ಎಲ್ಲರೂ ನಿಮ್ಮಂತೆಯೇ ಯೋಚಿಸಿದರೆ ಪ್ರಪಂಚ ಹೇಗಿರಬಹುದು ಹೇಳಿ ಗುರುಗಳೇ? ಬುದ್ಧ, ಭಗವಾನ್ ಅಲ್ಲ ಅನಿಸಿಬಿಟ್ಟರೆ, ಜನರು ನಂಬಿಕೆಗಳನ್ನು (ಮೂಢವೋ, ಅಲ್ಲವೋ) ಬಿಟ್ಟರೆ, ನಿಮ್ಮಂತೆಯೇ ಯೋಚಿಸಿದರೆ how boring? ಅಲ್ವಾ? ನಮ್ಮ ಬದುಕು ಬಹಳ ಹಸನಾಗಿದೆ ಸ್ವಾಮೀ.. ದಿನದ್ದೋ, ತಿಂಗಳಿದ್ದೋ ಖರ್ಚಿಗೆ ಹಣ ಸಿಗುತ್ತದೆ ಬದುಕು ಆರಾಮಾಗಿದೆ. ಎಷ್ಟೋ ಜನ ಬದುಕು ಬೇಡದೆ ಹೋದವರುಂಟು.. ಬಾಬಾರ ಒಂದು ನಗು, ಒಂದು ನೋಟ ಅಂಥಹ ಎಷ್ಟೋ ಜನರಿಗೆ ಮತ್ತೆ ಬದುಕಲು ಕಾರಣ ನೀಡಿದ್ದುಂಟು. ಮತ್ತೆ ಎದ್ದು ಸಾಧಿಸಿದವರುಂಟು. ಬಡ ಬಗ್ಗರಿಗೆ ಉಚಿತ ಕ್ಯಾನ್ಸರ್, ಹೃದ್ರೋಗ ಆಸ್ಪತ್ರೆಗಳಲ್ಲಿ ಶುಶ್ರೂಷೆ ಸಿಕ್ಕಿದೆ.

ಬುದ್ಧ ತಾನು ದೇವರಲ್ಲ ಎಂದು ಹೇಳಿರಬಹುದು. ನಿಮಗೆ ಸ್ವಂತ ವಿಚಾರವಿದೆ, ಅದಕ್ಕೆ ಆ ಕೋನದಿಂದ ಬುದ್ಧನನ್ನು ನೋಡುತ್ತೀರಿ, ಬುದ್ಧನನ್ನು ಭಗವಾನ್ ಅಲ್ಲ ಎನ್ನುತ್ತೀರಿ. ಆದರೆ, ಬುದ್ಧನಿಂದಾಗಿ ಬದುಕಿದವರಿಗೆ ಅವನು ಯಾವತ್ತೂ ಭಗವಾನ್. ಹೋಗಲಿ ಬಿಡಿ, ಕಷ್ಟದಲ್ಲಿದ್ದ ಯಾರನ್ನೋ ನೀವೇ ಕಾಪಾಡಿದರೆ ದೇವರಂತೆ ಬಂದು ಕಾಪಾಡಿದ ಅನ್ನಲ್ಲವೇ? ಹಾಗೆಯೇ ಬುದ್ಧ, ಬಸವಣ್ಣ, ಅಮ್ಮ ಎಲ್ಲ ದೇವರಾಗಿರಬಹುದಲ್ಲವೇ? ಬುದ್ಧನನ್ನು, ಬಸವಣ್ಣನನ್ನು ಬಾಬಾರನ್ನು, ಮತ್ತಿತರರನ್ನು ತರ್ಕಿಸುವುದು ಎಷ್ಟು ಸರಿ? ಅಧ್ಯಾತ್ಮ ಗುರುಗಳು ಹೀಗೆ ಇರಬೇಕು ಎನ್ನುವುದು ಎಷ್ಟು ಸರಿ? ಹಾಗೆ ನೋಡಿದರೆ ಎಲ್ಲವೂ ಮಾರಾಟದ ಸರಕೆ ಅಲ್ಲವೇ? ಕೊಡು ಕೊಳ್ಳುವಿಕೆ ಇದ್ದದ್ದೇ ಅಲ್ಲವೇ? ಹಣದ ವಿನಿಮಯ ಇದ್ದರೆ ಮಾತ್ರ ಮಾರಾಟವೇ? ನೀವು ತಾರ್ಕಿಕವಾಗಿ ಯೋಚಿಸಿ, ಯಾವುದನ್ನು ಮೌಢ್ಯ ಎನ್ನುತ್ತೀರೋ psychologically ಅದು ಮೌಢ್ಯ ಅನಿಸಲ್ಲ. ನೀವು ಹೇಳುವ ಮೌಢ್ಯವನ್ನು ಗೆಲ್ಲುವುದು ಎಲ್ಲರಿಂದ ಸಾಧ್ಯವೂ ಇಲ್ಲ.
                                                                                         -ರವೀಂದ್ರ ಪ್ರಭು

