ಪ್ರಿಯ ಸಂಪಾದಕೀಯ,
ವಿಶ್ವ ಕನ್ನಡ ಸಮ್ಮೇಳನದ ಮಾಧ್ಯಮಗೋಷ್ಠಿಯ ಕುರಿತಾಗಿ ಬರೆದು ಕುತೂಹಲ ಮೂಡಿಸಿದ್ದಿರಿ. ಹೀಗಾಗಿ ನಾನೂ ಆಸಕ್ತಿಯಿಂದ ಅಲ್ಲಿಗೆ ಹೋಗಿದ್ದೆ. ತುಂಬಾ ನಿರಾಸೆಯಾಯಿತು. ಮಾಧ್ಯಮರಂಗಕ್ಕೆ ಹೊಸದಿಕ್ಕು ಕೊಡುವ ಮಾತು ಇರಲಿ, ಭಾಷಣಕಾರರೇ ದಿಕ್ಕು ತಪ್ಪಿ ನಿಂತಿದ್ದನ್ನು ಕಂಡೆ.
ಉದ್ಘಾಟಕ ಹುಣಸವಾಡಿ ರಾಜನ್ ಅವರದೇ ಮೊದಲ ಭಾಷಣ. ತುಂಬ ಆಸಕ್ತಿಯಿಂದಲೇ ಅವರು ಗೋಷ್ಠಿಗೆ ಬಂದ ಹಾಗಿತ್ತು. ಆದರೆ ಅವರು ಏನನ್ನು ಹೇಳಬಯಸುತ್ತಿದ್ದಾರೆ ಅನ್ನೋದೇ ಗೊತ್ತಾಗದಷ್ಟು ಅವರ ಭಾಷೆ ಸಂಕೀರ್ಣವಾಗಿತ್ತು. ಇವತ್ತಿನ ಮಾಧ್ಯಮರಂಗದ ಕಾರ‍್ಯನಿರ್ವಹಣೆ ಕುರಿತು ಅವರಿಗೆ ತೀವ್ರವಾದ ಆಕ್ಷೇಪ, ಸಿಟ್ಟು ಇದ್ದಂತಿತ್ತಾದರೂ ಆ ಅಸಮಾಧಾನಗಳಿಗೆ ಮೂರ್ತ ರೂಪ ಕೊಡುವುದರಲ್ಲಿ ಅವರು ವಿಫಲರಾದರು. ಒಂದೊಂದು ಸರ್ತಿ ಅವರು ತಮ್ಮೊಳಗೆ ತಾವು ಮಾತನಾಡಿಕೊಂಡಂತೆ ಅನಿಸುತ್ತಿತ್ತು. ಮೀಡಿಯಾ ಜಗತ್ತಿಗೆ ಜನರೇ ಪಾಠ ಕಲಿಸಬೇಕು ಎಂಬಂಥ ಮಾತುಗಳನ್ನು ಆಡಿದ ರಾಜನ್, ಈ ಸಿಟ್ಟಿಗೆ ಕಾರಣ ಏನು ಎಂಬುದನ್ನು ಬಿಡಿಸಿ ಹೇಳಬೇಕಿತ್ತು.
ಇದ್ದಿದ್ದರಲ್ಲಿ ವಿವೇಕದಿಂದ ಮಾತನಾಡಿದವರು ಪದ್ಮರಾಜ ದಂಡಾವತಿ. ಅವರಿಗೆ ತಾವು ಏನನ್ನು ಮಾತನಾಡುತ್ತಿದ್ದೇನೆ ಎಂಬುದರ ಕುರಿತು ಸ್ಪಷ್ಟತೆ ಇತ್ತು. ಆದರೆ ಎಲ್ಲೋ ಒಂದೆಡೆ ಅವರು ಪೊಲಿಟಿಕಲಿ ಕರೆಕ್ಟ್ ಆದ ನಿಲುವುಗಳನ್ನು ಧರಿಸುತ್ತಿದ್ದಾರೇನೋ ಎನಿಸಿತು. ಇವತ್ತಿನ ಮಾಧ್ಯಮ ರಂಗದ ಸಮಸ್ಯೆಗಳಿಗೆ ಅವರು ಹುಡುಕಿಕೊಂಡ ಕಾರಣ ಸಮಾಜದಲ್ಲೇ ಇತ್ತು. ಹಿಂದೆ ಚಳವಳಿಗಳಿದ್ದವು, ಆದರ್ಶಗಳಿದ್ದವು. ಇವತ್ತು ಅವೇನೂ ಇಲ್ಲ. ಮಾಧ್ಯಮ ರಂಗ ಪ್ರವೇಶಿಸುತ್ತಿರುವವರಿಗೆ ಸಾಹಿತ್ಯದ ಓದಿನ ಹಿನ್ನೆಲೆಯಿಲ್ಲ. ಭ್ರಷ್ಟಾಚಾರ ಸರ್ವವ್ಯಾಪಿಯಾಗಿದೆ. ಎಲ್ಲ ಪಕ್ಷಗಳೂ ಭ್ರಷ್ಟವಾಗಿವೆ. ಭ್ರಷ್ಟಾಚಾರದ ಪ್ರಮಾಣ ಭಯಾನಕವಾಗಿ ಬೆಳೆದಿದೆ ಎಂಬುದನ್ನು ಅವರು ಸೋದಾರಣವಾಗಿ ವಿವರಿಸಿದರು.
