ಬೆಂಗಳೂರಿನ ಪತ್ರಕರ್ತರ ಪಾಲಿನ ನೆಚ್ಚಿನ ತಾಣವಾಗಿರುವ ಪ್ರೆಸ್ ಕ್ಲಬ್‌ನ ವಾರ್ಷಿಕ ಚುನಾವಣೆಗೆ ಅಖಾಡ ಸಜ್ಜುಗೊಂಡಿದೆ. ಬರುವ ೨೪ರಂದು ಭಾನುವಾರವೇ ಚುನಾವಣೆ. ಹಿರಿಯ ಪತ್ರಕರ್ತ ಟಿ.ಎಸ್.ರಾಮಚಂದ್ರರಾಯರು ತಮ್ಮ ಗೆಳೆಯರೊಂದಿಗೆ ೪೧ ವರ್ಷಗಳ ಹಿಂದೆ ಸ್ಥಾಪಿಸಿದ ಬೆಂಗಳೂರು ಪ್ರೆಸ್‌ಕ್ಲಬ್ ದೇಶದ ಪ್ರೆಸ್‌ಕ್ಲಬ್‌ಗಳ ಪೈಕಿ ಹೆಸರುವಾಸಿ. ಕಬ್ಬನ್ ಪಾರ್ಕ್ ಆವರಣದಲ್ಲೇ ಇರುವ ಕ್ಲಬ್‌ನ ಸಹಜ ನೈಸರ್ಗಿಕ ಸೌಂದರ್ಯ ಮತ್ತು ರಮಣೀಯ ವಾತಾವರಣಕ್ಕೆ ಮನಸೋಲದವರೇ ಇಲ್ಲ.

ಎಂ.ಎ.ಪೊನ್ನಪ್ಪ
ಪ್ರೆಸ್‌ಕ್ಲಬ್ ಪತ್ರಕರ್ತರ ಮನರಂಜನೆಗಾಗಿ ಇರುವ ಸಂಸ್ಥೆ. ಆದರೆ ವೃತ್ತಿಪರ ಸಂಘಟನೆಗಳ ಹಾಗೆಯೇ ಇದು ಕಾರ್ಯ ನಿರ್ವಹಿಸುತ್ತ ಬಂದಿದೆ. ಕ್ಲಬ್‌ನಲ್ಲಿ ದಿನಕ್ಕೆ ಐದಾರು ಪತ್ರಿಕಾಗೋಷ್ಠಿಗಳು, ಸಭೆ ಸಮಾರಂಭಗಳು ಜರುಗುತ್ತವೆ. ಹಿರಿಯ ಪತ್ರಕರ್ತರಿಗೆ ಸಮಯ ಕಳೆಯುವ, ವಿಶ್ರಾಂತಿ ಪಡೆಯುವ, ಜತೆಯ ಗೆಳೆಯರೊಂದಿಗೆ ಹರಟುವ ತಾಣ. ಕಿರಿಯ ಪತ್ರಕರ್ತರಿಗೆ ಕೆಲಸ ಒತ್ತಡದ ನಡುವೆ ರಿಲ್ಯಾಕ್ಸ್ ಆಗುವ, ಸಹೋದ್ಯೋಗಿಗಳ ಜತೆ ಅನುದಿನದ ಆಗುಹೋಗುಗಳ ಕುರಿತು ಚರ್ಚಿಸುವ ಅಡ್ಡ. ಇವರ ನಡುವೆ ಕೆಲವು ಅಡ್ಡಕಸುಬಿಗಳಿಗೂ ಕ್ಲಬ್ ಆಶ್ರಯದಾಣವಾಗಿರುವುದುಂಟು. ಪತ್ರಕರ್ತರನ್ನು ಹೊರತುಪಡಿಸಿ ರಾಜಕಾರಣಿಗಳು, ಸಂಘಟನೆಗಳ ಪ್ರಮುಖರು, ಬೇರೆ ಬೇರೆ ವಲಯದ ಗಣ್ಯರಿಗೂ ಕ್ಲಬ್‌ನೆಡೆಗೆ ಒಂದು ಆಕರ್ಷಣೆ ಇದ್ದೇ ಇದೆ.

ಇಂತಿಪ್ಪ ಕ್ಲಬ್‌ನ ಆಡಳಿತ ಮಂಡಳಿಯ ಆಯ್ಕೆಗೆ ಪ್ರತಿವರ್ಷವೂ ಚುನಾವಣೆ ನಡೆಯುತ್ತದೆ. ಕ್ಲಬ್‌ನೊಂದಿಗೆ ಗುರುತಿಸಿಕೊಂಡು ಕೆಲಸ ಮಾಡಲು ಆಸಕ್ತಿಯುಳ್ಳವರು ಸ್ಪರ್ಧಿಸುತ್ತಾರೆ.

