ಅವರು ಸ್ವಾಮಿ ವಿವೇಕಾನಂದರು. ೧೮೯೩ನೇ ಸೆಪ್ಟೆಂಬರ್ ೧೧ರಂದು ಚಿಕಾಗೋದಲ್ಲಿ ನಡೆದ ಸರ್ವಧರ್ಮಗಳ ವಿಶ್ವವೇದಿಕೆಯಲ್ಲಿ ಸಹೋದರರೆ ಮತ್ತು ಸಹೋದರಿಯರೆ ಎಂದು ಸಂಬೋಧಿಸಿದಾಗ ನೆರೆದಿದ್ದ ಏಳು ಸಾವಿರಕ್ಕೂ ಹೆಚ್ಚು ಜನರು ಎದ್ದುನಿಂತು ಕರತಾಡನ ಮಾಡಿ, ಹರ್ಷೋದ್ಘಾರ ಮೊಳಗಿಸಿದ್ದರು. ಆ ವೇದಿಕೆಯಲ್ಲಿ ವಿವೇಕಾನಂದರು ಆಡಿದ ಮಾತುಗಳು ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಈತನ ವಾಣಿಯಲ್ಲಿ ಹೊಮ್ಮುವ ವಿಚಾರಗಳನ್ನು ಕೇಳಿದ ನಂತರ, ಇಂತಹ ಘನಪಂಡಿತರಿರುವ ದೇಶಕ್ಕೆ ಮಿಷನರಿಗಳನ್ನು ಕಳುಹಿಸುವುದು ಎಂತಹ ಮೂರ್ಖತನ ಹಾಗು ಅವಿವೇಕ ಎಂದು ಅಮೆರಿಕಾದ ಅತ್ಯಂತ ಪ್ರತಿಷ್ಠಿತ ಪತ್ರಿಕೆ ನ್ಯಾಷನಲ್ ಹೆರಾಲ್ಡ್ ತನ್ನ ಮುಖಪುಟದಲ್ಲಿ ಬರೆದು ಗೌರವ ಸಲ್ಲಿಸಿತ್ತು.

ವಿವೇಕಾನಂದರು ಹುಟ್ಟಿದ್ದು ಜನವರಿ, ೧೨, ೧೮೬೩ರಂದು. ಕ್ಷತ್ರಿಯ ಕುಲದಲ್ಲಿ ವಿಶ್ವನಾಥದತ್ತ ಹಾಗು ಭುವನೇಶ್ವರಿ ಅವರಿಗೆ ಜನಿಸಿದ ನರೇಂದ್ರನಾಥದತ್ತ ವಿವೇಕಾನಂದರಾಗಿ ಬೆಳೆದು, ಜಗತ್ತಿನ ಶ್ರೇಷ್ಠ ಸಂನ್ಯಾಸಿಯಾದ ಇತಿಹಾಸವೇ ರೋಮಾಂಚನಕಾರಿ. ೧೮೮೧ರಲ್ಲಿ ವಿವೇಕಾನಂದರು ಶ್ರೀ ರಾಮಕೃಷ್ಣಪರಮಹಂಸರನ್ನು ಮೊದಲು ಭೇಟಿ ಮಾಡಿದರು. ಅವರ ಅನುಯಾಯಿಯಾದರು. ನಂತರ ಪರಮಹಂಸರು ಇಹಲೋಕ ತ್ಯಜಿಸಿದ ನಂತರ ೧೮೮೬ರ ಆಗಸ್ಟ್ ೧೫ರಂದು ವಿವೇಕಾನಂದರು ಸಂನ್ಯಾಸ ಸ್ವೀಕರಿಸಿದರು.

ನಾನು ಎರಡು ಪ್ರಪಂಚಗಳ ನಡುವೆ ನಿಲ್ಲಬೇಕಾಯಿತು. ಒಂದುಕಡೆ, ನನ್ನ ತಾಯಿ ಮತ್ತು ಸಹೋದರರು ಪ್ರಾಣ ಹೋಗುವವರೆಗೆ ಉಪವಾಸ ಮಾಡುವುದನ್ನು ನೋಡಬೇಕಾಗಿತ್ತು. ಮತ್ತೊಂದೆಡೆ ಈ ಮಹಾಪುರುಷ ಪರಮಹಂಸರ ಸಂದೇಶವನ್ನು ಭರತಖಂಡದ ಉದ್ಧಾರಕ್ಕೆ, ಜಗತ್ತಿನ ಉದ್ಧಾರಕ್ಕೆ ಬೋಧಿಸಬೇಕು, ಕಾರ‍್ಯರೂಪಕ್ಕೆ ತರಬೇಕು. ಆದ ಕಾರಣ ಹಲವು ದಿನಗಳು ಹಲವು ತಿಂಗಳು ಮನಸ್ಸಿನಲ್ಲಿ ಹೋರಾಟ ಮೊದಲಾಯಿತು. ಕೆಲವು ವೇಳೆ ಹಗಲು ರಾತ್ರಿ ಐದಾರು ದಿನ ಎಡೆಬಿಡದೆ ಪ್ರಾರ್ಥಿಸುತ್ತಿದ್ದೆ. ಅಬ್ಬ! ಆ ದಿನಗಳ ವ್ಯಥೆ! ನಾನೊಂದು ನರಕದಲ್ಲಿ ವಾಸಿಸುತ್ತಿದ್ದೆ. ಸ್ವಾಭಾವಿಕವಾದ ಬಾಲ್ಯಪ್ರೇಮ ನನ್ನನ್ನು ಮನೆಕಡೆಗೆ ಸೆಳೆಯುತ್ತಿತ್ತು. ಯಾರು ನನ್ನ ಹತ್ತಿರದ ಬಂಧುಗಳೋ ನನ್ನ ಪ್ರೀತಿಗೆ ಪಾತ್ರರೋ ಅವರು ವ್ಯಥೆ ಪಡುವುದನ್ನು ನನಗೆ ನೋಡಲು ಸಾಧ್ಯವಾಗಲಿಲ್ಲ.

