ಜನಲೋಕಪಾಲ ಮಸೂದೆ ಕುರಿತಂತೆ ಸಾರ್ವಜನಿಕವಾಗಿ ವ್ಯಕ್ತವಾಗಿರುವ ಸಂದೇಹಗಳ ಕುರಿತು ಸುಪ್ರೀಂ ಕೋರ್ಟ್‌ನ  ಹಿರಿಯ ನ್ಯಾಯವಾದಿ ಹಾಗು ಮಸೂದೆ ಕರಡು ರಚನಾ ಸಮಿತಿಯ ಸದಸ್ಯ ಪ್ರಶಾಂತ್ ಭೂಷಣ್ ದಿ ಹಿಂದೂ ಪತ್ರಿಕೆಯಲ್ಲಿ ಬರೆದಿದ್ದರು. ಪತ್ರಕರ್ತ ಹರ್ಷ ಕುಮಾರ್ ಕುಗ್ವೆ ಈ ಲೇಖನವನ್ನು ಕನ್ನಡದಲ್ಲಿ ಅನುವಾದಿಸಿ ನೀಡಿದ್ದಾರೆ. ಮೂಲ ಇಂಗ್ಲಿಷ್ ಲೇಖನವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: Jan Lokpal bill: addressing concerns

ಜನಲೋಕಪಾಲ್ ಮಸೂದೆಯ ಕರಡು ಪ್ರತಿಯಲ್ಲಿರುವ ಅಂಶಗಳ ಕುರಿತು ಹಲವಾರು ಜನರು ತಮ್ಮ ಸಂದೇಹಗಳನ್ನು ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರವನ್ನು ತಡೆಯಲು ಅದು ಪರಿಣಾಮಕಾರಿ ಸಾಧನವಾಗಬಲ್ಲದೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ. ಅಣ್ಣಾ ಹಜಾರೆಯವರ ನಿರಶನವು ಸರ್ಕಾರದ ಮೇಲೆ ತಂದ ಒತ್ತಡದ ರೀತಿಯತ್ತ ಅವರು ಬೊಟ್ಟುಮಾಡಿ ತೋರಿಸಿದ್ದಾರೆ. ಹೀಗಾಗಿ ಈ ಮಸೂದೆಯಲ್ಲಿ ಏನೇನು ಅವಕಾಶಗಳಿವೆ ಹಾಗೂ ಭ್ರಷ್ಟಾಚಾರವನ್ನು ನಿಯಂತ್ರಿಸಲು ಒಂದು ಪರಿಣಾಮಕಾರಿ ಸಂಸ್ಥೆಯನ್ನು ರಚಿಸಲು ಈ ಮಸೂದೆ ಹೇಗೆ ಸಹಕಾರಿಯಾಗಬಲ್ಲದು  ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ.

ಭ್ರಷ್ಟಾಚಾರವು ವ್ಯಾಪಕವಾಗಿ ಹರಡಲು ಹದವಾದ ಭೂಮಿಕೆಯನ್ನು ಸೃಷ್ಟಿಸಿದ ನೀತಿಗಳ ಕಾರಣಕ್ಕಾಗಿ ಹಾಗೂ ಭ್ರಷ್ಟರನ್ನು ತನಿಖೆಗೊಳಪಡಿಸಿ, ವಿಚಾರಣೆಗೊಳಪಡಿಸಲು ಅಗತ್ಯವಿರುವ ಪರಿಣಾಮಕಾರಿ ಸಂಸ್ಥೆಯೊಂದರ ಕೊರತೆಗಳ ಕಾರಣಕ್ಕಾಗಿಯೇ ಇಂದು ಭ್ರಷ್ಟಾಚಾರ ಎನ್ನುವುದು ಭಾರತದಲ್ಲಿ ಅಪಾಯಕಾರಿ ಮಟ್ಟಕ್ಕೆ ಬೆಳೆದು ನಿಂತಿದೆ. ಉದಾರೀಕರಣ ಹಾಗೂ ಖಾಸಗೀಕರಣಗಳ ಹೆಸರಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಹಾಗೂ ಸಾರ್ವಜನಿಕ ಆಸ್ತಿಗಳನ್ನು (ಖನಿಜ ಸಂಪನ್ಮೂಲ, ತೈಲ ಹಾಗೂ ಅನಿಲ ಸಂಪನ್ಮೂಲ, ಭೂಸಂಪತ್ತು, ತರಂಗಾಂತರ, ಇನ್ನಿತರೆ) ಯಾವುದೇ ಪಾರದರ್ಶಕತೆ ಅಥವಾ ಸಾರ್ವಜನಿಕ ಹರಾಜು ಪ್ರಕ್ರಿಯೆಗಳಿಗೊಳಪಡಿಸದೆ ಖಾಸಗಿಯವರಿಗೆ ಒಪ್ಪಿಸಿಬಿಡುವಂತಹ ನೀತಿಗಳನ್ನು ಭಾರತ ಅಳವಡಿಸಿಕೊಂಡಿದೆ. ಸರ್ಕಾರವು ಖಾಸಗಿ ಕಾರ್ಪೊರೇಷನ್‌ಗಳೊಂದಿಗೆ ರಾತ್ರೋರಾತ್ರಿ, ನೂರಾರು ಒಡಂಬಡಿಕೆ (ಎಂಓಯು)ಗಳಿಗೆ  ಸಹಿ ಹಾಕಿ ಅಪಾರ ಪ್ರಮಾಣದ ಖನಿಜ ಸಂಪತ್ತು, ಅರಣ್ಯ ಸಂಪತ್ತು ಹಾಗೂ ಜಲಮೂಲಗಳಿರುವ ವಿಶಾಲವಾದ ಭೂಮಿಯನ್ನು ಪರಭಾರೆ ಮಾಡಿಬಿಡುತ್ತಿದೆ. ಇದರಿಂದಾಗಿ ಈ ಕಾರ್ಪೊರೇಟ್ ಕಂಪನಿಗಳು ತಾವು ಪಡೆದ ಸಂಪನ್ಮೂಲದ ಒಟ್ಟು ಮೌಲ್ಯದಲ್ಲಿ ಕೇವಲ ಶೇಕಡಾ ಒಂದಕ್ಕಿಂತ ಕಡಿಮೆ ಮೊತ್ತದ ರಾಯಧನ ನೀಡಿ ಸಂಪನ್ಮೂಲಗಳನ್ನೆಲ್ಲಾ ವಶಪಡಿಸಿಕೊಂಡು ಬಿಕರಿಮಾಡಲು ಸುಲಭಸಾಧ್ಯವಾಗಿದೆ.

