆ ಮತ್ತು ಔಷಧವನ್ನು ಸರಕಾರದಿಂದ ಭರಿಸಲಾಗುವುದೆಂದು ಭರವಸೆ ನೀಡಿದರು.

೪) ಬಹಳ ಜನ ವೃದ್ದ, ವಿಧವೆ ಮತ್ತು ಅಂಗವಿಕಲರಿರುವುದಾಗಿ ಅವರಲ್ಲಿ ಸುಮಾರು ಜನರಿಗೆ ಮಾಸಾಶನ  ಪಡೆಯಲು ಲಂಚ ನೀಡಬೇಕಾದ ಪರಿಸ್ಥಿತಿಯನ್ನು ಆಯೋಗದ ಗಮನಕ್ಕೆ ಹೋರಾಟ ಸಮಿತಿಯವರು ತಂದಾಗ ಇವರೆಲ್ಲರ ಪಟ್ಟಿ ನೀಡಿದರೆ ತಾವೇ ಖುದ್ದಾಗಿ ಪರಿಶೀಲಿಸಿ ಅಂತಹವರಿಗೆ ಕಾನೂನಿನ ರೀತಿ ಮಂಜೂರು ಮಾಡಿ ಆದೇಶ ಹೊರಡಿಸುವುದಾಗಿ ತೀರ್ಮಾನಿಸಿದ ಜಿಲ್ಲಾಧಿಕಾರಿಗಳು ಸ್ವತಃ ತಾವೇ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಆಯೋಗಕ್ಕೆ ತಿಳಿಸಿದರು. ಕೂಡಲೆ ಅರ್ಹ ವ್ಯಕ್ತಿಗಳ ಪಟ್ಟಿಯನ್ನು ಸಲ್ಲಿಸಲು ಸಮಿತಿಗೆ ಸೂಚಿಸಲಾಯಿತು.

೫) ಮಕ್ಕಳ ವಿದ್ಯಾಭ್ಯಾಸ ಮತ್ತು ವಿದ್ಯಾರ್ಥಿವೇತನ ನೀಡುವ ಯೋಜನೆಗಳಿದ್ದರೂ ಅವೆಲ್ಲಾ ತಮ್ಮ ಮಕ್ಕಳಿಗೆ ದೊರೆಯದ ಪರಿಸ್ಥಿತಿ ಬಗ್ಗೆ ಸಮಿತಿ ಪ್ರಸ್ತಾಪಿಸಿದಾಗ, ಈಗಾಗಲೇ ಸರಕಾರಿ ಮತ್ತು ಖಾಸಗಿ ಶಾಲೆ ಮತ್ತು ಕಾಲೇಜುಗಳಲ್ಲಿ ಓದುತ್ತಿರುವ ಸಫಾಯಿಕರ್ಮಚಾರಿ ಮಕ್ಕಳಿಗೆ ತಿಂಗಳ ವಿದ್ಯಾರ್ಥಿ ವೇತನವನ್ನು ಪ್ರತಿ ತಿಂಗಳು ಬಿಡುಗಡೆ ಮಾಡುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಆದೇಶ ನೀಡುವುದರೊಡನೆ ಶುಲ್ಕ ಪಾವತಿಸದ ವಿದ್ಯಾರ್ಥಿಗಳ ಶುಲ್ಕವನ್ನೂ ಸಹ ಆಯಾ ಶಾಲೆ ಮತ್ತು ಕಾಲೇಜುಗಳಿಗೆ ಕೂಡಲೆ ಕಳಿಸುವಂತೆ ಕ್ರಮಕೈಗೊಳ್ಳಲು ಸೂಚಿಸಿದರು. ಎಲ್ಲಾ ವಿವರಗಳನ್ನೊಳಗೊಂಡ ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ಕೂಡಲೇ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸಲ್ಲಿಸಲು ಹೋರಾಟ ಸಮಿತಿಗೆ ಸೂಚಿಸಲಾಯಿತು.

