ಅಂಕಣಗಳಿಂದಲೇ ಪತ್ರಿಕೆ ಎಂಬ ಸವಕಲು ನಾಣ್ಯವನ್ನೇ ಮರುಚಲಾವಣೆಗೆ ತರಲು ಹರಸಾಹಸಗಳು ನಡೆಯುತ್ತಿರುವ ಇವತ್ತಿನ ಈ ಸಂಧರ್ಭದಲ್ಲಿ ಅಂಕಣಗಳ ಕುರಿತು ಒಂದು ವಿಮರ್ಶೆ ಅಗತ್ಯ. ಅಂಥದೊಂದು ಚರ್ಚೆಯನ್ನು ಹುಟ್ಟು ಹಾಕುವ ದಿಸೆಯಲ್ಲಿ ಒಂದು ಸಣ್ಣ ಪ್ರಯತ್ನ ಈ ಲೇಖನ. ಇದನ್ನು ಸಂಪಾದಕೀಯಕ್ಕಾಗಿ ಬರೆದಿರುವವರು ಬಿ.ಕೆ.ಸುಮತಿ.

ಸುಮತಿಯವರು ಬೆಂಗಳೂರು ಆಕಾಶವಾಣಿಯಲ್ಲಿ ಕಳೆದ ೧೭ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಪತ್ರಿಕೋದ್ಯಮ, ಮಾಧ್ಯಮ, ಭಾಷೆ ಅವರ  ಆಸಕ್ತಿಯ ವಿಷಯಗಳು.  ನಿರೂಪಣೆಯ ಕುರಿತಾಗಿ ಪುಸ್ತಕ ಬರೆದು ಪ್ರಕಟಿಸಿದ್ದಾರೆ. ಪತ್ರಿಕೋದ್ಯಮದ ಆಗು-ಹೋಗುಗಳನ್ನು ಅತ್ಯಂತ ಕಾಳಜಿ ಇಂದ ಗಮನಿಸುತ್ತಿರುವ ಸುಮತಿಯವರ ಈ ಒಳನೋಟಗಳು ನಿಮಗೂ ಇಷ್ಟವಾಗಬಹುದು.


ಇದು ಅಂಕಣ ಕಾಣಾ.....

'ಕಣ' ಎಂದರೆ ಅತ್ಯಂತ ಸೂಕ್ಷ್ಮ ಪದಾರ್ಥ ಅಥವಾ ಅಣು ಅಂತೆ, 'ಅಂಕಣ' ಎಂದರೆ ಮನೆಯಲ್ಲಿನ ಎರಡು ಕಂಬಗಳ ನಡುವಣ ಪ್ರದೇಶ ಅಂತೆ, ಹೀಗಂತ ಕನ್ನಡ ನಿಘಂಟು ಹೇಳುತ್ತದೆ. ಇದನ್ನು ಪತ್ರಿಕೆಗಳಿಗೆ ಅನ್ವಯಿಸಿ ನೋಡುವುದಾದರೆ ಇತ್ತೀಚೆಗೆ ಪತ್ರಿಕೆಗಳ 'ಕಣವು' 'ಅಂಕಣಗಳಿಂದ' ತುಂಬಬೇಕು ಎಂಬ ಭಾವ ಎಲ್ಲೆಡೆ ಕಾಣುತ್ತಿದೆ. ಅಂಕಣಗಳಿಂದಲೇ ದಿನಪತ್ರಿಕೆಗಳ ಪ್ರಸಾರ ಸಂಖ್ಯೆ ನಿರ್ಧಾರವಾಗುತ್ತದೆ ಎಂಬ ಭಾವನೆ ಕೂಡ ಹುಟ್ಟುಹಾಕಲಾಗುತ್ತಿದೆ.  ನಿತ್ಯ ಅದೇ ಚಡ್ಡಿ, ಯಡ್ಡಿ, ಹೊಡಿ, ಬಡಿ, ರಾಡಿ, ಚಾಡಿ ಸುದ್ದಿಗಳನ್ನು ಓದಿ ಓದಿ ಅಥವಾ ಓದಲಾರದೆ ಓದುಗ ಅಂಕಣಗಳಿಗೆ ಶರಣಾಗುತ್ತಾನೆ ಎಂಬ ಅನಿಸಿಕೆ ಕೂಡ ಇದೆ. 