(ಊರ್ಧ್ವಮುಖಿ ಎಂಬ ಬ್ಲಾಗ್‌ನ ರವೀಂದ್ರ ಪ್ರಭು, ಸಾಯಿಬಾಬಾ ಸಾವನ್ನು ಗೆಲ್ಲಲಿಲ್ಲ, ನಮ್ಮಿಂದ ಮೌಢ್ಯವನ್ನು ಗೆಲ್ಲಲಾಗಲಿಲ್ಲ ಎಂಬ ಲೇಖನಕ್ಕೆ ನೀಡಿರುವ ಪ್ರತಿಕ್ರಿಯೆ ಇದು. ರವೀಂದ್ರ ಬಾಬು ಛಾಯಾಗ್ರಹಣದಲ್ಲಿ ಆಸಕ್ತಿ ಉಳ್ಳವರು. ಅವರ ಬ್ಲಾಗ್‌ನಲ್ಲಿ ಅವರು ಚಿತ್ರಿಸಿದ ಸುಂದರವಾದ ಚಿತ್ರಗಳಿವೆ. ಅವರ ಮೇಲಿನ ಪ್ರತಿಕ್ರಿಯೆಗೆ ಉತ್ತರಿಸಬೇಕಿನಿಸಿದೆ, ಉತ್ತರಿಸಲು ಪ್ರಯತ್ನಿಸಿದ್ದೇವೆ.)

ಪ್ರಿಯ ರವೀಂದ್ರ ಪ್ರಭು,
ನೀವು ಏನನ್ನು ಹೇಳಹೊರಟಿದ್ದೀರೋ ಅದೆಲ್ಲವೂ ಅರ್ಥವಾಗುತ್ತವೆ. ಮೌಢ್ಯವನ್ನು ಗೆಲ್ಲುವುದು ಎಲ್ಲರಿಂದ ಸಾಧ್ಯವಿಲ್ಲ ಎಂಬುದು ನಿಮ್ಮ ಅಭಿಪ್ರಾಯ. ಎಲ್ಲರೂ ಮೌಢ್ಯವನ್ನು ಗೆಲ್ಲುವಂತಾಗಬೇಕು ಎಂಬುದು ನಮ್ಮ ಅಪೇಕ್ಷೆ.

ಜನರು ನಂಬಿಕೆಗಳನ್ನು ಬಿಟ್ಟುಬಿಡಬೇಕು ಎಂಬುದು ನಮ್ಮ ಅಭಿಪ್ರಾಯವಲ್ಲ. ನಂಬಿಕೆಗಳು ಇಲ್ಲದೆ ಬದುಕೇ ಇಲ್ಲ. ಯಾವುದು ನಂಬಿಕೆಗೆ ಅರ್ಹವೋ ಅದನ್ನಷ್ಟೆ ನಂಬಬೇಕು ಎಂಬುದಷ್ಟೇ ನಮ್ಮ ಕಾಳಜಿ.

