ನೋಡ್ತಾ ಇರಿ, ಏನೇನ್ ಮಾಡ್ತೀವಿ ಅಂತಿದೆ ಕನ್ನಡಪ್ರಭ. ಅದು ಈಗ ಸಿಕ್ಕಾಪಟ್ಟೆ ಪಾಪ್ಯುಲರ್ ಸ್ಲೋಗನ್ ಆಗಿಹೋಗಿದೆ. ಈ ವಾಕ್ಯವನ್ನು ಅವರವರ ಭಕುತಿಗೆ, ಭಾವಕ್ಕೆ ತಕ್ಕಂತೆ ಅರ್ಥೈಸಿಕೊಳ್ಳಬಹುದು. ಕೆಲವರಿಗೆ ಅದು ತುಂಬಾ ಸೀರಿಯಸ್ಸಾದ ಸ್ಟೇಟ್‌ಮೆಂಟು, ಹಲವರಿಗೆ ತಮಾಶೆಯ, ಗೇಲಿಯ ವಿಷಯ. ಮತ್ತೆ ಕೆಲವರಿಗೆ ಧಮಕಿಯ ಹಾಗೆ ಕೇಳಿಸುತ್ತಿದ್ದರೆ, ಇನ್ನೂ ಕೆಲವರಿಗೆ ರೋಮಾಂಚನಕಾರಿ ಉದ್ವೇಗವನ್ನು ತಂದುಕೊಟ್ಟಿದೆ.

ಅದು ಸರಿ, ಕನ್ನಡ ಮಾಧ್ಯಮರಂಗ ನಿಜಕ್ಕೂ ಏನೇನ್ ಮಾಡಬೇಕು? ನಾವು, ನೀವು ಸೇರಿ ಒಂದು ಪಟ್ಟಿಯನ್ನು ಮಾಡಿದರೆ, ಇವರೆಲ್ಲಾ ಅದನ್ನು ಒಪ್ಪಿಕೊಳ್ಳುತ್ತಾರಾ? ಎಲ್ಲವನ್ನೂ ಬೇಡ, ಕೆಲವನ್ನಾದರೂ ಒಪ್ಪಿಕೊಳ್ಳುತ್ತಾರಾ?

ನಿಜವಾಗಲೂ ಇರುವ ಸಮಸ್ಯೆ ಉತ್ತರದಾಯಿತ್ವದ್ದು. ಮೀಡಿಯಾಗಳು ಉತ್ತರದಾಯಿಗಳಾಗಿವೆ ಎಂದು ನಿಮಗನ್ನಿಸುತ್ತದೆಯೇ? ಕನಿಷ್ಠ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಚರ್ಚೆಗಳಲ್ಲಿ ಭಾಗವಹಿಸುವವರು, ದೂರವಾಣಿ ಕರೆ ಮಾಡಿ ಮಾತನಾಡುವವರು ಇದ್ದಕ್ಕಿದ್ದಂತೆ ಈ ವಾಹಿನಿಗಳನ್ನೇ ನೇರವಾಗಿ ಪ್ರಶ್ನಿಸುವುದನ್ನು ನಾವು ಆಗಾಗ ನೋಡುತ್ತಾ ಇರುತ್ತೇವೆ.

ಆದರೆ ಪತ್ರಿಕೆಗಳು? ಪತ್ರಿಕೆಗಳು ಎಂದಾದರೂ ಇಂಥ ಓದುಗರ ವಿಮರ್ಶೆಗೆ, ಟೀಕೆಗಳಿಗೆ ಒಡ್ಡಿಕೊಂಡಿದ್ದನ್ನು ಗಮನಿಸಿದ್ದೀರಾ? ಒಡ್ಡಿಕೊಂಡಿದ್ದರೂ ಅದು ತುಂಬಾ ಅಪರೂಪವಲ್ಲವೇ? ಹಾಗೆ ನೋಡಿದರೆ ಅಂತರ್ಜಾಲ ಮಾಧ್ಯಮದಲ್ಲಿ ಓದುಗರಿಗೆ ತಮಗೆ ಸರಿಯಲ್ಲ ಅನ್ನಿಸಿದ್ದನ್ನು ಪ್ರಶ್ನಿಸುವ ಸ್ವಾತಂತ್ರ್ಯವಿರುತ್ತದೆ. ಒಮ್ಮೊಮ್ಮೆ ಈ ಸ್ವಾತಂತ್ರ್ಯ ದುರುಪಯೋಗವಾಗುವದೂ ಉಂಟು. ಆದರೆ ಪ್ರಶ್ನಿಸುವ ಕೆಲಸವಂತೂ ಇಲ್ಲಿ ನಿರಂತರವಾಗಿರುತ್ತದೆ. ಆದರೆ ಪತ್ರಿಕೆಗಳಲ್ಲಿ?

