ನೀಚರೂ, ಕುತಂತ್ರಿಗಳೂ ಆದ ಪುರೋಹಿತರು ಎಲ್ಲಾ ವಿಧದ ಮೂಢನಂಬಿಕೆಗಳನ್ನು ವೇದ ಮತ್ತು ಹಿಂದೂ ಧರ್ಮದ ಸಾರ ಎಂದು ಬೋಧಿಸುತ್ತಾರೆ. ಈ ಠಕ್ಕುಗಾರರಾದ ಪುರೋಹಿತರಾಗಲಿ ಅಥವಾ ಅವರ ತಾತ ಮುತ್ತಾತಂದಿರಾಗಲೀ ಕಳೆದ ೪೦೦ ತಲೆಮಾರುಗಳಿಂದಲೂ ವೇದದ ಒಂದು ಭಾಗವನ್ನೂ ನೀಡಿಲ್ಲ. ಮೂಢಾಚಾರಗಳನ್ನು ಅನುಸರಿಸಿ ಹೀನಸ್ಥಿತಿಗೆ ಬರುತ್ತಾರೆ. ಕಲಿಯುಗದಲ್ಲಿ ಪುರೋಹಿತರ ವೇಷದಲ್ಲಿರುವ ಈ ರಾಕ್ಷಸರಿಂದ ಮುಗ್ಧಜನರನ್ನು ಆ ದೇವರೇ ಕಾಪಾಡಬೇಕು.

ಭರತಖಂಡದಲ್ಲಿ ಧರ್ಮವೇನಾದರೂ ಉಳಿದುಕೊಂಡಿರುವುದೆಂದು ತಿಳಿದುಕೊಂಡಿರುವೆಯೇನು? ಜ್ಞಾನ, ಭಕ್ತಿ, ಯೋಗಗಳ ಮಾರ್ಗವೆಲ್ಲ ಹೋಯಿತು. ಈಗ ಉಳಿದಿರುವುದು ಒಂದೇ ಧರ್ಮ. ಅದೇ ಮುಟ್ಟಬೇಡ, ಮುಟ್ಟಬೇಡ ಎಂಬುದು. ಪ್ರಪಂಚವೆಲ್ಲಾ ಮೈಲಿಗೆ, ನಾನೊಬ್ಬನೇ ಮಡಿ! ಆಹಾ! ಎಷ್ಟು ತಿಳಿಯಾದ ಬ್ರಹ್ಮಜ್ಞಾನ!

ಭಯಂಕರವಾದ ಕೆಸರಗುಂಡಿ ಮುಂದೆ ಇದೆ ಜೋಪಾನ! ಅನೇಕರು ಅದರಲ್ಲಿ ಬಿದ್ದು ಸಾಯುವರು. ಆ ಕೆಸರೇ ಇದು. ಅದೇನೆಂದರೆ ವರ್ತಮಾನ ಕಾಲದ ಹಿಂದೂಗಳ ಧರ್ಮ ವೇದದಲ್ಲಿಲ್ಲ, ಪುರಾಣದಲ್ಲಿಲ್ಲ, ಭಕ್ತಿಯಲ್ಲಿಲ್ಲ ಅಥವಾ ಮುಕ್ತಿಯಲ್ಲಿಲ್ಲ. ಆ ಧರ್ಮವೆಲ್ಲಾ ಅಡಿಗೆ ಮಾಡುವ ಪಾತ್ರೆಯೊಳಗೆ ಪ್ರವೇಶಿಸಿದೆ. ಇಂದಿನ ಹಿಂದೂ ಧರ್ಮ ಜ್ಞಾನಮಾರ್ಗವೂ ಅಲ್ಲ, ಭಕ್ತಿಮಾರ್ಗವೂ ಅಲ್ಲ. ಅದರ ಧರ್ಮವೇ ಅಸ್ಪೃಶ್ಯತೆ, ಅಸ್ಪೃಶ್ಯತೆ ಎಂಬ ಕುರುಡು ಧರ್ಮದಲ್ಲಿ ನಿಮ್ಮ ಜೀವನ ಹಾಳಾಗದಿರಲಿ. ಜೋಪಾನವಾಗಿ ನೋಡಿಕೊಳ್ಳಿ. ಆತ್ಮವತ್ ಸರ್ವಭೂತೇಷು. ಎಲ್ಲ ಭೂತಗಳಲ್ಲೂ ಒಂದೇ ಆತ್ಮವನ್ನು ನೋಡಬೇಕೆಂಬ ಉಪದೇಶ ಗ್ರಂಥದಲ್ಲೇ ಕೊನೆಗಾಣಬೇಕೆ? ಹಸಿದವನಿಗೆ ಒಂದು ತುತ್ತು ಅನ್ನವನ್ನು ಕೊಡದವರು ಮೋಕ್ಷವನ್ನು ಹೇಗೆ ಕೊಟ್ಟಾರು? ಮತ್ತೊಬ್ಬರ ಉಸಿರಿನ ಸೋಂಕಿನಿಂದಲೇ ಇವರು ಪಾಪಿಗಳಾದರೆ ಇನ್ನೊಬ್ಬರನ್ನು ಹೇಗೆ ಶುದ್ಧಿ ಮಾಡುವರು? ಅಸ್ಪೃಶ್ಯತೆ ಎಂಬುದು ಒಂದು ತರಹದ ಮನೋರೋಗ.

