ರಾತ್ರಿ ಮೊದಲನೇ ಯಾಮದಲ್ಲಿ ಅಂದರೆ ಸಂಜೆ ೬ರಿಂದ ೯ರವರೆಗೆ ಸಂಭೋಗ ನಡೆಸಿದರೆ, ಅದೃಷ್ಟಹೀನರು, ಅಲ್ಪಾಯುಷಿಗಳು, ದುಷ್ಟರು, ತಾಮಸ ಗುಣವುಳ್ಳವರು ಜನಿಸುವರು.
ಎರಡನೇ ಯಾಮದ ಸಂಭೋಗದಿಂದ ಅಂದರೆ ರಾತ್ರಿ ೯ರಿಂದ ೧೨ರವರೆಗಿನ ಸಂಭೋಗದಿಂದ ಮಧ್ಯಮ ಆಯುಷ್ಯವುಳ್ಳವರು, ದರಿದ್ರರು, ಅನಾರೋಗ್ಯದಿಂದ ನರಳುವವರು, ಮತಿಹೀನರು, ದುರದೃಷ್ಟವಂತರು ಜನಿಸುವರು.
ಮೂರನೇ ಯಾಮದ ಸಂಭೋಗದಿಂದ ಅಂದರೆ ರಾತ್ರಿ ೧೨ರಿಂದ ೩ ಗಂಟೆಯವರೆಗಿನ ಸಂಭೋಗದಿಂದ ಪೂರ್ಣ ಆಯುಷ್ಯವಂತರು, ಧರ್ಮನಿಷ್ಠರು, ಐಶ್ವರ್ಯವಂತರು, ವಿವೇಕಶಾಲಿಗಳು, ರೂಪವಂತರು, ರಜೋಗುಣ-ಸತ್ಯಗುಣಪ್ರಧಾನರು ಜನಿಸುವರು.
ನಾಲ್ಕನೇ ಯಾಮದ ಸಂಭೋಗದಿಂದ ಅಂದರೆ ರಾತ್ರಿ ೩ರಿಂದ ೬ ಗಂಟೆಯವರೆಗಿನ ಸಂಭೋಗದಿಂದ ವಿದ್ಯಾವಂತರು, ಶಾಂತಸ್ವಭಾವದವರು, ಧೈರ್ಯ ಸಾಮರ್ಥ್ಯವುಳ್ಳವರು, ಅದೃಷ್ಟಶಾಲಿಗಳು, ವೈದಿಕ ಜ್ಞಾನವುಳ್ಳವರು, ವೇದಪಾರಂಗತರು, ಐಶ್ವರ್ಯವಂತರು, ಸತ್ವಗುಣ ಪ್ರಧಾನರು ಜನಿಸುವರು.
ಒಳ್ಳೆ ಮಕ್ಕಳು ಹುಟ್ಟಬೇಕೆಂದರೆ ಸೋಮವಾರ, ಬುಧವಾರ, ಗುರುವಾರ, ಶುಕ್ರವಾರಗಳಂದೇ ಸಂಭೋಗ ನಡೆಸಬೇಕು.
ಸಂಜೆ ೬ ಗಂಟೆಯಿಂದ ರಾತ್ರಿ ೧೨ ಗಂಟೆಯವರೆಗೆ ದಂಪತಿಗಳು ಎಷ್ಟೇ ಮೂಡ್ ಬಂದರೂ ಸೇರಲೇಕೂಡದು. ಆಮೇಲೆ ನೋಡಿ, ಪ್ರಶಸ್ತ ಮುಹೂರ್ತ. ಭಾನುವಾರ, ಮಂಗಳವಾರ, ಶನಿವಾರಗಳು ಪೂರ್ಣ ರಜಾಕಾಲ.
ಇದೆಲ್ಲವನ್ನು ಹೇಳುತ್ತಾ ಇರುವುದು ಇವತ್ತಿನ ಕನ್ನಡಪ್ರಭ. ಆ ಪತ್ರಿಕೆಯ ಭವಿಷ್ಯ ಎಂಬ ಸಪ್ಲಿಮೆಂಟು ಇಂಥ ಬೋಧನೆಗಳನ್ನು ಉಣಬಡಿಸುತ್ತಿದೆ. ವೈದಿಕ ಸಂಸ್ಕೃತಿಯಲ್ಲಿ ದಾಂಪತ್ಯ ರಹಸ್ಯ ಎಂಬುದು ಲೇಖನದ ಶೀರ್ಷಿಕೆ. ಬರೆದವರು ಕೆ.ಎನ್.ಸಂಜೀವಮೂರ್ತಿ ಎಂಬ ಮಹಾನುಭಾವರು.
ಇದು ಎಷ್ಟು ಅಮೂಲ್ಯ ದಾಖಲೆಯೆಂದರೆ ಹೊಸದಾಗಿ ಮದುವೆಯಾದವರಿಗೆ ಸಾಕ್ಷಾತ್ ಧರ್ಮಗ್ರಂಥವಿದ್ದಂತೆ. ದಂಪತಿಗಳು ಇದನ್ನು ಕೋಷ್ಟಕ ರೂಪದಲ್ಲಿ ತಯಾರು ಮಾಡಿ ಮಲಗುವ ಕೋಣೆಯಲ್ಲಿ ಅಂಟಿಸಿಕೊಳ್ಳುವುದು ಒಳ್ಳೆಯದು. ಒಂದು ಸಾಫ್ಟ್‌ವೇರ್ ತಯಾರಿಸಿ ಕಂಪ್ಯೂಟರ್‌ನಲ್ಲಿ ಹೂಡಿ ಸುಮ್ನೆ ಟೈಮ್ ಎಂಟರ್ ಮಾಡಿದರೆ ಹುಟ್ಟು ಮಗು ಎಂಥದ್ದಾಗುತ್ತದೆ ಎಂಬುದನ್ನು ಕಂಡುಹಿಡಿಯುವಂತಾಗಬೇಕು. ನಂತರ ಸಂಭೋಗ ಮಾಡಬೇಕೋ ಬೇಡವೋ ಎಂದು ಡಿಸೈಡ್ ಮಾಡಿಕೊಳ್ಳಬಹುದು. ಮೊಬೈಲ್‌ಗೆ, ಐಪಾಡ್‌ಗೆ ಫೀಡ್ ಮಾಡಿ, ಪ್ರಶಸ್ತ ಸಮಯಕ್ಕೆ ಅವುಗಳೇ ಸರಿಯಾಗಿ ಅಲಾರಾಂ ಹೊಡೆಯುವಂತೆ ಮಾಡಿದರೂ ನಡೆಯುತ್ತದೆ. ಹೇಗೂ ಇದು ಎಲ್ಲರಿಗೂ ಅನ್ವಯಿಸುವುದರಿಂದ ಕೂಡುವುದಕ್ಕೆ ಪ್ರಶಸ್ತ ಸಮಯ ಬಂದಾಗ ಫೇಸ್‌ಬುಕ್‌ನ ಸ್ಟೇಟಸ್ ಮೇಲೆ ಅದನ್ನು ಅಪ್‌ಲೋಡ್ ಮಾಡಿದರೆ ಎಲ್ಲ ಗೆಳೆಯರಿಗೂ ಅನುಕೂಲವಾಗುತ್ತದೆ. ಬ್ಲಾಗು, ವೆಬ್‌ಸೈಟುಗಳಲ್ಲೂ ಕೂಡಬೇಕಾದ ಸಮಯದ ಒಂದು ಕ್ಯಾಲೆಂಡರ್ ತಯಾರಿಸಿ ಅಂಟಿಸಿಕೊಂಡರೆ ಓದುಗರಿಗೂ ಮಹದುಪಕಾರವಾಗುತ್ತದೆ.
ಯಾರಾದ್ರೂ ಅದೃಷ್ಟಹೀನರೆಂದು ತಮ್ಮನ್ನು ತಾವು ಹಳಿದುಕೊಳ್ಳುತ್ತಿದ್ದರೆ ಅದನ್ನು ನಿಲ್ಲಿಸಿ, ಬದಲಾಗಿ ನಿಮ್ಮ ಅಪ್ಪ-ಅಮ್ಮಂಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಿ. ಸೇರಬಾರದ ಸಮಯಕ್ಕೆ ಸೇರಿದ್ದರಿಂದಲೇ ಅವರು ಅದೃಷ್ಟಹೀನರಾಗಿದ್ದು! ಅದೇ ರೀತಿ ನೀವು ಐಶ್ವರ್ಯವಂತರಾಗಿದ್ದರೆ ಅದಕ್ಕೆ ನೀವು ಕಾರಣರಲ್ಲ, ನಿಮ್ಮ ಅಪ್ಪ-ಅಮ್ಮ ಸೇರಿದ ಘಳಿಗೆ ಕಾರಣ. ಹೀಗಾಗಿ ಅಪ್ಪ-ಅಮ್ಮಂಗೆ ಒಂದು ಥ್ಯಾಂಕ್ಸ್ ಹೇಳಿ.
ಯಾಕೆ ಸಂಜೆಯಿಂದ ರಾತ್ರಿ ೧೨ರವರೆಗೆ ಕೂಡಲೇಬಾರದು. ಕೂಡಿದರೆ ಯಾಕೆ ಅದೃಷ್ಟಹೀನ, ದರಿದ್ರ, ಮತಿಹೀನ, ಅಲ್ಪಾಯುಷಿ, ದುಷ್ಟ, ತಾಮಸ ಗುಣದ ಮಕ್ಕಳು ಹುಟ್ಟುತ್ತಾರೆ? ಏನಾದರೂ ಈ ಲೇಖನದಲ್ಲಿ ವೈಜ್ಞಾನಿಕ ಸಮರ್ಥನೆಗಳು ಇವೆಯಾ?
ಖಂಡಿತಾ ಹಾಗೆಲ್ಲ ಪ್ರಶ್ನೆ ಕೇಳಕೂಡದು. ಇದೆಲ್ಲ ವೈದಿಕ ಸಂಸ್ಕೃತಿಯಲ್ಲಿ ಇದೆಯಂತೆ. ಹಾಗೆ ಇದ್ದ ಮೇಲೆ ಯಾರೂ ಅದನ್ನು ಪ್ರಶ್ನಿಸಕೂಡದು. ಋಷಿಮೂಲ, ನದಿಮೂಲ ಕೇಳಬಾರದು. ಪ್ರಶ್ನಿಸಿದವರ ತಲೆ ಸಾವಿರ ಹೋಳಾಗಿ ಹೋಗಲಿ.
ಇಷ್ಟೆಲ್ಲ ಹೇಳಿದ ಮೇಲೂ ಕೊನೆಗೂ ಉಳಿಯುವ ಪ್ರಶ್ನೆ:
ಪತ್ರಕರ್ತರು ಅಪ್‌ಡೇಟ್ ಆಗೋದು ಅಂದ್ರೆ ಹಿಂಗೇನಾ?
ನೋಡ್ತಾ ಇರಿ, ಏನೇನ್ ಮಾಡ್ತೀವಿ ಅಂತಿದ್ರಲ್ಲ, ಇದನ್ನೇ ಮಾಡೋದಕ್ಕೆ ಹೊರಟಿದ್ದಾ ನೀವು?
ಹೀಗೂ ಉಂಟೆ?


发表评论