ವಿಜಯ ಸಂಕೇಶ್ವರರು ಆರಂಭಿಸಲಿರುವ ಪತ್ರಿಕೆಯ ಹೆಸರು ಏನು ಎಂದು ಬಹಳಷ್ಟು ಓದುಗರು ಕೇಳುತ್ತಿದ್ದಾರೆ. ಆನಂದ ಕರ್ನಾಟಕ ಎಂಬ ಹೆಸರು ಚಾಲ್ತಿಯಲ್ಲಿದ್ದದ್ದು ನಿಮಗೆ ಗೊತ್ತು. ಆದರೆ ಈ ಟೈಟಲ್ ಹೊಸಪೇಟೆಯ ಶಾಸಕ ಆನಂದ್ ಸಿಂಗ್ ಅವರ ಬಳಿ ಇದೆ ಎಂದು ನಾವು ಬರೆದಿದ್ದೂ ನಿಮಗೆ ಗೊತ್ತು. ಆದರೆ ಈ ಟೈಟಲ್‌ನ ಪತ್ರಿಕೆಯ ಪತ್ರಿಕೆಯನ್ನು ತಾವೇ ಪ್ರಾರಂಭಿಸುತ್ತಿರುವುದಾಗಿ ಸ್ವತಃ ಆನಂದ್ ಸಿಂಗ್ ಅವರೇ ಹೇಳಿದ್ದಾರೆ. ಸಂಪಾದಕೀಯಕ್ಕೆ ಆನಂದ್ ಸಿಂಗ್ ಅವರು ಬರೆದಿರುವ ಪತ್ರ ಇಲ್ಲಿದೆ. ಪತ್ರವೇ ಎಲ್ಲವನ್ನೂ ಬಿಡಿಸಿ ಹೇಳುತ್ತಿದೆ. ಆನಂದ್ ಸಿಂಗ್ ಅವರ ಪ್ರಯತ್ನಕ್ಕೆ ಶುಭಕೋರುತ್ತೇವೆ. - ಸಂ
ಮಾನ್ಯ ಸಂಪಾದಕರೇ,
ಸಂಪಾದಕೀಯ ಬ್ಲಾಗಿನಲ್ಲಿ ಸಂಕೇಶ್ವರರ ಹೊಸಪತ್ರಿಕೆಯ ಪ್ರಧಾನ ಸಂಪಾದಕರಾಗಿ ತಿಮ್ಮಪ್ಪ ಭಟ್ಟರು.. ಎಂಬ ಶಿರೋನಾಮೆ ಲೇಖನದಲ್ಲಿ ನನ್ನ ಹೆಸರು ಪ್ರಸ್ತಾಪಿತಗೊಂಡಿದೆ.
ಆನಂದ ಕರ್ನಾಟಕ ದಿನ ಪತ್ರಿಕೆಯ ಟೈಟಲ್‌ನ್ನು ನಾನು ರಿಜಿಸ್ಟರ್ ಮಾಡಿಸಿಕೊಂಡಿರುವುದು ನಿಜ. ಈ ಟೈಟಲ್‌ನ್ನು ವಿಜಯ ಸಂಕೇಶ್ವರ ಅವರು ಖರೀದಿಸಿದ್ದಾರೆ ಎನ್ನುವುದು ಮಾತ್ರ ಸುಳ್ಳಾಗಿದೆ. ಈ ಪತ್ರಿಕೆಯ ಟೈಟಲ್ ಬಗ್ಗೆ ವಿಜಯ ಸಂಕೇಶ್ವರ ಆಗಲಿ, ಅಥವಾ ಪತ್ರಿಕೆಗೆ ಸಂಬಂಧಿಸಿದವರಾಗಲಿ ಯಾರು ಇಲ್ಲಿಯವರೆಗೆ ಇದರ ಬಗ್ಗೆ ಚರ್ಚೆ ನಡೆಸಿಲ್ಲ.
ದಿನ ಪತ್ರಿಕೆಯನ್ನು ಪ್ರಾರಂಭಿಸುವ ಮಹದಾಸೆಯನ್ನು ಇಟ್ಟುಕೊಂಡು ಸತ್ಯ, ನಿಷ್ಠತೆಯಿಂದ ಪತ್ರಿಕೆಯೊಂದನ್ನು ನಡೆಸಬೇಕೆಂದು ಟೈಟಲ್ ರಿಜಿಸ್ಟರ್ ಮಾಡಿಕೊಂಡಿರುವೆ. ಇದನ್ನು ಇನ್ನೊಬ್ಬರಿಗೆ ಮಾರಾಟ ಮಾಡುವ ಉದ್ದೇಶ ಹೊಂದಿಲ್ಲ. ಪತ್ರಿಕೆಯನ್ನು ಬೇಗನೇ ಪ್ರಾರಂಭಿಸಬೇಕೆಂದು ಕೊಂಡಿರುವೆ. ಯಾವ ಪ್ರಮಾಣದಲ್ಲಿ ಪತ್ರಿಕೆ ಆರಂಭಿಸಬೇಕು ಎನ್ನುವ ಬಗ್ಗೆ ಚರ್ಚೆಯಲ್ಲಿ ಇರುವೆ ಎಂದು ವಿನಮ್ರವಾಗಿ ತಿಳಿಸುವೆ.
ಸಂಪಾದಕೀಯ ಬ್ಲಾಗ್ ಬಗ್ಗೆ ಗೆಳೆಯರು ಗಮನ ಸೆಳೆದರು. ಈ ಬ್ಲಾಗ್ ಹೇಗೆ ಕೆಲಸ ನಿರ್ವಹಿಸುತ್ತಿದೆ ಎಂದು ವಿವರಿಸಿದರು. ನನಗೆ ತುಂಬಾ ಕುತೂಹಲವಾಯಿತು. ಬ್ಲಾಗ್ ಬರಹ ನೋಡಿ ಖುಷಿಯಾಯಿತು. ಈ ಖುಷಿ ಹಂಚಿಕೊಳ್ಳುವ ಜೊತೆಗೆ ನನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸುವುದು ಸರಿ ಎನ್ನಿಸಿ ಈ ಪತ್ರ ಬರೆಯುತ್ತಿರುವೆ. ಸಾಮಾಜಿಕ ವಿಷಯಗಳ ಬಗ್ಗೆ ಗಂಭೀರವಾಗಿ ವಿಷಯ ಪ್ರಸ್ತಾಪಿಸುವ ನಿಮ್ಮ ಬ್ಲಾಗ್ ನನಗೆ ಇಷ್ಟವಾಯಿತು. ನಮಸ್ಕಾರಗಳು.
-ಆನಂದ್ ಸಿಂಗ್
ಶಾಸಕರು, ಹೊಸಪೇಟೆ.
发表评论