ನೀವು ಬುದ್ಧನ ವಿಷಯ ಪ್ರಸ್ತಾಪಿಸಿದ್ದೀರಿ. ಬುದ್ಧನದು ಸತ್ಯದ ಮಾರ್ಗ. ಬುದ್ಧನ ಈ ಸತ್ಯಮಾರ್ಗವನ್ನು ಒಪ್ಪಿದ್ದ, ತಾನೂ ಅಳವಡಿಸಿಕೊಂಡಿದ್ದ ಸ್ವಾಮಿ ವಿವೇಕಾನಂದರು ಒಂದೆಡೆ ಹೀಗೆ ಹೇಳುತ್ತಾರೆ:

ಸತ್ಯದ ಹಾದಿಯಲ್ಲಿ ಅತ್ಯಂತ ಅಡಚಣೆಯಾಗುವುವು ಪವಾಡಗಳು ಎಂದು ನಾನು ತಿಳಿದಿರುವೆ. ಬುದ್ಧನ ಶಿಷ್ಯ ಬುದ್ಧನಿಗೆ ಒಬ್ಬಾತ ಪವಾಡವನ್ನು ಮಾಡಿದ ಬಗ್ಗೆ ಹೇಳಿದಾಗ, ಬುದ್ಧ ಒಂದು ಭಿಕ್ಷಾಪಾತ್ರೆಯನ್ನು ಅದನ್ನು ಮುಟ್ಟದಂತೆ ಪವಾಡದ ರೀತಿ ತೆಗೆದುಕೊಂಡು ಆತನಿಗೆ ತೋರಿಸಿದರು. ನಂತರ ಅದನ್ನು ತನ್ನ ಕಾಲಿನಿಂದ ತುಳಿದು ಚೂರು ಚೂರು ಮಾಡಿ, ಪವಾಡದಲ್ಲಿ ನಂಬಿಕೆ ಇಡಬೇಡಿ. ಬದಲಿಗೆ ನಿತ್ಯಸತ್ಯವಾದ ನಿಯಮಗಳನ್ನು ಕುರಿತು ಆಲೋಚಿಸಿ ಎಂದು ಅವರಿಗೆ ಹೇಳಿದ. ತಮ್ಮನ್ನು ಸುರಕ್ಷಿತವಾಗಿ ಕರೆದೊಯ್ಯುವ ತಮ್ಮ ಹೃದಯದಲ್ಲೇ ಸುಪ್ತವಾಗಿರುವ ಅಂತಃಶಕ್ತಿಯ ಬಗ್ಗೆ ಅವರಿಗೆ ತಿಳಿಯ ಹೇಳಿದ. ಪವಾಡಗಳು ಅತ್ಯಂತ ಅಡಚಣೆಗಳು. ನಾವು ಅದನ್ನು ನಾಶಪಡಿಸಬೇಕು.
                ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ, ಸಂಪುಟ-೧. ಪುಟ ೩೨೮(ಇಂಗ್ಲಿಷ್)

ಬುದ್ಧ ಸುಳ್ಳೇಸುಳ್ಳು ಪವಾಡಗಳನ್ನು ಎಷ್ಟು ದ್ವೇಷಿಸುತ್ತಿದ್ದ ಎನ್ನುವುದಕ್ಕೆ ವಿವೇಕಾನಂದರ ಮಾತುಗಳು ಉದಾಹರಣೆ. ಎಚ್‌ಎನ್, ಕೋವೋರ್‌ರಂಥವರು ಆಧುನಿಕ ಕಾಲದಲ್ಲಿ ಮಾಡಿದ್ದನ್ನು ಬುದ್ಧ ಆ ಕಾಲದಲ್ಲೇ ಮಾಡಿದ್ದ, ಮತ್ತು ಹಾಗೆ ಮಾಡುವುದರ ಮೂಲಕ ವೈಜ್ಞಾನಿಕ ಮನೋಭಾವ ನಮ್ಮದಾಗಬೇಕು ಎಂದು ಪರಿಣಾಮಕಾರಿಯಾಗಿ ನಿರೂಪಿಸಿದ್ದ.

