ಪ್ರಳಯ ಸಂಭವಿಸಿ ಜಗತ್ತು ಸರ್ವನಾಶವಾಗುವ ದಿನವನ್ನು ಡಿಸೆಂಬರ್ ೧೨, ೨೦೧೨ ಎಂದು ಹೇಳಲಾಗುತ್ತಿತ್ತಲ್ಲವೇ? ಅದು ಈಗ ಪ್ರೀಪೋನ್ ಆಗಿದೆ. ಹೊಸ ದಿನಾಂಕವೂ ನಿಗದಿಯಾಗಿದೆ. ಪ್ರಳಯಕ್ಕೆ ನಿಕ್ಕಿಯಾಗಿರುವ ದಿನಾಂಕ ಮೇ ೨೧. ೨೦೧೧. ಅಂದು ಸಂಜೆ ೬ ಗಂಟೆಗೆ ಪ್ರಳಯದ ಮುಹೂರ್ತ ಫಿಕ್ಸ್ ಆಗಿದೆ.
ಇದನ್ನು ನರೇಂದ್ರ ಶರ್ಮ ಹೇಳಿರಬಹುದು ಅಂದುಕೊಳ್ಳುತ್ತಿದ್ದೀರೆ? ಖಂಡಿತಾ ಅಲ್ಲ. ಅವನದೇ ತಿಕ್ಕಲುಗಳನ್ನೆಲ್ಲ ಆವಾಹಿಸಿಕೊಂಡಿರುವ ಕ್ರಿಶ್ಚಿಯನ್ ಗುಂಪೊಂದು ಅಮೆರಿಕಾದಲ್ಲಿ ಈ ವದಂತಿಯನ್ನು ವೇಗವಾಗಿ ಹರಡುತ್ತಿದೆ. ಕ್ರಿಶ್ಚಿಯನ್ನರ ಪೈಕಿಯೂ ನರೇಂದ್ರ ಶರ್ಮನಂಥ ಅವಿವೇಕಿಗಳು, ಬೊಗಳೆದಾಸರು, ಬೆನ್ನಿಹಿನ್ ತರಹದ ಮಾಟಗಾರರು ದಂಡಿಯಾಗಿ ಇದ್ದಾರೆ. ಇವರು ಮುಖ್ಯ ಚರ್ಚ್‌ಗಳಿಂದ ಬೇರೆಯಾಗಿಯೇ ಗುರುತಿಸಿಕೊಂಡು ತಮ್ಮದೇ ಸ್ವತಂತ್ರ ಚರ್ಚ್‌ಗಳನ್ನು ಸ್ಥಾಪಿಸಿಕೊಂಡಿದ್ದಾರೆ. ಇಂಥವರದ್ದೇ ಪ್ರತ್ಯೇಕ ಗುಂಪುಗಳೂ ಇವೆ. ಇಂಥ ಗುಂಪುಗಳಲ್ಲಿ ಒಂದು ಗುಂಪು ರೇಡಿಯೋ ಮೂಲಕ, ಇಂಟರ್‌ನೆಟ್ ಮೂಲಕ ಪ್ರಳಯದ ಹೊಸ ಡೇಟನ್ನು ಘೋಷಿಸಿ ಪ್ರಚಾರ ನಡೆಸುತ್ತಿದೆ. ವಿಚಿತ್ರವೆಂದರೆ ಮೇ.೨೧ರಂದು ಪ್ರಳಯ ಸಂಭವಿಸುತ್ತದೆ ಎಂದು ಬೈಬಲ್‌ನಲ್ಲೇ ಬರೆಯಲಾಗಿದೆ ಎಂದು ಈ ಗುಂಪು ಸುಳ್ಳು ಸುಳ್ಳೇ ಹೇಳಿಕೊಂಡು ಕ್ಯಾಂಪೇನ್ ನಡೆಸುತ್ತಿವೆ. ಮೌಢ್ಯವನ್ನು ಪ್ರಜ್ಞಾಪೂರ್ವಕವಾಗಿ ಕಾಸಿಗಾಗೋ, ಪ್ರಚಾರಕ್ಕಾಗೋ ಹರಡುವವರು ಯಾವ ಧರ್ಮದವರಾದರೂ ಅವರು ಕೊಳಕು ಕ್ರಿಮಿಗಳು. ನಮ್ಮ ಧಿಕ್ಕಾರ ಇವರಿಗೂ ಇರಲಿ.