ಇಂದೇಕೆ ಅಂಕಣಗಳಿಗೆ ಇಷ್ಟು ಮಹತ್ವ? ಹಿಂದೆ ಅಂಕಣಗಳೇ  ಇರಲಿಲ್ಲವೇ? ಅಥವಾ ಅಂಕಣಗಳನ್ನು ಜನ ಗುರುತಿಸಿರಲಿಲ್ಲವೇ? 'ಅಂಕಣ ಸಾಹಿತ್ಯ' ಸಾಧಾರಣ ಪತ್ರಿಕಾ ಸಾಹಿತ್ಯಕ್ಕಿಂತ ಭಿನ್ನವಾಗಿ ಮೂಡಿ ಬರುತ್ತಿದೆಯೇ? ಪ್ರಚಲಿತ ಅಂಕಣಗಳು ಏನನ್ನು ಹೇಳುತ್ತವೆ? ಅನ್ನುವಂತಹ ಪ್ರಶ್ನೆಗಳನ್ನು ಹಾಗೆ ಸುಮ್ಮನೆ ಅವಲೋಕನಕ್ಕೆ ಎಂದು ಕೇಳಿಕೊಂಡರೆ ಅಷ್ಟೇನೂ ಸಮಾಧಾನಕರ ಉತ್ತರ ದೊರೆಯುವುದಿಲ್ಲ. ಅಂತೆಯೇ... ಹಾಗೇ... ಕೆದಕಿ ಬೆದಕಿ ನೋಡಿದರೆ... 

ದಶಕಗಳ ಹಿಂದೆ ಸಹ ಅಂಕಣಗಳು ಇದ್ದವು. ಹಾ.ಮಾ.ನಾಯಕರು ಪ್ರಜಾಮತಕ್ಕೆ ಬರೆಯುತ್ತಿದ್ದ ಅಂಕಣ, ಲಂಕೇಶರು ಪ್ರಜಾ ವಾಣಿ ಗೆ ಬರೆಯುತ್ತಿದ್ದ ಅಂಕಣ, ವೈ ಏನ್ ಕೆ, ಕಾರಂತರು, ವೈಕುಂಠರಾಜು, ಎಂ ವಿ ಕಾಮತ್, ರಾಮಚಂದ್ರ ರಾಯರು, ಸ ಕ್ರ ಪ್ರಕಾಶ್ ಇವರೆಲ್ಲರ ಅಂಕಣಗಳು ಮನಸ್ಸಿನಲ್ಲಿ ಸುಳಿದು ಹೋಗುತ್ತವೆ. 'ಸುಧಾ' ವಾರಪತ್ರಿಕೆಯಲ್ಲಿ ಬರುತ್ತಿದ್ದ 'ಕಾಮಧೇನು', 'ನೀವು ಕೇಳಿದಿರಿ' ಅಂಕಣಗಳು ಲಂಕೇಶ್ ಪತ್ರಿಕೆಗೆ ತೇಜಸ್ವಿ ಬರೆಯುತ್ತಿದ್ದ ಅಂಕಣ ಮರೆಯುವ ಹಾಗೆಯೇ ಇಲ್ಲ. 