ದಂಡಾವತಿಯವರು ನಾಲ್ಕು ಬಹುಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದರು. ಪತ್ರಕರ್ತರ ಭ್ರಷ್ಟಾಚಾರ ಕುರಿತಂತೆ ಅವರು ಮಾತನಾಡಿದರು. ಈ ಭ್ರಷ್ಟಾಚಾರವು ಹಲವು ಸ್ವರೂಪಗಳಲ್ಲಿ ಪ್ರಕಟವಾಗುತ್ತಿರುವುದನ್ನು ಸೂಚ್ಯವಾಗಿ ಹೇಳಿದರು. ಹಾಗೆಯೇ ಕಾಸಿಗಾಗಿ ಸುದ್ದಿ ಕುರಿತು ಮಾತನಾಡಿದರು. ಟಿವಿ ಮಾಧ್ಯಮಗಳ ಸುದ್ದಿ ಹಸಿವೆಯಿಂದಾಗಿ ಗಂಡಹೆಂಡತಿ ಜಗಳಗಳು, ಚಪ್ಪಲಿಯೇಟುಗಳು ಟೆಲಿಕಾಸ್ಟ್ ಆಗುತ್ತಿರುವುದನ್ನು ಅವರು ಪ್ರಸ್ತಾಪಿಸಿದರು. ಪತ್ರಕರ್ತರೇ ಸುದ್ದಿಗಳನ್ನು ಸೃಷ್ಟಿಸುತ್ತಿರುವ ಕುರಿತು ಅವರಿಗೆ ಆತಂಕವಿತ್ತು. ಇನ್ನು ಮಾಧ್ಯಮ ಸಂಸ್ಥೆಗಳ ಒಡೆತನ ರಾಜಕಾರಣಿಗಳ ಪಾಲಾಗುತ್ತಿರುವ ಕುರಿತು ಅವರು ಮಾತನಾಡಿದರು. ಮಾಧ್ಯಮರಂಗದ ವೈಫಲ್ಯಗಳ ಹೊಣೆಯನ್ನು ಅವರು ಓದುಗರ ಮೇಲೂ ಹೊರಿಸಿದರು. ಓದುಗರು ಪ್ರಶ್ನಿಸುತ್ತಿಲ್ಲ ಎಂಬುದು ಅವರ ಆತಂಕ. ಕನಿಷ್ಠ ನಮ್ಮಿಂದ ತಪ್ಪಾದಾಗ ಒಂದು ಪತ್ರ ಬರೆಯಿರಿ, ಫೋನ್ ಮಾಡಿ ಎಂದು ಅವರು ನೆರೆದಿದ್ದವರನ್ನು ವಿನಂತಿಸಿದರು. ಪತ್ರ, ಫೋನು ಇರಲಿ ಒಮ್ಮೊಮ್ಮೆ ತಲೆತಲೆ ಚಚ್ಚಿಕೊಂಡ್ರೂ ಪತ್ರಕರ್ತರು ಬದಲಾಗೋದಿಲ್ಲ ಎಂಬುದನ್ನು ಅವರಿಗೆ ಹೇಳಬೇಕೆನಿಸಿತು.