ಹಿಂದೆ ವಡ್ಡರ್ಸೆ ರಘುರಾಮಶೆಟ್ಟರು ಮುಂಗಾರು ಪತ್ರಿಕೆಯನ್ನು ನಡೆಸುತ್ತಿದ್ದಾಗ, ಓದುಗರ ಜತೆ ಮುಖಾಮುಖಿಯಾಗುವ ವಿಶೇಷ ಪ್ರಯೋಗವೊಂದನ್ನು ಮಾಡಿದ್ದರು. ಓದುಗರಿಂದಲೇ ಪ್ರಶ್ನೆಗಳನ್ನು ಆಹ್ವಾನಿಸಿ, ಅವುಗಳಿಗೆ ಉತ್ತರ ಕೊಡುವ ಪರಿಪಾಠವನ್ನು ಆರಂಭಿಸಿದ್ದರು. ಪತ್ರಿಕೆಯ ನೀತಿ-ನಿಲುವು, ಒಪ್ಪು-ತಪ್ಪುಗಳ ಕುರಿತು ಓದುಗರು ನೇರವಾಗಿ ಪ್ರಶ್ನಿಸಬಹುದಿತ್ತು. ಇವುಗಳಿಗೆ ವಡ್ಡರ್ಸೆ ಅವರೇ ಉತ್ತರ ಕೊಡುತ್ತಿದ್ದರು. ಈಗ ಇಂಡಿಯನ್ ಎಕ್ಸ್‌ಪ್ರೆಸ್ ಸೇರಿರುವ ಪ್ರಭು ಚಾವ್ಲಾ ಕೂಡ ಇಂಥ ಒಂದು ಪ್ರಯೋಗವನ್ನು ನಡೆಸುತ್ತಿದ್ದಾರೆ.

ಕನ್ನಡ ಪತ್ರಿಕೆಗಳು ಇಂಥ ಕೆಲಸವನ್ನು ಆರಂಭಿಸಬಹುದಲ್ಲವೇ?

ಓದುಗರ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳಲು ಪ್ರಸರಣಾ ಸಂಖ್ಯೆಯೊಂದೇ ಮಾನದಂಡ ಎಂದು ಬಹಳಷ್ಟು ಮಂದಿ ಪತ್ರಕರ್ತರು ಭಾವಿಸಿದ್ದಾರೆ. ಆದರೆ ಅದು ಅರೆಸತ್ಯ. ಜನರಿಗೆ ಆಪ್ತವಾಗಬಹುದಾದ, ಇಷ್ಟವಾಗಬಹುದಾದ ಪತ್ರಿಕೆಗಳು ಇವತ್ತಿನ ಮಾರುಕಟ್ಟೆ ಪ್ರಪಂಚದಲ್ಲಿ ಸೋತ ಉದಾಹರಣೆಗಳೂ ಇವೆ. ಅದಕ್ಕೆ ಮಾರುಕಟ್ಟೆ ವಿಭಾಗದ ವೈಫಲ್ಯವೂ ಕಾರಣವಾಗಿರಬಹುದು. ನಿಜಕ್ಕೂ ಶ್ರೇಷ್ಠವಲ್ಲದ ಪತ್ರಿಕೆ ಕೇವಲ ಮಾರುಕಟ್ಟೆ ತಂತ್ರದಿಂದಲೇ ಜನರನ್ನು ಅತಿ ಹೆಚ್ಚು ತಲುಪಬಹುದು. ನಮ್ಮ ಪತ್ರಿಕೆಗಳು ಓದುಗರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಇರುವ ಸಾಧ್ಯತೆಯೂ ಇದೆಯಲ್ಲವೆ?

