ಇದು ಮೀಡಿಯಾ ಸಂಬಂಧಿ ಬ್ಲಾಗ್. ಹೀಗಾಗಿ ಇಲ್ಲಿ ಚರ್ಚೆಯಾಗುವ ವಿಷಯಗಳೆಲ್ಲವೂ ಮೀಡಿಯಾ ಸಂಬಂಧಿಯಾಗೇ ಇರಬೇಕು ಎಂಬುದು ನಮಗೆ ನಾವೇ ವಿಧಿಸಿಕೊಂಡ ಕಟ್ಟಳೆ. ಡಾ.ಎಂ.ಚಿದಾನಂದಮೂರ್ತಿಯವರ ಓದುಗರ ಪತ್ರದ ಕುರಿತ ಆಕ್ಷೇಪಣೆಯೂ ಸಹ ಈ ಮೀಡಿಯಾ ಪರಿಧಿಯೊಳಗೇ ನಾವು ಬರೆದ ಪ್ರತಿಕ್ರಿಯೆಯಾಗಿತ್ತು. ಚಿದಾನಂದಮೂರ್ತಿಯಂಥವರು ಏನನ್ನು ಬರೆದರೂ ಅವರ ಘನತೆ, ಗೌರವದ ಕಾರಣಕ್ಕಾಗಿ ಪತ್ರಿಕೆಗಳು ಪ್ರಕಟಿಸಿಬಿಡುವ ಸಾಧ್ಯತೆಗಳಿರುತ್ತದೆ. ಗೋರಿಪಾಳ್ಯದ ಕುರಿತ ವರ್ಣನೆ ಯಾವುದೇ ಪತ್ರಿಕೆಯಲ್ಲೂ ಪ್ರಕಟಣೆಗೆ ಯೋಗ್ಯವಾಗಿರಲಿಲ್ಲ ಎಂಬುದು ನಮ್ಮ ನಿಲುವು. ಆದರೆ ಚಿದಾನಂದಮೂರ್ತಿಯವರು ಪ್ರಸ್ತಾಪಿಸಿದ ಮತಾಂತರ ಮತ್ತು ಗೋಹತ್ಯಾನಿಷೇಧದ ಮೂಲ ವಿಷಯವನ್ನು ನೀವು ಚರ್ಚೆಗಿಡಬೇಕಿತ್ತು ಎಂಬುದು ಹಲವರ ಒತ್ತಾಯವಾಗಿತ್ತು. ಹೀಗಾಗಿ ಆ ಒತ್ತಾಯಗಳಿಗೆ ಉತ್ತರರೂಪವಾಗಿ ನೈಜ ಹಿಂದುತ್ವವಾದಿಗಳು, ಹುಸಿ ಹಿಂದುತ್ವವಾದಿಗಳು ಎಂಬ ಲೇಖನ ಪ್ರಕಟಿಸಿದ್ದೆವು.
ಆ ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಬ್ಲಾಗ್‌ನಲ್ಲೂ, ಫೇಸ್‌ಬುಕ್‌ನಲ್ಲೂ ಬಿಸಿಬಿಸಿಯಾದ ವಾಗ್ವಾದ ನಡೆದಿದೆ. ಕೆಲವರಿಗೆ ನಾವು ಬಳಸಿದ ನೈಜ, ಹುಸಿ ಹಿಂದುತ್ವವಾದ ಎಂಬ ಪ್ರಯೋಗವೇ ಅಚ್ಚರಿ ಹುಟ್ಟಿಸಿದೆ. ಕೆಲವರು ಅಕಾರಣವಾಗಿ ಗೊಂದಲ ಸೃಷ್ಟಿಸಿಕೊಂಡಿದ್ದಾರೆ. ಮತ್ತೆ ಕೆಲವರು ನೀವು ಎಷ್ಟು ಧರ್ಮಗ್ರಂಥಗಳನ್ನು ಓದಿದ್ದೀರಿ ಎಂದು ಸವಾಲು ಒಡ್ಡುವ ಧಾಟಿಯಲ್ಲಿ ಮಾತನಾಡಿದ್ದಾರೆ. ವಿವೇಕಾನಂದರು ವಿಶ್ವವೇದಿಕೆಯಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮ ಯಾವುದು ಎನ್ನುವುದರ ಕುರಿತು ಕೆಲವರಿಗೆ ಸ್ಪಷ್ಟ ಕಲ್ಪನೆಗಳು ಇದ್ದಂತಿಲ್ಲ.
