ಪ್ರಜಾವಾಣಿ ಗುರುವಾರ ವಿಷಾದವೊಂದನ್ನು ಪ್ರಕಟಿಸಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿಯವರು ಉಡುಪಿಯಲ್ಲಿ ಮಾಡಿದ ಭಾಷಣದ ವರದಿ ಕುರಿತಾಗಿ ಈ ವಿಷಾದ. ಅದನ್ನು ಓದಿದರೇ ಒಂದು ಬಗೆಯ ವಿಷಾದವಾಗುತ್ತದೆ. ಯಾಕೆಂದರೆ ಸಾಧಾರಣವಾಗಿ ವಿಷಾದಗಳು ಪ್ರಕಟವಾಗುವುದು ಕಣ್ತಪ್ತಿನ ದೋಷಗಳ ಕುರಿತಾಗಿ. ಯಾರದೋ ಹೆಸರಿಗೆ ಬದಲಾಗಿ ಇನ್ನ್ಯಾರದೋ ಹೆಸರು, ಯಾರದೋ ಫೋಟೋ ಬದಲಾಗಿ ಇನ್ನ್ಯಾರದೋ ಫೋಟೋ ಪ್ರಕಟಗೊಂಡಿದ್ದರೆ ಹೀಗೆ ವಿಷಾದಗಳು ಪ್ರಕಟವಾಗುತ್ತವೆ.
ಆದರೆ ಇದು ಅಂಥದ್ದಲ್ಲ. ‘ಹಿಂದೂ ಸಂಸ್ಕೃತಿಯ ಆಳವಾದ ದ್ವೇಷಿ ನಾನು: ಅನಂತಮೂರ್ತಿ ಎಂಬ ಶೀರ್ಷಿಕೆ ಕುರಿತಾಗಿ ಈ ವಿಷಾದದ ನೋಟ್ ಗುರುವಾರದ ಪ್ರಜಾವಾಣಿಯ ೪ನೇ ಪುಟದಲ್ಲಿ ಪ್ರಕಟಗೊಂಡಿದೆ. ಇಲ್ಲಿ ಪ್ರಜಾವಾಣಿ ಮಾಡಿದ ವರದಿಯೇ ಸುಳ್ಳಾಗಿದೆ! ಕೊಟ್ಟ ಹೆಡ್ಡಿಂಗೇ ಸುಳ್ಳಾಗಿದೆ.
‘ಹಿಂದೂ ಸಂಸ್ಕೃತಿಯ ಆಳವಾದ ದ್ವೇಷಿ ನಾನು: ಅನಂತಮೂರ್ತಿ ಎಂಬ ಶೀರ್ಷಿಕೆಯ ಸುದ್ದಿ ಬುಧವಾರದ ಪ್ರಜಾವಾಣಿಯಲ್ಲಿ ಪ್ರಕಟಗೊಂಡಾಗ ಗಾಬರಿಗೊಂಡವರು ಕಾರ್ಯಕ್ರಮ ಆಯೋಜಿಸಿದ್ದ ಉಡುಪಿ ರಥಬೀದಿಯ ಗೆಳೆಯರು. ಅದಕ್ಕೂ ಮುನ್ನ ಆತಂಕಗೊಂಡವರು ಉಡುಪಿ ಪ್ರಜಾವಾಣಿಯ ವರದಿಗಾರರು. ರಥಬೀದಿಯ ಗೆಳೆಯರು ಉಡುಪಿ ಪ್ರಜಾವಾಣಿ ವರದಿಗಾರರನ್ನು ಮಾತನಾಡಿಸಿದಾಗ, ನಾವು ಹೀಗೆ ವರದಿ ಮಾಡೇ ಇಲ್ಲ ಎಂಬ ಉತ್ತರ ಅವರಿಂದ. ನಂತರ ಬೆಂಗಳೂರಿಗೆ ಕರೆ ಮಾಡಿದ ರಥಬೀದಿಯವರು ಹೀಗೇಕೆ ಮಾಡಿದರೆ ಎಂದರೆ ಉತ್ತರವಿಲ್ಲ.
ಕಡೆಗೆ ಸ್ವತಃ ಅನಂತಮೂರ್ತಿಯವರೇ ಪ್ರಜಾವಾಣಿ ಸಂಪಾದಕ ಕೆ.ಎನ್.ಶಾಂತಕುಮಾರ್ ಅವರೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ. ಆಗಿರುವುದು ಅಂತಿಂಥ ಪ್ರಮಾದ ಅಲ್ಲ ಎಂಬುದು ಶಾಂತಕುಮಾರ್ ಗಮನಕ್ಕೆ ಬಂದಿದೆ, ಹೀಗಾಗಿ ಗುರುವಾರ ವಿಷಾದ ಪ್ರಕಟಗೊಂಡಿದೆ.
ಅಸಲಿಗೆ ಉಡುಪಿ ವರದಿಗಾರರು ಬರೆಯದ ವಾಕ್ಯ ವರದಿಯಲ್ಲೇಕೆ ಪ್ರಕಟಗೊಂಡಿತು ಎಂಬುದರ ಕುರಿತೂ ಸಂಪಾದಕೀಯ ತಂಡ ತನಿಖೆ ನಡೆಸಿದೆ. ತನಿಖೆಯ ಪ್ರಕಾರ ಇಂಥದ್ದೊಂದು ಕಪೋಲಕಲ್ಪಿತ, ಪ್ರಚೋದನಾತ್ಮಕ ಅಂಶವನ್ನು ವರದಿಯ ಮೊದಲ ಪ್ಯಾರಾ ಮಾಡಿ, ಹೆಡ್ಡಿಂಗು ಕೊಟ್ಟವರು ತರಬೇತಿಯಲ್ಲಿರುವ ಪತ್ರಕರ್ತರಲ್ಲ, ಪ್ರಜಾವಾಣಿಯ ನೀತಿ ನಿರೂಪಣೆಯ ಜವಾಬ್ದಾರಿ ಹೊತ್ತ ಪ್ರಮುಖ ದಂಡ ನಾಯಕರು!
ಅದಕ್ಕೆ ಅವರು ಕೊಟ್ಟ ಸಮರ್ಥನೆ: ವರದಿಯಲ್ಲಿ ಈ ಅಂಶ ಇರಲಿಲ್ಲ ಎಂಬುದು ನಿಜ. ಆದರೆ ಒಟ್ಟಾರೆ ವರದಿ ಏನನ್ನು ಧ್ವನಿಸುತ್ತಿದೆ ಎಂಬುದನ್ನು ಗ್ರಹಿಸಿ ನಾನು ಆ ಹೆಡ್ಡಿಂಗ್ ಕೊಟ್ಟೆ. ಅದು ಹೀಗಾಗಿ ಹೋಯ್ತು!
ಒಂದು ವೇಳೆ ಇಂಥ ಹೆಡ್ಡಿಂಗು ನೋಡಿ, ಕೆರಳಿದ ಮತಾಂಧರಿಂದ ಅನಾಹುತಗಳೇನಾದರೂ ಜರುಗಿದ್ದರೆ ಅದಕ್ಕೆ ಈ ಗ್ರಹಣಶೂರ ಪತ್ರಕರ್ತರು ಜವಾಬ್ದಾರರಾಗುತ್ತಿದ್ದರೆ?
ವಿಷಾದ ಹಿಂದಿನ ಈ ವಿಷಾದದ ಕಥೆ ನಿಜಕ್ಕೂ ಪ್ರಜಾವಾಣಿಯ ಕುರಿತೇ ವಿಷಾದ ಹುಟ್ಟಿಸುವಂತಿಲ್ಲವೇ?
发表评论