ಪ್ರಪಂಚದ ಯಾವ ಧರ್ಮವೂ ಹಿಂದೂಧರ್ಮದಷ್ಟು ಕ್ರೂರವಾಗಿ ತುಳಿಯುವುದಿಲ್ಲ. ತಪ್ಪು ಹಿಂದೂ ಧರ್ಮದ್ದಲ್ಲ. ಅಲ್ಲಿರುವ ಸಂಪ್ರದಾಯಶರಣರದು, ಪುರೋಹಿತರದು, ಪಾರಮಾರ್ಥಿಕ ಮತ್ತು ವ್ಯಾವಹಾರಿಕ ಎಂದು ನಾನಾ ಬಗೆಯ ಕ್ರೂರ ಸಾಧನಗಳನ್ನು ಸೃಷ್ಟಿಸುವ ಠಕ್ಕರದು.

ಪುರೋಹಿತರು ಎಷ್ಟು ಕೂಗಾಡಿದರೇನು? ಜಾತಿ ಎಂಬುದು ಸಮಾಜದಲ್ಲಿ ಒಂದು ಆಂತರಿಕ ಭಾಗ. ಹಿಂದೆ ಅದು ವಿಕಾಸವಾಗುತ್ತಿತ್ತು; ಈಗ ಅದು ಘನೀಭೂತವಾಗಿರುವುದು. ಈ ಕಟ್ಟಿನ ಕೆಲಸ ಮುಗಿದು, ಅದರ ದುರ್ಗಂಧದಿಂದ ಭಾರತದ ವಾತಾರವರಣವೆಲ್ಲ ತುಂಬಿದೆ. ಜನರು ಕಳೆದುಕೊಂಡ ಸಾಮಾಜಿಕ ವ್ಯಕ್ತಿತ್ವವನ್ನು ಅವರಿಗೆ ಮರಳಿ ಕೊಡುವುದರಿಂದ ಈ ಕಟ್ಟು ತಾನೇ ಮಾಯವಾಗುವುದು. ಅಮೆರಿಕಾ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ತಾನು ಮನುಷ್ಯನೆಂಬುದು ಗೊತ್ತು. ಇಂಡಿಯಾ ದೇಶದಲ್ಲಿ ಹುಟ್ಟಿದ ಪ್ರತಿಯೊಂದು ವ್ಯಕ್ತಿಯೂ ತಾನು ಸಮಾಜದ ಗುಲಾಮನೆಂದು ತಿಳಿದುಕೊಂಡಿರುವನು. ಬೆಳವಣಿಗೆಗೆ ಬೇಕಾಗಿರುವುದು ಮುಖ್ಯವಾಗಿ ಸ್ವಾತಂತ್ರ್ಯ. ಅದು ಮಾಯವಾದರೆ ಅವನತಿಯೇ ಫಲ.೫