ಈ ಕೆಳಗಿನ ಲಿಂಕ್‌ಗಳನ್ನು ನಮ್ಮ ಓದುಗರೊಬ್ಬರು ಕಳುಹಿಸಿಕೊಟ್ಟಿದ್ದಾರೆ. ಆ ಕಡೆ ನೀವೂ ಒಮ್ಮೆ ಕಣ್ಣಾಡಿಸಿ.
http://www.coffetoday.com/the-doomsday-is-on-may-21-2011/907618/
http://www.ebiblefellowship.com/may21/
http://en.wikipedia.org/wiki/Harold_Camping
http://www.allvoices.com/contributed-news/8599025-worlds-doomsday-fixed-for-6-pm-on-21st-may-2011
ಇನ್ನು ನಮ್ಮ ಪ್ರಳಯಾಂತಕ ನರೇಂದ್ರ ಸ್ವಾಮಿಯ ವಿಷಯಕ್ಕೆ ಬರೋಣ. ಈತ ಮಾತು-ಕಥೆ ಎಂಬ ಸಾರ್ವಜನಿಕ ಕಾರ್ಯಕ್ರಮಗಳನ್ನು ಆರಂಭಿಸಿದ್ದಾನೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಒಂದು ಕಾರ್ಯಕ್ರಮದ ಪ್ರಸಾರ ನಿನ್ನೆ ಮತ್ತು ಮೊನ್ನೆ ಜೀ ಟಿವಿಯಲ್ಲಿ ಪ್ರಸಾರವಾಯಿತು. ಅಲ್ಲಿ ಆತನ ಪ್ರಕಾಂಡ ಪಾಂಡಿತ್ಯವನ್ನು ಕೇಳದವರೇ ದುರ್ಭಾಗ್ಯವಂತರು. ಕೆಲವು ಸ್ಯಾಂಪಲ್ ಇಲ್ಲಿವೆ ನೋಡಿ.
ನೋಡಿ, ನನ್ನ ವಿರುದ್ಧ ಪತ್ರಿಕೆಗಳಲ್ಲಿ, ಅಲ್ಲಿ-ಇಲ್ಲಿ ಏನೇನೋ ಬರೆದುಕೊಳ್ತಾ ಇದ್ದಾರೆ. ಬರಕೊಳ್ಳಲಿ ನಾನು ಕೇರ್ ಮಾಡಲ್ಲ. ನಾನು ಆತ್ಮವನ್ನು ನಂಬಿದ್ದೇನೆ. ಆತ್ಮವನ್ನು ಯಾರೂ ನೋಡಲಾಗದು, ಮುಟ್ಟಲಾಗದು, ನಾಶಗೊಳಿಸಲಾಗದು.
ನನ್ನ ಪ್ರಕಾರ ಆತ್ಮ ಎಂದರೆ ಎಷ್ಟೋ ದಿನ ಒಗೆಯದೆ ಕೊಳೆತು ನಾರುವ ಲಂಗೋಟಿ ಇದ್ದಂತೆ. ಈ ಲಂಗೋಟಿಯನ್ನು ಯಾರೂ ನೋಡಲಾಗದು, ಮುಟ್ಟಲಾಗದು, ನಾಶಪಡಿಸಲಾಗದು. ಉಡುಪಿಯಲ್ಲಿ ಒಂದು ಕಾರ್ಯಕ್ರಮದಲ್ಲೂ ಇದನ್ನೇ ಹೇಳಿದೆ. ಅಲ್ಲಿದ್ದ ಸ್ವಾಮೀಜಿ ನನ್ನ ಮಾತನ್ನು ಒಪ್ಪಿದರು, ಒಳ್ಳೆ ಹೋಲಿಕೆ ಕೊಟ್ಟಿದ್ದೀರಿ ಅಂದರು.
ಇದು ನರೇಂದ್ರ ಸ್ವಾಮಿಯ ವಾದಸರಣಿ. ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳು ನಮಗೆ ಗೊತ್ತು. ನರೇಂದ್ರ ಸ್ವಾಮಿಯದು ಲಂಗೋಟಾದ್ವೈತ ಸಿದ್ಧಾಂತ. ಅದನ್ನು ಪ್ರಸಾರ ಮಾಡುವ ಜೀ ವಾಹಿನಿಯೇ ಧನ್ಯ.
ಬೆಳಗಾವಿಯ ಒಬ್ಬಾಕೆ ಧೈರ್ಯ ತಂದುಕೊಂಡು ನರೇಂದ್ರ ಸ್ವಾಮಿಯನ್ನು ಕೇಳಿಯೇ ಬಿಟ್ಟಳು: ಎಲ್ಲ ಸರಿ ಗುರೂಜಿ, ನಿಮಗೆ ನಮ್ಮ ನೈಟಿ ಮೇಲೆ ಯಾಕೆ ಕಣ್ಣು?