ಇಂಥ ಬುದ್ಧನಿಗೆ ನಾವು ಪವಾಡಗಳನ್ನು ಆರೋಪಿಸಿದರೆ, ದೈವವನ್ನಾಗಿಸಿದರೆ ಅದು ಬುದ್ಧನಿಗೆ ನಾವು ಮಾಡುವ ಅಪಚಾರವಲ್ಲವೇ? ಅಪಮಾನವಲ್ಲವೇ? ಇಂಥ ಅಪಚಾರಗಳನ್ನು ನಾವು ಕೇವಲ ಬುದ್ಧನಿಗೆ ಮಾಡಿಲ್ಲ, ಎಲ್ಲ ಮಹಾನುಭಾವರಿಗೂ ಮಾಡಿದ್ದೇವೆ.

ದುರ್ಬಲ ಮನಸ್ಸುಗಳಷ್ಟೇ ತಮ್ಮ ಹೊರಗೆ ದೇವರನ್ನು, ದೇವಮಾನವರನ್ನು ಹುಡುಕಲು ಯತ್ನಿಸುತ್ತವೆ. ಹಾಗಂತ ಶುಷ್ಕ ವಿಚಾರವಾದವನ್ನು ಇಲ್ಲಿ ಹೇಳಲು ಹೊರಟಿಲ್ಲ. ವೈಚಾರಿಕತೆ ಮತ್ತು ಅಧ್ಯಾತ್ಮ ಎರಡೂ ಭಿನ್ನ ಧ್ರುವಗಳು, ಎಂದೂ ಒಂದೆಡೆ ಸೇರುವುದಿಲ್ಲ ಎಂದು ಹಲವರು ಭಾವಿಸಿದ್ದಾರೆ. ಎರಡನ್ನೂ ಒಟ್ಟಾಗಿ ಗ್ರಹಿಸುವುದು ನಮಗೆ ಸಾಧ್ಯವಾಗಬೇಕು. ಬುದ್ಧನಿಗೆ ಅದು ಸಾಧ್ಯವಾಗಿತ್ತು, ವಿವೇಕಾನಂದರಿಗೆ ಅದು ಸಾಧ್ಯವಾಗಿತ್ತು, ಕುವೆಂಪು ಅವರಿಗೂ ಸಾಧ್ಯವಾಗಿತ್ತು. ಅಧ್ಯಾತ್ಮ ಹಾಗು ವಿಜ್ಞಾನ ಒಟ್ಟಾಗಿ ಸೇರುವ, ಪರಸ್ಪರ ಪೂರಕವಾಗಿ ನಿಲ್ಲುವುದಕ್ಕೆ ಒಂದು ಸುಂದರ ಉದಾಹರಣೆ ಕುವೆಂಪು ಅವರ ಕಾನೂರು ಹೆಗ್ಗಡತಿ. ಬಸವಣ್ಣನ ಸಾಮಾಜಿಕ ನೆಲೆಗಟ್ಟಿನ ಅಧ್ಯಾತ್ಮವೂ ಇಂಥ ನೆಲೆಯಿಂದಲೇ ಮೂಡಿದ್ದು.

