ಯಾಕೆ ನಿಮಗೆ ಈ ಜ್ಯೋತಿಷಿಗಳ ಮೇಲೆ ಆ ಪಾಟಿ ಸಿಟ್ಟು ಅಂತಾರೆ ಓದುಗರು. ಸಿಟ್ಟು ಬರದೆ ಇನ್ನೇನಾಗುತ್ತೆ ಹೇಳಿ. ಮೊನ್ನೆ ಜೀ ಟಿವಿಯ ಬ್ರಹ್ಮಾಂಡದ ನರೇಂದ್ರ ಶರ್ಮ ಹೇಳಿದ್ದನ್ನು ಕೇಳಿದರೆ ನಿಜಕ್ಕೂ ಆತಂಕವಾಗುತ್ತದೆ.
ಆತ ಹೇಳುತ್ತಾನೆ: ಇದೇ ವರ್ಷ ಮೇ.೬ನೇ ತಾರೀಖು ಕರೆಕ್ಟಾಗಿ ಜಗನ್ಮಾತೆ ಭೂಲೋಕಕ್ಕೆ ಕಾಲಿಡುತ್ತಾಳೆ. ೧೮ನೇ ತಾರೀಖಿನವರೆಗೆ ಅವಳು ಇಲ್ಲಿರುತ್ತಾಳೆ. ಮಹಿಷಾಸುರನನ್ನು ಸಾಯಿಸಿದ ಮೇಲೆ ಮೊದಲ ಬಾರಿ ಅವಳು ಬರ‍್ತಾ ಇದ್ದಾಳೆ. ನಿಮಗೆ ಯಾರಿಗಾದರೂ ಇದರ ಪರಿವೆ ಇದೆಯಾ? ಅವಳನ್ನು ಹೇಗೆ ರಿಸೀವ್ ಮಾಡಿಕೊಳ್ಳೋದು ಅನ್ನುವುದರ ಪರಿಜ್ಞಾನ ಇದೆಯಾ? ಹೋಗಲಿ, ಎಷ್ಟು ಜನರಿಗೆ ಅವಳು ಬರ‍್ತಾ ಇದ್ದಾಳೆ ಅಂತ ಗೊತ್ತಿದೆ ಹೇಳಿ?
ಪ್ರಳಯ ಆಗೋದು ಖಡಾಖಂಡಿತ. ನಾನು ಹೇಳಿಬಿಟ್ಟಿದ್ದೇನೆ, ಬರೆದಿಟ್ಟುಕೊಳ್ಳಿ. ಒಂದು ಪಕ್ಷ ಆಗಲ್ಲ ಅಂದ್ರೂನು ಜಗನ್ಮಾತೆ ಮಾಡುತ್ತಾಳೆ. ಅವಳ ಮಗ ನಾನು. ನನ್ನ ಮಾತು ನಿಜವಾಗಿಸಲಾದರೂ ಮಾಡೇ ಮಾಡುತ್ತಾಳೆ. ನೀವೇನು ಮಾಡಬೇಕು? ನೀವು ನನ್ನನ್ನು ಪೂಜೆ ಮಾಡಬೇಡಿ, ಅವಳನ್ನೇ ಮಾಡಿ. ನೀವು ಏನು ಮಾಡಬೇಕು ಅಂತ ಹೇಳ್ತೀನಿ, ಹೇಳಿದಷ್ಟನ್ನು ಮಾಡಿ.
ಹೀಗೆ ಹೇಳುತ್ತಾನೆ ನರೇಂದ್ರ ಶರ್ಮ. ಆತನ ಪ್ರಕಾರ ಮೇ.೬ನೇ ತಾರೀಖು ಜಗನ್ಮಾತೆ ಕಾಲಿಡೋದೇ ದುರಹಂಕಾರಿಗಳ ನಾಶಕ್ಕಾಗಿ. ಜಗತ್ತಿನ ೬೦೦ ಕೋಟಿಗೂ ಹೆಚ್ಚು ಜನರ ಪೈಕಿ ಎಲ್ಲರೂ ಸತ್ತು ಉಳಿಯೋದು ೩೩ ಕೋಟಿ ೧ ಲಕ್ಷ.
ತನ್ನ ಶಿಷ್ಯ ನರೇಂದ್ರ ಶರ್ಮ ಹೇಳಿದ್ದಾನೆ ಅನ್ನೋ ಕಾರಣಕ್ಕಾದರೂ ಜಗನ್ಮಾತೆ ಪ್ರಳಯ ಮಾಡುತ್ತಾಳಂತೆ. ೬೦೦ ಕೋಟಿ ಜನರ ಬಾಳನ್ನು ತನ್ನ ಒಬ್ಬ ಭಕ್ತನ ಮಾತು ಉಳಿಸಲು ನಾಶ ಮಾಡುತ್ತಾಳಂತೆ ಜಗನ್ಮಾತೆ! ಇಂಥ ಮಾತುಗಳನ್ನು ಆತ ಖಾಸಗಿಯಾಗಿ ತನ್ನ ಮನೆಯ ಕೋಣೆಯಲ್ಲಿ ಕುಳಿತು ಹೇಳುತ್ತಿಲ್ಲ. ಲಕ್ಷಾಂತರ ಜನರು ನೋಡುವ ಒಂದು ಚಾನಲ್‌ನ ನೇರಪ್ರಸಾರದಲ್ಲಿ ಹೇಳುತ್ತಾನೆ.