ಅಂಕಣಗಳು ನಿರ್ದಿಷ್ಟತೆ, ಸ್ವರೂಪ, ವಿಸ್ತಾರ, ಗುರಿ ಮತ್ತು ಬದ್ಧತೆಯನ್ನು ಹೊಂದಿರುತ್ತಿದ್ದವು. ಕೆಲವು 'ರಾಜಕೀಯ'ಕ್ಕಾಗಿಯೇ ಮೀಸಲಾದವು. ಇನ್ನು ಕೆಲವು ಪಕ್ಕಾ ವಿಡಂಬನೆಗಳು. ಇನ್ನು ಕೆಲವು ಪ್ರಶ್ನೋತ್ತರ ರೂಪದವು. ಮತ್ತೂ ಕೆಲವು ಸಾಂಸ್ಕೃತಿಕ ಲೋಕ, ಚಿತ್ರ ಲೋಕಕ್ಕೆ ಸಂಬಂಧ ಪಟ್ಟ ಅಂಥವು. ಅಂದರೆ ಅಂಕಣಗಳಿಗೆ ಹೆಸರು, ರೂಪ, ವಿಷಯ, ಇರುತ್ತಿತ್ತು. 'ಬರೆದವರು ಯಾರು' ಎನ್ನುವುದಕ್ಕಿಂತ ವಸ್ತು ವಿಷಯಕ್ಕೆ ಹೆಚ್ಚು ಸೆಳೆತ ಇರುತ್ತಿತ್ತು. 'ವಿಷಯ ಕೇಂದ್ರಿತ' ಅಂಕಣಗಳು ಕೆಲವಾದರೆ, 'ವ್ಯಕ್ತಿ ಕೇಂದ್ರಿತ' ಅಂಕಣಗಳೂ ಕೆಲವು. ವ್ಯಕ್ತಿ ಕೇಂದ್ರಿತ ಅಂಕಣಗಳಲ್ಲಿ ಈ ಬಾರಿ ಈತ ಏನೆನ್ನುತ್ತಾನೆ ಎಂಬ ಕುತೂಹಲ ಇರುತ್ತಿತ್ತು. ವ್ಯಕ್ತಿ ಕೇಂದ್ರಿತ ಅಂಕಣಗಳೂ ಸಹ, ಯಾವುದಾದರೂ ಸಾಮಾನ್ಯ ಪ್ರಚಲಿತ ವಿಚಾರಗಳ ಬಗ್ಗೆ ಬೆಳಕು ಬೀರುವ, ಪ್ರಜ್ಞಾದೀಪ ಹೊತ್ತಿಸುವ, ಮಂಥನ ನಡೆಸುವ ಪ್ರಣಾಳಿಕೆ ಹೊತ್ತಿರುತ್ತಿದ್ದವು. 

ಕೆಲವು ಅಂಕಣಗಳು ಪತ್ರಕರ್ತರು ಖುದ್ದು ಬರೆಯುವುದು, ಮತ್ತೆ ಕೆಲವು ಇತರರಿಂದ ಬರೆಸುವುದು. ಪತ್ರಕರ್ತರು ಸದಾ ಅಖಾಡದಲ್ಲಿ ಇರುತ್ತಾರಾದ್ದರಿಂದ, ನಿರಂತರ ಸುದ್ದಿಮನೆಯ ಆಗು ಹೋಗುಗಳು ಅವರ ಗಮನಕ್ಕೆ ಬರುತ್ತದೆ ಆದ್ದರಿಂದ ಆಯಾ ವಾರದ ಸುದ್ದಿ ಹರಿವು ಆಸಕ್ತಿ, ಅರ್ಥ ಮಾಡಿಕೊಂಡು ಬರೆಯಬಲ್ಲರು. ಜನರ ನಾಡಿಯನ್ನು ಮಿಡಿಯಬಲ್ಲರು ಎನ್ನುವಂಥದ್ದು ಇತ್ತು. ಇತರರು ಅಂಕಣದ ಜವಾಬ್ದಾರಿ ಹೊತ್ತಾಗ ಅವರು ವಿಚಾರದ ಆಯ್ಕೆ ಮಾಡಿಕೊಂಡು, ಸಂಶೋಧನೆ ನಡೆಸಿ, ತಮ್ಮ ಅಭಿಪ್ರಾಯಗಳನ್ನು ಸೇರಿಸಿ, ಕ್ರೋಡೀಕರಿಸಿ ಬರೆಯುವಂಥದ್ದಾಗಿರುತ್ತಿತ್ತು. ಕೆಲವೊಮ್ಮೆ ಆ ವಿಚಾರ ಮಂಡನೆಯ ಶೈಲಿಗೆ ಅಥವಾ ಪ್ರಚಲಿತದ ವಿಮರ್ಶೆಗೆ, ಪ್ರಸಕ್ತದ ಅರ್ಥ ಮಾಡಿಕೊಳ್ಳುವಿಕೆಗೆ, ಅಂಕಣಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡವರಿದ್ದರು. 

ಪಂಚೆ ಧರಿಸುವವರು ಪ್ಯಾಂಟ್, ಜೀನ್ಸ್ ಪ್ಯಾಂಟ್ ತೊಡಲು ಆರಂಭಿಸಿದರು. ಸೀರೆ ಸಲ್ವಾರ್ ಕಮೀಜ್ ಆಯಿತು. ಸಲ್ವಾರ್ ಹೋಗಿ ಮಿನಿ skirt ಬಂತು...