ಒಂದು ಸಣ್ಣ ಉದಾಹರಣೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಪತ್ರಕರ್ತರನ್ನು ಓದುಗರು ಪ್ರಶ್ನಿಸಬೇಕು ಎಂದು ಪ್ರಜಾವಾಣಿ ಸಹಸಂಪಾದಕ ಪದ್ಮರಾಜ ದಂಡಾವತಿ ವಿಶ್ವಕನ್ನಡ ಸಮ್ಮೇಳನದ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. ದಂಡಾವತಿಯವರಿಗೆ ಪತ್ರಿಕೆಗಳ ಬೆಲೆಯ ಕುರಿತೇ ತಕರಾರಿದೆ. ಶ್ರೀಲಂಕಾ, ಪಾಕಿಸ್ತಾನಗಳಲ್ಲಿ ಪತ್ರಿಕೆಗಳನ್ನು ೩೦ ರೂಪಾಯಿ ಕೊಟ್ಟು ಓದುಗರು ಕೊಂಡುಕೊಳ್ಳುತ್ತಾರೆ. ಆದರೆ ಇರುವ ಮೂರು ರೂಪಾಯಿ ಬೆಲೆಯನ್ನೇ ಇಳಿಸಿ ಎನ್ನುತ್ತಾರೆ. ಪತ್ರಿಕೆಯ ಉತ್ಪಾದನಾ ವೆಚ್ಚವನ್ನಾದರೂ ಓದುಗರು ಕೊಡುವಂತಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಇದರಿಂದಾಗಿ ಏನಾಗುತ್ತದೆ ಎಂದು ಯಾರಾದರೂ ಪ್ರಶ್ನಿಸಬಹುದು. ಇದರಿಂದ ಕನಿಷ್ಠ ಮ್ಯಾನೇಜ್‌ಮೆಂಟ್‌ಗಳ ಜಾಹೀರಾತು ದಾಹವಾದರೂ ಕಡಿಮೆಯಾಗಬಹುದು, ಕಾಸಿಗಾಗಿ ಸುದ್ದಿ ತರಹದ ಅನೈತಿಕ ಮಾರ್ಗಗಳಿಗೆ ಪತ್ರಿಕೆಗಳು ಮೊರೆ ಹೋಗುವುದು ತಪ್ಪುತ್ತದೆ ಎಂಬುದು ನಮ್ಮ ಅನಿಸಿಕೆ.

ಆದರೆ ದಂಡಾವತಿಯವರು ಹೇಳುತ್ತಿರುವ ವಿಷಯಗಳ ಕುರಿತು ಎಲ್ಲಿ ಚರ್ಚೆ ನಡೆಯುತ್ತಿದೆ? ಪತ್ರಿಕೆಗಳು ತಮ್ಮ ಉತ್ಪಾದನಾ ವೆಚ್ಚಕ್ಕೆ ಸರಿಯಾಗಿ ಅಂದರೆ ಸುಮಾರು ೧೦ ರೂಪಾಯಿ ಬೆಲೆ ನಿಗದಿಪಡಿಸಿದರೆ ಜನರು ಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸಿಬಿಡುತ್ತಾರೆಯೇ? ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಹಾಲಿನ ದರ ದುಪ್ಪಟ್ಟಾಗಿದೆ, ವಿದ್ಯುತ್ ಬೆಲೆ ಗಗನ ಮುಟ್ಟಿದೆ, ಪೆಟ್ರೋಲ್ ದರ ಕೈಗೆ ನಿಲುಕುತ್ತಿಲ್ಲ. ಹಾಗಂತ ಜನರು ಕಾಫಿ, ಟೀ ಕುಡಿಯುವುದನ್ನು ಬಿಟ್ಟಿದ್ದಾರೆಯೇ? ವಿದ್ಯುತ್ ಉಪಯೋಗ ನಿಲ್ಲಿಸಿದ್ದಾರೆಯೇ? ವಾಹನಗಳನ್ನು ಓಡಿಸುವುದನ್ನು ಬಿಟ್ಟಿದ್ದಾರೆಯೇ? ಹಾಗಿದ್ದ ಮೇಲೆ ಪತ್ರಿಕಾ ಸಂಸ್ಥೆಗಳು ಯಾಕೆ ಬೆಲೆ ಏರಿಸದೆ, ಅಡ್ಡದಾರಿಗಳನ್ನೇ ನೆಚ್ಚಿಕೊಂಡಿವೆ?

ಇಂಥ ಎಲ್ಲ ವಿಷಯಗಳ ಕುರಿತಾಗಿ ಮಾಧ್ಯಮಸಂಸ್ಥೆಗಳು ತಮ್ಮ ಅನ್ನದಾತರಾದ ಓದುಗರೊಂದಿಗೆ ಒಂದು ಅರ್ಥಪೂರ್ಣ ಸಂವಾದ ನಡೆಸಿವೆಯೇ? ಓದುಗರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಯತ್ನಿಸಿವೆಯೇ? ಹೋಗಲಿ, ಪತ್ರಿಕೆಗಳ ಮಾಲಿಕರ ವಿಷಯ ಬೇಡ, ಪತ್ರಕರ್ತರಾದರೂ ಇಂಥ ವಿಷಯಗಳ ಕುರಿತು ಓದುಗರ ಜತೆ ಸಂವಾದ ನಡೆಸಲು ಮುಂದಾಗಬೇಡವೇ?