ನರೇಂದ್ರ ಸ್ವಾಮಿ ಒಮ್ಮೆ ಮೋಹಕವಾಗಿ ನಕ್ಕು.. ದರಿದ್ರ ಕಣ್ರೀ, ಕೊಳೆ ತುಂಬಿಕೊಂಡಿರುತ್ತೆ ನೈಟಿ. ರಾತ್ರಿ ಗಂಡನ ಜೊತೆನೋ.... ಮಲಗಿ ಎದ್ದು ಬೆಳಿಗ್ಗೆ ಹಾಗೇ ಅಡುಗೆ ಮನೆಗೆ ಬರ‍್ತೀರಿ. ಅಲ್ಲಿರೋದು ಏನು? ಒಲೆ ಬೆಂಕಿ. ಬೆಂಕಿ ಅಂದ್ರೆ ಆದಿಶಕ್ತಿ. ಈಚೆಗಾಗಿರ‍್ತೀರಿ (ಮುಟ್ಟು), ಹಂಗೇ ಅಡುಗೆ ಮನೆಗೆ ಬರ‍್ತೀರಿ. ದರಿದ್ರ ಮೆಟ್ಟಿಕೊಳ್ಳದೇ ಇರುತ್ತಾ. ನೈಟಿ ಚೆನ್ನಾಗಿರಲ್ಲ ಅಂತೀನಪ್ಪ, ನಿಮ್ಮ ನೈಟಿ ಕಟ್ಕೊಂಡು ನನಗೇನಾಗಬೇಕು.. ಎಂದು ನುಡಿಯಿತು.
ನರೇಂದ್ರ ಸ್ವಾಮಿ ಬಿಟ್ವೀನ್ ದ ಲೈನ್ಸ್ ಏನನ್ನು ಹೇಳಿದ ಅನ್ನೋದು ಎಲ್ಲ ಹೆಣ್ಣುಮಕ್ಕಳಿಗೂ ಚೆನ್ನಾಗಿಯೇ ಅರ್ಥವಾಗಿರಬೇಕು. ಆದರೂ ಅವು ಪೆಚ್ಚು ಮುಖ ಮಾಡಿಕೊಂಡು ಕುಳಿತಿದ್ದವೇ ವಿನಃ ಪ್ರತಿಭಟಿಸಲಿಲ್ಲ.
ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಕರೆಂಟೇ ಇರಲ್ಲ, ಬರ‍್ಕೊಂಡು ಬಿಡಿ. ಆಮೇಲೆ ಏನ್ ಮಾಡ್ತೀರಾ? ನಿಮ್ಮ ಲೈಟು, ಫ್ರಿಡ್ಜು, ಮಿಕ್ಸಿ ಯಾವುದೂ ವರ್ಕ್ ಆಗಲ್ಲ. ಎಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ತೀರಾ?...
ಹೀಗೆ ಹೇಳುತ್ತಲೇ ಹೋಯಿತು ನರೇಂದ್ರ ಸ್ವಾಮಿ. ಅದು ಹಾಗೆ ವಟಗುಟ್ಟುತ್ತಲೇ ಇರಲಿ. ಈತನೂ ಸೇರಿದಂತೆ ಎಲ್ಲ ಚಾನಲ್‌ಗಳ ಭಂಡ, ಮೂಢ ಜ್ಯೋತಿಷಿಗಳ ವಿರುದ್ಧ ಒಂದು ಸಣ್ಣ ಆಂದೋಲನ ಹುಟ್ಟಿಕೊಂಡಿದೆ. ಈ ಕೋಡಂಗಿ ಜ್ಯೋತಿಷಿಗಳ ಉಪಟಳ ನಿಯಂತ್ರಿಸುವುದು ಹೇಗೆ? ಎಂಬ ಪೋಸ್ಟ್‌ಗೆ ೪೭ ಮಂದಿ ಪ್ರತಿಕ್ರಿಯಿಸಿದ್ದಾರೆ. ಸಾಕಷ್ಟು ಮಂದಿ ಇ-ಮೇಲ್ ಮೂಲಕ ಸಲಹೆಗಳನ್ನು ನೀಡಿದ್ದಾರೆ. ಏನು ಮಾಡಬಹುದು ಎಂಬ ಕುರಿತು ಸಾಕಷ್ಟು ವಿಸ್ತ್ರತವಾಗಿ ಚರ್ಚೆ ಆಗಿದೆ. ಈ ಚರ್ಚೆ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ.
