ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿದೆ. ನಿರೀಕ್ಷೆಯಂತೆ ಮಾಧ್ಯಮಗಳ ಕುರಿತೂ ಒಂದು ಗೋಷ್ಠಿ ಏರ್ಪಾಡಾಗಿದೆ. ಗೋಷ್ಠಿ ನಡೆಯುತ್ತಿರುವುದು ೧೨ರಂದು ಗಾಂಧಿಭವನದಲ್ಲಿ ಮಧ್ಯಾಹ್ನ ೨-೩೦ಕ್ಕೆ. ಸಮೂಹ ಮಾಧ್ಯಮ: ಸಾಮಾಜಿಕ ಕಾಳಜಿ ಎಂಬುದು ಗೋಷ್ಠಿಯ ವಿಷಯ. ಗೋಷ್ಠಿಯಲ್ಲಿ ಕನ್ನಡ ಮಾಧ್ಯಮಗಳ ಘಟನಾನುಘಟಿಗಳೇ ಭಾಗವಹಿಸುತ್ತಿದ್ದಾರೆ. ಒಂದೊಳ್ಳೆಯ ಚರ್ಚೆಯನ್ನು ನಿರೀಕ್ಷಿಸಬಹುದಾಗಿದೆ.
ಸದ್ಯದ ಸನ್ನಿವೇಶದಲ್ಲಿ ಮಾಧ್ಯಮಗಳ ಸಾಮಾಜಿಕ ಕಾಳಜಿ ಕುರಿತು ಚರ್ಚೆಯಾಗಲೇಬೇಕಾದ ಹಲವಾರು ವಿಷಯಗಳಿವೆ. ಇದು ಭಾಗವಹಿಸುವ ಗಣ್ಯ ಪತ್ರಕರ್ತರಿಗೂ ಗೊತ್ತಿದೆ. ಹಾಗಿದ್ದಾಗ್ಯೂ ಪ್ರಮುಖ ವಿಷಯಗಳು ಮರೆಯಾಗದಿರಲಿ ಎಂಬುದು ನಮ್ಮ ಅಪೇಕ್ಷೆ. ಈ ಹಿನ್ನೆಲೆಯಲ್ಲಿ ಕೆಲವು ಗಂಭೀರ ಅಂಶಗಳ ಕುರಿತು ಕೆಲವು ಟಿಪ್ಪಣಿಗಳನ್ನು ಮಾಡಲು ಪ್ರಯತ್ನಿಸಿದ್ದೇವೆ. ಈ ಕುರಿತು ದಯವಿಟ್ಟು ಚರ್ಚೆ ಮಾಡಿ ಎಂದು ಈ ಎಲ್ಲರಲ್ಲೂ ನಾವು ವಿನಂತಿಸಿಕೊಳ್ಳುತ್ತೇವೆ.
ಅಗ್ಗದ ಜನಪ್ರಿಯತೆಯ ಹಂಗು ಬೇಕೆ?
ಇವತ್ತು ಸುದ್ದಿಯೂ ಕೂಡ ಮಾರಾಟದ ಸರಕು. ಪತ್ರಿಕೆ-ಚಾನಲ್‌ಗಳೂ ಕೂಡ ಅಪ್ಪಟ ಉದ್ಯಮಗಳು. ಹೀಗಾಗಿ ಸಾಮಾಜಿಕ ಕಾಳಜಿ ಹಿನ್ನೆಲೆಗೆ ಸರಿದಿದೆ. ವಿಶೇಷವಾಗಿ ಟೀವಿ ಮಾಧ್ಯಮವಂತೂ ದಾರಿ ತಪ್ಪಿ ನಿಂತಿದೆ. ಯಾವುದು ಟಿಆರ್‌ಪಿ ತಂದುಕೊಡುತ್ತದೋ ಅದಷ್ಟೇ ಸುದ್ದಿ ಎನ್ನುವಂತಾಗಿದೆ. ಇದು ದಿನೇ ದಿನೇ ಅಪಾಯಕಾರಿ ಹಂತ ತಲುಪುತ್ತಿದೆ. ಟಿಆರ್‌ಪಿಯ ಕಾರಣಕ್ಕಾಗಿ ಮನೆಮನೆಯ ಜಗಳ ಟಿವಿ ಪರದೆಗಳ ಮೇಲೆ ಬಂದಿದೆ. ತಪ್ಪು ಮಾಡಿದವರನ್ನು ಸಾರ್ವಜನಿಕವಾಗಿ ಶಿಕ್ಷಿಸುವ ಪರಿಪಾಠ ಟಿವಿಗಳಿಂದಲೇ ಜನಪ್ರಿಯವಾಗಿದೆ. ಸಮೂಹ ಮಾಧ್ಯಮಗಳಿಗೆ ಈ ಜನಪ್ರಿಯತೆಯ ಹಂಗು ಬೇಕೆ?