ಕಾಲ ಬದಲಾದ ಹಾಗೆಲ್ಲ ಪತ್ರಿಕೆಗಳೂ ಬದಲಾದವು. ನಾವಿನ್ಯತೆ ಪಡೆದವು. ಮಾಧ್ಯಮ ಉದ್ಯಮ ಆಯಿತು. ಪತ್ರಿಕೆ ಸರಕಾಯಿತು. ಅಂಕಣ ಅಂಕೆ ಮೀರಿತು. ಸಿನಿಮಾ ನಲ್ಲಿನ item song ನ ರೀತಿ ಪತ್ರಿಕೆಗೊಂದು ಅಂಕಣ! ಅದು ವಿಷಯ, ವಾದ, ಪ್ರತಿವಾದ, ಪೂರ್ವ ನಿರ್ಧಾರಿತ ಅಂಶಗಳು, ಸೆಳೆತಗಳು, ಸುಳಿವುಗಳು, ಎಲ್ಲವನ್ನು ಒಳಗೊಂಡಿರುತ್ತದೆ!! ವಾರದ ಅಂಕಣಗಳು, ನಿತ್ಯದ ಅಂಕಣಗಳು, ಸಿನಿಮಾ, ಉದ್ಯೋಗಪುಟಗಳಲ್ಲೂ  ಅಂಕಣಗಳು, ವ್ಯಕ್ತಿತ್ವ ವಿಕಾಸನಕ್ಕಾಗಿಯೇ ಅಂಕಣಗಳು... ಅಂಕಣಗಳು ಹೊಸ ರೂಪ ಪಡೆದದ್ದು ನಿಜ. ಬಣ್ಣದ ಸೀರೆ ಉಟ್ಟು ತಂತ್ರಜ್ಞಾನದ ರವಿಕೆ ತೊಟ್ಟು ಅಂದ ಚಂದದ ಮೇಕ್-ಅಪ್ ಧರಿಸಿ ಅನುಭವದ ರಸ ಸಾರ ಕೊಡಲು ಬಂದ ಈ ಅಂಕಣಾoಗನೆಯನ್ನು  ಕಂಡು ಓದುಗರು thrill ಆದದ್ದು ನಿಜ. ಆದರೆ...

ಆದರೆ, ಯವ್ವನ ಕಳೆದು ಮುಪ್ಪು ಅಡರುವಂತೆ ಅಂಕಣಗಳು ಹೊಳಪು ಕಳೆದುಕೊಳ್ಳುತ್ತಿವೆಯೇ? ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೇ ಅಂಕಣಗಳು ಈಗೀಗ ಯಾರನ್ನು ಮುಟ್ಟುತ್ತಿವೆ? ಅಂಕಣಗಳು ನಿಜವಾಗಿ ಅಂಕಣಗಳಾಗಿವೆಯೇ? ತಾಜಾತನವನ್ನು ಉಳಿಸಿಕೊಳ್ಳುತ್ತಿವೆಯೇ?  ನಿಜವಾಗಿ ಓದುಗ ಅಂಕಣಕ್ಕಾಗಿ ಕಾಯುತ್ತಾನೆಯೇ? ತಾವು ಯಾರಿಗಾಗಿ ಬರೆಯುತ್ತಿದ್ದೇವೆ, ಏನು ಬರೆಯುತ್ತಿದ್ದೇವೆ, ಯಾಕಾಗಿ ಬರೆಯುತ್ತಿದ್ದೇವೆ ಎಂಬುದನ್ನು ಅಂಕಣಕಾರರು ಯೋಚಿಸುತ್ತಿದ್ದಾರೆಯೇ? 