ಕರ್ನಾಟಕದ ಲೋಕಾಯುಕ್ತ ನ್ಯಾ.ಸಂತೋಷ್ ಹೆಗಡೆಯವರು ಕರ್ನಾಟಕದಲ್ಲಿ ಗಣಿಗಾರಿಕೆ ಕುರಿತ ವರದಿಯೊಂದರಲ್ಲಿ ಇಂತಹ ವಹಿವಾಟಿನಲ್ಲಿ ಈ ಕಂಪನಿಗಳಿಗೆ ದಕ್ಕುವ ಲಾಭದ ಪ್ರಮಾಣ ಶೇಕಡಾ ೯೦ಕ್ಕಿಂತ ಹೆಚ್ಚಾಗಿರುವುದನ್ನು ಗುರುತಿಸಿದ್ದಾರೆ. ಈ ಲಾಭ ಪ್ರಮಾಣವೇ ಲಂಚ ಕೊಡಲು ವ್ಯಾಪಕ ಅವಕಾಶವನ್ನೂ ಭ್ರಷ್ಟಾಚಾರ ಎಸಗಲು ಪ್ರೇರಣೆ ಪ್ರೋತ್ಸಾಹಗಳನ್ನೂ ನೀಡುತ್ತದೆ. ಎ.ರಾಜಾ ಅವರು ಸಾರ್ವಜನಿಕ ಹರಾಜನ್ನೂ ನಡೆಸದೇ ತರಂಗಾಂತರಗಳನ್ನು ಅದರ ಮಾರುಕಟ್ಟೆ ಬೆಲೆಗಿಂತ ಶೆಕಡಾ ೧೦ಕ್ಕಿಂತ ಕಡಿಮೆ ಬೆಲೆಯಲ್ಲಿ ಕಂಪನಿಗಳಿಗೆ ಮಾರಿದಾಗ ಆಗಿದ್ದೂ ಇದೇ. ಇಲ್ಲಿ ನಿಯಂತ್ರಕರನ್ನು ಭ್ರಷ್ಟಗೊಳಿಸಿ ಕಂಪನಿಗಳಿಗೆ ಅತ್ಯಲ್ಪ ಪ್ರಮಾಣದ ಶುಲ್ಕ ವಿಧಿಸಿ ಖಾಸಗಿ ಏಕಸ್ವಾಮ್ಯ ಕಂಪನಿಗಳು ಒಪ್ಪಲಸಾಧ್ಯವಾಗದಷ್ಟು ಬೃಹತ್ ಪ್ರಮಾಣದಲ್ಲಿ ಲಾಭಮಾಡಿಕೊಳ್ಳಲು ಸಾಧ್ಯವಾಗುವ ಒಂದು ವಾತಾವರಣದಲ್ಲಿ ಜಲ ಮತ್ತು ವಿದ್ಯುತ್ ಸರಬರಾಜು, ವಿಮಾನ ನಿಲ್ದಾಣ ಅಭಿವೃದ್ಧಿ ಮತ್ತಿತರ ಕ್ಷೇತ್ರಗಳಲ್ಲಿ ಖಾಸಗಿ ಏಕಸ್ವಾಮ್ಯ ಕಂಪನಿಗಳು ಸೃಷ್ಟಿಯಾಗಲು ಅವಕಾಶವಾಗಿದೆ. ವಿಮಾನ ನಿಲ್ದಾಣ ಅಭಿವೃದ್ಧಿ, ಹೆದ್ದಾರಿ ನಿರ್ಮಾಣ, ವಿಶೇಷ ಆರ್ಥಿಕ ವಲಯಗಳ ಸೃಷ್ಟಿ, ಇತ್ಯಾದಿಗಳ ಹೆಸರಲ್ಲಿ ಹತ್ತಾರು ಸಾವಿರ ಹೆಕ್ಟೇರ್‌ಗಳಷ್ಟು ಭೂಮಿಯನ್ನು ಅದರ ಮೌಲ್ಯದ ಶೇಕಡಾ ೧೦ಕ್ಕಿಂತ ಕಡಿಮೆ ಬೆಲೆಯಲ್ಲಿ ಈ ಕಂಪನಿಗಳಿಗೆ ವಾಣಿಜ್ಯೀಕರಣಕ್ಕಾಗಿ ಬಿಟ್ಟುಕೊಡಲಾಗಿದೆ. ಇಂತಹ ಯೋಜನೆಗಳೇ ಭ್ರಷ್ಟಾಚಾರಕ್ಕೆ ವ್ಯಾಪಕ ಪ್ರೋತ್ಸಾಹ ನೀಡುವುದರ ಜೊತೆಜೊತೆಗೆ ಲಕ್ಷಾಂತರ ಮಂದಿ ಬಡವರನ್ನು ಬಲವಂತವಾಗಿ ಒಕ್ಕಲೆಬ್ಬಿಸಿ ಅವರನ್ನು ಹಸಿವಿನ ದವಡೆಗೆ ತಳ್ಳಿ ಅವರಲ್ಲಿ ಕೆಲವರು ಮಾವೋವಾದಿಗಳನ್ನು ಸೇರಿಕೊಳ್ಳುವಂತೆ ಮಾಡುತ್ತಿವೆ. ಲಾಭ ಪಡೆದುಕೊಂಡವರು ಪ್ರಾಕೃತಿಕ ಸಂಪನ್ಮೂಲಗಳ ಭೂಮಿಯನ್ನು ಛಿದ್ರಗೊಳಿಸಿ (ಅದರಲ್ಲಿ ಸಾಕಷ್ಟು ರಫ್ತಾಗಿ ಹೋಗುತ್ತದೆ) ಪರಿಸರವನ್ನು ನಾಶಮಾಡಿದ್ದಾರೆ. ಇನ್ನೂ ಆತಂಕದ ವಿಷಯ ಯಾವುದೆಂದರೆ ಇಂತಹ ವ್ಯವಹಾರಗಳು ಅತ್ಯಂತ ಪ್ರಭಾವಶಾಲಿ ರಾಕ್ಷಸಿ ಕಂಪನಿಗಳನ್ನು ಸೃಷ್ಟಿಸುತ್ತವೆ. ಅದ್ಯಾವ ಮಟ್ಟಕ್ಕೆಂದರೆ, ಈಗಾಗಲೇ ನಾವು ರಾಡಿಯಾ ಟೇಪ್‌ಗಳಲ್ಲಿ ನೋಡಿರುವಂತೆ ಅವು ಅಧಿಕಾರದ ಸಂಸ್ಥೆಗಳನ್ನು ಪ್ರಭಾವಗೊಳಿಸಿ,  ಹೆಚ್ಚೂ ಕಡಿಮೆ ಅವುಗಳ ಮೇಲೆ ನಿಯಂತ್ರಣ ಸಾಧಿಸುವಷ್ಟು  ಸಾಮರ್ಥ್ಯಗಳಿಸಿಕೊಂಡುಬಿಟ್ಟಿರುತ್ತವೆ.