ಸಾಯಿಬಾಬಾರ ನೋಟಕ್ಕೆ, ನಗೆಗೆ ಯಾರಿಗಾದರೂ ಸಾಂತ್ವನ ಸಿಗುತ್ತಿದ್ದರೆ ಸಂತೋಷ. ಸಾಯಿಬಾಬಾರ ನೋಟ, ನಗೆ ಮಾತ್ರವೇಕೆ? ಒಂದು ಹಕ್ಕಿಯ ಮಧುರ ಕೂಗು, ಒಂದು ಮೋಹಕ ಹೂವಿನ ಪಕಳೆಗಳು, ಆಕಾಶದಲ್ಲಿ ಇದ್ದಕ್ಕಿದ್ದಂತೆ ಎದ್ದ ಒಂದು ಕಾಮನಬಿಲ್ಲು, ಮಳೆಬಿದ್ದ ನೆಲದಿಂದ ಎದ್ದ ಘಮ್ಮನೆ ಪರಿಮಳ, ಒಂದು ಎಳೇ ಮಗುವಿನ ತುಟಿಯಲ್ಲಿ ಅರಳಿದ ತಿಳಿನಗು ಎಲ್ಲವೂ ನಮಗೆ ಬದುಕುವ ಸ್ಫೂರ್ತಿಯನ್ನು ನೀಡುತ್ತವೆ. ಇಂಥೆಲ್ಲ ಸ್ಫೂರ್ತಿದಾಯಕ ಜೀವತಂತುಗಳು ನಮ್ಮ ಸುತ್ತಮುತ್ತಲೇ ಇರುವಾಗ ಬದುಕು ಬೋರಿಂಗ್ ಯಾಕಾಗಬೇಕು ರವೀಂದ್ರ ಅವರೇ? ಬದುಕು ಇಂಟರೆಸ್ಟಿಂಗ್ ಆಗಿರಲು ಸುಳ್ಳು ದೇವರನ್ನು ಸೃಷ್ಟಿಸಿಕೊಳ್ಳಲೇಬೇಕಾ? ಭ್ರಮೆಗಳಲ್ಲೇ ಬದುಕಬೇಕಾ? ಸ್ವಲ್ಪ ಯೋಚನೆ ಮಾಡಿ.

ಅಧ್ಯಾತ್ಮ ಗುರು ಹೀಗೇ ಇರಬೇಕೆಂದು ಹೇಳುವುದು ಎಷ್ಟು ಸರಿ ಎನ್ನುವುದು ನಿಮ್ಮ ಪ್ರಶ್ನೆ. ಅಧ್ಯಾತ್ಮ ಗುರುಗಳು ಹೇಗಾದರೂ ಇರಲಿ, ಕಪಟ-ಸುಳ್ಳುಗಳಿಂದ ಮುಕ್ತರಾಗಿರಬೇಕು, ಇಲ್ಲವಾದಲ್ಲಿ ಅಧ್ಯಾತ್ಮಕ್ಕೆ ಅರ್ಥವೇ ಉಳಿಯುವುದಿಲ್ಲ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಇದಿರ ಹಳಿಯಲುಬೇಡ, ತನ್ನ ಬಣ್ಣಿಸಬೇಡ, ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ ಎಂದು ಅಧ್ಯಾತ್ಮವನ್ನು ಅತ್ಯಂತ ಸರಳವಾಗಿ, ನೇರವಾಗಿ ಹೇಳಿದರು ಬಸವಣ್ಣ. ಇದೇ ನಿಜವಾದ ಅಧ್ಯಾತ್ಮ ಮಾರ್ಗ.

ಹಾಗೆ ನೋಡಿದರೆ, ಎಲ್ಲವೂ ಮಾರಾಟದ ಸರಕೇ ಅಲ್ಲವೇ? ಎನ್ನುತ್ತೀರಿ ನೀವು. ಅಧ್ಯಾತ್ಮ ಮಾರಾಟದ ಸರಕು ಅಲ್ಲವೇ ಅಲ್ಲ. ಮಾರಾಟದ ಸರಕಾಗಿದ್ದರೆ ಬುದ್ಧ ರಾಜ್ಯವನ್ನು ತೊರೆದು ಹೊರಗೆ ಬರುತ್ತಿರಲಿಲ್ಲ. ಬಸವಣ್ಣ ಅಧಿಕಾರವನ್ನು ಕಳೆದುಕೊಳ್ಳಬೇಕಾಗಿರಲಿಲ್ಲ. ರಾಮಕೃಷ್ಣ ಪರಮಹಂಸರು, ವಿವೇಕಾನಂದರು ಅಧ್ಯಾತ್ಮದ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಸಂಗ್ರಹಿಸಿಡಲಿಲ್ಲ. ನಂಬಿಕೆ, ಪ್ರೀತಿ, ಆತ್ಮವಿಶ್ವಾಸ, ಸಂಬಂಧಗಳು ಯಾವುದೂ ಮಾರಾಟದ ಸರಕಲ್ಲ, ಆಗಲೂ ಬಾರದು. ಅಧ್ಯಾತ್ಮವೂ ಹಾಗೆಯೇ.

