ತದನಂತರ ವಿರೋಧ ಪಕ್ಷದ ನಾಯಕನ ಪ್ರೆಸ್‌ಮೀಟ್. ಹೀರೋ ಎನ್‌ಕೌಂಟರ್ ಬಗ್ಗೆ ಪ್ರಶ್ನೆ ಕೇಳುತ್ತಾನೆ. ನೀವು ಎನ್‌ಕೌಂಟರ್ ಮಾಡೋದು ಗ್ಯಾರೆಂಟಿ ತಾನೇ ಎಂದು ಅನುಮಾನದಿಂದ ಕೇಳುತ್ತಾನೆ. ಖಂಡಿತಾ ಮಾಡಿಸ್ತೀನಿ ಎಂದು ವಿರೋಧಪಕ್ಷದ ನಾಯಕ ಸಮಾಧಾನಿಸುವ ಪ್ರಯತ್ನ ಮಾಡುತ್ತಾನೆ.
ಇದು ಶಿವರಾಜ ಕುಮಾರ್ ಅಭಿನಯದ ಮೈಲಾರಿ ಚಿತ್ರದ ದೃಶ್ಯ.
ನಿರ್ದೇಶಕ ಚಂದ್ರುಗೆ ರಾಜಕಾರಣ ಅಂದ್ರೆ ಏನು ಅಂತ ಗೊತ್ತಿಲ್ಲ, ಪತ್ರಿಕೋದ್ಯಮ ಅಂದ್ರೂನೂ ಏನೇನೂ ಗೊತ್ತಿಲ್ಲ. ಕಾನೂನು, ನ್ಯಾಯಾಲಯಗಳ ಕುರಿತು ಕನಿಷ್ಠ ತಿಳಿವಳಿಕೆಯೂ ಇಲ್ಲ. ಚಿತ್ರವನ್ನು ಯಾರಾದ್ರೂ ಮಾನವಹಕ್ಕು ಹೋರಾಟಗಾರರು ನೋಡಿದರೆ ಥಿಯೇಟರ್‌ನಲ್ಲೇ ತಲೆ ಚೆಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡು, ಅವರ ಮಾನವ ಹಕ್ಕು ಹರಣವಾದರೆ ಆಶ್ಚರ್ಯವಲ್ಲ.
ತನ್ನ ವಿರುದ್ಧವಾಗಿ ಬರೆದ ಪತ್ರಕರ್ತನ ಮನೆಗೆ ನುಗ್ಗಿ ವಿರೋಧಪಕ್ಷದ ನಾಯಕನೇ ಆತನನ್ನು ಕೊಲ್ಲುತ್ತಾನೆ. ಮಾತ್ರವಲ್ಲ ಆತನ ಹೆಂಡತಿ ಹಾಗು ಪುಟ್ಟ ಮಗುವನ್ನೂ ಕೊಲ್ಲುತ್ತಾನೆ. ರೊಚ್ಚಿಗೆದ್ದ ಇಬ್ಬೊಬ್ಬ ಪತ್ರಕರ್ತ (ಶಿವರಾಜ ಕುಮಾರ್) ಬೀದಿಯಲ್ಲಿ ಅಟ್ಟಾಡಿಸಿಕೊಂಡು ವಿರೋಧಪಕ್ಷದ ನಾಯಕನನ್ನು ಕೊಲ್ಲುತ್ತಾನೆ. ಪತ್ರಕರ್ತನಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಕಡೆಗೆ ಪತ್ರಕರ್ತ ಬರೆದ ಮಹೋನ್ನತ ಕೃತಿ(!)ಯನ್ನು ಓದಿ ಮೆಚ್ಚುವ ರಾಷ್ಟ್ರಪತಿಗಳು ಆತನ ಗಲ್ಲು ಶಿಕ್ಷೆ ರದ್ದುಗೊಳಿಸುವುದು ಮಾತ್ರವಲ್ಲ, ಸಂಪೂರ್ಣ ಶಿಕ್ಷೆಯನ್ನೇ ರದ್ದುಗೊಳಿಸಿ ಬಿಡುಗಡೆಗೊಳಿಸುತ್ತಾರೆ.
ಈ ಸಿನಿಮಾವನ್ನು ಕಾನೂನು-ಕಟ್ಲೆ ಬಗ್ಗೆ ಪ್ರಾಥಮಿಕ ಜ್ಞಾನವಿರುವ ಸಾಮಾನ್ಯ ನೋಡುಗ ನೋಡಿದರೂ ಗಾಬರಿಬಿದ್ದು ಹೋಗುತ್ತಾರೆ. ಸಿನಿಮಾ ಹೀರೋ ಪತ್ರಕರ್ತ ಎಂಬ ಕಾರಣಕ್ಕೆ ಪತ್ರಕರ್ತರು ನೋಡಿದರೆ ಕೂದಲು ಕಿತ್ತುಕೊಂಡು ಆಚೆಗೆ ಬರಬೇಕು.
ಚಿತ್ರ ಹೀಗಿರುವಾಗ ಪತ್ರಿಕೆಗಳಲ್ಲಿ ಬರುವ ಭಾನುವಾರದ ಚಿತ್ರವಿಮರ್ಶೆಗಳು ಹೇಗಿದ್ದವು? ವಿಜಯ ಕರ್ನಾಟಕ, ಕನ್ನಡಪ್ರಭಗಳಲ್ಲಿ ಮೈಲಾರಿಯನ್ನೂ ಅದರ ಜನಕ ಚಂದ್ರುವನ್ನೂ ಹಾಡಿ ಹೊಗಳಲಾಗಿದೆ. ಅವರ ಪ್ರಕಾರ ಸಿನಿಮಾ ಅದ್ಭುತ, ಅತ್ಯದ್ಭುತ! ಮಾಸ್‌ಗೆ ಇಷ್ಟವಾಗುವ ಕ್ಲಾಸ್ ಚಿತ್ರ!.