ಈ ಬಗೆಯಲ್ಲಿ ಭ್ರಷ್ಟಾಚಾರಕ್ಕೆ ವ್ಯಾಪಕ ಪ್ರೋತ್ಸಾಹ ನೀಡುವ ನೀತಿಗಳನ್ನು ಅಳವಡಿಸಿಕೊಂಡಿರುವ ನಾವು ಅದೇ ವೇಳೆಗೆ ಭ್ರಷ್ಟಾಚಾರವನ್ನು ತಡೆಯುವಂತಹ, ತನಿಖೆ ನಡೆಸುವಂತಹ, ಭ್ರಷ್ಟರನ್ನು ವಿಚಾರಣೆ ನಡೆಸಿ ನ್ಯಾಯಕ್ಕೆ ತಲೆಬಾಗಿಸುವ  ಪರಿಣಾಮಕಾರಿ ಸಂಸ್ಥೆಗಳನ್ನು ರಚಿಸಿಕೊಳ್ಳಲೇ ಇಲ್ಲ. ಕೇಂದ್ರ ತನಿಖಾ ದಳ (ಸಿಬಿಐ) ಕೂಡಾ ಭ್ರಷ್ಟಾಚಾರದ ಮೂಲವೆ ಆಗಿರುವ ಸರ್ಕಾರದ ಆಡಳಿತಾತ್ಮಕ ನಿಯಂತ್ರಣದಲ್ಲಿಯೇ ಇದೆ. ಹೀಗಾಗಿ, ಸಿಬಿಐ ಮೇಲೆ ನ್ಯಾಯಾಲಯವು ಒತ್ತಡ ಹೇರಿದ ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿದರೆ ಅದು ಉನ್ನತ ಮಟ್ಟದ ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ತನಿಖೆ ನಡೆಸಲು ಸಾಮಾನ್ಯವಾಗಿ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. ಕೆಲವೊಮ್ಮೆ ಸಿಬಿಐ ತಾನೇ ಭ್ರಷ್ಟಗೊಂಡಿರುವ ರೀತಿಯಲ್ಲಿ ವರ್ತಿಸುವುದನ್ನೂ ನಾವು ಕಂಡಿದ್ದೇವೆ. ಅದನ್ನು ತನಿಖೆ ನಡೆಸುವ ಮತ್ತೊಂದು ಸಂಸ್ಥೆಯೂ ಇಲ್ಲ. ಸಿಬಿಐಯನ್ನು ಮೇಲ್ವಿಚಾರಣೆ ನಡೆಸಬೇಕಾಗಿರುವ ಕೇಂದ್ರೀಯ ವಿಚಕ್ಷಣಾ ಆಯೋಗ (ಸಿವಿಸಿ) ತನ್ನೊಳಗಿನ ನೇಮಕಾತಿ ವಿಷಯದಲ್ಲೇ ಹಿತಾಸಕ್ತಿ ತಿಕ್ಕಾಟಕ್ಕೆ ತುತ್ತಾಗಿ ತನ್ನ ಕರ್ತವ್ಯ ನೆರವೇರಿಸಲು ವಿಫಲವಾಗಿದೆ. ಪ್ರಧಾನ ಮಂತ್ರಿ, ಗ್ರಹಮಂತ್ರಿ ಹಾಗೂ ವಿರೋಧ ಪಕ್ಷದ ಮುಖಂಡರು (ಇವರೂ ಸಹ ಸಚಿವರಾಗಿದ್ದವರು ಹಾಗೂ ಮುಂದೊಂದು ದಿನ ಪ್ರಧಾನಮಂತ್ರಿಯಾಗುವ ವಿಶ್ವಾಸವಿಟ್ಟುಕೊಂಡಿರುವವರು) ತಾವು ಉತ್ತರದಾಯಿಗಳಾಗಿರಬೇಕಾದ ಯಾವುದೇ ಸಾಧ್ಯತೆಯನ್ನು ತಡೆಯುತ್ತಿದ್ದಾರೆ.  ಈ ಕಾರಣಕ್ಕಾಗಿ ದುರ್ಬಲ ಹಾಗೂ ರಾಜಿ ಮಾನೋಭಾವದ ವ್ಯಕ್ತಿಯೇ ಸಿಬಿಐಯನ್ನು ಮೇಲ್ವಿಚಾರಣೆ ನಡೆಸುತ್ತದೆನ್ನಲಾದ ಈ ಸಿವಿಸಿಯ ಮುಖ್ಯಸ್ಥರಾಗಿರಬೇಕೆಂದು ಬಯಸುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ತಪ್ಪಿತಸ್ಥರ ತನಿಖೆ ನಡೆಸಿ ವಿಚಾರಣೆ ನಡೆಸಲು ಈ ಸಿವಿಸಿ ಹಾಗೂ ಸಿಬಿಐಗಳು ಸರ್ಕಾರದ ಅನುಮತಿ ಪಡೆಯಬೇಕಿದೆ. ಆದರೆ ಉನ್ನತ ಮಟ್ಟದ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಈ ಅನುಮತಿ ದೊರೆಯುವುದೇ ಇಲ್ಲ. ಈ ಸಿವಿಸಿಯು ಹಲವಾರು ಸರ್ಕಾರಿ ಇಲಾಖೆಗಳಲ್ಲಿರುವ ವಿಚಕ್ಷಣಾ ಅಧಿಕಾರಿಗಳ ಮರ್ಜಿಯಲ್ಲಿರುತ್ತದೆ. ಅವರು ಅದೇ ಇಲಾಖೆಯಲ್ಲಿರುವ ಮಧ್ಯಮ ಕ್ರಮಾಂಕದ ಅಧಿಕಾರಿಗಳಾಗಿರುತ್ತಾರೆ. ಹೀಗಿರುವಾಗ ತಮ್ಮ ಗುಪ್ತ ವರದಿಗಳನ್ನು ತಯಾರಿಸುವ ಮೇಲಧಿಕಾರಿಗಳ ಮೇಲೆ ತಾವೇ ಮೇಲ್ವಿಚಾರಣೆ ನಡೆಸುವುದನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ. ತಪ್ಪಿತಸ್ಥರನ್ನು ವಿಚಾರಣೆ ನಡೆಸಿ ಶಿಕ್ಷೆ ವಿಧಿಸಬೇಕಾದ ನ್ಯಾಯಾಂಗವೂ ಜಡಗೊಂಡಿದೆಯಲ್ಲದೆ ಉನ್ನತ ನ್ಯಾಯಾಂಗದ ಉತ್ತರದಾಯಿತ್ವದ ಕೊರತೆಯ ಕಾರಣದಿಂದಾಗಿ ಇದೂ ಸಹ ಭ್ರಷ್ಟಗೊಂಡಿದೆ.

