ಸಾಯಿಬಾಬಾ ಸಾವನ್ನು ಗೆಲ್ಲಲಿಲ್ಲ, ನಮ್ಮಿಂದ ಮೌಢ್ಯವನ್ನು ಗೆಲ್ಲಲಾಗಲಿಲ್ಲ ಲೇಖನಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ನಮಗೆ ಈ ಸಂದರ್ಭಕ್ಕೆ ಬೇಕಾಗಿರುವುದು ದೇವಮಾನವರಲ್ಲ, ನಿಜಮನುಷ್ಯರು ಎಂಬುದನ್ನು ಅರ್ಥಮಾಡಿಕೊಳ್ಳಲೇಬೇಕಾದ ಕಾಲವಿದು. ಸನ್ಮಾರ್ಗ ಪತ್ರಿಕೆಯ ಸಂಪಾದಕರಾದ ಎ.ಕೆ.ಕುಕ್ಕಿಲ ಅವರು ತಮ್ಮ ಪತ್ರಿಕೆಯ ಸಂಪಾದಕೀಯಕ್ಕೆ ಬರೆದ ಲೇಖನವನ್ನು ನಮಗೆ ಕಳುಹಿಸಿದ್ದಾರೆ. ಸಾಯಿಬಾಬಾ ಅವರನ್ನು ಅಪ್ಪಟ ಮನುಷ್ಯರಂತೆಯೇ ಕಂಡು, ಅವರ ಜನಪರ ಕಾಳಜಿಗಳನ್ನು ಪ್ರಶಂಸಿಸುವ ಈ ಲೇಖನ ಅಗಲಿದ ಚೇತನಕ್ಕೆ ನಿಜವಾದ ಶ್ರದ್ಧಾಂಜಲಿಯಾಗಬಹುದು. -ಸಂಪಾದಕೀಯ

ವೇಷ ಕಳಚಿಟ್ಟು, ಅಪ್ಪಟ ಮನುಷ್ಯರಂತೆ ಸಾಯಿಬಾಬಾ ಹೊರಟು ಹೋಗಿದ್ದಾರೆ. ಇನ್ನು, ಯಾರಾದರೂ ಆ ವೇಷವನ್ನು ತೊಟ್ಟುಕೊಂಡು ತಾನು ದೇವನೆಂದು ಘೋಷಿಸಿಕೊಂಡರೆ, ಆತನನ್ನು ನಂಬಬೇಡಿ ಎಂಬ ಸೂಕ್ಷ್ಮ ಸಂದೇಶವನ್ನೂ ಈ ಮೂಲಕ ಬಾಬಾ ರವಾನಿಸಿದ್ದಾರೆ. ನಿಜವಾಗಿ, ಜೀವಂತ ಇದ್ದಾಗ ಅವರ ಸುತ್ತ ಯಾವೆಲ್ಲಾ ಭ್ರಮೆಗಳು ಹರಡಿಕೊಂಡಿದ್ದುವೋ ಅವೆಲ್ಲವೂ ಆಸ್ಪತ್ರೆಯ ತುರ್ತು ನಿಗಾ ಕೋಣೆಯಲ್ಲಿ ಅವರು ಉಸಿರಾಟಕ್ಕೆ ಸಂಕಟ ಪಡುತ್ತಿದ್ದಾಗಲೇ ಬಹುತೇಕ ಕಳಚಿ ಬಿಟ್ಟಿದ್ದುವು. ಹಾಗೆಯೇ, ಆಸ್ಪತ್ರೆಯ ಹೊರಗೆ ನಿಂತು, ದೇವರ ಆರೋಗ್ಯಕ್ಕೆ ಪ್ರಾರ್ಥಿಸುತ್ತಿದ್ದ ಭಕ್ತರ ದೃಶ್ಯವು, ಮನುಷ್ಯ ದೇವನಾಗಲು ಸಾಧ್ಯವಿಲ್ಲ ಎಂದು ನಂಬಿಕೊಂಡವರನ್ನು ಅಪಾರ ಜಿಜ್ಞಾಸೆಗೆ ಒಳಪಡಿಸಿತ್ತು. ಕಾಯಿಲೆಯನ್ನು