ನೀವೂ ಸಹ ಗಮನಿಸಿರಬಹುದು, ಸಂಪಾದಕೀಯದ ಹಿಟ್ಸ್ ಒಂದು ಲಕ್ಷ ದಾಟಿ ಹೋಗಿದೆ. ಇದು ಸಾಧ್ಯವಾಗಿರುವುದು ಕೇವಲ ಎರಡೂವರೆ ತಿಂಗಳಲ್ಲಿ. ಸ್ಪಷ್ಟವಾಗಿ ಹೇಳುವುದಾದರೆ ೭೪ ದಿನಗಳಲ್ಲಿ. ಸರಾಸರಿ ದಿನವೊಂದಕ್ಕೆ ೧೩೪೦ ಹಿಟ್ಸ್. ಒಟ್ಟು ಪ್ರಕಟವಾದ ಪೋಸ್ಟುಗಳು ೯೦. ಅವುಗಳನ್ನು ಬಂದು ಓದಿದವರು ೬೩ ದೇಶಗಳ ಓದುಗರು. ೮೦೦ಕ್ಕೂ ಹೆಚ್ಚು ಪ್ರಕಟಿತ ಕಮೆಂಟುಗಳು..
ಇದನ್ನು ಆರಂಭಿಸಿದಾಗ ಈ ಯಾವುದನ್ನೂ ತಲೆಯಲ್ಲಿ ಇಟ್ಟುಕೊಂಡವರಲ್ಲ ನಾವು. ಮೀಡಿಯಾಗಳ ಕುರಿತು ಒಂದಿಷ್ಟು ಬರೀಬೇಕು ಅಂತಂದುಕೊಂಡು ಬರೆಯಲಾರಂಭಿಸಿದೆವು. ನೀವು ಅತ್ಯುತ್ಸಾಹದಿಂದ ಪ್ರತಿಕ್ರಿಯಿಸಿದಿರಿ. ಈ ೭೪ ದಿನಗಳಲ್ಲಿ ನಮ್ಮನ್ನು ಹೊಗಳಿದವರು, ಪ್ರೋತ್ಸಾಹಿಸಿದವರು, ತಿದ್ದಿದವರು, ಟೀಕಿಸಿದವರು, ಬೈದವರು, ಕುಹಕವಾಡಿದವರು, ಜಗಳಕ್ಕೆ ನಿಂತವರು, ಒಂದು ಕೈ ನೋಡ್ಕೊಂಡೇ ಬಿಡ್ತೀವಿ ಎಂದು ಬೆದರಿಸಿದವರು, ದಾರಿ ತಪ್ಪಿಸಲು ಯತ್ನಿಸಿದವರು, ಗೊತ್ತಾಯ್ತು ಬಿಡ್ರೀ ನೀವು ಇಂಥವರ ಕಡೆಯವರು ಎಂದು ಮೂಗು ಮುರಿದವರು, ಕಮೆಂಟು ಪ್ರಕಟಿಸಲಿಲ್ಲವೆಂದು ಮುನಿಸಿಕೊಂಡವರು... ಇವರ ಸಂಖ್ಯೆ ಈಗ ಲೆಕ್ಕಕ್ಕೆ ಸಿಕ್ಕುತ್ತಿಲ್ಲ.