ಒಬ್ಬ ಕ್ರಿಕೆಟ್ ಆಟಗಾರ ಸತತ ಐದಾರು ಮ್ಯಾಚ್ ನಲ್ಲಿ ರನ್ ಹೊಡೆಯದಿದ್ದರೆ ಪಾಪ! ಅವನನ್ನು ಮನಬಂದಂತೆ ಬೈಯುತ್ತೇವೆ. ಟೀಂ ನಿಂದ ಕಿತ್ತುಹಾಕಬೇಕು ಎನ್ನುತ್ತೇವೆ. ಹಾಡುಗಾರ ತನ್ನ ವಯೋಧರ್ಮಕ್ಕೆ ತಲೆಬಾಗುತ್ತಿದ್ದಾಗ ಶಕ್ತಿ ಕುಂದಿ ಶ್ರುತಿ ತಪ್ಪಿದರೆ, ಆತ ಸ್ವಯಂ ನಿವೃತ್ತಿ ಪಡೆಯಬೇಕು 'ಕೇಳನೋ ಹರಿ, ತಾಳನೋ' ಎಂದು ಸಂಗೀತ ವಿಮರ್ಶಕರು ಬರೆದುಬಿಡುತ್ತಾರೆ. ಲೋಕಾರ್ಪಣೆಗೊಳ್ಳುವ ಪುಸ್ತಕಗಳ ಬಗ್ಗೆ ಪುಟಗಟ್ಟಲೆ ವಿಮರ್ಶೆಗಳು ಬರುತ್ತವೆ. ಮಾಧ್ಯಮ ಸಾಗುತ್ತಿರುವ ಬಗೆ ವಿವರಿಸಲು ನೂರಾರು ಬ್ಲಾಗ್ ಗಳು, ಚರ್ಚೆಗಳು, ಲೇಖನಗಳು, ಮಂಥನಗಳು ನಡೆದಿವೆ. ಆದರೆ ಈ ಅಂಕಣ ಸಾಹಿತ್ಯ ಯಾರ ಕೈಗೂ ಸಿಗದೇ ನುಸುಳಿ ಹೋಗುತ್ತಿದೆ. 

ಸಾರವೇ ಇಲ್ಲದ ಅಂಕಣಗಳು ಹೆಚ್ಚಾಗುತ್ತಿವೆ. 'ನಾನು' ಕೇಂದ್ರಿತ ಅಂಕಣಗಳೇ  ಹೆಚ್ಚಾಗುತ್ತಿವೆ. ಸಾಮಾಜಿಕ ವಿಷಯಗಳನ್ನು ಹೊತ್ತ ಅಂಕಣಗಳು ಮಾಯವಾಗುತ್ತಿವೆ. ತಾನು ಓದಿದ ಪುಸ್ತಕ. ತಾನು ಹೋದ ಸಭೆ-ಸಮಾರಂಭ, ತನ್ನ ಸ್ನೇಹಿತರ ಮನೆಗೆ ಪಾರ್ಟಿಗೆ ಹೋಗಿದ್ದು, ಇಂತಹ ಸ್ವ-ಪುರಾಣಗಳು ಅಂಕಣಗಳಲ್ಲಿ ಕಾಣುತ್ತಿವೆ. ಇವು ಆತ್ಮಕಥನಗಳೂ ಅಲ್ಲ, ಗಟ್ಟಿತನವಿರುವ 'ನಾನೂ' ಅಲ್ಲ. ಸುದ್ದಿಯಲ್ಲಿರಬೇಕೆಂದು ಬಯಸಿ ವಿವಾದ ಮಾಡುವ ರಾಜಕಾರಣಿಯಂತೆ, ಪ್ರಚಾರದ ಆಸೆಗೆ gossip ಮಾಡುವ ನಟ ನಟಿಯರಂತೆ ವಾರಕ್ಕೊಮ್ಮೆ ತನ್ನ ಹೆಸರು ಪತ್ರಿಕೆಯಲ್ಲಿ ಬರಬೇಕು ಎನ್ನುವ ಮೋಹಕ್ಕೆ ಅಂಕಣಕಾರ ಬೀಳುತ್ತಿದ್ದಾನೆ. ಅಂಕಣ, ವಿಷಯವನ್ನು ಬಿಟ್ಟು ಅಡ್ಡದಾರಿ ಹಿಡಿಯುತ್ತದೆ. ಅಂಕಣ ಒಂದು ಮೋಹಕ್ಕೆ ತಿರುಗಿದಾಗ ಸಂಪಾದಕರೂ ಏನೂ ಮಾಡಲಾರರು. 

