ಪತ್ರಿಕೋದ್ಯಮದಲ್ಲಿನ ಭ್ರಷ್ಟಾಚಾರದ ಬಗ್ಗೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಚರ್ಚೆಯಾಗುತ್ತಿದೆ. ಸ್ವಂತ ಪರಿಶ್ರಮವಿಲ್ಲದೆ ಬಂದ ಸಂಪತ್ತು ಅಮೇಧ್ಯ ಎನ್ನುವುದನ್ನು ಕೇವಲ ರಾಜಕಾರಣಿಗಳಲ್ಲ, ಪತ್ರಕರ್ತರೂ ತಿಳಿದುಕೊಳ್ಳಬೇಕಾದ ಅಗತ್ಯವಿದೆ.

ವಿಶ್ವೇಶ್ವರ ಭಟ್ ವಿಜಯ ಕರ್ನಾಟಕದಿಂದ ಹೊರನಡೆದಿದ್ದಾರೆ. ಅವರು ಉನ್ನತ ವ್ಯಾಸಂಗಕ್ಕಾಗಿ ಹೊರಟಿದ್ದೇನೆ ಎಂದಿದ್ದಾರೆ. ಅವರಿಗೆ ಈಗಲಾದರೂ ಒಳ್ಳೆಯ ಶಿಕ್ಷಣ ಸಿಗಲಿ. ಅವರೇನೋ, ಉನ್ನತ ಶಿಕ್ಷಣ ಪಡೆಯುತ್ತಾರೆ, ಅವರನ್ನು ನಂಬಿಕೊಂಡು ಕೆಲಸ ಬಿಟ್ಟವರ ಗತಿ? ಅವರ ಅನುಯಾಯಿಗಳು ಎಂಬ ಕಾರಣಕ್ಕೆ ವಿಜಯ ಕರ್ನಾಟಕದಲ್ಲಿ ಮ್ಯಾನೇಜ್‌ಮೆಂಟ್‌ನ ಅನುಮಾನಗಳಿಗೆ ಗುರಿಯಾಗಿ ಯಾತನೆ ಅನುಭವಿಸುತ್ತಿರುವವರ ಗತಿ?

ಒಂದಂತೂ ಸತ್ಯ. ಇವರೆಲ್ಲರನ್ನೂ ಈ ಸ್ಥಿತಿಗೆ ತಂದ ನಿಜ ಕಾರಣಗಳು, ತಪ್ಪುಗಳು, ವೃತ್ತಿ ದ್ರೋಹದ ಕೃತ್ಯಗಳು ಬಯಲಾದರೆ ಎಲ್ಲರ ಮುಖವಾಡಗಳು ಕಳಚಿ ಎಲ್ಲರೂ ಬೆತ್ತಲಾಗುತ್ತಾರೆ.

ಹುಬ್ಬಳ್ಳಿಯಲ್ಲಿ ಪತ್ರಕರ್ತನಾಗಿದ್ದವನೊಬ್ಬ ಬೆಂಗಳೂರಿನಲ್ಲಿ ಅರಮನೆಯಂಥಾ ಮನೆ ಕಟ್ಟುತ್ತಿದ್ದಾನೆ ಎಂಬ ಸುದ್ದಿಯಿದೆ. ವಾರಕ್ಕೊಂದು ಅಂಕಣ ಬರೆದುಕೊಂಡಿದ್ದವನು ಹನ್ನೆರಡು ಅಂಕಣದ ಮನೆ ಕಟ್ಟಿಕೊಳ್ಳಲು ಮೈಸೂರಿನಲ್ಲಿ ಪತ್ನಿ ಹೆಸರಲ್ಲಿ ಜಿ-ಕೆಟಗರಿಯಲ್ಲಿ ಸೈಟ್ ಮಾಡಿಕೊಂಡಿದ್ದಾನೆ. ಆದರೂ ಸತ್ಯ, ನೀತಿ, ನಿಯತ್ತು ಎಂದೆಲ್ಲಾ ಬರೆಯುತ್ತಲೆ ಇದ್ದರು ಈ ಮಹಾನುಭಾವರುಗಳು.  ಆತ್ಮಸಾಕ್ಷಿ ಎನ್ನುವುದೇ ಬೇಡವೇ?