ಇದು ಮಾಸೂ ಅಲ್ಲ, ಕ್ಲಾಸೂ ಅಲ್ಲ ಪೂರ್ತಿ ಬೋಗಸ್ಸು ಎಂದು ಬರೆದಿರುವುದು ಪ್ರಜಾವಾಣಿ ಮಾತ್ರ. ನಿರ್ದೇಶಕನ ಬಾಲಿಷತನವನ್ನು ನೇರಾನೇರ ಟೀಕಿಸಿ, ಚಿತ್ರದ ಠೊಳ್ಳುತನವನ್ನು ಪ್ರಜಾವಾಣಿ ಬಿಡಿಸಿಟ್ಟಿದೆ.
ಪ್ರಜಾವಾಣಿ ಹೊರತುಪಡಿಸಿ ಬೇರೆ ಪತ್ರಿಕೆಗಳಲ್ಲಿ ಬರುವ ಚಿತ್ರ ವಿಮರ್ಶೆಯನ್ನು ನೋಡಿ ಸಿನಿಮಾ ಮಂದಿರಕ್ಕೆ ಪ್ರೇಕ್ಷಕರು ಹೋದರೆ ಅವರ ಪಾಡು ಹೇಳತೀರದು. ಹೊಗಳೋದಕ್ಕೆ ಏನಾದ್ರೂ ಒಂದು ಡೈಲಾಗು ಸಿಕ್ಕರೂ ಅದನ್ನು ವಿಜೃಂಭಿಸಲಾಗುತ್ತದೆ. ತಪ್ಪುಗಳನ್ನೆಲ್ಲ ಮುಚ್ಚಿಟ್ಟು ಇಲ್ಲದ ಗುಣಗಳನ್ನು ಹುಡುಕಿ ವೈಭವೀಕರಿಸಲಾಗುತ್ತದೆ. ಇದು ಯಾಕೆ ಅಂದರೆ ಈ ಪತ್ರಿಕೆಗಳಿಗೆ ಸಿನಿಮಾ ವಲಯದಿಂದ ಬರುವ ಜಾಹೀರಾತುಗಳು ಬೇಕು. ಅದಕ್ಕಾಗಿ ಅವರು ನಿರ್ಮಾಪಕರನ್ನು ಎದುರು ಹಾಕಿಕೊಳ್ಳಲಾರವು.
ಈ ಪತ್ರಿಕೆಗಳಲ್ಲಿ ಬಂದ ವಿಮರ್ಶೆಯ ತುಣುಕುಗಳನ್ನು ಜಾಹೀರಾತು ಫಲಕಗಳಲ್ಲಿ ಅಳವಡಿಸಿ ಪ್ರೇಕ್ಷಕರನ್ನು ಸೆಳೆಯುವ ಯತ್ನವೂ ಸಿನಿಮಾ ಮಂದಿಯಿಂದ ನಡೆಯುತ್ತಿದೆ.
ಜನರನ್ನು ಹೀಗೆ ದಾರಿ ತಪ್ಪಿಸುವ ಬದಲು ಕನಿಷ್ಠ ಪ್ರಾಯೋಜಿತ ವರದಿ ಎಂಬ ಹೆಸರಿನಲ್ಲಾದರೂ ಇಂಥ ವಿಮರ್ಶೆ, ವರದಿಗಳನ್ನು ಮಾಡಬಹುದು. ಆದರೆ ಪತ್ರಿಕೆಗಳ ಜಾಹೀರಾತು ವಿಭಾಗದ ಒತ್ತಡಕ್ಕೆ ಕಟ್ಟುಬಿದ್ದು, ವರದಿಗಾರರಿಂದ ಹಸಿಸುಳ್ಳುಗಳನ್ನು ಅವರ ಆತ್ಮಸಾಕ್ಷಿಗೆ ವಿರುದ್ಧವಾಗಿ ಬರೆಸಲಾಗುತ್ತದೆ.
ಒಂದು ಸಲಹೆ: ನಿಜ, ಜಾಹೀರಾತು ಮುಖ್ಯ. ನಿಮ್ಮ ವಿಮರ್ಶೆಗಳಲ್ಲಿ ಯಾವ ಸಿನಿಮಾವನ್ನೂ (ಜಾಹೀರಾತು ತರುವ) ನಿಜವಾದ ಅರ್ಥದಲ್ಲಿ ವಿಮರ್ಶೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಆತ್ಮವಂಚನೆ ಏಕೆ? ಭಾನುವಾರದ ಚಿತ್ರ ವಿಮರ್ಶೆಯನ್ನೇ ನಿಲ್ಲಿಸಿಬಿಡಿ. ವರದಿಗಾರರ ಆತ್ಮಗೌರವವೂ ಉಳಿಯುತ್ತದೆ. ಪತ್ರಿಕೆಯ ರೆಪ್ಯುಟೇಷನ್ ಕೂಡ ಉಳಿಯುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಪತ್ರಿಕೆಗಳ ವಿಮರ್ಶೆಗಳನ್ನು ಓದಿ ದಾರಿ ತಪ್ಪಿ ಸಿನಿಮಾ ಮಂದಿರಗಳಿಗೆ ಹೋಗುವ ಪ್ರೇಕ್ಷಕರ ಪರದಾಟವೂ ನಿಲ್ಲುತ್ತದೆ.
ಇದೇ ಸರಿಯಾದ ಮಾರ್ಗವಲ್ಲವೆ?
发表评论