ಒಂದಂತೂ ಸ್ಪಷ್ಟ. ಈತ ಜಗನ್ಮಾತೆಯ ಹೆಸರಲ್ಲಿ ಒಂದು ದೊಡ್ಡ ಸ್ಕೀಮ್ ರೆಡಿ ಮಾಡಿಟ್ಟಿದ್ದಾನೆ. ಸಿಟ್ಟು ಮಾಡಿಕೊಂಡಿರುವ ಜಗನ್ಮಾತೆಯ ಮನವೊಲಿಸಲು ನಾನು ಎಂಥದೋ ಒಂದು ಯಾಗ ನಡೆಸುತ್ತೇನೆ ಎಂದು ಘೋಷಣೆ ಮಾಡುತ್ತಾನೆ. ಇದರಲ್ಲಿ ಪಾಲ್ಗೊಳ್ಳುವವರು ಇಷ್ಟು ಹಣ ಕೊಡಿ ಎಂದು ತಾಕೀತು ಮಾಡುತ್ತಾನೆ. ಕೋಟಿಗಟ್ಟಲೆ ಹಣ ಹರಿದು ಬರುತ್ತದೆ. ಜಗನ್ಮಾತೆಯನ್ನು ಒಲಿಸಿ ಪ್ರಳಯ ತಪ್ಪಿಸಿದ್ದೇನೆ ಎಂದು ಅಂತಿಮವಾಗಿ ಈತ ತಿಪ್ಪೆ ಸಾರಿಸುತ್ತಾನೆ.
ನರೇಂದ್ರ ಸ್ವಾಮಿಯ ಕುರಿತಾಗಿ ಇಷ್ಟೆಲ್ಲ ಚರ್ಚೆ ನಡೆಯುತ್ತಿದೆಯಲ್ಲ, ಏನಾದರೂ ಆತ ತಿದ್ದಿಕೊಳ್ಳಲು ಯತ್ನಿಸಿದ್ದಾನೆಯೇ? ಖಂಡಿತಾ ಇಲ್ಲ. ನೋಡ್ರೀ ಲಕ್ಷ್ಮಿ ವಾಸ ಮಾಡೋದೇ ಹೆಂಗಸರ ಜಡೆಯ ಕುಚ್ಚಿನಲ್ಲಿ. ಈಗಿನವು ಮುಂಡೇವು ಗಂಡಸರ ಹಾಗೆ ಬಾಫ್ ಕಟ್ ಮಾಡಿಸ್ಕೋತಾವೆ, ಜಡೆ ಇಲ್ಲದ ಮೇಲೆ ಲಕ್ಷ್ಮಿ ಎಲ್ಲಿರುತ್ತಾಳೆ ಅನ್ನುತ್ತಾನೆ. ದುರಹಂಕಾರ ಅಂದ್ರೆ ರಾಹು. ಹೆಣ್ಣುಮಕ್ಕಳ ಪೈಕಿ ಇದು ಇರೋದು ಹೊರಗೆ ಕೆಲಸಕ್ಕೆ ಹೋಗೋರಿಗೆ. ಅದರಲ್ಲೂ ಅದೇನೋ ಸಾಫ್ಟ್‌ವೇರು, ಕಾಲ್‌ಸೆಂಟರಿಗೆ ಹೋಗ್ತಾರಲ್ಲ ಅವರಿಗೆ ಅನ್ನುತ್ತಾನೆ.
ಯಾಕೆ ಇದನ್ನು ಪ್ರಜ್ಞಾವಂತರು ಸಹಿಸಿಕೊಳ್ಳಬೇಕು? ನಿಜ, ಆತ ಏನು ಬೇಕೋ ಹೇಳಿಕೊಳ್ಳಲಿ ಬಿಡಿ. ನಾವು ನೋಡದಿದ್ದರೆ ಆಯ್ತು ಎಂದು ಹೇಳಿಕೊಳ್ಳಬಹುದು. ಆದರೆ ಆತನ ಮಾತು ಕೇಳಿ ಜನ ದೀಪ ಹೊತ್ತುಕೊಂಡು ಬಂದಿದ್ದನ್ನು ಗಮನಿಸಿದರೆ, ಈತ ಮುಂದೇನೇನೇನು ಮಾಡಬಹುದು ಎಂಬ ಆತಂಕವೂ ಮೂಡುತ್ತದೆ. ಸೂಪರ್ ಮೂನ್ ಬಗ್ಗೆ ಈತನೂ ಸೇರಿದಂತೆ ಟಿವಿ ಚಾನಲ್‌ಗಳ ಜ್ಯೋತಿಷಿಗಳು ಎಷ್ಟು ಭೀತಿ ಮೂಡಿಸಿದ್ದರೆಂದರೆ ಕರಾವಳಿಯ ಜನರು ಮನೆ ಮಠ ಬಿಟ್ಟು ಹೊರಟುಬಿಟ್ಟಿದ್ದರು. ಅಲ್ಲೇ ಉಳಿದ ಜನರೂ ಆ ದಿನವನ್ನು ಭಯದಿಂದಲೇ ಕಳೆಯುವಂತಾಗಿತ್ತು.
