ಜಾಡು ತಪ್ಪಿರುವ ಅಂಕಣಗಳ ಕುರಿತು ಬಿ.ಕೆ.ಸುಮತಿ ಮಾರ್ಮಿಕವಾಗಿ ಬರೆದಿದ್ದರು. ಈ ಚರ್ಚೆಯನ್ನು ಆನಂದ್ ಪಾಟೀಲ್ ಅವರ ಮೂಲಕ ವಿಸ್ತರಿಸುತ್ತಿದ್ದೇವೆ. ಆನಂದ್ ಪಾಟೀಲರು ಕನ್ನಡ ಪತ್ರಿಕೆಗಳ ಅಂಕಣಗಳ ಪುಟ್ಟ ಚರಿತ್ರೆಯನ್ನೇ ಇಲ್ಲಿ ಒದಗಿಸಿದ್ದಾರೆ. ಚರ್ಚೆ ಮುಂದುವರೆಯಲಿ.-ಸಂ.
ಬಿ.ಕೆ. ಸುಮತಿ ಅವರ ಅಂಕಣಗಳನ್ನು ಕುರಿತ ಬರಹ ತುಂಬ ಕುತೂಹಲ ಹುಟ್ಟಿಸಿತು. ಏಕೆಂದರೆ, ನಾನು ಮಾಧ್ಯಮ ವ್ಯಾಸಂಗದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿದ್ದರೂ ಮಾಧ್ಯಮದಲ್ಲಿ ಸಂಶೋಧನೆ ಮುಂದುವರೆಸಲು ಅಂಕಣ ಸಾಹಿತ್ಯ ವನ್ನೇ ಆರಿಸಿಕೊಂಡಿರುವ ಕಾರಣಕ್ಕೆ.
ಕನ್ನಡದಲ್ಲಿ ಅಂಕಣಗಳ ಇತಿಹಾಸ ರೋಚಕವಾಗಿದೆ. ಸುಮತಿ ಅವರು ಹೇಳಿರುವುದಕ್ಕೆ ಪೂರಕವಾಗಿ ಹೇಳಲು ಇನ್ನೂ ಅನೇಕ ವಿಷಯಗಳಿವೆ. ಉದಾಹರಣೆಗೆ ಇಲ್ಲಿ ಕೆಲವನ್ನು ಮಾತ್ರ ನೋಡಬಹುದು. (ಎಲ್ಲವನ್ನೂ ನೋಡಹೊರಟರೆ ಸಂಶೋಧನಾ ಸಂಪ್ರಬಂಧ ಇಲ್ಲೇ ಬರೆಯಬೇಕಾದೀತು !)
* ಕರ್ನಾಟಕದ ಏಕೀಕರಣದ ಬಗ್ಗೆ ಜನತೆಯನ್ನು ಎಚ್ಚರಿಸಿದ್ದು ಅಂದಿನ ಖ್ಯಾತ ಸಾಹಿತಿಗಳು- ತಮ್ಮ ಪತ್ರಿಕಾ ಅಂಕಣಗಳ ಮೂಲಕ.
* ಅಂದಂದಿನ ಸಂಗತಿಗಳನ್ನು ವಿಮರ್ಶಿಸುವ, ವಿಡಂಬಿಸುವ ಉದ್ದೇಶದ ಟಿಯೆಸ್ಸಾರ್ ಅವರ ಛೂಬಾಣ ಅಂಕಣ ಪತ್ರಿಕೋದ್ಯಮದಲ್ಲೇ ವಿಶಿಷ್ಟ. ರಾಜಕಾರಣಿಗಳಿಗೆ ಚಾಟಿಯೇಟು ಕೊಡುತ್ತಿದ್ದ ಅದರ ಮೂಲಕ ಸರ್ಕಾರದ ಅನೇಕ ಕೆಟ್ಟ ನಿರ್ಧಾರಗಳು ಕೂಡಲೇ ಸರಿಯಾಗುತ್ತಿದ್ದವು.