ಮಹಾತ್ಮರೆಲ್ಲ ಅನುಭವಿಸಿದ್ದು ಇದೇ ನೋವನ್ನು. ಕಡೆಗೆ ವಿವೇಕಾನಂದರು ತೀರ್ಮಾನವೊಂದಕ್ಕೆ ಬಂದು ತ್ಯಾಗವೊಂದಕ್ಕೆ ಸಿದ್ಧವಾಗುತ್ತಾರೆ. ತಾಯಿ ಮತ್ತು ಇಬ್ಬರು ಸಹೋದರರನ್ನು ಬಿಟ್ಟು ಹೊರನಡೆಯುತ್ತಾರೆ. ನಂತರವೂ ಅವರು ಅನುಭವಿಸಿದ್ದು ಕಷ್ಟಗಳ ನರಕವನ್ನೇ.  ಆದರೂ ಅವರು ಇಡೀ ಭಾರತವನ್ನು ಸುತ್ತಿದರು. ದೇಶದ ಜನರು ಪಡುತ್ತಿರುವ ಬವಣೆಗಳನ್ನು ಎಳೆಎಳೆಯಾಗಿ ಅರ್ಥ ಮಾಡಿಕೊಂಡಿದ್ದರು. ನಾಡಿನ ಜನರು ಬಡತನ, ಅಜ್ಞಾನ, ರೋಗಗಳಿಂದ ನರಳುತ್ತಿರುವುದನ್ನು ಕಣ್ಣಾರೆ ಕಂಡು ನೊಂದಿದ್ದರು. ಜನರು ಮೌಢ್ಯಗಳ ದಾಸರಾಗಿರುವುದನ್ನು ಅವರು ಮಮ್ಮಲ ಮರುಗಿದ್ದರು.

ವಿವೇಕಾನಂದರು ಕನ್ಯಾಕುಮಾರಿಯಲ್ಲಿ ಬಂಡೆಯ ಮೇಲೆ ಕುಳಿತು ಧ್ಯಾನಗೈದು ಕಂಡುಕೊಂಡ ಸತ್ಯಗಳೇನು?

ತಾಯಿ, ನಿನ್ನ ಸೌಂದರ್ಯವನ್ನು ಕುರೂಪಗೈದವರನ್ನು ಮನ್ನಿಸು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಹಿಂದೂ, ಮುಸಲ್ಮಾನ, ಪಾರಸಿ, ಕ್ರೈಸ್ತ ಇನ್ನೂ ನೂರಾರು ಭೇದಗಳನ್ನು ಕಲ್ಪಿಸಿ ಕೆಟ್ಟರು. ಗೊಡ್ಡು ಪದ್ಧತಿಯನ್ನೇ ಧರ್ಮವೆಂದು ಬೋಧಿಸಿ ನಿನ್ನನ್ನು ಪರಕೀಯರಿಗೆ ದಾಸಿಯನ್ನಾಗಿಸಿದರು. ನಿನ್ನ ಐಶ್ವರ್ಯ, ವಿದ್ವತ್ತು, ಧರ್ಮ ಎಲ್ಲಿ ಹೋಯಿತು? ಪುರೋಹಿತರ ಉಪಟಳದಿಂದ, ಜಾತಿಭೇದಗಳ ಕ್ರೌರ್ಯದಿಂದ, ಪಾಮರರ ಮೂರ್ಖತನದಿಂದ ಸರ್ವವೂ ನಾಶವಾಯಿತು. ಮುಷ್ಟಿ ಹಿಡಿಯದಂತೆ ಅಂಗಲಾಚಿ ಬೇಡುವಂತೆ ಮಾಡಿದ್ದೇವೆ. ಅಂಗೈಯಲ್ಲೆ ಅನಂತವನ್ನು ತೋರಿಸಿದ್ದೇವೆ. ಮೋಸ, ಮೋಸ, ಮೋಸ ಎಲ್ಲೆಲ್ಲೂ ಮೋಸ, ವಂಚನೆ.
ನಾನು ಧೃತಿಗಟ್ಟ ದರಿದ್ರರಿಗೆ ನೇರವಾಗಿ ಧೈರ್ಯ ತುಂಬುತ್ತೇನೆ. ಅವರ ಸೇವೆ ಮಾಡುತ್ತೇನೆ. ಪಶುತ್ವಕ್ಕಿಳಿದಿರುವವರನ್ನು ಕನಿಷ್ಠ ಮನುಷ್ಯತ್ವಕ್ಕೆ ಎತ್ತುತ್ತೇನೆ. ನನ್ನ ಕಡೆಯ ಉಸಿರಿರುವವರೆಗೆ ಭರತಮಾತೆಯ ದಾಸ್ಯವನ್ನು ತೊಡೆಯಲು ತುಡಿದು ದುಡಿಯುತ್ತೇನೆ. ಅದಕ್ಕಾಗಿಯೇ ಮಡಿಯುತ್ತೇನೆ.

