ಇದು ನಿಜಕ್ಕೂ ಸಮಾಧಾನದ ಸಂಗತಿ. ಕೆಜಿಎಫ್‌ನ ಮಲ ಹೊರುವವರ ಕುರಿತು ಕಳೆದೊಂದು ವಾರದಿಂದ ನಡೆದ ಚರ್ಚೆಯನ್ನು ನೀವು ಗಮನಿಸಿದ್ದೀರಿ. ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಅವರು ಕಳೆದ ಮಂಗಳವಾರ ಅಲ್ಲಿಗೆ ಭೇಟಿ ನೀಡಿದ ಕುರಿತಾದ ಪತ್ರಿಕಾ ವರದಿಗಳನ್ನು ಗಮನಿಸಿದ್ದೀರಿ. ಎಲ್ಲರ ಪ್ರಯತ್ನಗಳು ಫಲ ಕೊಡುವ ಹಾಗೆ ಕಾಣುತ್ತಿವೆ.
ಸುರೇಶ್ ಕುಮಾರ್ ಅವರ ಭೇಟಿಯ ನಂತರ ಮಾನವ ಹಕ್ಕು ಆಯೋಗದ ಸದಸ್ಯ ಎಚ್.ಆರ್.ರೆಡ್ಡಿಯವರು ಭೇಟಿ ನೀಡಿದ್ದಾರೆ.
ಈ ನಡುವೆ ಕಳೆದ ಸೋಮವಾರ ಹೈಕೋರ್ಟ್ ಸಹ ಮಲಹೊರುವ ಪದ್ಧತಿ ಚಾಲ್ತಿಯಲ್ಲಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆಯಲ್ಲದೆ, ಸರ್ಕಾರದಿಂದ ಸ್ಪಷ್ಟನೆಯನ್ನೂ ಕೇಳಿದೆ. ಮಾಜಿ ಅಡ್ವೊಕೇಟ್ ಜನರಲ್ ನರಸಿಂಹಮೂರ್ತಿಯವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗಳ ಉಭಯ ಅಧ್ಯಕ್ಷರೂ ಜು.೧೧ರಂದು ನ್ಯಾಯಾಲಯಕ್ಕೆ ಹಾಜರಾಗಿ ಸ್ಪಷ್ಟನೆ ನೀಡುವಂತೆ ಆದೇಶಿಸಿದೆ.
ಕೆಜಿಎಫ್ ಭೇಟಿಯ ನಂತರ ಸುರೇಶ್ ಕುಮಾರ್ ಅವರು ಅಲ್ಲಿನ ಜಿಲ್ಲಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಪತ್ರವೊಂದನ್ನು ಬರೆದಿದ್ದು, ಇನ್ನು ಹದಿನೈದು-ಇಪ್ಪತ್ತು ದಿನಗಳೊಳಗಾಗಿ ಮತ್ತೆ ಕೆಜಿಎಫ್‌ಗೆ ಭೇಟಿ ನೀಡುವೆ, ಅಷ್ಟರೊಳಗೆ ಮಲ ಹೊರುವ ಪದ್ಧತಿ ಸಂಪೂರ್ಣ ಸ್ಥಗಿತಗೊಂಡಿರಬೇಕು ಎಂದು ಎಚ್ಚರಿಸಿದ್ದಾರೆ. ಒಂದು ವೇಳೆ ಅಧಿಕಾರಿಗಳು ತಮ್ಮ ಹೊಣೆಯನ್ನು ನಿಭಾಯಿಸದಿದ್ದರೆ ಕ್ರಮ ಕೈಗೊಳ್ಳಬೇಕಾದೀತು ಎಂದು ಅವರು ಎಚ್ಚರಿಸಿದ್ದಾರೆ.
ಸಚಿವರ ಕೆಜಿಎಫ್ ಭೇಟಿಯ ಫಲಶ್ರುತಿಯೂ ಸಮಾಧಾನಕರವಾಗಿದೆ. ಬೇಡಿಕೆಗಳು ಈಡೇರಿವೆ.
೧. ಮಲ ಹೊರುವ ಕಾಯಕ ನಡೆಸುತ್ತಿರುವವರಿಗೆ ನೇರ ನೇಮಕಾತಿಯ ಮೂಲಕ ದಿನಗೂಲಿ ಆಧಾರದಲ್ಲಿ ಕೋಲಾರ ಮತ್ತು ಕೆಜಿಎಫ್ ನಗರಸಭೆಗಳಲ್ಲಿ ಉದ್ಯೋಗ ನೀಡಲು ನಿರ್ಧರಿಸಲಾಗಿದೆ.