* ಸುಧಾ ವಾರಪತ್ರಿಕೆಗೆ ಜಿ.ಪಿ. ರಾಜರತ್ನಂ ಅವರಂತಹ ದೊಡ್ಡಸಾಹಿತಿಗಳೇ ಹತ್ತಾರು ವರ್ಷ ಅಂಕಣ ಬರೆದು, ಬೌದ್ಧ, ಜೈನ ಸಾಹಿತ್ಯಗಳ ಕಥೆಗಳನ್ನು, ಇತರ ಧರ್ಮಗಳ ಬೋಧಪ್ರದ ಕಥೆಗಳನ್ನು ಓದುಗರಿಗೆ ಪರಿಚಯಿಸಿದರು. ಅವರ ಅಂಕಣಗಳಿಗೆ ಓದುಗರು ಚಡಪಡಿಸಿ ಕಾಯುತ್ತಿದ್ದರು. ಅವರ ವಿಚಾರರಶ್ಮಿ ಅಂಕಣ ಬುದ್ಧಿಗೆ ಚುರುಕು, ಮನಸ್ಸಿಗೆ ತಂಪು ಕೊಡುತ್ತಿತ್ತು. ವ್ಯಕ್ತಿತ್ವ ವಿಕಸನ ಪದವೇ ಗೊತ್ತಿಲ್ಲದಿದ್ದ ಕಾಲದಲ್ಲಿ ಅದನ್ನೇ ಮಾಡುತ್ತಿತ್ತು !
* ಖ್ಯಾತ ಸಾಹಿತಿ ನಿರಂಜನ ಅವರು ಪ್ರಜಾವಾಣಿ ಸೇರಿ ವಿವಿಧ ಪತ್ರಿಕೆಗಳಲ್ಲಿ ಬರೆದ ಅಂಕಣಗಳು ಆ ಕಾಲದ ಅಮೂಲ್ಯ ದಾಖಲೆಗಳಾಗಿವೆ. ತಮ್ಮ ಪ್ರಿಯತಮೆ ಅನುಪಮಾಗೆ ಪತ್ರ ಬರೆದಂತೆ ಅವರು ಅಂಕಣ ಬರೆಯುತ್ತಿದ್ದರು.
* ಇನ್ನು ಅಂಕಣಗಳ ಚಕ್ರವರ್ತಿ ಎಂದು ಕರೆಯಬಹುದಾದ ಎಚ್ಚೆಸ್ಕೆ ಅವರು ಸ್ಮರಣೀಯರು. ಸುಧಾ ಪತ್ರಿಕೆ ಆರಂಭವಾದ ದಿನದಿಂದ ಅವರ ಎರಡು ಅಂಕಣಗಳು ಸತತ ಜನಪ್ರಿಯವಾಗಿದ್ದವು. ಇಂಟರ್‌ನೆಟ್ ಇಲ್ಲದಿದ್ದ ಕಾಲದಲ್ಲಿ ಎಚ್ಚೆಸ್ಕೆ ಅವರು ಅದು ಹೇಗೆ ವಿಷಯಗಳನ್ನು ಅಷ್ಟು ಖಚಿತವಾಗಿ ಸಂಗ್ರಹಿಸುತ್ತಿದ್ದರೋ ದೇವರಿಗೇ ಗೊತ್ತು !!
* ಇವೆಲ್ಲಕ್ಕಿಂತ ಮುಖ್ಯವಾಗಿ ಅಂಕಣಗಳ ಆಚಾರ್ಯ ಪಾ.ವೆಂ. ಆಚಾರ್ಯ ಅವರನ್ನು ಮರೆಯುವಂತೆಯೇ ಇಲ್ಲ. ಸಂಯುಕ್ತ ಕರ್ನಾಟಕ, ಕಸ್ತೂರಿ ಬಳಗದಲ್ಲಿ ಅವರು ನಿರಂತರವಾಗಿ ಬರೆದ ಪದಪದಾರ್ಥ ಮತ್ತು ಇತರ ಅಂಕಣಗಳು ಪತ್ರಿಕಾ ಸಾಹಿತ್ಯದ ಅಮೂಲ್ಯ ದಾಖಲೆಗಳಾಗಿವೆ.
* ಸುರೇಂದ್ರ ದಾನಿ ಮತ್ತಿತರ ಅಂಕಣಕಾರರು ಬಹಳ ವರ್ಷ ಸಂಯುಕ್ತ ಕರ್ನಾಟಕದಲ್ಲಿ ಬರೆದಿದ್ದಾರೆ. ಮಂಗಳೂರಿನ ನವಭಾರತ ಪತ್ರಿಕೆಯಲ್ಲಿ ವಾರದ ಅಂಕಣಗಳು ಆಕರ್ಷಕವಾಗಿದ್ದವು.
* ಕಾಮಧೇನು ಅನ್ನುವುದು ಸುಮತಿ ಹೇಳಿದಂತೆ ಸುಧಾ ಪತ್ರಿಕೆಯ ಅಂಕಣದ ಹೆಸರಲ್ಲ- ಅದರ ಮಹಿಳಾ ಲೇಖನಗಳ ವಿಭಾಗದ ಹೆಸರು. ಯಾರು ಬೇಕಾದರೂ ಅದಕ್ಕೆ ಲೇಖನ ಬರೆಯಬಹುದಿತ್ತು.
* ಹಾ.ಮಾ. ನಾಯಕರು ಪ್ರಜಾಮತಕ್ಕೆ ಮಾತ್ರವಲ್ಲ- ಪ್ರಜಾವಾಣಿ, ಸುಧಾ, ತರಂಗ ಪತ್ರಿಕೆಗಳಿಗೂ ನಿರಂತರ ಅಂಕಣಗಳನ್ನು ಬರೆದರು. ಅವರ ಎಲ್ಲ ಅಂಕಣಗಳ ಹೆಸರು ಸಂಗತ, ಸೂಲಂಗಿ ಇತ್ಯಾದಿ ಸಕಾರ ದಿಂದಲೇ ಆರಂಭವಾಗುತ್ತವೆ. ಮತ್ತೂ ವಿಶೇಷವೆಂದರೆ ಅವರು ತಮ್ಮ ಅಂಕಣಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನವನ್ನೂ ಪಡೆದು, ಪತ್ರಿಕಾ ಸಾಹಿತ್ಯಕ್ಕೆ ದೊಡ್ಡ ಮರ್ಯಾದೆ ತಂದುಕೊಟ್ಟರು. ಅಂದಿನಿಂದ ರಾಜ್ಯ ಸಾಹಿತ್ಯ ಅಕಾಡೆಮಿಯೂ ಅಂಕಣ ಸಾಹಿತ್ಯಕ್ಕೆ ಮಾನ್ಯತೆ ಕೊಡುತ್ತಿದೆ.
*ಉದಯವಾಣಿಯಲ್ಲಿ ಬಹಳಕಾಲ ಬಂದ ಕು.ಶಿ. ಹರಿದಾಸ ಭಟ್ಟರ ಕುಶಲೋಪರಿ ಅಂಕಣ, ವಿವೇಕ ರೈ ಅವರ ಗಿಳಿಸೂವೆ ಅಂಕಣ ಜನಪ್ರಿಯವಾಗಿತ್ತು. ತರಂಗದ ಸಂಪಾದಕರಾಗಿದ್ದ ಸಂತೋಷಕುಮಾರ ಗುಲ್ವಾಡಿ ಅವರ ಅಂತರಂಗ ಬಹಿರಂಗ ಆ ಕಾಲದ ಬಹಳ ಜನಪ್ರಿಯ ಸಂಪಾದಕೀಯ ಅಂಕಣವಾಗಿತ್ತು. ತುಷಾರದ ಸಂಪಾದಕರಾಗಿದ್ದ ಎ. ಈಶ್ವರಯ್ಯ ಅವರೂ ತುಂಬ ವರ್ಷ ಅಂಕಣ ಬರೆದರು.
* ವೈಯೆನ್ಕೆ ಅವರು ಕನ್ನಡಪ್ರಭದಲ್ಲಿ ಬರೆದ ವಂಡರ್ ಕಣ್ಣು ಒಂದು ವಿಶೇಷ ಅಂಕಣವಾಗಿತ್ತು.
* ಓದುಗರ ಜೊತೆ ಟಚ್ ಇಟ್ಟುಕೊಳ್ಳುವ ಪ್ರಶ್ನೋತ್ತರ ಅಂಕಣಗಳಲ್ಲಿ ಸುಧಾದ ನೀವು ಕೇಳಿದಿರಿ ಗೆ ಅಗ್ರಸ್ಥಾನ. ಅದರಲ್ಲಿ ಉತ್ತರ ಕೊಡುತ್ತಿದ್ದವರು ಅಂತಿಂತಹವರಲ್ಲ- ಸ್ವತಃ ಖ್ಯಾತ ಸಾಹಿತಿ ಬೀಚಿ ಅವರೇ! ದಶಕಗಳ ಕಾಲ ಅವರು ಓದುಗರನ್ನು ಇನ್ನಿಲ್ಲದಂತೆ ರಂಜಿಸಿದರು. ಅವರ ಮರಣಾನಂತರ ಅ.ರಾ. ಮಿತ್ರ, ಅ.ರಾ.ಸೇ., ಕೇಶವಮೂರ್ತಿ ಮೊದಲಾದವರು ಮುಂದುವರೆಸಿದರು. ಇಂದಿನ ಅನೇಕ ಲೇಖಕರ ಹೆಸರು ಮೊದಲು ಪತ್ರಿಕೆಯಲ್ಲಿ ಪ್ರಕಟವಾದದ್ದು ಈ ಅಂಕಣದಲ್ಲಿ- ಪ್ರಶ್ನೆ ಕೇಳಿದಾಗ!
