ಹಿಂದೆ ವಿಜಯ ಕರ್ನಾಟಕ ಪತ್ರಿಕೆಯು ಡಾ.ಯು.ಆರ್.ಅನಂತಮೂರ್ತಿಯವರ ಜತಿ ಕುಸ್ತಿಗೆ ಬಿದ್ದಿದ್ದು, ಎಸ್‌ಎಂಎಸ್ ಆಹ್ವಾನಿಸಿ, ಪುಟಗಟ್ಟಲೆ ಪ್ರಕಟಿಸಿ ಅನಂತಮೂರ್ತಿಯವರ ಚಾರಿತ್ರ್ಯಹರಣಕ್ಕೆ ಯತ್ನಿಸಿದ್ದೆಲ್ಲ ಹಳೆಯ ಕಥೆ. ಆನಂತರ ಅನಂತಮೂರ್ತಿಯವರು ಯಾವ ಕಾರ್ಯಕ್ರಮದಲ್ಲಿ ಮಾತಾಡಿದರೂ ಅದು ವಿಜಯ ಕರ್ನಾಟಕದಲ್ಲಿ ಸುದ್ದಿಯಾಗುತ್ತಿರಲಿಲ್ಲ. ವಿಕ ವರದಿಗಾರರು ಅನಂತಮೂರ್ತಿಯವರಿದ್ದ ಕಾರ್ಯಕ್ರಮಗಳಿಗೆ ಹೋಗುತ್ತಲೇ ಇರಲಿಲ್ಲ. ಹೋದರೂ ಅನಂತಮೂರ್ತಿ ಮಾತನಾಡುವಾಗ ಏನನ್ನೂ ನೋಟ್ಸ್ ಮಾಡಿಕೊಳ್ಳಲಾರದೆ ಚಡಪಡಿಸುತ್ತಿದ್ದರು.

ನಂತರ ವಿಶ್ವೇಶ್ವರ ಭಟ್ಟರಿಗೆ ಜ್ಞಾನೋದಯವಾಗಿ, ಅನಂತಮೂರ್ತಿಯವರ ಹೆಸರು ಅಲ್ಲಿ ಇಲ್ಲಿ ಪ್ರಕಟಿಸುವ ಮನಸ್ಸು ಮಾಡಿದರು. ಭಟ್ಟರು ವಿಕ ಬಿಟ್ಟು ಹೋದ ನಂತರ ಅದರ ಸಾಪ್ತಾಹಿಕ ಪುರವಣಿಯ ಮುಖಪುಟದಲ್ಲಿ(ಪೂರ್ಣ ಪುಟ)
ಅನಂತಮೂರ್ತಿಯವರನ್ನು ಕುರಿತಾದ ವಿಶೇಷ ಲೇಖನ ಪ್ರಕಟವಾಯಿತು ಎಂಬುದು ಮತ್ತೊಂದು ವ್ಯಂಗ್ಯ.

ಲೇಟೆಸ್ಟ್ ಸುದ್ದಿಯೆಂದರೆ ಪ್ರಜಾವಾಣಿಯದು. ಪ್ರಜಾವಾಣಿಯಲ್ಲಿ ದಶಕಗಳ ಕಾಲ ದುಡಿದಿರುವ ರಂಜಾನ್ ದರ್ಗಾ ಹೆಸರಾಂತ ಸಾಹಿತಿಯಾಗೂ ಗುರುತಿಸಿಕೊಂಡರು. ವಿಶೇಷವಾಗಿ ವಚನಕಾರರ ಕುರಿತಾದ ಅವರ ಅಧ್ಯಯನ ಗಮನಾರ್ಹವಾದುದು.
ಈಗ್ಗೆ ಒಂದೂವರೆ ವರ್ಷಗಳ ಕೆಳಗೆ ದರ್ಗಾ ಪ್ರಜಾವಾಣಿಯಿಂದ ನಿವೃತ್ತರಾದರು. ಪ್ರಜಾವಾಣಿಯಲ್ಲಿದ್ದ ಕಾಲದಲ್ಲಿ ಉಸ್ತುವಾರಿ ಸಂಪಾದಕರೊಂದಿಗೆ ಅವರ ಸೈದ್ದಾಂತಿಕ ಘರ್ಷಣೆಗಳು ನಡೆಯುತ್ತಿದ್ದವಂತೆ. ವಿಶೇಷವಾಗಿ ಬಿಜೆಪಿ ಸರ್ಕಾರ ಮತ್ತು ಯಡಿಯೂರಪ್ಪನವರ ಕುರಿತಾಗಿ ಪ್ರಜಾವಾಣಿ ತಳೆದ ಸಾಫ್ಟ್ ಧೋರಣೆಗೆ ದರ್ಗಾ ಸಾಹೇಬರ ಮುನಿಸಿತ್ತಂತೆ.