ಸಂಪಾದಕೀಯ ಎಂಬ ವಿಲಕ್ಷಣ ಹೆಸರಿನ ಈ ಬ್ಲಾಗ್ ಆರಂಭಿಸಿದ ಕಾಲದಲ್ಲಿ ಹೀಗೆ ಬರೆದುಕೊಂಡಿದ್ದೆವು:
ಪತ್ರಕರ್ತರು ಪ್ರಶ್ನಾತೀತರೆ? ಪ್ರಶ್ನಾತೀತರೆನಿಸಿಕೊಳ್ಳಲು ಅವರಿಗಿರುವ ವಿಶೇಷ ಅರ್ಹತೆಗಳಾದರೂ ಏನು? ರಾಜಕಾರಣಿಗಳಾಗಲಿ, ಮಠಾಧೀಶರಾಗಲಿ, ಅಧಿಕಾರಿಗಳಾಗಲಿ, ನ್ಯಾಯಾಧೀಶರಾಗಲಿ, ಪತ್ರಕರ್ತರಾಗಲಿ ಪ್ರಶ್ನಾತೀತರಾಗಿಹೋದರೆ ಆಗುವ ಸಮಸ್ಯೆಗಳೇನು? ಇನ್ನುಳಿದವರನ್ನೆಲ್ಲ ಪ್ರಶ್ನಿಸಲು ಪತ್ರಕರ್ತರಿದ್ದಾರೆ ನಿಜ, ಆದರೆ ಪತ್ರಕರ್ತರನ್ನು ಪ್ರಶ್ನಿಸುವವರು ಯಾರು? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ನಾವು ಸಂಪಾದಕೀಯದ ಮೂಲಕ ಪತ್ರಕರ್ತರಿಗೇ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಒಂದು ಸಣ್ಣ ಪ್ರಯತ್ನವಷ್ಟೆ ನಮ್ಮದು. ಇವತ್ತು ಮಾಧ್ಯಮ ಕ್ಷೇತ್ರವನ್ನು ರಾಡಿಯೆಬ್ಬಿಸಿರುವುದು ಭ್ರಷ್ಟಾಚಾರ ಮಾತ್ರವಲ್ಲ. ಧರ್ಮಾಂಧತೆ ಮತ್ತು ಜಾತೀಯತೆಗಳು ಮೇರೆ ಮೀರಿವೆ. ರಾಜಕಾರಣಿಗಳಿಗಿಂತ ಹೆಚ್ಚು ಜಾತೀಯತೆಯನ್ನು ಪತ್ರಕರ್ತರೇ ಪ್ರದರ್ಶಿಸುತ್ತಿದ್ದಾರೆ. ರಾಜಕಾರಣಿಗಳಿಗಾದರೋ ಎಲ್ಲ ಜಾತಿಯವರ ಓಟು ಬೇಕು. ಪತ್ರಕರ್ತರಿಗೆ ಆ ಕಷ್ಟವೂ ಇಲ್ಲವಲ್ಲ! ಒಂದಂತೂ ಸ್ಪಷ್ಟಪಡಿಸುತ್ತೇವೆ. ನಮಗೆ ಯಾರ ಮೇಲೂ ದ್ವೇಷವಿಲ್ಲ, ಒಲವೂ ಇಲ್ಲ. ನಮಗೆ ಇಂಥದ್ದು ಅಂಥದ್ದು ಅನ್ನುವ ಇಸಂಗಳು ಇಲ್ಲ. ನಮಗೆ ಸರಿ ಅಲ್ಲ ಅನ್ನಿಸಿದ್ದನ್ನು ಹೇಳುತ್ತೇವೆ, ನಾವು ಹೇಳಿದ್ದು ಸರಿಯಿಲ್ಲ ಎಂಬ ಅಭಿಪ್ರಾಯವಿರುವವರೂ ಪ್ರತಿಕ್ರಿಯೆ ನೀಡಬಹುದು. ಎಲ್ಲ ಮೀಡಿಯಾ ಕಚೇರಿಗಳ ಟೇಬಲ್ಲುಗಳಲ್ಲೂ ನಾವಿದ್ದೇವೆ. ಸತ್ಯ ಹೇಳುತ್ತೇವೆ ಎಂಬ ವಿಶ್ವಾಸದಲ್ಲಿ ಸಾಕಷ್ಟು ಮಾಹಿತಿಗಳನ್ನು ಇ-ಮೇಲ್ ಮೂಲಕವೂ ಅಪರಿಚಿತ ಗೆಳೆಯರು ಕಳುಹಿಸುತ್ತಿದ್ದಾರೆ. ಇದು ಒಂದು ಸಣ್ಣ ಆಂದೋಲನ. ಮಾಧ್ಯಮರಂಗ ಪರಿಶುದ್ಧವಾಗಿರಬೇಕು ಎಂದು ಬಯಸುವವರೆಲ್ಲ ಇದರಲ್ಲಿ ಪಾಲ್ಗೊಳ್ಳಬಹುದು.