* ಸುಧಾ ಪತ್ರಿಕೆಯ ಇಂತಹ ಅಪೂರ್ವ ಅಂಕಣಗಳನ್ನು ರೂಪಿಸಿದ ಅದರ ಪ್ರಥಮ ಸಂಪಾದಕ ಇ.ಆರ್. ಸೇತೂರಾಮ್ ಅವರು, ವಾರಪತ್ರಿಕೆಗಳಿಗೆ ಒಂದು ಒಳ್ಳೆಯ ಮಾದರಿಯನ್ನು ನಿರ್ಮಿಸಿದರು ಎಂಬ ಮಹತ್ವದ ಅಂಶವನ್ನು ನೆನಪಿಸಿಕೊಳ್ಳಬೇಕು.
* ಪಾಟೀಲ ಪುಟ್ಟಪ್ಪ ಅವರು ಲೇಖನಗಳಿಂದ ಮಾತ್ರವಲ್ಲದೆ ತಮ್ಮ ಅಂಕಣ ಬರಹಗಳಿಂದಲೂ ತುಂಬ ಖ್ಯಾತಿ ಪಡೆದರು ಎಂಬುದನ್ನು ಮರೆಯುವಂತಿಲ್ಲ.
* ಪ್ರಶ್ನೋತ್ತರ ಅಂಕಣಗಳಲ್ಲಿ ವೈಯೆನ್ಕೆ ಚಮತ್ಕಾರದ ಉತ್ತರ ಕೊಡುತ್ತಿದ್ದ ಘ್ನಾನಪೀಠ ಜನಪ್ರಿಯವಾಗಿತ್ತು. ಲಂಕೇಶ್ ಪತ್ರಿಕೆ, ಹಾಯ್ ಬೆಂಗಳೂರುಗಳ ಪ್ರಶ್ನೋತ್ತರ ಅಂಕಣಗಳು ರಂಜನೀಯ.
* ವಿವಿಧ ವಿಷಯಗಳನ್ನು ಕುರಿತು ಬರೆಸುವ ಅಂಕಣಗಳಲ್ಲಿ ಆರೋಗ್ಯಕ್ಕೆ ಮೊದಲ ಸ್ಥಾನ. ಅನುಪಮಾ ನಿರಂಜನ ಅವರೇ ಸ್ವಾಸ್ಥ್ಯ- ಸಲಹೆ ಪ್ರಶ್ನೋತ್ತರ ಅಂಕಣ ಬಹಳ ವರ್ಷ ಬರೆದು ಇನ್ನಿಲ್ಲದ ಜನಪ್ರಿಯತೆ ಗಳಿಸಿದರು. ನಂತರ ಅನೇಕ ವೈದ್ಯ ಬರಹಗಾರರು ಬಂದರು. ಅವರಲ್ಲಿ ಸಿ.ಆರ್. ಚಂದ್ರಶೇಖರ್ ತುಂಬ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ.