ನಂತರ ಶ್ರವ್ಯ ಮಾಧ್ಯಮದ ಕುರಿತು ಸಿ.ಯು.ಬೆಳ್ಳಕ್ಕಿ ಒಂದಷ್ಟು ಹೊತ್ತು ಮಾತನಾಡಿದರು. ಆಮೇಲೆ ವಿಶ್ವೇಶ್ವರ ಭಟ್ಟರ ರಂಗಪ್ರವೇಶ. ಭಟ್ಟರು ಏನೇನ್ ಮಾತಾಡ್ತಾರೆ, ನೋಡೇ ಬಿಡೋಣ ಅಂತ ತುಂಬ ಜನ ಬಂದಿದ್ದರು. ಆದರೆ ಅವರ ಭಾಷಣ ನೀರಸ. ನವತಂತ್ರಜ್ಞಾನದಲ್ಲಿ ಪತ್ರಿಕೆಗಳು ಎಂಬ ವಿಷಯದ ಕುರಿತು ಭಟ್ಟರು ಮಾತನಾಡಿದರು. ಸಮೂಹ ಮಾಧ್ಯಮ: ಸಾಮಾಜಿಕ ಕಾಳಜಿ ಎಂಬ ಗೋಷ್ಠಿಯ ವಿಷಯದಿಂದ ಭಟ್ಟರು ಬಹುದೂರವೇ ಉಳಿದುಬಿಟ್ಟರು. ಇಮೇಲು, ಟ್ವಿಟರ್ರು, ಫೇಸ್‌ಬುಕ್‌ಗಳನ್ನೇ ಅವರು ತುಂಬ ಹಚ್ಚಿಕೊಂಡಂತೆ ಕಂಡಿತು. ಪತ್ರಕರ್ತರು ಅಪ್‌ಡೇಟ್ ಆಗುತ್ತಾ ಇರಬೇಕು ಎಂಬುದು ಅವರ ಇಡೀ ಭಾಷಣದ ಒಂದು ಸಾಲಿನ ಹೂರಣ.
ವಿದ್ಯುನ್ಮಾನ ಮಾಧ್ಯಮದ ಕುರಿತು ಮಾತನಾಡಬೇಕಿದ್ದ ಹಮೀದ್ ಪಾಳ್ಯ, ಗೋಷ್ಠಿ ಸಂಚಾಲನೆ ನಡೆಸಬೇಕಿದ್ದ ಎಚ್.ಆರ್.ರಂಗನಾಥ್ ಇಬ್ಬರೂ ನಾಪತ್ತೆಯಾಗಿದ್ದರು. ಬಹುಶಃ ಅವರು ಸುವರ್ಣನ್ಯೂಸ್‌ನಲ್ಲಿ ಜುಗಲ್‌ಬಂದಿ ಮಾಡುತ್ತಿದ್ದರೇನೋ? ಇವರಿಬ್ಬರ ಅನುಪಸ್ಥಿತಿಯಿಂದಾಗಿ ಟಿವಿಗಳ ಕುರಿತು ಪ್ರಮುಖ ವಿಷಯಗಳು ಪ್ರಸ್ತಾಪವಾಗಲೇ ಇಲ್ಲ. ಇಬ್ಬರೂ ಬರದೇ ಹೋಗಿದ್ದಕ್ಕೆ ಸಂಘಟಕರೂ ಕಾರಣ ಹೇಳಲಿಲ್ಲ. ಅವರು ಗೋಷ್ಠಿಗೆ ಬರಲು ಒಪ್ಪಿದ್ದರೆ? ಒಪ್ಪಿರದಿದ್ದರೆ ಹೆಸರು ಹಾಕುವ ಅಗತ್ಯವೇನು? ಒಪ್ಪಿದ್ದರೆ ಗೋಷ್ಠಿಗೆ ಗೈರುಹಾಜರಾಗಿದ್ದೇಕೆ? ಏನೇನೂ ಗೊತ್ತಾಗಲಿಲ್ಲ.
ಲಕ್ಷ್ಮಣ್ ಹೂಗಾರ್ ತೂಕಡಿಸುವಂತೆ ಮಾಡಿದ್ದ ಗೋಷ್ಠಿಯಲ್ಲಿ ಸಣ್ಣಗೆ ಸರಪಟಾಕಿ ಹಚ್ಚಿದರು. ಎಲ್ಲೋ ಒಂದೆಡೆ ಅವರು ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ಮತ್ತು ತಾವು ಪ್ರತಿನಿಧಿಸುವ ವಾಹಿನಿಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದಂತೆ ಕಂಡರೂ, ಕಡಿಮೆ ಅವಧಿಯಲ್ಲಿ ಸಾಕಷ್ಟು ವಿಷಯಗಳನ್ನು ಪ್ರಸ್ತಾಪಿಸಿದರು.