ವಿವೇಕಾನಂದರು ಹಾಗೆಯೇ ಬದುಕಿದರು. ಅವರು ಮರಣಿಸಿದ್ದು ೧೯೦೨ರ ಜುಲೈ ೪ರಂದು. ಬದುಕಿದ್ದು ಕೇವಲ ೩೯ ವರ್ಷಗಳು ಮಾತ್ರ. ಈ ವಿವೇಕಾನಂದ ಏನು ಮಾಡಿದ್ದಾನೆ ಎಂದು ತಿಳಿಯುವುದಕ್ಕೆ ಮತ್ತೊಬ್ಬ ವಿವೇಕಾನಂದ ಇದ್ದರೆ ಅವನಿಂದ ಮಾತ್ರ ಸಾಧ್ಯ ಎಂದು ಸಾಯುವ ಮುನ್ನ ಅವರು ಹೇಳಿದ್ದರು.

ನಾವು ಭಾರತೀಯರು, ವಿವೇಕಾನಂದರನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ. ಯಾಕೆಂದರೆ ನಮ್ಮೊಳಗಿನ ವಿವೇಕಾನಂದ ಇನ್ನೂ ಜಾಗೃತಗೊಂಡೇ ಇಲ್ಲ.

ಇನ್ನು ಕೆಲವು ದಿನಗಳು ವಿವೇಕಾನಂದರ ವಾಣಿಗಳನ್ನೇ ಈ ಬ್ಲಾಗ್‌ನಲ್ಲಿ ನೋಡಲಿದ್ದೀರಿ. ಸಮಕಾಲೀನ ಸಮಸ್ಯೆ, ಗೊಂದಲಗಳಿಗೆ ವಿವೇಕಾನಂದರ ಮಾತುಗಳಲ್ಲಿ ಉತ್ತರ ಹುಡುಕುವ ಸಣ್ಣ ಪ್ರಯತ್ನ ಇದು.

ವಿವೇಕಾನಂದರು ಒಂದೆಡೆ ಹೇಳುತ್ತಾರೆ,

ನನ್ನ ಸ್ವಂತ ಇಚ್ಛೆಯೊಂದು ಇದೆ. ಸ್ವಲ್ಪ ಅನುಭವವೂ ಇದೆ. ಪ್ರಪಂಚಕ್ಕೆ ಕೊಡಬೇಕಾದ ಒಂದು ಸಂದೇಶವೂ ಇದೆ. ಅದನ್ನು ದಯಾ ದಾಕ್ಷಿಣ್ಯವಿಲ್ಲದೆ, ಮುಂದೆ ಏನಾಗಬಲ್ಲುದು ಎಂಬುದನ್ನು ಗಮನಿಸದೆ ಸಾರುತ್ತೇನೆ. ಸುಧಾರಕರಿಗೆ, ನಾನು ಅವರಿಗಿಂತ ದೊಡ್ಡ ಸುಧಾರಕ ಎಂದು ಹೇಳುತ್ತೇನೆ. ಅವರು ಚೂರುಪಾರುಗಳನ್ನು ಸುಧಾರಿಸಲು ಯತ್ನಿಸುವವರು. ನನಗೆ ಆಮೂಲಾಗ್ರ ಸುಧಾರಣೆ ಬೇಕು. ಮಾರ್ಗದ ಕುರಿತು ನಮ್ಮಲ್ಲಿ ವ್ಯತ್ಯಾಸವಿದೆ. ಅವರದು ಧ್ವಂಸಮಾರ್ಗ. ನನ್ನದು ನಿರ್ಮಾಣಮಾರ್ಗ.  ನಾನು ಸುಧಾರಣೆಯಲ್ಲಿ ನಂಬುವುದಿಲ್ಲ, ಬೆಳವಣಿಗೆಯಲ್ಲಿ ನಂಬುತ್ತೇನೆ. ನಾನು ದೇವರಸ್ಥಾನದಲ್ಲಿ ನಿಂತು ಸಮಾಜಕ್ಕೆ ಹೀಗೆ ಚಲಿಸಬೇಕು ಎಂದು ಅಪ್ಪಣೆ ಮಾಡಲಾರೆ.

ನಮ್ಮ ಆಯ್ಕೆಯೂ ನಿರ್ಮಾಣ ಮಾರ್ಗವೇ ಆಗಿರಬೇಕು ಅಲ್ಲವೇ?
0 komentar

Blog Archive