ಚರ್ಚೆ ಹೀಗೆ ಅಪೂರ್ಣವಾಗುವುದು ಬೇಡ ಎಂಬುದು ನಮ್ಮ ನಿಲುವು. ಹಾಗಂತ ನಾವಾಗಲಿ ಇಲ್ಲಿ ಪ್ರತಿಕ್ರಿಯಿಸಿದವರಾಗಲಿ ನಮಗನ್ನಿಸಿದ್ದನ್ನು ಬರೆದು ಅಂತಿಮ ಜಡ್ಜ್‌ಮೆಂಟ್ ಕೊಡುವುದೂ ಸರಿಯಲ್ಲ. ಹೀಗಾಗಿ ಈ ಚರ್ಚೆಯನ್ನು ತಾರ್ಕಿಕವಾಗಿ ಕೊನೆಗೊಳಿಸಲು ನಾವು ಸ್ವಾಮಿ ವಿವೇಕಾನಂದರ ಮೊರೆ ಹೋಗುವುದೇ ವಾಸಿ ಎಂದುಕೊಂಡಿದ್ದೇವೆ.
ಸ್ವಾಮಿ ವಿವೇಕಾನಂದರು ವೇದಾಂತವನ್ನು ಒಪ್ಪಿ ಅನುಸರಿಸಿದವರು. ವೇದಾಂತಕ್ಕೆ ಮಾತ್ರ ವಿಶ್ವಧರ್ಮವಾಗುವ ಹಕ್ಕಿದೆ ಎಂದು ವಿವೇಕಾನಂದರು ಬಲವಾಗಿ ನಂಬಿದ್ದರು. ವೇದಾಂತ ವ್ಯಕ್ತಿಯನ್ನು ಬೋಧಿಸುವುದಿಲ್ಲ, ತತ್ವವನ್ನು ಬೋಧಿಸುತ್ತದೆ. ವ್ಯಕ್ತಿಯ ಮೇಲೆ ನಿಂತ ಧರ್ಮಕ್ಕೆ ತತ್ವದ ಮೇಲೆ ನಿಂತ ಧರ್ಮ ಸಾಟಿಯಾಗಲಾರದು ಎಂದು ಅವರು ಹೇಳುತ್ತಿದ್ದರು. ಆದರೆ ಪ್ರತಿಯೊಬ್ಬರೂ ಒಂದೇ ಧರ್ಮಕ್ಕೆ ಸೇರಿ, ಒಂದೇ ಮಾರ್ಗವನ್ನು ಅನುಸರಿಸುವ ದುರ್ದಿನ ಪ್ರಪಂಚಕ್ಕೆ ಬರದಿರಲಿ ಎಂದು ವಿವೇಕಾನಂದರು ಹೇಳಿದ್ದರು. ಹಾಗೇನಾದರೂ ಆದಲ್ಲಿ ಧರ್ಮ ಮತ್ತು ಅಧ್ಯಾತ್ಮಿಕ ಭಾವನೆ ನಾಶವಾಗುವುದು. ವೈವಿಧ್ಯವೇ ಜೀವನದ ರಹಸ್ಯ, ಇದು ಪೂರ್ಣ ನಾಶವಾದರೆ ಸೃಷ್ಟಿಯೇ ನಾಶವಾಗುವುದು ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು.
ವಿವೇಕಾನಂದರು ವೇದಾಂತಕ್ಕೆ ವಿಶ್ವಧರ್ಮವಾಗುವ ಹಕ್ಕಿದೆ ಎಂದು ಹೇಳುತ್ತಲೇ, ಭಾರತದಲ್ಲಿ ಅನುಷ್ಠಾನದಲ್ಲಿದ್ದ ಹಿಂದೂ ಧರ್ಮದ ಹುಳುಕುಗಳ ಕುರಿತು ಚಿಂತಿತರಾಗಿದ್ದರು. ಆ ಹುಳುಕುಗಳು ಇಂದಿಗೂ ಬೇರೆ ಬೇರೆ ಸ್ವರೂಪಗಳಲ್ಲಿ ಮುಂದುವರೆದುಕೊಂಡು ಬಂದಿದೆ ಎಂಬುದು ನೋವಿನ ಸಂಗತಿ. ದೀನದರಿದ್ರರ ಉದ್ಧಾರವಾಗಬೇಕು ಎಂಬುದು ವಿವೇಕಾನಂದರ ತೀವ್ರ ತುಡಿತವಾಗಿತ್ತು. ಈ ಉದ್ಧಾರವು ಗುಡಿ, ಚರ್ಚು, ಮಸೀದಿಗಳಿಂದ ಆಗದು ಎಂಬುದನ್ನು ಅವರು ಅಂದೇ ಸಾರಿದ್ದರು. ಪುರೋಹಿತರು, ಪಾದ್ರಿಗಳು, ಮುಲ್ಲಾಗಳಿಂದ ಎಲ್ಲ ಧರ್ಮಗಳು ಬಿಡುಗಡೆಯಾಗಬೇಕು ಎಂದು ಅವರು ಬಯಸಿದ್ದರು. ಇದನ್ನೇ ಜಡಗೊಂಡ ಧರ್ಮಗಳು ಎಂದು ನಾವು ಹೇಳಿದ್ದು. ಈ ಕಾರಣಕ್ಕಾಗಿಯೇ ಧರ್ಮಗಳು ಪರಿಷ್ಕಾರಗೊಳ್ಳಬೇಕು ಎಂದು ನಾವು ಬರೆದಿದ್ದೆವು.