* ಲೈಂಗಿಕ ಆರೋಗ್ಯ ಕುರಿತ ಪ್ರಶ್ನೋತ್ತರ ಅಂಕಣಗಳು ವಿಶಿಷ್ಟವಾಗಿವೆ. ವೈದ್ಯರಾದ ಗೋಪಾಲಕೃಷ್ಣರಾವ್ ಅವರ ಪತ್ರಿಕೆಯ ಅಂಕಣ ಬಹಳ ಜನಪ್ರಿಯವಾಗಿತ್ತು. ಪ್ರಜಾಮತದಲ್ಲಿ ಬರುತ್ತಿದ್ದ ಗುಪ್ತ ಸಮಾಲೋಚನೆ ಅದರ ಪ್ರಸಾರವನ್ನು ಲಕ್ಷ ದಾಟಿಸಿತ್ತು. ಅದರ ಸಂಪಾದಕರಾಗಿದ್ದ ಮ.ನ. ಮೂರ್ತಿ ಅವರೇ ಅದರಲ್ಲಿ ಉತ್ತರ ಕೊಡುತ್ತಿದ್ದರಂತೆ. ನಂತರ ಉದಯವಾಣಿಯ ಮಹಿಳಾ ಸಂಪದದಲ್ಲಿ ಪದ್ಮಿನಿ ಪ್ರಸಾದ್ ಅವರ ಪ್ರಶ್ನೋತ್ತರ ಅಂಕಣ ಅವರಿಗೆ ತುಂಬ ಜನಪ್ರಿಯತೆಯನ್ನು, ಟಿ.ವಿ. ವಾಹಿನಿಗಳಲ್ಲಿ ಅಂತಹ ಕಾರ್ಯಕ್ರಮಗಳ ಟ್ರೆಂಡ್ ಅನ್ನು ತಂದಿತು. ಸುಧಾದಲ್ಲಿ ವಿನೋದ ಛಬ್ಬಿ ಆ ರೀತಿಯ ಅಂಕಣ ಬರೆದರು.
* ಇನ್ನು ಜ್ಞಾನವಿಜ್ಞಾನ ಕುರಿತ ಅಂಕಣಗಳಲ್ಲಿ ಸುಧಾದಲ್ಲಿ ವಾಸುದೇವ್ ಅವರು ಮಕ್ಕಳಿಗಾಗಿ ಬರೆಯುತ್ತಿರುವ ವಿಶಿಷ್ಟ ಅಂಕಣ ತುಂಬಾ ಅಮೂಲ್ಯವಾದದ್ದು. ಸದ್ದಿಲ್ಲದೆ ಸತತ ಮೂರೂವರೆ ದಶಕಗಳ ಕಾಲದಿಂದ ಅಂಕಣ ಬರೆಯುತ್ತಿರುವ ಶಾಲಾಶಿಕ್ಷಕ ವಾಸುದೇವ್ ಅವರ ಅಮೂಲ್ಯ ಸೇವೆಗೆ ಯಾವ ಪ್ರಶಸ್ತಿ ಕೊಟ್ಟರೂ ಸಾಲದು.
* ಇನ್ನೊಂದು ನೆನಪಿಸಿಕೊಳ್ಳಬೇಕಾದ್ದು ನಾಗೇಶ ಹೆಗಡೆ ಪ್ರಜಾವಾಣಿಯಲ್ಲಿ ಇಪ್ಪತ್ತೈದು ವರ್ಷಗಳಿಂದ ಸತತ ದಾಖಲೆಯಾಗಿ ಬರೆಯುತ್ತಿರುವ ವಿಜ್ಞಾನ ವಿಶೇಷ ಅಂಕಣ.
* ಸಂಸ್ಕೃತಿ ಕುರಿತ ಅಂಕಣಗಳಲ್ಲಿ ರಂಗಭೂಮಿ ಮತ್ತು ಸಿನಿಮಾತು ಅಂಕಣಗಳನ್ನು ಬರೆದ ಬಿ.ವಿ. ವೈಕುಂಠರಾಜು ನೆನಪಾಗುತ್ತಾರೆ. ಅವು ಅಂದಿನ ಬೆಳವಣಿಗೆಗಳ ಅಮೂಲ್ಯ ದಾಖಲೆಗಳು. ಸಿನಿಮಾ ಕುರಿತು ಇಂದಿಗೂ ಹಲವು ಜನಪ್ರಿಯ ಅಂಕಣಗಳಿವೆ.
* ಕ್ರೀಡಾ ಅಂಕಣಗಳಲ್ಲಿ ಪ್ರಜಾವಾಣಿ, ಸುಧಾಗಳಲ್ಲಿ ಸೂರಿ ಬರೆದ ಅಂಕಣಗಳು ಖ್ಯಾತಿ ಪಡೆದಿದ್ದವು. ಗೋಪಾಲ ಹೆಗಡೆ ಮತ್ತೊಬ್ಬ ಹೆಸರಿಸಬಹುದಾದ ಅಂಕಣಕಾರ.