ಯಾಕೆ ನಮ್ಮ ಟಿವಿ ಚಾನಲ್‌ಗಳು ಇದನ್ನೆಲ್ಲ ಅರ್ಥ ಮಾಡಿಕೊಳ್ಳುತ್ತಿಲ್ಲ?
ಇದು ಬರೀ ಜೀ ಟಿವಿಯ ಕಥೆ ಅಲ್ಲ. ಮೊನ್ನೆ ಸುವರ್ಣ ನ್ಯೂಸ್‌ನಲ್ಲಿ ರಮ್ಯಾ-ಗಣೇಶ್ ನಡುವಿನ ಜಗಳ ಕುರಿತೂ ಇಬ್ಬರು ಜ್ಯೋತಿಷಿಗಳನ್ನು ಕರೆದು ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದ ಜಾಹೀರಾತು ಬೇರೆ ಕನ್ನಡಪ್ರಭದ ಮುಖಪುಟದಲ್ಲಿ ಪ್ರಕಟಗೊಂಡಿತ್ತು. ರಮ್ಯಾ ಹಾಗು ಗಣೇಶ್ ಅವರ ಜಾತಕ, ಗ್ರಹಗತಿಗಳನ್ನು ಹೊಂದಿಸಿ ಒಬ್ಬ ಜ್ಯೋತಿಷಿ ಹೇಳಿದ್ದೇನು ಗೊತ್ತೆ? ಈ ಜಗಳ ಸದ್ಯಕ್ಕೆ ಬಗೆಹರಿಯುವುದಿಲ್ಲ! ಮತ್ತೊಬ್ಬ ಇಬ್ಬರ ಜಗಳದ ನಡುವೆ ಪರ್ವತ ಅಡ್ಡ ಬಂದಿದೆ. ಆ ಪರ್ವತವೇ ಅಂಬರೀಷ್. ಹೀಗಾಗಿ ಇದು ಇತ್ಯರ್ಥವಾಗುವುದಿಲ್ಲ ಎಂದು ಅಪ್ಪಣೆ ಕೊಡಿಸಿದ.
ಹೀಗಾದರೆ ಹೇಗೆ?
ಇವುಗಳ ವಿರುದ್ಧ ಒಂದು ಆಂದೋಲನವೇ ನಡೆಯಬೇಕೆನಿಸುವುದಿಲ್ಲವೇ? ಈ ಜ್ಯೋತಿಷಿಗಳ ಆಟಾಟೋಪಗಳ ನಿಯಂತ್ರಣಕ್ಕೆ ಏನು ಮಾಡಬಹುದು? ನಾವು ಪ್ರಜ್ಞಾವಂತ ನಾಗರಿಕರಾಗಿ ಏನು ಮಾಡಲು ಸಾಧ್ಯ? ಎಲ್ಲರೂ ಸೇರಿ ನಮ್ಮ ಟಿವಿ ಚಾನಲ್‌ಗಳ ಮೇಲೆ ಒತ್ತಡ ಹೇರಿದರೆ ಇಂಥ ಕಾರ್ಯಕ್ರಮಗಳನ್ನು ನಿಲ್ಲಿಸಬಹುದಲ್ಲವೇ?
ಈ ಒತ್ತಡವನ್ನು ನಿರ್ಮಿಸುವುದು ಹೇಗೆ?
ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಹೇಳಿ. ಈ ಕುರಿತು ನಾವೂ ಯೋಚಿಸಿದ್ದೇವೆ. ನಿಮ್ಮ ಸಲಹೆಗಳನ್ನೂ ಸೇರಿಸಿ ಸಾಧ್ಯವಿರುವ ಒಂದಷ್ಟು ಮಾರ್ಗೋಪಾಯಗಳನ್ನು ಪಟ್ಟಿ ಮಾಡೋಣ. ನಂತರ ಅವುಗಳ ಕುರಿತು ಗಂಭೀರ ಪ್ರಯತ್ನ ಆರಂಭಿಸೋಣ. ನಿಮ್ಮ ಪಾಲ್ಗೊಳ್ಳುವಿಕೆಯನ್ನು ನಿರೀಕ್ಷಿಸುತ್ತೇವೆ.
发表评论