ನಾಳೆಯ ಹೊತ್ತಿಗೆ ಈ ಜ್ಯೋತಿಷಿಗಳ ವಿರುದ್ಧದದ ನಮ್ಮ ಪ್ರಜಾಸತ್ತಾತ್ಮಕ ಹೋರಾಟದ ವಿವಿಧ ಸಾಧ್ಯತೆಗಳನ್ನು ಪಟ್ಟಿ ಮಾಡಿ, ಆ ಪ್ರಕಾರವಾಗಿ ಮುಂದುವರೆಯೋಣ.
ಒಂದು ಹಳೆಯ ಜೋಕ್ ಕೇಳಿಸಿಕೊಳ್ಳಿ: ಚಾನಲ್ ಒಂದರ ಜ್ಯೋತಿಷ್ಯ ಕಾರ್ಯಕ್ರಮಕ್ಕೆ ಯುವತಿಯೊಬ್ಬಳು ಕರೆ ಮಾಡುತ್ತಾಳೆ. ಆಕೆಯ ಪ್ರಶ್ನೆ ತನ್ನ ಅಣ್ಣನನ್ನು ಕುರಿತಾಗಿತ್ತು. ಅಣ್ಣ ತುಂಬಾ ಕುಡಿಯುತ್ತಿದ್ದಾನೆ, ಹೇಗೆ ಬಿಡಿಸುವುದು ಅನ್ನೋದು ಆಕೆಯ ಪ್ರಶ್ನೆ.
ನೋಡಮ್ಮಾ, ರಮ್ ಇದೆಯಲ್ಲಾ ಅದು ರಾಹು, ವಿಸ್ಕಿ ಇದೆಯಲ್ಲ ಅದು ಕೇತು. ಒಂದು ಬಾಟಲಿ ರಮ್, ಒಂದು ಬಾಟಲಿ ವಿಸ್ಕಿ ತೆಗೆದುಕೊಂಡು ಹೋಗಿ ಹರಿಯುವ ನೀರಿನಲ್ಲಿ ಬಿಡು, ಅವನು ಕುಡಿಯುವುದನ್ನು ಬಿಟ್ಟುಬಿಡುತ್ತಾನೆ.
ಆಕೆ ಮತ್ತೆ ಪ್ರಶ್ನಿಸುತ್ತಾಳೆ. ಗುರೂಜಿ, ನೀರಲ್ಲಿ ಬಿಡಬೇಕಾ?
ಮತ್ತಿನ್ನೇನು ನೀರಿಗೆ ಬಿಡದೇ ನೀನೇ ಕುಡೀತೀಯಾ, ಕುಡಿ... ಗುರೂಜಿ ಸಿಡುಕುತ್ತಾರೆ.
ಆ ಗುರೂಜಿ ಯಾರು ಅಂತ ಹೇಳಬೇಕಾಗಿಲ್ಲ ಅಲ್ಲವೇ?
ಕೊನೇ ಮಾತು: ಇಡೀ ಜಗತ್ತಿಗೆ ಆತ್ಮದ ಪರಿಕಲ್ಪನೆಯನ್ನು ಕೊಟ್ಟಿದ್ದೇ ಭಾರತ. ವ್ಯಕ್ತಿ ಅಂದರೆ ನಮ್ಮ ಪಾಲಿಗೆ ಕೇವಲ ದೇಹವೂ ಅಲ್ಲ, ಜೀವವೂ ಅಲ್ಲ. ಇವರೆಡನ್ನೂ ಮೀರಿದ ಆತ್ಮವನ್ನು ಒಳಗೊಂಡವನು. ಪಾಶ್ಚಿಮಾತ್ಯರಿಗೆ ಆತ್ಮದ ಕಲ್ಪನೆಯೇ ಇಲ್ಲದ ಕಾಲದಲ್ಲಿ, ನಮ್ಮಲ್ಲಿ ಆತ್ಮದ ಕುರಿತಾಗಿಯೇ ಭಿನ್ನ ಭಿನ್ನ ಸಿದ್ಧಾಂತಗಳು ಹುಟ್ಟಿಕೊಂಡಿದ್ದವು. ಭಾರತೀಯ ಮನಸ್ಸಿಗೆ ಆತ್ಮವಿಲ್ಲದ ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಈತ ಆತ್ಮವನ್ನು ಕೊಳೆತು ನಾರುವ ಲಂಗೋಟಿಗೆ ಹೋಲಿಸುತ್ತಾನೆ. ಇದಕ್ಕಿಂತ ದೊಡ್ಡ ಧರ್ಮದ ಅವಹೇಳನವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ?
发表评论