* ಕಸ್ತೂರಿಯ ವಿಶಿಷ್ಟ ನಿಮ್ಮ ಶಬ್ದಭಂಡಾರ ಬೆಳೆಯಲಿ ಅಂಕಣ ನಿಜಕ್ಕೂ ತಲೆಮಾರುಗಳ ಜನರ ಭಾಷೆಯನ್ನು ಬೆಳೆಸಿದೆ. ಪದಬಂಧ ದೈನಿಕ ಅಂಕಣಗಳ ಜನಪ್ರಿಯತೆ ಕುರಿತು ಎರಡು ಮಾತೇ ಇಲ್ಲ! ನಂತರ ಕ್ವಿಜ್‌ಗಳು, ಸುಡೊಕು ಅಂಕಣಗಳ ಕಾಲ ಬಂತು. ಚುಟುಕು ಮಾಹಿತಿಗಳ ದೈನಿಕ ಚಿಕ್ಕ ಅಂಕಣಗಳನ್ನು ಕನ್ನಡಪ್ರಭ ದಶಕಗಳ ಹಿಂದೆಯೇ ಆರಂಭಿಸಿ ಜನಪ್ರಿಯಗೊಳಿಸಿತು.
* ಕೃಷಿ ಕುರಿತ ಅಂಕಣಗಳಲ್ಲಿ ಪ್ರಜಾವಾಣಿಯ ಬದುಕಿನ ಬೆನ್ನೆಲುಬು ಬೇಸಾಯ ಅಂದಿನ ಕಾಲದಲ್ಲಿ ಜನಪ್ರಿಯವಾಗಿದ್ದ ಅಂಕಣ. ಶ್ರೀಪಡ್ರೆ, ಶಿವಾನಂದ ಕಳವೆ, ಅಡ್ಡೂರು ಕೃಷ್ಣರಾವ್, ಜಯಣ್ಣ ಮೊದಲಾದ ಹಲವು ಅಂಕಣಕಾರರು ಇಂದಿಗೂ ಬರೆಯುತ್ತಿದ್ದಾರೆ.
* ಗ್ರಾಹಕರ ಹಕ್ಕು ಕುರಿತು ಉದಯವಾಣಿಯಲ್ಲಿ ರವೀಂದ್ರನಾಥ ಶ್ಯಾನಭಾಗ, ಮಾಹಿತಿ ಹಕ್ಕು ಕುರಿತು ವೈ.ಜಿ. ಮುರಳೀಧರ, ಮಕ್ಕಳ ಹಕ್ಕು ಕುರಿತು ವಾಸುದೇವ ಶರ್ಮ ಅಂಕಣ ಬರೆದಿದ್ದಾರೆ. ಅಂತಹ ವಿಶೇಷ ಉಪಯುಕ್ತ ವಿಷಯಗಳ ಬಗ್ಗೆ ಉದಯವಾಣಿ ಅಂಕಣಗಳನ್ನು ಬರೆಸಿರುವುದು ಉಲ್ಲೇಖನೀಯ.
* ವಿಡಂಬನೆಯ ಅಂಕಣಗಳಲ್ಲಿ ಪಾ.ವೆಂ. ಹೆಸರು ನೆನಪಾಗುತ್ತದೆ. ಕು.ಗೋ. ಅವರೂ ಅಂತಹ ಅಂಕಣ ಬರೆದರು. ಆಮೇಲೆ ಸುಧಾದಲ್ಲಿ ಜಿ.ಎಸ್. ಸದಾಶಿವ ಮತ್ತು ಆನಂದ ಬರೆಯುತ್ತಿದ್ದ ಅಂಕಣದಲ್ಲಿ ಹಾಸ್ಯ, ವಿಡಂಬನೆ ತುಂಬಿರುತ್ತಿತ್ತು. ಡುಂಡಿರಾಜ್ ಅವರು ವಿಜಯ ಕರ್ನಾಟಕದಲ್ಲಿ ನಾಲ್ಕು ವರ್ಷ ಬರೆದ ವಿಡಂಬನೆ ಅಂಕಣ ತುಂಬ ಜನಪ್ರಿಯವಾಯಿತು. ನಂತರ ಅವರು ಕೆಲಕಾಲ ಪ್ರಜಾವಾಣಿಯಲ್ಲಿ ಡುಂಡಿಮ ಅಂಕಣ ಬರೆದರು. ಉದಯವಾಣಿಯಲ್ಲಿ ಆರ್. ಪೂರ್ಣಿಮಾ ಸ್ವಲ್ಪಕಾಲ ಎಂಥದು ಮಾರಾಯ್ತಿ! ವಿಡಂಬನೆ ಅಂಕಣ ಬರೆದರು. ಇನ್ನೂ ಹಲವರು ಇಂತಹ ಅಂಕಣಗಳನ್ನು ಬರೆದಿದ್ದಾರೆ.