ಯಾವ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ ಎಂಬ ಕ್ಲೀಶೆಯ ವಾಕ್ಯವೊಂದನ್ನು ನಾವು ಆಗಾಗ ಹೇಳುತ್ತಿರುತ್ತೇವೆ. ಆದರೆ ಅದು ಸಂಪೂರ್ಣ ಸತ್ಯವಲ್ಲ. ಧರ್ಮಗಳು ಬೆಳೆಯುವಾಗ ಅನುಸರಿಸಿದ ಮಾರ್ಗಗಳನ್ನು ಗಮನಿಸಿದರೆ ಇವು ಧರ್ಮಗಳೋ ಅಧರ್ಮಗಳೋ ಎನಿಸುತ್ತದೆ. ವಿವೇಕಾನಂದರು ಈ ಕುರಿತು ಖಚಿತವಾದ ಅಭಿಪ್ರಾಯಗಳನ್ನು ಹೊಂದಿದ್ದರು. ಇಸ್ಲಾಂ ಹಾಗು ಕ್ರಿಶ್ಚಿಯನ್ ಧರ್ಮಗಳು ಹೇಗೆ ಬೆಳೆದವು ಎಂಬುದರ ಕುರಿತು ಅವರು ಸ್ಪಷ್ಟವಾಗಿ, ಕಟುವಾಗಿ ಹೇಳಿದ್ದಾರೆ. ನಮ್ಮ ಧರ್ಮಗ್ರಂಥಗಳು ಪ್ರತ್ಯಕ್ಷವಾಗಲ್ಲದಿದ್ದರೂ ಪರೋಕ್ಷವಾಗಿ ಹಿಂಸೆಯನ್ನು ಪ್ರಚೋದಿಸುತ್ತಲೇ ಬಂದಿವೆ. ಈ ಕಾರಣಗಳಿಂದಲೇ ಬೈಬಲ್, ಕುರಾನ್, ಗೀತೆಗಳು ಇಲ್ಲದ ಕಡೆಗೆ ಮಾನವ ವರ್ಗವನ್ನು ಕೊಂಡೊಯ್ಯಬೇಕಿದೆ ಎಂದು ವಿವೇಕಾನಂದರು ಹೇಳಿದ್ದರು. ಈ ಕಾರಣದಿಂದಲೇ ಚಿಕಾಗೋದಲ್ಲಿ ಅವರು ‘ಸ್ವಮತಾಭಿಮಾನ, ಅನ್ಯಮತದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನ ಈ ಸುಂದರ ಜಗತ್ತನ್ನು ಬಹುಕಾಲದಿಂದ ಆವರಿಸಿಕೊಂಡಿರುವುವು. ಇವು ಜಗತ್ತನ್ನೆಲ್ಲ ಹಿಂಸೆಯಿಂದ ತುಂಬಿಸಿರುವುವು. ಹಲವು ವೇಳೆ ನರರಕ್ತವನ್ನು ತೋಯಿಸಿರುವುವು. ಸಂಸ್ಕೃತಿಯನ್ನು ನಾಶ ಮಾಡಿರುವುವು. ಹಲವು ದೇಶಗಳನ್ನು ನಿರಾಶೆಯ ಕೂಪಕ್ಕೆ ತಳ್ಳಿರುವುವು. ಸಂಸ್ಕೃತಿಯನ್ನು ನಾಶ ಮಾಡಿರುವುವು. ಇಂಥ ಉಗ್ರ ಧಮಾಂಧತೆಯ ದೈತ್ಯರಿಲ್ಲದೇ ಇದ್ದರೆ ಮಾನವ ಜನಾಂಗ ಇಂದಿಗಿಂತಲೂ ಎಷ್ಟೋ ಮುಂದುವರೆದು ಹೋಗಬೇಕಾಗಿತ್ತು. ಎಂದು ಹೇಳಿದ್ದರು.