ಗುಣಪಡಿಸಬೇಕಾದವನೇ ಕಾಯಿಲೆಪೀಡಿತನಾಗಿ ಆಸ್ಪತ್ರೆಗೆ ಸೇರುವುದಾದರೆ, ಆತ ದೇವನಾಗುವುದಾದರೂ ಹೇಗೆ? ೮೫ ವರ್ಷದ ಸಾಮಾನ್ಯ ವ್ಯಕ್ತಿಯೊಬ್ಬನಿಗೆ ಬಾಧಿಸುವ ಸಹಜ ಕಾಯಿಲೆಗಳು ಬಾಬಾರನ್ನೂ ಆಕ್ರಮಿಸಿದ್ದುವು. ಅವರು ಚಲಿಸುತ್ತಿದ್ದುದು ಇನ್ನೊಬ್ಬರ ಸಹಾಯದಿಂದ. ಬಾಲ್ಯ, ಯೌವನ, ಮುಪ್ಪು ಮು೦ತಾದ ಮಾನವ ಸಹಜ ಬದಲಾವಣೆಗಳು ದೇವನಲ್ಲೂ ಕಾಣಿಸಿಕೊಳ್ಳುವುದಾದರೆ ದೇವನಿಗೂ ಮನುಷ್ಯನಿಗೂ ನಡುವೆ ಇರುವ ವ್ಯತ್ಯಾಸವಾದರೂ ಏನು? ಒಂದು ರೀತಿಯಲ್ಲಿ, ಭಾವುಕ ಜನರು ಸಾಯಿಬಾಬಾರ ಮೇಲೆ ದೈವತ್ವದ ಯಾವೆಲ್ಲ ಆರೋಪಗಳನ್ನು ಹೊರಿಸಿಬಿಟ್ಟಿದ್ದರೋ ಅವೆಲ್ಲವನ್ನೂ ಬಾಬಾ ನಯವಾಗಿ ನಿರಾಕರಿಸಿದ್ದಾರೆ. ಬಾಲ್ಯ, ಯೌವನ, ಮುಪ್ಪು ಮುಂತಾದ ಮನುಷ್ಯ ಸಹಜ ಬದಲಾವಣೆಗಳಿಲ್ಲದ, ಕಾಯಿಲೆ ಬಾಧಿಸದ, ತ೦ದೆ-ತಾಯಿ, ಪತ್ನಿ-ಮಕ್ಕಳಿಲ್ಲದ, ಸಾವು ಇಲ್ಲದ, ಆಹಾರ ಸೇವಿಸದ ಶಕ್ತಿಯೊಂದಕ್ಕೆ ಮಾತ್ರ ದೇವರಾಗಲು ಸಾಧ್ಯ ಎಂಬುದು ಅವರ ಸಾವಿನ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

ನಮ್ಮಲ್ಲಿ ಒಳ್ಳೆತನ ಎಷ್ಟು ಅಪರೂಪವಾಗಿ ಬಿಟ್ಟಿದೆಯೆಂದರೆ, ಯಾರಾದರೊಬ್ಬರು ನಾಲ್ಕು ಮ೦ದಿಗೆ ಅನ್ನ ಹಾಕಿದರೆ, ನಿರ್ವಸಿತರಿಗೆ ಗುಡಿಸಲು ಕಟ್ಟಿಕೊಟ್ಟರೆ, ಅವರನ್ನೇ ದೇವ ಅನ್ನುವಷ್ಟು. ನಿಜವಾಗಿ, ಇನ್ನೊಬ್ಬರಿಗೆ ನೆರವಾಗುವ, ಸಂಕಟಗಳಲ್ಲಿ ಪಾಲುಗೊಳ್ಳುವ ಮಾನವ ಸಹಜ ಸ್ವಭಾವ ಮನುಷ್ಯರಲ್ಲಿ ಕಡಿಮೆಯಾಗುತ್ತಿರುವ ಹೊತ್ತಲ್ಲೇ ಸಾಯಿಬಾಬಾ ಅದನ್ನು ಅಲ್ಪಸ್ವಲ್ಪ ಪ್ರದರ್ಶಿಸಿದರು. ಶೂನ್ಯದಿಂದ ಅವರು ವಿಭೂತಿ, ಆತ್ಮಲಿಂಗ, ಉಂಗುರ ಇನ್ನೇನೋ ಸೃಷ್ಟಿಸುತ್ತಿದ್ದುದಷ್ಟೇ ಅವರು ದೇವರಾಗಲು ಕಾರಣವಾದದ್ದಲ್ಲ. ಅಂಥ ಪವಾಡಗಳನ್ನು ಪ್ರದರ್ಶಿಸುವ ಸಾಕಷ್ಟು ಬಾಬಾಗಳು ಈ ದೇಶದಲ್ಲಿದ್ದಾರೆ. ಹಿಡಿಯಷ್ಟು ಭಕ್ತರನ್ನು ಬಿಟ್ಟರೆ, ಬಾಬಾರಂತೆ ದೊಡ್ಡದೊಂದು ಭಕ್ತವೃಂದ ಇವರಿಗಿಲ್ಲ. ಇಷ್ಟಕ್ಕೂ ಬಾಬಾರ ಪವಾಡಗಳನ್ನು ಈ ದೇಶದಲ್ಲಿ ಹಲವಾರು ಮಂದಿ ಪ್ರಶ್ನಿಸಿದ್ದಾರೆ. ಬಹಿರಂಗ ಸವಾಲು ಹಾಕಿದ್ದಾರೆ. ಆದರೆ ಬಾಬಾ ಪವಾಡಗಳಾಚೆ ಒಂದು ಇಮೇಜನ್ನು ಬೆಳೆಸಿಕೊಂಡಿದ್ದರು. ಆಸ್ಪತ್ರೆಯೇ ಇಲ್ಲದ ಕಡೆ ಅವರು ಆಸ್ಪತ್ರೆಳನ್ನು ಕಟ್ಟಿ, ಉಚಿತ ಸೇವೆ ಒದಗಿಸಿದರು. ಜೀವರಕ್ಷಕ ಯಂತ್ರದಿಂದ ಉಸಿರಾಡುತ್ತಿದ್ದ ಸರಕಾರಿ ಆಸ್ಪತ್ರೆಗಳು ನಾಚುವ೦ತೆ ಇವರ ಆಸ್ಪತ್ರೆಗಳು ಸೇವೆಯಲ್ಲಿ ತೊಡಗಿದುವು. ಸತ್ಯ ಸಾಯಿ ಗಂಗಾ ಕಾಲುವೆ ಎಂಬ ಬೃಹತ್ ನೀರು ಯೋಜನೆ ತಮಿಳ್ನಾಡು ಮತ್ತು ಆಂಧ್ರಗಳ ಬಡಪಾಯಿ ಜನರಿಗೆ ನೀರುಣಿಸಿದುವು. ಅವರು ಬಡವರಿಗೆ ಅನ್ನಛತ್ರ ಕಟ್ಟಿದರು... ಬಾಬಾ ದೇವರಾದದ್ದು ಹೀಗೆ. ತನ್ನಲ್ಲಿರುವ ಮತ್ತು ಪ್ರತಿ ಮನುಷ್ಯನಲ್ಲೂ ಇರಬೇಕಾದ ಒಳ್ಳೆತನವನ್ನು ಬಾಬಾ ಪ್ರದರ್ಶಿಸಿಬಿಟ್ಟಾಗ, ಆವರೆಗೆ ಅಂಥದ್ದೊಂದು ಸೇವಾ ಗುಣವನ್ನು ರಾಜಕಾರಣಿಗಳಿಂದಲೋ ಸರಕಾರದಿಂದಲೋ ನೋಡಿರದ ಮಂದಿ ಬಾಬಾರನ್ನು ಮನುಷ್ಯಾತೀತ ಅಂದುಕೊಂಡು ಬಿಟ್ಟರು. ಇಂಥ ಸಂದರ್ಭದಲ್ಲಿ ಅವರು ಪ್ರದರ್ಶಿಸುತ್ತಿದ್ದ ಚಮತ್ಕಾರ ಜನರನ್ನು ಭಾವುಕಗೊಳಿಸಿಬಿಟ್ಟಿತು.