* ಕಾನೂನು ಅರಿವು ಪ್ರಸಾರ ಮಾಡುವ ಅಂಕಣಗಳು ಕನ್ನಡದಲ್ಲಿ ಬರುತ್ತಿವೆ. ಕನ್ನಡಪ್ರಭದಲ್ಲಿ ವಕೀಲ ಮೂರ್ತಿ ಅವರು ದಶಕಗಳ ಕಾಲ ನೀವು ಮತ್ತು ಕಾನೂನು ಅಂಕಣ ಬರೆದರು. ಈಗಲೂ ಆ ಅಂಕಣ ಜನಪ್ರಿಯವಾಗಿ, ಉಪಯುಕ್ತವಾಗಿದೆ. ಉದಯವಾಣಿಯಲ್ಲಿ ಮಹಿಳೆಯರಲ್ಲಿ ಕಾನೂನು ಅರಿವು ಮೂಡಿಸಲು ಹೇಮಲತಾ ಮಹಿಷಿ ಅವರು ಬರೆಯುವ ಸಬಲೆ-ಸಲಹೆ ಅಂಕಣ ಜನಪ್ರಿಯ. ಸುಧಾದಲ್ಲಿ ಗೀತಾ ಕೃಷ್ಣಮೂರ್ತಿ ಕಾನೂನು ಅಂಕಣವಿದೆ.
* ಉದಯವಾಣಿಯಲ್ಲಿ ನಮ್ಮ ಬೆಂಗಳೂರು ಪುರವಣಿಯಲ್ಲಿ ಸುರೇಶ ಮೂನ ಬೆಂಗಳೂರಿನ ಇತಿಹಾಸ ಕುರಿತು ಬರೆದ ಸಾವಿರದ ಐನೂರಕ್ಕೂ ಹೆಚ್ಚಿನ ಅಂಕಣ ಬರಹಗಳು ಪತ್ರಿಕೋದ್ಯಮದ ದಾಖಲೆಯಾಗಿದೆ.
* ಇನ್ನು ರಾಜಕೀಯ ಅಂಕಣಗಳದೇ ರೋಚಕ ಇತಿಹಾಸ. ಅದರಲ್ಲಿ ಸಿ.ವಿ. ರಾಜಗೋಪಾಲ, ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಅಂಕಣಗಳನ್ನು ಜನ ಮರೆತಿಲ್ಲ. ಪತ್ರಿಕೋದ್ಯಮದ ಇತಿಹಾಸದಲ್ಲೇ ಕನ್ನಡಪ್ರಭದ ಕೆ. ಸತ್ಯನಾರಾಯಣ ಅವರ ರಾಜಕೀಯ ಅಂಕಣ ಒಂದು ವಿಶೇಷ ಅಂಕಣ. ಸುದೀರ್ಘಕಾಲದ ಪ್ರಕಟಣೆಯ ದಾಖಲೆ ಅವರ ಅಂಕಣಕ್ಕೆ ಇದೆ.
* ಸತ್ಯನಾರಾಯಣ ಅವರು ಆರ್ಥಿಕ ವಿಷಯದ ಬಗ್ಗೆಯೂ ಅಂಕಣ ಬರೆಯುತ್ತಾರೆ. ಶೈಲೇಶ ಚಂದ್ರ ಪ್ರಜಾವಾಣಿಯಲ್ಲಿ ಪೇಟೆಮಾತು ಅಂಕಣ ಬರೆಯುತ್ತಿದ್ದರು. ಈಗ ಷೇರು ಮಾರುಕಟ್ಟೆ ಕುರಿತ ಅನೇಕ ಅಂಕಣಗಳಿವೆ.
* ಟ್ಯಾಬ್ಲಾಯ್ಡ್ ಪಾಲಿಗೆ ಅಂಕಣಗಳು ಅಂದಿಗೂ ಇಂದಿಗೂ ವಿಶೇಷ ಆಕರ್ಷಣೆ. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ರವಿ ಬೆಳಗೆರೆ ಅಂಕಣಗಳು ಇದಕ್ಕೆ ಉದಾಹರಣೆ.