ಸಮ್ಮೇಳನಕ್ಕೆ ಎನ್.ಆರ್.ನಾರಾಯಣಮೂರ್ತಿ ಉದ್ಘಾಟಕರಾಗುವ ಸಂಬಂಧ ಬರಗೂರು ರಾಮಚಂದ್ರಪ್ಪ ಎತ್ತಿದ ಆಕ್ಷೇಪ, ಅದರಿಂದ ಹುಟ್ಟಿಕೊಂಡ ವಿವಾದಗಳನ್ನು ಅವರು ಪ್ರಸ್ತಾಪಿಸಿದರು. ಬರಗೂರು ಅವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿ, ಅವರಿಗನ್ನಿಸಿದ್ದನ್ನು ಹೇಳಿದ್ದಾರೆ. ಅದಕ್ಕೆ ದೊಡ್ಡ ಚರ್ಚೆಯ ರೂಪ ಕೊಡಬೇಕಿತ್ತೆ ಎಂದು ನೇರವಾಗಿ ವಿಶ್ವೇಶ್ವರ ಭಟ್ಟರನ್ನು ಪ್ರಶ್ನಿಸಿದರು. ಪ್ರಶ್ನೆಗಳು ಪದ್ಮರಾಜ ದಂಡಾವತಿಯವರಿಗೂ ಇತ್ತು. ಎಂ.ಪಿ.ಪ್ರಕಾಶ್ ನಿಧನರಾದಾಗ ಅಷ್ಟು ದೊಡ್ಡ ಸಾಂಸ್ಕೃತಿಕ, ರಾಜಕೀಯ ಮುಖಂಡನ ಸಾವಿನ ಸುದ್ದಿಯನ್ನು ಒಳಪುಟಕ್ಕೆ ತಳ್ಳಿದ್ದು ಸರಿಯೇ ಎಂದು ಪ್ರಶ್ನಿಸಿದರು. ಪ್ರಶ್ನೆಯನ್ನು ಸ್ಪೋರ್ಟಿವ್ ಆಗಿ ತೆಗೆದುಕೊಳ್ಳಬಹುದಿದ್ದ ದಂಡಾವತಿ ನಂತರ ಒರಟಾಗಿ ಪ್ರತಿಕ್ರಿಯಿಸಿದ್ದು ಸರಿಯೆನ್ನಿಸಲಿಲ್ಲ.
ಹೂಗಾರ್ ಬಹುಮುಖ್ಯವಾಗಿ ಮೀಡಿಯಾಗಳಲ್ಲಿ ಸಾಮಾಜಿಕ ನ್ಯಾಯ ಇಲ್ಲದೇ ಇರುವ ಕುರಿತು ಪ್ರಸ್ತಾಪಿಸಿದರು. ಸಾಮಾಜಿಕ ನ್ಯಾಯವೇ ಇಲ್ಲದ ಮೀಡಿಯಾಗಳು ಸಾಮಾಜಿಕ ಕಾಳಜಿಯನ್ನು ತೋರುವುದು ಹೇಗೆ ಸಾಧ್ಯ ಎಂಬುದು ಅವರ ಮೂಲಭೂತ ಪ್ರಶ್ನೆಯಾಗಿತ್ತು. ಮಠಗಳಿಗೆ ಕೋಟ್ಯಂತರ ಹಣ ಕೊಟ್ಟರೂ ಮೀಡಿಯಾಗಳು ಯಾಕೆ ಸುಮ್ಮನಿವೆ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು.