ಮೊದಮೊದಲು ಪ್ರತಿ ಪದವನ್ನೂ ಓದುತಿದ್ದ ಓದುಗ, ನಂತರ, ವಾಕ್ಯಗಳ ಮೇಲೆ ಕಣ್ಣಾಡಿಸುತ್ತಾನೆ. ನಂತರ ಪ್ಯಾರ ಎಗರಿಸಿ ಓದುತ್ತಾನೆ. ಬರುಬರುತ್ತಾ ಶೀರ್ಷಿಕೆ ಓದಿಯೇ ಅಂಕಣಕಾರನನ್ನು ಗ್ರಹಿಸಿ ಬಿಡುತ್ತಾನೆ. ಓದುಗ ಶೀರ್ಷಿಕೆ ಕೂಡ ಓದಲಾರದ ಮಟ್ಟಕ್ಕೆ ಬರುವ ಮೊದಲು ಅಂಕಣಕಾರ ಎಚ್ಚೆತ್ತುಕೊಂಡರೆ ಒಳಿತು. 
ಸಂಪಾದಕರು ಅವರನ್ನು ತಮ್ಮ ಪತ್ರಿಕೆಗೆ ಬರೆಸಲು ಎಷ್ಟು ಶ್ರಮ ಪಡುತ್ತಾರೋ ಅವರನ್ನು ಪತ್ರಿಕೆಯಿಂದ ಬಿಡಿಸಲೂ ಕೂಡ ಅಷ್ಟೇ ಶ್ರಮ ಪಡಬೇಕಾಗುತ್ತದೆ. ಸರಸ ಸಲ್ಲಾಪ, ಪ್ರಲಾಪಕ್ಕೆ ತಿರುಗಿ ಬಿಡುತ್ತದೆ. ಅಂಕಣಕಾರ ಇನ್ನು ಹದಿನಾರು ಅಂಕಣ ಬರೆದರೆ 'ಐದನೇ ಪುಸ್ತಕ' ಸಿದ್ಧ ಎಂದು ಪ್ರಕಾಶಕರ ಮನೆ ಅಲೆಯುತ್ತಿರುತ್ತಾನೆ, ಸಂಪಾದಕ ಸುಸ್ತಾಗಿರುತ್ತಾನೆ, ಓದುಗ ಉಕ್ಕಿ ಬರುವ ನಗು ತಡೆಯುತ್ತಿರುತ್ತಾನೆ. 

ಕೆಲವೊಮ್ಮೆ ಸಂಪಾದಕರೂ ತಮ್ಮ ಸ್ವಹಿತಕ್ಕೆ, ಅಪೇಕ್ಷಿತ ಲಾಭಗಳಿಗೆ, ಸ್ನೇಹಿತರಿಗೆ ಪ್ರಚಾರ ಕೊಡುವುದಕ್ಕೆ, ಅಂಕಣಕಾರರಿಗೆ ಪ್ರೋತ್ಸಾಹಿಸುವುದು ಉಂಟು. ಅಂಕಣಗಳು ವಿಷಯ ಪ್ರಧಾನವಾದಾಗ ಮೂಡಿ ಬರುವ ರೀತಿಯೇ ಬೇರೆ. ಬೆಂಗಳೂರಿನ ಬಗ್ಗೆ ಪತ್ರಿಕೆಯೊಂದರಲ್ಲಿ ಅಂಕಣ ಮೂಡಿ ಬಂತು. ಸಂಗೀತದ ರಾಗಗಳ ಬಗ್ಗೆ, ಸುದ್ದಿ ಮನೆಯ ವಿಚಾರಗಳನ್ನು ತಿಳಿಸುವ ಬಗ್ಗೆ, ವಿಜ್ಞಾನಿಗಳ ಜೀವನ ಚರಿತ್ರೆ, ಮರೆಯಾದ ಲೇಖಕಿಯರು, ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀ ವಿಚಾರಧಾರೆ, ಸಾಹಿತ್ಯ ನಡೆದು ಬಂದ ದಾರಿ, ಇಂತಹ ಅಂಕಣಗಳು ನಿರಂತರ ಕುತೂಹಲ ಉಳಿಸಿಕೊಳ್ಳುತ್ತವೆ. ಬರೆಯುವವ ಯಾರೇ ಇದ್ದರೂ ವಿಷಯದ ಸೆಳೆತ ಅಲ್ಲಿರುತ್ತದೆ. ರಾಜಕೀಯ ಅಂಕಣಗಳು ಪ್ರಸ್ತುತತೆ ಇಂದ ಜೀವಂತಿಕೆ, ಕಾಪಾಡಿಕೊಳ್ಳುತ್ತವೆ. ಆದರೆ ಕೆಲವು ಅಂಕಣಗಳು ಸ್ಟಾರ್-ಗಿರಿ ಇಂದಲೇ ಓಡಬೇಕು. ಕನ್ನಡ ಬಾರದ ನಟ-ನಟಿಯರನ್ನು ಆರಿಸಿ, ಕರೆಸಿ, dubbing ಕೊಟ್ಟು ಪಾತ್ರ ಮಾಡಿಸಿದ ಹಾಗೇ. ಅವರಿಗೆ ಅಕ್ಷರ ಗೊತ್ತೋ, ಬರೆಯಲು ಬರುತ್ತದೋ, ಇಲ್ಲವೋ, ಕೇಳುವ ಹಾಗೆಯೇ ಇಲ್ಲ. ಮತ್ತೆ ಕೆಲವರು ಬರೆಯುವ/ ಓದುವ ಗೋಜು ಬೇಡ ಎಂದು ನಿರೂಪಣೆಗೆ ಒಗ್ಗಿಕೊಳ್ಳುತ್ತಾರೆ. ಅವರು ಹೇಳುತ್ತಾರೆ, ಮತ್ತೊಬ್ಬರು ಬರೆಯುತ್ತಾರೆ. 