ಸುದ್ದಿಯಲ್ಲೂ ತಾರತಮ್ಯ ಸರಿಯೇ?
ಒಂದು ಬಡಕುಟುಂಬದ ಹುಡುಗಿ ಅತ್ಯಾಚಾರ, ಕೊಲೆಗೆ ಒಳಗಾದರೆ ಅದು ಎಲ್ಲೋ ಮೂಲೆಯಲ್ಲಿ ಪ್ರಕಟಗೊಂಡು ಮರೆಯಾಗಿಬಿಡುತ್ತದೆ. ಆದರೆ ದೊಡ್ಡ ಕುಟುಂಬದ, ದೊಡ್ಡ ಉದ್ಯೋಗದ, ದೊಡ್ಡ ಸಮಾಜದ ಹೆಣ್ಣುಮಗಳಿಗೆ ಇದೇ ಆದರೆ, ಅದು ವರ್ಷಗಟ್ಟಲೆ ಸುದ್ದಿಯಲ್ಲಿರುತ್ತದೆ. ಈ ತಾರತಮ್ಯ ಏಕೆ? ಜೀವಗಳಿಗೆ ಪತ್ರಕರ್ತರು ಹೀಗೆ ಪ್ರತ್ಯೇಕವಾಗಿ ಬೆಲೆ ಕಟ್ಟುವುದು ಸರಿಯೇ?
ಮಾಧ್ಯಮಸಂಸ್ಥೆಗಳ ಮಾಲಿಕತ್ವ ರಾಜಕಾರಣಿಗಳ ಕೈಗೆ
ಇವತ್ತು ಮಾಧ್ಯಮ ಸಂಸ್ಥೆಗಳ ಮಾಲಿಕತ್ವವನ್ನು ಪಡೆಯುವುದರತ್ತ ರಾಜಕಾರಣಿಗಳು ಚಿತ್ತ ಹರಿಸಿದ್ದಾರೆ. ಈಗಾಗಲೇ ಕರ್ನಾಟಕದ ಕೆಲವು ಮಾಧ್ಯಮಗಳ ರಾಜಕಾರಣಿಗಳ ತೆಕ್ಕೆಗೆ ಬಂದಿವೆ. ಇನ್ನಷ್ಟು ಇದೇ ಹಾದಿಯಲ್ಲಿವೆ. ರಾಜಕಾರಣಿಗಳು ಮಾಧ್ಯಮ ಸಂಸ್ಥೆಗಳನ್ನು ಕೊಂಡುಕೊಳ್ಳುವ ಉದ್ದೇಶ ಬಹಳ ಸ್ಪಷ್ಟವಾಗಿ ಸುದ್ದಿಯ ಮೇಲೆ ನಿಯಂತ್ರಣ ಹೊಂದುವುದು. ಈ ಟ್ರೆಂಡ್ ಹೀಗೇ ಮುಂದುವರೆದರೆ ಅಪಾಯಕಾರಿಯಾದ ಸನ್ನಿವೇಶ ಸೃಷ್ಟಿಯಾಗಿ, ಪತ್ರಕರ್ತರು ನೇರವಾಗಿ ರಾಜಕಾರಣಿಗಳ ಪರಿಚಾರಕರಾಗಬೇಕಾಗುತ್ತದೆ. ಇದು ಬೇಕೆ?
ಸುದ್ದಿಗಾಗಿ ಕಾಸು, ಎಷ್ಟು ನೈತಿಕ?
ಕಾಸಿಗಾಗಿ ಸುದ್ದಿ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದೆ. ಕನ್ನಡದ ಬಹುತೇಕ ಪತ್ರಿಕೆಗಳು ಕಾಸಿಗಾಗಿ ಸುದ್ದಿಯನ್ನು ಪ್ರಕಟಿಸುತ್ತಿವೆ. ಮಾಧ್ಯಮರಂಗದ ಅಂತಃಸತ್ವವನ್ನೇ ಇದು ಹಾಳುಗೆಡವಿದೆ. ಜಾಹೀರಾತುದಾರರೂ ಸಹ ಇಂದು ಸುದ್ದಿಯಲ್ಲೂ ಫೇವರ್ ಬಯಸುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಕಾಸಿಗಾಗಿ ಸುದ್ದಿ ಕುರಿತು ಕುರಿತು ಕನ್ನಡ ಮಾಧ್ಯಮ ರಂಗ ತನ್ನ ಸ್ಪಷ್ಟ ನಿಲುವನ್ನು ಪ್ರಕಟಪಡಿಸಬೇಕಲ್ಲವೇ?