ಜಗದೀಶ್ ಕೊಪ್ಪ ತಮಗೆ ಕೊಟ್ಟ ಎರಡು ನಿಮಿಷಗಳಲ್ಲಿ ಎರಡು ದೃಷ್ಟಾಂತಗಳನ್ನು ಉದಾಹರಿಸಿ, ಸೊಗಸಾಗಿ ತಾವು ಹೇಳಬೇಕಾಗಿದ್ದನ್ನು ಹೇಳಿದರು. ಪಿ.ಸಾಯಿನಾಥ್ ಅವರು ಎರಡು ವರ್ಷದ ಹಿಂದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಊರಿಗೆ ಭೇಟಿ ಕೊಟ್ಟಾಗ, ರೈತನ ಹೆಂಡತಿಯನ್ನು ಮಾತನಾಡಿಸಿ ಹೋಗಿದ್ದರು. ಜೊತೆಯಲ್ಲಿದ್ದ ಜಗದೀಶ್ ಕೊಪ್ಪ ಸಹ ಅದನ್ನು ವರದಿ ಮಾಡಿದ್ದರು. ಎರಡು ವರ್ಷಗಳ ನಂತರ ಅದೇ ಮಹಿಳೆಯನ್ನು ಕಂಡು ಆಕೆಗೆ ಸರ್ಕಾರ ಕೊಡುವ ಪಡಿತರ ವಿವರ ಪಡೆದು, ಜೈಲಿನ ಖೈದಿಗಳಿಗೂ ಇದಕ್ಕಿಂತ ಉತ್ತಮ ಆಹಾರ ದೊರೆಯುತ್ತಿದೆ ಎಂದು ಸಾಯಿನಾಥ್ ವರದಿ ಮಾಡಿದ್ದರು. ನಾನು ಇಷ್ಟು ವರ್ಷಗಳ ಕಾಲ ಮಣ್ಣು ಹೊತ್ತಿದ್ದಷ್ಟೇ, ನಿಜವಾದ ಪತ್ರಕರ್ತನ ಕೆಲಸ ಮಾಡಲಿಲ್ಲ ಎಂದು ಹೇಳಿದ ಅವರ ಆತ್ಮಾವಲೋಕನದ ಮಾತುಗಳು ಕನ್ನಡ ಮಾಧ್ಯಮರಂಗ ಸಾಗಬೇಕಾದ ಹಾದಿಯ ಒಳನೋಟಗಳನ್ನು ನೀಡಿತು.
ಪ್ರೇಕ್ಷಕರ ಸಾಲಿನಲ್ಲಿ ಮೂಲೆಯಲ್ಲಿ ಒಂದು ಕಡೆ ಹಿರಿಯ ಪತ್ರಕರ್ತ ಈಶ್ವರ ದೈತೋಟ (ವಿಜಯ ಕರ್ನಾಟಕದ ಮೊದಲ ಸಂಪಾದಕರು) ಕುಳಿತುಕೊಂಡಿದ್ದರು. ಅವರನ್ನು ಯಾರು ಗಮನಿಸಲಿಲ್ಲ.
ಹುಣಸವಾಡಿ ರಾಜನ್ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಕುರುಡನ ಹೆಗಲ ಮೇಲೆ ಹೆಳವ ಕುಳಿತಿದ್ದಾನೆ, ದಾರಿ ಎಲ್ಲಿದೆ ಎಂದು ಅಡಿಗರ ಕವಿತೆಯ ಸಾಲು ಉದ್ಧರಿಸಿ, ಮಾತು ಮುಗಿಸಿದರು. ಇಲ್ಲಿ ಕುರುಡರು ಯಾರು? ಹೆಳವರು ಯಾರು? ಎನ್ನುವುದಕ್ಕೆ ಈ ವಿಚಾರ ಸಂಕಿರಣವೇ ಒಂದು ಸಾಕ್ಷಿಯಾಗಿದ್ದು ವಿಚಿತ್ರವಾದರೂ ಸತ್ಯವಾಗಿತ್ತು.
ಗಾಂಧಿಭವನದಲ್ಲಿ ನಡೆದ ಈ ಗೋಷ್ಠಿಗೆ ಜನರೇನೋ ತಂಡೋಪತಂಡವಾಗಿ ಬಂದು, ಇಡೀ ಹಾಲ್ ಭರ್ತಿಯಾಗಿತ್ತು. ಆದರೆ ನಿಜವಾಗಿಯೂ ಇಲ್ಲಿ ನಡೆದದ್ದು ಮಾಧ್ಯಮರಂಗದ ಆತ್ಮಾವಲೋಕನವೇ? ಇಂಥ ಸ್ವಗತ, ಗೊಣಗಾಟ, ಹಳಹಳಿಕೆಗಳಿಂದ ಏನಾದರೂ ಪ್ರಯೋಜನವಿದೆಯೇ?
ಆದರೂ, ಸಂಪಾದಕೀಯಕ್ಕೊಂದು ಥ್ಯಾಂಕ್ಸ್ ಹೇಳಲೇಬೇಕು. ಯಾಕೆ ಏನು ಅಂತ ಈ ವರದಿಯನ್ನು ಮತ್ತೊಮ್ಮೆ ಓದಿದರೆ ಗೊತ್ತಾಗುತ್ತದೆ.
-ಓರ್ವ ಪತ್ರಕರ್ತ
发表评论