* ಕನ್ನಡದ ಖ್ಯಾತ ಸಾಹಿತಿಗಳು ಪತ್ರಿಕೆಗಳಿಗೆ ಅಂಕಣ ಬರೆದಿದ್ದಾರೆ. ಶಿವರಾಮ ಕಾರಂತರು, ಡಿವಿಜಿ, ಅನಕೃ, ರಾಜರತ್ನಂ, ನಿರಂಜನ, ವ್ಯಾಸರಾಯ ಬಲ್ಲಾಳ, ಯು.ಆರ್. ಅನಂತಮೂರ್ತಿ, ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ವೈದೇಹಿ, ಎಚ್.ಎಸ್. ವೆಂಕಟೇಶಮೂರ್ತಿ, ಜಯಂತ ಕಾಯ್ಕಿಣಿ ಮೊದಲಾದವರ ಹೆಸರುಗಳು ನೆನಪಾಗುತ್ತವೆ. ಸಾಹಿತ್ಯದ ಬಗ್ಗೆ ವಿಮರ್ಶಕರಾದ ಟಿ.ಪಿ. ಅಶೋಕ, ನರಹಳ್ಳಿ ಬಹಳ ಕಾಲ ಅಂಕಣಗಳನ್ನು ಬರೆದಿದ್ದಾರೆ. ತುಷಾರ, ಮಯೂರ ಮಾಸಪತ್ರಿಕೆಗಳ ಇಂತಹ ಅಂಕಣಗಳು ಗಮನಾರ್ಹವಾಗಿದ್ದವು.
* ಅಂದಿನ ಅಂಕಣಗಳು ಸಮಕಾಲೀನ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಜೀವನದ ಅಮೂಲ್ಯ ದಾಖಲೆಗಳಾಗಿ ಸಾರ್ವಕಾಲಿಕ ಮೌಲ್ಯ ಪಡೆದಿವೆ. ಬೆಳಿಗ್ಗೆ ನಾನು ಎರಡು ಇಡ್ಲಿ ತಿಂದೆ, ಸಂಜೆ ಎರಡು ಬಿಯರ್ ಕುಡಿದೆ ಅಥವ ಇವರು ನನಗೆ ತಿಂಡಿಗೆ ಸಿಕ್ಕಿದ್ದರು, ಅವರು ನನ್ನ ಊಟಕ್ಕೆ ಕರೆದಿದ್ದರು ಅಥವ ನಾನು ಇದನ್ನು ಮಾಡಿದೆ, ನಾನು ಅದನ್ನು ಹೇಳಿದೆ ಅಥವ ನಾನು ಅಲ್ಲಿ ಭಾಷಣಕ್ಕೆ ಹೋದೆ, ನಾನು ಇಲ್ಲಿ ಅತಿಥಿಯಾಗಿ ಹೋದೆ ಮುಂತಾಗಿ ಅಂಕಣಗಳಲ್ಲಿ ಬರೆದು ನಾನು, ನಾನು ಮತ್ತು ನಾನು ಗಳನ್ನು ನಿರ್ಲಜ್ಜವಾಗಿ ಓದುಗರ ಮೇಲೆ ಹೇರುವ ಚಾಳಿ ಎಲ್ಲೂ ಕಾಣುವುದಿಲ್ಲ. ಅಂದಿನ ಅಂಕಣಗಳು ಪ್ರಕಟವಾಗುವ ಪತ್ರಿಕೆಯ ಇಮೇಜ್ ಬೆಳೆಸುತ್ತಿತ್ತೇ ಹೊರತು, ಪತ್ರಿಕೆಯ ಜಾಗವನ್ನು ಬಳಸಿ ಅಂಕಣಕಾರರು ತಮ್ಮ ಇಮೇಜ್ ಬೆಳೆಸಿಕೊಳ್ಳುತ್ತಿರಲಿಲ್ಲ.
* ಅಂಕಣಗಳ ಬಗ್ಗೆ ಬರೆಯುವುದು ಬಹಳವಿದೆ. ಇಲ್ಲಿ ಸ್ವಲ್ಪ ಮಾತ್ರ ಹೇಳಿದರೂ ದೀರ್ಘವಾಗಿದೆ. ಇದಕ್ಕೆ ಓದುಗರ ಕ್ಷಮೆಯಿರಲಿ.
发表评论