ಜನಲೋಕಪಾಲ ಮಸೂದೆಯ ಕರಡಿನಲ್ಲಿ ವ್ಯಕ್ತವಾಗಿರುವ ಆಶಯ ಏನೆಂದರೆ ತಾನು ಯಾರ ಮೇಲೆ ಕ್ರಮಗೈಗೊಳ್ಳಲು ಬಯಸುವುದೋ ಅವರಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿರುವ ಹಾಗೂ ಸಾರ್ವಜನಿಕ ಸೇವೆಯಲ್ಲಿರುವ ಸರ್ವರನ್ನೂ (ಸಚಿವರು, ಸಂಸದರು, ಅಧಿಕಾರಿಗಳು, ನ್ಯಾಯಾಧೀಶರು ಮುಂತಾದವರನ್ನೂ ಒಳಗೊಂಡು) ಹಾಗೂ ಇವರನ್ನು ಭ್ರಷ್ಟಗೊಳಿಸಿದ ಅಪರಾಧವೆಸಗಿದವರನ್ನೂ ತನಿಖೆ ನಡೆಸಿ ವಿಚಾರಣೆ ನಡೆಸುವ ಅಧಿಕಾರಗಳನ್ನು ಹೊಂದಿರುವ ಒಂದು ಸಂಸ್ಥೆಯನ್ನು ರಚಿಸುವುದು.