ಮೀಡಿಯಾ ಕಚೇರಿಗಳಲ್ಲೂ ಸಾಮಾಜಿಕ ನ್ಯಾಯ ಬೇಡವೇ?
ಮೀಡಿಯಾ ಕಚೇರಿಗಳಲ್ಲಿ ಜಾತೀಯತೆ ತಾಂಡವವಾಡುತ್ತಿದೆ. ಬಹಳಷ್ಟು ಸಮುದಾಯಗಳಿಗೆ ಇಲ್ಲಿ ಪ್ರಾತಿನಿಧ್ಯವೇ ಇಲ್ಲ. ಸಣ್ಣಪುಟ್ಟ ಸಮುದಾಯಗಳಂತೂ ಕಾಣಿಸಿಕೊಳ್ಳುವುದೇ ಇಲ್ಲ. ಎಲ್ಲ ಸಮುದಾಯಗಳ ಪಾಲ್ಗೊಳ್ಳುವಿಕೆ ಇಲ್ಲದೇ ಹೋದರೆ ಮೀಡಿಯಾಗಳು ಪರಿಪೂರ್ಣವಾಗಿ ಸಮಾಜವನ್ನು ಧ್ವನಿಸಲು ಸಾಧ್ಯವೇ? ಮೀಡಿಯಾ ಕಚೇರಿಗಳಲ್ಲೂ ಸಾಮಾಜಿಕ ನ್ಯಾಯ ಬೇಡವೇ?
ನೊಂದ ಹೆಣ್ಣುಮಕ್ಕಳ ಹೆಸರು, ಫೋಟೋ ಪ್ರಕಟಿಸುವುದು ಸರಿಯೇ?
ಅತ್ಯಾಚಾರ, ಲೈಂಗಿಕ ಕಿರುಕುಳದಂಥ ಹಿಂಸೆಯನ್ನು ಅನುಭವಿಸಿದ ಹೆಣ್ಣುಮಕ್ಕಳ ಹೆಸರನ್ನು ಬರೆಯಬಾರದು ಎಂಬುದು ಪತ್ರಕರ್ತರು ಪಾಲಿಸಿಕೊಂಡು ಬಂದ ನೈತಿಕ ನಡಾವಳಿ. ಪ್ರೆಸ್‌ಕೌನ್ಸಿಲ್‌ನಂಥ ಸಂಸ್ಥೆಗಳು ಸಹ ಈ ವಿಷಯದಲ್ಲಿ ಹಲವು ಬಾರಿ ಮಾರ್ಗದರ್ಶನ ಮಾಡಿವೆ. ಆದರೆ ಇತ್ತೀಚಿಗೆ ಈ ಪರಿಪಾಠವನ್ನು ಗಾಳಿಗೆ ತೂರಲಾಗಿದೆ. ಟಿವಿ ಮಾಧ್ಯಮಗಳಂತೂ ನೊಂದ ಮಹಿಳೆಯ ಮುಖವನ್ನು ಮಾಸ್ಕ್ ಕೂಡ ಮಾಡದೆ ಆಕೆಯ ಭವಿಷ್ಯವನ್ನು ಹಾಳುಗೆಡವುತ್ತಿವೆ. ಇದು ಸರಿಯೇ?
ಕೋಮುವಾದದ ವಿಷಪ್ರಾಶನ ಬೇಕೆ?
ಕೆಲವು ಪತ್ರಿಕೆಗಳು ಇತ್ತೀಚಿನ ದಿನಗಳಲ್ಲಿ ಕೋಮುವಿಷವನ್ನು ಉಣಬಡಿಸುವ ಲೇಖನ, ಅಂಕಣಗಳನ್ನು ಮೇಲಿಂದ ಮೇಲೆ ಪ್ರಕಟಿಸಿ, ಸಾಮಾಜಿಕ ಸಾಮರಸ್ಯವನ್ನು ಹಾಳುಗೆಡವುತ್ತಿವೆ. ಇದು ಅವುಗಳಿಗೆ ಅಗ್ಗದ ಜನಪ್ರಿಯತೆಯನ್ನೂ ತಂದುಕೊಡುತ್ತಿದೆ. ಕೆಲವು ಪತ್ರಿಕೆಗಳಂತೂ ಬುದ್ಧಿಜೀವಿ, ಸಾಹಿತಿ, ಜಾತ್ಯತೀತ ಮತ್ತಿತರ ಶಬ್ದಗಳಿಗೆ ಕಳಂಕ ಹಚ್ಚುವ ಯತ್ನ ನಡೆಸುತ್ತಿವೆ. ಕನ್ನಡದ ಪ್ರಮುಖ ಪತ್ರಿಕೆಯೊಂದು ಪ್ರಕಟಿಸಿದ ಲೇಖನವೊಂದರಿಂದಾಗಿ ಕೋಮು ದಳ್ಳುರಿ ಹತ್ತುರಿದು, ಇಬ್ಬರ ಸಾವಿಗೂ ಕಾರಣವಾಗಿತ್ತು. ಪತ್ರಕರ್ತರಿಗೆ ಒಂದು ನೀತಿಸಂಹಿತೆ ಬೇಡವೇ?