೬) ಸಫಾಯಿಕರ್ಮಚಾರಿಗಳ ವಿದ್ಯಾವಂತ ಯುವಕರನೇಕರು ಉದ್ಯೋಗವಿಲ್ಲದೆ ಪೋಷಕರ ವೃತ್ತಿಯನ್ನೆ ಅವಲಂಬಿಸಿರುವ ಕುರಿತು ಹೋರಾಟ ಸಮಿತಿ ಆಯೋಗದ ಗಮನಕ್ಕೆ ತಂದಿತು. ಇದಕ್ಕೆ ಪ್ರತಿಕರಿಯಿಸಿದ ಜಿಲ್ಲಾಧಿಕಾರಿಗಳು ಈಗಾಗಲೇ ೧೦ನೆ ತರಗತಿಗೂ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವ ಸಫಾಯಿಕರ್ಮಚಾರಿಗಳ ಮಕ್ಕಳಿಗೆ ಅವರ ಆಸಕ್ತಿಗನುಗುಣವಾಗಿ ಸ್ವಉದ್ಯೋಗ ಮಾಡಲು ಸಾಲ ಸೌಲಭ್ಯ ನೀಡುವುದಾಗಿ ತೀರ್ಮಾನಿಸಿ, ಸ್ಥಳದಲ್ಲೇ ಇದ್ದ ಡಾ. ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿಗಳು ಸ್ಥಳದಲ್ಲೆ ಆದೇಶ ನೀಡಿ ಅಂತಹ ಯುವಕರ ಪಟ್ಟಿಯನ್ನು ಕೂಡಲೇ ಅಧಿಕಾರಿಗಳಿಗೆ ಕೊಡುವಂತೆ ಸಫಾಯಿಕರ್ಮಚಾರಿಗಳ ಹೋರಾಟ ಸಮಿತಿಗೆ ಸೂಚನೆ ನೀಡಿದರು. ಅವರ ಸೂಚನೆಯಂತೆ ಮೂರು ದಿನಗಳ ಒಳಗಾಗಿ ಅಂದರೆ ೨೭.೬.೨೦೧೧ ರಂದು ನಿಗಮದ ಅಧಿಕಾರಿಗಳು ಕೆನಡಿಸ್‌ಗೆ ಭೇಟಿನೀಡಿ ಸದರಿ ಪಟ್ಟಿಯನ್ನು ಪಡೆದು ಕೂಡಲೆ ಕ್ರಮಕೈಗೋಳ್ಳುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದರು.

೭) ಅಲ್ಲದೇ ಸಫಾಯಿಕರ್ಮಚಾರಿ ಕುಟುಂಬದ ವಿದ್ಯಾವಂತ ಯುವಕರು ನೌಕರಿ ಬಗ್ಗೆ ಒಲವು ತೋರಿಸಿದರೆ ಅಂತಹವರ ಪಟ್ಟಿಯನ್ನು ನೀಡಿದರೆ ಸಧ್ಯದಲ್ಲೇ ಆಯೋಜಿಸಲಿರುವ ಉದ್ಯೋಗ ಮೇಳಕ್ಕೆ ಅವರನ್ನು ಆಹ್ವಾನಿಸಿ ಭಾಗವಹಿಸುವಂತೆ ನೋಡಿಕೊಳ್ಳುವುದರ ಜೊತೆಗೆ ಅಂತಹವರಿಗೆ ಆದ್ಯತೆ ನೀಡಲು ಪ್ರಯತ್ನಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಭರವಸೆ ನಿಡಿದರು. ಅರ್ಹ ವಿದ್ಯಾಥಿಗಳ ಪಟ್ಟಿಯನ್ನು ಕೂಡಲೇ ನೀಡಲು ಸಮಿತಿಗೆ ಸೂಚಿಸಲಾಯಿತು.

