ಟಿವಿ ೯ ಖಾರದಪುಡಿಗೂ, ಕೃಷ್ಣ ಪ್ರಸಾದ್‌ಗೂ ಏನು ಸಂಬಂಧ ಅಂತೀರಾ?
ಈಗ ನೂರಾರು ಟಿವಿ ಚಾನೆಲ್‌ಗಳು. ಪ್ರತಿ ಚಾನೆಲ್ ಬಳಿಯೂ ಅತ್ಯಾಧುನಿಕ ತಂತ್ರಜ್ಞಾನದ ಸಾಮಾಗ್ರಿಗಳಿವೆ. ಇವರು ವಾರಕ್ಕೊಂದು ಇಂತಹ ಕಾರ್ಯಚರಣೆ ನಡೆಸಿದರೆ ಏನೂ ಆಶ್ಚರ್ಯವಿಲ್ಲ. ಆದರೆ ತೊಂಭತ್ತರ ದಶಕದಲ್ಲಿ, ಅಂದು ಲಭ್ಯವಿದ್ದ ಉಪಕರಣಗಳ ಸಹಾಯದಿಂದ ಕ್ರಿಕೆಟ್ ಜಗತ್ತನ್ನೇ ಬೆಚ್ಚು ಬೀಳಿಸಿದ ಬೆಟ್ಟಿಂಗ್ ಹಗರಣವನ್ನು ಮೊದಲು ಬಯಲು ಮಾಡಿದ್ದು ಕೃಷ್ಣ ಪ್ರಸಾದ್ ಮತ್ತು ಅನಿರುದ್ಧ ಬಹಲ್. ಅದೇ ಮುಂದೆ ಐತಿಹಾಸಿಕ ಮಹತ್ವದ ತೆಹಲ್ಕಾ ಕುಟುಕು ಕಾರ್ಯಚರಣೆಗೆ ದಾರಿಯಾಯಿತು.
ಆಪ್ತರ ವಲಯದಲ್ಲಿ ಕೆಪಿ ಎಂದೇ ಖ್ಯಾತರಾದ ಕೃಷ್ಣ ಪ್ರಸಾದ್ ಟ್ರೆಂಡ್ ಸೆಟ್ಟರ್. ಔಟ್‌ಲುಕ್ ಪತ್ರಿಕೆ ಜೊತೆ ಅವರದು ಹಳೆ ಸಂಬಂಧ. ಪತ್ರಿಕೆ ಆರಂಭವಾದಾಗಿನಿಂದಲೂ ಅದರೊಟ್ಟಿಗೆ ಗುರುತಿಸಿಕೊಂಡಿದ್ದಾರೆ. ಕೆಲಕಾಲ ಪತ್ರಿಕೆ ವಿಶೇಷ ಸಂಚಿಕೆಗಳ ಉಸ್ತುವಾರಿ ವಹಿಸಿದ್ದರು. ೨೦೦೮ ರ ಸೆಪ್ಟೆಂಬರ್‌ನಲ್ಲಿ ಔಟ್‌ಲುಕ್ ಸಂಪಾದಕರಾಗಿ ಅವರನ್ನು ನೇಮಿಸಲಾಯಿತು. ಪತ್ರಿಕೆ ಈ ವರ್ಷ ಹೊರತಂದ ವಾರ್ಷಿಕ ವಿಶೇಷ ಸಂಚಿಕೆ ದೇಶಾದ್ಯಂತ ಮಾಧ್ಯಮ ಕಚೇರಿಗಳಲ್ಲಿ ಚರ್ಚೆಯ ವಸ್ತು. ಇಂದಿನ ಮಾಧ್ಯಮ ಕ್ಷೇತ್ರದ ಎಡವಟ್ಟುಗಳು, ಹೆಗ್ಗಳಿಕೆಗಳು ವಿಸ್ತೃತವಾಗಿ ಈ ಸಂಚಿಕೆಯಲ್ಲಿ ಚರ್ಚೆಯಾಗಿವೆ. ಮಾಧ್ಯಮ ಕ್ಷೇತ್ರದ ಆಸಕ್ತರೆಲ್ಲಾ ಓದಲೇಬೇಕಾದ, ಸಂಗ್ರಹಯೋಗ್ಯ ಸಂಚಿಕೆ ರೂಪಿಸಿದ ಯಶಸ್ಸು ಕೆಪಿಗೆ ಸಲ್ಲಬೇಕು.
ಇತ್ತೀಚೆಗಿನ ನೀರಾ ರಾಡಿಯಾ ಪ್ರಕರಣದಲ್ಲಿ ರಾಡಿ ಎಬ್ಬಿಸಿದ ಟೇಪುಗಳನ್ನು ಮೊದಲು ಪ್ರಕಟಿಸಿದ ಎರಡು ವಾರಪತ್ರಿಕೆಗಳಲ್ಲಿ ಔಟ್‌ಲುಕ್ ಕೂಡಾ ಒಂದು. ಮಾಧ್ಯಮ ಕ್ಷೇತ್ರದ ದಲ್ಲಾಳಿಗಳನ್ನು ಈವರೆಗೆ ಈ ಮಟ್ಟಿಗೆ ಚರ್ಚೆಯ ವಸ್ತು ಮಾಡಿದ ಉದಾಹರಣೆ ಬೇರೆ ಇಲ್ಲ. ಈ ಎಲ್ಲಾ ಕಾರಣಗಳಿಗಾಗಿ ಪ್ರೆಸ್‌ಕ್ಲಬ್ ಆಯ್ಕೆ ಮಹತ್ವದ್ದು.