ಎಲ್ಲ ಧರ್ಮಗಳ ಕುರಿತೂ ವಿವೇಕಾನಂದರು ಮಾತನಾಡಿದ್ದಾರೆ. ಮತಾಂತರ, ಆಹಾರ ಪದ್ಧತಿ, ಅಸ್ಪೃಶ್ಯತೆ, ಶೋಷಣೆ, ಮೂಢನಂಬಿಕೆ, ಭಾಷೆ-ಕಲೆ, ದುರ್ಬಲರ ಅಭಿವೃದ್ಧಿ, ಮೀಸಲಾತಿ ಇತ್ಯಾದಿ ಎಲ್ಲ ವಿಷಯಗಳ ಕುರಿತೂ ತಮ್ಮ ಸ್ಪಷ್ಟ ನಿಲುವುಗಳನ್ನು ಮಂಡಿಸಿದ್ದಾರೆ. ವಿವೇಕಾನಂದರ ಈ ಎಲ್ಲ ವಿಚಾರಗಳನ್ನು ಇನ್ನು ಐದಾರು ಪೋಸ್ಟ್‌ಗಳಲ್ಲಿ ಮಂಡಿಸುತ್ತ ಹೋಗುತ್ತೇವೆ. ಅವು ಎಲ್ಲರಿಗೂ, ಎಲ್ಲ ವಿವಾದಗಳಿಗೂ ಉತ್ತರವಾಗಬಹುದು ಎಂಬುದು ನಮ್ಮ ನಂಬಿಕೆ.
ದಯಮಾಡಿ ಕೆಲವರಲ್ಲಿ ಒಂದು ಮನವಿ. ವಿವೇಕಾನಂದರನ್ನೂ ನಿಂದಿಸುವ ಕೆಲಸವನ್ನು ಯಾರೂ ಮಾಡಬೇಡಿ. ಈಗಾಗಲೇ ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಅಂಥವರನ್ನು ನಿಂದಿಸಿಯಾಗಿದೆ. ವಿವೇಕಾನಂದರ ಕುರಿತೂ ಇಂಥ ಮಾತುಗಳು ಬೇಡ. ನಿಜ, ವಿವೇಕಾನಂದರ ನುಡಿಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಆದರೆ ಅದು ಅನಿವಾರ್ಯ. ಮಹಾತ್ಮರ ನುಡಿಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ನಮ್ಮೆಲ್ಲರಲ್ಲೂ ಬರಲಿ.
ಅಂದಹಾಗೆ ಮುಂದೆ ಪ್ರಕಟವಾಗಲಿರುವ ವಿವೇಕಾನಂದರ ಎಲ್ಲ ಮಾತುಗಳನ್ನು ಮೈಸೂರಿನ ಶ್ರೀರಾಮಕೃಷ್ಣಾಶ್ರಮ ಪ್ರಕಟಿಸಿರುವ ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿಯಿಂದ ಆಯ್ದುಕೊಳ್ಳಲಿದ್ದೇವೆ. ಒಟ್ಟು ಹತ್ತು ಸಂಪುಟಗಳ ಕೃತಿಶ್ರೇಣಿಯಿದು. ಇಲ್ಲಿ ಉಲ್ಲೇಖಿಸಿದ ಸಾಲುಗಳು ಯಾವ ಸಂಪುಟದ ಯಾವ ಪುಟದಿಂದ ಆಯ್ದುಕೊಂಡಿದ್ದೇವೆ ಎಂಬುದನ್ನು ದಾಖಲಿಸುತ್ತೇವೆ. ಕುತೂಹಲವಿದ್ದವರು ಪರಿಶೀಲಿಸಬಹುದು.
ವಿವೇಕಾನಂದರನ್ನು ಓದುವ ಮನಸ್ಸುಗಳೆಲ್ಲ ತಿಳಿಯಾಗಲಿ, ಇದು ನಮ್ಮ ಬಯಕೆ ಮತ್ತು ಸಂಕಲ್ಪ.
发表评论