೮) ಬಿಜಿಎಂಎಲ್ ಮನೆಗಳಲ್ಲಿ ವಾಸಿಸುತ್ತಿರುವ ತಮಗೆ ಅಲ್ಲಿನ ಅಧಿಕಾರಿಗಳು ನೀಡುತ್ತಿರುವ ಕಿರುಕುಳವನ್ನು ಆಯೋಗದ ಗಮನಕ್ಕೆ ತರಲಾಯಿತು. ಸಫಾಯಿಕರ್ಮಚಾರಿಗಳು ವಾಸಿಸುತ್ತಿರುವ ಮನೆಗಳು ಮೈನ್ಸ್‌ಗೆ ಸೇರಿದ ಕ್ವಾರ‍್ಟರ‍್ಸ್‌ಗಳು ಮತ್ತು ಅದಕ್ಕೆ ತಿಂಗಳಿಗೆ ೪೫ ರೂಪಾಯಿಗಳ ಬಾಡಿಗೆ ನಿಗದಿ ಮಾಡಲಾಗಿದ್ದು, ಮೈನ್ಸ್ ಮುಚ್ಚ್ಚಿದ ನಂತರ ಉದ್ಯೋಗವಿಲ್ಲದೆ ಆದಾಯವಿಲ್ಲದೆ ಬಾಡಿಗೆ ಕಟ್ಟಲಾಗಿಲ್ಲವೆಂದೂ, ಭಾರಿ ಮೊತ್ತದ ಹಿಂದಿನ ಬಾಡಿಗೆ ಬಾಕಿ (ಸುಮಾರು ೭ರಿಂದ ೮ ಸಾವಿರ ರೂಪಾಯಿಗಳು) ಪಾವತಿ ಮಾಡಬೇಕೆಂದು ಒತ್ತಾಯಿಸಿ ಗಡುವು ನೀಡುತ್ತಿರುತ್ತಾರೆ, ಬಾಕಿ ಪಾವತಿ ಮಾಡದಿದ್ದರೆ ಅಲ್ಲಿಂದ ಎತ್ತಂಗಡಿ ಮಾಡಲಾಗುವುದೆಂಬ ಮೌಖಿಕ ಸೂಚನೆಯನ್ನು ನೀಡಿರುವುದಾಗಿ ತಾವೆಲ್ಲರೂ ಆತಂಕದಿಂದ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿರುವುದಾಗಿ ಆಯೋಗಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಬಿಜಿಎಂಎಲ್ ನೀಡಿರುವ ನೋಟೀಸ್ ಪ್ರತಿಗಳನ್ನು ತಮಗೆ ನೀಡಿದರೆ ಬಾಕಿ ಹಣವನ್ನು ೨೨.೭೫% ಹಣದಿಂದ ಪಾವತಿಸುವುದಾಗಿ ಆಯೋಗಕ್ಕೆ ತಿಳಿಸಿದರು. ನೋಟೀಸ್ ಪ್ರತಿಗಳನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ತಲುಪಿಸಲು ಸಮಿತಿಗೆ ಸೂಚಿಸಲಾಯಿತು.

೯) ಮೂಲಭೂತ ಸೌಕರ್ಯ ಕುರಿತು ಹೋರಾಟ ಸಮಿತಿ ಸದಸ್ಯರು ಪ್ರಸ್ತಾಪಿಸಿದರು. ಒಂದು ಬಿಂದಿಗೆ ಕುಡಿಯುವ ನೀರಿಗೆ ೨ ರೂಪಾಯಿ ಪಾವತಿಸುತ್ತಿರುವುದಾಗಿ, ಮಹಿಳೆಯರಿಗೆ ಶೌಚಾಲಯ ಸೌಲಭ್ಯ ಇಲ್ಲದಿರುವುದನ್ನು ಆಯೋಗದ ಗಮನಕ್ಕೆ ತರಲಾಯಿತು. ಮಾನ್ಯ ಆಯೋಗದ ಸದಸ್ಯರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಗರಸಭೆ ಆಯುಕ್ತರು ಮತ್ತು ಅಭಿಯಂತರರನ್ನು ತರಾಟೆಗೆ ತೆದುಕೊಂಡರು. ಈ ಸೌಕರ್ಯಗಳನ್ನು ಒದಗಿಸುವುದು ನಗರಸಭೆ ಕರ್ತವ್ಯ ಎಂದು ಅವರಿಗೆ ನೆನಪಿಸಿ ಕುಡಿಯುವ ನೀರಿನ ಪೂರೈಕೆ ಮಾಡುವ ಕೆಲಸವನ್ನು ಕೂಡಲೇ ಮಾಡಬೇಕೆಂದು ಒಂದು ವೇಳೆ ಆ ಕೆಲಸ ಮಾಡದಿದ್ದರೆ ಆಯೋಗದ ಗಮನಕ್ಕೆ ತರುವಂತೆ ಮಾನ್ಯ ಸದಸ್ಯರು ಪಿಯುಸಿಎಲ್ ಮತ್ತು ಸಫಾಯಿಕರ್ಮಚಾರಿಗಳ ಹೋರಾಟ ಸಮಿತಿಗೆ ಸೂಚಿಸಿದರು.