ಭ್ರಷ್ಟಾಚಾರವು ದುರಾಚಾರವಾಗಿರುವುದರೊಂದಿಗೆ ಸಮಸ್ಯೆಗಳನ್ನೂ ಉಂಟುಮಾಡುವುದರಿಂದ ಲೋಕಪಾಲ ಸಂಸ್ಥೆಯು ಸರ್ಕಾರದ ಸೇವೆಯಲ್ಲಿರುವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲೆಂದು ರಚಿತವಾಗಿರುವ ಯಂತ್ರಾಂಗ (ವಿಚಕ್ಷಣಾ ಇಲಾಖೆ) ಹಾಗೂ ಜನರ ಸಮಸ್ಯೆಗಳ ನಿವಾರಣೆಗೆಂದು ಇರುವ ಯಂತ್ರಾಂಗವನ್ನೂ ಮೇಲ್ವಿಚಾರಣೆ ನಡೆಸುತ್ತದೆ ಎಂದು ಕರಡಿನಲ್ಲಿ ತಿಳಿಸಲಾಗಿದೆ. ಇದರಿಂದ ಸರ್ಕಾರದ ಸೇವೆಯಲ್ಲಿರುವವರ ಅನಾಚಾರ ಹಾಗೂ ಅದರಿಂದುಂಟಾದ ಜನರ ಸಮಸ್ಯೆಗಳು ಸ್ವಾರ್ಥ ಹಿತಾಸಕ್ತಿಗಳ ತಿಕ್ಕಾಟದಿಂದಾಗಿ ಇಡೀ ಯಂತ್ರಾಂಗವೇ ದುರ್ಬಲವಾಗಿ ನಿಂತಿರುವ ಸರ್ಕಾರದ ಬಳಿ ಹೋಗುವುದಕ್ಕೆ ಬದಲಾಗಿ ನೇರವಾಗಿ ಈ ಸ್ವತಂತ್ರ ಸಂಸ್ಥೆಯ ಅಡಿಗೆ ಬರುತ್ತವೆ. ಭ್ರಷ್ಟಾಚಾರಕ್ಕೆ ಒಳಗಾಗಿ ಯಾವುದೇ ಒಂದು ಗುತ್ತಿಗೆ ನೀಡಲ್ಪಟ್ಟಿರುವುದು ಲೋಕಪಾಲದ ಗಮನಕ್ಕೆ ಬಂದರೆ ಆ ಗುತ್ತಿಗೆಯನ್ನೇ ರದ್ದುಪಡಿಸುವ ಅಧಿಕಾರವೂ ಲೋಕಪಾಲಕ್ಕಿರಬೇಕು ಎಂಬ ಪ್ರಸ್ತಾಪವೂ ಇದೆ. ಇಲ್ಲವಾದಲ್ಲಿ ಅದು ಸರ್ಕಾರದ ನೀತಿ ನಿರ್ಣಯಗಳಲ್ಲಿ ಮಧ್ಯೆ ಪ್ರವೇಶಿಸಲು ಸಾಧ್ಯವಾಗುವುದೇ ಇಲ್ಲ.