ಪ್ರಶಸ್ತಿ, ಕೆಟಗರಿ ಸೈಟಿನ ಹುಚ್ಚು ಬಿಡಿಸಬೇಡವೇ?
ಪತ್ರಕರ್ತರನ್ನು ತಮ್ಮ ಕೈವಶ ಮಾಡಿಕೊಳ್ಳಲೆಂದೇ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ, ಜಿ ಕೆಟಗರಿ ಬಿಡಿಎ ಸೈಟು ಇತ್ಯಾದಿಗಳನ್ನು ದಾಳವಾಗಿ ಬಳಸಿಕೊಳ್ಳುತ್ತಿದೆ. ಕೆಲವು ಪತ್ರಕರ್ತರಿಗಂತೂ ಬಿಡಿಎ ಸೈಟು ಗಳಿಸುವುದೇ ಜೀವಮಾನದ ದೊಡ್ಡ ಗುರಿಯೆನ್ನಿಸಿದೆ. ಕೆಲವರು ಜಾಣತನದಿಂದ ತಂದೆ, ತಾಯಿ, ಪತ್ನಿ, ಸಹೋದರ ಹೀಗೆ ಬೇರೆಯವರ ಹೆಸರಲ್ಲಿ ಸೈಟು ಗಿಟ್ಟಿಸುತ್ತಿದ್ದಾರೆ. ಸಾಕಷ್ಟು ಮಂದಿ ಸುಳ್ಳು ಅಫಿಡೆವಿಟ್ ಕೊಟ್ಟು ಸಿಕ್ಕಿ ಬಿದ್ದಿದ್ದಾರೆ. ಈ ಅನೈತಿಕ ದಂಧೆಯನ್ನು ತಡೆಗಟ್ಟುವುದು ಹೇಗೆ?
ಮಾಧ್ಯಮರಂಗದ ಭ್ರಷ್ಟಾಚಾರಕ್ಕೆ ಮದ್ದು ಎಲ್ಲಿ?
ಮಾಧ್ಯಮರಂಗದಲ್ಲಿ ಭ್ರಷ್ಟಾಚಾರವಿದೆ ಎಂಬುದು ಈಗಾಗಲೇ ಸ್ಪಷ್ಟವಾಗಿರುವ ವಿಷಯ. ಪತ್ರಕರ್ತರ ಭ್ರಷ್ಟಾಚಾರದ ಕುರಿತು ಲೋಕಾಯುಕ್ತರಿಗೆ ದೂರು ಹೋಗುವಷ್ಟು ಇದು ಬೆಳೆದು ನಿಂತಿದೆ. ನೈತಿಕ ಪೊಲೀಸುಗಿರಿ ಮಾಡುವ ಪತ್ರಕರ್ತರು ಭ್ರಷ್ಟಾಚಾರದಿಂದ ಮುಕ್ತರಾಗಿರಬೇಕು ಎಂದು ಸಮಾಜ ಬಯಸುತ್ತದೆ. ಮಾಧ್ಯಮರಂಗದ ಭ್ರಷ್ಟಾಚಾರಕ್ಕೆ ಮದ್ದು ಎಲ್ಲಿ?
ಇವೆಲ್ಲವೂ ನಮಗೆ ಈ ಕ್ಷಣಕ್ಕೆ ತೋಚಿದ್ದು. ನಿಮಗನ್ನಿಸಿದ್ದನ್ನೂ ಹೇಳಿ. ವಿಶ್ವಕನ್ನಡ ಸಮ್ಮೇಳನದ ಮಾಧ್ಯಮಗೋಷ್ಠಿ ಯಶಸ್ವಿಯಾಗಲಿ, ಅದು ಮಾಧ್ಯಮರಂಗಕ್ಕೆ ಒಂದು ಹೊಸದಿಕ್ಕನ್ನು ತೋರಿಸುವಂತಾಗಲಿ.
发表评论