ಎ.ಕೆ.ಕುಕ್ಕಿಲ

ನಿಜವಾಗಿ ನಮ್ಮನ್ನಾಳುವ ಸರಕಾರ, ನಮ್ಮಿಂದ ಓಟು ಪಡೆದು ಪ್ರತಿನಿಧಿಗಳೆನಿಸಿಕೊಳ್ಳುವ ಮಂದಿ ಜೀವಂತ ಇರುತ್ತಿದ್ದರೆ, ಮನುಷ್ಯನೊಬ್ಬ ಜೀವಂತ ದೇವನಾಗುವುದಕ್ಕೆ ಸಾಧ್ಯವಿರಲಿಲ್ಲ. ಇಷ್ಟಕ್ಕೂ ಜನರಿಗೆ ನೀರೊದಗಿಸುವುದು, ಬಡವರಿಗೆ ಉಚಿತ ಚಿಕಿತ್ಸೆ, ಶಿಕ್ಷಣ ಒದಗಿಸುವುದೆಲ್ಲ ದೇವಮಾನವರಿಂದ ಮಾತ್ರ ಮಾಡಲು ಸಾಧ್ಯವಾಗುವ ಕೆಲಸವೇ? ಜನಸಾಮಾನ್ಯರ ಕುರಿತಂತೆ ಅಲ್ಪಸ್ವಲ್ಪ ಕಾಳಜಿಯುಳ್ಳ ಯಾವುದೇ ಸರಕಾರ ಇದನ್ನು ಮಾಡುವುದಕ್ಕೆ ಸಾಧ್ಯವಿದೆ. ಒಂದು ವೇಳೆ ಸರಕಾರ ಈ ಹೊಣೆಗಾರಿಕೆಯನ್ನು ಶ್ರದ್ಧೆಯಿಂದ ಮಾಡಿರುತ್ತಿದ್ದರೆ, ಬಾಬಾ ಇವತ್ತು ಈ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆಯೇ ಇರಲಿಲ್ಲ. ಸರಕಾರವೊಂದು ಮಾಡಬಹುದಾದ ಕೆಲಸವನ್ನು ವ್ಯಕ್ತಿಯೋರ್ವ ಮಾಡಿರುವುದನ್ನು, ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಸರತಿ ಸಾಲಲ್ಲಿ ನಿಂತ ಪ್ರತಿಯೋರ್ವ ಜನಪ್ರತಿನಿಧಿಯೂ ತಮ್ಮ ವೈಫಲ್ಯವಾಗಿ ಪರಿಗಣಿಸಬೇಕು. ನಿಜವಾಗಿ ಜನರು ಇವತ್ತು ಭ್ರಮೆಗಳ ಸುತ್ತ ಸುತ್ತುತ್ತಿದ್ದರೆ, ಬಾಬಾರನ್ನು ಮನುಷ್ಯ ಅಂತ ಕರೆಯುವುದನ್ನೇ ಅಪರಾಧವಾಗಿ ಕಾಣುತ್ತಿದ್ದರೆ ಅದಕ್ಕೆ ಭಕ್ತವೃಂದ ಖಂಡಿತ ಕಾರಣ ಅಲ್ಲ. ಅವರನ್ನು ಆ ಮಟ್ಟಕ್ಕೆ ಬೆಳೆಸಿದ ವ್ಯವಸ್ಥೆಯೇ ಅದರ ಹೊಣೆಯನ್ನು ವಹಿಸಿಕೊಳ್ಳಬೇಕು.