ಈ ಮಾತುಗಳಿಗೆ ಇವತ್ತಿಗೂ ನಾವು ಬದ್ಧವಾಗಿದ್ದೇವೆ. ಈ ಬ್ಲಾಗ್ ಮೂಲಕ ನಾವು ಮಾತ್ರ ಮಾತನಾಡುತ್ತಿಲ್ಲ. ಭಿನ್ನ ಭಿನ್ನ ಧ್ವನಿಗಳನ್ನೂ ಸಹ ಇಲ್ಲಿ ಕಾಣಿಸುತ್ತಿದ್ದೇವೆ. ನಾವು ಅಂದುಕೊಂಡಿದ್ದೇ ಸತ್ಯ ಎಂಬ ಬೌದ್ಧಿಕ ಅಹಂಕಾರವಾಗಲಿ, ಇನ್ನೊಬ್ಬರ ನಿಲುವುಗಳನ್ನು ಗೌರವಿಸಬಾರದು ಎಂಬ ಅಸಡ್ಡೆಯಾಗಲಿ ನಮಗಿಲ್ಲ. ಹೀಗಾಗಿ ನಮ್ಮನ್ನು ಕಟುವಾಗಿ ಟೀಕಿಸಿದ ಕಮೆಂಟುಗಳೂ ಇಲ್ಲಿ ಪ್ರಕಟಗೊಂಡಿವೆ.
ಸಂಪಾದಕೀಯದ ಕುರಿತು ಸುದ್ದಿಮನೆಗಳಲ್ಲಿ ಆಗುತ್ತಿರುವ ಚರ್ಚೆ, ಅದರ ಪರಿಣಾಮಗಳ ಕುರಿತು ನಾವೇನನ್ನೂ ಹೇಳಲು ಹೋಗುವುದಿಲ್ಲ. ಹಾಗೆ ಬೆನ್ನು ಚಪ್ಪರಿಸಿಕೊಳ್ಳುವ ಅಭ್ಯಾಸವೂ ನಮಗಿಲ್ಲ. ಸಂಪಾದಕೀಯ ಎಲ್ಲ ಕಡೆಯೂ ಬೇರೆ ಬೇರೆ ಸ್ವರೂಪಗಳಲ್ಲಿ ಇದೆ ಎಂದಷ್ಟೇ ಹೇಳಲು ಬಯಸುತ್ತೇವೆ.
ನಮ್ಮ ನಿಮ್ಮ ಅನುಬಂಧ ಹೀಗೆ ಮುಂದುವರೆಯಲಿ ಎಂಬ ಬಯಕೆ ನಮ್ಮದು. ಹೀಗೇ ಪ್ರತಿಕ್ರಿಯಿಸುತ್ತಿರಿ. ಇದರಿಂದೇನೋ ಕ್ರಾಂತಿಯಾದೀತು ಎಂಬ ಹುಚ್ಚುಭ್ರಮೆಯೇನು ನಮಗಿಲ್ಲ. ಸಾಗಬೇಕಾದ ಹಾದಿ ಇನ್ನೂ ದೂರವಿದೆ. ದಾರಿಗುಂಟ ನೀವಿರುತ್ತೀರೆಂಬ ವಿಶ್ವಾಸವಿದೆ.
ಕಡೆಯದಾಗಿ ನೀವು ಪದೇ ಪದೇ ಕೇಳುವ ಒಂದು ಪ್ರಶ್ನೆ. ಅದಕ್ಕೆ ಸದ್ಯಕ್ಕೆ ಉತ್ತರಿಸುವುದಿಲ್ಲ. ಈಗ ಉತ್ತರಿಸದೇ ಇರುವುದಕ್ಕೂ ಒಂದು ಬಲವಾದ ಕಾರಣವಿದೆ. ಮುಂದೆ ನಾವು ಈ ಪ್ರಶ್ನೆಗೆ ಉತ್ತರ ನೀಡುವ ಸಂದರ್ಭ ಬರುತ್ತದಲ್ಲ, ಆ ಸಂದರ್ಭಕ್ಕೂ ಒಂದು ಮಹತ್ವವಿರುತ್ತದೆ. ಪ್ಲೀಸ್ ಆ ಪ್ರಶ್ನೆಯೊಂದನ್ನು ಈಗ ಕೇಳಬೇಡಿ.
ನಮಗೂ ಹೇಳೋದು ಸಾಕಷ್ಟಿದೆ, ಸದ್ಯಕ್ಕೆ ಇಷ್ಟು ಸಾಕು, ಮತ್ತೆ ಮತ್ತೆ ಸಿಕ್ತಾ ಇರೋಣ.
发表评论