ಹಿಂದೂಗಳೆಲ್ಲರೂ ಅಣ್ಣತಮ್ಮಂದಿರು, ಮುಟ್ಟಬೇಡ ಮುಟ್ಟಬೇಡ ಎಂದು ಹೇಳಿ ಹೇಳಿ ನಾವೇ ಅವರನ್ನು ಕೀಳುಮಾಡಿ ಕೂರಿಸಿದ್ದೇವೆ. ಇದೇ ದೇಶದ ಹೀನತೆ, ಭೀರುತೆ, ಮೂರ್ಖತೆ, ಕಾಪುರುಷತೆ, ಇವುಗಳ ಪರಾಕಾಷ್ಠೆಯಲ್ಲಿ ಪರಿಣಮಿಸಿದೆ. ಇವರನ್ನು ಮೇಲಕ್ಕೆ ಎತ್ತಬೇಕು. ಅಭಯದ ಮಾತನ್ನೂ ಹೇಳಬೇಕು. ನೀವೂ ನಮ್ಮ ಹಾಗೆ ಮನುಷ್ಯರು, ನಿಮಗೂ ನಮ್ಮ ಹಾಗೆ ಎಲ್ಲ ಅಧಿಕಾರವೂ ಇದೆ ಎಂದು ಹೇಳಬೇಕು.

ನಾಡು ಬದುಕಿರುವುದೇ ದೀನರ ಜೋಪಡಿಗಳಲ್ಲಿ ಎಂಬುದನ್ನು ಜ್ಞಾಪಕದಲ್ಲಿಡಿ. ಅಯ್ಯೋ! ಆದರೆ ಅವರಿಗೆ ಯಾರೂ ಸಹಾಯ ಮಾಡಿಲ್ಲ. ಅವರನ್ನು ಮೇಲೆತ್ತಬಲ್ಲಿರಾ? ಅವರೊಂದಿಗೆ ಬಂದಿರುವ ಅಧ್ಯಾತ್ಮಿಕ ಪ್ರವೃತ್ತಿಯನ್ನು ನಾಶಮಾಡದೆ, ಕಳೆದುಕೊಂಡ ವ್ಯಕ್ತಿತ್ವವನ್ನು ಅವರಿಗೆ ಪುನಃ ಕೊಡಬಲ್ಲಿರಾ? ಸ್ವಾತಂತ್ರ್ಯದಲ್ಲಿ, ಕ್ರಿಯೆಯಲ್ಲಿ ಶಕ್ತಿಯಲ್ಲಿ ಪಾಶ್ಚಾತ್ಯರನ್ನೂ ಕೂಡ ಮೀರಿಸಿ, ಅದೇ ಸಮಯದಲ್ಲಿ ಧಾರ್ಮಿಕ ಸಂಸ್ಕೃತಿ ಸ್ವಭಾವದಲ್ಲಿ ಪೂರ್ಣ ಭಾರತೀಯರಾಗಬಲ್ಲಿರಾ?... ಪ್ರಾಣ ಹೋದರೂ ಸರಿ, ದೀನರಿಗೆ, ದಲಿತರಿಗೆ ದಯೆ ತೋರುವುದು ನಮ್ಮ ಗುರಿ.

೧. ವಿವೇಕಾನಂದರ ಕೃತಿಶ್ರೇಣಿ ಸಂಪುಟ-೬, ಪುಟ ಸಂಖ್ಯೆ: ೬೬
೨. ಸಂಪುಟ-೬, ಪುಟ ಸಂಖ್ಯೆ: ೨೭೦-೨೭೧
೩. ಸಂಪುಟ-೬, ಪುಟ ಸಂಖ್ಯೆ: ೩೭೩
೪. ಸಂಪುಟ-೬, ಪುಟ ಸಂಖ್ಯೆ: ೮೬
೫. ಸಂಪುಟ-೬, ಪುಟ ಸಂಖ್ಯೆ: ೧೦೧
೬. ಸಂಪುಟ-೧೦, ಪುಟ ಸಂಖ್ಯೆ: ೧೧೭-೧೧೮
೭. ಸಂಪುಟ-೬, ಪುಟ ಸಂಖ್ಯೆ: ೧೧೧-೧೧೨

0 komentar

Blog Archive