ಯಡಿಯೂರಪ್ಪ ಅಧಿಕಾರದಾಹಿ. ಆತ ಎಷ್ಟೇ ಹಗರಣಗಳು ಹೊರಬಂದರೂ ರಾಜೀನಾಮೆ ಕೊಡುವುದಿಲ್ಲ ಎಂದುಕೊಂಡ ಅನೇಕರಿಗೆ ಈ ಪತ್ರಕರ್ತರ ವರ್ತನೆ ದಿಗ್ಭ್ರಮೆ ಮೂಡಿಸಿದೆ. ಹಿಂದೆಲ್ಲ ಪತ್ರಕರ್ತರ ಮೇಲೆ ಸಣ್ಣ ಆರೋಪ ಬಂದರೂ ಅವರನ್ನು ಕಿತ್ತು ಎಸೆಯಲಾಗುತ್ತಿತ್ತು. ಆದರೆ ಪ್ರಣಬ್ ರಾಯ್‌ನಂಥ ಪ್ರಣಬ್ ರಾಯ್ ತನ್ನ ಎನ್‌ಡಿಟಿವಿಯ ಗ್ರೂಪ್ ಎಡಿಟರ್ ಬರ್ಖಾ ದತ್‌ಳನ್ನು ಹಾಗೇ ಉಳಿಸಿಕೊಂಡಿದ್ದಾರೆ. ನೀರಾ ರಾಡಿಯಾ ಜತೆಗಿನ ಸಂಬಂಧದ ಕುರಿತಾಗಿ ಬರ್ಖಾಳ ‘ಮುಗ್ಧತೆಯನ್ನು ಅವರು ಸಮರ್ಥಿಸುತ್ತಿದ್ದಾರೆ. ರಾಜ್ಯದ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಪತ್ರಕರ್ತನೊಬ್ಬ ಒಂದು ಲಕ್ಷ ರೂಪಾಯಿ ಜಾಹೀರಾತು ಹಣ ಹೊಡೆದು ಸಿಕ್ಕಿಬಿದ್ದರೂ ಆತನ ಮೇಲೆ ಕ್ರಮ ಕೈಗೊಳ್ಳಲಾಗಿಲ್ಲ. (ದಾಖಲೆಗಳು ದೊರೆತ ನಂತರ ಪೂರ್ಣ ವಿವರ
ನೀಡಲಾಗುವುದು.)

ಸಾಮಾನ್ಯ ಓದುಗನಿಗೆ ಪತ್ರಕರ್ತನೆಂದರೆ ಗೌರವ. ಮುದ್ರಿತ ರೂಪದಲ್ಲಿರುವ ಅಕ್ಷರಗಳೆಲ್ಲ ಸತ್ಯ ಎಂಬ ನಂಬಿಕೆ. ಆದರೆ ಆ ಗೌರವ ಮತ್ತು ನಂಬಿಕೆಗಳಿಗೆ ಕುತ್ತು ತರುವ ಕೆಲಸ ಪತ್ರಿಕೆಗಳ ನೇತೃತ್ವ ವಹಿಸಿದವರೇ ಮಾಡುತ್ತಿರುವುದು ದುರಂತ. ಹಾಲಪ್ಪನ ಅವಾಂತರ, ರೇಣುಕಾಚಾರ್ಯನ ಕಾಮಪುರಾಣ, ಯಡಿಯೂರಪ್ಪನ ಭೂದಾಹ, ಕಟ್ಟಾನ ದರೋಡೆಗಳ ಬಗ್ಗೆ ಬರೆಯುವವರು ಶುದ್ಧವಾಗಿರಬೇಕೆಂದು ಜನರು ನಿರೀಕ್ಷಿಸುವುದು ಸಹಜ.

ಅವರ ನಿರೀಕ್ಷೆಗಳನ್ನು ಉಪೇಕ್ಷಿಸುವುದು, ತಿರಸ್ಕರಿಸುವುದು, ಅಪಮಾನಿಸುವುದು ಎಷ್ಟು ಸರಿ?

0 komentar

Blog Archive