ಆದರೆ, ವಿಷಾದವೆಂದರೆ ಅಂಕಣಕಾರರು 'ಖಾಲಿ' ಆಗುವುದು. ಅದಕ್ಕಿಂತ ಇನ್ನೂ ದುಃಖದ ಸಂಗತಿ ಎಂದರೆ ತುಂಬಿಕೊಳ್ಳದಿರುವುದು. ಅಂಕಣಗಳು ಚನ್ನಾಗಿ ಮೂಡಿ ಬರಬೇಕಾದರೆ ಪತ್ರಿಕಾ ಸಂಪಾದಕರು ಒಬ್ಬ ಅಂಕಣಕಾರನಿಗೆ  'ನಿರ್ದಿಷ್ಟ ಅವಧಿಗೆ' ಮಾತ್ರ ಬರೆಯಲು ಹೇಳಬೇಕು. ವಿಷಯವನ್ನು ಸೂಚಿಸಬೇಕು. ಬಿಡುಗಡೆಯಾಗುವ ಪುಸ್ತಕಗಳ ವಿಮರ್ಶೆ, ಟಾಪ್ ಟೆನ್ ಬರುವ ಹಾಗೆ, TV ಗಳಲ್ಲಿ serial ಗಳಿಗೆ  TRP ಇದ್ದಹಾಗೆ, ಚಿತ್ರಗೀತೆಗಳಲ್ಲಿ ಸೂಪರ್ ಹಿಟ್ ಇದ್ದ ಹಾಗೆ, ಎಲ್ಲ ಪತ್ರಿಕೆಗಳ ಎಲ್ಲ ಅಂಕಣಗಳ ಮೌಲ್ಯ ಮಾಪನ ನಡೆಯಬೇಕು. ಟಾಪ್ ಟೆನ್ ಅಂಕಣಗಳು ಯಾವುವು ಎನ್ನುವಂಥ ಚರ್ಚೆಗಳು ನಡೆಯಬೇಕು. ಆಗ ಅಂಕಣಕಾರರು ಮತ್ತು ಸಂಪಾದಕರು ಎಚ್ಚೆತ್ತುಕೊಳ್ಳುತ್ತಾರೆ. ಓದುಗ ನಿರಾಳವಾಗಿ ಉಸಿರಾಡುತ್ತಾನೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರಾರು? 

ಈಗ ಹೇಳಿ, ಪತ್ರಿಕೆಗಳ ಪ್ರಸಾರ, ಅಂಕಣಗಳಿಂದ ಹೆಚ್ಚಾಗುತ್ತವೆಯೇ? 
0 komentar

Blog Archive