ಬದುಕಲ್ಲಿ ಆಸಕ್ತಿಯನ್ನೇ ಕಳೆದುಕೊಂಡವರ ಕುರಿತು ನೀವು ಹೇಳುತ್ತೀರಿ. ಅವರ ಕಣ್ಣುಗಳಲ್ಲಿ ಆತ್ಮವಿಶ್ವಾಸವನ್ನು ತರಬೇಕಾಗಿರುವುದು ನಮ್ಮ ಸಮಾಜ ವ್ಯವಸ್ಥೆ ಮತ್ತು ಸರ್ಕಾರಗಳು; ಸುಳ್ಳುಬಾಬಾಗಳಲ್ಲ. ಹಾಗೆಯೇ ವಿವೇಕಾನಂದರು ಹೇಳುವಂತೆ ತಮ್ಮೊಳಗೇ ಇರುವ ಅಂತಃಶಕ್ತಿಯನ್ನು ನಾವು ಜಾಗೃತಗೊಳಿಸಿಕೊಳ್ಳಬೇಕಾಗುತ್ತದೆ. ಜಂಜಡಗಳಲ್ಲಿ ಸಿಕ್ಕ ಮನಸ್ಸು ಹೊರಗಿನ ಅತಿಮಾನವ ಶಕ್ತಿಗಾಗಿ ಆಶ್ರಯಿಸುತ್ತದೆ. ಈ ಮನಸ್ಸುಗಳ ದೌರ್ಬಲ್ಯಗಳನ್ನು ಬಳಸಿಕೊಳ್ಳುವವರು ಸುಳ್ಳುಪವಾಡಗಳನ್ನು ಮಾಡುತ್ತಾರೆ, ಹಣ ಗಳಿಸುತ್ತಾರೆ.

ಪವಾಡ ನಡೆಯಬೇಕಿರುವುದು ದುರ್ಬಲ ಮನಸ್ಸುಗಳಲ್ಲಿ. ಆ ಪವಾಡವೇನೆಂದರೆ, ಆ ದುರ್ಬಲ ಮನಸ್ಸುಗಳು ಸಬಲವಾಗುವುದು. ತಮ್ಮಲ್ಲಿ ತಾವು ವಿಶ್ವಾಸವಿಡುವುದು. ಆ ವಿಶ್ವಾಸದ ಬಲದಲ್ಲಿ ನೆಮ್ಮದಿ-ಸಂತೋಷದಿಂದ ಬದುಕುವಂತಾಗುವುದು. ಸುಳ್ಳಿನ ತಳಪಾಯದ ಮೇಲೆ ಕಟ್ಟಿದ ಸೌಧ ಬಹುಕಾಲ ಇರಲಾರದು. ಬುದ್ಧನ ಸತ್ಯ ಮಾರ್ಗವೇ ನಿಜವಾದ ಬದುಕಿನ ತಳಪಾಯ. ಅದರ ಮೇಲೇ ನಮ್ಮ ಬದುಕು ಕಟ್ಟಿಕೊಳ್ಳುವಂತಾಗಬೇಕು. ಅಲ್ಲವೇ?

ನಿಮ್ಮ ಬ್ಲಾಗ್‌ಗೆ ಊರ್ಧ್ವಮುಖಿ ಎಂಬ ಸುಂದರ ಹೆಸರನ್ನು ಇಟ್ಟಿದ್ದೀರಿ. ನಾವು ಸತ್ಯದ ಮಾರ್ಗದಲ್ಲಿ ಊರ್ಧ್ವಮುಖಿಗಳಾಗಬೇಕೇ ಹೊರತು ಸುಳ್ಳಿನ ಮಾರ್ಗದಲ್ಲಿ ಅಧೋಮುಖಿಗಳಾಗಬಾರದು ಅಲ್ಲವೇ?

ಪ್ರೀತಿಯಿಂದ,

ಸಂಪಾದಕೀಯ
0 komentar

Blog Archive