೨. ಮಲ ಹೊರುವ ಕಾಯಕದಿಂದಾಗಿ ಅಕಾಲಿಕವಾಗಿ ನಿಧನ ಹೊಂದಿದವರ ಕುಟುಂಬಕ್ಕೆ ತಲಾ ೧೦,೦೦೦ ರೂ.ಗಳ ಪರಿಹಾರವನ್ನು ನೀಡಲು ನಿರ್ಧರಿಸಲಾಗಿದೆ.
೩. ಎಸ್‌ಸಿಪಿ ಯೋಜನೆಯಡಿಯಲ್ಲಿ ಮೃತ ಪಟ್ಟ ಮಲಹೊರುವ ಕಾರ್ಮಿಕರ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಹೊಣೆಯನ್ನು ನಗರಸಭೆಯೇ ವಹಿಸಿಕೊಳ್ಳಲಿದೆ.
೪. ಮಲ ಹೊರುವ ಕಾಯಕ ನಡೆಸುತ್ತಿರುವವರು ವಾಸವಾಗಿರುವ ಕಾಲನಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಲಾಗಿದೆ. (ಈಗಾಗಲೇ ಡಾಂಬರೀಕರಣ ನಡೆಯುತ್ತಿದೆ.)
೫. ಮಲ ಹೊರುವ ಕಾಯಕದಿಂದಾಗಿ ಅನಾರೋಗ್ಯಕ್ಕೆ ತುತ್ತಾಗಿರುವವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡಲು ನಿರ್ಧರಿಸಲಾಗಿದೆ.
೬. ವೃದ್ಧರಿಗೆ ಮತ್ತು ಅಂಗವಿಕಲರಿಗೆ ಮಾಸಾಶನ ನೀಡಲಾಗುವುದು.
೭. ನಗರಸಭೆಯ ಗುತ್ತಿಗೆ ನೌಕರರಾಗಿ ಕಾರ್ಯ ನಿರ್ವಹಿಸಿ ನಂತರ ಕೆಲಸ ಕಳೆದುಕೊಂಡು ಮಲಹೊರುವ ಕಾಯಕ ನಡೆಸುತ್ತಿದ್ದ ಸಿಬ್ಬಂದಿಗೆ ೯ ತಿಂಗಳ ಬಾಕಿ ವೇತನವನ್ನು ನೀಡಲು (ನಾಳೆ ಮಂಗಳವಾರ) ನಿರ್ಧರಿಸಲಾಗಿದೆ.)
೮. ಸ್ವಂತದ ಕಾಯಕ ನಡೆಸಲು ಇಚ್ಛಿಸುವವರಿಗೆ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಸಬ್ಸಿಡಿ ಸಮೇತ ಸಾಲ ನೀಡಲು ನಿರ್ಧರಿಸಲಾಗಿದೆ.
ಇದು ಸಾಧ್ಯವಾಗಿದ್ದು ಸಫಾಯಿ ಕರ್ಮಚಾರಿಗಳ ಕುರಿತು ಅಧ್ಯಯನ ನಡೆಸುತ್ತಿರುವ ಪ್ರೊ. ವೈ.ಜೆ.ರಾಜೇಂದ್ರ ಮತ್ತು ತಂಡದವರ ಪರಿಶ್ರಮದಿಂದಾಗಿ. ಈ ತಂಡದ ಭಾಗವಾಗಿರುವ ಟಿ.ಕೆ.ದಯಾನಂದ್ ಕೆಂಡಸಂಪಿಗೆಯಲ್ಲಿ ಲೇಖನವೊಂದನ್ನು ಬರೆದು ಮಲ ಹೊರುವ ಕಾಯಕ ನಡೆಸುವ ಪ್ರಸಾದನ ನೋವಿನ ಕಥಾನಕಕ್ಕೆ ರೂಪ ಕೊಟ್ಟಿದ್ದರು. ಅದರ ಆಧಾರದ ಮೇಲೆ ಸುರೇಶ್ ಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದು, ಮೇಲ್ ಕಳುಹಿಸಿದ್ದೆವು. ಇವರೆಲ್ಲರ ಶ್ರಮವೂ ಸಾರ್ಥಕವಾಗಿದೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮೂರೇ ದಿನಗಳಲ್ಲಿ ಕೆಜಿಎಫ್‌ಗೆ ಭೇಟಿ ನೀಡಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಸುರೇಶ್ ಕುಮಾರ್ ಅವರಿಗೆ, ಈ ಕುರಿತು ಬೆಳಕು ಚೆಲ್ಲಿದ ಪ್ರೊ.ವೈ.ಜೆ.ರಾಜೇಂದ್ರ, ಟಿ.ಕೆ.ದಯಾನಂದ್, ಚಂದ್ರಶೇಖರ್ ಪಿ.ಅತ್ತಿಬೆಲೆ ಮತ್ತವರ ಇಡೀ ತಂಡಕ್ಕೆ, ತಡವಾಗಿಯಾದರೂ ಈ ವಿದ್ಯಮಾನಗಳನ್ನು ವರದಿ ಮಾಡಿದ ಪತ್ರಿಕೆಗಳಿಗೆ, ಅದರಲ್ಲೂ ವಿಶೇಷವಾಗಿ ಮುಖಪುಟದಲ್ಲೇ ಈ ವರದಿಯನ್ನು ಪ್ರಕಟಿಸಿದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಮಾನವತೆಯಲ್ಲಿ ವಿಶ್ವಾಸವಿಟ್ಟ ಎಲ್ಲರ ಪರವಾಗಿ ಕೃತಜ್ಞತೆಗಳು ಮತ್ತು ಅಭಿನಂದನೆಗಳು.
ಮಲ ಹೊರುವವರ ಕಥೆ ಕೆಜಿಎಫ್‌ಗೆ ಸೀಮಿತವಲ್ಲ. ಇನ್ನೂ ಹಲವು ಜಿಲ್ಲೆಗಳಲ್ಲಿ ಅದು ಚಾಲ್ತಿಯಲ್ಲಿದೆ. ಸತ್ಯಶೋಧನಾ ತಂಡದ ಬಳಿ ಆ ಮಾಹಿತಿಗಳೂ ಇವೆ. ಕೋಲಾರ ಜಿಲ್ಲೆಯಲ್ಲಿ ಆದ ಸುಧಾರಣೆಗಳೂ ಈ ಜಿಲ್ಲೆಗಳಲ್ಲೂ ವಿಸ್ತರಿಸುವಂತಾಗಬೇಕು. ಆ ಕಡೆ ಈ ಎಲ್ಲರೂ ಗಮನಹರಿಸುವಂತಾಗಬೇಕು.
ಬ್ಲಾಗಿಂಗ್ ಮಾಡಲು ಆರಂಭಿಸಿ ಅರ್ಧ ವರ್ಷ ಕಳೆದೇ ಹೋಯಿತು. ಈಗ, ಕೆಜಿಎಫ್‌ನ ಬೆಳವಣಿಗೆಗಳ ನಂತರ ನಿಜವಾಗಲೂ ಇದು ಸಾರ್ಥಕವಾಗಿದೆ ಅನಿಸುತ್ತಿದೆ. ಈ ಸಂತೋಷವನ್ನು ನಿಮ್ಮೊಂದಿಗಲ್ಲದೆ ಯಾರೊಂದಿಗೆ ಹಂಚಿಕೊಳ್ಳುವುದು? ಯಾವುದೇ ಮೀಡಿಯಾ ಆದರೂ ಸಮಾಜದ ಕಟ್ಟ ಕಡೆಯ ಮನುಷ್ಯನನ್ನು ಮುಟ್ಟದಿದ್ದರೆ, ಅವನ ನೋವನ್ನು ಅಭಿವ್ಯಕ್ತಿಸದಿದ್ದರೆ ಅದು ಇದ್ದೂ ಪ್ರಯೋಜನವಿಲ್ಲ. ಮಾಧ್ಯಮಗಳು ಜನ ಪಕ್ಷಪಾತಿಯಾಗಿರಬೇಕು, ಮಾತ್ರವಲ್ಲ ನೋವುಂಡವರ, ಅಸಹಾಯಕರ, ದರಿದ್ರರ ಪಕ್ಷಪಾತಿಯಾಗಿರಬೇಕು. ಇಂಥ ಅಲ್ಲೊಂದು, ಇಲ್ಲೊಂದು ಪ್ರಕರಣಗಳು ನಮ್ಮನ್ನು ಆಶಾವಾದಿಗಳನ್ನಾಗಿಸುತ್ತವೆ. ಪ್ರಜಾಪ್ರಭುತ್ವದ ಸೌಂದರ್ಯವೇ ಇದು ಅನಿಸುತ್ತದೆ.
发表评论