ಈ ಮಸೂದೆಯು ಭಾರಿ ಅಧಿಕಾರ ಹೊಂದಿದ ಹಾಗೂ ಉತ್ತರದಾಯಿತ್ವವೇ ಇಲ್ಲದ ಒಂದು ಸೂಪರ್-ಕಾಪ್ ಸಂಸ್ಥೆಯನ್ನು ಸೃಷ್ಟಿಸಿಬಿಡುತ್ತದೆ ಎಂಬುದಾಗಿ ಹೇಳಲಾಗುತ್ತಿದೆ. ಲೋಕಪಾಲವು ನ್ಯಾಯಾಂಗಕ್ಕಿರುವ ಅಧಿಕಾರ ಹೊಂದಿರುತ್ತದೆ ಎಂಬ ತಪ್ಪುಕಲ್ಪನೆಯೂ ಪ್ರಚಲಿತದಲ್ಲಿದೆ. ಈ ಮಸೂದೆಯಲ್ಲಿ ಅಂತಹದಕ್ಕೇನೂ ಅವಕಾಶವಿಲ್ಲ. ತಾವೇ ವಿಚಾರಣೆಗೊಳಪಡಬೇಕಾಗಿರುವ ಜನರಿಂದ ಯಾವುದೇ ನಿರ್ಬಂಧವಿಲ್ಲದೇ ಉನ್ನತಾಧಿಕಾರದಲ್ಲಿರುವವರನ್ನೂ, ಬಲಾಢ್ಯರನ್ನೂ ತನಿಖೆಗೊಳಪಡಿಸಿ ವಿಚಾರಣೆಗೊಳಪಡಿಸುವಂತಹ ಒಂದು ಅತ್ಯಂತ ಪರಿಣಾಮಕಾರಿ ಸಂಸ್ಥೆಯೊಂದರ ರಚನೆ ಇಂದಿನ ತುರ್ತು ಅಗತ್ಯವಾಗಿದೆ.

ಲೋಕಪಾಲ ಸಂಸ್ಥೆಯನ್ನು ಉತ್ತರದಾಯಿಯನ್ನಾಗಿ ಮಾಡುವ ಇಚ್ಛೆ ಮಸೂದೆಯಲ್ಲಿ ಅಡಕವಾಗಿದೆ. ಮೊತ್ತಮೊದಲನೆಯದಾಗಿ, ಅದು ತನ್ನ ಕಾರ್ಯಪಾಲನೆಯಲ್ಲಿ ಪಾರದರ್ಶಕತೆಯನ್ನು ಉಳಿಸಿಕೊಂಡಿರಲೇಬೇಕಲ್ಲದೆ ಅದರ ಕಾರ್ಯಬಾರವು ಜನರಿಗೆ ತಿಳಿಯುವಂತಿರಬೇಕು. (ಅದು ನಡೆಸುವ ತನಿಖೆಯನ್ನೂ ಒಳಗೊಂಡು). ಮಾಹಿತಿ ಹಕ್ಕಿನಡಿಯಲ್ಲಿ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸುವಂತಿಲ್ಲ ಎಂದು ಹೇಳಲಾಗಿದೆ. ಆದರೆ ಆ ರಿಯಾಯಿತಿಗಳನ್ನೂ ಲೋಕಪಾಲದಲ್ಲಿ ಇಡುವ ಅಗತ್ಯವಿಲ್ಲದಂತೆ ಮಾಡಬಹುದು. ಎರಡನೆಯದಾಗಿ, ಲೋಕಪಾಲ ನೀಡುವ ಆದೇಶಗಳನ್ನು ಹೈಕೋರ್ಟು ಹಾಗೂ ಸುಪ್ರೀಂ ಕೋರ್ಟುಗಳಲ್ಲಿ ಪರಾಮರ್ಶೆಗೊಳಪಡಿಸಬಹುದು. ಕೊನೆಯದಾಗಿ, ದುರ್ವರ್ತನೆ ತೋರುವ ಲೋಕಪಾಲದ ಸದಸ್ಯರನ್ನು ಸುಪ್ರೀಂಕೋರ್ಟ್‌ನ ಐವರು ಸದಸ್ಯರ ಪೀಠವು ಉಚ್ಛಾಟಿಸಲು ಅವಕಾಶವಿರುತ್ತದೆ.