೧೦) ೨೦೦೧ರಲ್ಲಿ ಬಿಜಿಎಂಎಲ್ ಕಾರ್ಯಾಚರಣೆ ನಿಲ್ಲಿಸಿದ ನಂತರ ಅಲ್ಲಿ ಕೆಲಸಮಾಡುತ್ತಿದ್ದ ಸಫಾಯಿಕರ್ಮಚಾರಿಗಳ ಸೇವೆಯನ್ನು ಕೆಜಿಎಫ್ ನಗರ ಸಭೆಗೆ ಒಪ್ಪಂದದ ಮೂಲಕ ವರ್ಗಾಯಿಸಲಾಯಿತು. ಒಪ್ಪಂದದ ಅನ್ವಯ ೨೦೭ ಸಫಾಯಿ ಕರ್ಮಚಾರಿಗಳಿಗೆ ನಗರಸಭೆಯಿಂದ ಕೆಲಸ ನಿಗಧಿಪಡಿಸಿ ೧೧ ತಿಂಗಳು ಕೆಲಸ ಮಾಡಿದರು, ೯ ವರ್ಷ ಕಳೆದರೂ ಅವರ ವೇತನವನ್ನು ಇಂದಿಗೂ ನೀಡದಿರುವ ವಿಷಯ ಬೆಳಕಿಗೆ ಬಂದ ನಂತರ ಆಯೋಗ ಗಂಭೀರವಾಗಿ ಪರಿಗಣಿಸಿ ಸೂಕ್ತ ಆದೇಶ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಎಲ್ಲವನ್ನು ಪರಿಗಣಿಸಿದ ಜಿಲ್ಲಾಧಿಕಾರಿ ವೇತನವನ್ನು ಕೂಡಲೆ ಪಾವತಿ ಮಾಡುವಂತೆ ಸ್ಥಳದಲ್ಲೆ ನಗರಸಭೆ ಆಯುಕ್ತರಿಗೆ ಆದೇಶ ನೀಡಿದರು.

೧೧) ಸುಮಾರು ೨೦ ಮನೆಗಳಿಗೆ ರೇಷನ್ ಕಾರ್ಡ್ ಇಲ್ಲದಿರುವುದು ಕಂಡುಬಂದಿತು. ಅಲ್ಲದೆ ಕಾರ್ಡ್ ಹೊಂದಿರುವ  ಬಹುಸಂಖ್ಯೆಯ ಸಫಾಯಿಕರ್ಮಚಾರಿಗಳಿಗೆ ಸರಿಯಾಗಿ ರೇಷನ್ ದೊರೆಯದಿರುವುದು, ಮೋಸ ಮಾಡುವ ಪ್ರಕರಣ ಬೆಳಕಿಗೆ ಬಂದ ನಂತರ ಸ್ವತಃ ಜಿಲ್ಲಾಧಿಕಾರಿ ಈ ಬಗ್ಗೆ ಪರಿಶೀಲಿಸಿ ಸೂಕ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.  

ಅಂತಿಮವಾಗಿ ಮಾತನಾಡಿದ ಆಯೋಗದ ಸದಸ್ಯರಾದ ಮಾನ್ಯ ರೆಡ್ಡಿಯವರು ಮಲ ಎತ್ತುವ ಪದ್ದತಿಯನ್ನು ಇಂದಿನಿಂದ ಕೊನೆಗೊಳಿಸುವಂತೆ ಸಫಾಯಿಕರ್ಮಚಾರಿಗಳಿಗೆ ಸೂಚಿಸಿದರಲ್ಲದೆ ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡುವಂತೆ ಕರೆ ನೀಡಿದರು. ಜಿಲ್ಲಾಡಳಿತ ಮತ್ತು ನಗರಾಡಳಿತಗಳೆರಡು ಎಚ್ಚರದಿಂದ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಿದರು. ಒಂದು ವೇಳೆ ಇಂದು ತೆಗೆದುಕೊಂಡ ನಿರ್ಧಾರಗಳು ಅನುಷ್ಟ್ಟಾನಕ್ಕೆ ಬಾರದಿದ್ದರೆ ಅದನ್ನು ಆಯೋಗದ ಗಮನಕ್ಕೆ ತರುವಂತೆ ಸಫಾಯಿಕರ್ಮಚಾರಿ ಸಮಿತಿಗೆ ಮತ್ತು ಪಿಯುಸಿಎಲ್‌ಗೆ ಸೂಚಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳ ಮುಖಂಡರು ಮಾನ್ಯ ರೆಡ್ಡಿಯವರನ್ನು ಮತ್ತು ಜಿಲ್ಲಾಧಿಕಾರಿಗಳನ್ನು ಅಭಿನಂದಿಸುವ ಮುಖಾಂತರ ಸಭೆ ಮುಕ್ತಾಯವಾಯಿತು.
0 komentar

Blog Archive