ಕಳೆದ ವರ್ಷದ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಎಂ.ಎ.ಪೊನ್ನಪ್ಪ ಈ ಬಾರಿಯೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಪೊನ್ನಪ್ಪ ಪ್ರಜಾವಾಣಿಯ ಕ್ರೀಡಾ ವಿಭಾಗವನ್ನು ನೋಡಿಕೊಳ್ಳುವ ಸಹಾಯಕ ಸಂಪಾದಕ. ತನ್ನದೇ ಆದ ಗೆಳೆಯರ ಬಳಗವನ್ನು ಹೊಂದಿದವರು. ಮೂಲತಃ ಕೊಡಗಿನವರಾದ ಪೊನ್ನಪ್ಪ ಅವರಿಗೆ ಕ್ಲಬ್ ಕಲ್ಚರ್ ಒಗ್ಗಿ ಬರುವುದರಿಂದಲೋ ಏನೋ, ಹಲವು ಅವಧಿಗಳಿಗೆ ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಾರಿ ಮತ್ತೊಮ್ಮೆ ಅಖಾಡಕ್ಕೆ ಇಳಿದಿದ್ದಾರೆ.

ಸದಾಶಿವ ಶೆಣೈ
ಪೊನ್ನಪ್ಪ ಅವರಿಗೆ ಎದುರಾಳಿಯಾಗಿರುವುದು ಉದಯ ಟಿವಿಯ ಶ್ರೀಧರ್. ಕಳೆದ ಬಾರಿ ಶ್ರೀಧರ್ ಉಪಾಧ್ಯಕ್ಷರಾಗಿದ್ದವರು. ಹೊಸ ತಲೆಮಾರಿನ ಪತ್ರಕರ್ತರ ಸ್ನೇಹ ಗಳಿಸಿದವರು. ಅದೇ ಅವರಿಗೆ ಶ್ರೀರಕ್ಷೆ. ಆದರೆ ಹಳೆಯ ಹುಲಿ ಪೊನ್ನಪ್ಪ ಅವರನ್ನು ಮಣಿಸಲು ಸಾಧ್ಯವೇ ಎಂಬುದು ದೊಡ್ಡ ಪ್ರಶ್ನೆ.

ಇನ್ನು ಕ್ಲಬ್‌ನ ಅತ್ಯಂತ ಮಹತ್ವದ ಹುದ್ದೆಯಾಗಿರುವ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಲಂಕೇಶ್ ಪತ್ರಿಕೆಯ ಸದಾಶಿವ ಶೆಣೈ ಸ್ಪರ್ಧಿಸಿದ್ದಾರೆ. ಕಳೆದ ಬಾರಿಯೂ ಅವರು ಅದೇ ಹುದ್ದೆಯಲ್ಲಿದ್ದರು. ಶೆಣೈ ಅವರು ಲಂಕೇಶರ ಜತೆ ಕೆಲಸ ಮಾಡಿದವರು. ಹಿರಿಯ ಮತ್ತು ಕಿರಿಯ ಪತ್ರಕರ್ತ ಜತೆ ಸಾಕಷ್ಟು ಒಡನಾಟವಿದೆ. ಅವರ ಎದುರಾಳಿಯಾಗಿರುವ ವೆಂಕಟೇಶ್ ಅದ್ಭುತ ಛಾಯಾಗ್ರಾಹಕರೆಂಬುದೇನೋ ನಿಜ. ಆದರೆ ಗೆಲ್ಲುವ ಸಾಧ್ಯತೆ ಕಡಿಮೆ. ಹೀಗಾಗಿ ಶೆಣೈ ಈ ಬಾರಿಯೂ ಪ್ರಧಾನ ಕಾರ್ಯದರ್ಶಿಯಾಗುವುದು ಬಹುತೇಕ ಖಚಿತ.

ಇನ್ನು ಉಪಾಧ್ಯಕ್ಷ, ಖಜಾಂಚಿ, ಕಾರ್ಯದರ್ಶಿ ಸ್ಥಾನಗಳಿಗೆ ಸಾಕಷ್ಟು ಪೈಪೋಟಿ ಕಂಡುಬಂದಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಮೂವರು ಸ್ಪರ್ಧಾಳುಗಳಿದ್ದರೆ, ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಗಳಿಗೆ ಕ್ರಮವಾಗಿ ಐದು ಮತ್ತು ಆರು ಮಂದಿ ಸ್ಪರ್ಧಿಗಳಿದ್ದಾರೆ. ಆರು ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಗಳಿಗೆ ಒಟ್ಟು ಹದಿನಾಲ್ಕು ಮಂದಿ ಕಣದಲ್ಲಿ ಉಳಿದಿದ್ದಾರೆ.

ಬರುವ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಚುನಾವಣೆ. ಸಂಜೆ ಹೊತ್ತಿಗೆ ಫಲಿತಾಂಶ ಪ್ರಕಟವಾಗಲಿದೆ. ಹೊಸಹೊಸ ಸುದ್ದಿಗಳೇನೇ ಇದ್ದರೂ ಖಂಡಿತಾ ಅಪ್‌ಡೇಟ್ ಮಾಡುತ್ತೇವೆ.
0 komentar

Blog Archive