ರಘುರಾಮಶೆಟ್ಟರು ನಡೆಸಿದ ಪ್ರಯೋಗವನ್ನು ಕನ್ನಡ ಪತ್ರಿಕೆಗಳ ಸಂಪಾದಕರು ಯಾಕೆ ಮಾಡಬಾರದು? ಹೀಗೆ ಓದುಗರಿಗೆ ತಾವು ಉತ್ತರದಾಯಿಗಳು ಎಂದು ಪ್ರಕಟಪಡಿಸುವುದರಿಂದ ಪತ್ರಿಕೆಗಳ ವಿಶ್ವಾಸಾರ್ಹತೆಯೂ ಹೆಚ್ಚಾಗುತ್ತದೆಯಲ್ಲವೆ? ಓದುಗರ ಒಳಗೊಳ್ಳುವಿಕೆಯಿಂದಾಗಿ ಅವರಿಗೂ ಒಂದು ರೀತಿಯ ಕಂಫರ್ಟ್ ದೊರೆಯುತ್ತದಲ್ಲವೇ?

****
ಇಷ್ಟನ್ನು ಹೇಳುತ್ತ, ನಮ್ಮ ಓದುಗರೊಂದಿಗೆ ತಿಂಗಳಿಗೊಮ್ಮೆ ಸಂವಾದ ನಡೆಸುವ ಆಲೋಚನೆಯನ್ನು ಮುಂದಿಡುತ್ತಿದ್ದೇವೆ. ಇದು ಪ್ರಶ್ನೋತ್ತರದ ಮಾದರಿಯಲ್ಲಿರದೆ ಆಪ್ತ ಸಂವಹನದ ಹಾಗಿರಲಿ ಎಂಬುದು ನಮ್ಮ ಬಯಕೆ.

ನಿಮಗೆ ಏನನ್ನಿಸುತ್ತದೋ ಅದನ್ನು ಕೇಳಿ, ಹೇಳಿ. ಉತ್ತರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ.

ಕೆಲವರು ತಮ್ಮ ಕಮೆಂಟ್‌ಗಳಲ್ಲೇ ಪ್ರಶ್ನೆಗಳನ್ನು ಮಾಡಿದ್ದಾರೆ. ಅಪರೂಪಕ್ಕೊಮ್ಮೊಮ್ಮೆ ಉತ್ತರಿಸಲು ಪ್ರಯತ್ನಿಸಿದ್ದೇವೆ. ಆದರೆ ಈ ಕ್ರಿಯೆ ಪ್ರತಿಕ್ರಿಯೆಗಳು ತುಂಬಾ ಸಮಯವನ್ನು ಬೇಡುತ್ತದೆ. ಅಷ್ಟು ಸಮಯ ನಮಗೆ ನಿಜಕ್ಕೂ ಇಲ್ಲ ಎಂದು ವಿನಯದಿಂದ ಹೇಳಬಯಸುತ್ತೇವೆ. ನಿಮ್ಮ ಮಾತುಗಳನ್ನು ಮೇಲ್ ಮಾಡಿದರೆ ಒಳಿತು. ನಿಮ್ಮ ಹೆಸರನ್ನು ಪ್ರಕಟಿಸುವುದು ಬೇಡ ಎಂದರೆ ಪ್ರಕಟಿಸುವುದಿಲ್ಲ.

ನಮಗೆ ಮೀಡಿಯಾಗಳ ಕುರಿತು ಎಲ್ಲವೂ ಗೊತ್ತಿದೆ ಎಂದೇನೂ ಅಲ್ಲ. ನಮಗೆ ಗೊತ್ತಿಲ್ಲದ್ದನ್ನು ನೀವು ಹೇಳಿ, ನಮಗೆ ಗೊತ್ತಿರುವುದನ್ನು ನಾವು ಹೇಳುತ್ತೇವೆ. ಸಂವಾದವನ್ನು ಅರ್ಥಪೂರ್ಣವಾಗಿ ನಡೆಸೋಣ.

ಕೊನೆಕುಟುಕು: ವಿಶ್ವಕನ್ನಡ ಸಮ್ಮೇಳನದ ಸಮೂಹ ಮಾಧ್ಯಮ ಗೋಷ್ಠಿಯಲ್ಲಿ ಕಾಣೆಯಾಗಿದ್ದು ಕನ್ನಡ ಅಂತರ್ಜಾಲ ಮಾಧ್ಯಮ. ಗೋಷ್ಠಿ ಆಯೋಜಿಸಿದವರಿಗೆ ಅಂತರ್ಜಾಲವೂ ಒಂದು ಮಾಧ್ಯಮ ಎಂಬುದು ಗೊತ್ತೇ ಇಲ್ಲವೇನೋ?

0 komentar

Blog Archive