ಹೀಗಾಗಿ ದರ್ಗಾ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋಗಿ ಭಾಷಣ ಮಾಡಿದರೂ ಅವರ ಹೆಸರು ಪ್ರಜಾವಾಣಿ ವರದಿಯಲ್ಲಿ ಎಡಿಟ್ ಆಗಿ ಹೋಗುತ್ತದೆ. ದರ್ಗಾ ಅವರೇ ಉದ್ಘಾಟನೆ ಮಾಡಿದ ಕಾರ್ಯಕ್ರಮಗಳ ವರದಿಯಲ್ಲೂ ಹೆಸರು ಇರುವುದಿಲ್ಲವಂತೆ.
ಮೊನ್ನೆ ಏನಾಗಿದೆ ಎಂದರೆ, ನಿಡುಮಾಮಿಡಿ ಮಠದ ವತಿಯಿಂದ ೨೫ ಮಂದಿಗೆ ಸದ್ಭಾವನಾ ಪ್ರಶಸ್ತಿಗಳನ್ನು ಘೋಷಿಸಲಾಯಿತು. ಘೋಷಣೆ ಮಾಡಿದವರು ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ ಪ್ರಸಾದ್ ಮೈಸೂರಿನಲ್ಲಿ.
ಪ್ರಜಾವಾಣಿಯಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟವಾಯಿತು. ಈ ಪಟ್ಟಿಯಲ್ಲಿ ೨೪ ಹೆಸರುಗಳು ಮಾತ್ರವಿದೆ. ಇನ್ನೊಂದು ಹೆಸರು ಯಾವುದೆಂದರೆ ಅದು ರಂಜಾನ್ ದರ್ಗಾ ಅವರದು!

ಇದು ಎಂಥ ಹೇಸಿಗೆಯ ಪತ್ರಿಕಾಧರ್ಮ? ಪ್ರಶಸ್ತಿ ಪಟ್ಟಿಯಿಂದ ತಮಗೆ ಆಗದವರ ಹೆಸರನ್ನು ಎಡಿಟ್ ಮಾಡುವ ಪತ್ರಕರ್ತರ ಹಿಂದಿನ ಮನಸ್ಥಿತಿ ಎಷ್ಟು ಕೊಳಕಾಗಿರಬಹುದು?

ಈ ಕುರಿತು ರಂಜಾನ್ ದರ್ಗಾ ತಮ್ಮ ಫೇಸ್‌ಬುಕ್‌ನಲ್ಲಿ ಬರೆದು ಪ್ರತಿಭಟಿಸಿದ್ದಾರೆ.

ಪ್ರಜಾವಾಣಿ ತಮಗೆ ಆಗದವರ ಹೆಸರನ್ನು ಹೀಗೆ ಡಿನೋಟಿಫಿಕೇಷನ್ ಮಾಡಿ ಏನನ್ನು ಸಾಧಿಸಲು ಹೊರಟಿದೆ?
0 komentar

Blog Archive