ಲೋಕಪಾಲ ಆಯ್ಕೆ ಸಮಿತಿ ಹಾಗೂ ಆಯ್ಕೆ ಪ್ರಕ್ರಿಯೆಯ ಕುರಿತು ಟೀಕೆಗಳು ವ್ಯಕ್ತವಾಗಿವೆ. ನಮ್ಮ ಪ್ರಭುತ್ವದ ಬಹುಪಾಲು ಸಂಸ್ಥೆಗಳಲ್ಲಿ ಬದ್ಧತೆಯೇ ಕ್ಷೀಣಗೊಂಡಿರುವುದರಿಂದಾಗಿ  ಒಂದು ವಿಶಾಲ ನೆಲೆಯ ಆಯ್ಕೆ ಸಮಿತಿಯನ್ನು ರಚಿಸುವುದೊಳಿತು ಎಂದು ಯೋಚಿಸಲಾಗಿತ್ತು. ಇದರಲ್ಲಿ ಲೋಕಪಾಲದಡಿ ವಿಚಾರಣೆಗೊಳಪಡಬಹುದಾದವರನ್ನು ದೂರವಿರಿಸಿ ಪಾರದರ್ಶಕತೆ ಖಾತ್ರಿಯಾಗುವಂತೆ ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಭಾಗೀದಾರಿಕೆಗೂ ಅವಕಾಶ ಕಲ್ಪಿಸುವ ಆಲೋಚನೆ ಇತ್ತು. ಈ ಕಾರಣದಿಂದಾಗಿಯೇ ಕರಡು ಮಸೂದೆಯಲ್ಲಿ ಸಚಿವರನ್ನು ಆಯ್ಕೆ ಪ್ರಕ್ರಿಯೆಯಿಂದ ದೂರವಿಡಬೇಕೆಂದು ತಿಳಿಸಲಾಗಿದೆ.

ಇದು ಪ್ರಜಾಪ್ರಭುತ್ವ ನಿಂದನೆಯಾಗುತ್ತದೆ ಎಂಬುದು ಒಂದು ಟೀಕೆ. ಪ್ರಜಾತಾಂತ್ರಿಕವಾಗಿಯೇ ಆಯ್ಕೆಯಾದ ಪ್ರಧಾನಮಂತ್ರಿ, ಗೃಹ ಸಚಿವ ಹಾಗೂ ವಿಪಕ್ಷ ನಾಯಕರು ಒಮ್ಮತದಿಂದಲೇ ದುರ್ಬಲ ಹಾಗೂ ರಾಜಿ ಮನೋಭಾವದ ಸಿವಿಸಿಗಳನ್ನು ಹೇಗೆ ಆಯ್ಕೆ ಮಾಡಿದ್ದಾರೆಂಬುದನ್ನು ನಾವೆಲ್ಲಾ ಕಂಡಿದ್ದೇವೆ. ಹಾಗಾಗಿಯೇ ಆಯ್ಕೆ ಸಮಿತಿಯು ಲೋಕಸಭೆ ಸಭಾಪತಿ, ರಾಜ್ಯಸಭೆ ಅಧ್ಯಕ್ಷ, ಮಹಾಲೇಖಪಾಲಾಧಿಕಾರಿ, ಮುಖ್ಯ ಚುನಾವಣಾ ಆಯುಕ್ತರು, ಸುಪ್ರೀಂ ಕೋರ್ಟ್‌ನ ಇಬ್ಬರು ಅತ್ಯಂತ ಹಿರಿಯ ನ್ಯಾಯಾಧೀಶರು, ಹೈಕೋರ್ಟ್‌ನ ಇಬ್ಬರು ಅತ್ಯಂತ ಹಿರಿಯ ಮುಖ್ಯ ನ್ಯಾಯಾಧೀಶರು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ಹಾಗೂ ಲೋಕಪಾಲದಿಂದ ನಿವೃತ್ತರಾಗಲಿರುವ ಇಬ್ಬರು ಸದಸ್ಯರನ್ನು ಒಳಗೊಂಡಿರಬೇಕಂದು ಕರಡು ಮಸೂದೆಯಲ್ಲಿ ತಿಳಿಸಲಾಗಿದೆ. ಸಮಿತಿಯ ಈ ಪ್ರಸ್ತಾಪಿತ ಸಂರಚನೆಯನ್ನು ಸಾರ್ವಜನಿಕರೊಂದಿಗಿನ ಸಮಾಲೋಚನೆ ಹಾಗೂ ಸದ್ಯ ನಡೆಯುವ ಕರಡು ಸಮಿತಿಯ ಸಭೆಗಳಲ್ಲಿ ಖಂಡಿತಾ ಚರ್ಚೆಗೊಳಪಡಿಸಬಹುದು, ಅಭಿವೃದ್ಧಿಪಡಿಸಲೂಬಹುದು.

ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸವನ್ನೂ ಲೋಕಪಾಲದ ಪರಿಧಿಯಲ್ಲಿ ತರುವುದರಿಂದ ಅದು ತನ್ನ ಕೆಲಸವನ್ನು ನಿರ್ವಹಿಸಲಾರದಂತಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಲೋಕಪಾಲವು ಒಂದೊಂದೂ ಸಮಸ್ಯೆಯನ್ನೂ ತೆಗೆದುಕೊಳ್ಳುವ ಬದಲು ಈಗಿರುವ ಸಮಸ್ಯೆ ಪರಿಹಾರ ಯಂತ್ರಾಂಗವನ್ನು ಪುನರ್‌ಸಂಘಟಿಸಿ ಮೇಲ್ವಿಚಾರಣೆ ನಡೆಸುವ ಕೆಲಸವನ್ನಷ್ಟೇ ಮಾಡುವ ಉದ್ದೇಶ ಹೊಂದಿದ್ದರೂ ಇದನ್ನು ಸಮಿತಿಯಲ್ಲಿ ಮುಕ್ತವಾಗಿ ಚರ್ಚಿಸಬಹುದು. ಮುಂದಿನ ವಾರದ ಹೊತ್ತಿಗೆ, ಜನಲೋಕಪಾಲ ಮಸೂದೆಯ ಬಗೆಗೆ ಎಲ್ಲಾ ಅಭಿಪ್ರಾಯ ಹಾಗೂ ಸಲಹೆಗಳನ್ನು ಅಧಿಕೃತವಾಗಿ ಒಳಗೊಳ್ಳುವ ಒಂದು ವೆಬ್‌ಸೈಟನ್ನು ಆರಂಭಿಸಿ ಘೋಷಿಸಲಾಗುವುದು. ಜನರು ಇದನ್ನು ಓದಿ, ಅರ್ಥ ಮಾಡಿಕೊಂಡು ತಮ್ಮ ಕಮೆಂಟುಗಳನ್ನು ಅದರಲ್ಲಿಯೇ ವ್ಯಕ್ತಪಡಿಸಲು ಸ್ವಾಗತಿಸುತ್ತೇವೆ.

ಅದೇ ವೇಳೆಗೆ ಯಾರಿಗೂ ಸಹ ಲೋಕಪಾಲ ಕಾನೂನೇ ಭ್ರಷ್ಟಾಚಾರದ ಪಿಡುಗನ್ನು ಸಂಪೂರ್ಣ ಪರಿಹರಿಸಿಬಿಡುತ್ತದೆ ಎಂಬ ಭ್ರಮೆಯೂ ಇರಬಾರದು. ಇಂದು ವ್ಯಾಪಕ ಭ್ರಷ್ಟಾಚಾರಕ್ಕೆ ಪ್ರೇರಣೆ ಪ್ರೋತ್ಸಾಹವೊದಗಿಸುವ ಹಾಗೂ ಯಾವುದೇ ಸಂಸ್ಥೆಯ ನಿಯಂತ್ರಣ ಮೀರಿ ಬೆಳೆಯುವ ರಾಕ್ಷಸೀ ಕಂಪನಿಗಳನ್ನು ಸೃಷ್ಟಿಸುವ ನೀತಿಗಳನ್ನು ನಿಭಾಯಿಸಿ,  ಬದಲಾಯಿಸಿಕೊಳ್ಳದ ಹೊರತು ಹೋರಾಟ ಅಪೂರ್ಣವಾಗೇ ಇರುತ್ತದೆ. ನಮ್ಮ ನ್ಯಾಯಾಂಗದಲ್ಲಿಯೂ ಸಹ ಸಮಗ್ರ ಸುಧಾರಣೆ ಬರಬೇಕಾಗಿದೆ.

ಆದರೆ ಒಂದು ಸ್ವತಂತ್ರ, ವಿಶ್ವಾಸಾರ್ಹ ಹಾಗೂ ಅಧಿಕಾರಯುಕ್ತ ಲೋಕಪಾಲವು ಭ್ರಷ್ಟಾಚಾರವನ್ನು ಸಂಪೂರ್ಣವಾಗಿಯಲ್ಲದಿದ್ದರೂ ಪರಿಣಾಮಕಾರಿಯಾಗಿ ನಿಯಂತ್ರಿಸುವ ಅಗತ್ಯವಂತೂ ಖಂಡಿತಾ ಇದೆ. ಈಗ ಕನಿಷ್ಟ ಅಂತಹದ್ದೊಂದನ್ನು ಆಗುಮಾಡಲು ಶ್ರಮಿಸೋಣ.

(ಪ್ರಶಾಂತ್ ಭೂಷಣ್‌ರವರು ಹಿರಿಯ ಸುಪ್ರೀಂಕೋರ್ಟ್ ನ್ಯಾಯವಾದಿ ಹಾಗೂ ಲೋಕಪಾಲ ಮಸೂದೆಯನ್ನು ತಯಾರಿಸಲು ರಚನೆಯಾಗಿರುವ ಜಂಟಿ ಸಮಿತಿಯ ಸದಸ್ಯರು.)  

ಅನುವಾದ: ಹರ್ಷಕುಮಾರ್ ಕುಗ್ವೆ (ಮೊಬೈಲ್: ೮೧೨೩೦೦೪೧೩೬)
ಕೃಪೆ: ದಿ ಹಿಂದೂ

0 komentar

Blog Archive