ಕೆಪಿ ವಿಜಯ ಟೈಮ್ಸ್ ಪತ್ರಿಕೆಗೆ ಕೆಲಕಾಲ ಸಂಪಾದಕರಾಗಿ ದುಡಿದಿದ್ದರು. ಅವರ ಕಾಲದಲ್ಲಿ ಪತ್ರಿಕೆಯ ಪ್ರಸರಣ ಸಂಖ್ಯೆಯೂ ಹೆಚ್ಚಿತ್ತು. ಟೈಮ್ಸ್ ಆಫ್ ಇಂಡಿಯಾ ಸಂಸ್ಥೆ ವಿಜಯ ಟೈಮ್ಸ್ ಪತ್ರಿಕೆಯನ್ನು ಟ್ಯಾಬ್ಲಾಯ್ಡ್ ರೂಪಕ್ಕೆ ಮಾರ್ಪಾಡಿಸಲು ಹೊರಟಾಗ ಕೆಪಿ ಪತ್ರಿಕೆಯಿಂದ ಹೊರ ನಡೆದಿದ್ದರು.
ಕೃಷ್ಣಪ್ರಸಾದ್ ಅವರ ಕ್ರಿಯೇಟಿವಿಟಿಗೆ ಚುರುಮುರಿ ಬ್ಲಾಗ್ ಸಾಕ್ಷಿ. ಚುರುಮುರಿ ಹೆಸರಿನಲ್ಲಿ ಅತ್ಯಂತ ಜನಪ್ರಿಯ ಬ್ಲಾಗ್ ರೂಪಿಸಿದ ಕೀರ್ತಿ ಅವರದು. ಸಮಕಾಲೀನ ರಾಜಕಾರಣ, ಸಮಾಜ, ಆರ್ಥಿಕತೆ, ಚಳವಳಿ ಎಲ್ಲವೂ ಇಲ್ಲಿ ಚರ್ಚಿತವಾಗುತ್ತವೆ.
ಪ್ರೆಸ್‌ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಈ ಬಾರಿ ಕೃಷ್ಣಪ್ರಸಾದ್ ಹಾಗು ಅಥ್ಲೀಟ್ ಅಶ್ವಿನಿ ಅಕ್ಕುಂಜೆ ಅವರಿಗೆ ಜಂಟಿಯಾಗಿ ಕೊಡುತ್ತಿದೆ. ಎರಡೂ ಒಳ್ಳೆಯ ಆಯ್ಕೆಗಳೇ. ಹಾಗೆಯೇ ವಾರ್ಷಿಕ ಪ್ರಶಸ್ತಿಗಳಿಗಾಗಿ ಆಯ್ಕೆ ಮಾಡಿರುವ ಖಾದ್ರಿ ಅಚ್ಯುತನ್, ಈ ಸಂಜೆ ವೆಂಕಟೇಶ್ ಹಾಗು ಟಿ.ಜೆ.ಎಸ್ ಜಾರ್ಜ್ ಕೂಡ ಅತ್ಯಂತ ಅರ್ಹರು.
ಕೊನೆ ಕುಟುಕು: ಎಲ್ಲಾ ಸರಿ, ಆದರೆ ಪ್ರೆಸ್ ಕ್ಲಬ್ ಈ ಬಾರಿ ಪ್ರಶಸ್ತಿ ವಿತರಣೆ ಹಾಗು ಹೊಸ ವರ್ಷಾಚರಣೆಯನ್ನು ಅರಮನೆ ಮೈದಾನದಲ್ಲಿ ಕಾರ್ಪರೇಟ್ ಶೈಲಿಯಲ್ಲಿ ಆಚರಿಸುತ್ತಿರುವುದು ಹಲವರ ಹುಬ್ಬೇರಿಸಿದೆ. ಕ್ಲಬ್ ಸದಸ್ಯರಿಗೆ ನೀಡಲಾದ ಊಟದ ಮೆನು ನೋಡಿದರೆ ಹೊಟ್ಟೆ ಭರ್ತಿಯಾಗುತ್ತದೆ. ಇಂಥ ವೈಭವ ಬೇಕಿತ್ತೆ ಎಂಬ ಪ್ರಶ್ನೆ ಪ್ರೆಸ್‌ಕ್ಲಬ್‌ನ ಹಸಿರು ಹುಲ್ಲುಗಾವಲಲ್ಲಿ ಎದ್ದು ಅಲ್ಲೇ ಚಳಿಯಲ್ಲಿ ಕರಗಿ ಹೋಗುತ್ತಿದೆ.
发表评论