ಏನೇ ಆಗಲಿ, ಮನುಷ್ಯ ಮತ್ತು ದೇವರ ನಡುವಿನ ಸಂಘರ್ಷದಲ್ಲಿ ಮನುಷ್ಯ ಸೋತಿದ್ದಾನೆ. ಕೆಲವೊಂದು ಚಮತ್ಕಾರಗಳನ್ನು ಪ್ರದರ್ಶಿಸಿದ ಮಾತ್ರಕ್ಕೇ ಯಾರೂ ದೇವನಾಗುವುದಕ್ಕೆ ಸಾಧ್ಯವಿಲ್ಲ. ದೇವನೆಂದರೆ, ಕಾಯಿಲೆ ಗುಣಪಡಿಸುವವ. ಬೇಡಿದ್ದನ್ನು ಕೊಡುವವ. ಸಾವಿಲ್ಲದವ. ಸಾಯುವವರಿಗೆ ದೇವರಾಗಲು ಸಾಧ್ಯವಿಲ್ಲ. ಕಾಯಿಲೆಗೆ ಒಳಗಾಗಿ ಸಂಕಟಪಡುವವರಿಗೆ ದೇವರಾಗುವ ಅರ್ಹತೆಯಿಲ್ಲ. ಇಷ್ಟಕ್ಕೂ ಬಾಬ ತಮ್ಮ ಸುತ್ತ ಹರಡಿಕೊಂಡಿರುವ ಭ್ರಮೆಗಳನ್ನು ಒಂದು ಮಿತಿಯವರೆಗೆ ಸದುಪಯೋಗಪಡಿಸಿಕೊಂಡರು. ಜನರಿಗೆ ವಿಭೂತಿಯನ್ನು ಸೃಷ್ಟಿಸಿ ಕೊಟ್ಟದ್ದಕ್ಕಿಂತಲೂ ಹೆಚ್ಚಿನ ಕಾಳಜಿಯಿಂದ ನೀರು, ಶಿಕ್ಷಣ ಕೊಡಲು ಉತ್ಸಾಹ ತೋರಿದರು. ಆದರೆ ಸಮಾಜದಲ್ಲಿ ಇವತ್ತು ಚಮತ್ಕಾರಗಳನ್ನೇ ಬಂಡವಾಳ ಮಾಡಿಕೊಂಡು ದುಡ್ಡು ಮಾಡುವ ಸಾಕಷ್ಟು ಬಾಬಾಗಳು, ಜ್ಯೋತಿಷಿಗಳಿದ್ದಾರೆ. ಜನರ ಮೌಢ್ಯವೇ ಇವರ ಬಂಡವಾಳ. ತಮಗೆ ಕಾಯಿಲೆ ಬಾಧಿಸಿದಾಗ ಆಸ್ಪತ್ರೆಗೆ ಗುಟ್ಟಾಗಿ ಹೋಗುವ ಇವರು, ಜನಸಾಮಾನ್ಯರ ಕಾಯಿಲೆಗೆ ಮಾತ್ರ ನೀರು, ತಾಯಿತವನ್ನು ಕೊಟ್ಟು ವಂಚಿಸುತ್ತಿರುತ್ತಾರೆ. ಇಂಥವರ ಧರ್ಮ, ಹೆಸರು ಏನೇ ಇರಲಿ, ಅವರನ್ನು ನಕಲಿಗಳೆ೦ದು ಪರಿಗಣಿಸಲು ಬಾಬಾರ ಸಾವು ಜನಸಾಮಾನ್ಯರಿಗೆ ಒಂದು ನೆಪವಾಗಬೇಕು. ಇಷ್ಟಕ್ಕೂ ಮನುಷ್ಯರು ತಮ್ಮಲ್ಲಿರುವ ಒಳ್ಳೇತನವನ್ನು ಪ್ರದರ್ಶಿಸಲು, ಇನ್ನೊಬ್ಬರಿಗೆ ನೆರವಾಗುವ ಪ್ರಕೃತಿ ಸಹಜ ಗುಣವನ್ನು ಅಲ್ಪ ಸ್ವಲ್ಪವಾದರೂ ಜಾರಿಯಲ್ಲಿಡಲು ಮುಂದಾದರೆ ಹುಲುಮಾನವನನ್ನು ದೇವನಾಗುವುದರಿಂದ ಖ೦ಡಿತ ಬಚಾವ್ ಮಾಡಬಹುದು.
0 komentar

Blog Archive